ವರದಿ :ನಾಗರಾಜ ನಂಜುಂಡಯ್ಯ
ನವದೆಹಲಿ : ‘ಪ್ರಜಾಪ್ರಭುತ್ವ ವಿರೋಧಿ’ ಕ್ರಿಮಿನಲ್ ಕಾನೂನುಗಳನ್ನು ತಡೆ ಹಿಡಿಯುವಂತೆ 3700 ಕ್ಕೂ ಹೆಚ್ಚಿನ ನಾಗರೀಕರು ಒತ್ತಾಯಿಸಿದ್ದಾರೆ. 2023 ರ ಡಿಸೆಂಬರ್ 20 ರಂದು, ಸಂಸತ್ತಿನಲ್ಲಿ ಅಂಗೀಕರಿಸಿದ 3 ಕ್ರಿಮಿನಲ್ ಕಾಯಿದೆಗಳು, ಇದೇ ಜುಲೈ 1 ರಿಂದ ಜಾರಿಗೆ ಬರಲಿದ್ದು, ಆ ಕಾನೂನುಗಳು ಯಾವುವು? ಈ ಕಾನೂನುಗಳ ಸಾಧಕ ಬಾಧಕಗಳೇನು? ಒಂದು ವೇಳೆ ಕಾನೂನು ಜಾರಿಯಾದಲ್ಲಿ ದೇಶಕ್ಕೆ ಹಾಗೂ ನಮ್ಮ ಜನರಿಗೆ ಆಗಬಹುದಾದ ತೊಂದರೆಗಳೇನು? ಎಂಬುದರ ಬಗ್ಗೆ ದೇಶದ ಜನರಿಗೆ ಬಹಿರಂಗಗೊಳಿಸಬೇಕು ಎನ್ನುವುದನ್ನು ಒತ್ತಾಯಿಸಿ ಸುಮಾರು 3700 ಕ್ಕೂಹೆಚ್ಚಿನ ಮಂದಿ ಸಹಿ ಮಾಡಿರುವ ಮನವಿ ಪ್ರತಿಯನ್ನು ಪ್ರತಿ ಪಕ್ಷದ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳಿಗೆ ಕಳುಹಿಸಲಾಗಿದೆ. ಅಲ್ಲದೇ ಮನವಿಯಲ್ಲಿ ಜಂಟೀ ಪಾರ್ಲಿಮೆಂಟ್ ಸಮಿತಿಯ ಮೂಲಕ ( ಜೆಪಿಸಿ)/ತನಿಖೆ ನಡೆಸಬೇಕು. ಕಾನೂನು ತಜ್ಞರೊಂದಿಗೆ ಸಮಾಲೋಚನೆ ಮತ್ತು ಅವರ ಸಲಹೆ, ಮತ್ತು ಉದ್ದೇಶಿತ ಸುಧಾರಣೆಗಳ ಕುರಿತು ಅರ್ಥಪೂರ್ಣ ಚರ್ಚೆಯನ್ನು ಪಾರ್ಲಿಮೆಂಟ್ ಒಳಗೆ ನಡೆಸಬೇಕೆಂದು ಆಗ್ರಹಿಸಲಾಗಿದೆ.
ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೂಲಭೂತ ಮೌಲ್ಯಗಳನ್ನು ದೃಢವಾಗಿ ರಕ್ಷಿಸುವ ಅವಕಾಶವನ್ನು ಪ್ರಸ್ತುತ ರಾಜಕೀಯ ಪಕ್ಷಗಳು ಹೊಂದಿವೆ. ಈ ನಿಟ್ಟಿನಲ್ಲಿ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತವೆ ಎಂದು ಅರ್ಜಿದಾರರು ದೃಡವಾದ ವಿಶ್ವಾಸ ಹೊಂದಿದ್ದೇವೆ ಎಂಬ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ.ಆ ಮೂರು ಹೊಸ ಕ್ರಿಮಿನಲ್ ಕಾನೂನುಗಳ ರೂಪದಲ್ಲಿ ರಾಷ್ಟ್ರದ ಮೇಲೆ ಗಂಭೀರ ಬೆದರಿಕೆ ಒಡ್ಡುತ್ತವೆ. ಅವುಗಳೆಂದರೆ, ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, 2023’, ‘ಭಾರತೀಯ ನ್ಯಾಯ ಸಂಹಿತಾ, 2023’ ಮತ್ತು ‘ ಭಾರತೀಯ ಸಾಕ್ಷಿ ಅಧಿನಿಯಮ್, 2023’ ಅನ್ನು ಚರ್ಚೆಯಿಲ್ಲದೆ ಡಿಸೆಂಬರ್ 20, 2023 ರಂದು ಸಂಸತ್ತಿನ ಮೂಲಕ ತರಾತುರಿಯಲ್ಲಿ ತಳ್ಳಲಾಯಿತು,” ಎಂದು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ.
ಅಸ್ತಿತ್ವದಲ್ಲಿರುವ ಕಾನೂನುಗಳಿಗೆ ಮಾಡಲಾಗಿರುವ ತಿದ್ದುಪಡಿಗಳು, ಹೆಚ್ಚಾಗಿ ಕಠಿಣ ಸ್ವಭಾವವನ್ನು ಹೊಂದಿವೆ. ಪ್ರಜೆಗಳ ಜೀವನ ಮತ್ತು ಸ್ವಾತಂತ್ರ್ಯದ ವಿಷಯಗಳೊಂದಿಗೆ ಪ್ರತ್ಯೇಕವಾಗಿ ವ್ಯವಹರಿಸುತ್ತವೆ ಮತ್ತು ಹಲವಾರು ವಿಧಗಳಾಗಿ ಯಾವುದೇ ವ್ಯಕ್ತಿಗೆ ಕ್ರಿಮಿನಲ್ ಹಾನಿ ಮಾಡುವ ಎಲ್ಲಾ ಸಾಧ್ಯತೆಗಳನ್ನು ಈ ಕಾನೂನುಗಳು ಒದಗಿಸ ಬಹುದು ಎನ್ನಲಾಗಿದೆ. ನಾಗರಿಕ ಸ್ವಾತಂತ್ರ್ಯಗಳೊಂದಿಗೆ ಹೆಚ್ಚು ನಿರ್ದಿಷ್ಟವಾಗಿ ವಾಕ್ ಸ್ವಾತಂತ್ರ್ಯ, ಸಭೆ ನಡೆಸುವ ಹಕ್ಕುಗಳು, ಅದರಲ್ಲಿನ ಸಹಭಾಗಿತ್ವದ ಹಕ್ಕು, ಪ್ರದರ್ಶಿಸುವ ಹಕ್ಕು ಮತ್ತು ಇತರೆ ನಾಗರಿಕ ಹಕ್ಕುಗಳನ್ನು ಮೊಟಕುಗೊಳಿಸಿ, ಇದನ್ನು ಕಾನೂನಿನ ಭಾಗವಾಗಿ ಅಪರಾಧೀಕರಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಮೂಲಭೂತವಾಗಿ, ಈ ಹೊಸ ಕ್ರಿಮಿನಲ್ ಕಾನೂನುಗಳು ನಮ್ಮ ಪ್ರಜಾಪ್ರಭುತ್ವವನ್ನು ಟೊಳ್ಳು ಮಾಡಲು ಮತ್ತು ಭಾರತವನ್ನು ಫ್ಯಾಸಿಸ್ಟ್ ರಾಜ್ಯವಾಗಿ ಪರಿವರ್ತಿಸಲು ಸಾಕಷ್ಟು ಸಾಮರ್ಥ್ಯವನ್ನು ಸರ್ಕಾರಕ್ಕೆಅನುವು ಮಾಡಿಕೊಡುತ್ತದೆ. ಸರ್ಕಾರವು ಹೊಸ ಕಾನೂನುಗಳನ್ನು ಪೂರ್ಣ ಪ್ರಮಾಣದಲ್ಲಿ ನಿಯೋಜಿಸಿಕೊಂಡು ಜಾರಿಗೆ ತರಲು ಪ್ರಯತ್ನ ಮಾಡಿದಾಗ, “ಪ್ರಸ್ತಾಪಿತ ಹೊಸ ಕಾನೂನುಗಳಿಂದಾಗಿ, ಸರ್ಕಾರವು ನಾಟಕೀಯವಾಗಿ ಬಂಧನ, ಅವರ ರಾಜಕೀಯ ವಿರೋಧಿಗಳು ನಡೆಸುವ ಎಲ್ಲಾ ಬಗೆಯ ಕಾನೂನಾತ್ಮಕ ಪ್ರಜಾಪ್ರಭುತ್ವ ಪ್ರತಿಭಟನೆಗಳನ್ನು ಹತ್ತಿಕ್ಕುವ ಅಥವಾ ಮುಂದುವರಿದು ಕಾನೂನು ಕ್ರಮ ಕೈಗೊಳ್ಳಲು ಅವಕಾಶವನ್ನು ಈ ಕ್ರಿಮಿನಲ್ ಕಾನೂನುಗಳು ಕಲ್ಪಿಸುತ್ತವೆ. ಜೊತೆಗೆ ಭಿನ್ನಮತೀಯರು ಎಂದು ಸರ್ಕಾರ ಪರಿಗಣಿಸಿದರೆ ಅಂತಹವರನ್ನು ಸೆರೆಮನೆಗೆ ತಳ್ಳಲು ಅವಕಾಶಗಳನ್ನು ಕೂಡಾ ಈ ಮೂರು ಕಾನೂನುಗಳು ನೀಡುತ್ತವೆ ಎಂದು ಪತ್ರದಲ್ಲಿ ನಾಗರೀಕರು ಆತಂಕವ್ಯಕ್ತಪಡಿಸಿದ್ದಾರೆ.
ಹೊಸ ಕ್ರಿಮಿನಲ್ ಕೋಡ್ ಗಳು ಹೊಂದಿರುವ ಕೆಲವು ವೈಶಿಷ್ಟ್ಯತೆಗಳನ್ನು ಈ ರೀತಾಯಾಗಿ ಗಮನಿಸಬೇಕಿದೆ. ಕಾನೂನುಬದ್ಧ, ಅಹಿಂಸಾತ್ಮಕ, ಪ್ರಜಾಸತ್ತಾತ್ಮಕ ಭಾಷಣ ಅಥವಾ ಕ್ರಿಯೆಯನ್ನು ‘ಭಯೋತ್ಪಾದನೆ’ ಎಂದು ಅಪರಾಧೀಕರಣ ಗೊಳಿಸುವುದು, ಹೊಸ ಮತ್ತು ಹೆಚ್ಚು ಕೆಟ್ಟ ಅವತಾರದಲ್ಲಿ ದೇಶದ್ರೋಹದ ಅಪರಾಧವನ್ನು ವಿಸ್ತರಿಸುವುದು. (ಇದನ್ನು “ದೇಶದ್ರೋಹ” + ಪ್ಲಸ್ ಎಂದು ಕರೆಯಬಹುದು), ಸೈದ್ಧಾಂತಿಕ ಮತ್ತು ರಾಜಕೀಯ ವಿರೋಧಿಗಳ ಮೇಲಿನ ಉದ್ದೇಶಿತ “ಆಯ್ದ ಕ್ರಮ ಕೈಗೊಳ್ಳುವ, ಜೊತೆಗೆ ರಾಜಕೀಯವಾಗಿ-ಪಕ್ಷಪಾತದ ಪ್ರಾಸಿಕ್ಯೂಷನ್ ಸಾಮರ್ಥ್ಯದ ವಿಸ್ತರಣೆ ಮಾಡಲು ಅವಕಾಶ ಕಲ್ಪಿಸುತ್ತದೆ, ಉಪವಾಸದ ಮೂಲಕ ಸರ್ಕಾರದ ವಿರುದ್ಧ ನಡೆಯಬಹುದಾದ ರಾಜಕೀಯ ಪ್ರತಿಭಟನೆಗಳನ್ನು ಅಪರಾಧೀಕರಣ ಗೊಳಿಸಲಾಗುವುದುವ್ಯಕ್ತಿಗಳು/ಜನಪ್ರತಿ ನಿಧಿಗಳು ನಡೆಸುವ, ಯಾವುದೇ ಸಭೆಯ ವಿರುದ್ಧ ಬಲ ಪ್ರಯೋಗದ ಬಳಕೆಯನ್ನು ಪ್ರೋತ್ಸಾಹಿಸುವುದು, ಪೊಲೀಸ್ ಅಧಿಕಾರಿ”ಗಳು ನೀಡುವ ಯಾವುದೇ ನಿರ್ದೇಶನಕ್ಕೆ ಅಥವಾ ತನಿಖಾ ವರದಿಗಳನ್ನು ಅದಕ್ಕೆ ಅನುಗುಣವಾಗಿ ವಿರೋಧಿಸುವುದು, ನಿರಾಕರಿಸುವುದು, ನಿರ್ಲಕ್ಷಿಸುವುದು ಅಥವಾ ಅಪರಾಧೀಕರಿಸುವ ಮೂಲಕ ‘ಪೊಲೀಸ್ ರಾಜ್’ ಅನ್ನು ಮನಸ್ಸಿಗೆ ತೋಚಿದ ರೀತಿಯಲ್ಲಿ ಹೆಚ್ಚಿಸುವುದು. ಕೈಗೆ ತೊಡಿಸುವ ಕೋಳದ ಅವಧಿಯನ್ನು ಹೆಚ್ಚಿಸುವುದು. ತನಿಖೆಯ ಸಮಯದಲ್ಲಿ ಪೊಲೀಸ್ ಕಸ್ಟಡಿಯನ್ನು ಗರಿಷ್ಟ ಅಥವಾ ಅನಿರ್ದಿಷ್ಟ ಕಾಲವಾಧಿಗೆ ಹೆಚ್ಚಿಸುವುದು, ಎಫ್ ಐ ಆರ್ ರೆಕಾರ್ಡಿಂಗ್ ಅನ್ನು ಪೊಲೀಸರ ವಿವೇಚನೆಗೆ ಒಳಪಡಿಸುವುದು. ಸೆರೆವಾಸದ ನೋವನ್ನು ಪಸರಿಸುವಂತೆ ಮಾಡುವುದು, ಎಲ್ಲಾ ವ್ಯಕ್ತಿಗಳು (ಯಾವುದೇ ಅಪರಾಧದ ಆರೋಪಿಯಲ್ಲದವರು ಸಹಾ) ತಮ್ಮ ಬಯೋ ಮೆಟ್ರಿಕ್ ಗಳನ್ನು ಸರ್ಕಾರಕ್ಕೆ ಒದಗಿಸುವಂತೆ ಒತ್ತಾಯಿಸುವುದು ಮತ್ತು ಸಂಘ ಪರಿವಾರದ ಕೆಲವು ಚಟುವಟಿಕೆಗಳನ್ನು ಸಂರಕ್ಷಣೆ ಮಾಡುವುದು ಎನ್ನುವ ಹೊಸ ಕ್ರಿಮಿನಲ್ ಕೋಡ್ ಗಳು ಹೊಂದಿರುವ ಕೆಲವು ವೈಶಿಷ್ಟ್ಯತೆಗಳನ್ನುಗಮನಿಸಬೇಕೆಂದು ಪತ್ರದಲ್ಲಿ ಒತ್ತಿ ಹೇಳಲಾಗಿದೆ.
ಒಟ್ಟಾರೆಯಾಗಿ ಸಂವಿಧಾನ ಬದ್ದ ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಕ್ಕೆ ಗಂಡಾಂತರ ಒದಗುವ ಈ ಮೂರು ಕ್ರಿಮಿನಲ್ ಕಾನೂನುಗಳನ್ನು ಅನುಷ್ಠಾನಕ್ಕೆ ಬಾರದಂತೆ ತಡೆಯಿಡಿಯಬೇಕು. ಸಂವಿದಾನದ ಆಶಯಗಳನ್ನು ರಕ್ಷಿಸಬೇಕೆಂದು ಮನವಿ ಪತ್ರದಲ್ಲಿ ಗಾಂಭೀರ್ಯ ಪೂರ್ಣ ಕಾಳಜಿಯನ್ನು ವ್ಯಕ್ತಪಡಿಸಲಾಗಿದೆ.
ಮನವಿಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ; ಹಾಗೂ ಸೀತಾರಾಮ್ ಯೆಚೂರಿ, ಪ್ರಧಾನ ಕಾರ್ಯದರ್ಶಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ); ಅರವಿಂದ್ ಕೇಜ್ರಿವಾಲ್, ರಾಷ್ಟ್ರೀಯ ಸಂಚಾಲಕ, ಆಮ್ ಆದ್ಮಿ ಪಾರ್ಟಿ; ಡಿ ರಾಜಾ, ಪ್ರಧಾನ ಕಾರ್ಯದರ್ಶಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ); ಎಂ ಕೆ ಸ್ಟಾಲಿನ್, ತಮಿಳುನಾಡು ಮುಖ್ಯಮಂತ್ರಿ ಮತ್ತು ಅಧ್ಯಕ್ಷ, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ); ಫಾರೂಕ್ ಅಬ್ದುಲ್ಲಾ, ಅಧ್ಯಕ್ಷರು, ಜಮ್ಮು ಮತ್ತು ಕಾಶ್ಮೀರ ರಾಷ್ಟ್ರೀಯ ಸಮ್ಮೇಳನ; ಹೇಮಂತ್ ಸೊರೆನ್, ಅಧ್ಯಕ್ಷ, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ); ಶರದ್ ಪವಾರ್, ಅಧ್ಯಕ್ಷರು, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಶರದ್ಚಂದ್ರ ಪವಾರ್); ಅಖಿಲೇಶ್ ಯಾದವ್, ರಾಷ್ಟ್ರೀಯ ಅಧ್ಯಕ್ಷ, ಸಮಾಜವಾದಿ ಪಕ್ಷ (ಎಸ್ಪಿ); ಉದ್ಧವ್ ಠಾಕ್ರೆ, ಅಧ್ಯಕ್ಷರು, ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ); ಜಿ ದೇವರಾಜನ್, ಅಧ್ಯಕ್ಷರು, ಅಖಿಲ ಭಾರತ ಫಾರ್ವರ್ಡ್ ಬ್ಲಾಕ್; ದೀಪಂಕರ್ ಭಟ್ಟಾಚಾರ್ಯ, ಪ್ರಧಾನ ಕಾರ್ಯದರ್ಶಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ-ಲೆನಿನಿಸ್ಟ್) ಲಿಬರೇಶನ್; ಜೋಸ್ ಕೆ ಮಣಿ, ಅಧ್ಯಕ್ಷರು, ಕೇರಳ ಕಾಂಗ್ರೆಸ್ (ಎಂ); ತೊಲ್ ತಿರುಮಾವಳವನ್, ಅಧ್ಯಕ್ಷರು, ವಿದುತಲೈ ಚಿರುತೈಗಲ್ ಕಚ್ಚಿ; ವೈಕೊ, ಪ್ರಧಾನ ಕಾರ್ಯದರ್ಶಿ, ಮರುಮಲಾರ್ಚಿ ದ್ರಾವಿಡ ಮುನ್ನೇತ್ರ ಕಳಗಂ (MDMK); ಮೆಹಬೂಬಾ ಮುಫ್ತಿ, ಅಧ್ಯಕ್ಷರು, ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ); ಪಿ ಜೆ ಜೋಸೆಫ್, ಅಧ್ಯಕ್ಷರು, ಕೇರಳ ಕಾಂಗ್ರೆಸ್; ಕೆ ಎಂ ಖಾದರ್ ಮೊಹಿದೀನ್, ರಾಷ್ಟ್ರೀಯ ಅಧ್ಯಕ್ಷರು, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್; ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದ ಅಧ್ಯಕ್ಷ ಹನುಮಾನ್ ಬೇನಿವಾಲ್ ಮತ್ತು ಕೊಂಗುನಾಡು ಮಕ್ಕಳ್ ದೇಶಿಯ ಕಚ್ಚಿ ಪ್ರಧಾನ ಕಾರ್ಯದರ್ಶಿ ಇ ಆರ್ ಈಶ್ವರನ್, ಇವರುಗಳಿಗೆ ನಾಗರೀಕರು ಪತ್ರವನ್ನು ರವಾನಿಸಿದ್ದಾರೆ.
ಹೊಸ ಕ್ರಿಮಿನಲ್ ಕೋಡ್ ಗಳು ಹೊಂದಿರುವ ಕೆಲವು ವೈಶಿಷ್ಟ್ಯತೆಗಳನ್ನು ಗಮನಿಸಬೇಕು