ಕೋವಿಡ್ ಸಾವಿನ ಲೆಕ್ಕ ತಪ್ಪುತ್ತಿದೆಯೆ? ಈ ಲೆಕ್ಕಾಚಾರ ಕೋವಿಡ್ ಹೋರಾಟಕ್ಕೆ ಹಿನ್ನಡೆಯಾಗುತ್ತಿದೆಯೇ?

ಗುರುರಾಜ ದೇಸಾಯಿ

ಕೋವಿಡ್‌ ಎರಡನೇ ಅಲೆಯಲ್ಲಿ ಸಾವುಗಳ ಸದ್ದು ಹೆಚ್ಚಾಗಿತ್ತು. ಯಾರೂ ನಿರೀಕ್ಷೆ ಮಾಡದಷ್ಟು ಜನ ನಮ್ಮ ಕಣ್ಣಮುಂದೆಯೇ ಉಸಿರು ಚಲ್ಲಿದ್ದಾರೆ. ಸಾಲು ಸಾಲು ಆಂಬುಲೆನ್ಸ್ ಚಿತಾಗಾರದ ಮುಂದೆ ನಿಂತಿದ್ದ ದೃಶ್ಯಗಳು ನಮ್ಮ ಕಣ್ಮುಂದೆ ಹಾಗಿಯೇ ಇವೆ. ಸ್ಮಶಾನಗಳಲ್ಲಿ ಉರಿಯುತ್ತಿರುವ ಚಿತೆಗಳಿಗೂ ಸರ್ಕಾರದ ಸಾವಿನ ಲೆಕ್ಕಕ್ಕೂ ಭಾರೀ ವ್ಯತ್ಯಾಸ ಕಾಣುತ್ತಿದೆ. ಸಾವಿನ ಲೆಕ್ಕ ತಪ್ಪುತ್ತಿರುವುದು ಎಲ್ಲಿ, ಯಾಕೆ ಈ ಲೆಕ್ಕ ತಪ್ಪಿಸಲಾಗುತ್ತಿದೆ. ತಪ್ಪಿನ ಲೆಕ್ಕಾಚಾರ ಕೋವಿಡ್‌ ವಿರುದ್ಧದ ಹೋರಾಟಕ್ಕೆ ಹಿನ್ನಡೆಯಾಗುತ್ತಿದೆ ಎಂಬ ಪ್ರಶ್ನೆಗಳು ಎದ್ದಿವೆ.

ಭಾರತದಲ್ಲಿ ಕೋವಿಡ್ ಸಾವುಗಳ ಲೆಕ್ಕವನ್ನು ಕಡಿಮೆ ತೋರಿಸಲಾಗುತ್ತಿದೆ ಎಂದು ಹಲವು ಅಧ್ಯಯನ ಸಂಸ್ಥೆಗಳು ವರದಿ ಪ್ರಕಟಿಸುತ್ತಲೇ ಇವೆ. ಕೋವಿಡ್‌ ಎರಡನೇ ಅಲೆಯಲ್ಲಿ ದೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಆದರೆ, ಇವುಗಳನ್ನು ಕೋವಿಡ್‌ ಸಾವು ನೋಂದಣಿ ಮಾರ್ಗಸೂಚಿಯ ಅನ್ವಯ ನೋಂದಣಿ ಮಾಡದೇ ಇರುವ ಕಾರಣ ಎಲ್ಲಾ ಕೋವಿಡ್‌ ಸಾವುಗಳು ಲೆಕ್ಕಕ್ಕೇ ಸಿಕ್ಕಿಲ್ಲ ಎಂದು ‘ದಿ ಎಕನಾಮಿಸ್ಟ್’ ವರದಿಯನ್ನು  ಪ್ರಕಟಿಸಿತ್ತು.

ಈ ವರದಿಯನ್ನು ಕೇಂದ್ರ ಸರ್ಕಾರವು ತಿರಸ್ಕರಿಸಿತ್ತು. ‘ಈ ವರದಿ ಸತ್ಯಾಂಶವನ್ನು ಆಧರಿಸಿ ಬರೆದಿಲ್ಲ’ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹೇಳಿತ್ತು. ಆದರೆ, ಭಾರತದ ಕೆಲವು ಪ್ರಾದೇಶಿಕ ಮಾಧ್ಯಮಗಳ  ಕೋವಿಡ್‌ ಸಾವನ್ನು ಕಡಿಮೆ ತೋರಿಸ ಲಾಗುತ್ತಿದೆ  ಎಂದು ವರದಿಗಳನ್ನು ಪ್ರಕಟಿಸುತ್ತಲೆ ಇದ್ದಾರೆ.   ಅದರಲ್ಲಿ ಪ್ರಮುಖವಾಗಿ ದಿ ವೈರ್‌, ಪ್ರಿಂಟ್‌, ದಿವ್ಯ ಭಾಸ್ಕರ್‌,  ನ್ಯೂಸ್‌ ಕ್ಲಿಕ್‌, ಪ್ರಜಾವಾಣಿ‌ ಸೇರಿದಂತೆ ಅನೇಕ  ಪತ್ರಿಕೆಗಳು ಕೋವಿಡ್ ಸಾವಿನ ಲೆಕ್ಕ ತಪ್ಪುತ್ತಿದೆ ಎಂದು ವರದಿಯನ್ನು ಮಾಡುತ್ತಲೆ ಇದ್ದಾರೆ.

ಪ್ರತಿದಿನ ಕೋವಿಡ್‌ನಿಂದ ಸಾಯುವವರ ಮಾಹಿತಿಯನ್ನು ಜಿಲ್ಲಾಡಳಿತ, ರಾಜ್ಯಗಳು ಮತ್ತು ಅಂತಿಮವಾಗಿ ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಿಸುತ್ತವೆ. ‘ಜಿಲ್ಲಾಡಳಿತಗಳು ನೀಡುತ್ತಿರುವ ಸಾವಿನ ಲೆಕ್ಕಕ್ಕೂ, ಚಿತಾಗಾರ ಮತ್ತು ಸ್ಮಶಾನಗಳಲ್ಲಿ ನಡೆದ ಅಂತ್ಯಕ್ರಿಯೆಗಳ ಸಂಖ್ಯೆಗೂ ಭಾರಿ ಅಂತರವಿದೆ’  ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಲೆ ಇದೆ. ಮುಖ್ಯವಾಗಿ  ಉತ್ತರ ಪ್ರದೇಶ್‌ ತಮಿಳುನಾಡು, ಗುಜರಾತ್, ಮಧ್ಯಪ್ರದೇಶ, ದೆಹಲಿ, ಬಿಹಾರ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲೂ ಈ ರೀತಿ ಲೆಕ್ಕ ತಪ್ಪಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ.

ಭಾರತದಲ್ಲಿ ಇಲ್ಲಿಯವರೆಗೆ 4 ಲಕ್ಷ 312 ಜನ ಕೋವಿಡ್‌ ನಿಂದಾಗಿ ಮತ ಪಟ್ಟಿದ್ದಾರೆ ಎಂದು ಸರಕಾರ ಹೇಳುತ್ತಿದೆ. ಆದರೆ ಇದು ಸರಿಯಾದ ಲೆಕ್ಕ ಅಲ್ಲ ಭಾರತದಲ್ಲಿ ಇಲ್ಲಿವರೆಗೆ ಕಳೆದ ವರ್ಷ ಅಂದ್ರೆ 2020 ರ ಮಾರ್ಚ್‌ ನಿಂದ 2021 ರ ಮೇ 42 ಲಕ್ಷ ಜನ ಮೃತರಾದ ಬಗ್ಗೆ ಅಧ್ಯಯನಗಳು ವರದಿಯನ್ನು ಪ್ರಕಟಿಸಿವೆ.  ಇದಷ್ಟೆ ಅಲ್ಲ ಕೋವಿಡ್‌ ಸೋಂಕಿನ ಪ್ರಕರಣದಲ್ಲೂ  ಸರಕಾರ ಸುಳ್ಳು ಲೆಕ್ಕ ಹೇಳುತ್ತಿದೆ ಎಂದು ಆತಂಕದ ವಿಚಾರವೂ ಹೊರ ಬಿದ್ದಿದೆ.  ಕೆಲ ರಾಜ್ಯಗಳಲ್ಲಿ ಕೋವಿಡ್‌ ಸಾವುಗಳ ಲೆಕ್ಕ ಈ ರೀತಿ ಇದೆ.

ಗುಜರಾತ್ : ಗಜರಾತ್‌ನ ಸೂರತ್ ನಗರದಲ್ಲಿ ನಡೆದ ಅಂತ್ಯಕ್ರಿಯೆಗಳು ಮತ್ತು ಸಂಭವಿಸಿದ ಕೋವಿಡ್ ಸಾವುಗಳ ಬಗ್ಗೆ ರಾಯಿಟರ್ಸ್‌ ಸುದೀರ್ಘ ವರದಿ ಪ್ರಕಟಿಸಿದೆ. ಸೂರತ್‌ನ ಎಲ್ಲಾ ಚಿತಾಗಾರಗಳು, ಸ್ಮಶಾನ ಮತ್ತು ಖಬರಸ್ತಾನಗಳಿಗೆ ಭೇಟಿ ನೀಡಿ, ಅಲ್ಲಿ ನಡೆದ ಅಂತ್ಯಕ್ರಿಯೆಗಳ ಮಾಹಿತಿಯನ್ನು ರಾಯಿಟರ್ಸ್ ಪ್ರಕಟಿಸಿದೆ. ‘2020ರ ಏಪ್ರಿಲ್‌ನಲ್ಲಿ ಸೂರತ್‌ನ ಎಲ್ಲಾ ಚಿತಾಗಾರ, ಸ್ಮಶಾನ ಮತ್ತು ಖಬರಸ್ತಾನಗಳಲ್ಲಿ 1,980 ಅಂತ್ಯಕ್ರಿಯೆಗಳನ್ನು ನಡೆಸಲಾಗಿತ್ತು. ಆದರೆ, 2021ರ ಏಪ್ರಿಲ್‌ನಲ್ಲಿ 6,520 ಅಂತ್ಯಕ್ರಿಯೆಗಳು ನಡೆದಿವೆ. 2021ರ ಏಪ್ರಿಲ್‌ನಲ್ಲಿ ಸೂರತ್ ನಗರ ಮತ್ತು ಜಿಲ್ಲೆಯಲ್ಲಿ ಕೋವಿಡ್‌ನಿಂದ ಸಂಭವಿಸಿದ ಸಾವುಗಳು 585 ಎಂದು ಸರ್ಕಾರದ ದಾಖಲೆಗಳು ಹೇಳುತ್ತವೆ. ಈ ಎಲ್ಲಾ ಚಿತಾಗಾರಗಳಲ್ಲಿ ಸಂಭವಿಸಿದ ಹೆಚ್ಚುವರಿ ಅಂತ್ಯಕ್ರಿಯೆಗಳೆಲ್ಲವೂ ಕೋವಿಡ್‌ ಸಾವಿಗೆ ಸಂಭವಿಸಿದ್ದೇ ಆಗಿರಬೇಕಿಲ್ಲ. ಆದರೆ, ಈ ಹೆಚ್ಚುವರಿ ಸಾವುಗಳಲ್ಲಿ ಕೋವಿಡ್‌ ಸಾವುಗಳೂ ಸೇರಿವೆ ಎಂಬುದರಲ್ಲಿ ಅನುಮಾನವಿಲ್ಲ.

ಇದನ್ನೂ ಓದಿ : ಕಳಪೆ ಆಹಾರದ ಕಿಟ್ ವಿತರಣೆ ನಿರ್ಲಕ್ಷ್ಯವೋ!? ಅಥವಾ ಭ್ರಷ್ಟಾಚಾರವೋ!!?

ಈ ಅಂಕಿ ಅಂಶವನ್ನು ನಾವು ಬೆನ್ನುಹತ್ತಿದಾಗ ನಮಗೆ ಇನ್ನಷ್ಟು ಆತಂಕಕಾರಿ ವಿಚಾರಗಳು ಹೊರಬೀಳುತ್ತಿವೆ. ‌ ಕೇವಲ್‌ ಸೂರತ್‌ ಪ್ರದೇಶದ್ದೆ ಹೀಗಾದ್ರೆ ಉಳಿದ ಪ್ರದೇಶಗಳದ್ದೂ ಹೇಗೆ ಎಂದು ಗುಜರಾತ್‌ ರಾಜ್ಯದ ಸಾವಿನ ಅಂಕಿ ಅಂಶಗಳನ್ನು ನೋಡಿದಾಗ ಶಾಕ್‌ ಆಗುತ್ತೆ,  ಗುಜರಾತ್‌ ನಲ್ಲಿ ಕಳೆದ ಬಾರಿಯ  ಸಾವಿನ ಅಂಕಿ ಅಂಶಕ್ಕೂ ಈಗಿನ ಅಂಕಿ ಅಂಶಗಳನ್ನು ತಾಳೆಮಾಡಿ ನೋಡಿದಾಗ ಸುಳ್ಳಿನಲೆಕ್ಕ ಬಯಲಾಗುತ್ತಿದೆ.

ಮಾರ್ಚ 2020 ರಿಂದ ಮೇ 2020 ರವರೆಗೆ ಗುಜರಾತ್‌ನಲ್ಲಿ ಸರಕಾರ ಘೋಷಣೆ ಮಾಡಿರುವ ಕೋವಿಡ್‌ ಸಾವುಗಳ ಸಂಖ್ಯೆ  ಕೇವಲ 513 ಆದರೆ. ಮರಣ ನೋಂದಣಿ ಪ್ರಮಾಣಪತ್ರ ವಿತರಣೆಯಾಗಿದ್ದು 58,068, 2021 ರ ಮಾರ್ಚ್‌ 01 ರಿಂದ ಮೇ 10 ರವರೆಗಿನ ಕೋವಿಡ್‌ ಸಾವುಗಳ ಲೆಕ್ಕ 4100 ಇದೆ. ಆದರೆ ಮರಣ ನೋಂದಣಿ ಪ್ರಮಾಣ ಪತ್ರ ವಿತರಣೆಯಾಗಿದ್ದು 1.23,873. ಈ ಹೆಚ್ಚುವರಿ ಸಾವುಗಳಲ್ಲಿ ಖಂಡಿತ ಕೋವಿಡ್‌ ಸಾವುಗಳಿವೆ. ಆದರೆ ಸರಕಾರ ಸುಳ್ಳು ಲೆಕ್ಕ ಹೇಳುತ್ತಿದೆ ಎನ್ನುವುದು ಈ ಅಂಕಿ ಅಂಶಗಳಿಂದ ಸ್ಪಷ್ಟವಾಗ್ತಾ ಇದೆ.  ಈ ಸಾವುಗಳಲ್ಲಿ  ಗುಜರಾತ್‌  ಸರಕಾರ 60% ಕೋವಿಡ್‌ ಸಾವುಗಳನ್ನು ಮುಚ್ಚಿಟ್ಟಿದೆ ಎಂಬ ಅಂಶವೂ ಈಗ ಹೊರಬಿದ್ದಿದೆ.

ಉತ್ತರ ಪ್ರದೇಶ :  ಉತ್ತರ ಪ್ರದೇಶದ ಕೋವಿಡ್‌ ಸಾವಿನ ಲೆಕ್ಕವನ್ನು ನೋಡುವುದಾದರೆ. ವಾರಣಾಸಿ ಮತ್ತು ಕಾನ್ಪೂರ ಜಿಲ್ಲೆಗಳಲ್ಲಿ ಸರಕಾರದ ಲೆಕ್ಕಕ್ಕೂ ಮರಣ ಪ್ರಮಾಣ ಪತ್ರ ಪಡೆದ ಲೆಕ್ಕಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಕಾನ್ಪೂರದಲ್ಲಿ 2021 ಎಪ್ರಿಲ್‌ ಮೇ ನಲ್ಲಿ ಕೋವಿಡ್‌ ನಿಂದಾದ ಸಾವಿನ ಲೆಕ್ಕವನ್ನು 783 ಎಂದು ಸರಕಾರ ಹೇಳ್ತಾ ಇದೆ. ಆದರೆ ಮರಣ ಪ್ರಮಾಣ  ಪತ್ರ ಪಡೆದವರ ಸಂಖ್ಯೆ 3551.ವಾರಣಾಸಿಯಲ್ಲಿ ಕೋವಿಡ್‌ ನಿಂದಾಗಿ ಎಪ್ರಿಲ್‌ ಮೇ ತಿಂಗಳಲ್ಲಿ 321 ಜನ ಮೃತರಾಗಿದ್ದಾರೆ ಅಂತಾ ಹೇಳಿದ್ರೆ  ಮರಣ ಪ್ರಮಾಣ ಪತ್ರ ನೋಂದಣಿಯಾಗಿದ್ದು ಎಷ್ಟು ಅಂದ್ರೆ 2152. ಇದು ಕೇವಲ ಎರಡು ತಿಂಗಳಿನ ಲೆಕ್ಕ ಮಾತ್ರ.   ಉತ್ತರ ಪ್ರದೇಶದ ಇಪ್ಪತ್ನಾಲ್ಕು ಜಿಲ್ಲೆಗಳಲ್ಲಿ ಜುಲೈ 2020 ಮತ್ತು ಮಾರ್ಚ್‌ 2021 ರ ನಡುವೆ 1 ಲಕ್ಷದ 97 ಸಾವಿರ ಜನ ಮೃತರಾಗಿದ್ದಾರೆ. ಹಿಂದಿನ ವರ್ಷದ ಇದೇ ಅವಧಿಗೆ  ಕೋವಿಡ್‌ ನ ಸಾವುಗಳಿಗೆ ಹೋಲಿಸಿದರೆ 110% ರಷ್ಟು ಹೆಚ್ಚಾಗಿದೆ. ಈ ಒಂಬತ್ತು ತಿಂಗಳಲ್ಲಿ ಹೋಲಿಕೆ ಮಾಡಿದರೆ 43 ಪಟ್ಟು ಜಾಸ್ತಿಯಾಗಿದೆ. ಒಟ್ಟಾರೆ  ಉತ್ತರ ಪ್ರದೇಶ ರಾಜ್ಯದ  ಕೋವಿಡ್‌ ಸಾವು ಮತ್ತು ಮರಣ ಪ್ರಮಾಣ ಪತ್ರ ವಿತರಣೆಯ ಅಂಕಿಅಂಶ ನೋಡಿದ್ರೆ ಉತ್ತರ ಪ್ರದೇಶ ಸರಕಾರ ಕೂಡ ಸುಳ್ಳು ಲೆಕ್ಕ ಹೇಳುತ್ತಿದೆ ಎನ್ನು ಪಕ್ಕಾ ಆಗುತ್ತಿದೆ.  ರಾಜಸ್ಥಾನದಲ್ಲೂ ಕೋವಿಡ್‌ ಸಾವಿನ ಲೆಕ್ಕ ತಪ್ಪುತ್ತಿದ್ದು ಮಾಹಿತಿಯನ್ನು ಸರಿಪಡಿಸುವಂತೆ ಸರಕಾರವೇ ಜಿಲ್ಲೆಗಳಿಗೆ ಸೂಚನೆಯನ್ನು ನೀಡಿದೆ.

ಇದನ್ನೂ ಓದಿ : ಅಂತ್ಯಸಂಸ್ಕಾರ ಸಮಸ್ಯೆ : ಗಂಗಾ, ಯಮುನಾ ನದಿಯಲ್ಲಿ ತೇಲಿ ಬರುತ್ತಿವೆ ನೂರಾರು ಕೋವಿಡ್ ಶವಗಳು

ರಾಜಸ್ಥಾನ :  ರಾಜಸ್ಥಾನದಲ್ಲಿ 2021ರ ಏಪ್ರಿಲ್‌ 1ರಿಂದ ಮೇ 20ರ ಮಧ್ಯೆ ಒಟ್ಟು 3,900 ಕೋವಿಡ್‌ ಸಾವುಗಳು ಸಂಭವಿಸಿವೆ ಎಂದು ರಾಜ್ಯ ಸರ್ಕಾರದ ದಾಖಲೆಗಳು ಹೇಳುತ್ತವೆ. ಆದರೆ ಇದೇ ಅವಧಿಯಲ್ಲಿ ರಾಜ್ಯದಾದ್ಯಂತ 14,400 ಕೋವಿಡ್‌ ಸಾವುಗಳು ಸಂಭವಿಸಿವೆ. ಚಿತಾಗಾರಗಳು ಮತ್ತು ಸ್ಮಶಾನಗಳಲ್ಲಿ ನಮೂದಿಸಲಾಗಿರುವ ಅಂತ್ಯಕ್ರಿಯೆಯ ಮಾಹಿತಿಯನ್ನು ಲೆಕ್ಕಹಾಕಿ ಮಾಧ್ಯಮಗಳು ಇಷ್ಟು ಸಾವು ಸಂಭವಿಸಿವೆ ಎಂದು ವರದಿ ಮಾಡಿದ್ದವು. ‘ಈ ಬಗ್ಗೆ ಲೆಕ್ಕಪರಿಶೋಧನೆ ನಡೆಸಿ, ವರದಿ ನೀಡಿ. ಸಾವಿನ ಸಂಖ್ಯೆಯ ಮಾಹಿತಿ ತಪ್ಪಾಗಿದ್ದರೆ, ಅದನ್ನು ಸರಿಪಡಿಸಿ’ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಆದೇಶಿಸಿದ್ದಾರೆ.

ಕರ್ನಾಟಕ :  ಕರ್ನಾಟಕದಲ್ಲೂ ಕೋವಿಡ್‌ ಸಾವಿನ ವಿಚಾರಕ್ಕೆ  ಸುಳ್ಳು ಲೆಕ್ಕ ಹೇಳಲಾಗುತ್ತಿದೆ ಎಂಬ ಆರೋಪಗಳಿವೆ ಕೇಳಿ ಬರುತ್ತಿವೆ. ಕರ್ನಾಟಕದಲ್ಲಿ ಈವರೆಗೆ ದೃಢಪಟ್ಟಿರುವ ಕೋವಿಡ್ ಪ್ರಕರಣಗಳಲ್ಲಿ ಪ್ರತಿ ನೂರು ಸೋಂಕಿತರಿಗೆ ತಲಾ ಒಬ್ಬರು ಮರಣ ಹೊಂದಿದ್ದಾರೆ. ದಕ್ಷಿಣ ಭಾರತದ ಐದು ರಾಜ್ಯಗಳ ಪೈಕಿ ಕರ್ನಾಟಕದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಸಾವು ಸಂಭವಿಸಿದೆ. ಮೊದಲನೇ ಅಲೆಯಲ್ಲಿ 9.73 ಲಕ್ಷ ಮಂದಿ ಸೋಂಕಿತರಾಗಿದ್ದರು. ಅವರಲ್ಲಿ 12,449 ಮಂದಿ ಸಾವಿಗೀಡಾಗಿದ್ದರು. ಮೊದಲ ಅಲೆಯಲ್ಲಿ ಮರಣ ಪ್ರಮಾಣ ದರವು ಶೇ 1.27ರಷ್ಟಿತ್ತು. ಎರಡನೇ ಅಲೆಯಲ್ಲಿ ಕೋವಿಡ್ ಹೊಸ ಪ್ರಕರಣಗಳ ಜತೆಗೆ ಮೃತಪಟ್ಟವರ ಸಂಖ್ಯೆ ಕೂಡ ಏರಿಕೆ ಕಂಡಿದೆ.  ಮೂರುವರೆ ತಿಂಗಳಲ್ಲಿ 18.66 ಲಕ್ಷಕ್ಕೂ ಅಧಿಕ ಮಂದಿ ಕೋವಿಡ್‌ ಪೀಡಿತರಾಗಿದ್ದಾರೆ. ಅವರಲ್ಲಿ 22,480 ಮಂದಿ ಮೃತಪಟ್ಟಿದ್ದಾರೆ.   ಒಟ್ಟು ರಾಜ್ಯದಲ್ಲಿ 6.57 ಕೋಟಿ ಜನಸಂಖ್ಯೆ ಇದ್ದು ಎರಡು ಅಲೆ ಸೇರಿ  28.40 ಲಕ್ಷಕ್ಕೂ ಅಧಿಕ ಮಂದಿ ಸೋಂಕಿತರಾಗಿದ್ದಾರೆ.  ಸೋಂಕು ದೃಢ ಪ್ರಮಾಣ ಶೇ 2.4ರಷ್ಟಿದೆ. 35 ಸಾವಿರ ಮಂದಿ ಸಾವಿಗೀಡಾಗಿದ್ದಾರೆ. ಅಂದ್ರೆ ಸಾವಿನ ಪ್ರಮಾಣ 3.28 ರಷ್ಟಿದೆ.  ಆದರೆ ಸರಕಾರ ಸುಳ್ಳು ಹೇಳುತ್ತಿದೆ. ಕೋವಿಡ್‌ ಸಾವಿನ ಸಂಖ್ಯೆಗೂ, ಮರಣ ಪ್ರಮಾಣ ನೋಂದಾವಣಿ ಸಂಖ್ಯೆಗೂ ಸಾಕಷ್ಟು ವ್ಯತ್ಯಾಸ ಇದೆ.  ಕರ್ನಾಟಕದಲ್ಲೂ ಸಾವಿನ ವಿಚಾರವಾಗಿ ಸಾಕಷ್ಟು ಗೊಂದಲ ಮೂಡಿದೆ. ಸರ್ಕಾರ ಕೊಟ್ಟಿರುವ ಮಾಹಿತಿಗೂ ನಿಜವಾಗಿಯೂ ಸಂಭವಿಸಿರುವ ಸಾವುಗಳ ಸಂಖ್ಯೆಗೂ ಭಾರೀ ವ್ಯತ್ಯಾಸವಿದೆ ಎಂಬ ಆತಂಕಕಾರಿ ವಿಚಾರ ಇದೀಗ ಬಹಿರಂಗವಾಗಿದೆ.

ಕೊರೊನಾದಿಂದ ಈ ವರೆಗೆ ಸಂಭವಿಸಿರುವ ಸಾವಿನ ಸಂಖ್ಯೆ 34,425 ಎಂದು ರಾಜ್ಯ ಸರ್ಕಾರ ಅಧಿಕೃತ ಅಂಕಿ ಅಂಶ ಹೇಳುತ್ತಿವೆ. ಆದರೆ ಕೊರೊನಾ ಎರಡನೇ ಅಲೆಯ ಬಳಿಕ, ರಾಜ್ಯದಲ್ಲಿ ಒಟ್ಟಾರೆ ಮೃತರ ಸಂಖ್ಯೆ 1.2 ಲಕ್ಷವನ್ನೂ ಮೀರಿರುವ ಆತಂಕಕಾರಿ ಮಾಹಿತಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬಹಿರಂಗಪಡಿಸಿದ್ದಾರೆ.

ಕೇರಳ : ಈ ಎಲ್ಲಾ ವಿಚಾರಗಳಿಗೆ ಹೋಲಿಕೆ ಮಾಡಿದರೆ ಕೇರಳ ಸರಕಾರ ಅಂಕಿ ಅಂಶಗಳನ್ನು ಮುಚ್ಚಿಡುವ ಕೆಲಸ ಮಾಡುತ್ತಿಲ್ಲ. ಅಲ್ಲಿ ಎಲ್ಲಾ ರೀತಿಯಲ್ಲೂ ಒಂದೇ ಅಂಕೀ ಅಂಶ ದೊರೆಯುತ್ತಿದೆ. ಕೇರಳ ಸರಕಾರ  ಸಾರ್ವಜನಿಕ ಆರೋಗ್ಯ ವ್ಯವಸ್ತೆಯನ್ನು 2 ದಶಕಗಳಿಂದ ಸಾಕಷ್ಟು ಅಭಿವೃದ್ಧಿ ಮಾಡಿದೆ. ವಿಶೇಷವಾಗಿ ಎಡರಂಗ ಸರಕಾರ ತೋರುತ್ತಿರುವ ಕಾಳಜಿಯಿಂದಾಗಿ ಅಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ. ಲಸಿಕೆ, ಕೋವಿಡ್‌ ಟೆಸ್ಟ , ಕೋವಿಡ್‌ ನಿಯಂತ್ರಣ ವಿಚಾರದಲ್ಲಿ ಕೇರಳ ಸರಕಾರ ಇತರ ರಾಜ್ಯಗಳಿಗೆ ಮಾದರಿಯಾಗಿದೆ. 3.5 ಕೋಟಿ ಜನಸಂಖ್ಯೆ ಇರುವ ಕೇರಳದಲ್ಲಿ 29 ಲಕ್ಷಕ್ಕೂ ಅಧಿಕ ಮಂದಿ ಸೋಂಕಿತರಾಗಿದ್ದಾರೆ. 13 ಸಾವಿರದಷ್ಟು ಜನ ಇಲ್ಲಿಯವರೆಗೆ ಸಾವನ್ನಪ್ಪಿದ್ದಾರೆ. ಕೇರಳದಲ್ಲಿ ಸೋಂಕು ದೃಢ ಪ್ರಮಾಣವು ಶೇ 10.4ರಷ್ಟಿದೆ. ಆದರೆ, ಅಲ್ಲಿ ಮರಣ ಪ್ರಮಾಣ ದರವು ಶೇ 0.4ರಷ್ಟು ಮಾತ್ರ ಇದೆ.

ಸಿಆರ್‌ಎಸ್‌ ವರದಿ ಬಿಡಗಡೆ ಯಾವಾಗ?  ವಿಡ್‌ ಸಾವುಗಳಿಗೆ ಸಂಬಂಧಿಸಿದ ಮಾಹಿತಿಯೂ ಸಿಆರ್‌ಎಸ್‌ ಬಳಿ ಇರುತ್ತದೆ.  ಸಿಆರ್‌ಎಸ್‌ ಅಂದ್ರೆ  ನಾಗರಿಕ ನೋಂದಣಿ ವ್ಯವಸ್ಥೆ  ಅಂತಾ ಕರೆಯುತ್ತೇವೆ. ದೇಶದಲ್ಲಿ ಜನನ ಮತ್ತು ಮರಣ ನೋಂದಣಿಯನ್ನು ನಾಗರಿಕ ನೋಂದಣಿ ವ್ಯವಸ್ಥೆ (ಸಿಆರ್‌ಎಸ್‌) ಅಡಿ ಮಾಡಲಾಗುತ್ತದೆ. ಪ್ರಧಾನ ನೋಂದಣಿ ಅಧಿಕಾರಿ ಮತ್ತು ಜನಗಣತಿ ಆಯುಕ್ತರ ಕಚೇರಿ ಈ ವ್ಯವಸ್ಥೆಯನ್ನು ನಿರ್ವಹಿಸುತ್ತವೆ. ಜಿಲ್ಲಾಡಳಿತಗಳು ಮರಣ ನೋಂದಣಿಯನ್ನು ದಾಖಲಿಸುತ್ತವೆ. ಅದನ್ನು ಪ್ರತಿ ತಿಂಗಳು ಸಿಆರ್‌ಎಸ್‌ ಕಲೆಹಾಕುತ್ತದೆ. ಒಂದು ವರ್ಷಕ್ಕೆ ಸಂಬಂಧಿಸಿದ ಈ ಸಮಗ್ರ ಮಾಹಿತಿಯನ್ನು, ಆ ವರ್ಷ ಮುಗಿದ ಕೆಲವು ತಿಂಗಳ ನಂತರ ಬಿಡುಗಡೆ ಮಾಡಲಾಗುತ್ತದೆ.

ಕೋವಿಡ್‌ ಸಾವಿನ ಲೆಕ್ಕ ಮತ್ತು ಇತರೆ ಸಾವುಗಳ ಲೆಕ್ಕದಲ್ಲಿ ತಪ್ಪು ಎಲ್ಲಿ ಎನ್ನುವುದನ್ನು ಪತ್ತೆ ಹಚ್ಚಬೇಕಾದರೆ ನಮಗೆ  ಸಿಆರೆಸ್‌ ರಿಪೋರ್ಟ್‌ ಬಿಡುಗಡೆ ಆಗಬೇಕಿದೆ. ಆದರೆ ಸಿಆರೆಸ್‌ 2020 ರ ವರದಿಯನ್ನು ಬಿಡಗಡೆ ಮಾಡ್ತಾ ಇಲ್ಲ. ಪ್ರತಿ ತಿಂಗಳ ಸಾವಿನ ಲೆಕ್ಕವನ್ನು ಹಾಕಿ ಕೋವಿಡ್‌ ಸಾವಿನ ಲೆಕ್ಕದಲ್ಲಿ ತಪ್ಪುತ್ತಿರುವ ವಿಚಾರ ಮಾಧ್ಯಮಗಳಿಂದ ಹೊರ ಬೀಳ್ತಾ ಇದೆ. ಇಲ್ಲಿ ಸಿಆರ್‌ಎಸ್‌ ವರದಿಯನ್ನು ಇನ್ನೂ ಯಾಕೆ ಬಹಿರಂಗ ಗೊಳಿಸಿಲ್ಲ. ಇದರ ಹಿಂದಿರುವ ಕಾರಣ ಏನು ಎಂಬ ಅನುಮಾನದ ಹುತ್ತ ಈಗ ಕೋವಿಡ್‌ ಸಾವಿನ ಸುತ್ತ ಹಬ್ಬಿದೆ.

ವಿಶ್ವಸಂಸ್ಥೆ ಮಾರ್ಗಸೂಚಿಗಳೇನು ?  ಇನ್ನೂ ಇದೇ ವೇಳೆ ಸಾವಿನ ಲೆಕ್ಕದಲ್ಲಿ ಏರುಪೇರಾದ ಹಿನ್ನಲೆಯಲ್ಲಿ ಸಾವುಗಳನ್ನು ಹೇಗೆ ವರ್ಘಿಕರಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿಯನ್ನು ಹೊರಡಿಸಿದೆ ಅದು ಯಾವರೀತಿ ಇದೆ ತಿಳಿಯೋಣ ಬನ್ನಿ.

ಸಾವಿಗೆ ಕಾರಣವನ್ನು ಪತ್ತೆಹಚ್ಚುವ ಹಾಗೂ ಕೊರೊನಾ ವೈರಸ್‌ನಿಂದ ಸಾವು ಸಂಭವಿಸಿದೆ ಎಂದು ಘೋಷಿಸುವ ಕುರಿತಂತೆ ಗೊಂದಲಗಳು ಇರುವುದರಿಂದಲೇ ಕೊರೊನಾ ಸಾವಿನ ಲೆಕ್ಕಾಚಾರ ಏರುಪೇರಾಗಿದೆ. ಕೊರೊನಾ ಸಮಯದಲ್ಲಿ ಸಂಭವಿಸುವ ಸಾವುಗಳನ್ನು ಹೇಗೆ ವರ್ಗೀಕರಿಸಬಹುದು ಎಂಬುದಕ್ಕೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ಐಸಿಎಂಆರ್) ಮಾರ್ಗಸೂಚಿ ಹೊರತಂದಿವೆ. ಎರಡೂ ಸಂಸ್ಥೆಗಳ ಮಾರ್ಗಸೂಚಿಗಳು ಬಹುತೇಕ ಹೋಲಿಕೆಯಾಗುತ್ತವೆ.

* ಕೋವಿಡ್ ಲಕ್ಷಣವಿದ್ದು ಪರೀಕ್ಷಾ ವರದಿಯಲ್ಲಿ ವೈರಾಣು ಇರುವುದು ದೃಢಪಟ್ಟಿದ್ದರೆ ಅದು ಕೋವಿಡ್‌ನಿಂದಾದ ಸಾವು ಎಂದು ಘೋಷಿಸಬಹುದು.

* ಲಕ್ಷಣ ಇರದಿದ್ದರೂ, ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದ್ದರೆ ಅದೂ ಕೋವಿಡ್‌ನಿಂದಾದ ಸಾವು ಎಂದು ಪರಿಗಣಿತವಾಗುತ್ತದೆ.

* ಸತ್ತ ವ್ಯಕ್ತಿಯಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿದ್ದು, ನಿಖರ ಪರೀಕ್ಷಾ ಫಲಿತಾಂಶಗಳು ಲಭ್ಯವಿಲ್ಲದಿದ್ದರೆ, ಅಂತಹ ಸಾವನ್ನು ಸಂಭವನೀಯ ಕೋವಿಡ್ ಸಾವು ಎಂದು ವರ್ಗೀಕರಿಸಬಹುದು ಎಂದು ಐಸಿಎಂಆರ್ ಹೊರಡಿಸಿರುವ ಮಾರ್ಗಸೂಚಿ ಹೇಳುತ್ತದೆ.

* ಕೋವಿಡ್‌ ಇದ್ದು, ನ್ಯುಮೋನಿಯಾ, ಹೃದಯದ ಸಮಸ್ಯೆ, ರಕ್ತ ಹೆಪ್ಪುಗಟ್ಟುವಿಕೆ ಮೊದಲಾದ ಸಮಸ್ಯೆಗಳು ಕಂಡುಬಂದರೆ, ಈ ಸಾವುಗಳಿಗೆ ಕೋವಿಡ್ ಮೂಲ ಕಾರಣ ಎಂದು ದಾಖಲಿಸಲಾಗುತ್ತದೆ ಎಂದು ಐಸಿಎಂಆರ್ ಹೇಳಿದೆ.

* ರೋಗಲಕ್ಷಣಗಳು ಇದ್ದು, ಪರೀಕ್ಷಾ ಫಲಿತಾಂಶಕ್ಕಾಗಿ ಕಾಯುತ್ತಿರುವ ಸಾವುಗಳನ್ನು ಶಂಕಿತ ಸಾವು ಎಂದು ದಾಖಲಿಸಲಾಗುತ್ತದೆ.

* ಪರೀಕ್ಷಾ ಫಲಿತಾಂಶದಲ್ಲಿ ನೆಗೆಟಿವ್ ಎಂದು ಕಂಡುಬಂದರೂ, ರೋಗಲಕ್ಷಣಗಳನ್ನು ಹೊಂದಿರುವವರನ್ನು ‘ಸಾಂಕ್ರಾಮಿಕ ರೋಗಶಾಸ್ತ್ರೀಯವಾಗಿ’ ಕೋವಿಡ್ ಸಾವು ಎಂದು ಉಲ್ಲೇಖಿಸಲಾಗುತ್ತದೆ ಎಂದು ಮಾರ್ಗಸೂಚಿ ತಿಳಿಸಿದೆ.

* ಆಸ್ತಮಾ, ದೀರ್ಘಕಾಲದ ಬ್ರಾಂಕೈಟಿಸ್, ಇಸ್ಕೆಮಿಕ್ ಹೃದ್ರೋಗ, ಕ್ಯಾನ್ಸರ್ ಮತ್ತು ಡಯಾಬಿಟಿಸ್ ಮೆಲ್ಲಿಟಸ್‌ನಂತಹ ಕಾಯಿಲೆಗಳು ರೋಗಿಗಳಿಗೆ ಈ ಮೊದಲೇ ಇರಬಹುದು. ಇವು ಕೋವಿಡ್ ರೋಗಿಯಲ್ಲಿ ಉಸಿರಾಟ ಸಮಸ್ಯೆಯನ್ನು ತಂದೊಡ್ಡಿ, ತೀವ್ರ ಕಾಯಿಲೆ ತರಬಲ್ಲವು. ಆದರೆ ಕೋವಿಡ್ ಇಲ್ಲಿ ನೇರ ಕಾರಣ ಆಗಿರುವುದಿಲ್ಲ. ರೋಗಿಯು ಅನೇಕ ಕಾಯಿಲೆಗಳನ್ನು ಹೊಂದಿದ್ದಾಗ, ಸಾವಿಗೆ ಕಾರಣವಾದವುಗಳನ್ನು ಮಾತ್ರ ದಾಖಲಿಸಬೇಕು ಎಂದು ಮಾರ್ಗಸೂಚಿ ತಿಳಿಸಿದೆ.

ಆಸ್ಪತ್ರೆಗಳು ಮತ್ತು ರಾಜ್ಯ ಸರ್ಕಾರಗಳು ಕೋವಿಡ್ ಸಂಬಂಧಿತ ಸಾವುಗಳನ್ನು “ತಪ್ಪಾಗಿ ವರ್ಗೀಕರಿಸುವುದರಿಂದ” ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಆ  ಪ್ರಯತ್ನಗಳಿಗೆ ಸಹಾಯ ಮಾಡೋದಿಲ್ಲ ಎನ್ನುವುದನ್ನು ಸರಕಾರಗಳು ಸ್ಪಷ್ಟವಾಗಿ ತಿಳಿಯಬೇಕಿದೆ. ಸಾವಿನ ಚಿತ್ರಣದ ಬಗ್ಗೆ ಸ್ಪಷ್ಟ ತಿಳುವಳಿಕೆ ನೀಡಿದರೆ ಮಾತ್ರ ತಜ್ಞರು, ವಿಜ್ಞಾನಿಗಳು ಮೂರನೇ ಅಲೆಯನ್ನು ಹೇಗೆ ತಡೆಯಬಹುದು ಎಂಬ ವಾಸ್ತವಿಕ ಕಾರಣ ತಿಳಿಯಲು ಸಹಾಯವಾಗುತ್ತೆ.

ಸಾವಿನ ಸಂಖ್ಯೆ ಮತ್ತು ಸೋಂಕಿನ ಸಂಖ್ಯೆಗಳನ್ನು ಪುನರ್ರಚಿಸಲು ಡೆತ್ ಆಡಿಟ್ ಮಾಡುವುದು ಉತ್ತಮ” ಅಂತಾ ತಜ್ಷರು ಹೇಳ್ತಾ ಇದ್ದಾರೆ. ಹಾಗಾಗಿ ಕೋವಿಡ್‌ ಸಾವಿನ ವಿಚಾರದಲ್ಲಿ ತಪ್ಪಿರುವ ಲೆಕ್ಕವನ್ನು ಸರಕಾರ ಸರಿಮಾಡಬೇಕಿದೆ. ಮುಂದೆ ಅನಾಹುತಗಳಗದಂತೆ ಎಚ್ಚರಿಕೆ ವಹಿಸಬೇಕಿದೆ.

 

Donate Janashakthi Media

Leave a Reply

Your email address will not be published. Required fields are marked *