ಬೆಂಗಳೂರು ಫೆ 04 : ಕೊರೊನಾ ನಿರ್ವಹಣೆಗಾಗಿ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಖರ್ಚು ಮಾಡಿರುವ ಒಟ್ಟು ಹಣ ರೂ.2,300 ಕೋಟಿ. ರಾಜ್ಯದ ಬಜೆಟ್ ಗಾತ್ರ ರೂ.1,96,000 ಕೋಟಿ, ರೂ.1,60,000 ಕೋಟಿ ರಾಜಸ್ವ ಸಂಗ್ರಹವಾಗಿದೆ, ರೂ.63,000 ಕೋಟಿ ಸಾಲ ಮಾಡಲಾಗ್ತಿದೆ. ಆದರೂ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದ ಬಳಿ ಹಣವಿಲ್ಲ ಅಂದರೆ ಹೇಗೆ? ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸರ್ಕಾರದಿಂದ ನಮಗೆ ಬರಬೇಕಾದ ತೆರಿಗೆ ಸಂಗ್ರಹದ ಪಾಲಲ್ಲಿ ಶೇ.30.99 ಬಂದಿಲ್ಲ, ಕೇಂದ್ರದ ಪಾಲಿನ ಅನುದಾನದಲ್ಲಿ 29.25% ಬಂದಿಲ್ಲ, 15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ್ದ ರೂ.5,495 ಕೋಟಿ ವಿಶೇಷ ಅನುದಾನವನ್ನು ವಿತ್ತ ಸಚಿವರು ತಿರಸ್ಕರಿಸಿದ್ದಾರೆ. ರಾಜ್ಯಕ್ಕೆ ಇಷ್ಟೆಲ್ಲಾ ಅನ್ಯಾಯ ಆಗ್ತಿದ್ರು ಮುಖ್ಯಮಂತ್ರಿಗಳು ಪ್ರಧಾನಿಗಳ ಎದುರು ಒಂದೂ ಮಾತನಾಡಲ್ಲ? ಅಮಿತ್ ಶಾ ಅವರು ಮೊನ್ನೆ ನಮ್ಮ ರಾಜ್ಯಕ್ಕೆ ಬಂದಾಗ ಹಿಂದಿನ ಯು.ಪಿ.ಎ ಸರ್ಕಾರದ ಎರಡು ಪಟ್ಟು ಅನುದಾನವನ್ನು ನಾವು ಕರ್ನಾಟಕಕ್ಕೆ ಕೊಟ್ಟಿದ್ದೀವಿ ಅಂತ ಸುಳ್ಳು ಹೇಳಿದರು. ನಮ್ಮ ರಾಜ್ಯದಿಂದ ಕೇಂದ್ರಕ್ಕೆ ರೂ.2.20 ಲಕ್ಷ ಕೋಟಿ ತೆರಿಗೆ ರೂಪದಲ್ಲಿ ಸಂಗ್ರಹವಾಗುತ್ತೆ, ಇದರಲ್ಲಿ ಕೇಂದ್ರ ನಮಗೆ ವಾಪಸು ಕೊಡ್ತಿರೋದು 10-15% ಮಾತ್ರ. ಕೇಂದ್ರ ಸರ್ಕಾರ 2013-14ರಲ್ಲಿ ಪೆಟ್ರೋಲ್ ಮೇಲೆ 9.29 ರೂಪಾಯಿ ಹಾಗೂ ಡೀಸೆಲ್ ಮೇಲೆ 3.40 ರೂಪಾಯಿ ಹೆಚ್ಚುವರಿ ಅಬಕಾರಿ ಸುಂಕ ವಿಧಿಸುತ್ತಿತ್ತು, ಇಂದು ಪೆಟ್ರೋಲ್ ಮೇಲೆ 32.98 ರೂಪಾಯಿ ಹಾಗೂ ಡೀಸೆಲ್ ಮೇಲೆ 31.84 ರೂಪಾಯಿ ಹೆಚ್ಚುವರಿ ಅಬಕಾರಿ ಸುಂಕ ವಿಧಿಸಲಾಗುತ್ತಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ ಎಂದರು.
ನಮ್ಮ ಸರ್ಕಾರ ಆಡಳಿತದಲ್ಲಿದ್ದಾಗ ಪ್ರತೀ ವರ್ಷ ಸರಾಸರಿ 3 ಲಕ್ಷ ಮನೆಗಳ ನಿರ್ಮಾಣ ಮಾಡಲಾಗುತ್ತಿತ್ತು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಮೇಲೆ 2019-20 ರಲ್ಲಿ 1,32,093 ಮನೆಗಳು ಹಾಗೂ 2020-21 ರಲ್ಲಿ 72,699 ಮನೆಗಳ ನಿರ್ಮಾಣವಾಗಿದೆ. ಅಂದರೆ ವರ್ಷಕ್ಕೆ ಸರಾಸರಿ ಕೇವಲ ಒಂದು ಲಕ್ಷ ಮನೆಗಳನ್ನಷ್ಟೇ ನಿರ್ಮಾಣ ಮಾಡಲಾಗುತ್ತಿದೆ.
ರಾಜ್ಯಪಾಲರ ಭಾಷಣದಲ್ಲಿ ಪ್ರಸಕ್ತ ವರ್ಷ ರೂ.30,000 ಕೋಟಿ ವಾಣಿಜ್ಯ ತೆರಿಗೆ ಸಂಗ್ರಹವಾಗಿದೆ, ರೂ.16,000 ಕೋಟಿ ಅಬಕಾರಿ ಸುಂಕ ಸಂಗ್ರಹವಾಗಿದೆ ಎಂದು ಸರ್ಕಾರ ಹೇಳಿಸಿದೆ. ಇದರ ಜೊತೆಗೆ ಸಾಲವನ್ನೂ ಮಾಡ್ತಿದಾರೆ, ಆದರೂ ನಮ್ಮತ್ರ ದುಡ್ಡಿಲ್ಲ ಅಂದರೆ ಹೇಗೆ? ಇದನ್ನು ಸದೃಢ ಆರ್ಥಿಕ ನಿರ್ವಹಣೆ ಅಂತ ಹೇಳ್ತಾರಾ?
2019-20 ನೇ ಸಾಲಿನಲ್ಲಿ ಸಾಲವೂ ಸೇರಿದಂತೆ ರಾಜ್ಯದ ಬೊಕ್ಕಸಕ್ಕೆ ಒಟ್ಟು ಸ್ವೀಕೃತಿ ರೂ.1,60,072 ಕೋಟಿ. ಇದು 2020-21 ರಲ್ಲಿ ಸ್ವಲ್ವ ಏರಿಕೆಯಾಗಿ ರೂ. 1,70,100 ಕೋಟಿ ಸಂಗ್ರಹವಾಗಿದೆ. ಯಾವುದಕ್ಕೂ ಹಿಂದೆ ಖರ್ಚು ಮಾಡಿಲ್ಲ, ಈಗ ಖರ್ಚು ಮಾಡೋಕೂ ಹಣ ಇಲ್ಲ ಅಂದರೆ ಈ ಹಣವೆಲ್ಲ ಏನಾಯ್ತು ಅಂತ ಜನರಿಗೆ ಗೊತ್ತಾಗಬೇಕಲ್ವ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ : ಕೇಂದ್ರ ಬಜೆಟ್ 2021 : ಜನರಿಂದ ಹಣ ಕಿತ್ತುಕೊಳ್ಳುವ ಬಜೆಟ್
ನಮ್ಮ ಸರ್ಕಾರದ ಅವಧಿಯಲ್ಲಿ ಕೆಪಿಎಸ್‌ಸಿ ಮೂಲಕ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸುಮಾರು 9,000 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ, ಪರೀಕ್ಷೆ ನಡೆಸಿತ್ತು. ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಬಿಜೆಪಿ ಸರ್ಕಾರ ನೇಮಕಾತಿಪತ್ರ ನೀಡದೆ ಅನ್ಯಾಯ ಮಾಡುತ್ತಿದೆ.
2020ರ ನವೆಂಬರ್ ತಿಂಗಳಿನಲ್ಲಿ ನಾನು ವಿದ್ಯುತ್ ದರಯೇರಿಕೆಗೆ ಸಂಬಂಧಿಸಿದಂತೆ ಇಂಧನ ಇಲಾಖೆಗೆ ಪತ್ರ ಬರೆದಿದ್ದೆ. ಅದಕ್ಕವರು ಈ ವರ್ಷ ಇಲಾಖೆಗೆ ರೂ.7,979 ಕೋಟಿ ನಷ್ಟವಾಗಿದ್ದು, ಅನಿವಾರ್ಯವಾಗಿ ಬೆಲೆ ಏರಿಕೆ ಮಾಡ್ತಿದ್ದೀವಿ ಅಂತ ಉತ್ತರಿಸಿದ್ದರು. ಬೆಸ್ಕಾಂ ವ್ಯಾಪ್ತಿಯಲ್ಲಿ 25.42% ಹಾಗೂ ರಾಜ್ಯದ ಇತರೆಡೆ 17.15% ವಿದ್ಯುತ್ ದರ ಏರಿಕೆಯಾಗಿದೆ. ನಮ್ಮ ರಾಜ್ಯದಲ್ಲಿ ಉತ್ಪಾದನೆಯಾಗುವ ವಿದ್ಯುತ್ ಪ್ರಮಾಣ 30,000 ಮೆಗಾವ್ಯಾಟ್, ನಮ್ಮಲ್ಲಿರುವ ಬೇಡಿಕೆ ಪ್ರಮಾಣ 8000 ದಿಂದ 10,500 ಮೆಗಾವ್ಯಾಟ್ ಇದೆ. ನಾವೇ ವಿದ್ಯುತ್ ಅನ್ನು ಮಾರುವಂತಹ ಸದೃಢ ಸ್ಥಿತಿಯಲ್ಲಿ ಇದ್ದೇವೆ, ಹೀಗಿದ್ದಾಗ ನಷ್ಟ ಆಗೋಕೆ ಹೇಗೆ ಸಾಧ್ಯ? ಸರಕಾರ ಇದಕ್ಕೆ ಉತ್ತರಿಸಬೇಕು ಎಂದರು.
2013-14 ರಲ್ಲಿ ಕರ್ನಾಟಕದ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 14,825 ಮೆಗಾವ್ಯಾಟ್ ಇತ್ತು. ನಮ್ಮ ಸರ್ಕಾರ ವಿದ್ಯುತ್ ಸ್ವಾವಲಂಬನೆ ಸಾಧಿಸಲು ಕೈಗೊಂಡ ಕ್ರಮಗಳ ಫಲವಾಗಿ ಉತ್ಪಾದನಾ ಸಾಮರ್ಥ್ಯ 26,025 ಮೆಗಾವ್ಯಾಟ್ ಗೆ ಹೆಚ್ಚಳವಾಯಿತು. ಪ್ರಸ್ತುತ ನಮ್ಮ ರಾಜ್ಯದಲ್ಲಿ 30,098 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ.
ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದ್ರೆ ನಮ್ಮ ರಾಜ್ಯದಲ್ಲಿ ವಿದ್ಯುತ್ ದರ ಸಾಕಷ್ಟು ಹೆಚ್ಚಿದೆ. ದೆಹಲಿಯಲ್ಲಿ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡಿ, ನಂತರದ ಬಳಕೆಗೆ ಯುನಿಟ್ ಗೆ 4.50 ರೂಪಾಯಿ ದರ ವಿಧಿಸಲಾಗುತ್ತಿದೆ. ಕೇರಳದಲ್ಲಿ ಯುನಿಟ್ ಒಂದಕ್ಕೆ ರೂ.3.15 ಇದೆ. ತಮಿಳುನಾಡಿನಲ್ಲಿ 100 ಯುನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗ್ತಿದೆ, 101 ರಿಂದ 200 ಯುನಿಟ್ ವರೆಗೆ ಪ್ರತಿ ಯುನಿಟ್ ಗೆ 3 ರೂಪಾಯಿ ಇದೆ. ನಮ್ಮ ರಾಜ್ಯದಲ್ಲಿ ಮೊದಲ 30 ಯುನಿಟ್ ಗೆ ರೂ.4, ನಂತರ 100 ಯುನಿಟ್ ವರಗೆ ರೂ.5.45, ನಂತರ 100 ರಿಂದ 200 ರ ವರೆಗೆ ಪ್ರತಿ ಯುನಿಟ್ ಗೆ ರೂ.7 ದರ ವಿಧಿಸಲಾಗುತ್ತಿದೆ. ನಮ್ಮ ರಾಜ್ಯಕ್ಕೆ ಅಗತ್ಯವಿರುವ ವಿದ್ಯುತ್ ಬಿಟ್ಟು ಹೊರ ರಾಜ್ಯಗಳಿಗೆ ಮಾರಾಟ ಮಾಡಿ ಲಾಭ ಗಳಿಸಲು ಅಗತ್ಯವಿರುವಷ್ಟು ವಿದ್ಯುತ್ ಅನ್ನು ನಾವೇ ಉತ್ಪಾದನೆ ಮಾಡುತ್ತಿದ್ದೇವೆ. ಆದರೂ ಕೇಂದ್ರ ಘಟಕಗಳಿಂದ ವಿದ್ಯುತ್ ಖರೀದಿ ಮಾಡುವುದನ್ನು ನಿಲ್ಲಿಸಿಲ್ಲ. ಇದರಿಂದ ಸಹಜವಾಗಿಯೇ ಅನಗತ್ಯ ಆರ್ಥಿಕ ಹೊರ ಬೀಳಲಿದೆ ಎಂದರು.
ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಅಂತ ಘೋಷಿಸಿದ್ದೇ ರಾಜ್ಯ ಸರ್ಕಾರದ ದೊಡ್ಡ ಸಾಧನೆ. ಆ ಭಾಗದ ಅಭಿವೃದ್ಧಿ ಕಾರ್ಯಗಳು ಮಾತ್ರ ಆಗಿಲ್ಲ. 2020-21 ನೇ ಸಾಲಿನಲ್ಲಿ ರೂ.1,132 ಕೋಟಿ ವೆಚ್ಚದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿ, ರೂ.524 ಕೋಟಿ ಬಿಡುಗಡೆ ಮಾಡಲಾಗಿದೆ. ಆದರೆ ನಯಾಪೈಸೆ ಅಭಿವೃದ್ಧಿ ಕೆಲಸ ಆಗಿಲ್ಲ. ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಮಾಡುವ ಬಗ್ಗೆ ವರದಿ ನೀಡಲು ಗೊ.ರು. ಚನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿದ್ದು ನಮ್ಮ ಸರ್ಕಾರ. ಎಸ್.ಸಿ.ಪಿ ಯೋಜನೆಯಡಿ ಲಭ್ಯವಿರುವ ರೂ.20,101 ಕೋಟಿ ಅನುದಾನದಲ್ಲಿ 2020ರ ಡಿಸೆಂಬರ್ ವರೆಗೆ ರೂ.8,484 ಕೋಟಿ ಮಾತ್ರ ಖರ್ಚಾಗಿದೆ. ಟಿ.ಎಸ್.ಪಿ ಯೋಜನೆಯಡಿ ಲಭ್ಯವಿರುವ ರೂ.8,755 ಕೋಟಿ ಅನುದಾನದಲ್ಲಿ ರೂ.3,188 ಕೋಟಿ ಮಾತ್ರ ಖರ್ಚಾಗಿದೆ. ಅಂದರೆ ಅರ್ಧಕ್ಕಿಂತ ಕಡಿಮೆ ಅನುದಾನ ಬಳಕೆಯಾಗಿದೆ.
ಕುರಿ, ಮೇಕೆ, ಹಸು ಹೀಗೆ ಜಾನುವಾರುಗಳು ಸತ್ತಾಗ ಪರಿಹಾರ ನೀಡುವ ಸಲುವಾಗಿ ನಮ್ಮ ಸರ್ಕಾರ ಅನುಗ್ರಹ ಯೋಜನೆಯನ್ನು ಜಾರಿಗೆ ತಂದಿತ್ತು, ಈ ಯೋಜನೆಯನ್ನು ಬಿಜೆಪಿ ಸರ್ಕಾರ ಕೈಬಿಟ್ಟಿದೆ. ಇದರ ಜೊತೆಗೆ ವಿದ್ಯಾಸಿರಿ, ಶೂಭಾಗ್ಯ, ಶಾದಿಭಾಗ್ಯ, ಕೃಷಿಭಾಗ್ಯ ಯೋಜನೆಯನ್ನು ನಿಲ್ಲಿಸಲಾಗಿದೆ. ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ನಡೆಸಿದ ಸಮೀಕ್ಷೆಯ ಪ್ರಕಾರ ಕೊರೊನಾ ಕಾರಣದಿಂದಾಗಿ ಪೀಣ್ಯ ಕೈಗಾರಿಕಾ ಪ್ರದೇಶ ಒಂದರಲ್ಲೇ ಸುಮಾರು 15 ಲಕ್ಷ ಉದ್ಯೋಗ ನಷ್ಟ ಸಂಭವಿಸಿದೆ ಹಾಗೂ ಉತ್ಪಾದನೆಯ ಶೇ.70 ರಷ್ಟು ಕಡಿಮೆಯಾಗಿದೆ. ಇದರ ಪುನಶ್ಚೇತನಕ್ಕೆ ಸರ್ಕಾರ ಯಾವ ಕ್ರಮವನ್ನೂ ಕೈಗೊಳ್ಳದಿರುವುದು ಅತ್ಯಂತ ಬೇಸರದ ಸಂಗತಿ. ಜಿಲ್ಲೆಗೊಂದರಂತೆ ತಲಾ ರೂ.324 ಕೋಟಿ ವೆಚ್ಚದಲ್ಲಿ ರಾಜ್ಯದಲ್ಲಿ ನಾಲ್ಕು ಮೆಡಿಕಲ್ ಕಾಲೇಜು ನಿರ್ಮಾಣ ಮಾಡುವುದಾಗಿ ಸರ್ಕಾರ ಘೋಷಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಉತ್ತರ ಕರ್ನಾಟಕದ ಬಗ್ಗೆ ನೈಜ ಪ್ರೀತಿಯಿದ್ದರೆ ಬಾಗಲಕೋಟೆ ಜಿಲ್ಲೆಗೂ ಒಂದು ಮೆಡಿಕಲ್ ಕಾಲೇಜು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.