ಉನ್ನತ ಶಿಕ್ಷಣದ ಸೆಸ್ ಎಂದು ಬಾಚಿಕೊಂಡ 1 ಲಕ್ಷ ಕೋಟಿ ರೊಕ್ಕವನ್ನು ಮರಳಿ ಶಿಕ್ಷಣಕ್ಕೆ ವೆಚ್ಚ ಮಾಡಲೇ ಇಲ್ಲ. ಈಗ ಕೃಷಿ ಸೆಸ್ ಎಂದು ಹೇಳುತ್ತಿದ್ದಾರೆ. ಅದು ಎಲ್ಲಿಗೆ ಹೋಗಬಹುದು?!
ಕಳೆದ ವರ್ಷದ (2020-21) ಬಜೆಟ್ ವೆಚ್ಚ 34.50 ಲಕ್ಷ ಕೋಟಿ. ಈ ವರ್ಷದ (2021-22) ಬಜೆಟ್ ವೆಚ್ಚ 34.82 ಲಕ್ಷ ಕೋಟಿ. ಅಂದರೆ ಕಳೆದ ವರ್ಷಕ್ಕಿಂತ 0.92% ಮಾತ್ರ ಜಾಸ್ತಿ. ಕಳೆದ ವರ್ಷ (ಕೋವಿಡ್ ಪೂರ್ವದಲ್ಲಿ ) ಜಿಡಿಪಿ 4% ಇತ್ತು ಮತ್ತು ಕೋವಿಡ್ ನಂತರ ಅದು -7.7% ಗೆ ಕುಸಿಯಿತು. ಆದರೆ ಈ ಮೋದಿ ಸರಕಾರ ವು ಈ ವರ್ಷದ ಜಿಡಿಪಿ ಗುರಿ 11.1% ಸಾದಿಸುತ್ತೇವೆ ಎಂದು ಜುಮ್ಲಾ ಬಿಡುತ್ತಿದ್ದಾರೆ. ಅಂದರೆ ಇವರ ಪ್ರಕಾರ ಕಳೆದ ವರ್ಷಕ್ಕೂ ಮತ್ತು ಈ ವರ್ಶಕ್ಕೂ ಬಜೆಟ್ ವೆಚ್ಚ ಕೇವಲ 0.92% ರಶ್ಟು ಹೆಚ್ಚಾಗಿದೆ, ಆದರೆ ಜಿಡಿಪಿ ಮಾತ್ರ 142% ಹೆಚ್ಚಾಗುತ್ತದೆ!!! ಇದು ಹೇಗೆ ಎಂದು ಪ್ರಶ್ನಿಸುವವನೇ ಮೂರ್ಖ!!! ವಿತ್ತೀಯ ಕೊರತೆ 6.6% ಎಂದು ಅಂದಾಜಿಸಿದ್ದಾರೆ. ಇದಕ್ಕೆ ನೇರವಾಗಿ ಕೋವಿಡ್ ಸಾಂಕ್ರಾಮಿಕ ಕಾಯಿಲೆಯನ್ನು ಹೊಣೆಗಾರಿಕೆ ಮಾಡಿರುವುದು ಸರಕಾರವು ತನ್ನ ವೈಫಲ್ಯದಿಂದ ನುಣಿಚಿಕೊಂಡಂತೆ.
ಶೇ. 1% ಪ್ರಮಾಣದಲ್ಲಿರುವ ಅತಿ ಶ್ರೀಮಂತರಿಗೆ ಶೇ. 2% ಪ್ರಮಾಣದ ಸಂಪತ್ತು ತೆರಿಗೆ ವಿದಿಸಿ ಆ ಮೂಲಕ ನೇರ ತೆರಿಗೆ ಸಂಗ್ರಹಿಸಬಹುದಾಗಿತ್ತು. ಆದರೆ ಈ ಕುರಿತು ಪ್ರಸ್ತಾಪವೇ ಇಲ್ಲ. ಬದಲಿಗೆ ಈ ಬಾರಿಯ ಬಜೆಟ್ ನ ಪ್ರಕಾರ ಪರೋಕ್ಷ ತೆರಿಗೆ ಪ್ರಮಾಣ ಮತ್ತಶ್ಟು ಹೆಚ್ಚಲಿದ್ದು , ನೇರ ತೆರಿಗೆ ಪ್ರಮಾಣ ಪರೋಕ್ಷ ತೆರಿಗೆಗಿಂತ ತುಂಬಾ ಕಡಿಮೆಯಾಗಲಿದೆ. ಅಂದರೆ ಅತಿ ಶ್ರೀಮಂತರು ಮತ್ತಶ್ಟು ಶ್ರೀಮಂತರಾಗುತ್ತಾರೆ, ಬಡವರು ಮತ್ತಶ್ಟು ಬಡವರಾಗುತ್ತಾರೆ. ಯಾವುದೇ ದೇಶದ ಪರೋಕ್ಷ ತೆರಿಗೆಯು ನೇರ ತೆರಿಗೆಗಿಂತ ಹೆಚ್ಚಾಗಿದ್ದರೆ ಆ ದೇಶವೆಂದೂ ಉದ್ದಾರವಾಗುವುದಿಲ್ಲ. ಭಾರತವೂ ಸಹ.
ಈ ಬಜೆಟ್ ನ ಪ್ರಸ್ತಾಪದ ಪ್ರಕಾರ ರೈಲ್ವೆ, ಅರಣ್ಯ, ಕೃಷಿ ಇತ್ಯಾದಿ ಸರಕಾರಿ ಇಲಾಖೆಗಳ ಜಮೀನು ಖಾಸಗಿಯವರ ಪಾಲಾಗಲಿದೆ. ಬಡವರ ಬದುಕು ಮತ್ತಶ್ಟು ಹದಗೆಡಲಿದೆ. 2018ರ ಹಣಕಾಸು ವರ್ಷದಲ್ಲಿ ಶಿಕ್ಷಣ, ಆರೋಗ್ಯ ಒಳಗೊಂಡಂತೆ 42 ಸೆಸ್ ಗಳನ್ನು ಜಡಿದ ಮೋದಿ ಸರಕಾರ ಆ ಮೂಲಕ 2.5 ಲಕ್ಷ ಕೋಟಿಯನ್ನು ಸಂಗ್ರಹ ಮಾಡಿತ್ತು. ಆದರೆ ಆ ಮೊತ್ತವನ್ನು ಮರಳಿ ಸಂಬಂದಪಟ್ಟ ಇಲಾಖೆಗಳ ಅಬಿವೃದ್ದಿಗೆ ವೆಚ್ಚ ಮಾಡಲೇ ಇಲ್ಲ. ಉದಾಹರಣೆಗೆ ಸ್ವಚ್ಚ ಭಾರತ ಸೆಸ್ ಎಂದು ಪಡೆದ ಹಣದ 4891 ಕೋಟಿ ಹಣವನ್ನು ಆ ಉದ್ದೇಶಕ್ಕೆ ಬಳಸಲಿಲ್ಲ. 2011ರಿಂದ ರಸ್ತೆ ಸೆಸ್ ಎಂದು ಹಣ ಪಡೆದು 72,726 ಕೋಟಿ ಮೊತ್ತವನ್ನು ಮರಳಿ ಆ ಉದ್ದೇಶಕ್ಕೆ ಬಳಸಲಿಲ್ಲ. 2007 ರಿಂದ 2018ರ ವರೆಗೆ ಸೆಕೆಂಡರಿ ಮತ್ತು ಉನ್ನತ ಶಿಕ್ಷಣದ ಸೆಸ್ ಎಂದು ಬಾಚಿಕೊಂಡ 1 ಲಕ್ಷ ಕೋಟಿ ರೊಕ್ಕವನ್ನು ಮರಳಿ ಶಿಕ್ಷಣಕ್ಕೆ ವೆಚ್ಚ ಮಾಡಲೇ ಇಲ್ಲ. ಹಾಗಿದ್ದರೆ ಆ ಹಣ ಎಲ್ಲಿ ಹೋಯಿತು? ಕೇಳುವರಾರು? ಹೇಳುವರಾರು? ಇದು ಹಗಲು ದರೋಡೆ.
ಈ ಬಾರಿ ಕೃಷಿ ಸೆಸ್ ಎಂದು ಅನೇಕ ತೆರಿಗೆಗಳನ್ನು ಪ್ರಸ್ತಾಪಿಸಿದ್ದಾರೆ. ಆದರೆ ಅದರ ಹಣೆ ಬರಹವೂ ಸಹ ಅಷ್ಟೇನೆ. ಕೃಷಿ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ಸಂಗ್ರಹವಾಗುತ್ತದೆ, ಆದರೆ ಕೃಷಿಗೆ ನಯಾ ಪೈಸೆ ವೆಚ್ಚ ಮಾಡುವುದಿಲ್ಲ. ಇಂತಹ ವಂಚನೆ ಬೇರೆಲ್ಲಿಯೂ ಕಂಡು ಬರುವುದಿಲ್ಲ ಬಂಡವಾಳ ಹಿಂತೆಗೆತ ( disinvestment) ಕ್ಕೆ 1.75 ಲಕ್ಷ ಕೋಟಿ ಗುರಿಯನ್ನು ಪ್ರಸ್ತಾಪಿಸಿದ್ದಾರೆ. ಎರಡು ಸಾರ್ವಜನಿಕ ಬ್ಯಾಂಕ್, ಒಂದು ವಿಮಾ ಕಂಪನಿಗಳನ್ನು ಖಾಸಗೀಕರಣಗೊಳಿಸಲಾಗುವುದು. ವಿಮಾ ವಲಯದಲ್ಲಿನ ವಿದೇಶಿ ಬಂಡವಾಳ ಹೂಡಿಕೆಯನ್ನು (ಎಫ್ ಡಿಐ) ಯನ್ನು ಶೇ. 49 ರಿಂದ ಶೇ. 74ಕ್ಕೆ ಏರಿಸಲಾಗಿದೆ . ಇದು ಆತ್ಮ ನಿರ್ಭರ್ ಅಲ್ಲ ಆತ್ಮ ಬರ್ಬಾದ್ ಮಾಡುವುದು ಆಗಿದೆ.
‘ಯುಜಿಸಿ’ ರದ್ದುಗೊಳಿಸಿ ‘ಉನ್ನತ ಶಿಕ್ಷಣ ಆಯೋಗ’ (HEC) ರಚಿಸಲು ಈ ವರ್ಷ ಚಾಲನೆ ನೀಡುವುದಾಗಿ ಹೇಳಿದ್ದಾರೆ. ಶಿಕ್ಷಣದ ಕೇಂದ್ರೀಕರಣಕ್ಕೂ ಚಾಲನೆ. ಇನ್ನು ವಿಶ್ವ ವಿದ್ಯಾಲಯಗಳ ಧನ ಸಹಾಯ ಮತ್ತು ಅನುದಾನವು ನೇರವಾಗಿ ಕೇಂದ್ರ ಶಿಕ್ಷಣ ಇಲಾಖೆಯ ಸುಪರ್ದಿಗೆ ಹೋಗುತ್ತದೆ. ಅಲ್ಲಿಗೆ ಕತೆ ಮುಗೀತು. ಮುಂದಿನ 6 ವರ್ಷಗಳಲ್ಲಿ ದಲಿತ ಸಮುದಾಯದ ವಿದ್ಯಾರ್ಥಿಗಳಿಗಾಗಿ 35,219 ಕೋಟಿ ಹಣ ವೆಚ್ಚ ಮಾಡಲಾಗುವುದು ಎಂದು ಬಜೆಟ್ ಘೋಷಣೆ ಮಾಡಿದ್ದಾರೆ. ಇದು ಎಂತಹ ವಂಚನೆ, ಮಹಾಮೋಸವೆಂದರೆ, ಮೊದಲಿಗೆ ಇದು 1944 ರಿಂದ ಜಾರಿಯಲ್ಲಿರುವ ಪ.ಜಾತಿ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಯೋಜನೆ. ಇದರಲ್ಲಿ ಹೊಸದೇನೂ ಇಲ್ಲ.
ದೇಶದಾದ್ಯಂತ ಸುಮಾರು 57 ಲಕ್ಷ ಪ.ಜಾತಿ ವಿದ್ಯಾರ್ಥಿಗಳಿದ್ದಾರೆ ಎಂದು ಅಂದಾಜಿಸಿದರೆ ಒಬ್ಬ ವಿದ್ಯಾರ್ಥಿಗೆ ಪ್ರತಿ ವರ್ಶ 10,000 ರೂ, ಪ್ರತಿ ತಿಂಗಳು 858 ರೂ. ದೊರಕುತ್ತದೆ. ಈ ಕೇವಲ ಹಣದಿಂದ ಆ ವಿದ್ಯಾರ್ಥಿಗೆ ಯಾವ ಆರ್ಥಿಕ ಅನುಕೂಲವೂ ದೊರಕುವುದಿಲ್ಲ. ಮತ್ತು ಈ ಹಣವನ್ನು ಕೇಂದ್ರ ಮತ್ತು ರಾಜ್ಯಗಳು 60:40 ಅನುಪಾತದಲ್ಲಿ ಕೊಡಬೇಕು. ರಾಜ್ಯ ಎಂದಿಗೂ ಕೊಡುವುದಿಲ್ಲ, ಹಾಗಾಗಿ ಕೇಂದ್ರವೂ ಕೊಡುವುದಿಲ್ಲ. ಇದು ದಲಿತರಿಗೆ ಮಾಡುವ ವಂಚನೆಯಲ್ಲವೇ?