ಬೆಂಗಳೂರು : ರಾಜ್ಯದಲ್ಲಿ ಸುಮಾರು 40 ಲಕ್ಷಕ್ಕೂ ಹೆಚ್ಚು ಅನರ್ಹರು ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. 40
ಮುಖ್ಯಮಂತ್ರಿ ಸಿದ್ದರಾಮಯ್ಯ ಸತತ ಎರಡು ದಿನಗಳ ಕಾಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಿದರು. ಸಭೆಯಲ್ಲಿ ಹಲವು ವಿಚಾರಗಳು ಚರ್ಚೆಯಾಗಿವೆ. ಪ್ರಮುಖವಾಗಿ ಬಿಪಿಎಲ್ ಕಾರ್ಡ್‌ಗಳ ಕುರಿತು ಮಹತ್ವದ ಚರ್ಚೆ ನಡೆದಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಸದ್ಯ ಬಿಪಿಎಲ್, ಅಂತ್ಯೋದಯ ಅನ್ನ ಯೋಜನೆ ಸೇರಿ 1.27 ಕೋಟಿ ಕಾರ್ಡ್‌ಗಳಿವೆ. 4.36 ಕೋಟಿಗೂ ಅಧಿಕ ಫಲಾನುಭವಿಗಳಿದ್ದಾರೆ. ಇದರಲ್ಲಿ ಲಕ್ಷಾಂತರ ಕಾರ್ಡ್‌ಗಳನ್ನು ಅರ್ಹತೆಯಿಲ್ಲದವರೂ ಪಡೆದು, ಅನ್ನಭಾಗ್ಯ, ಗೃಹಲಕ್ಷ್ಮಿ ಸೇರಿದಂತೆ ಸರಕಾರದ ನಾನಾ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಎಂದು ಅಂಕಿಅಂಶಗಳ ಮೂಲಕ ಬಯಲಾಗಿದೆ.
ಆರ್ಥಿಕ ಸ್ಥಿತಿವಂತರೂ ಬಿಪಿಎಲ್ ಕಾರ್ಡ್‌ಗಳನ್ನು ಪಡೆದು, ಬಡವರ ಸೌಲಭ್ಯಗಳನ್ನು ಕಸಿಯುತ್ತಿದ್ದಾರೆ. ಹೀಗಾಗಿ, ಇಂತಹವರ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಕಾರ್ಡ್‌ಗಳನ್ನಾಗಿ ಪರಿವರ್ತಿಸಲು ಸರಕಾರ ದೃಢವಾಗಿ ನಿರ್ಧರಿಸಿದೆ. ಈ ಹಿಂದಿನ ಸರಕಾರಗಳು ಕೂಡ ಈ ಬಗ್ಗೆ ಸಾಕಷ್ಟು ಪ್ರಯತ್ನಗಳನ್ನು ಮಾಡಿದರೂ ಪೂರ್ಣಪ್ರಮಾಣದ ಸಫಲತೆ ಕಾಣಲಿಲ್ಲ. ಇದೀಗ ಮತ್ತೆ ಕಟ್ಟುನಿಟ್ಟಾಗಿ ಪಾಲಿಸಲು ನಿರ್ಧರಿಸಲಾಗಿದೆ.
ಕಾರ್ಡ್ ಪಡೆಯಲು ಅರ್ಹತೆಗಳು: ಸದ್ಯದ ಮಾರ್ಗಸೂಚಿಗಳ ಅನ್ವಯ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಪಡೆಯಲು ಹಲವಾರು ನಿಯಮಗಳಿವೆ. ಕಾರ್ಡ್ ಪಡೆಯುವವರ ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷಕ್ಕಿಂತಲೂ ಕಡಿಮೆ ಇರಬೇಕು. ಬಿಳಿ ಬಣ್ಣದ ನಂಬರ್ ಪ್ಲೇಟ್ ಹೊಂದಿರುವ ನಾಲ್ಕು ಚಕ್ರದ ವಾಹನವನ್ನು ಹೊಂದಿರುವಂತಿಲ್ಲ. ಆದಾಯ ತೆರಿಗೆ ರಿಟರ್ನ್ ಪಾವತಿ ಮಾಡುವವರು ಬಿಪಿಎಲ್ ಕಾರ್ಡ್ ಪಡೆಯುವಂತಿಲ್ಲ.
ಹಳ್ಳಿಯಲ್ಲಿ 3 ಹೆಕ್ಟೇರ್ ಒಣಭೂಮಿ/ ತತ್ಸಮಾನ ನೀರಾವರಿ ಭೂಮಿ ಹೊಂದಿರುವವರು. ನಗರ ಪ್ರದೇಶದಲ್ಲಿ 1000 ಚದರ ಅಡಿ ವಿಸ್ತೀರ್ಣದ ಸ್ವಂತ ಮನೆ ಹೊಂದಿರುವವರು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಲ್ಲ.
ಸರ್ಕಾರಿ ಮತ್ತು ಅರೆ ಸರ್ಕಾರಿ ಉದ್ಯೋಗದಲ್ಲಿರುವವರು ಬಿಪಿಎಲ್ ಕಾರ್ಡ್ ಪಡೆಯುವಂತಿಲ್ಲ. ಆದರೆ ಈಗ ಒಂದು ಮನೆಯಲ್ಲಿ ಮೂರು, ನಾಲ್ಕು ಬಿಪಿಎಲ್ ಕಾರ್ಡ್‌ಗಳಿವೆ. ಅವುಗಳನ್ನು ಪತ್ತೆ ಹಚ್ಚಿ, ಅನರ್ಹ ಕಾರ್ಡ್‌ಗಳನ್ನು ಎಪಿಲ್ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬಿಪಿಎಲ್ ಕಾರ್ಡ್‌ಗೆ ಬೇಡಿಕೆ?
ರಾಜ್ಯದಲ್ಲಿಅತಿ ಹೆಚ್ಚು ಬಿಪಿಎಲ್ ಕಾರ್ಡ್‌ಗಳು ವಿತರಣೆಯಾಗಿವೆ ಎಂದರೆ ಅದಕ್ಕೆ ‘ಅನ್ನಭಾಗ್ಯ’ ಮಾತ್ರ ಕಾರಣವಲ್ಲ. ಗೃಹಲಕ್ಷ್ಮಿಯೂ ಅಲ್ಲ. ಬದಲಿಗೆ ದುಬಾರಿ ವೆಚ್ಚದ ಆರೋಗ್ಯ ಸೇವೆ, ಕೃಷಿ ಉದ್ದೇಶಿತ ಯೋಜನೆಗಳು, ವಸತಿ ಯೋಜನೆಗಳಂತಹ ನಾನಾ ಸರಕಾರಿ ಸೌಲಭ್ಯಗಳ ಬಳಕೆಗಾಗಿ ಬಿಪಿಎಲ್ ಕಾರ್ಡ್‌ಗಳು ವ್ಯಾಪಕವಾಗಿ ವಿತರಣೆಯಾಗಿವೆ. ಬಿಪಿಎಲ್ ಕಾರ್ಡ್ ಇದ್ದರೆ ಮಾರಣಾಂತಿಕ ಕಾಯಿಲೆಗಳಾದ ಕ್ಯಾನ್ಸರ್, ಕಿಡ್ನಿ ವೈಫಲ್ಯ ಸೇರಿದಂತೆ ದುಬಾರಿ ವೆಚ್ಚದ ಕಾಯಿಲೆಗಳಿಗೆ ಕೆಲವು ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸಿಕ್ಕರೆ, ಮತ್ತೆ ಕೆಲವೆಡೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ಸಿಗುತ್ತದೆ. ಇದು ಬಡವರಿಗೆ ಮಾತ್ರವಲ್ಲ, ಮಧ್ಯಮ ವರ್ಗದವರಿಗೂ ವರದಾನವಾಗಿದೆ. ಹೀಗಾಗಿ, ಸುಳ್ಳು ದಾಖಲೆ, ಸುಳ್ಳು ಆದಾಯ ಪತ್ರ ಸಲ್ಲಿಸಿ ಸಾಕಷ್ಟು ಮಂದಿ ಬಿಪಿಎಲ್ ಕಾರ್ಡ್‌ಗಳನ್ನು ಪಡೆದಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ.