4 ಸಾವಿರ ಗ್ರಾಮ ಪಂಚಾಯಿತಿಗಳಲ್ಲಿ “ಕೂಸಿನ ಮನೆ” ಸ್ಥಾಪನೆ – ಅಂಗನವಾಡಿ ಸಂಘಟನೆಗಳ ವಿರೋಧ

ಕೂಸಿನ ಮನೆಯಿಂದ ಅಂಗನವಾಡಿಗಳ ಮೇಲೆ ದೊಡ್ಡ ಪರಿಣಾಮ ಬೀರಲಿದೆ – ಎಚ್‌.ಎಸ್‌. ಸುನಂದ ಆರೋಪ

ಬೆಂಗಳೂರು: ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಗಾಗಿ ರಾಜ್ಯ ಸರ್ಕಾರ ತನ್ನ ಬಜೆಟ್‌ನಲ್ಲಿ ಕೂಸಿನ ಮನೆ ಎಂಬ ಹೆಸರಿನ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿಯಲ್ಲಿ ಸುಮಾರು 4000 ಗ್ರಾಮ ಪಂಚಾಯಿತಿಗಳಲ್ಲಿ ಶಿಶುಪಾಲನಾ ಕೇಂದ್ರ ಸ್ಥಾಪನೆಗೆ ಮುಂದಾಗಲಿದೆ ಎಂದು ಈಗಾಗಲೇ ಸಿಎಂ ಸಿದ್ದರಾಮಯ್ಯ ಬಜೆಟ್‌ ನಲ್ಲಿ ಘೋಷಣೆ ಮಾಡಿದ್ದಾರೆ. ಅಂಗನವಾಡಿ

ಜೊತೆಗೆ ನೈರ್ಮಲ್ಯ ಮುಕ್ತ ಪರಿಸರ ನಿರ್ಮಿಸಲು ಸುಮಾರು 400 ಸಮುದಾಯ ಶೌಚಾಲಯಗಳ ನಿರ್ಮಾಣಕ್ಕೂ ಬಜೆಟ್‌ನಲ್ಲಿ ಅನುದಾನ ನೀಡಲಾಗಿದೆ. ತ್ಯಾಜ್ಯ ವಿಲೇವಾರಿಗೂ ಕೂಡ ಒತ್ತು ನೀಡಲಾಗಿದೆ. ಅಲ್ಲದೆ ಗ್ರಾಮ ಪಂಚಾಯಿತಿಗಳಲ್ಲಿ ಗ್ರಂಥಾಲಯಗಳನ್ನು ಮೇಲ್ದರ್ಜೆಗೇರಿಸುವ ಮೂಲಕ ಡಿಜಿಟಲ್ ಕಲಿಕಾ ಸಾಮಗ್ರಿಗಳನ್ನು ಒದಗಿಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ:ಗರ್ಭಿಣಿ-ಬಾಣಂತಿಯರಿಗೆ ನರೇಗಾ ಕೆಲಸದ ಪ್ರಮಾಣದಲ್ಲಿ ಶೇ 50 ರಿಯಾಯಿತಿ

ಗ್ರಾಮೀಣ ಮಹಿಳೆಯರ ಮಕ್ಕಳ ಪಾಲನೆ ಕೂಸಿನ ಮನೆ ಸ್ಥಾಪನೆಯ ಉದ್ದೇಶ. ನರೇಗಾ ಅಡಿ ಕೆಲಸ ನಿರ್ವಹಿಸುತ್ತಿರುವ ಮಹಿಳಾ ಕೂಲಿ ಕಾರ್ಮಿಕರ ಮತ್ತು ಗ್ರಾಮೀಣ ಭಾಗದಲ್ಲಿ ಇತರೆ ಕೆಲಸಗಳಲ್ಲಿ ತೊಡಗಿರುವ ತಾಯಂದಿರ 6 ತಿಂಗಳಿನಿಂದ 3 ವರ್ಷದ ಶಿಶುಗಳನ್ನು ವ್ಯವಸ್ಥಿತವಾಗಿ ಪೋಷಣೆ ಮಾಡುವ ಉದ್ದೇಶದಿಂದ ಕೂಸಿನ ಮನೆ ಯೋಜನೆ ಜಾರಿಗೆ ತರಲಾಗಿದೆ.

ಕರ್ನಾಟಕ ಬಜೆಟ್‌ 2023ರಲ್ಲಿ ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಹಾಗೂ ಆರು ವರ್ಷದ ಒಳಗಿನ ಮಕ್ಕಳ ಆರೋಗ್ಯ, ಪೌಷ್ಟಿಕತೆ ಮತ್ತು ಸುರಕ್ಷತೆಗಾಗಿ ‘ಕೂಸಿನ ಮನೆ’ ಎಂಬ ಹೆಸರಿನಲ್ಲಿ 4,000 ಗ್ರಾಮ ಪಂಚಾಯಿತಿಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ನರೇಗಾ ಯೋಜನೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಪ್ರಾರಂಭಿಸಲಾಗುತ್ತದೆ. ಅಂಗನವಾಡಿ

ಶಿಶುಪಾಲನಾ ಕೇಂದ್ರಗಳನ್ನು ತೆರೆಯುವುದು ಬೇಡ:

ಈ ಯೋಜನೆ ಕುರಿತು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್‌.ಎಸ್‌ ಸುನಂದಾ ಅವರು ಜನಶಕ್ತಿ ಮೀಡಿಯಾಗೆ ಪ್ರತಿಕ್ರಿಯಿಸಿದ್ದು,  ಶಿಶುಪಾಲನಾ ಕೇಂದ್ರದಿಂದ ಅಂಗನವಾಡಿಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ ಅಂಗನವಾಡಿ ವ್ಯವಸ್ಥೆಗೆ ಪರ್ಯಾಯವಾಗಿ ಶಿಶುಪಾಲನಾ ಕೇಂದ್ರಗಳನ್ನು ತೆರೆಯುವುದು ಬೇಡ ಎಂದು ಈಗಾಗಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ- ಬೆಂಗಳೂರು, ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಲಾಗಿದೆ ಎಂದರು.

ಶಿಶು ಅಭಿವೃದ್ಧಿ ಯೋಜನೆಯಡಿ ಅಂಗನವಾಡಿ ಕೇಂದ್ರಗಳು ನಡೆಯುತ್ತಿವೆ. ಇವುಗಳಂತೆಯೇ ಕಾರ್ಯನಿರ್ವಹಿಸುವ ಶಿಶುಪಾಲನಾ ಕೇಂದ್ರಗಳನ್ನು ತೆರೆಯುವುದರಿಂದ ಉಪಯೋಗವಾಗುವುದಿಲ್ಲ ಎಂದು ಹೇಳಿದರು.

ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುವ ಅವಧಿಯಲ್ಲೇ ಶಿಶುಪಾಲನಾ ಕೇಂದ್ರಗಳು ತೆರೆದಿರುತ್ತವೆ. ಇದರಿಂದ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು ಕಡಿಮೆಯಾಗಿ, ಶಿಶುಪಾಲನಾ ಕೇಂದ್ರಕ್ಕೆ ಹೋಗುತ್ತಾರೆ. ಪೋಷಕರ ಅನುಕೂಲಕ್ಕೆ ತಕ್ಕಂತೆ ಎರಡೂ ಕೇಂದ್ರಗಳಿಗೂ ಮಕ್ಕಳು ಹೋಗುತ್ತಾರೆ. ಅಂಗನವಾಡಿಗೆ ಪರ್ಯಾಯವಾಗಿ ಬೇರೆ ಇಲಾಖೆಗಳು ಶಿಶುಪಾಲನಾ ಕೇಂದ್ರಗಳನ್ನು ತೆರೆದರೆ ಅನುದಾನ ವ್ಯರ್ಥವಾಗುತ್ತದೆ. ಅದರ ಬದಲು, ಅಂಗನವಾಡಿಗಳ ಬಲವರ್ಧನೆಗೆ ಅನುದಾನ ವಿನಿಯೋಗವಾಗುವಂತೆ ನೋಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೇವೆ ಎಂದು ಸುನಂದ  ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *