ಮುಂಬೈ: ಮಹಾ ವಿಕಾಸ್ ಅಘಾಡಿ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ, ಪಕ್ಷದ ನಾಯಕ ಉದ್ಧವ್ ಠಾಕ್ರೆ ವಿರುದ್ಧ ಶಿವಸೇನೆ ಶಾಸಕರು ಬಂಡಾಯವೆದ್ದು, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರದಲ್ಲಿಂದು 18 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಏಕನಾಥ್ ಶಿಂಧೆ ಬಣ ಮತ್ತು ಬಿಜೆಪಿ ಪಾಳಯದ ತಲಾ ಒಂಬತ್ತು ಸಚಿವರಿಗೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಪ್ರಮಾಣ ವಚನ ಬೋಧಿಸಿದರು. ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿರೋಧ ಪಕ್ಷದ ನಾಯಕ ಅಜಿತ್ ಪವಾರ್ ಕೂಡ ಉಪಸ್ಥಿತರಿದ್ದರು.
ಮಹಾರಾಷ್ಟ್ರ ಸರ್ಕಾರದಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅಧಿಕಾರದ ಗದ್ದುಗೆ ಹಿಡಿದಿರುವ ಶಿವಸೇನೆಯ ಬಂಡಾಯ ಶಾಸಕರು ಮತ್ತು ಬಿಜೆಪಿ ಸೇರಿ ರಚಿಸಿರುವ ಮೈತ್ರಿ ಸರ್ಕಾರಕ್ಕೆ ಸರ್ಕಾರ ರಚನೆ ಮಾಡಿ 40 ದಿನಗಳ ನಂತರ ಸಚಿವ ಸಂಪುಟ ವಿಸ್ತರಣೆಯಾಗಿದೆ.
ಕಳೆದ ಜೂನ್ 30ರಂದು ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಹಾಗೂ ಉಪಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಪ್ರಮಾಣವಚನ ಸ್ವೀಕರಿಸಿದ್ದರು. ಇದೀಗ ನೂತನ ಸರ್ಕಾರ ಅಸ್ಥಿತ್ವಕ್ಕೆ ಬಂದ ಬಳಿಕ ಇಂದು(ಆಗಸ್ಟ್ 09) ಸಚಿವ ಸಂಪುಟ ವಿಸ್ತರಣೆ ಮಾಡಲಾಗಿದೆ. ಶಿವಸೇನೆ ಹಾಗೂ ಬಿಜೆಪಿ ಸರ್ಕಾರದಲ್ಲಿ 50:50ರಷ್ಟು ಸೂತ್ರದಂತೆ ಸಂಪುಟ ವಿಸ್ತರಣೆ ಮಾಡಲಾಗಿದ್ದು, 18 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಪೈಕಿ ಶಿವಸೇನೆಯ 9 ಹಾಗೂ ಬಿಜೆಪಿಯ 9 ಶಾಸಕರು ಸಂಪುಟ ಸೇರಿದರು.
ಬಿಜೆಪಿಯಿಂದ ಪ್ರಮಾಣ ವಚನ
ಚಂದ್ರಕಾಂತ ಪಾಟೀಲ, ಸುಧೀರ್ ಮುಂಗಂತಿವಾರ್, ಗಿರೀಶ್ ಮಹಾಜನ್, ಸುರೇಶ ಖಾಡೆ, ರಾಧಾಕೃಷ್ಣ ವಿಖೆ ಪಾಟೀಲ್, ರವೀಂದ್ರ ಚವ್ಹಾಣ, ಮಂಗಲ್ ಲೋಧಾ, ವಿಜಯ್ ಕುಮಾರ್ ಗವಿತ್, ಅತುಲ್ ಸೇವ್
ಏಕನಾಥ್ ಶಿಂಧೆ ಬಣದಿಂದ ಶಪಥ
ದಾದಾ ಭೂಸೆ, ಶಂಭುರಾಜ್ ದೇಸಾಯಿ, ಸಂದೀಪನ್ ಬುಮ್ರೆ, ಉದಯ್ ಸಮಂತ್, ತಾನಾಜಿ ಸಾವಂತ್, ಅಬ್ದುಲ್ ಸತ್ತಾರ್, ದೀಪಕ್ ಕೇಸರಕರ್, ಗುಲಾಬರಾವ್ ಪಾಟೀಲ್, ಸಂಜಯ್ ರಾಥೋಡ್
ಸಂಪುಟ ವಿಸ್ತರಣೆಗೂ ಮುನ್ನ ಸಚಿವಾಕಾಂಕ್ಷಿಗಳಲ್ಲಿ ಭುಗಿಲೆದ್ದ ಅಸಮಾಧಾನವನ್ನು ತಣಿಸಲು ಏಕನಾಥ್ ಶಿಂಧೆ ಯತ್ನಿಸಿದ್ದಾರೆ. ದಕ್ಷಿಣ ಮುಂಬೈನ ಸಹ್ಯಾದ್ರಿ ಅತಿಥಿ ಗೃಹದಲ್ಲಿ ಶಿವಸೇನೆ ಶಾಸಕರನ್ನು ಭೇಟಿದ ಅವರು, ಎರಡು-ಮೂರು ವಾರಗಳಲ್ಲಿ ಎರಡನೇ ಸುತ್ತಿನ ವಿಸ್ತರಣೆ ನಡೆಯಲಿದೆ. ಆಗ ಮತ್ತಷ್ಟು ಶಾಸಕರಿಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.