ಕೋವಿಡ್‌ನ ಎರಡನೆ ಅಲೆಯಿಂದಾಗಿ ಸೋಂಕಿತರ ಪ್ರಮಾಣ ಮತ್ತು ಸಾವಿನ ಪ್ರಮಾಣ ಹೆಚ್ಚಾಗುತ್ತಲೆ ಇದೆ. ಇದನ್ನು ನಿಯಂತ್ರಣ ಮಾಡಲಕ್ಕೆ ಅನೇಕ ರಾಜ್ಯಗಳು ಲಾಕ್ಡೌನ್ ಘೋಷಿಸಿವೆ. ಲಾಕ್ಡೌನ್ ನಿಂದ ಜನರು ಸಂಕಷ್ಟಗಳನ್ನು ಅನುಭವಿಸಬಾರದು ಎಂದು ವಿವಿಧ ರಾಜ್ಯಗಳು ಪರಿಹಾರವನ್ನು ನೀಡುತ್ತಿವೆ. ಆದರೆ ಕರ್ನಾಟಕ ರಾಜ್ಯ ಸರಕಾರ ಮಾತ್ರ ಪರಿಹಾರದ ವಿಚಾರದಲ್ಲಿ ಬಾಯಿಮುಚ್ಚಿ ಕುಳಿತಿದೆ. ಸರಕಾರದ ಬಳಿ ಹಣವಿಲ್ಲವೆ? ಪ್ರಧಾನಿ ಮೋದಿಯವರ ಆತ್ಮನಿರ್ಭರ್ ಭಾರತ್ ಪ್ಯಾಕೇಜ್ ಹಾಗೂ ಪಿಎಂ ಕೇರ್ಸ್ ಫಂಡ್ ನಲ್ಲೂ ಹಣವಿಲ್ಲವೆ? ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪ್ರಧಾನಿ ಮೋದಿಯವರು ಬಾಯಿಗೆ ಹಾಕಿಕೊಂಡಿರುವ ಬೀಗವನ್ನು ಓಪನ್ ಮಾಡೋದು ಯಾವಾಗ? ಎಂಬ ಪ್ರಶ್ನೆಗಳೆದ್ದಿವೆ.
ಲಕ್‌ಡೌನ್‌ನ ಕಠಿಣ ನಿರ್ಬಂಧಗಳಿಂದಾಗಿ ಸಂಕಷ್ಟಕ್ಕೆ ಸಿಲುಕಿಕೊಂಡವರಿಗೆ ಕೆಲ ರಾಜ್ಯಗಳು ಪರಿಹಾರ ಪ್ಯಾಕೇಜ್ ಘೊಷಿಸಿ, ಅವರ ಕಷ್ಟದಲ್ಲಿ ಭಾಗಿಯಾಗುವುದರ ಜೊತೆಗೆ ಹಸಿವನ್ನು ನೀಗಿಸುವ ಕೆಲಸ ಮಾಡುತ್ತಿವೆ. ಆ ರಾಜ್ಯಗಳು ಯಾವವು ಎನ್ನುವದಕ್ಕೆ ಇಲ್ಲೊಂದು ರಿಪೋರ್ಟ್ ಇದೆ ನೋಡೋಣ ಬನ್ನಿ.
ಕೊರೊನಾ ಎರಡನೇ ಅಲೆಯಿಂದಾಗಿ ಇದೀಗ ಕೇರಳದಲ್ಲಿ ಲಾಕ್‍ಡೌನ್ ಘೋಷಣೆ ಮಾಡಲಾಗಿದೆ. ಈ ವೇಳೆ ಯಾವುದೇ ಒಬ್ಬ ನಾಗರಿಕನಿಗೂ ಕೂಡ ಆಹಾರಕ್ಕೆ ಸಮಸ್ಯೆ ಆಗಬಾರೆಂಬ ನಿಟ್ಟಿನಲ್ಲಿ ಅಲ್ಲಿನ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ರಾಜ್ಯದಲ್ಲಿರುವ ವಲಸೆ ಕಾರ್ಮಿಕರು ಸೇರಿ ಪ್ರತಿಯೊಂದು ಕುಟುಂಬಕ್ಕೂ ಉಚಿತ ಆಹಾರ ಕಿಟ್ ವಿತರಣೆಗೆ ನಿರ್ಧರಿಸಲಾಗಿದೆ. ಸ್ಥಳೀಯ ಆಡಳಿತ ಆಹಾರ ಕಿಟ್‍ಗಳನ್ನು ತಲುಪಿಸುವ ಕಾರ್ಯ ಮಾಡಲಿದೆ ಎಂದು ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಇದಲ್ಲದೆ ಸ್ಥಳೀಯ ಆಡಳಿತ ಯಾರಿಗೆ ಆಹಾರದ ಅವಶ್ಯಕತೆ ಇದೆ ಅಂತವರಿಗೆ ಕಮ್ಯೂನಿಟಿ ಕಿಚನ್ ತೆರೆದು ಆಹಾರ ಕೊಡುವಂತೆ ಸೂಚಿಸಿದ್ದಾರೆ. ಸರ್ಕಾರದಿಂದ ಬರುವ ಆಹಾರ ಕಿಟ್‍ನಲ್ಲಿ ಒಟ್ಟು 10 ಬಗೆಯ ಸಾಮಾಗ್ರಿಗಳಿರಲಿದ್ದು, 50 ಕೆಜಿ ಅಕ್ಕಿ ಸೇರಿದಂತೆ ಗೋದಿ ಹಿಟ್ಟು, ತೊಗರಿ ಬೇಳೆ , ಹೆಸರು ಕಾಳು , ಕಡಲೆ ಕಾಳು, ಸಕ್ಕರೆ , ಚಹ ಪುಡಿ, ಮೆಣಸಿನ ಪುಡಿ , ಅರಶಿನ ಪುಡಿ, ಉಪ್ಪು , ತೆಂಗಿನ ಎಣ್ಣೆ , ಬಟಾಟೆ, ಈರುಳ್ಳಿ ಸೇರಿದಂತೆ ಅನೇಕ ಪೌಷ್ಟಿಕಾಂಶಯುಕ್ತ ಕಿಟ್ ಇದಾಗಿರುತ್ತೆ ಎಂದು ತಿಳಿಸಿದ್ದಾರೆ. ಕೇರಳದಲ್ಲಿ ಈಗಾಗಲೇ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದ್ದು, ಅವರಿಗೂ ಕೂಡ ಆಹಾರ ಕಿಟ್ ವಿತರಣೆ ಮಾಡಲು ಮುಂದಾಗಿರುವುದರಿಂದ ಹಲವರ ಹಸಿವನ್ನು ನೀಗಿಸುವ ಕಾರ್ಯಕ್ಕೆ ಕೇರಳ ಸರ್ಕಾರ ಮುಂದಾಗಿದೆ. ಎರಡು ತಿಂಗಳು ಕಾಲ ನೀರಿನ ಬಿಲ್ ಹಾಗೂ ವಿದ್ಯುತ್ ಬಿಲ್ ಗೆ ವಿನಾಯತಿಯನ್ನು ನೀಡಲಾಗಿದೆ. ಸರ್ಕಾರದ ನಡೆಗೆ ಜನ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಇನ್ನೂ ತಮಿಳು ನಾಡಿನಲ್ಲಿ ಅಧಿಕಾರವನ್ನು ವಹಿಸಿಕೊಂಡ ಎಂಕೆ ಸ್ಟಾಲಿನ್ ಕೋವಿಡ್ ಪರಿಹಾರ ಪ್ಯಾಕೇಜ್ ನ್ನು ಘೋಷಿಸಿದ್ದಾರೆ. ಬಿಪಿಎಲ್ ಕುಟುಂಬಗಳಿಗೆ 4000 ರೂ ಹಣವನ್ನು ಮೂರು ತಿಂಗಳುಕಾಲ ನೀಡಲು ನಿರ್ಧಾರವನ್ನು ಮಾಡಲಾಗಿದೆ. ಹಾಲು, ಅಗತ್ಯ ವಸ್ತುಗಳ ದರವನ್ನು ಇಳಿಸುವುದಾಗಿ ಹೇಳಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾದ ಕೋವಿಡ್ ರೋಗಿಗಳ ಚಿಕಿತ್ಸೆಯ ವೆಚ್ಚವನ್ನು ತಮ್ಮ ಸರ್ಕಾರ ಭರಿಸಲಿದೆ ಎಂದು ಘೋಷಣೆಯನ್ನು ಮಾಡಿದ್ದಾರೆ. ಕೋವಿಡ್ ಸೋಂಕಿತರ ಆರೈಕೆಯಲ್ಲಿ ತೊಡಗಿರುವ ಸರ್ಕಾರಿ ವೈದ್ಯರಿಗೆ ತಿಂಗಳಿಗೆ 10 ಸಾವಿರದಂತೆ 30 ಸಾವಿರ ಹಣವನ್ನು ಪ್ರೋತ್ಸಾಹ ಧನವಾಗಿ ನೀಡುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ನರ್ಸ್ಗಳಿಗೆ ಮೂರು ತಿಂಗಳಿಗೆ 20 ಸಾವಿರ, ಕೋವಿಡ್ ವಾರ್ಡ್ನಲ್ಲಿ ಕರ್ತವ್ಯ ನಿರ್ವಹಿಸುವ ಇತರೆ ಸಿಬ್ಬಂದಿಗಳಿಗೆ ತಲಾ 15 ಸಾವಿರ ನೀಡಲಾಗುವುದು ಎಂದು ತಿಳಿಸಿದ್ದಾರೆ. ಇದೇ ವೇಳೆ ಟ್ರೈನಿ ವೈದ್ಯರು ಮತ್ತು ಪಿ ಜಿ ವಿದ್ಯಾರ್ಥಿಗಳಿಗೂ ಅವರನ್ನು ಪ್ರೋತ್ಸಾಹಿಸಲು 20 ಸಾವಿರ ಹಣವನ್ನು ಘೋಷಣೆ ಮಾಡಿದ್ದಾರೆ.
ಇನ್ನೂ ಹರ್ಯಾಣದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ 5 ಸಾವಿರ ರೂಪಾಯಿ ನೀಡಲು ಹರಿಯಾಣ ಸರ್ಕಾರ ನಿರ್ಧರಿಸಿದೆ ಎಂದು ಆರೋಗ್ಯ ಸಚಿವ ಅನಿಲ್ ವಿಜ್ ತಿಳಿಸಿದ್ದಾರೆ. ನವದೆಹಲಿಯಲ್ಲಿ ಅಟೋ, ಟ್ಯಾಕ್ಸಿ ಚಾಲಕರಿಗೆ 5000 ರೂ ನಗದು ಮತ್ತು ಪ್ರತಿ ಮನೆಗೆ ಉಚಿತ ಆಹಾರದ ಕಿಟ್‌ನ್ನು ಘೋಷಣೆ ಮಾಡಲಾಗಿದೆ. ಆಂದ್ರ ಪ್ರದೇಶದಲ್ಲಿ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಲಾಗಿದೆ. ಎಲ್ಲಾ ಕೋವಿಡ್ ರೋಗಿಗಳ ಶುಲ್ಕವನ್ನು ಭರಿಸುವುದಾಗಿ ಸಿಎಂ ಜಗಮೋಹನ್ ರೆಡ್ಡಿ ತಿಳಿಸಿದ್ದಾರೆ.
ಲಾಕ್ಡೌನ್ ಹಾಗೂ ಕೊರೊನಾ ಸಂಕಷ್ಟದಲ್ಲಿ ಸಲುಕಿಕೊಂಡಿರುವವರ ಬಗ್ಗೆ ಅನೇಕ ರಾಜ್ಯಗಳಲ್ಲಿ ಅವರ ಸಂಕಷ್ಟವನ್ನು ಸ್ವಲ್ಪವಾದರೂ ನಿವಾರಿಸುವ ನಿಟ್ಟಿನಲ್ಲಿ ತೊಡಗಿದ್ದರೆ ರಾಜ್ಯದಲ್ಲಿ ಮಾತ್ರ ಪರಿಯಾರದ ವಿಚಾರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ತಲೆ ಕೆಡಸಿಕೊಳ್ಳುತ್ತಿಲ್ಲ. ಮಾತೆತ್ತಿದರೆ ಆರ್ಥಿಕ ಕಷ್ಟ ಆರ್ಥಕ ಸಮಸ್ಯೆ ಎಂದೆಲ್ಲ ಸಮಜಾಯಿಷಿ ಕೊಡುತ್ತಾ ಕಾಲಹರಣ ಮಾಡುತ್ತಿದ್ದರೆ. ಇನ್ನೂ ಸಚಿವರ ಹೇಳಿಕೆಗಳಂತೂ ಹೇಸಿಗೆ ತರಿಸುತ್ತಿವೆ, ನಾವೇನು ನೋಟ್ ಪ್ರಿಂಟ್ ಮಾಡ್ತೀವಾ ಅಂತಾ ಒಬ್ಬ ಸಚಿವ ಹೇಳಿದರೆ, ಅನ್ನ ಇಲ್ಲಾ ಅಂದ್ರೆ ಬದೋಕೋಕೆ ಆಗಲ್ಲ ಅಂತ ಜನ ಕೇಳಿದ್ರೆ ಸತ್ತೋಗಿ ಅಂತಾ ಮತ್ತೊಬ್ಬ ಸಚಿವ ಹೇಳ್ತಾನೆ. ಇದು ಸರಕಾರದ ಜನಪರ ಕಾಳಜಿ ಹೇಗಿದೆ ಎಂಬುದನ್ನು ತೋರಿಸುತ್ತದೆ. ಸರಕಾರದ ನಡೆಗೆ ಜನ ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ ರಾಜ್ಯದಲ್ಲಿ ಲಾಕ್ಡೌನ್ ಹೇರಿ ಇಂದಿಗೆ 17 ದಿನಗಳು ಕಳೆದಿವೆ. ದಿನನಿತ್ಯ ದುಡಿದು ತಿನ್ನುತ್ತಿದ್ದ ಜನ ಸಂಕಷ್ಟದಲ್ಲಿದ್ದಾರೆ. ಕಟ್ಟಡ ಕಾರ್ಮಿಕರೂ, ದಿನಗೂಲಿ ನೌಕರರು, ಅಟೋ ರೀಕ್ಷಾ ಚಾಲಕರು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಅನೇಕರು ಆವತ್ತಿನ ದುಡಿಮೆಯಲ್ಲೆ ಜೀವನ ಸಾಗಿಸಬೇಕು. ಈಗ 17 ದಿನದಿಂದ ಕೆಲಸ ಇಲ್ಲಾ ಅಂದ್ರೆ ಆ ಕುಟುಂಬದ ಸ್ಥಿತಿಯನ್ನು ಒಂದು ಬಾರಿ ನೆನಪಿಸಿಕೊಳ್ಳಿ. ಇನ್ನೂ ಕೃಷಿ ಕೆಲಸಕ್ಕೆ ತೊಂದರೆ ಕೊಡೋದಿಲ್ಲ ಅಂತಾ ರಾಜ್ಯ ಸರಕಾರ ಹೇಳಿತ್ತು. ಆದರೆ ಉದ್ಯೋಗ ಖಾತ್ರಿಯೋಜನೆಯಲ್ಲಿ ನಡೆಯುತ್ತಿದ್ದ ಕಾಮಗಾರಿಗಳನ್ನು ನಿಲ್ಲಿಸಲಾಗಿದೆ. ಕೂಲಿ ಕಾರ್ಮಿಕರು ಸಿಗದೆ ರೈತರ ಬೆಳೆಗಳು ಹಾಳಾಗುತ್ತಿವೆ. ಅವರಿಗೆ ಆಗುತ್ತಿರುವ ನಷ್ಟದ ಪರಿಹಾರವನ್ನು ಕೋಡುವವರು ಯಾರು ಎಂಬ ಪ್ರಶ್ನೆ ಸಹಜವಾಗಿ ಉದ್ಭವವಾಗುತ್ತದೆ.
ರಾಜ್ಯದಲ್ಲಿ ಘೊಷಣೆ ಮಾಡಿರುವುದು ಲಾಕ್‌ಡೌನ್ ಅಲ್ಲ, ಅಂತಾ ಪದೇ ಪದೇ ಸಿಎಂ ಸಮರ್ತಿಸಿಕೊಳ್ಳುತ್ತಿದ್ದಾರೆ, ಯಾಕೋ ಅವರಿಗೆ ಲಾಕ್‌ಡೌನ್ ಅಂತಾ ಕರಿಯೋಕೆ ಇಷ್ಟಾ ಇಲ್ಲ, ಅನ್ಸುತ್ತೆ. ಇರ್ಲಿ ಅವರ ಪ್ರಕಾರ ಕಠಿಣ ನಿರ್ಬಂಧಗಳನ್ನು ಹೇರಲಾಗಿದೆ ಅಂತಾನೇ ಹೇಳೋಣ, ಕಠಿಣ ನಿರ್ಭಂದಗಳ ಸಂಕಷ್ಟಕ್ಕೆ ಸಿಲುಕಿಕೊಂಡವರಿಗೆ ಪರಿಹಾರ ಪ್ಯಾಕೇಜ್ ಘೊಷಿಸುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ, ಅಂತಾ ಕಡ್ಡಿ ತುಂಡಾಗುವಂತೆ ಹೇಳಿದ್ದೀರಿ, ಕಠಿಣ ನಿಯಮ ಜಾರಿ ಮಾಡಿರುವುದು ಕರೊನಾ ಸೋಂಕು ಸಂಪರ್ಕ ಕಡಿತಗೊಳಿಸಲೆಂದು ಮಾಡಲಾಗಿದೆ. ವಿಶೇಷ ಪ್ಯಾಕೇಜ್ ಘೋಷಿಸಲು ಆಗುವುದಿಲ್ಲ ಅಂತಾ ಹೇಳಿದ್ದಾರೆ. ಸರಕಾರದಲ್ಲಿ ದುಡ್ಡಿಲ್ಲ, ಅನ್ನೋದು ಸಿಎಂ ವಾದ, ಆದರೆ ಎಲ್ಲರಿಗೂ ಗೊತ್ತಿರುವಂತೆ ಸರಕಾರಕ್ಕೆ ಬಹಳಷ್ಟು ಜನಗಳು ಮುಂಖ್ಯಮಂತ್ರಿ ಪರಿಹಾರ ನಿಧಿಗೆ ದಾನ ಮಾಡುತ್ತಿದ್ದಾರೆ. ಸರಕಾರಿ ನೌಕರರ ವೇತನ ಕಡಿತ ಮಾಡಲು ನಿರ್ಧಾರ ಮಾಡಲಾಗಿದೆ. ಆದರೂ ದುಡ್ಡಿಲ್ಲ, ದುಡ್ಡಿಲ್ಲ, ಚುನಾವಣೆಗಳನ್ನು ನಡಿಸುವುದಕ್ಕೆ ಮಾತ್ರ ಸರಕಾರದ ಬಳಿ ದುಡ್ಡು ಇದ್ದಹಾಗೆ ಕಾಣಿಸುತ್ತದೆ.
ಸರಕಾರ ದುಡ್ಡು ಇಲ್ಲ ದುಡ್ಡು ಇಲ್ಲ ಅಂತಾ ಹೇಳ್ತಾ ಇದೆ ಹಾಗಂತ ಶ್ವೇತ ಪತ್ರವನ್ನು ಹೊರಡಿಸಬೇಕು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ. ಕಳೆದ ವರ್ಷ ಕೋವಿಡ್ ನಿರ್ವಹಣೆಗಾಗಿ 69 ಸಾವಿರ ಕೋಟಿ ಸಾಲಮಾಡಿದ್ದಿರಿ.ಕೋವಿಡ್ ನಿರ್ವಹಣೆಗೆ 5400 ಕೋಟಿ ಮಾತ್ರ ಖರ್ಚಾಗಿದೆ. ಉಳಿದ ಸಾಲದ ಹಣ ಎಲ್ಲಿಗೆ ಹೋಯ್ತು? ಎಂದು ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ. ಸಂಕಷ್ಟದಲ್ಲಿರುವ ಜನರಿಗೆ ಕೂಡಲೆ ಆರ್ಥಿಕ ಪರಿಹಾರವನ್ನು ಘೋಷಣೆ ಮಾಡಿ ಎಂದು ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ. ಸಂಕಷ್ಟದಲ್ಲಿರುವ ಕಟ್ಟಡ ಕಾರ್ಮಿಕರ ಆರ್ಥಿಕ ಸಹಾವನ್ನು ಮಾಡಬೇಕು. ಕೋವಿಡ್ ನಿಂದಾಗಿ ಮೃತಪಟ್ಟ ಕಟ್ಟಡ ಕಾರ್ಮಿಕರಿಗೆ 10 ಲಕ್ಷ ರೂ ಗಳ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಮೇ 15 ರಂದು ಪ್ರತಿಭಟನೆ ನಡೆಸುತ್ತಿದೆ.
ಇನ್ನೂ ಪ್ರಧಾನಿಯರು ಘೋಷಿಸಿದ, ಲೆಕ್ಕವೆ ಇಡಲಾಗದಷ್ಟು ಆತ್ಮನಿರ್ಭರ್ ಪ್ಯಾಕೇಜ್ ನೆನೆಗುದಿಗೆ ಬಿದ್ದಿದೆ. ಪಿಎಂ ಕೇರ್ಸ್ ಗೆ ಬಂದ ದುಡ್ಡು ಪಂಚರಾಜ್ಯ ಚುನಾವಣೆಯಲ್ಲಿ ಖರ್ಚಾದಂತೆ ಕಾಣುತ್ತದೆ. ಯಾಕೆ ಅಂದ್ರೆ ಅವರು ಕೂಡ ದುಡ್ಡಿಲ್ಲ ದುಡ್ಡಿಲ್ಲ ಅಂತಿದ್ದಾರೆ. ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಉಚಿತ ಲಸಿಕೆ ಎಂದು ಶಂಖ ಊದಿದ ಪ್ರಧಾನಿ ಮತ್ತು ಸಚಿವರ ತಂಡ ಈಗ ಸೋಲುಂಡ ನಂತರ ಕೊಟ್ಟಿದ್ದ ಘೋಷಣೆಗಳನ್ನೆ ಮರೆತಿದ್ದಾರೆ. ಲಸಿಕೆ, ಆಕ್ಸಿಜನ್ ಹಾಹಾಕಾರ ಎಲ್ಲಡೆ ಶುರುವಾಗಿದ್ದರೂ ಚುನಾವಣೆಯಲ್ಲಿ ದಣಿದಿರುವ ಪ್ರಧಾಣಿಯವರ ದೇಹ ತಣ್ಣನೆಯ ಗಾಳಿಯಲ್ಲಿ ನಿದ್ರೆ ಮಾಡುತ್ತಿದೆ. ಪ್ರಧಾನಿ ಮೋದಿ ಮತ್ತವರ ತಂಡ ಬಾಯಿಗೆ ಹಾಕೊಕೊಂಡಿರುವ ಬೀಗವನ್ನು ತೆರೆದು ಮಾತನಾಡಬೇಕಿದೆ. ಜನರ ಜೀವವನ್ನು ಉಳಿಸಬೇಕಿದೆ.
ಹಾಗಾದ್ರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ತುರ್ತಾಗಿ ಮಾಡಬೇಕಿರುವ ಕೆಲಸಗಳೇನು ಎನ್ನುವನ್ನು ನೋಡ್ತಾ ಹೋಗೋಣ.
- ತಕ್ಷಣವೇ ಕೇಂದ್ರ ಮತ್ತು ರಾಜ್ಯ ಸರಕಾರ ಮಾಡಬೇಕಿರುವ ಮೊದಲ ಕೆಲಸ ವೇನು ಅಂದ್ರೆ, ಉಚಿತ, ಸಾಮೂಹಿಕ, ಸಾರ್ವತ್ರಿಕ ಲಸಿಕೆ ಅಭಿಯಾನವನ್ನು ದೇಶಾದ್ಯಂತ ಆರಂಭಿಸಬೇಕು. ಆಗ ಮಾತ್ರ ಸೋಂಕನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.
- ದೇಶದೊಳಗೆ ಲಸಿಕೆ ಕೊರತೆ ಎದ್ದು ಕಾಣುತ್ತಿದ್ದು , ಲಸಿಕೆ ಉತ್ಪಾದನೆಯನ್ನು ವಿಸ್ತರಿಸಲು ಕಡ್ಡಾಯ ಲೈಸೆನ್ಸಿಂಗ್ ಅಧಿಕಾರವನ್ನು ಪ್ರಯೋಗಿಸಬೇಕು.
- ಬಜೆಟಿನಲ್ಲಿ ಲಸಿಕೆಗೆಂದು ಎತ್ತಿಟ್ಟಿರುವ 35,000ಕೋಟಿ ರೂಪಾಯಿಯನ್ನು ಖರ್ಚು ಮಾಡಬೇಕು. ಜನ ಆಕ್ಸಿಜನ್, ಲಸಿಕೆ ಇಲ್ಲದೆ ಸಾಯುತ್ತಿದ್ದಾರೆ. ಮೋದಿಯವರು ಈಗಲಾದರೂ ನಿಜವಾದ ಆತ್ಮನಿರ್ಬರ ಕೆಲಸ ಮಾಡಬೇಕು ಅಂದರೆ ಹಣ ಬಿಡುಗಡೆ ಮಾಡಿ ಜನರ ಪ್ರಾಣವನ್ನು ಉಳಿಸಬೇಕು.
- ಸೆಂಟ್ರಲ್ ವಿಸ್ತಾ ನಿರ್ಮಾಣವನ್ನು ನಿಲ್ಲಿಸಬೇಕು. ಅದಕ್ಕೆ ಇಟ್ಟಿರುವ ಹಣವನ್ನು ಆಕ್ಸಿಜನ್ ಮತ್ತು ಲಸಿಕೆಗಳನ್ನು ಪಡೆಯಲು ಬಳಸಬೇಕು. ಸೆಂಟ್ರೆಲ್ ವಿಸ್ತ್ರಾ ಅಂದ್ರೆ ಪ್ರಧಾನಮಂತ್ರಿಯವರ ನೂತನ ಸರಕಾರಿ ನಿವಾಸ. 20 ಸಾವಿರ ಕೋಟಿ ರೂ ಖರ್ಚು ಮಾಡಿ ಅದನ್ನು ಕಟ್ಟಿಸಲಾಗುತ್ತಿದೆ. ಇದರಲ್ಲಿ 32 ಕೋಟಿ ಡೋಸ್ ಲಸಿಕೆಯನ್ನು ಪಡೆಯಬಹುದು. 22 ಕೋಟಿ ರೆಮ್ಡೆಸೀವಿರ್ ವಯಲ್ಸ್ ಖರೀದಿಸಬಹುದು, 3 ಕೋಟಿ ಲೀಟರ್ ಸಾಮರ್ಥ್ಯದ ಆಕ್ಸಿಜನ್ ಖರೀದಿಸಬಹುದು. 12 ಸಾವಿರ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ತುರ್ತಾಗಿ ನಿರ್ಮಾಣ ಮಾಡಬಹುದು. ಹಾಗಾಗಿ ಸಂಟ್ರೆಲ್ಲ ವಿಸ್ತಾ ನಿರ್ಮಾಣಕ್ಕೆ ಬ್ರೇಕ್ ಹಾಕಬೇಕಿದೆ.
- ಲೆಕ್ಕ ಪರೀಕ್ಷಣೆಗಳಿಗೆ ಒಳಗಾಗದ ಖಾಸಗಿ ಟ್ರಸ್ಟ್ ನಿಧಿ ಪಿಎಂಕೇರ್ಸ್ ನಲ್ಲಿರುವ ಎಲ್ಲ ಹಣವನ್ನು, ಹೆಚ್ಚು ಲಸಿಕೆಗಳನ್ನು, ಆಕ್ಸಿಜನನ್ನು ಮತ್ತು ಅಗತ್ಯ ವೈದ್ಯಕೀಯ ಸಾಧನಗಳನ್ನು ಖರೀದಿಸಲು ಬಳಸಬೇಕು. ಎಲ್ಲ ಉದ್ಯೋಗಹೀನರಿಗೆ ಕನಿಷ್ಟ ತಿಂಗಳಿಗೆ ರೂ.6000 ಕೊಡಬೇಕು.
- ಅಗತ್ಯವಿರುವ ಎಲ್ಲರಿಗೂ ಆಹಾರಧಾನ್ಯಗಳ ಉಚಿತ ವಿತರಣೆಗೆ ಮುಂದಾಗಬೇಕು (ಕೇಂದ್ರೀಯ ಗೋದಾಮುಗಳಲ್ಲಿ ಒಂದು ಕೋಟಿ ಟನ್ ಗಳಿಗಿಂತಲೂ ಹೆಚ್ಚು ಆಹಾರಧಾನ್ಯಗಳು ಕೊಳೆಯುತ್ತಿವೆ)
- ಕೃಷಿ ಕಾಯ್ದೆಗಳನ್ನು ರದ್ದುಮಾಡಬೆಕು, ಈ ಮೂಲಕ ನಮ್ಮ ಅನ್ನದಾತರುಮಹಾಸೋಂಕಿಗೆ ಬಲಿಯಾಗದಂತೆ ರಕ್ಷಿಸಬೇಕು ಭಾರತೀಯ ಜನತೆಗೆ ಉಣಬಡಿಸಲು ಆಹಾರ ಉತ್ಪಾದಿಸುವುದನ್ನು ಮುಂದುವರೆಸಲು ಸಾಧ್ಯವಾಗುವಂತೆ ಮಾಡಬೇಕು.
ಈ ಅಂಶಗಳು ಸಧ್ಯಕ್ಕೆ ಸರಕಾರ ಆಯ್ಕೆ ಮಾಡಬೇಕಿರುವ ಮತ್ತು ಕಡ್ಡಾಯವಾಗಿ ಜಾರಿ ಮಾಡಬೇಕಾಗಿರುವ ವಿಷಯಗಳಾಗಿವೆ. ಆ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ದೃಢವಾದ ಹೆಜ್ಜೆಯನ್ನಿಟ್ಟು ಜನರನ್ನು ಉಳಿಸುವ ಕೆಲಸಕ್ಕೆ ಮುಂದಾಗಬೇಕಿದೆ.