ಕಾಂಗ್ರೆಸ್, ಎಸ್ಪಿ, ಆರ್‌ಜೆಡಿ, ಡಿಎಂಕೆ, ಸಿಪಿಐ ಮತ್ತು ಸಿಪಿಐ(ಎಂ), ಟಿಎಂಸಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಆದರೆ ಬಿಜೆಡಿ, ಜೆಡಿಯು, ವೈಎಸ್‌ಆರ್ ಕಾಂಗ್ರೆಸ್ ಸದಸ್ಯರು ವಿಧೇಯಕಕ್ಕೆ ಬೆಂಬಲ ಸೂಚಿಸಿದರು.
ಹೊಸದಿಲ್ಲಿ ಫೆ 11: ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ದೇಶದ 12 ಪ್ರಮುಖ ಬಂದರುಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡುವ ಬಂದರು ಪ್ರಾಧಿಕಾರ ವಿಧೇಯಕ-2020ಕ್ಕೆ ವಿಪಕ್ಷಗಳ ವಿರೋಧದ ನಡುವೆ ಅನುಮೋದನೆ ದೊರೆತಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಲೋಕಸಭೆಯಲ್ಲಿ ಅಂಗೀಕಾರ ಪಡೆದಿದ್ದ ವಿಧೇಯಕಕ್ಕೆ ಬುಧವಾರ ರಾಜ್ಯಸಭೆಯು ಅನುಮೋದನೆ ನೀಡಿದೆ. 84: 44 ಮತಗಳ ಅಂತರದಲ್ಲಿ ವಿಧೇಯಕ ಪಾಸಾಗಿದೆ.
ಮಂಗಳೂರಿನ ಪಣಂಬೂರಿ ನಲ್ಲಿರುವ ನವಮಂಗಳೂರು ಬಂದರು ಮಂಡಳಿ (ಎನ್‌ಎಂಪಿಟಿ) ಸೇರಿದಂತೆ ದೇಶದ 12 ಪ್ರಮುಖ ಬಂದರುಗಳಿಗೆ ಹೆಚ್ಚಿನ ಸ್ವಾಯತ್ತೆ ನೀಡಲು ಬಿಜೆಪಿ ಪ್ರಯತ್ನವನ್ನು ನಡೆಸಿತ್ತು, ರಾಜ್ಯಸಭೆಯಲ್ಲಿ ಬಿಜೆಪಿ ಬಲ ಹೆಚ್ಚಿದ್ದರಿಂದ ಬಂದರು ಪ್ರಾಧಿಕಾರ ವಿಧೆಯಕ 2020 ಕ್ಕೆ ಅನುಮೋದನೆ ಸಿಕ್ಕಂತಾಗಿದೆ. ಸರಕಾರದ ನಡೆ ಖಂಡನೀಯವಾಗಿದ್ದು ಎಲ್ಲವನ್ನೂ ಕಾರ್ಪೊರೇಟ್ ಕಂಪನಿಗಳಿಗೆ ರತ್ನಗಂಬಳಿ ಹಾಸಿ ಕರೆಯುತ್ತಿದೆ ಎಂದು ವಿಪಕ್ಷಗಳು ತೀವ್ರವಾಗಿ ಕಾಯ್ದೆಯನ್ನು ವಿರೋಧಿಸಿವೆ. ಕಾಂಗ್ರೆಸ್, ಎಸ್ಪಿ, ಆರ್‌ಜೆಡಿ, ಡಿಎಂಕೆ, ಸಿಪಿಐ ಮತ್ತು ಸಿಪಿಐ(ಎಂ) ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಆದರೆ ಬಿಜೆಡಿ, ಜೆಡಿಯು, ವೈಎಸ್‌ಆರ್ ಕಾಂಗ್ರೆಸ್ ಸದಸ್ಯರು ವಿಧೇಯಕಕ್ಕೆ ಬೆಂಬಲ ಸೂಚಿಸಿದರು.
ಯಾವುದೇ ಬಂದರುಗಳನ್ನು ಖಾಸಗೀಕರಣ ಮಾಡುವ ಉದ್ದೇಶವನ್ನು ವಿಧೇಯಕ ಹೊಂದಿಲ್ಲ. ಬದಲಿಗೆ ಖಾಸಗಿ ಬಂದರುಗಳೊಂದಿಗೆ ಸ್ಪರ್ಧಿಸಲು ದೇಶದ ಪ್ರಮುಖ ಪೋರ್ಟ್‌ಗಳನ್ನು ವಿಶ್ವ ದರ್ಜೆಯ ಮೂಲಸೌಕರ್ಯಗಳೊಂದಿಗೆ ಸಜ್ಜುಗೊಳಿಸಲು ನೆರವಾಗಲಿದೆ. ಅವುಗಳ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ತರಲು ಸಾಧ್ಯವಾಗಲಿದೆ ಎಂದು ಬಂದರು, ಶಿಪ್ಪಿಂಗ್ ಹಾಗೂ ಜಲಮಾರ್ಗಗಳ ಸಚಿವ ಮನ್ಸುಖ್ ಮಾಂಡವಿಯಾ ಬಂದರು ಕಾಯ್ದೆ 2020 ನ್ನು ಸಮರ್ತಿಸಿಕೊಂಡರು. ಸಚಿವರ ಮಾತಿಗೆ ವಿಪಕ್ಷಗಳು ಪ್ರತಿರೋಧವನ್ನು ತೋರಿದರು, ವಿರೋಧದ ನಡುವೆ ಕಾಯ್ದೆಗೆ ಅನುಮೋದನೆ ಪಡೆಯಲಾಯಿತು.
ಇದನ್ನೂ ಓದಿ : ಆದಾನಿಯನ್ನು ತಡೆಯಿರಿ, ಇಲ್ಲವಾದಲ್ಲಿ ಕುಟ್ಟಿಪಳ್ಳಿ ದ್ವೀಪ ನಾಶವಾಗಲಿದೆ – ತಮಿಳರ ಆಗ್ರಹ
ದೇಶದ ಪ್ರಮುಖ ಬಂದರುಗಳನ್ನು ವಿಶ್ವ ದರ್ಜೆಯ ಮೂಲಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸುವುದು, ಟ್ರಸ್ಟ್ ಬದಲು ಪ್ರಾಧಿಕಾರ ರಚಿಸಿ ನಿರ್ವಹಣೆಯಲ್ಲಿ ಹೆಚ್ಚಿನ ಸ್ವಾಯತ್ತತೆ ನೀಡುವುದು ವಿಧೇಯಕದ ತಿರುಳಾಗಿದೆ. ಆದರೆ ”ಇದು ಬಂದರುಗಳ ಖಾಸಗೀಕರಣಕ್ಕೆ ಅವಕಾಶ ಮಾಡಿಕೊಡಲಿದೆ. ರಕ್ಷಣಾ ಸರಕುಗಳ ನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಬಂದರುಗಳ ಖಾಸಗೀಕರಣದಿಂದ ರಾಷ್ಟ್ರದ ಭದ್ರತೆಗೆ ಅಪಾಯ ಎದುರಾಗಲಿದೆ ಅಲ್ಲದೇ ಲಾಭದಾಯಕ ‘ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ’ ಸಂಸ್ಥೆಯನ್ನು ಕೊನೆಗೆ ದಿವಾಳಿಗೆ ತಳ್ಳಲಿದೆ. ಭೂ ಬಳಕೆಯ ಮೇಲೆ ರಾಜ್ಯಗಳ ಅಧಿಕಾರವನ್ನು ದುರ್ಬಲಗೊಳಿಸಲಿದೆ. ದೇಶದ ಸ್ವತ್ತುಗಳು ಖಾಸಗಿಯವರ ಪಾಲಾಗಲು ಅವಕಾಶ ಮಾಡಿಕೊಡಲಿದೆ,” ಎಂದು ಸಿಪಿಐಎಂ ಸದಸ್ಯ ಎಲಮರನ್ ಕರೀಂ ಆತಂಕ ವ್ಯಕ್ತಪಡಿಸಿದರು.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
12 ಬಂದರುಗಳು ಯಾವುವು? : ನವ ಮಂಗಳೂರು, ದೀನ್‌ದಯಾಳ್ (ಹಿಂದಿನ ಕಾಂಡ್ಲಾ ಬಂದರು), ಮುಂಬಯಿ, ಜವಾಹರಲಾಲ್ ನೆಹರೂ ಪೋರ್ಟ್ ಟ್ರಸ್ಟ್, ಮರ್ಮುಗಾವೊ, ಕೊಚ್ಚಿ, ಚೆನ್ನೈ, ಕಾಮರಾಜಾರ್(ಹಿಂದಿನ ಎನ್ನೋರ್ ಬಂದರು) ವಿ.ಒ. ಚಿದಂಬರನಾರ್, ವಿಶಾಖಪಟ್ಟಣಂ, ಪಾರಾದೀಪ್ ಮತ್ತು ಕೊಲ್ಕೊತಾದ ಹಲ್ದಿಯಾ ಬಂದರು. ನವ ಮಂಗಳೂರು ಬಂದರನ್ನು ಖಾಸಗೀಕರಣ ಮಾಡದಂತೆ ಅನೇಕರು ಹಿಂದಿನಿಂದಲೂ ವಿರೋಧಿಸುತ್ತಾ ಬರುತ್ತಿದ್ದಾರೆ, ಭಾರತದ 7ನೇ ಅತಿದೊಡ್ಡ ಪ್ರತಿಷ್ಠಿತ ಬಂದರಾಗಿದೆ ಅದಲ್ಲದೆ ಕರ್ನಾಟಕದ ಏಕೈಕ ಪ್ರಮುಖ ದೊಡ್ಡ ಬಂದರು ಇದಾಗಿದೆ.ಇದರ ನಿರ್ಮಾಣದ ಸಮಯದಲ್ಲಿ ಹಲವಾರು ಕಷ್ಟ ನಷ್ಟಗಳನ್ನು ಅನುಭವಿಸಿ ಇದಕ್ಕೋಸ್ಕರ ಸ್ಥಳ ಬಿಟ್ಟು ಕೊಟ್ಟದ್ದು ಇಲ್ಲಿಯ ಸ್ಥಳೀಯ ನಾಗರೀಕರಾಗಿದ್ದಾರೆ.ಒಂದು ವೇಳೆ ಖಾಸಗೀಕರಣ ಮಾಡಿದ್ದೇ ಆದಲ್ಲಿ ಶೇಕಡಾ ಎಂಬತರಷ್ಟು ಪರಿಣಾಮ ಬೀಳುವುದು ಸ್ಥಳೀಯರಿಗೆ ಆಗಿರುತ್ತದೆ. ಇದನ್ನು ವಿರೋಧಿಸಿ ಪ್ರತಿಭಟನೆ ರೂಪಿಸುವುದಾಗಿ ಜನಪರ ಸಂಘಟನೆಗಳು ಎಚ್ಚರಿಸಿವೆ.