ಸರಕಾರದ ವೈಫಲ್ಯವನ್ನು ಬಿಚ್ಚಿಟ್ಟಿದೆಯಾ ಸಂಪುಟ ಸರ್ಜರಿ? ಭರ್ತಿಯಾಗಿದ್ದರೂ ಇಬ್ಬರ ಕೈಯಲ್ಲಿದೆ ಆಡಳಿತದ ಕೀಲಿ ಕೈ!!

ಗುರುರಾಜ ದೇಸಾಯಿ

ಕೇಂದ್ರ ಸಚಿವ ಸಂಪುಟಕ್ಕೆ ಭಾರಿ ಸರ್ಜರಿ ಮಾಡಲಾಗಿದೆ. 43 ಜನ ಸಂಸದರಿಗೆ ಮಂತ್ರಿಗಳಾಗುವ ಚಾನ್ಸ್‌ ಸಿಕ್ಕಿದರೆ, 12 ಜನ ಸಚಿವರ ತಲೆದಂಡವಾಗಿದೆ. ಆ 12 ಖಾತೆಗಳು ಮಹತ್ವದ್ದಾಗಿದ್ದ ಖಾತೆಗಳು, ಸಚಿವರ ತಲೆದಂಡ ಮೋದಿ ಸರಕಾರದ ವಿಫಲತೆಯನ್ನು ತೋರಿಸುತ್ತಿದೆಯಾ? ಪ್ರಕಾಶ್‌ ಜಾವೆಡ್ಕರ್‌, ರವಿಶಂಕರ್‌ ಪ್ರಸಾದ್‌, ಹರ್ಷವರ್ಧನ್‌  ತಲೆದಂಡ ಏನನ್ನೂ ಸೂಚಿಸುತ್ತಿದೆ? ಎನ್ನುವ ಪ್ರಶ್ನೆಗಳು ಎದ್ದಿವೆ.

ಸಚಿವರ ಕಾರ್ಯನಿರ್ವಹಣೆ, ಸಾಮಾಜಿಕ ನ್ಯಾಯ, ಪ್ರಾದೇಶಿಕ ಸಮತೋಲನ, ಜಾತಿವಾರು ಆದ್ಯತೆ, ಯುವಶಕ್ತಿಗೆ ಮನ್ನಣೆಯಂಥ ಹತ್ತುಹಲವು ಆಶೋತ್ತರಗಳನ್ನು ಬಲಗೊಳಿಸುತ್ತ ಸಬ್​ ಕಾ ಸಾಥ್​ ಸಬ್​ ಕಾ ವಿಕಾಸ್​ ಸಂಕಲ್ಪದ ರಾಜಮಾರ್ಗದಲ್ಲಿ ಸರ್ಕಾರವನ್ನು ಮುನ್ನಡೆಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ದೊಡ್ಡ ಪ್ರಮಾಣದಲ್ಲಿ ಸಂಪುಟ ವಿಸ್ತರಣೆ ಮಾಡಿದ್ದಾರೆ ಎಂದು ದೇಶದ ಬಹುತೇಕ ಮಾಧ್ಯಮಗಳು ವರದಿಯನ್ನು ಮಾಡಿವೆ.  ಆ ಮೂಲಕ ಮೋದಿ ಸರಕಾರದ ವೈಫಲ್ಯಗಳನ್ನು ಮತ್ತೆ ಮರೆಮಾಚುವ ಕೆಲಸಕ್ಕೆ ಕೇಂದ್ರ ಸರಕಾರದ ಕೃಪಾಪೋಷಿತ ಮಾಧ್ಯಮಗಳು ಮುಂದಾಗಿದ್ದು ಅಚ್ಚರಿಯನ್ನೂ ಮೂಡಿಸಿದೆ.

ಸಂಪುಟ ಸರ್ಜರಿಯಲ್ಲಿ 12 ಜನ ಸಚಿವರ ತಲೆದಂಡ ಆಗಿರುವುದು ಮುಖ್ಯವಾಗಿ ಚರ್ಚೆಗೆ ಎತ್ತಿಕೊಳ್ಳಬೇಕಾದ ವಿಚಾರ, ಮೋದಿ ಸರಕಾರದಿಂದ ಯಾರೂ ಔಟ್‌ ಆಗಿದ್ದಾರೆ ಎಂಬುದು ನಿಮಗೆಲ್ಲ ಗೊತ್ತಿರುವ ವಿಚಾರ, 12 ಜನ ಸಚಿವರ ತಲೆಡಂಡಕ್ಕೆ ಅವರ ಕಾರ್ಯಕ್ಷಮತೆ ಸರಿಯಾಗಿ ಇರಲಿಲ್ಲ, ಖಾತೆಯನ್ನು ಸರಿಯಾಗಿ ನಿರ್ವಹಣೆ ಮಾಡಲಿಲ್ಲ, ಆ ನ್ಯೂನ್ಯತೆಗಳನ್ನು ಸರಿ ಮಾಡುವುದಕ್ಕಾಗಿ ಮೇಜರ್‌ ಸರ್ಜರಿ ಮಾಡಲಾಗಿದೆ ಎಂದು ಕೇಂದ್ರ ಸರಕಾರ ತನ್ನ ನಿಲುವನ್ನು ಸಮರ್ತಿಸಿಕೊಳ್ಳುತ್ತಿದೆ.

ಆ 12 ಜನ ನಿರ್ವಹಿಸುತ್ತಿದ್ದ ಖಾತೆಗಳು ಯಾವವು ಅಂತಾ ನಿಮಗೆ ಗೊತ್ತಿದೆ. ಮುಖ್ಯವಾಗಿ ಆರೋಗ್ಯ, ಶಿಕ್ಷಣ, ದೂರಸಂಪರ್ಕ, ಮಾಹಿತಿ ತಂತ್ರಜ್ಞಾನ ಹಾಗೂ ವಾರ್ತಾ ಮತ್ತು ಪ್ರಸಾರದಂತಹ ಮಹತ್ವದ ಖಾತೆಗಳನ್ನು ನಿಭಾಯಿಸುತ್ತಿದ್ದವರ ತಲೆದಂಡವಾಗಿದೆ. ಹೊರದಬ್ಬಿದ್ದು ಸರಿ, ಕಾರ್ಯಕ್ಷಮತೆಯೇ ಮುಖ್ಯವಾಗಿದ್ದರೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಸಚಿವರ ಸ್ಥಾನದಿಂದ ವಜಾ ಮಾಡಬೇಕಿತ್ತು’ ರಫೇಲ್‌ ಹಗರಣದಲ್ಲಿ ಮುಖ್ಯವಾಗಿ ಇವರ ಹೆಸರುಕೂಡಾ ಕೇಳಿ ಬರ್ತಾ ಇತ್ತೂ ಆದರೆ ಇದು ಅವರಿಗೆ ಯಾಕೆ ಅನ್ವಯವಾಗಿಲ್ಲ ಎಂದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಇದನ್ನೂ ಓದಿ : ಸದನಾಂದಗೌಡರ ರಾಜೀನಾಮೆ ಹಿಂದೆ ‘ಸಿಡಿ’?!

ಕೇಂದ್ರ ಸಚಿವ ಸಂಪುಟ ಪುನಾರಚನೆಯ ನಡುವೆಯೇ ಅಚ್ಚರಿಗೀಡು ಮಾಡಿದ ವಿಚಾರವೆಂದರೆ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌, ಕೇಂದ್ರ ವಾರ್ತಾ ಮತ್ತು ಪ್ರಚಾರ ಸಚಿವ ಪ್ರಕಾಶ್‌ ಜಾಬ್ಡೇಕರ್‌ ನಿರ್ಗಮನ. ದೂರಸಂಪರ್ಕ, ಮಾಹಿತಿ ತಂತ್ರಜ್ಞಾನ, ಕಾನೂನು ಮತ್ತು ನ್ಯಾಯ ಖಾತೆ ಸಚಿವರಾಗಿದ್ದ ರವಿಶಂಕರ್‌ ಪ್ರಸಾದ್‌, ಸಾಮಾಜಿಕ ಜಾಲತಾಣಗಳಾದ ಟ್ವಿಟರ್‌, ಫೇಸ್‌ಬುಕ್‌, ವಾಟ್ಸ್‌ ಆಯಪ್‌ ಕೇಂದ್ರ ಸರಕಾರ ಜಾರಿಗೊಳಿಸಿದ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಅನುಷ್ಠಾನಗೊಳಿಸಬೇಕು ಎಂದು ಖಡಕ್‌ ಆಗಿ ಹೇಳಿದ್ದರು. ಈ ಸಂಘರ್ಷವೇ ಅವರ ತಲೆದಂಡಕ್ಕೆ ಕಾರಣವಾಯ್ತಾ? ಅಥವಾ ಬಿಹಾರದಲ್ಲಿ ಮುಂದೆ ಅವರನ್ನು ಸಿಎಂ ಮಾಡುವ ಲೆಕ್ಕಾಚಾರ ಏನಾದರೂ ಇದೆಯಾ ಕಾದು ನೋಡಬೇಕು.

ವಾರ್ತಾ ಮತ್ತು ಪ್ರಚಾರ, ಅರಣ್ಯ ಮತ್ತು ಪರಿಸರ, ಹವಾಮಾನ ಬದಲಾವಣೆ, ಸಾರ್ವಜನಿಕ ಉದ್ದಿಮೆ ಮತ್ತು ಭಾರಿ ಕೈಗಾರಿಕೆಗಳ ಸಚಿವರಾಗಿದ್ದ ಪ್ರಕಾಶ್‌ ಜಾಬ್ಡೇಕರ್‌ ನಿರ್ಗಮನ ಅಚ್ಚರಿ ತಂದಿದೆ. ಸಂಪುಟ ಸಭೆಯ ಬಳಿಕ, ಅಲ್ಲಿ ಕೈಗೊಂಡ ನಿರ್ಧಾರಗಳನ್ನು ಅವರೇ ಹೆಚ್ಚಿನ ಸಂದರ್ಭದಲ್ಲಿ ಪ್ರಕಟಿಸಿದ್ದರು ಇದೆ ಅವರ ನಿರ್ಗಮನಕ್ಕೆ ಕಾರಣವಾಯ್ತಾ? ಎಂಬ ಪ್ರಶ್ನೆ ಈಗ ಎದ್ದಿದೆ.

ಕೋವಿಡ್‌ ನಿರ್ವಹಣಯಲ್ಲೆ ಹಿನ್ನಡೆಯಾಗಿದೆ ಎಂದು ಡಾ. ಹರ್ಷವರ್ಧನ್‌ ರಾಜೀನಾಮೆ ಪಡೆಯುವ ಮೂಲಕ  ಸರಕಾರವೇ ಈಗ ಬಹಿರಂಗವಾಗಿ ಒಪ್ಪಿಕೊಂಡಿದೆ. ಇದರ ಜೊತೆಯಲ್ಲಿ ಕಾಶ್ಮೀರಕ್ಕೆ ಇದ್ದ ಸ್ಥಾನವನ್ನು ಕಿತ್ತು ಹಾಕಿ ಅದರಲ್ಲೂ ವೈಫಲ್ಯ ಅನುಭವಿಸಿದೆ. ಅದಕ್ಕೆ ತೇಪೆ ಹಚ್ಚುವುದಕ್ಕಾಗಿ ಆ ರಾಜ್ಯಗಳ ಪ್ರಮುಖ ಪಕ್ಷಗಳ ಸಭೆಯನ್ನು ಕೂಡ ನಡೆಸಲಾಗಿತ್ತು. ಶಿಕ್ಷಣದ ಟ್ರ್ಯಾಕ್‌ ಆಗಲೆ ತಪ್ಪಿ ಹೋಗಿದೆ. ವರ್ಷಕ್ಕೆರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಅಗಿ ಹೇಳಿ 20 ಸಾವಿರ ಹುದ್ದೆಗಳನ್ನೂ ಸೃಷ್ಟಿಸದೆ ನಿರುದ್ಯೋಗದ ಸಮಸ್ಯೆ ಹೆಚ್ಚಾಗುವಂತೆ ಮಾಡಲಾಗಿದೆ. ಹೀಗೆ ಅನೇಕ ಕ್ಷೇತ್ರಗಳಲ್ಲಿ ಬಿಜೆಪಿ ವೈಫಲ್ಯ ಕಂಡಿದೆ ಎಂಬುದು ಸಂಪುಟ ಸರ್ಜರಿಯಿಂದ ಹೊರಬಿದ್ದಿದೆ.

ಸಚಿವರು ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂದಾದರೆ ಸಂಪುಟದಲ್ಲಿ ಒಮ್ಮೆಯೂ ಕಾರ್ಯಕ್ಷತೆ ಬಗ್ಗೆ, ಇಲಾಖೆಗಳ ಬಗ್ಗೆ ಚರ್ಚೆಯಾಗುತ್ತಿರಲಿಲ್ಲ. ಅವರ ಕಾರ್ಯಕ್ಷಮತೆ ಸರಿ ಇಲ್ಲದಿದ್ದಾಗ ಅವರನ್ನು ತಿದ್ದಬಹುದಿತ್ತು ಅಲ್ಲವೆ. ಎಂಬ ಪ್ರಶ್ನೆಗಳು ಮುನ್ನಲೆಗೆ ಬರುತ್ತಿವೆ. ಮುಖ್ಯವಾಗಿ ಸಂಪುಟ ಭರ್ತಿ ಮಾಡಿ ಎಲ್ಲರಿಗೂ ಕೆಲಸ ಹಂಚಬೇಕಿದ್ದ ಪ್ರಧಾನಿ ಎರಡುವರ್ಷ ಸುಮ್ಮನಿದ್ದಕ್ಕೆ ತಲೆದಂಡ ಇಲ್ಲವೆ ಎಂಬ ಪ್ರಶ್ನೆಗಳು ಈಗ  ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ದೇಶದ ಅಭಿವೃದ್ಧಿಯ ಬಗ್ಗೆ ಕಾಳಜಿ ಇದ್ದದ್ದೆ ಆದಲ್ಲಿ, ಆರಂಭದಲ್ಲಿಯೇ ಯಾಕೆ ಸಂಪುಟವನ್ನು ಭರ್ತಿ ಮಾಡಲಿಲ್ಲ. ಐದೋ, ಹತ್ತೋ ಸಚಿವ ಸ್ಥಾನಗಳು ಖಾಲಿ ಇದ್ದಿದ್ದರೆ ತಲೆ ಕೆಡಸಿಕೊಳ್ಳುವ ಅಗತ್ಯ ಇರಲಿಲ್ಲ. ಬರೋಬ್ಬರಿ ಅರ್ದದಷ್ಟು ಸಚಿವ ಸ್ಥಾನಗಳು ಖಾಲಿ ಬಿದ್ದಿದ್ದವು. ಇದ್ದ ಸಚಿವರು ನಾಲ್ಕಾರು ಖಾತೆಗಳನ್ನು ನಿಭಾಯಿಸುತ್ತಿದ್ದರು, ಎರಡು ವರ್ಷಗಳಿಂದ ಕಾಣದ ದೋಷವನ್ನು ಮೋದಿಯವರು ಈಗ ಪತ್ತೆ ಹಚ್ಚಿ ಹೊರದಬ್ಬಿದ್ದಾರೆ. ಇದರಲ್ಲಿ ವೈಫಲ್ಯ ಕಾಣಲು ಇವರುಗಳಷ್ಟೆ ಕಾರಣವಾ? ಪ್ರಧಾನ ಮಂತ್ರಿಯವರ ಜವಬ್ದಾರಿ ಏನಾಗಿತ್ತು? ಎನ್ನುವ ಪ್ರಶ್ನೆ ಎದ್ದಿದೆ. ಯಾಕೆಂದರೆ ಒಂದೇ ಕ್ಲಿಕ್ಕಿನಲಿ ಎಲ್ಲಾ ಸಚಿವರ ಕಾರ್ಯ ವಿಧಾನಗಳನ್ನು ಮೋದಿಯವರು ಪರಿಶೀಲನೆ ಮಾಡುತ್ತಿರುತ್ತಾರೆ ಎಂದು ಮಾಡಿದ ಪ್ರಚಾರ ಹಸಿ ಸುಳ್ಳು ಎಂಬ ಪ್ರಶ್ನೆಗಳು ಕೂಡಾ ಹರಿದಾಡುತ್ತಿವೆ.

ಸೋತು ಸುಣ್ಣಾಗಿರುವ ಸರಕಾರ ಈಗ ಮೇಜರ್‌ ಸರ್ಜರಿ ಹೆಸರಲ್ಲಿ ದೇಶವನ್ನು ಬಲಪಡಿಸುವ ಯೋಜನೆಯನ್ನು ಮುಂದಿಟ್ಟಿದೆ. 7 ವರ್ಷದ ಕಾರ್ಯವಿಧಾನಗಳನ್ನು ಗಮನಸಿದರೆ ಇದನ್ನು ನಂಬಬಹುದಾ? ಎಂಬ ಪ್ರಶ್ನೆ ನಮ್ಮೊಳಗೆ ಮೂಡುತ್ತದೆ. ವೈಫಲ್ಯಗಳನ್ನು ಮರೆ ಮಾಚಿಕೊಳ್ಳುವುದಕ್ಕಾಗಿ ಪ್ರಾದೇಶಿಕ ಸಮಾನಾತೆ, ಸಮಾಜಿಕ ನ್ಯಾಯ ಎಂಬ ಅಂಶಗಳನ್ನು ತೇಲಿಬಿಡಲಾಗಿದೆಯೆ ಹೊರತು, ಸಂಪುಟ ಸರ್ಜರಿಯ ವಾಸ್ತವ ಗುರಿ  ಏನು ಅಂದ್ರೆ ತನ್ನ ಅಜೆಂಡಗಳನ್ನು ಜಾರಿ ಮಾಡುವುದು ಬಿಜೆಪಿಯ ಬಹು ಮುಖ್ಯ ಕಾರ್ಯವಾಗಿದೆ. ಏನೂ ಆ ಅಜೆಂಡಗಳು ಎನ್ನುವುದನ್ನು ನೋಡ್ತಾ ಹೋಗೋಣ.

ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ಗೆಲುವನ್ನು ಸಾಧಿಸಬೇಕು ಹಾಗಾಗಿ ಆ ಕಾರಣಕ್ಕಾಗಿಯೇ ಚುನಾವಣೆಗಳನ್ನು ಕೇಂದ್ರಿಕರಿಸಿ ಸಂಪುಟಕ್ಕೆ ಆಧ್ಯತೆಯನ್ನು ನೀಡಲಾಗಿದೆ.  ಆ ಕಾರಣಕ್ಕಾಗಿಯೆ ಉತ್ತರ ಪ್ರದೇಶಕ್ಕೆ ಹೆಚ್ಚಿನ ಸ್ಥಾನವನ್ನು ನೀಡಲಾಗಿದೆ.  ಈಗ ಸೇರ್ಪಡೆಗೊಂಡ ಸಚಿವರನ್ನೂ ಸೇರಿ ಒಟ್ಟು 14 ಸ್ಥಾನಗಳನ್ನು ಉತ್ತರ ಪ್ರದೇಶಕ್ಕೆ ನೀಡಲಾಗಿದೆ. ಇನ್ನೇನು ಕೆಲವೇ ತಿಂಗಳಲ್ಲಿ ಉತ್ತರ ಪ್ರದೇಶಕ್ಕೆ ಚುನಾವಣೆ ನಡೆಯಲಿದೆ. ದೆಹಲಿಯನ್ನು ಗೆಲ್ಲಬೇಕು ಅಂದ್ರೆ ಯುಪಿ ಯನ್ನು ಮೊದಲು ಗೆಲ್ಲಬೇಕು ಎನ್ನುವುದು ರಾಜಕೀಯ ಲೆಕ್ಕಾಚಾರ . ಯಾಕೆ ಅಂದ್ರೆ ಆಡಳಿತ ಪಕ್ಷಕ್ಕೆ ಅದು ಚಿನ್ನವಿದ್ದಂತೆ ಅತೀ ಹೆಚ್ಚು ಲೋಕಸಭಾ ಹಾಗೂ ವಿಧಾನಸಭಾ ಸೀಟುಗಳಿರುವ ರಾಜ್ಯ ವಾಗಿದ್ದರಿಂದ ಅಲ್ಲೆ ಗೆಲ್ಲಲೇಬೇಕು ಎಂಬ ತಂತ್ರ ಅಡಗಿರುವುದು ಗುಟ್ಟಿನ ವಿಚಾರವಂತೂ ಅಲ್ಲ.

ಅದೇರೀತಿ ಗುಜರಾತ್‌ ಗೆ 14 ಸ್ಥಾನ ನೀಡಲಾಗಿದೆ. ಮುಂದಿನ ವರ್ಷ ಗುಜರಾತಿನಲ್ಲೂ ಚುನಾವಣೆ ನಡೆಯಲಿದೆ, ತ್ರಿಪುರಾದಲ್ಲೂ ನಡೆಯಲಿದೆ ಆ ಕಾರಣಕ್ಕಾಗಿ ಅಲ್ಲಿ ಸಚಿವ ಸ್ಥಾನವನ್ನು ನೀಡಿದ್ದು ಬಿಟ್ಟರೆ ಆ ಪ್ರದೇಶಗಳ ಅಭಿವೃದ್ಧಿಯ ಕಾಳಜಿ ಇಲ್ಲ ಎನ್ನುವುದು ಗೊತ್ತಾಗುತ್ತದೆ.  ಇನ್ನೂ ಮಿತೃಪಕ್ಷಗಳ ವಿಚಾರಕ್ಕೆ ಬಂದ್ರೆ  ಅನೇಕ ಕಡೆಗಳಲ್ಲಿ ಬಿಜೆಪಿ ಸಖ್ಯವನ್ನು ತೊರೆಯುತ್ತಿವೆ ಅದನ್ನು ಸರಿಪಡಿಸಲು ರಾಜೀ ಸೂತ್ರವನ್ನು ಅಳವಡಿಸಲಾಗಿದೆ. ಪಶ್ಚಿಮ ಬಂಗಾಲದಲ್ಲಿ ಸೋಲುಂಡ ನಂತರ  ಹಸನೋಲ್‌  ಸಂಸದ ಬಾಬು ಸುಪ್ರಿಯೋ ಅವರನ್ನು ಸಚಿವ ಸ್ಥಾನದಿಂದ ತೆಗದು ಹಾಕಿದೆ. ಇದೊಂದು ರೀತಿ ಬಳಸಿಕೊಂಡು ಬೀಸಾಡುವ ನೀತಿ ಎಂಬಂತೆ ಕಾಣುತ್ತಿದೆ.

ಇನ್ನೂ ಸಾಮಾಜಿಕ ನ್ಯಾಯ, ಪ್ರದಾಶವರು ಸಮಾನತೆ ಎಂಬುದು ಬಿಜೆಪಿಗೂ ರುಚಿಸದ ಪದಗಳು. ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ತಂತ್ರ ಬಳಸಲಾಗಿದೆಯೇ ಹೊರತು ಆ ಸಮುದಾಯಗಳ ಕಾಳಜಿಯಿಂದ ಇಲ್ಲ. ಉತ್ತರ ಪ್ರದೇಶದಲ್ಲಿ ದಲಿತ ಸಮುದಾಯದ ಸಂಖ್ಯೆ ಹೆಚ್ಚಾಗಿದೆ. ಕರ್ನಾಟಕದಲ್ಲಿ ದಲಿತ ಮುಖ್ಯಮಂತ್ರಿ ಚರ್ಚೆ ನಡೆಯುತ್ತಿದೆ.  ಕಾಂಗ್ರೆಸ್‌ ದಲಿತರ ಮತಗಳನ್ನು ಪಡೆದರೂ ಅವರಿಗೆ ಅವಕಾಶ ಕೊಡುತ್ತಿಲ್ಲ, ನಾವು ಆಧ್ಯತೆ ಕೊಟ್ಟಿದ್ದೇವೆ. ಬಿಜೆಪಿ ದಲಿತರ ಪರ ಇದೆ ಎಂಬ ಚರ್ಚೆಯನ್ನು ಈಗ ತೇಲಿಬಿಟ್ಟಿದೆ.

ಸಂಪುಟ ಸರ್ಜರಿ ನಡೆದು ‘ಸಹಕಾರ ಸಚಿವ’ ಎನ್ನುವ ಹೊಸ ಇಲಾಖೆ ಆರಂಭಿಸಿಲಾಗಿದೆ. ಇದರ ಹೊಣೆಯನ್ನು ಗೃಹಸಚಿವ ಅಮಿತ್‌‌ ಶಾ ಅವರಿಗೆ ನೀಡಲಾಗಿದೆ.  ಸಹಕಾರಿ ಸಚಿವ ಎಂಬ ಖಾತೆಯನ್ನು ಸೃಷ್ಟಿ ಮಾಡಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಯಾಕೆ ಅಂದ್ರೆ,  ಸಂವಿಧಾನದ ಪ್ರಕಾರ ಸಹಕಾರ ಕ್ಷೇತ್ರ ರಾಜ್ಯ ಸರಕಾರದ ವ್ಯಾಪ್ತಿಯದ್ದು. ಇದರಲ್ಲಿ ಮೂಗು ತೂರಿಸಲು ಕೇಂದ್ರ ಸರಕಾರಕ್ಕೆ ಯಾವುದೇ ಹಕ್ಕು ಹಾಗೂ ಅಧಿಕಾರವಿಲ್ಲ. ಸಂವಿಧಾನದ 7ನೇ ಪರಿಚ್ಛೇದ ಇದರ ಬಗ್ಗೆ ವಿಸ್ತ್ರತವಾಗಿ ಹೇಳಿದೆ. ಇದು ಗೊತ್ತಿದ್ದೂ, ಸಹಕಾರ ಇಲಾಖೆಯನ್ನು ಆರಂಭಿಸಿದ್ದಾರೆಂದರೆ ಕೇಂದ್ರ ಸರಕಾರದ ಬಳಿ ಎರಡು ಉದ್ದೇಶಗಳಿವೆ.  ಆ ಎರಡು ಉದ್ದೇಶ ಯಾವುದೆಂಬುದನ್ನು ನೋಡೋಣ.

ಮೊದಲನೆಯದು ರಾಜ್ಯ ಸರಕಾರಗಳ ಅಧಿಕಾರವನ್ನು ಮೊಟಕುಗೊಳಿಸಿ ಎಲ್ಲವನ್ನೂ ಕೇಂದ್ರದ ಕಪಿಮುಷ್ಟಿಯಲ್ಲಿ ತರುವುದು ಹಾಗೂ ಕೇಂದ್ರಿಕೃತ ವ್ಯವಸ್ಥೆಯನ್ನು ಹೇರುವುದು. ಎರಡನೆಯದು ಇನ್ನೂ ಭಯಂಕರ. ಈಗಾಗಲೇ ರಾಷ್ಟ್ರೀಕೃತ ಬ್ಯಾಂಕುಗಳನ್ನು ಹಾಗೂ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ತಿಂದು ತೇಗಿದಂತೆ, ಸಹಕಾರಿ ಬ್ಯಾಂಕುಗಳನ್ನೂ ಮುಗಿಸುವುದು ಹಾಗೂ ಅಲ್ಲಿನ ಹಣಕ್ಕೆ ಕನ್ನ ಹಾಕುವುದು. ಈಗಾಗಲೇ ಜಿ‍ಎಸ್‍ಟಿ ಮೂಲಕ ರಾಜ್ಯದ ತೆರಿಗೆ ಹಕ್ಕನ್ನೇ ಕಸಿದುಕೊಂಡಾಗಿದೆ. ಕೃಷಿ ಕಾಯಿದೆಗಳ ಮೂಲಕ ರಾಜ್ಯಗಳ ವಿಷಯವಾದ ಕೃಷಿಯಲ್ಲೂ ಕೈಹಾಕಿದೆ, ಶಿಕ್ಷಣ ಕ್ಷೇತ್ರಕ್ಕೂ ಕೈ ಹಾಕಿದೆ, ಇನ್ನೂ ರಾಜ್ಯಗಳ ಬಳಿ ಉಳಿದಿರುವ ಕೆಲ ಸಂಪನ್ಮೂಲ, ಹಕ್ಕುಗಳನ್ನೂ ಕಸಿದು, ರಾಜ್ಯಗಳನ್ನು ಸಂಪೂರ್ಣವಾಗಿ ಕೇಂದ್ರ ಸರಕಾರದ ಮೇಲೆ ಅವಲಂಬನೆಯಾಗುವಂತೆ ಮಾಡಿ, ಹಂತ-ಹಂತವಾಗಿ ಒಕ್ಕೂಟ ವ್ಯವಸ್ಥೆಯನ್ನೇ ನಿರ್ಮೂಲನಗೊಳಿಸುವುದು ಬಿಜೆಪಿ ಉದ್ದೇಶವಾಗಿದೆ ಎಂದು ರಾಜಕೀಯ ತಜ್ಞರು ಆರೋಪಿಸುತ್ತಿದ್ದಾರೆ.

ಇನ್ನೂ ಕರ್ನಾಟಕದ ವಿಚಾರಕ್ಕೆ ಬರುವುದಾದರೆ, ಕೇಂದ್ರ ಸಂಪುಟ ಪುನಾರಚನೆ ವೇಳೆ ರಾಜ್ಯದಲ್ಲಿ ಇದೇ ಮೊದಲ ಬಾರಿ ಮಧ್ಯ ಕರ್ನಾಟಕ, ಮುಂಬೈ ಕರ್ನಾಟಕ ಕಲ್ಯಾಣ ಕರ್ನಾಟಕ, ಕರಾವಳಿ ಕರ್ನಾಟಕಕ್ಕೂ ಪ್ರಾಶಸ ಸಿಕ್ಕಿದೆ. ಪ್ರಹ್ಲಾದ್​ ಜೋಶಿ ಹಾಗೂ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್​ ಸೇರಿ ಇದೀಗ ರಾಜ್ಯದ ಆರು ಜನರಿಗೆ ಮೋದಿ ಟೀಮ್​ನಲ್ಲಿ ಸ್ಥಾನ ಸಿಕ್ಕಿದೆ. ನಿನ್ನೆ  ಎ. ನಾರಾಯಣಸ್ವಾಮಿ, ಶೋಭಾ ಕರಂದ್ಲಾಜೆ, ರಾಜೀವ್‌ ಚಂದ್ರಶೇಕರ್‌,  ಭಗವಂತ ಖೂಬಾ ಸಚಿವರಾಗಿ ಪ್ರಮಾಣ ವಸಚನ ಸ್ವೀಕರಿಸಿದ್ದಾರೆ. ಸದಾನಂದಗೌಡ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಂದ್ರೆ ಹೈಕಮಾಂಡ್‌ ಅವರಿಗೆ ರಾಜೀನಾಮೆ ಸಲ್ಲಿಸುವಂತೆ ಸೂಚಿಸಿತ್ತು ಹಾಗಾಗಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ.

ಸಚಿವರಾಗಿ ಅವರ ಕಾರ್ಯನಿರ್ವಹಣೆ ಸರಿಯಾಗಿ ಇರಲಿಲ್ಲ ಎಂಬುದು ಮುಖ್ಯವಾದರೆ ನಿಜವಾಗಿ ತಲೆದಂಡಕ್ಕೆ ಕಾರಣವಾದ ವಿಷಯ ಏನೂ ಅಂದ್ರೆ ಅಶ್ಲೀಲ ಸಿಡಿ ಹಾಗೂ  ಕರ್ನಾಟಕದ ನಾಯಕತ್ವ ಬದಲಾವಣೆಯ ತೆರೆಯ ಹಿಂದೆ ಇವರು ಇದ್ದದ್ದು ಸ್ಪಷ್ಟವಾಗಿತ್ತು. ಹಾಗಾಗಿ ರಾಜೀನಾಮೆಯನ್ನು ಪಡೆದಿದ್ದಾರೆ ಎಂದು ಬಿಜೆಪಿಯಲ್ಲಿ ಕೇಳಿ ಬರುತ್ತಿದೆ. ಆ ಕಾರಣಕ್ಕಾಗಿಯೇ  ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗದಂತೆ ಉಡಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಗೆ ಸಚಿವ ಸ್ಥಾನವನ್ನು ನೀಡಲಾಗಿದೆ.  ಶೋಭಾ ಕರಂದ್ಜಾಜೆ ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡವರು, ಅವರ ಗರಡಿಯಲ್ಲಿ ಬೆಳೆದಂತವರು ಯಡಿಯೂರಪ್ಪ ಬಣದ ಶೋಭಾರವರಿಗೆ ಸಚಿವ ಸ್ಥಾನ ಸಿಕ್ಕಿದ್ದರಿಂದ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಬಹುದು ಎಂಬ ಚರ್ಚೆಗಳು ಕೇಳಿ ಬರುತ್ತಿವೆ.  ಮುರಗೇಶ್‌ ನಿರಾಣಿ ಕೂಡ ದೆಹಲಿಗೆ ಹಾರಿದ್ದು ಕುತೂಹಲ ಮೂಡಿಸಿದೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಚರ್ಚೆಯಾಗುತ್ತಿದಂತೆ, ದಲಿತ ಮುಖ್ಯಮಂತ್ರಿವಿಚಾರ ಚರ್ಚೆಗೆ ಬಂದಿದೆ. ಆ ಕಾರಣಕ್ಕಾಗಿ ತಾನು ದಲಿತರ ಪರ ಎನ್ನುವದನ್ನು ತೋರಿಸಿಕೊಳ್ಳುವುದಕ್ಕಾಗಿ  ಚಿತ್ರದುರ್ಗದ ಸಂಸದ ಎ.ನಾರಾಯಣಸ್ವಾಮಿಯವರಿಗೆ ಸಚಿವ ಸ್ಥಾನ ನೀಡಲಾಗಿದೆ. ಇನ್ನೂ ರಾಜ್ಯಸಭಾ ಸದಸ್ಯ ರಾಜೀವ ಚಂದ್ರಶೇಕರ್‌ ಸಂಘಪರಿವಾರದ ನಂಟಿರುವ ವ್ಯಕ್ತಿ. ಆರ್‌ಎಸ್‌ಎಸ್‌ ವಿಚಾರಗಳನ್ನು ಪ್ರಖರವಾಗಿ ಜಾರಿ ಮಾಡಬಲ್ಲವರು. ಬೇಕೆಂದಾಗಿ ಚುನಾವಣೆಗೆ ದುಡ್ಡು ಕೊಡಬಲ್ಲ ಉದ್ಯಮಿ ಹಾಗಾಗಿ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇನ್ನೂ  ಬೀದರ್‌ ಸಂಸದ ಭಗವಂತ ಖೂಬಾ ರವರಿಗೆ ಸಚಿವ ಸ್ಥಾನ ನೀಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ ಬಿಜೆಪಿಯ 6 ಸಂಸದರಿದ್ದರೂ ವಿಧಾನಸಭೆ ಹಾಗೂ ಸ್ಥಳೀಯ ಮಟ್ಟದಲ್ಲಿ ಬಿಜೆಪಿ ಅಷ್ಟೊಂದು ಬಲಿಷ್ಠವಾಗಿಲ್ಲ. ಅದೇ ಕಾರಣಕ್ಕೆ ಆ ಭಾಗದ ಸಂಸದರು ವಿಶೇಷವಾಗಿ ರಾಜ್ಯದ ಪ್ರಮುಖ ಸಮುದಾಯವಾಗಿರುವ ಲಿಂಗಾಯತ ಸಮುದಾಯಕ್ಕೆ ಸೇರಿರುವ ಭಗವಂತ ಖೂಬಾ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಆ ಭಾಗದಲ್ಲಿ ಪಕ್ಷವನ್ನು ಬಲಗೊಳಿಸುವ ಲೆಕ್ಕಾಚಾರ ಅಡಗಿರುವಂತೆ ಕಾಣಿಸುತ್ತದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಹೊಸ ಸಚಿವರಿಂದ ಏನನ್ನ ನೀರಕ್ಷೆ ಮಾಡೋದಕ್ಕೆ ಸಾಧ್ಯವೇ ಇಲ್ಲ. ಯಾಕಂದ್ರೆ ಅವರ ಅನುಭವ, ತಿಳಿವಳಿಕೆ ಮಟ್ಟ ಇವೆಲ್ಲವನ್ನು ಗಮನಿಸಿದರೆ ಇವರೂ ಕೂಡಾ ವೈಫಲ್ಯ ಅನುಭವಿಸುವವರೆ. ಇವರ ಆಯ್ಕೆ ಯಾಕೆ ಆಗಿದ್ದು ಅಂದ್ರೆ ಒನ್‍ಮ್ಯಾನ್ ಶೋ ಹಾಗೂ ಟೂ ಮ್ಯಾನ್ ಕ್ಯಾಬಿನೇಟ್‍ಗೆ ಜೈ ಅನ್ನಬೇಕಾಗಿತ್ತು. ಹಾಗಾಗಿ ಜೈ ಅನ್ನುವವರು ಸಚಿವರಾಗುವುದಕ್ಕೆ ಸೈ ಆಗಿದ್ದಾರೆ. ಎಂಬ ಮಾತುಗಳು ಬಿಜೆಪಿಯಲ್ಲೆ ಕೇಳಿ ಬರುತ್ತಿವೆ.

ಒಟ್ಟಾರೆ ಸಂಪುಟ ಸರ್ಜರಿಯಲ್ಲಿ  ಶೆ 20 ರಷ್ಟು ಖಾತೆಗಳು ಉತ್ತರ ಪ್ರದೇಶ, ಶೇ 20 ರಷ್ಟು ಖಾತೆಗಳು ಗುಜರಾತ್‌ ಗೆ ಶೇ 40 ರಷ್ಟು ಖಾತೆ ಎರಡು ಜಿಲ್ಲೆಗಳಿಗೆ ಸಿಕ್ಕದ್ದನ್ನೂ ನೋಡಿದರೇ. ಎರಡು ರಾಜ್ಯ, ಇಬ್ಬರ ಕೈಯಲ್ಲಿ ಸಚಿವ ಸಂಪುಟ ಇದೇ ಎಂಬುದು ಸ್ಪಷ್ಟವಾಗುತ್ತಿದೆ. ಮೋದಿ ಮತ್ತು ಶಾ ಹೇಳಿದಂತೆ ಈ ಸಂಪುಟವೂ ಕುಣಿಯುತ್ತದೆಯೇ ಹೊರತು ಆ ರಾಜ್ಯಗಳಿಂದ ಆಯ್ಕೆ ಆಗಿದ್ದಕ್ಕೆ, ಆ ರಾಜ್ಯಗಳಿಗೆ ಕೊಡಿಸಬೇಕಾದ ನ್ಯಾಯವನ್ನು ಇವರು ಕೊಡುಸುತ್ತಾರಾ ಎಂಬ ಪ್ರಶ್ನೆಗೆ ಉತ್ತರ ಇಲ್ಲ ಎಂದು ಬರಬಹುದು. ವ್ಯಕ್ತಿ ಕೇಂದ್ರಿತ ಆಡಳಿತ ದೇಶಕ್ಕೆ ಮಾರಕವಾಗಬಹುದು.

 

 

Donate Janashakthi Media

Leave a Reply

Your email address will not be published. Required fields are marked *