ಶೈಕ್ಷಣಿಕ ಸಹಾಯಧನ ಕಡಿತ, ಕಲ್ಯಾಣ ಮಂಡಳಿ ನಿಧಿ ವರ್ಗಾವಣೆ ಒತ್ತಾಯಿಸಿ 28-29 ರಂದು ಕಾರ್ಮಿಕರ ಪ್ರತಿಭಟನೆ

ಬೆಂಗಳೂರು: ಶೈಕ್ಷಣಿಕ ಸಹಾಯಧನ ಕಡಿತ ವಾಪಸ್ಸಾಗಬೇಕು ಹಾಗೂ ವೈದ್ಯಕೀಯ ತಪಾಸಣೆ ನೆಪದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಕಲ್ಯಾಣ ಮಂಡಳಿ ನಿಧಿ ವರ್ಗಾವಣೆ ನಿಲ್ಲಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘಟನೆಗಳ ಸಮನ್ವಯ ಸಮಿತಿಯು ನವೆಂಬರ್ 28-29 ಬೆಂಗಳೂರಿನಲ್ಲಿ ಕಾರ್ಮಿಕರ ಪ್ರತಿಭಟನೆ ನಡೆಸಲಿದೆ.

ಈ ಕುರಿತು ಜಂಟಿ ಪತ್ರಿಕಾಗೋಷ್ಠಿ ನಡೆಸಿರುವ ಸಂಘಟನೆಗಳು, ಕರ್ನಾಟಕ ರಾಜ್ಯ ಸರ್ಕಾರದ ಅಡಿಯಲ್ಲಿರುವ ‘ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ  ಕಲ್ಯಾಣ ಮಂಡಳಿ’ಯಲ್ಲಿನ ಕಾರ್ಮಿಕರ ನಿಧಿಯನ್ನು ದುರುಪಯೋಗ ಮಾಡುವ ಪ್ರಯತ್ನ ನಡೆದಿರುವುದು ಕಳವಳಕಾರಿ ಸಂಗತಿಯಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದ್ದ ಕಾಂಗ್ರೆಸ್ ಪಕ್ಷವು, ಅಧಿಕಾರಕ್ಕೆ ಬಂದ ಬಳಿಕ ಹಿಂದಿನ ಸರ್ಕಾರದ ಹಾದಿಯಲ್ಲೇ ಸಾಗುತ್ತಿರುವುದು ದುರದೃಷ್ಟಕರ. ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿರುವ ನಿಧಿಯನ್ನು ಮತ್ತೆ ಖರೀದಿಗಳ ನೆಪದಲ್ಲಿ ದುರುಪಯೋಗ ಮಾಡುತ್ತಿರುವುದನ್ನು ಜಂಟಿ ಸಮಿತಿ ಖಂಡಿಸಿದೆ.

ಶೈಕ್ಷಣಿಕ ಧನಸಹಾಯ ಕಡಿತ ಬೇಡ

ಕಾರ್ಮಿಕ ಸಚಿವರು ಮಂಡಳಿ ಅಧ್ಯಕ್ಷರಾದ ಬಳಿಕ ನೋಂದಾಯಿತ ಕಟ್ಟಡ ಕಾರ್ಮಿಕರ ಇಬ್ಬರು ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ನೀಡುವ ಕಲಿಕಾ ಭಾಗ್ಯ ಯೋಜನೆಯನ್ನು ದುರ್ಬಲಗೊಳಿಸಲಾಗಿದೆ. ಶೇಕಡ 75ರಷ್ಟು ಹಣವನ್ನು ಕಡಿತ ಮಾಡಲಾಗಿದೆ. ಇದರಿಂದಾಗಿ ಸಾವಿರಾರು ಬಡ ಕಟ್ಟಡ ಕಾರ್ಮಿಕರ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗುವ ಅಪಾಯ ಬಂದಿದೆ. ಈ ಬಗ್ಗೆ ರಾಜ್ಯದ ಮುಖ್ಯವಾಹಿನಿ ಮುದ್ರಣ ಹಾಗೂ ಎಲೆಕ್ಟ್ರಾನಿಕ್ಸ್ ಮಾಧ್ಯಮದಲ್ಲಿ ವಿಶೇಷ ವರದಿಗಳು ಪ್ರಕಟವಾಗಿವೆ.

ಶೈಕ್ಷಣಿಕ ಸಹಾಯಧನ ಕಡಿತಕ್ಕೆ ಕಲ್ಯಾಣ ಮಂಡಳಿಯಲ್ಲಿ  ಹಣವಿಲ್ಲ. ನಕಲಿ ಕಾರ್ಡುಗಳಿಂದಾಗಿ ಮಂಡಳಿಯ ನಿಧಿ ಖಾಲಿಯಾಗಿದೆ ಮತ್ತು ಹಿಂದಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮನಸೋ ಇಚ್ಚೆ ಖರೀದಿಗಳನ್ನು ಮಾಡಿ ಸಾವಿರಾರು ಕೋಟಿ ಹಣ ಖರ್ಚು ಮಾಡಲಾಗಿದೆ ಎಂಬ ಕಾರಣವನ್ನು ಕಾರ್ಮಿಕ ಸಚಿವರು ಹಾಗೂ ಮಂಡಳಿ ಅಧಿಕಾರಿಗಳು ನೀಡುತ್ತಿದ್ದಾರೆ ಎಂದು ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘಟನೆಗಳ ಸಮನ್ವಯ ಸಮಿತಿ ಆಕ್ರೋಶ ವ್ಯಕ್ತಪಡಿಸಿ, ಈ ಕೆಳಗಿನ ಪ್ರಶ್ನೆಗಳನ್ನು ಸರ್ಕಾರದ ಮುಂದಿಟ್ಟಿದೆ.

1.ಶೈಕ್ಷಣಿಕ ಸಹಾಯಧನ ಕಡಿತ ಮಾಡಲು ಹಣವಿಲ್ಲ ಎಂಬುದು ನಿಜ ಎಂದಾದಲ್ಲಿ ಪ್ರತಿ ಲ್ಯಾಪ್‌ ಟ್ಯಾಪ್‌ ಗೆ 70,000 ರೂಪಾಯಿನಂತೆ ಹತ್ತು ಸಾವಿರ ಲ್ಯಾಪ್‌ಟಾಪ್‌ಗಳನ್ನು ಖರೀದಿಸಿದ್ದೇಕೆ?

2. ಪಿಯುಸಿ ವಿದ್ಯಾರ್ಥಿಗಳು ಬಳಸುವ ಸಾಧಾರಣ ಬೇಸಿಕ್ ಲ್ಯಾಪ್‌ ಟ್ಯಾಪ್‌ ಗೆ 70,000 ರೂಪಾಯಿ ದುಬಾರಿ ದರ ನಿಗದಿ ಮಾಡಿದ್ದೇಕೆ?

3. ಸದರಿ ಲ್ಯಾಪ್‌ ಟಾಪ್‌ಗಳು ಬಳಕೆ ಯೋಗ್ಯವಲ್ಲ, ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ವಿದ್ಯಾರ್ಥಿಗಳಿಂದ ದೂರುಗಳು ಬಂದಿವೆ. ಈ ಬಗ್ಗೆ ನೀವು ಪ್ರಕ್ರಿಯಿಸುತ್ತಿಲ್ಲ ಏಕೆ?

4.ಲ್ಯಾಪ್ ಟಾಪ್ ಬೇಕೆಂದು ಫಲಾನುಭವಿಗಳು ಅರ್ಜಿ ಸಲ್ಲಿಸದಿದ್ದರೂ ತಾವೇ ಅರ್ಜಿ ಕರೆದಿದ್ದು ಏಕೆ? ಲ್ಯಾಪ್‌ ಟಾಪ್ ನೀಡುವುದು ಶೈಕ್ಷಣಿಕ ಸಹಾಯಧನದ ಭಾಗವಲ್ಲವೇ? ಇದರ ಬದಲು ಡಿಬಿಟಿ ಮೂಲಕ ಹಣ ನೀಡಬಹುದಿತ್ತಲ್ಲವೇ?

5. 1996 ರ ಕಟ್ಟಡ ಕಾರ್ಮಿಕ ಕಾಯ್ದೆ ಪ್ರಕಾರ ಅರ್ಜಿ ಸಲ್ಲಿಸಿದ ಎಲ್ಲರಿಗೂ ಕಲ್ಯಾಣ ಕಾರ್ಯಕ್ರಮಗಳು ವಿತರಣೆಯಾಗಬೇಕು ಆದರೆ ಇಲ್ಲಿ ಮೆರಿಟ್ ಮಾನದಂಡ ಅನುಸರಿಸಿ ಸಾವಿರಾರು ಕಾರ್ಮಿಕರ ಮಕ್ಕಳಿಗೆ ಲ್ಯಾಪಟಾಪ್ ನಿರಾಕರಿಸಲಾಗಿದೆ.

6. ಲ್ಯಾಪ್‌ ಟಾಪ್ ಖರೀದಿಯ ಬದಲು, 2020-21ನೇ ಸಾಲಿನಲ್ಲಿ ಬಾಕಿ ಉಳಿಸಿಕೊಂಡಿರುವ ಶೈಕ್ಷಣಿಕ ಸಹಾಯಧನವನ್ನು ನೀಡಬಹುದಿತ್ತಲ್ಲವೇ?

7. ಲ್ಯಾಪ್‌ ಟಾಪ್ ಸೇರಿ ಯಾವುದೇ ಖರೀದಿಗೆ ಕೇಂದ್ರ ಸರ್ಕಾರ ಕಾರ್ಮಿಕ ಮಂತ್ರಾಲಯದ ಅನುಮತಿ ಇಲ್ಲದಿದ್ದಾಗಲೂ, ನಿಯಮಗಳನ್ನು ಗಾಳಿಗೆ ತೂರಿ ಖರೀದಿಸಿದ್ದೇಕೆ?

8. “ಲ್ಯಾಪ್ ಟಾಪ್ ಖರೀದಿ ಹಿಂದಿನ ಕಲ್ಯಾಣ ಮಂಡಳಿಯ ತೀರ್ಮಾನವಾಗಿದೆ’ ಎಂದು ಹೇಳಲಾಗುತ್ತಿದೆ. ಹಾಗಿದ್ದೂ, ಹಿಂದಿನ ಸರ್ಕಾರದ ತೀರ್ಮಾನವನ್ನು ರದ್ದು ಮಾಡಲು ಸಾಧ್ಯವಿತ್ತಲ್ಲವೇ?

9. ಪ್ರತಿ ವರ್ಷವೂ ಸರಾಸರಿ ಒಂದು ಸಾವಿರ ಕೋಟಿ ರೂಪಾಯಿ ಸೆಸ್ ಸಂಗ್ರಹವಾಗುತ್ತಿದೆ. ಹೀಗಿದ್ದೂ ಹಣವಿಲ್ಲ ಎಂಬ ವಾದದಲ್ಲಿ ಹುರುಳಿದೆಯೇ?

10. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕಾರ್ಮಿಕ ಸಚಿವರೂ ಹಾಗೂ ಕಲ್ಯಾಣ ಮಂಡಳಿಯ ಅಧ್ಯಕ್ಷರಾಗಿದ್ದ ಶಿವರಾಂ ಹೆಬ್ಬಾರ್ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ನಡೆಸಿದ್ದಾರೆಂದು ತಿಳಿದಿದ್ದಾಗ್ಯೂ ಅವರ ವಿರುದ್ಧ ತನಿಖೆ ಏಕಿಲ್ಲ? ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ,

ಹೀಗಾಗಿ ಬಡ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಬ್ಯಾಂಕ್ ಖಾತೆಗೆ ನೇರವಾಗಿ ಹಣ ತಲುಪಬಹುದಾದ ಯೋಜನೆಗೆ ಹಣವಿಲ್ಲ ಎಂಬುದು ಸಚಿವರ ಸಬೂಬು ಆಗಿದೆ ವಿನಃ, ಅದರಲ್ಲಿ ಸತ್ಯಾಂಶವಿಲ್ಲ, ಕೇಂದ್ರ ಸರ್ಕಾರದ ಕಾರ್ಮಿಕ ಹಾಗೂ ಉದ್ಯೋಗ  ಮಂತ್ರಾಲಯದ ನೀಡಿದ ಸೂಚನೆಗಳನ್ನು ಧಿಕ್ಕರಿಸಿ ಪ್ರೊಕ್ಯೂ‌ರ್ಮೆಂಟ್ (ಖರೀದಿಗಳು) ಮೂಲಕ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಲು ತುದಿಗಾಲಲ್ಲಿ ನಿಂತಿರುವುದು ಸಚಿವರು ಮತ್ತು ಅಧಿಕಾರಿಗಳ ಆಸಕ್ತಿ ಬೇರೆಯೇ ಇದೆ ಎಂಬುದನ್ನು ತೋರುತ್ತದೆ ಎಂದು ಕಿಡಿಕಾರಿದೆ.

ಇದನ್ನೂ ಓದಿ: ಸುಳ್ಳು ಜಾಹಿರಾತು ನೀಡಿ ದಾರಿ ತಪ್ಪಿಸಿದರೆ 1 ಕೋಟಿ ದಂಡ ಹಾಕುತ್ತೇವೆ: ಪತಂಜಲಿಗೆ ಸುಪ್ರೀಂಕೋರ್ಟ್‌ ಎಚ್ಚರಿಕೆ

ವೈದ್ಯಕೀಯ ತಪಾಸಣೆ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಮಂಡಳಿ ಹಣ

ಕಾರ್ಮಿಕರ ಆರೋಗ್ಯ ತಪಾಸಣೆ ಮಾಡುವ ಯೋಜನೆಗೆ ಕಾರ್ಯಾದೇಶ ನೀಡಿದ್ದು, ಇದು ಕಾರ್ಮಿಕರಿಗೆ ಯಾವುದೇ ರೀತಿಯಲ್ಲಿ ಪ್ರಯೋಜನವಾಗದು. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೂ ಆರೋಗ್ಯ ತಪಾಸಣಾ ಯೋಜನೆ ತರಲಾಗಿತ್ತು. ಇದರಿಂದ ಕಾರ್ಮಿಕರಿಗೆ ಯಾವುದೇ ಪ್ರಯೋಜನ ಆಗಿಲ್ಲ. ಖಾಸಗಿ ಆಸ್ಪತ್ರೆಗಳು ನಡೆಸುವ ರಕ್ತ ಪರೀಕ್ಷಾ ವರದಿಗಳು ಎರಡು ಮೂರು ತಿಂಗಳ ಮೇಲೆ ನೀಡಿರುವ ಸಾವಿರಾರು ಸಾಕ್ಷಿಗಳಿವೆ ಹಾಗೂ ತಪಾಸಣೆ ವೇಳೆ ಗುರುತಿಸಿದ ಖಾಯಿಲೆಗಳಿಗೆ ಯಾವುದೇ ಚಿಕಿತ್ಸೆಯನ್ನು ಮಂಡಳಿ ಖಾತ್ರಿಪಡಿಸಲಿಲ್ಲ. ಹೀಗಿದ್ದಾಗಲೂ ಖಾಸಗಿ ಆಸ್ಪತ್ರೆಗಳ ಜತೆ ಶಾಮೀಲಾಗಿ, ಈ ಮೂಲಕ ನೂರಾರು ಕೋಟಿಯನ್ನು ಲಪಟಾಯಿಸುವ ಯೋಜನೆಯಾಗಿದೆ ಹೊರತು. ಇದರಿಂದ ಕಾರ್ಮಿಕರಿಗೆ ಎಳ್ಳಷ್ಟೂ ಪ್ರಯೋಜನವಿಲ್ಲ ಎಂದು ಆಂತಕವನ್ನು ವ್ಯಕ್ತಪಡಿಸಿದೆ.

ಅಲ್ಲದೆ ಇದೇ ತಪಾಸಣೆಯನ್ನು ಕರ್ನಾಟಕ ಸರ್ಕಾರದ ಹೆಸರಾಂತ ವೈದ್ಯಕೀಯ ಸಂಸ್ಥೆಗಳಾದ ಕಿದ್ವಾಯಿ, ಜಯದೇವ, ಇಎಸ್‌ಐ, ಸಂಜಯ ಗಾಂಧಿ, ರಾಜೀವಗಾಂಧಿ, ನಿಮಾನ್ಸ್, ವಿಕ್ಟೋರಿಯಾ, ಮಿಂಟೋ, ಕೆ.ಸಿ ಜನರಲ್, ಬೌರಿಂಗ್, ಹುಬ್ಬಳ್ಳಿ ಕೆಎಂಸಿ ಹಾಗೂ ರಾಜ್ಯದ್ಯಾಂತ  ಇರುವ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸಹಯೋಗದೊಂದಿಗೆ ಅತ್ಯಂತ ಕಡಿಮೆ ಖರ್ಚಿನೊಂದಿಗೆ ನಡೆಸಬೇಕು ಎನ್ನುವ ಸಲಹೆಗಳನ್ನು ಹಲವಾರು ಬಾರಿ ಕಾರ್ಮಿಕ ಸಂಘಗಳು ನೀಡಿವೆ. ಆದರೆ
ಮಂಡಳಿ ಹಾಗೂ ಕಾರ್ಮಿಕ ಇಲಾಖೆಯ ಭ್ರಷ್ಟ ಅಧಿಕಾರಿಗಳು ಕಲ್ಯಾಣ ಮಂಡಳಿ ನಿಧಿಯನ್ನು ಲೂಟಿ ಹೊಡೆಯಲು ಖಾಸಗಿ ಆಸ್ಪತ್ರೆಗಳೊಂದಿಗೆ ಕೈ ಜೋಡಿಸಿ ಬಡ ಕಟ್ಟಡ ಕಾರ್ಮಿಕರ ಬೆವರಿನಿಂದ ಸಂಗ್ರಹಿಸಲಾದ ಹಣಕ್ಕೆ ಕನ್ನ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ನೂರಾರು ಅರ್ಜಿಗಳು ಬಾಕಿ

ಕಳೆದ ಎರಡು ವರ್ಷಗಳಿಂದ ಕಾರ್ಮಿಕರ ಮಕ್ಕಳು ಶೈಕ್ಷಣಿಕ ಧನ ಸಹಾಯಕ್ಕಾಗಿ ಅರ್ಜಿ ಹಾಕಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದರೂ, ಬಾಕಿ ಹಣವನ್ನು ಬಿಡುಗಡೆ ಮಾಡುವ ಆಸಕ್ತಿ ತೋರುತ್ತಿಲ್ಲ. ಅಲ್ಲದೆ ಸಲ್ಲದ ಕಾರಣಗಳನ್ನು ಮುಂದುಮಾಡಿ ಪಿಂಚಣೆ, ಮದುವೆ, ವೈದ್ಯಕೀಯ, ಹೆರಿಗೆ ಇತ್ಯಾದಿ ಸೌಲಭ್ಯ ಪಡೆಯಲು ಸಲ್ಲಿಸಿರುವ ಸಾವಿರಾರು‌ ಅರ್ಜಿಗಳು ಬಾಕಿ ಉಳಿದಿವೆ. ಬಾಕಿ ಇರುವ ಅರ್ಜಿಗಳನ್ನು ಈವರೆಗೂ ವಿಲೇವಾರಿ ಮಾಡುತ್ತಿಲ್ಲ. ಪ್ರೊಕ್ಯೂರ್‌ಮೆಂಟ್
ಯೋಜನೆಗಳಿಗೆ ತೋರಿಸುವ ಕಾಳಜಿಯನ್ನು ಬಾಕಿ ಅರ್ಜಿಗಳ ವಿಲೇವಾರಿಗೆ ತೋರಿಸುತ್ತಿಲ್ಲ ಏಕೆ ಎಂದು ಪ್ರಶ್ನಿಸಿದೆ.

ಮಾನ್ಯ ಕಾರ್ಮಿಕ ಸಚಿವರು ರಾಜ್ಯದ್ಯಂತ ಪ್ರವಾಸ ನಡೆಸುತ್ತಾ ಕಾರ್ಮಿಕ ವರ್ಗದ ಸಮಸ್ಯೆಗಳನ್ನು ಆಲಿಸುತ್ತಿರುವುದು‌ ಸ್ವಾಗತಾರ್ಹವಾಗಿದೆ ಮತ್ತು ಸಾಕಷ್ಟು ಭರವಸೆ ತುಂಬುವ ಮಾತನಾಡುತ್ತಿರುವುದು ಕೂಡ ಅಭಿನಂದನಾರ್ಹವೇ ಆದರೆ ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕ ಇಲಾಖೆಯಲ್ಲಿ ಇರುವ ಭ್ರಷ್ಟ ಅಧಿಕಾರಿಗಳು ಹಾಗೂ ವ್ಯವಸ್ಥೆಯ ಜತೆ ಕೈ ಜೋಡಿಸದೆ ಈ ಬಗ್ಗೆ ಆಳಕ್ಕೆ ಇಳಿದು ಪರಿಶೀಲಿಸಿ ಕ್ರಮಕ್ಕೆ ಮುಂದಾದಾಗ ಮಾತ್ರವೇ ಲಕ್ಷಾಂತರ ಬಡ ಕಾರ್ಮಿಕರು ಮತ್ತು ಅವರನ್ನು ನಂಬಿರುವ ಕುಟುಂಬಗಳಲ್ಲಿ ವಿಶ್ವಾಸ ಮೂಡಿಸಲು ಸಾಧ್ಯ ಮತ್ತು ಮಾನ್ಯ ಸಚಿವರ ಆಡುವ ಮಾತಿಗೂ ಒಂದು ಗೌರವ ಸಿಕ್ಕಂತಾಗುತ್ತದೆ. ಈ ಬಗ್ಗೆ ಕಾರ್ಮಿಕ ಸಚಿವರಿಗೆ ತಾವು ಸೂಚನೆ ನೀಡಬೇಕಿದೆ ಎಂದು ಸರ್ಕಾರಕ್ಕೆ ತಿಳಿಸಿದೆ.

ತ್ರಿಪಕ್ಷೀಯ ವ್ಯವಸ್ಥೆಗೆ ಅವಮಾನ

ಕಾರ್ಮಿಕ ಸಚಿವ ಸಂತೋಷ್ ಲಾಡ್ ಅಧ್ಯಕ್ಷರಾಗಿರುವ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಪುನರ್ ರಚನೆಯಲ್ಲಿ ಕೇಂದ್ರ ಕಾರ್ಮಿಕ ಸಂಘಗಳನ್ನು ಹೊರಗಿಟ್ಟು ತನ್ನ ಹಿಂಬಾಲಕರಿಗೆ ಅವಕಾಶ ನೀಡುವ ಮೂಲಕ ಇದುವರೆಗೂ ಪಾಲಿಸಿಕೊಂಡು ಬಂದ ತ್ರಿಪಕ್ಷೀಯ ವ್ಯವಸ್ಥೆಗೆ ತಿಲಾಂಜಲಿ ಹಾಡಿದ್ದಾರೆ. ಕಾರ್ಮಿಕ ಇಲಾಖೆಯಲ್ಲಿ ತೀಪಕ್ಷೀಯ ವ್ಯವಸ್ಥೆ ಎಂಬುದು ವಿವಾದಗಳನ್ನು, ಕಾರ್ಮಿಕ ಬದುಕಿನ ಪ್ರಶ್ನೆಗಳನ್ನು ಚರ್ಚಿಸಲು ಇರುವ ಪ್ರಜಾಸತ್ತಾತ್ಮಕ ವೇದಿಕೆಯಾಗಿದೆ. ಆದರೆ ಹಿಂದಿನ ಬಿಜೆಪಿ ಸರ್ಕಾರ ಪ್ರಶ್ನೆ ಮಾಡುವ ಕಾರ್ಮಿಕ ಸಂಘಟನೆಗಳನ್ನು ಸಂಘಟನೆಗಳನ್ನು ಹಲವು ಸಮಿತಿಗಳಿಂದ ಹೊರಗಿಟ್ಟಿತ್ತು. ಈಗಿನ ಕಾಂಗ್ರೆಸ್ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಎಲ್ಲ ಕೇಂದ್ರ ಕಾರ್ಮಿಕ ಸಂಘಗಳನ್ನು ಹೊರಗಿಟ್ಟು ಕೇವಲ ಕೆಲವು ವಂದಿಮಾಗದರನ್ನು ಕಲ್ಯಾಣ ಮಂಡಳಿಗೆ ನೇಮಿಸಿದ್ದಾರೆ. ಕಾರ್ಮಿಕ ಸಚಿವರು ಪ್ರಜಾಸತ್ತಾತ್ಮಕ ಚರ್ಚೆಗೆ ಸಿದ್ದವಿಲ್ಲ ಎಂಬುದನ್ನು ಇದು ಸಾಬೀತುಪಡಿಸುತ್ತದೆ. ಆದ್ದರಿಂದ ಇಂತಹ ಪ್ರಯತ್ನ ಕೈ ಬಿಟ್ಟು ಎಲ್ಲ ಕೇಂದ್ರ ಕಾರ್ಮಿಕ ಸಂಘಗಳನ್ನೊಳಗೊಂಡು ಕಲ್ಯಾಣ ಮಂಡಳಿ ಪುನರ್ ರಚಿಸಬೇಕೆಂದು ಒತ್ತಾಯಿಸಿದೆ.

ನಿಯಮಾವಳಿಗಳನ್ನು ಗಾಳಿಗೆ ತೂರಿ ಕಾರ್ಮಿಕ ವಿರೋಧಿಯಾಗಿ ಹಾಗು ಅಪ್ರಜಾಸತ್ತಾತ್ಮಕವಾಗಿ ನಡೆದುಕೊಳ್ಳುತ್ತಿರುವ ಕಾರ್ಮಿಕ ಸಚಿವರು ಮತ್ತು ಸರ್ಕಾರಕ್ಕೆ ಕೆಟ್ಟ ಹೆಸರನ್ನು ತರುತ್ತಿರುವ ಕಾರ್ಮಿಕ ಇಲಾಖೆಯಲ್ಲಿನ ಇಂತಹ ಬೆಳವಣಿಗಳ ವಿಷಯದಲ್ಲಿ ಮುಖ್ಯಮಂತ್ರಿಗಳು ಮಧ್ಯಪ್ರವೇಶ ಮಾಡಬೇಕೆಂದು ಒತ್ತಾಯಿಸಿದೆ.

ಇದನ್ನೂ ಓದಿ: ಉಡುಪಿ ಕಗ್ಗೊಲೆ | ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ; ಕನ್ನಡ ಮಾಧ್ಯಮಗಳ ಸುಳ್ಳು ಬಯಲು!

ಈ ಎಲ್ಲಾ ಬೇಡಿಕೆಗಳಿಗೆ ಆಗ್ರಹಿಸಿ ನವೆಂಬರ್ 28-29 ರಂದು ರೈತ ಕಾರ್ಮಿಕರೊಂದಿಗೆ ಸೇರಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಪ್ರದರ್ಶನ ಕೂಡ ನಡೆಸಲಿದ್ದು ಹಾಗೂ ಇದೇ ರೀತಿ ನೀತಿಗಳನ್ನು ಮುಂದುವರೆಸಿದರೆ ಮುಂದಿನ ಜನವರಿಯಲ್ಲಿ 50 ಸಾವಿರ ಕಾರ್ಮಿಕ ಬೃಹತ್ ಹೋರಾಟವನ್ನು ಆಯೋಜಿಸಲು ಮುಂದಾಗುತ್ತೇವೆ ಎಂದು ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘಟನೆಗಳ ಸಮನ್ವಯ ಸಮಿತಿಯು ಎಚ್ಚರಿಕೆ ನೀಡಿದೆ.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಟ್ಟಡ & ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್, ಖಜಾಂಚಿ ಲಿಂಗರಾಜ್, ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘಟನೆಗಳ ಸಮನ್ವಯ ಸಮಿತಿಯ ಸದಸ್ಯರಾದ ಧನಶೇಖರ್, ಶ್ರೀನಿವಾಸ್, ಪ್ರಭಾಕರ್,ಷಣ್ಮುಗಂ ಪಿ.ಎಸ್, ಸೇರಿದಂತೆ

ವಿಡಿಯೋ ನೋಡಿ: ಪೋಕ್ಸೋ ಪ್ರಕರಣದ ಆರೋಪಿ ಸ್ವಾಮಿಗೆ ಪಾದಪೂಜೆ ! ಜನರ ಪ್ರಜ್ಞೆಗೆ ಏನಾಗಿದೆ? – ಮೂಡ್ನಾಕೂಡು ಚಿನ್ನಸ್ವಾಮಿ

Donate Janashakthi Media

Leave a Reply

Your email address will not be published. Required fields are marked *