ಬೆಂಗಳೂರು: ರಾಜ್ಯದ 29 ಲೋಕಸಭಾ ಸಂಸತ್ ಸ್ಥಾನಗಳಲ್ಲಿ 25 ಸ್ಥಾನಗಳನ್ನು ಪಡೆದಿರುವ ಭಾರತೀಯ ಜನತಾ ಪಕ್ಷದ ಸಂಸದರ ಕಾರ್ಯವೈಖರಿ ಬಗ್ಗೆ ಪ್ರಶ್ನೆಗಳು ಕೇಳಿ ಬರುತ್ತಿವೆ. 2019ರಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾದಾಗಿನಿಂದಲೂ ಹಲವು ಸಂದರ್ಭಗಳಲ್ಲಿ ಇಂತವುಗಳು ಕೇಳು ಬರುತ್ತಲೆ ಇವೆ.
ಈಗ ಮತ್ತೆ ಚರ್ಚೆಗೆ ಗುರಿಯಾಗಿರುವುದು, ಮೊನ್ನೆಯಷ್ಟೇ (ಜನವರಿ 12ರಂದು) ತಮಿಳುನಾಡು ರಾಜ್ಯಕ್ಕೆ 11 ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿರುವ ಬಗ್ಗೆ ಟ್ವೀಟರ್ ನಲ್ಲಿ ಕರ್ನಾಟಕದ ಸಂಸದರು ಹಾಗೂ ಕೇಂದ್ರದ ಬಿಜೆಪಿ ಸರ್ಕಾರದ ಆಗಿರುವ ಅನ್ಯಾಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯಕ್ಕೆ ಇದುವರೆಗೆ ಅತ್ಯಂತ ಮಹತ್ವಾಕಾಂಕ್ಷೆಯ ದೊಡ್ಡ ಯೋಜನೆಗಳು ಇದುವರೆಗೆ ಜಾರಿಯಾಗಲಿಲ್ಲ. ಅಲ್ಲದೆ, ಪ್ರಸಕ್ತ ಕೋವಿಡ್-19 ಸಾಂಕ್ರಾಮಿಕತೆಯಿಂದಾಗಿ ಆರೋಗ್ಯ ಕ್ಷೇತ್ರ ಅತೀ ಹೆಚ್ಚಾಗಿ ಸರ್ಕಾರವು ಸಾರ್ವಜನಿಕ ಹಣವನ್ನು ವಿನಿಯೋಗಿಸಬೇಕು. ಆದರೆ, ಆರೋಗ್ಯ ಕ್ಷೇತ್ರಕ್ಕೆ ಆದ್ಯತೆಯನ್ನು ನೀಡದ ಸರ್ಕಾರಗಳು ಅದರಲ್ಲೂ, ಕೇಂದ್ರದಲ್ಲಿ ಅಧಿಕಾರವನ್ನು ವಹಿಸಿಕೊಂಡಿರುವ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಸರ್ಕಾರವು ಒಕ್ಕೂಟ ಸರ್ಕಾರದ ನೀತಿಗಳಿಗೆ ಆದ್ಯತೆಯನ್ನು ನೀಡುತ್ತಿಲ್ಲ.
ಅಂದರೆ, ತಮಿಳುನಾಡಿನಲ್ಲಿ ಒಬ್ಬ ಬಿಜೆಪಿ ಸಂಸದ ಇಲ್ಲದಿದ್ದರೂ 11 ವೈದ್ಯಕೀಯ ಕಾಲೇಜುಗಳನ್ನು ಉದ್ಘಾಟಿಸಲಾಗಿದೆ. ಆದರೆ, ಕರ್ನಾಟಕದಿಂದ ಬಿಜೆಪಿ ಪಕ್ಷದ 25 ಸಂಸದರು ಆಯ್ಕೆಯಾಗಿದ್ದರೂ, ಮಹಾತ್ವಾಂಕಕ್ಷೆಯ ಯಾವ ಹೊಸ ಯೋಜನೆಯನ್ನು ಜಾರಿಗೊಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬುದರ ಬಗ್ಗೆ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯದಿಂದ ಆಯ್ಕೆಯಾದ ಸಂಸದರೂ ಸಹ ಕರ್ನಾಟಕ್ಕಕೆ ನ್ಯಾಯ ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಕರ್ನಾಟಕದಿಂದ ಬಿಜೆಪಿ ಪಕ್ಷದಿಂದ 25 ಲೋಕಸಭಾ ಸದಸ್ಯರು, 5 ರಾಜ್ಯ ಸಭಾ ಸದಸ್ಯರು ಇದ್ದಾರೆ. ಇವರಲ್ಲಿ 5 ಮಂದಿ ಕೇಂದ್ರ ಸಚಿವರು ಸಹ ಇದ್ದಾರೆ.
ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷ ಆಡಳಿತ ನಡೆಸುತ್ತಿದ್ದರೂ ಸಹ ಕೇಂದ್ರ ಸರ್ಕಾರವು ರಾಜ್ಯಕ್ಕೆ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದೆ. ಕಳೆದ 2-3 ವರ್ಷಗಳಲ್ಲಿ ರಾಜ್ಯಕ್ಕೆ ಬಾಧಿಸಿದ ಅತಿವೃಷ್ಠಿ ಹಾನಿಯಿಂದ ತುರ್ತು ಹಣ ಬಿಡುಗಡೆಗೊಳಿಸುವಲ್ಲಿಯೂ ವಿಳಂಬವನ್ನು ಅನುಸರಿಸಲಾಯಿತು. ಅದೇ ರೀತಿಯಲ್ಲಿ ಕೋವಿಡ್ ಸಾಂಕ್ರಾಮಿಕತೆಯಿಂದಾಗಿ ದೇಶವು ಒಳಗೊಂಡು ರಾಜ್ಯದಲ್ಲಿ ತುರ್ತು ಆರೋಗ್ಯ ಕ್ಷೇತ್ರಗಳಿಗೆ ಆದ್ಯತೆ ನೀಡುವುದರಲ್ಲಿಯೂ ಕೇಂದ್ರದಿಂದ ಸರಿಯಾದ ಸಹಕಾರ ಸಿಗಲಿಲ್ಲ.
ಇವೆಲ್ಲವೂಗಳಿಂದಾಗಿ ಕೇಂದ್ರದ ನಡೆಗಿಂತ ಕರ್ನಾಟಕದಿಂದ ಆಯ್ಕೆಯಾದ ಸಂಸದರ ಕಾರ್ಯವೈಖರಿಯ ಬಗ್ಗೆಯೇ ಪ್ರಶ್ನೆ ಮಾಡುವ ಪರಿಸ್ಥಿತಿ ಎದುರಾಗಿದೆ.
ವರದಿ: ವಿನೋದ ಶ್ರೀರಾಮಪುರ