ಲಕ್ನೋ: ಚುನಾವಣಾ ಮಾದರಿ ನೀತಿ ಸಂಹಿತೆ ಹಾಗೂ ಕೋವಿಡ್ ನಿಯಮಾವಳಿ ಉಲ್ಲಂಘನೆ ಆರೋಪದಲ್ಲಿ ಸಮಾಜವಾದಿ ಪಕ್ಷದ 2,500 ಅಪರಿಚಿತ ಕಾರ್ಯಕರ್ತರ ವಿರುದ್ಧ ಲಕ್ನೋದ ಗೌತಮ್ ಪಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬಿಜೆಪಿಯ ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ, ಧರಂ ಸಿಂಗ್ ಸೈನಿ ಹಾಗೂ ಇತರ ಶಾಸಕರು ಸಮಾಜವಾದಿ ಪಕ್ಷಕ್ಕೆ ಸೇರುವ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಯಲ್ಲಿ ನೆನ್ನೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸಮಾಜವಾದಿ ಪಕ್ಷ ಪೂರ್ವಭಾವಿ ಅನುಮತಿ ಪಡೆಯದೆ ವರ್ಚುವಲ್ ರ‍್ಯಾಲಿ ಆಯೋಜಿಸಿತ್ತು ಎಂದು ಲಕ್ನೋ ಜಿಲ್ಲಾಧಿಕಾರಿ ಅಭಿಷೇಕ್ ಪ್ರಕಾಶ್ ಹೇಳಿದ್ದಾರೆ.
‘‘ಮಾಹಿತಿ ಸ್ವೀಕರಿಸಿದ ಕೂಡಲೇ ಸಮಾಜವಾದಿ ಪಕ್ಷದ ಕಚೇರಿಗೆ ಪೊಲೀಸ್ ತಂಡವೊಂದನ್ನು ಕಳುಹಿಸಿ ಕೊಡಲಾಗಿತ್ತು. ಅವರ ವರದಿಯನ್ನು ಆಧರಿಸಿ ಕ್ರಮ ತೆಗೆದುಕೊಳ್ಳಲಾಗಿದೆ’’ ಎಂದು ಅವರು ತಿಳಿಸಿದ್ದಾರೆ.
‘‘ಇದು ಪಕ್ಷದ ಕಚೇರಿಯ ಒಳಗೆ ನಡೆಸಲಾದ ವರ್ಚುವಲ್ ಕಾರ್ಯಕ್ರಮ. ನಾವು ಯಾರಿಗೂ ಕರೆ ನೀಡಿರಲಿಲ್ಲ. ಆದರೆ ಜನರು ಆಗಮಿಸಿದ್ದಾರೆ. ಜನರು ಕೋವಿಡ್ ನಿಯಮಾವಳಿಗೆ ಬದ್ಧವಾಗಿ ಕಾರ್ಯ ನಿರ್ವಹಿಸಿದ್ದಾರೆ’’ ಎಂದು ಸಮಾಜವಾದಿ ಪಕ್ಷದ ಉತ್ತರಪ್ರದೇಶ ಘಟಕದ ನರೇಶ್ ಉತ್ತಮ್ ಪಟೇಲ್ ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದೆ. ಚುನಾವಣಾ ಆಯೋಗವು ಎಲ್ಲಾ ಭೌತಿಕ ರ‍್ಯಾಲಿಗಳನ್ನು ನಿಷೇಧಿಸುವ ನಿರ್ಧಾರವನ್ನು ಹಲವಾರು ರಾಜಕೀಯ ಪಕ್ಷಗಳು ವಿರೋಧಿಸಿವೆ. ಇದು ಹೆಚ್ಚಿನ ಹಣಕಾಸಿನ ಸಂಪನ್ಮೂಲಗಳನ್ನು ಹೊಂದಿರುವ ಪಕ್ಷಗಳಿಗೆ ಅನಗತ್ಯ ಪ್ರಯೋಜನವನ್ನು ನೀಡುತ್ತದೆ ಮತ್ತು ರಾಜ್ಯದ ದೂರದ ಭಾಗಗಳಲ್ಲಿನ ಡಿಜಿಟಲ್ ಮೂಲಸೌಕರ್ಯ ಕೊರತೆ ಇರುವ ಕಡೆಗಳಲ್ಲಿ ವರ್ಚುವಲ್ ಪ್ರಚಾರವನ್ನು ಹಿಡಿದಿಟ್ಟುಕೊಳ್ಳುವಷ್ಟು ದೃಢವಾಗಿಲ್ಲ ಎಂದು ಹೇಳುತ್ತಿವೆ.