ರೂಪದರ್ಶಿಗೆ ಕಿರುಕುಳ : ಮೂವರು ಐಪಿಎಸ್‌‍ ಅಧಿಕಾರಿಗಳ ಅಮಾನತು

ಅಮರಾವತಿ : ಮುಂಬೈ ಮೂಲದ ಮಾಡೆಲ್‌ ಕಮ್‌ ನಟಿಯೊಬ್ಬರನ್ನು ಅಕ್ರಮವಾಗಿ ಬಂಧಿಸಿ, ಕಿರುಕುಳ ನೀಡಿದ ಆರೋಪದ ಮೇಲೆ ಆಂಧ್ರಪ್ರದೇಶದ ಮೂವರು ಐಪಿಎಸ್‌‍ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಡೈರೆಕ್ಟರ್‌ ಜನರಲ್‌ ಶ್ರೇಣಿಯ ಒಬ್ಬರು, ಇನ್ಸ್‌ಪೆಕ್ಟರ್‌ ಜನರಲ್‌ ಮತ್ತು ಸೂಪರಿಂಟೆಂಡೆಂಟ್‌ ಶ್ರೇಣಿಯ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಪಿಎಸ್‌‍ ಆರ್‌ ಆಂಜನೇಯುಲು (ಡಿಜಿ ಶ್ರೇಣಿ), ಕಂಠಿ ರಾಣಾ ಟಾಟಾ (ಐಜಿ ಶ್ರೇಣಿ) ಮತ್ತು ವಿಶಾಲ್‌ ಗುನ್ನಿ (ಎಸ್‌‍ಪಿ ಶ್ರೇಣಿ) ಅಮಾನತುಗೊಂಡ ಮೂವರು ಹಿರಿಯ ಅಧಿಕಾರಿಗಳಾಗಿದ್ದಾರೆ.

ವೈಎಸ್‌‍ ಜಗನ್‌ ಮೋಹನ್‌ ರೆಡ್ಡಿ ಸರ್ಕಾರದ ಆಡಳಿತದ ಇರುವಾಗ ನಟಿ ಪೊಲೀಸರಿಂದ ಕಿರುಕುಳಕ್ಕೊಳಗಾಗಿದ್ದಾರೆ ಎಂದು ಆರೋಪಿಸಿದ್ದರು. ಮುಂಬೈನ ಕಾರ್ಪೋರೇಷನ್‌ನ ಉನ್ನತ ಕಾರ್ಯನಿರ್ವಾಹಕರ ವಿರುದ್ಧ ತಾನು ಈ ಹಿಂದೆ ದಾಖಲಿಸಿದ ಪ್ರಕರಣವನ್ನು ಹಿಂದೆಗೆದುಕೊಳ್ಳಬೇಕು. ಇಲ್ಲದಿದ್ದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಪೊಲೀಸ್‌‍ ಅಧಿಕಾರಿಗಳು ಬೆದರಿಕೆ ಹಾಕಿದ್ದರು. ಅಲ್ಲದೇ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಬಂಧಿಸಿದ್ದರು ಎಂದು ನಟಿ ಆರೋಪಿಸಿದ್ದರು.

ಆಂಧ್ರಪ್ರದೇಶ ಪೊಲೀಸರು ಆರೋಪಗಳ ವಿಚಾರಣೆ ನಡೆಸಿದ್ದು, ಅಧಿಕಾರಿಗಳ ವಿರುದ್ಧ ಕರ್ತವ್ಯ ಲೋಪ ಮತ್ತು ದುರ್ನಡತೆ ಆರೋಪದಡಿ ಅಮಾನತು ಆದೇಶ ಹೊರಡಿಸಲಾಗಿದೆ. ಅಖಿಲ ಭಾರತ ಸೇವೆಗಳ (ಶಿಸ್ತು ಮತ್ತು ಮೇಲನವಿ) ನಿಯಮಗಳು, 1969 ರ ನಿಯಮ 3 (1)ರಡಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಗ ರಾಜ್ಯ ಗುಪ್ತಚರ ಮುಖ್ಯಸ್ಥರಾಗಿದ್ದ ಪಿಎಸ್‌‍ಆರ್‌ ಆಂಜನೇಯುಲು ಅವರು ಫೆಬ್ರವರಿ 2ರಂದು ಎಫ್‌ಐಆರ್‌ ದಾಖಲಿಸುವ ಮೊದಲೇ ಕಂಠಿ ರಾಣಾ ಟಾಟಾ ಮತ್ತು ವಿಶಾಲ್‌ ಗುನ್ನಿ ಅವರನ್ನು ಕರೆಸಿ ಜನವರಿ 31 ರಂದು ನಟನ ಬಂಧನಕ್ಕೆ ನಿರ್ದೇಶನ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು.

ಅಮಾನತು ಆದೇಶದಲ್ಲಿ ಆಂಜನೇಯುಲು ಅವರು ತಮ ಅಧಿಕಾರ ಮತ್ತು ಅಧಿಕೃತ ಸ್ಥಾನವನ್ನು ದುರುಪಯೋಗಪಡಿಸಿಕೊಂಡು, ಸಮರ್ಪಕ ಪರಿಶೀಲನೆಯಿಲ್ಲದೆ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಿದ್ದಾರೆ. ಇದು ಅಧಿಕಾರದ ದುರುಪಯೋಗ ಎಂದು ಆದೇಶದಲ್ಲಿ ಹೇಳಲಾಗಿದೆ.

 

Donate Janashakthi Media

Leave a Reply

Your email address will not be published. Required fields are marked *