ರೆಮ್ಡೆಸಿವಿರ್ ಇಂಜಕ್ಷನ್ ಗಳು ಕಣ್ಣಿಗೆ ಮಾತ್ರ ಕಾಣ್ತಿಲ್ಲ. ಪೇಷಂಟ್ ಗಳು ಜಾಸ್ತಿ ಇದ್ದಾರ? ಅಥವಾ ಅಧಿಕಾರಿಗಳು ಮುಚ್ಚಿಡ್ತಿದ್ದಾರ? ಅಥವಾ ಅಂಕಿ ಅಂಶಗಳೇ ಸುಳ್ಳು ಹೇಳ್ತಿವೆಯಾ?
- ಗುರುರಾಜ ದೇಸಾಯಿ
ರಾಜ್ಯದಲ್ಲಿ ರೆಮ್ಡೆಸಿವಿರ್ ಚುಚ್ಚುಮದ್ದು ಕೊರತೆಯಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಹೇಳುತ್ತಿದ್ದರೂ, ಕೊರತೆ ಇದೆ ಎಂದು ಹೇಳುವ ಸಾಕಷ್ಟು ಘಟನೆಗಳು ಪ್ರತೀನಿತ್ಯ ಬೆಳಕಿಗೆ ಬರುತ್ತಲೇ ಇವೆ. ರೆಮ್ಡೆಸಿವಿರ್ ಚುಚ್ಚುಮದ್ದು ತಯಾರಿಕೆ ಕಂಪನಿಗಳು ಮುಕ್ತಮಾರುಕಟ್ಟೆಯಲ್ಲಿ ಹೆಚ್ಚಿನ ಸರಬರಾಜು ಮಾಡಿದರೂ ಇಂಜಕ್ಷನ್ ಗಳು ಕಣ್ಣಿಗೆ ಮಾತ್ರ ಕಾಣ್ತಿಲ್ಲ. ಪೇಷಂಟ್ ಗಳು ಜಾಸ್ತಿ ಇದ್ದಾರ? ಅಥವಾ ಅಧಿಕಾರಿಗಳು ಮುಚ್ಚಿಡ್ತಿದ್ದಾರಾ? ಅಥವಾ ಅಂಕಿ ಅಂಶಗಳೇ ಸುಳ್ಳು ಹೇಳ್ತಿವೆಯಾ? ಎಂಬ ಚರ್ಚೆ ಈಗ ಆರಂಭವಾಗಿದೆ.
ರೆಮ್‌ಡೆಸಿವಿರ್ ಮರುಹಂಚಿಕೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಸದಾನಂದ ಗೌಡ ಹೇಳಿಕೆಯನ್ನು ನೀಡಿದ್ದು , ‘ವಿವಿಧ ರಾಜ್ಯಗಳ ಬೇಡಿಕೆಗೆ ಅನುಗುಣವಾಗಿ ರೆಮ್‌ಡೆಸಿವಿರ್ ಮರುಹಂಚಿಕೆ ಮಾಡಿದ್ದೇವೆ. ಕರ್ನಾಟಕದ ಪಾಲು 1.22 ಲಕ್ಷ ವೈಯಲ್ಸ್‌ಗೆ ಏರಿಕೆಯಾಗಿದೆ’ ಅಂತಾ ಅವರು ರೆಮ್ಡೆಸಿವಿರ್ ತಯಾರಿಕಾ ಕಂಪನಿ ಮೈಲಾನಿಗೆ ಭೇಟಿ ನೀಡಿದಾಗ ಪ್ರಸ್ಥಾಪವನ್ನು ಮಾಡಿದ್ದಾರೆ.
ರಾಜ್ಯದಲ್ಲಿ ರೆಮ್ಡೆಸಿವಿರ್ ಚುಚ್ಚುಮದ್ದು ಕೊರತೆ ಎದ್ದು ಕಾಣ್ತಾ ಇರೋದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಚಾಮರಾಜನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಘಟನೆಯೊಂದು ನಡೆದಿದೆ. ಜಿಲ್ಲಾ ಆಸ್ಪತ್ರೆಯಲ್ಲಿ 40 ವರ್ಷದ ಸಿದ್ದನಾಯಕ ಎಂಬ ವ್ಯಕ್ತಿ ಕೊರೋನಾ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದು, ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದ್ದು, ರೆಮ್ಡೆಸಿವಿರ್ ಚುಚ್ಚುಮದ್ದು ನೀಡುವ ಅಗತ್ಯವಿದೆ ಎಂದು ಹೇಳಿದ ವೈದ್ಯರು ಇಂಜಕ್ಷನ್ ತರುವಂತೆ ಕುಟುಂಬಸ್ಥರಿಗೆ ಸೂಚಿಸಿದ್ದಾರೆ. ಇಂಜಕ್ಷನ್ ಖರೀದಿ ಮಾಡಲು ಸಾಕಷ್ಟು ಔಷಧಿ ಮಳಿಗೆಗಳಿಗೆ ಓಡಾಡಿದ್ದಾರೆ. ಆದರೆ, ಎಲ್ಲಿಯೂ ಇಂಜಕ್ಷನ್ ದೊರೆತಿಲ್ಲ. ಇನ್ನು ಆರ್ಥಿಕವಾಗಿ ದುರ್ಬಲವಾಗಿರುವ ಸಿದ್ದನಾಯಕ ಅವರ ಕುಟುಂಬ ಕಾಳಸಂತೆಯಲ್ಲಿ ದುಬಾರಿ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿರುವ ರೆಮ್ಡೆಸಿವಿರ್ ಇಂಜಕ್ಷನ್ ಕೊಳ್ಳಲು ಸಾಧ್ಯವಿರಲಿಲ್ಲ. ಪತಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಇಂಜಿಕ್ಷನ್ಗಾಗಿ ಸಾಕಷ್ಟು ಓಡಾಡಿದೆವು. ಎಲ್ಲಿಯೂ ಸಿಗುತ್ತಿಲ್ಲ. ಇದೀಗ ಯಾವುದೇ ಭರವಸೆಗಳನ್ನೂ ಇಟ್ಟುಕೊಳ್ಳಬೇಕು ಎಂಬುದು ಕುಟುಂಬಸ್ಥರ ಪ್ರಶ್ನೆಯಾಗಿದೆ.
ರೆಮ್ಡೆಸಿವಿರ್ ಇಂಜಕ್ಷನ್ ವಿತರಣೆ ಮಾಡದೆ ಡಿಸ್ಟ್ರಿಬ್ಯೂಟರ್ ವಿಳಂಬ ಮಾಡುತ್ತಿದ್ದಾರೆ ಎಂದು ಖಾಸಗಿ ಆಸ್ಪತ್ರೆ ಒಡತಿ ರೂಪಾ ರಾಜೇಶ್ ಆರೋಪಿಸಿದ್ದಾರೆ. ಮೊನ್ನೆ ರಾತ್ರಿ ಡಿಸ್ಟ್ರಿಬ್ಯೂಟರ್ ಗೆ ನಮಗೆಲ್ಲಾ ರೆಮಿಡೆಸ್ವಿರ್ ಇಂಜಕ್ಷನ್ ಗಳನ್ನು ಹಂಚುವಂತೆ ಆರ್ಡರ್ ಕೊಟ್ಟಿದ್ದಾರೆ. ಈ ವ್ಯಕ್ತಿ ತನ್ನದೇ ಆ ಇಂಜಕ್ಷನ್ ಗಳು ಅನ್ನೋ ತರಹ ಆಡ್ತಿದ್ದಾನೆ. ನಿನ್ನೆಯಿಂದ ಫೋನ್ ತೆಗೀತಿಲ್ಲ. ನೂರು ಸಲ ಕಾಲ್ ಮಾಡಿದ ಮೇಲೆ “ಬೇಕಿದ್ರೆ ವೇಟ್ ಮಾಡಿ, ಇಲ್ಲದಿದ್ರೆ ಬಿಡಿ, ನಾನು ಹೀಗೆ” ಅಂತಾ ಹೇಳಿ ಫೋನಿಟ್ಟಿದ್ದಾನೆ ಎಂದು ರೂಪಾ ರಾಜೇಶ್ ಆರೋಪಿಸಿದ್ದಾರೆ.
ನನಗೆ ಮಾತ್ರವಲ್ಲ, ನಮ್ಮ ಏರಿಯಾದ ಎಲ್ಲಾ ಆಸ್ಪತ್ರೆಗಳಿಗೂ ಅವನು ಇಂಜಕ್ಷನ್ ಕಳಿಸಿಲ್ಲ. ಅಷ್ಟೊಂದು ಸ್ಟಾಕ್ ಇಟ್ಟುಕೊಂಡು ಏನು ಮಾಡ್ತಿದ್ದಾನೆ? ಅಂತಾ ಗೊತ್ತಿಲ್ಲ. ಇಂತಹವರಿಗೆ ಕಂಪೆನಿಯವರು ಯಾಕೆ ಕಾಂಟ್ರಾಕ್ಟ್ ಕೊಡಬೇಕು? ಸಮಯಕ್ಕೆ ಸರಿಯಾಗಿ ಸ್ಟಾಕ್ ಕೊಡೋಕೆ ಆಗದಿದ್ದ ಮೇಲೆ, ಸರ್ಕಾರ ಯಾಕೆ ಇಂತಹವರಿಗೆ ಅವಕಾಶ ನೀಡುತ್ತದೆ? ಸ್ಟಾಕ್ ಇಲ್ಲ ಅಂದ್ರೆ ಒಪ್ಪಬಹುದು. ಇದ್ದರೂ ಕೊಡೋಕೇನು ಕಷ್ಟ? ಈತನ ಜೊತೆಗೆ ಅಗ್ರಿಮೆಂಟ್ ಇದೆ ಅಂತಾ ಇವನನ್ನು ಬಿಟ್ಟು ಬೇರೆಯವರಿಗೆ ಇಂಜಕ್ಷನ್ ಗಳನ್ನು ಕೊಡ್ತಿಲ್ಲವಂತೆ! ಈತನ ಮೇಲೆ ಕೂಡಲೇ ಪಾಂಡೆಮಿಕ್ ಆಕ್ಟ್ ಪ್ರಕಾರ ಕ್ರಮ ಕೈಗೊಳ್ಳಬೇಕು, ಈ ಡಿಸ್ಟ್ರಿಬ್ಯೂಟರನನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಬೇಕು ಎಂದು ಆಗ್ರಹಿಸಿದ್ದಾರೆ.
ದಿ ಫೈಲ್ ಪತ್ರಿಕೆ ಒಂದು ಅಂಕಿ ಅಂಶವನ್ನು ಹೊರಹಾಕಿದೆ ಏಪ್ರಿಲ್ 21 ರಿಂದ 28 ರ ವರೆಗೆ ಮೈಲಾನ್ ಸೇರಿದಂತೆ ಇತರ ಕೆಲ ಕಂಪನಿಗಳು ಮುಕ್ತಮಾರುಕಟ್ಟೆಯಲ್ಲಿ ರೆಮ್ಡೆಸಿವಿರ್ ಪೋರೈಕೆಯನ್ನು ಮಾಡಿ 20 ಕೋಟಿ ರೂ ವಹಿವಾಟನ್ನು ನಡೆಸಿದೆ. 7 ದಿನದಲ್ಲಿ 20 ಕೋಟಿ ವಹಿವಾಟು ನಡೆಸಿರುವ ಕಂಪನಿಗಳನ್ನು ಯಾಕೆ ಸರಕಾರ ಇನ್ನೂ ನಿಯಂತ್ರಿಸಿಲ್ಲ, ಕಂಪನಿಗಳ ಲಾಭಕೋರತನಕ್ಕೆ ಸರಕಾರ ಕುಣಿದಂತೆ ಕಾಣುತ್ತಿದೆ ಎಂದು ದಿ ಫೈಲ್ ಸಂಪಾದಕ ಮಹಾಂತೇಶ್ ಆರೋಪಿಸಿದ್ದಾರೆ.
2021 ರ ಏಪ್ರಿಲ್ 21 ರಿಂದ 28 ರವರೆಗೆ ಮೈಲಾನ್ ಕಂಪನಿಯು ರೆಮ್ಡೆಸಿವಿರ್ ನ್ನು ಸರಕಾರಕ್ಕೆ ಬಿಡುಗಡೆ ಮಾಡುವ ಜೊತೆಯಲ್ಲಿ ಮುಕ್ತ ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡಿದೆ. ಸರಕಾರಕ್ಕೆ ಬಿಡುಗಡೆ ಮಾಡಿರುವ ವಯಲ್ ಗಳಿಗಿಂತ ಹೆಚ್ಚುವರಿಯಾಗಿ 3895 ವಯಲ್ ಗಳನ್ನು ಮುಕ್ತ ಮಾರುಕಟ್ಟೆಗೆ ಸರಬರಾಜು ಮಾಡಿದೆ. ಒಟ್ಟಾರೆ ರೆಮ್ಡೆಸಿವಿರ ಹಂಚಿಕೆ ಈ ರೀತಿ ಇದೆ.
ಮೈಲಾನ್ |
ಸಿನ್‌ಜಿನ್ |
ಸಿಪ್ಲಾ |
|||
ಸರಕಾರ | ಮುಕ್ತಮಾರುಕಟ್ಟೆ | ಸರಕಾರ | ಮುಕ್ತಮಾರುಕಟ್ಟೆ | ಸರಕಾರ | ಮುಕ್ತಮಾರುಕಟ್ಟೆ |
28,040 ವಯಲ್ | 31,935 ವಯಲ್ | 13,000 ವಯಲ್ | ಯಾವುದೆ ವಯಲ್ ನೀಡಿಲ್ಲ | ಯಾವುದೇ ವಯಲ್‌ನ್ನು ನೀಡಿಲ್ಲ | 2432 ವಯಲ್ ಗಳನ್ನು ನೀಡಿದೆ |
ಹೆಟ್ರೋ |
ಜ್ಯಬಿಲಿಯೆಂಟ್ |
ಡಾ. ರೆಡ್ಡೀಸ್ |
ಕೆಡಿಲಾ |
||||
ಸರಕಾರ | ಮುಕ್ತಮಾರುಕಟ್ಟೆ | ಸರಕಾರ | ಮುಕ್ತಮಾರುಕಟ್ಟೆ | ಸರಕಾರ | ಮುಕ್ತಮಾರುಕಟ್ಟೆ | ಸರಕಾರ | ಮುಕ್ತಮಾರುಕಟ್ಟೆ |
ಯಾವುದೇ ವಯಲ್ ಗಳನ್ನು ನೀಡಿಲ್ಲ | 24,240 ವಯಲ್ ಗಳನ್ನು ನೀಡಿದೆ. | ನೀಡಿಲ್ಲ | 600 ವಯಲ್ ಗಳನ್ನು ನೀಡಿದೆ. | ಇಲ್ಲ | ಇಲ್ಲ | ಇಲ್ಲ | ಇಲ್ಲ |
ಸರಕಾರಕ್ಕೆ ಬಿಡುಗಡೆ ಮಾಡಿರುವ ಒಟ್ಟು ವಯಲ್ ಗಳ ಸಂಖ್ಯೆ : 41,040
ಮುಕ್ತಮಾರುಕಟ್ಟೆಗೆ ಬಿಡುಗಡೆಯಾದ ಒಟ್ಟು ವಯಲ್ ಗಳ ಸಂಖ್ಯೆ : 51,207
ಒಟ್ಟು ವಯಲ್ ಗಳ ಸಂಖ್ಯೆ : 1,00,247
ದಿ ಫೈಲ್ ನ ಅಂದಾಜಿನ ಪ್ರಕಾರ 10.86 ಕೋಟಿ ಮೈಲಾನ್ ಕಂಪನಿ ವಹಿವಾಟನ್ನು ನಡೆಸಿದ್ದರೆ, ಸಿಪ್ಲಾ 73 ಲಕ್ಷ ರೂ ಗಳ ವಹಿವಾಟು ನಡೆಸಿದೆ. ಹೆಟಾರಿಯೋ 8.46 ಕೋಟಿ ರೂ ವಹಿವಾಟು ನಡೆಸಿದೆ. ರೆಮ್ಡಿಸಿವರ್ ನಿಂದಾಗಿ ಕೊರೊನಾ ಗುಣವಾಗುವುದಿಲ್ಲ ಎಂದು ಡಬ್ಲ್ಯೂ ಎಚ್. ಓ ಈಗಾಗಲೆ ಸ್ಪಷ್ಟವಾಗಿ ಹೇಳುತ್ತಿದೆ.
ಬೇರೆ ಔಷಧಿ ಅಥವಾ ಇಂಜಕ್ಷನ್ ಗಿಂತ ಕೊರೊನಾ ನಿಯಂತ್ರಣದಲ್ಲಿಡಲು ಸಹಕಾರಿಯಾಗುತ್ತಿದೆಯೆ ಹೊರತು ಪೂರ್ಣವಾಗಿ ರೆಮ್ಡಿಸಿವಿರ್ ನಿಂದ ಗುಣವಾಗುವುದಿಲ್ಲ ಎಂದು ಅನೇಕ ವೈಧ್ಯರು ಹೇಳುತ್ತಿದ್ದಾರೆ. ಹೀಗಿರುವಾಗ ಯಾಕೆ ರೆಮ್ಡಿಸಿವಿರ್ ಅಗತ್ಯತೆ ಇಷ್ಟು ಹೆಚ್ಚಾಗುತ್ತಿದೆ. ಮತ್ತು ಮಾರುಕಟ್ಟೆಗೆ ಬಂದ ಮೇಲೂ ಅದು ಸಿಗದೆ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದಾದರೂ ಯಾಕೆ ಎಂಬ ಪ್ರಶ್ನೆ ಸಹಜವಾಗಿ ಹುಟ್ಟಿಕೊಳ್ಳುತ್ತಿದೆ. ಹಾಗಾದ್ರೆ ರೆಮ್ಡೆಸಿವರ್ ಹೆಸರಿನಲ್ಲಿ ಏನು ನಡೆಯುತ್ತಿದೆ? ಅಂಕಿ ಅಂಶಗಳು ಯಾಕೆ ಸುಳ್ಳು ಹೇಳುತ್ತಿವೆ. ರೆಮ್ಡಿಸಿವಿರ್ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯುವ ವಾಸನೆ ಮೂಗಿಗೆ ಬಡೆಯುತ್ತಿದೆ. ಡಿಸ್ಟ್ರಿಬೂಟರ್ ರೆಮ್ಡೆಸಿವಿರ್ ವಿತರಣೆ ಮಾಡಲು ಆಟವಾಡುತ್ತಿರುವುದು, ಕಾಳ ಸಂತೆಯಲ್ಲಿ ಮಾರಾಟವಾಗುತ್ತಿರುವುದು ಏನನ್ನು ತೋರಿಸಿಕೊಡುತ್ತದೆ. 1,00,247 ವಯಲ್ ಗಳು ಸರಕಾರ ಮತ್ತು ಮುಕ್ತಮಾರುಕಟ್ಟೆಯಲ್ಲಿ ಮಾರಾಟವಾಗಿದ್ದರು ಜನರಿಗೆ ಇನ್ನೂ ಸಿಗುತ್ತಿಲ್ಲ. ಆದರೆ ಮಾರಾಟ ಮಾಡಿದ ಕಂಪನಿಗಳು ಮಾತ್ರ ಕೋಟಿ ಕೋಟಿ ಹಣ ಜೇಬಿಗಿಳಿಸಿವೆ! ಅದು ಹೇಗೆ ಸಾಧ್ಯ ಡಾ. ಸುಧಾಕರ್ ರವರೆ ಉತ್ತರಿಸುವಿರಾ?