ನವದೆಹಲಿ: ದೇಶದಲ್ಲಿರುವ ಹಾಲಿ ಕಾನೂನು ವ್ಯವಸ್ಥೆಯನ್ನು ಬದಲಿಸುವ ವಿವಾದಾತ್ಮಕ ಮೂರು ಪರಿಷ್ಕೃತ ಕ್ರಿಮಿನಲ್ ಕಾನೂನು ಮಸೂದೆಗಳನ್ನು ಲೋಕಸಭೆ ಬುಧವಾರ ಅಂಗೀಕರಿಸಿತು. ಕೇಂದ್ರ ಸರ್ಕಾರವು ಇದನ್ನು “ಭಾರತೀಯ ಚಿಂತನೆಯ ಆಧಾರದ ನ್ಯಾಯ ವ್ಯವಸ್ಥೆ” ಎಂದು ಸಮರ್ಥಿಸಿಕೊಂಡಿದೆ. ಈ ವಾರ ಅಮಾನತುಗೊಂಡಿದ್ದ 97 ಸಂಸದರ ಅನುಪಸ್ಥಿತಿಯಲ್ಲಿ ವಿವಾದಾತ್ಮಕ ಮಸೂದೆಗಳನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.
ಭಾರತೀಯ ನ್ಯಾಯ ಸಂಹಿತಾ ಮಸೂದೆಗಳು ಹಾಲಿ ದೇಶದಲ್ಲಿ ಇರುವ ಭಾರತೀಯ ದಂಡ ಸಂಹಿತೆಯ ಬದಲಿಯಾಗಿ ಜಾರಿಯಾಗಲಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮಸೂದೆಯು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಬದಲಿಗೆ ಮತ್ತು ಭಾರತೀಯ ಸಾಕ್ಷಿ ಸಂಹಿತೆಯು ಭಾರತೀಯ ಸಾಕ್ಷ್ಯ ಕಾಯ್ದೆಯ ಬದಲಿಗೆ ಜಾರಿಯಾಗಲಿದೆ.
ಇದನ್ನೂ ಓದಿ: ಮಾಜಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ವಿರುದ್ಧದ ಲಂಚ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್!
ಲೋಕಸಭೆಯಲ್ಲಿ ಮಸೂದೆಗಳನ್ನು ಮಂಡಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅಸ್ತಿತ್ವದಲ್ಲಿರುವ ಕ್ರಿಮಿನಲ್ ಕಾನೂನುಗಳು ವಸಾಹತುಶಾಹಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ. ಇದು ಶಿಕ್ಷಿಸುವ ಉದ್ದೇಶದಿಂದ ರಚಿಸಲಾಗಿದ್ದು, ನ್ಯಾಯವನ್ನು ನೀಡುವುದಿಲ್ಲ ಎಂದು ಹೇಳಿದ್ದಾರೆ. “ಭಾರತೀಯ ದಂಡ ಸಂಹಿತೆಯ ಉದ್ದೇಶವು ಶಿಕ್ಷೆಯನ್ನು ನೀಡುವುದೆ ಹೊರತು, ನ್ಯಾಯ ನೀಡುವುದಲ್ಲ; ಅದರ ಬದಲಿಗೆ ಭಾರತೀಯ ನ್ಯಾಯ (ಎರಡನೇ) ಸಂಹಿತಾ-2023 ಸದನದಿಂದ ಅಂಗೀಕಾರದ ನಂತರ ದೇಶದಲ್ಲಿ ಜಾರಿಗೆ ಬರಲಿದೆ” ಎಂದು ಅಮಿತ್ ಶಾ ಹೇಳಿದ್ದಾರೆ.
ಹೊಸ ಕ್ರಿಮಿನಲ್ ಕಾನೂನು ಮಸೂದೆಗಳು “ಸಂವಿಧಾನದ ಆತ್ಮ”ಕ್ಕೆ ಅನುಗುಣವಾಗಿದೆ ಎಂದು ಗೃಹ ಸಚಿವರು ಹೇಳಿದ್ದಾರೆ. “ಮೂರು ಹೊಸ ಮಸೂದೆಗಳು ಭಾರತೀಯ ಚಿಂತನೆಯ ಆಧಾರದ ಮೇಲೆ ನ್ಯಾಯ ವ್ಯವಸ್ಥೆಯನ್ನು ಸ್ಥಾಪಿಸಲು ಪ್ರಯತ್ನಿಸುತ್ತವೆ. ಮೂರು ಪ್ರಸ್ತಾವಿತ ಕ್ರಿಮಿನಲ್ ಕಾನೂನುಗಳು ಜನರನ್ನು ವಸಾಹತುಶಾಹಿ ಮನಸ್ಥಿತಿ ಮತ್ತು ಅದರ ಚಿಹ್ನೆಗಳಿಂದ ಮುಕ್ತಗೊಳಿಸುತ್ತವೆ” ಎಂದು ಲೋಕಸಭೆಯು ಧ್ವನಿ ಮತದ ಮೂಲಕ ಮಸೂದೆಗಳನ್ನು ಅಂಗೀಕರಿಸುವ ಮೊದಲು ಅವರು ಹೇಳಿದ್ದಾರೆ.
ಮೂರು ಪ್ರಸ್ತಾವಿತ ಕಾನೂನುಗಳು ‘ದೇಶದ್ರೋಹ’ ಕಾನೂನನ್ನು ರದ್ದು ಮಾಡಿದರೆಯಾದರೂ ‘ದೇಶದ ವಿರುದ್ಧದ ಅಪರಾಧಗಳು’ ಎಂಬ ಹೊಸ ವಿಭಾಗವನ್ನು ಪರಿಚಯಿಸಿದೆ ಎಂದು ಗೃಹ ಸಚಿವರು ಸದನಕ್ಕೆ ತಿಳಿಸಿದ್ದಾರೆ. ಅಲ್ಲದೆ, ಇದು ಭಯೋತ್ಪಾದನೆಯ ‘ಸ್ಪಷ್ಟ ವ್ಯಾಖ್ಯಾನ’ ಹೊಂದಿದೆ ಎಂದು ಹೇಳಿದ ಅವರು, “ಈ ಮಸೂದೆಯು ಗುಂಪು ಹತ್ಯೆಗೆ ಮರಣದಂಡನೆ ಶಿಕ್ಷೆ ನೀಡುತ್ತದೆ” ಎಂದು ಹೇಳಿದ್ದಾರೆ. ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಸೂದೆಗಳನ್ನು ಆರಂಭದಲ್ಲಿ ಲೋಕಸಭೆಯಲ್ಲಿ ಮಂಡಿಸಲಾಯಿತು ಆದರೆ ನಂತರ ಅದನ್ನು ಹಿಂಪಡೆದುಕೊಳ್ಳಲಾಗಿತ್ತು. ಕಳೆದ ವಾರ ಲೋಕಸಭೆಯಲ್ಲಿ ಪರಿಷ್ಕೃತ ವಿಧೇಯಕಗಳನ್ನು ಅಮಿತ್ ಶಾ ಮರು ಮಂಡಿಸಿದ್ದರು.
ವಿಡಿಯೊ ನೋಡಿ: ತಾಳ ಮದ್ದಳೆ | ರಾಮ ಧಾನ್ಯ ಚರಿತ್ರೆ Janashakthi Media