ಬಿಜೆಪಿ ರಾಜ್ಯಸಭೆ ಸದಸ್ಯ ಅಶೋಕ ಗಸ್ತಿ ನಿಧನ

ಕೋವಿಡ್-19,  ಬಹುಅಂಗಾಂಗ ವೈಫಲ್ಯದಿಂದ ನಿಧನ

ಬೆಂಗಳೂರು: ಬಿಜೆಪಿಯ ರಾಜ್ಯಸಭಾ ಸದಸ್ಯ ಅಶೋಕ್‌ ಗಸ್ತಿ (55) ಕೋವಿಡ್‌–19 ಮತ್ತು ಬಹು ಅಂಗಾಂಗಳ ವೈಫಲ್ಯದಿಂದ ನಗರದ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಇದೇ 2 ರಂದು ಕೊರೊನಾ ಸೋಂಕಿನಿಂದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಕೆಲವು ದಿನಗಳಿಂದ ಅವರನ್ನು ಜೀವ ರಕ್ಷಕ ವ್ಯವಸ್ಥೆಯಲ್ಲಿಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ರಾತ್ರಿ 10.31ರ ವೇಳೆಗೆ ಕೊನೆಯುಸಿರೆಳೆದರು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

ಅಶೋಕ ಗಸ್ತಿ ರಾಯಚೂರು ಜಿಲ್ಲೆಯವರು. ವಕೀಲರಾಗಿದ್ದ ಇವರು 1989ರಲ್ಲಿ ಬಿಜೆಪಿ ಸೇರ್ಪಡೆಯಾಗಿ, ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷರಾದರು. 2009ರಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ, ನಂತರ ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾದರು. ಜಗದೀಶ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳ ಪಕ್ಷದ ಪ್ರಭಾರಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಸವಿತಾ ಸಮಾಜಕ್ಕೆ ಸೇರಿದ ಇವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಲಾಗಿತ್ತು.

ಎಬಿವಿಪಿ‌ ಮೂಲಕ ಸಂಘ ಪರಿವಾರಕ್ಕೆ

ಜಿಲ್ಲೆಯ ಲಿಂಗಸುಗೂರಿನವರಾದ ಅಶೋಕ ಗಸ್ತಿ ಅವರು ಕಾಲೇಜು ಶಿಕ್ಷಣ ಹಂತದಲ್ಲಿಯೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಮೂಲಕ ಸಂಘ ಪರಿವಾರ ಸೇರಿದ್ದರು.

ಎಲ್‌ಎಲ್‌ಬಿ ಪದವಿ ಪೂರ್ಣಗೊಳಿಸಿ ರಾಯಚೂರಿನಲ್ಲಿ ವಕೀಲಿ ವೃತ್ತಿ ಆರಂಭಿಸಿದ್ದರು. ಇದರೊಂದಿಗೆ 1989 ರಿಂದ ಬಿಜೆಪಿಯಲ್ಲಿ ಸಕ್ರಿಯರಾಗಿದ್ದರು. 30 ವರ್ಷಗಳಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಪಕ್ಷನಿಷ್ಠೆಯನ್ನು ಗುರುತಿಸಿದ ವರಿಷ್ಠರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ ಮಾಡಿದ್ದರು.

ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷರಾಗಿ, 2009 ರಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ, ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಜಗದೀಶ್‌ ಶೆಟ್ಟರ್‌ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿಯೂ ಕೆಲವು ತಿಂಗಳು ಕಾರ್ಯನಿರ್ವಹಿಸಿದ್ದರು.
ದೇಶದಲ್ಲಿಯೇ ಸವಿತಾ ಸಮಾಜದಿಂದ ರಾಜ್ಯಸಭೆ ಪ್ರವೇಶಿಸಿದ ಮೊದಲ ವ್ಯಕ್ತಿ ಎನ್ನುವ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

ಇದನ್ನೂ ಓದಿ: ಆಶೋಕ ಗಸ್ತಿಗೆ ಐಸಿಯುನಲ್ಲಿ ಚಿಕಿತ್ಸೆ: ಕುಟುಂಬಸ್ಥರ ಸ್ಪಷ್ಟನೆ

ಮೂರು ತಿಂಗಳ ಅಧಿಕಾರ

ರಾಜ್ಯಸಭಾ ಸದಸ್ಯ ಸ್ಥಾನ ಹುಡುಕಿಕೊಂಡು ಬಂದರೂ,  ಅವರು ಅಧಿಕಾರ ಅನುಭವಿಸಲಾಗಲಿಲ್ಲ. ಕಳೆದ ಜೂನ್‌ 12 ರಂದು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ ಮಾಡಿರುವುದನ್ನು ಬಿಜೆಪಿ ವರಿಷ್ಠರು ಘೋಷಿಸಿದ್ದರು. ಪಕ್ಷದೊಳಗೆ ಹಾಗೂ ಹೊರಗಡೆಯಲ್ಲೆಲ್ಲ ಅಶೋಕ ಗಸ್ತಿ ಆಯ್ಕೆ ಅಶ್ಚರ್ಯಕ್ಕೆ ಕಾರಣವಾಗಿತ್ತು. ಜುಲೈನಲ್ಲಿ ಸಂಸತ್‌ ಸದಸ್ಯರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದ ಅವರು ಸೆ.17ರಂಂದು ನಿಧನರಾಗಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *