ಕೋವಿಡ್ ಎರಡನೇ ಅಲೆಗೆ ಬ್ರೇಕ್ ಹಾಕಲು ಹೆಣಗಾಡುತ್ತಿರುವ ರಾಜ್ಯ ಸರ್ಕಾರ, 14 ದಿನಗಳ ಲಾಕ್ಡೌನ್ ಜಾರಿಗೆ ತಂದಿದೆ. ಕೊರೊನಾ ಸೋಂಕು ಹರಡುವಿಕೆ ತಡೆಯಲು ಜನರು ಏನು ಮಾಡಬೇಕು? ಏನು ಮಾಡಬಾರದು? ಎಂದು ಈಗ ಹೇಳುತ್ತಿರುವ ಸರ್ಕಾರ, ಸಕಾಲದಲ್ಲಿ ಮಾಡಬೇಕಿದ್ದ ಅಗತ್ಯ ಕ್ರಮಗಳನ್ನು ಯಾಕೆ ವಹಿಸಲಿಲ್ಲ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಆರಂಭವಾಗಿದೆ. ಲಾಕ್ಡೌನ್ ಘೋಷಣೆಯಿಂದಾಗಿ ಸಂಕಷ್ಟ ಅನುಭವಿಸುವ ದಿನಗೂಲಿ ಕಾರ್ಮಿಕರಿಗೆ ಪರಿಹಾರ ನೀಡಬೇಕು ಎಂಬ ಕೂಗುಗಳು ಕೇಳಿ ಬರುತ್ತಿವೆ.
14 ದಿನಗಳ ಕಾಲ ಗೋಷಣೆ ಮಾಡಿರುವ ಲಾಕ್ಡೌನ್ ಗೆ ರಾಜ್ಯಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗಿದೆ ಸದಾ ಜನರಿಂದ ಗಿಜಿಗುಡುತ್ತಿದ್ದ ರಾಜ್ಯ ರಾಜಧಾನಿ ಬೆಂಗಳೂರು ಖಾಲಿಖಾಲಿ ಅನ್ನಿಸುತ್ತಿದೆ. ಸಾರಿಗೆ ಸಂಚಾರ ಬಂದ್ ಆಗಿದ್ದು, ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಪೊಲೀಸರು ಕಾವಲು ಕಾಯುತ್ತಿದ್ದಾರೆ. ಇನ್ನು ಬೆಳಗ್ಗೆ 6ರಿಂದ 10ರವರೆಗೆ ಮಾತ್ರವೇ ಅಗತ್ಯ ವಸ್ತು ಮಾರಾಟ-ಖರೀದಿ ವಹಿವಾಟು ನಡೆದಿದ್ದು, ಗಡುವು ಮೀರುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಮುಚ್ಚಿಸಿದರು. ಈ ವೇಳೆ ತರಕಾರಿ, ಹೂವು, ಹಣ್ಣಿನ ಕೆಲ ವ್ಯಾಪಾರಿಗಳು, ಕೇವಲ ನಾಲ್ಕು ಗಂಟೆಯಲ್ಲಿ ವ್ಯಾಪಾರ ಮಾಡಿ ಮುಗಿಸಲು ಹೇಗೆ ಸಾಧ್ಯ? ಎಂದು ವ್ಯಾಪಾರಸ್ಥರು ಸರಕಾರವನ್ನು ತರಾಟೆಗೆ ತೆಗುಕೊಂಡು ಘಟನೆಗಳು ಅಲ್ಲಲ್ಲಿ ನಡೆದಿವೆ.
ಇದನ್ನೂ ಓದಿ : ವಿಜಯ ಸಂಕೇಶ್ವರ್ ಮಾತು ನಂಬಿ ಪ್ರಾಣ ಕಳೆದುಕೊಂಡ ಶಿಕ್ಷಕ
ಬೆಳ್ಳಂಬೆಳಗ್ಗೆ ಎದ್ದು ಮಾರ್ಕೆಟ್ಗೆ ಹೋಗಿ, ಬಂದಿರೋ ತರಕಾರಿ ಹುಡ್ಕೊಂಡು, ಅಂಗಡಿಗೆ ತಂದು, ಕ್ಲೀನಾಗಿ ಇಟ್ಟು, ವ್ಯಾಪಾರ ಸ್ಟಾರ್ಟ್ ಮಾಡೋ ಹೊತ್ತಿಗೆ ಎಂಟು ಗಂಟೆ ಆಗಿ ಹೋಗಿ ಬಿಡುತ್ತೆ. ಇನ್ನು ಎರಡು ಗಂಟ್ಯಾಗೆ ಎಷ್ಟು ಆಗುತ್ತೂ ಅಷ್ಟು ವ್ಯಾಪಾರ ಮಾಡ್ಬೇಕು. ವ್ಯಾಪಾರ ಆಯ್ತು ಅಂದ್ರೆ ಸರಿ. ಇಲ್ಲ ಅಂದ್ರೆ ಎಲ್ಲಾನೂ ಮೈಮೇಲೆ ಬರುತ್ತೆ. ಅಂತಾದ್ರಾಗೆ ಮತ್ತೆ ಹದಿನಾಲ್ಕು ದಿನ ಲಾಕ್ಡೌನ್ನಂಗೆ ಮಾಡಿದ್ರೆ ಜೀವ°ದ ಗತಿ ಏನು ತರಕಾರಿ ಹಣ್ಣು ಮಾರಾಟಗಾರ್ತಿ ಬಸ್ಸಮ್ಮನವರ ಪ್ರಶ್ನೆಯಾದರೆ, ಕೃಷಿಗೆ ಯಾವುದೆ ತೊಂದರೆ ಇಲ್ಲ ಅಂತಾ ಹೇಳೋ ಸರಕಾರ ಕೇವಲ ನಾಲ್ಕು ತಾಸು ಮಾರಟಕ್ಕೆ ಅವಕಾಶಕ್ಕೆ ನೀಡಿರುವುದರಿಂದ ರೈತರನ್ನು ಆರ್ಥಿಕವಾಗಿ ಸಂಕಷ್ಟಕ್ಕೆ ತಳ್ಳುವಂತೆ ಮಾಡಿದೆ ಎಂಬುದು ರೈತ ಹೋರಾಟಗಾರ ಜೆ.ಎನ್ .ಕಾಳಿದಾಸ್ ರವರ ಆರೋಪವಾಗಿದೆ.
ಇನ್ನೂ ರಾಜ್ಯ ಸರಕಾರ ಹೇರಿರುವ ಲಾಕ್ಡೌನ್ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕೇಳಿ ಬರುತ್ತಿದೆ. ಸರ್ವಪಕ್ಷ ಸಭೆಯಲ್ಲಿ ಲಾಕ್ಡೌನ್ ಬೇಡ ಎಂಬ ಸಲಹೆ ಬಂದರೂ ಸರಕಾರ ಏಕಪಕ್ಷೀಯವಾಗಿ ನಿರ್ಧಾರವನ್ನು ತೆಗೆದುಕೊಂಡು ಲಾಕ್ಡೌನ್ ಹೊರೆಯನ್ನು ಹಾಕಿದೆ. ಲಾಕ್ಡೌನ್ ಘೋಷಿಸುವ ಮೊದಲು ಅಗತ್ಯ ಕ್ರಮಗಳ ಕುರಿತಾಗಿ ಯೋಜನೆ ರೂಪಿಸದೆ ಇರುವುದು ಇನ್ನಷ್ಟು ಸಂಕಷ್ಟಗಳನ್ನು ತಂದೊಡ್ಡಲಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ರಾಜ್ಯಕ್ಕೆ ಕೊರೊನಾ ಕಾಲಿಟ್ಟು ಒಂದು ವರ್ಷಕ್ಕೂ ಹೆಚ್ಚು ಸಮಯ ಕಳೆದಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯಗಳಿಲ್ಲ, ವೈಧ್ಯಕೀಯ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಬಹಳಷ್ಟು ಕಡೆ ನಿರ್ಲಕ್ಷ ಮಾಡಲಾಗುತ್ತಿದೆ. ಕೋವಿಡ್ ಕೇಂದ್ರದಲ್ಲಿ ಒಂದು ಹಾಸಿಗೆಯ ಮೇಲೆ ಇಬ್ಬರು, ಮೂವರು ಮಲಗುವ ಸ್ಥಿತಿ ಇದೆ, ಇದು ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಹೇಗಿದೆ ಎಂಬುದನ್ನು ಸರಕಾರಿ ಆಸ್ಪತ್ರೆ ನೋಡಿದರೆ ಗೊತ್ತಾಗುತ್ತದೆ.
ಇದನ್ನು ಓದಿ: ಅಕ್ಕಿ ಕೇಳಿದ ರೈತನಿಗೆ ‘ಸತ್ತು ಹೋದರೆ ಒಳ್ಳೆಯದು’ ಎಂದ ಸಚಿವ ಉಮೇಶ್ ಕತ್ತಿ
ಖಾಸಗಿ ಆಸಪ್ತರೆಗಳ ಕಥೆ ವಿಚಿತ್ರವಾಗಿದೆ. ಕೆಲ ಖಾಸಗಿ ಆಸ್ತ್ರೆಗಳು ದುಪ್ಪಟ್ಟು ಹಣವನ್ನು ಪಡೆಯುತ್ತಿವೆ. ಖಾಸಗಿ ಆಸ್ಪತ್ರೆಗಳ ಮುಂದೆ ಹಾಸಿಗೆಗಾಗಿ ಪರದಾಡುವ ಸ್ಥಿತಿ ಇದೆ. ಕರ್ನಾಟಕ ಖಾಸಗಿ ಆಸ್ಪತ್ರೆಗಳ ಕಾಯ್ದೆಯಡಿ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಲು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲವೆ? ಸರಕಾರಕ್ಕೆ ಶಕ್ತಿ ಇಲ್ಲವೆ? ಇನ್ನೆಷ್ಟು ಸಾವನ್ನು ಸರಕಾರ ನೋಡಬೇಕು ಎಂದುಕೊಂಡಿದೆ., ಸರ್ಕಾರ ಎದ್ದು ನಿಲ್ಲುವುದು ಯಾವಾಗ? ಎಂದು ಸಾರ್ವಜನಿಕರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಸರಕಾರ ಕಾಮಗಾರಿಗಳ ಬಿಲ್ಲಗಳನ್ನು ಪೂರ್ಣಗೊಳಿಸುವಲ್ಲಿ ಹಾಗೂ ಚುನಾವಣೆಗಳನ್ನು ಗೆಲ್ಲುವುದಕ್ಕೆ ನೀಡಿದ ಗಮನವನ್ನು ಕೊರೊನಾ ನಿಯಂತ್ರಣಕ್ಕೆ ತೆಗೆದುಕೊಳ್ಳಲಿಲ್ಲ. ಬೆಂಗಳೂರಿನಲ್ಲಿ ಈಗಲೂ ಬೆಡ್ ಕೊರತೆ ಎದುರಾಗಿದೆ. ಬೆಡ್ ಸಿಗದೆ ಅನೇಕರು ಸಾವನ್ನಪ್ಪುತ್ತಿದ್ದಾರೆ. ಸ್ವತಃ ಬಿಬಿಎಂಪಿ ಮುಖ್ಯ ಆಯುಕ್ತ ಗೌರವಗುಪ್ತಾರವರೆ ಒಪ್ಪಿಕೊಂಡಿದ್ದಾರೆ ಐಸಿಯು ಬೆಡ್ ಗಳ ಕೊರತೆ ಹೆಚ್ಚಾಗಿದೆ ಎಂದು. ಆಕ್ಸಿಜನ್ ಗಾಗಿ ಪರದಾಡುವುದು ಇನ್ನೂ ತಪ್ಪಿಲ್ಲ. ಆಸ್ಪತ್ರೆಗಳಿಂದ ಆಸ್ಪತ್ರೆಗಳಿಗೆ ಕೋವಿಡ್ ಪೀಡಿತರನ್ನು ಅಲೆದಾಡಿಸಿ ಸಾಯಿಸುವ ಕೆಲಸವನ್ನು ನೋಡಿದರೆ ರಾಜ್ಯ ಸರಕಾರದ ತಯಾರಿ ಹೇಗಿದೆ ಎಂಬುದು ಗೊತ್ತಾಗುತ್ತದೆ.
ಇದನ್ನೂ ಓದಿ : ಐಸೋಲೇಷನ್ ವಾರ್ಡ್ಗಳಾಗಿ ಪರಿವರ್ತನೆಯಾಗಿರುವ ರೈಲ್ವೆ ಬೋಗಿಗಳು : ಬೇಡಿಕೆ ಸಲ್ಲಿಸದ ರಾಜ್ಯ ಸರಕಾರ
ಇತ್ತ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಎದ್ದುಕಾಣುತ್ತದ್ದರೆ, ಅತ್ತ ನೈರುತ್ಯ ರೈಲ್ವೆಯು 4,240 ಹಾಸಿಗೆ ಸಾಮರ್ಥ್ಯದ ಐಸೊಲೇಷನ್ ರೈಲು ಬೋಗಿಗಳನ್ನು ಸಿದ್ಧ ಮಾಡಿಕೊಂಡಿದೆ. ಈ ಪೈಕಿ ನಗರದ ಕೆಎಸ್ಆರ್ ಹಾಗೂ ಯಶವಂತಪುರ, ಮೈಸೂರು ಹಾಗೂ ಹುಬ್ಬಳ್ಳಿ ರೈಲು ನಿಲ್ದಾಣಗಳಲ್ಲಿ ವೈದ್ಯಕೀಯ ಆಕ್ಸಿಜನ್ ಸಹಿತ ಹಾಸಿಗೆಗಳನ್ನು ಪೂರೈಸಲೂ ಸಜ್ಜಾಗಿದೆ. ಆದರೆ, ರಾಜ್ಯ ಸರ್ಕಾರದಿಂದ ಈವರೆಗೆ ಯಾವುದೇ ಬೇಡಿಕೆ ಹೋಗಿರದ ಕಾರಣ ಈ ಸೌಲಭ್ಯವು ಬಳಕೆಯಾಗದೇ ಉಳಿದಿದೆ.
ಹುಬ್ಬಳ್ಳಿ ಯಲ್ಲಿ 97 ಭೋಗಿಗಳನ್ನು, ಮೈಸೂರಿನಲ್ಲಿ 95 ಭೊಗಿಗಳನ್ನು, ಬೆಂಗಳೂರಿನಲ್ಲಿ 73 ಭೊಗಿಗಳು ಸೇರಿದಂತೆ ಒಟ್ಟು 265 ಕೋವಿಡ್ ವಾರ್ಡ್ ಬೋಗಿಗಳ ಸಿದ್ಧವಾಗಿವೆ. ಒಂದು ಬೋಗಿಯಲ್ಲಿ 16 ರೋಗಿಗಳಿಗೆ ಚಿಕಿತ್ಸೆ ನೀಡಬಹುದಾಗಿದೆ. ಆಕ್ಸಿಜನ್ ಸಿಲಿಂಡರ್ ಅಳವಡಿಸಲು ಜಾಗವಿದೆ. ಥರ್ಮಲ್ ಸ್ಕ್ಯಾನರ್, ಜೈವಿಕ ಶೌಚಾಲಯ, ಕಸದ ಬುಟ್ಟಿ ಇಡಲಾಗಿದೆ. ವೈದ್ಯರು ಮತ್ತು ದಾದಿಯರು ಪಿಪಿಇ ಕಿಟ್ ಬದಲಿಸಿಕೊಳ್ಳಲು ಪ್ರತ್ಯೇಕ ಸ್ಥಳವನ್ನು ಮೀಸಲಿಡಲಾಗಿದೆ. ಎಲ್ಲ ಬೋಗಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಆದರೆ ಇವಗಳನ್ನು ಸರಕಾರ ಬಳಸಿಕೊಳ್ಳಲು ಮುಂದಾಗದಿರುವುದು ಸರಕಾರದ ನಿರ್ಲಕ್ಷ್ಯತೆ ಜೊತೆ ಹಲವು ಅನುಮಾನಗಳನ್ನು ಸೃಷ್ಟಿಸುತ್ತಿದೆ.
ಸರ್ಕಾರ ಘೋಷಿಸಿರುವ ಲಾಕ್ ಡೌನ ನಿಂದಾಗಿ ರಾಜ್ಯದ ಸಂಘಟಿತ ಅಸಂಘಟಿತ ಸ್ಕೀಂ ನೌಕರರು, ಗುತ್ತಿಗೆ ಹೊರಗುತ್ತಿಗೆ ಹಾಗೂ ವಲಸೆ ಕಾರ್ಮಿಕರು ಸಂಕಷ್ಟಗಳನ್ನು ಎದುರಿಸುವಂತಾಗುತ್ತದೆ. ರಾಜ್ಯ ಸರ್ಕಾರ ಕೂಡಲೇ ಈ ವಿಭಾಗದ ಕಾರ್ಮಿಕರ ಬದುಕಿನ ರಕ್ಷಣೆಗಾಗಿ ಆರ್ಥಿಕ ಪ್ಯಾಕೇಜ್ ಘೋಷಿಸಬೇಕೆಂದು ಸಿಐಟಿಯು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ರವರಿಗೆ ಮನವಿ ಸಲ್ಲಿಸಿದೆ. ಸೋಂಕು ಹರಡುವುಕೆ ವ್ಯಾಪಕವಾಗುತ್ತಿದ್ದು ಅದನ್ನು ನಿಯಂತ್ರಿಸುವುದಕ್ಕಾಗಿ ಜೀವರಕ್ಷಕ ಔಷಧಿ, ಲಸಿಕೆಯನ್ನು ಉಚಿತವಾಗಿ ನೀಡಬೇಕು. ಆಕ್ಸಿಜನ್ ಹಾಗೂ ಬೆಡ್ ಸೌಲಭ್ಯಗಳನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದೆ.
ದಿನದ ಆದಾಯದಲ್ಲಿ ಬದುಕುವ ಕೂಲಿ ಕಾರ್ಮಿಕರು 15 ದಿನಗಳ ಕಾಲ ಜೀವನ ನೀರ್ವಹಣೆ ಮಾಡುವುದು ಕಷ್ಟದ ಕೆಲಸ. ಕರ್ನಾಟಕದಲ್ಲಿ ದಿನದ ಆದಾಯವನ್ನೆ ನಂಬಿ ಬದುಕು ನಡೆಸುತ್ತಿರುವವರ ಸಂಖ್ಯೆ ದೊಡ್ಡದಿದೆ ಹಾಗಾಗಿ ಸರಕಾರ ಇನ್ನಾದರೂ ಅವರಿಗೆ ಅಗತ್ಯವಾಗಿರುವ ಸೌಲಭ್ಯಗಳನ್ನು ನೀಡುವ ಜೊತೆಯಲ್ಲಿ, ಕೊರೊನಾ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವತ್ತ ಹೆಜ್ಜೆ ಇಡಲಿ.