ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಪಾಯಕ್ಕೆ ಆಹ್ವಾನಿಸುತ್ತಿವೆ ರಸ್ತೆಗುಂಡಿಗಳು. ಬಿಬಿಎಂಪಿ ಕಚೇರಿ ಮುಂಭಾಗದಲ್ಲೇ ಇದೆ ದೊಡ್ಡದಾದ ರಸ್ತೆಗುಂಡಿ. ಹೊಂಡಗಳ ಮಧ್ಯೆ ರಸ್ತೆ ಹುಡಕಬೇಕಿದೆ ವಾಹನ ಸವಾರರರು? ಮಳೆಗಾಲದಲ್ಲಿ ಬೆಂಗಳೂರಿನ ಸವಾರರ ಕಥೆ ಕೇಳುವವರು ಯಾರು? ಬಿಬಿಎಂಪಿ ಏನು ಮಾಡುತ್ತಿದೆ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಬೆಂಗಳೂರು ನಗರದ ರಸ್ತೆಗಳಲ್ಲಿ ಗುಂಡಿಗಳದ್ದೆ ಆರ್ಭಟ, ಹೊಂಡಗಳ ಮಧ್ಯೆ ರಸ್ತೆಯನ್ನು ಹುಡುಕಬೇಕು. ಮಳೆ ಬಂದರಂತೂ ಆಳದ ಗುಂಡಿಗಳು ನೀರು ಕುಡಿದು ಕುಳಿತು ಬಿಡುತ್ತವೆ. ಬೈಕ್ ಟೈಯರ್ ಇಳಿದ ನಂತರವೇ ಆ ಗುಂಡಿಯ ಅಸಲಿ ಮುಖ ಬಯಲಾಗುತ್ತದೆ. ಈ ವಿಚಾರದಲ್ಲಿ ಬಿಬಿಎಂಪಿಗೆ ಜನರು ಶಪಿಸುತ್ತಲೇ ಇದ್ದಾರೆ. ಆದರೆ ಬಿಬಿಎಂಪಿ ಇನ್ನೂ ಎಚ್ಚೆತ್ತುಕೊಂಡಿಲ್ಲ. ಮುಖ್ಯ ಕಛೇರಿ ಎದುರಿಗೆ ದೊಡ್ಡದಾದ ಗುಂಡಿ ಬಿದ್ದು ನಾಲ್ಕು ತಿಂಗಳಾಗಿದೆ. ಅದಕ್ಕೆ ಕಳೆದ ವಾರವಷ್ಟೆ ಜಲ್ಲಿ ಕಲ್ಲು ಹಾಕಿ ಹಾಗೆ ಬಿಡಲಾಗಿದೆ. ಅಲ್ಲಿನ ಜಲ್ಲಿಕಲ್ಲು ರಸ್ತೆಯ ತುಂಬೆಲ್ಲ ಹರಡಿ ವಾಹನಸವಾರರಿಗೆ ಕಿರಿಕಿರಿ ಮಾಡುತ್ತಿವೆ.
ಬಿಬಿಎಂಪಿ ಮುಖ್ಯ ಕಚೇರಿಯ ಬಳಿ ಇರುವ ಕಾರ್ಪರೇಷನ್ ವೃತ್ತ ಹೆಚ್ಚು ಟ್ರಾಪಿಕ್ ಇರುವ ಪ್ರದೇಶ್ ಈ ಗುಂಡಿಯ ಸುತ್ತ 15 ಮೀಟರ್ನಷ್ಟು ಬ್ಯಾರಿಕಾಡಿ ಹಾಕಿ ಮುಂಜಾಗೃತೆ ವಹಿಸಲಾಗಿದೆ ಎಂಬುದನ್ನು ಬಿಟ್ಟರೆ ಇದರಿಂದಾಗಬಹುದಾದ ಅಪಾಯಗಳ ಬಗ್ಗೆ ಇನ್ನು ಬಿಬಿಎಂಪಿ ತಲೆ ಕಡೆಸಿಕೊಂಡಂತೆ ಕಾಣುತ್ತಿಲ್ಲ. ಜಲ್ಲಿ ಕಲ್ಲು ಹರಡಿ ಗಾಡಿಗಳು ಸ್ಕಿಡ್ ಆದ್ರೆ ಯಾರೂ ಹೊಣೆ? ವಿಧಾನಸೌಧ ಮುಂಭಾಗ ಇದೇರೀತಿ ರಸ್ತೆಗುಂಡಿ ಇದ್ದಿದ್ದರೆ ಇಷ್ಟು ದಿನ ಸಮಯ ತೆಗೆದುಕೊಳ್ತಾ ಇದ್ರಾ ಅಂತಾ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಹೈಕೋರ್ಟ್ ಕೂಡ ಹಲವು ಬಾರಿ ಎಚ್ಚರಿಸುತ್ತಿದೆ. ಆದರೆ ಬಿಬಿಎಂಪಿ ಎಚ್ಚೆತ್ತುಕೊಂಡಿಲ್ಲ. ಅನೇಕ ಜನ ಮೃತರಾದ ವರದಿಗಳಿವೆ. ಇತ್ತೀಚೆಗೆ ರಸ್ತೆ ಗುಂಡಿ ತಪ್ಪಿಸಲು ಹೋಗಿ ಸಂಭವಿಸಿದ ಅಪಘಾತದಲ್ಲಿ ವೈದ್ಯ ವಿದ್ಯಾರ್ಥಿನಿಯೊಬ್ಬಳು ಸಾವಿಗೀಡಾಗಿರುವ ಘಟನೆ ಲಿಂಗರಾಜಪುರಂ ಮುಖ್ಯ ರಸ್ತೆಯಲ್ಲಿ ನಡೆದಿತ್ತು. ರಸ್ತೆ ಗುಂಡಿಗಳ ಸಮರ್ಪಕ ಭರ್ತಿಗೆ ಬಿಬಿಎಂಪಿ ಅಧಿಕಾರಿಗಳು ಕಾಳಜಿ ತೋರುತ್ತಿಲ್ಲ. ಈ ವಿಚಾರದಲ್ಲಿ ಅವರ ತಲೆಯಲ್ಲಿ ಸ್ಪಷ್ಟಕಾರ್ಯ ಯೋಜನೆಗಳೇ ಇಲ್ಲವಾಗಿದೆ. ಸಾರ್ವಜನಿಕ ಕೆಲಸಗಳನ್ನು ಮಾಡಿ ಮುಗಿಸುವ ಸ್ಪಷ್ಟತೆ ಹಾಗೂ ನಿಖರತೆ ಇಲ್ಲವಾಗಿದ್ದು, ಅವರಿಗೆ ನಾಚಿಕೆ ಆಗಬೇಕು ಎಂದು ಹೈಕೋರ್ಟ್ ಇತ್ತೀಚೆಗೆ ಚಾಟಿ ಬೀಸಿತ್ತು.
ಇನ್ನೋಂದು ಅಚ್ಚರಿಯ ವಿಷಯ ಏನೆಂದ್ರೆ, ರಸ್ತೆ ಗುಂಡಿಗಳ ದುರಸ್ತಿಗಾಗಿಯೇ ಬಿಬಿಎಂಪಿ 7. ಕೋಟಿ ರು. ವೆಚ್ಚದಲ್ಲಿ ಸ್ವಂತ ಡಾಂಬರು ಮಿಶ್ರಣ ಘಟಕ ನಿರ್ಮಿಸಿದೆ. ಇದು ಗಂಟೆಗೆ 120 ಟನ್ ನಂತೆ 10 ತಾಸಿಗೆ 50 ಟ್ರಕ್ಗಳಷ್ಟು ಹಾಟ್ಮಿಕ್ಸ್ ಸಿದ್ಧಪಡಿಸುವ ಸಾಮರ್ಥ್ಯ ಹೊಂದಿದ್ದರೂ, ದಿನಕ್ಕೆ 10 ಲೋಡ್ನಷ್ಟು ಮಾತ್ರ ಡಾಂಬರು ಪೂರೈಕೆಯಾಗುತ್ತಿದೆ. ಇಷ್ಟೊಂದು ವಿಳಂಭ ಯಾಕೆ? ಇಷ್ಟಾದರೂ ಸವಾರರ ಜೀವಕ್ಕೆ ಕಂಟಕವಾಗಿರುವ ಗುಂಡಿಗಳನ್ನು ಮುಚ್ಚಲು ಮನಸ್ಸು ಮಾಡುತ್ತಿಲ್ಲ. ಅವೈಜ್ಞಾನಿಕ ಕಾಮಗಾರಿ ಪರಿಣಾಮ ದುರಸ್ತಿ ಮಾಡಿದಷ್ಟೇ ಬೇಗ ರಸ್ತೆಗಳ ಡಾಂಬರು ಕಿತ್ತು ಬರುತ್ತಿದ್ದು, ರಸ್ತೆಗಳೆಲ್ಲ ಗುಂಡಿಮಯವಾಗಿದೆ. ಸಮರ್ಪಕವಾಗಿ ಗುಂಡಿ ಗಳನ್ನು ಮುಚ್ಚದೇ ನಿರ್ಲಕ್ಷ್ಯವಹಿಸುವ ಅಧಿಕಾರಿಗಳಿಗೆ ದಂಡ ವಿಧಿಸುವ ಮತ್ತು ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಯಮವನ್ನು ಮಾತ್ರ ಎಂಜಿನಿಯರ್ಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಆರೋಪಗಳು ಕೂಡ ಕೇಳಿ ಬರುತ್ತಿವೆ.
ಇದನ್ನೂ ಓದಿ : ಸರಕಾರದ ವೈಫಲ್ಯವನ್ನು ಬಿಚ್ಚಿಟ್ಟಿದೆಯಾ ಸಂಪುಟ ಸರ್ಜರಿ? ಭರ್ತಿಯಾಗಿದ್ದರೂ ಇಬ್ಬರ ಕೈಯಲ್ಲಿದೆ ಆಡಳಿತದ ಕೀಲಿ ಕೈ!!
ಬಿಬಿಎಂಪಿ ವ್ಯಾಪ್ತಿಯ 401 ಕಿ.ಮೀ. ಉದ್ದದ ರಸ್ತೆಯಲ್ಲಿ ಗುಂಡಿಗಳಿವೆ ಎಂದು ಇತ್ತೀಚೆಗೆ ಹೈಕೋರ್ಟ್ ಗೆ ಬಿಬಿಎಂಪಿ ಮಾಹಿತಿ ನೀಡಿತ್ತು. ಆದರೆ ಬಿಬಿಎಂಪಿ ಈವರೆಗೂ ಎಷ್ಟು ಗುಂಡಿ ಮುಚ್ಚಲಾಗಿದೆ ಎಂಬ ಅಂಕಿ ಅಂಶಗಳನ್ನು ಬಹಿರಂಗಗೊಳಿಸುತ್ತಿಲ್ಲ. ಅಧಿಕಾರಿಗಳನ್ನು ವಿಚಾರಿಸಿದರೆ ಬಿಬಿಎಂಪಿ ವೆಬ್ಸೈಟ್ನಲ್ಲಿದೆ ಎಂದು ಹೇಳಿ ಕೈತೊಳೆದುಕೊಳ್ಳುತ್ತಾರೆ. ಆದರೆ ವೆಬ್ಸೈಟ್ನಲ್ಲಿ ಯಾವುದೋ ಹಳೆ ವರ್ಷಗಳ ಅಂಕಿ ಅಂಶ ಹಾಕಿದ್ದು, ಇದೇ ವರ್ಷದ ಮಾಹಿತಿ ಎಂದು ಬಿಂಬಿಸಿದೆ. ಜತೆಗೆ ಕೆಲವು ವಲಯಗಳ ರಸ್ತೆಗಳಲ್ಲಿ ಗುಂಡಿಗಳೇ ಇಲ್ಲ ಎಂದು ವೆಬ್ಸೈಟ್ನಲ್ಲಿ ಮಾಹಿತಿಹಾಕಲಾಗಿದೆ.
ಒಂದು ಅಂದಾಜಿನ ಪ್ರಕಾರ 2021 ರ ಏಪ್ರಿಲ್ ವರೆಗೆ ಬೆಂಗಳೂರಿನಲ್ಲಿ 7272 ರಸ್ತೆಗುಂಡಿಗಳಿವೆ, ಅದರಲ್ಲಿ 4034 ಗುಂಡಿಗಳನ್ನು ಮುಚ್ಚಲಾಗಿದೆ. ಆದರೆ ನಗರದಲ್ಲಿರುವ ಎಲ್ಲ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಕೊಚ್ಚಿಕೊಳ್ಳುತ್ತಿರುವ ಬಿಬಿಎಂಪಿ ವಿರುದ್ಧ ಕಳಪೆ ಕಾಮಗಾರಿಯ ಆರೋಪಗಳು ಕೇಳುತ್ತಿವೆ. ಈ ಸಂಬಂಧ ರಸ್ತೆ ಗುಂಡಿಗಳು ಹೆಚ್ಚಿವೆ ಎಂಬ ದೂರುಗಳು ಬಂದಿವೆ. ಅಲ್ಲದೆ ಬಿಬಿಎಂಪಿ ರಸ್ತೆಗುಂಡಿಗಳನ್ನು ಮುಚ್ಚಿದ ಬಳಿಕ, ಕಾಮಗಾರಿ ಗುಣಮಟ್ಟದ್ದಾಗಿದೆಯೇ ಎಂದು ಪರಿಶೀಲನೆ ಕೂಡ ನಡೆಸುತ್ತಿಲ್ಲ. ಹೀಗಾಗಿ ರಸ್ತೆಗುಂಡಿಗಳು ಮತ್ತೆ ಯಥಾಸ್ಥಿತಿಗೆ ತಲುಪಿವೆ. ಇದರಿಂದಾಗಿ ದೂಳು, ಗುಂಡಿಗಳಿಂದಾಗಿ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ.
ಬಿಬಿಎಂಪಿಯ ವ್ಯಾಪ್ತಿಯಲ್ಲಿ 470 ಪ್ರಮುಖ ರಸ್ತೆಗಳಿದ್ದು, 1344 ಕಿ.ಮೀ ಉದ್ದವಿದೆ. ಇದರಲ್ಲಿ 401ಕಿ.ಮೀ ಉದ್ದದ 108 ರಸ್ತೆಗಳು ರಸ್ತೆಗುಂಡಿಗಳಿಂದ ಕೂಡಿವೆ. 106.68 ಕಿ.ಮೀ ರಸ್ತೆಯಲ್ಲಿ ಬೆಸ್ಕಾಂ, ಗೇಲ್, ಜಲಮಂಡಳಿ ಹಾಗೂ ಕೆಪಿಟಿಸಿಎಲ್ ಸಂಸ್ಥೆಗಳು ವಿವಿಧ ಅಭಿವೃದ್ಧಿ ಕಾರಣಕ್ಕಾಗಿ ರಸ್ತೆಗಳನ್ನು ಅಗೆದಿವೆ. ಇನ್ನು 943.74 ಕಿ.ಮೀ ರಸ್ತೆಗಳು ಗುಂಡಿ ಮುಕ್ತವಾಗಿವೆ ಎಂಬ ಮಾಹಿತಿ ಲಬ್ಯವಾಗಿದೆ. ಕೆಲವೆಡೆಗಳಲ್ಲಿ ಇದು ನನಗೆ ಸಂಬಂಧಿಸದ ವಿಚಾರ ಅಂತಾ ಬಿಬಿಎಂಪಿ ಮೌನ ವಹಿಸುತ್ತಿದೆ, ಇದು ಸರಿಯಾದ ವಿಧಾನ ಅಲ್ಲ. ಬಿಬಿಎಂಪಿ ತನ್ನ ಜವಬ್ದಾರಿಯನ್ನು ಅರಿಯಬೇಕಿದೆ. ಕಳಪೆ ಕಾಮಗಾರಿಗಳಾಗದಂತೆ ಎಚ್ಚರಿಕೆ ವಹಿಸಬೇಕಿದೆ.