ಭಾಲ್ಕಿ: ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊನೆಗೂ 3454 ಕೋಟಿ ರೂ. ಬರ ಪರಿಹಾರ ಘೋಷಿಸಿದೆ, ಇದು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ನಡೆಸಿದ ಹೋರಾಟಕ್ಕೆ ಸಂದ ಮೊದಲ ಜಯವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಪ್ರತಿಕ್ರಿಯೆ ನೀಡಿದ್ದಾರೆ.
ಭಾಲ್ಕಿಯಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆಯ ಕೊರತೆಯಿಂದಾಗಿ ಭೀಕರ ಬರ ಪರಿಸ್ಥಿತಿ ನಿರ್ಮಾಣವಾಗಿತ್ತು, ಕಳೆದ ಸೆಪ್ಟೆಂಬರ್ ತಿಂಗಳಲ್ಲೇ ರಾಜ್ಯದಲ್ಲಿ ಬರದಿಂದ ಆಗಿರುವ ಬೆಳೆ ನಷ್ಟಕ್ಕೆ ಹಾಗೂ ನೀರಿನ ಕೊರತೆ ಇರುವ ಪ್ರದೇಶಗಳಲ್ಲಿ ಪರಿಹಾರ ಕಲ್ಪಿಸಲು ಎನ್.ಡಿ.ಆರ್.ಎಫ್. ನಿಯಮಾವಳಿಗಳ ರೀತ್ಯ 18,171 ಕೋಟಿ ರೂ. ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು. ಆದರೆ ಕೇಂದ್ರ ಸರ್ಕಾರ ರಾಜ್ಯದ ವಿಚಾರದಲ್ಲಿ ಮಲತಾಯಿ ಧೋರಣೆ ತೋರಿ, ಅನಗತ್ಯ ವಿಳಂಬ ಮಾಡಿ, ರಾಜ್ಯ ಜನತೆಗೆ ಘೋರ ಅನ್ಯಾಯ ಮಾಡಿತ್ತು ಎಂದರು.
ಇದನ್ನೂ ಓದಿ: ಮಾಜಿ ಸಚಿವ ಕೆ.ಸುಧಾಕರ್ ವಿರುದ್ಧ ಎಫ್‌ಐಆರ್ ದಾಖಲು
ಪರಿಹಾರ ನೀಡಲು ನಿರ್ದೇಶಿಸುವಂತೆ ಕೋರಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಬಳಿಕ ಆಗಬಹುದಾದ ಮುಖಭಂಗ ತಪ್ಪಿಸಿಕೊಳ್ಳಲು ಒಂದು ವಾರದೊಳಗೆ ಪರಿಹಾರ ನೀಡುವುದಾಗಿ ತಿಳಿಸಿದ್ದ ಕೇಂದ್ರ ಸರ್ಕಾರ ಈಗ 3454 ಕೋಟಿ ರೂ. ಪರಿಹಾರ ಮಾತ್ರ ಘೋಷಿಸಿದೆ. ರಾಜ್ಯದಲ್ಲಿ ಆಗಿರುವ ನಷ್ಟ ಅಪಾರವಾಗಿದ್ದು, ಕೂಡಲೇ ಉಳಿದ ಹಣವನ್ನು ನ್ಯಾಯ ಸಮ್ಮತವಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತೇನೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಇದನ್ನೂ ನೋಡಿ: ಮಂಗಳೂರು | ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರ ದಾಂಧಲೆ Janashakthi Media