ಬೆಂಗಳೂರು: ಕರ್ನಾಟಕ ರಾಜ್ಯದ ವಿಧಾನಸಭೆ ಚುನಾವಣಾ ಪೂರ್ವ ಸಿದ್ಧತೆಗಳನ್ನು ಆರಂಭಿಸಿರುವ ಕಾಂಗ್ರೆಸ್ ಪಕ್ಷವು ಹಲವರಿಗೆ ಜವಾಬ್ದಾರಿಗಳನ್ನು ಹಂಚಿಕೆ ಮಾಡಿದೆ. ಕಾಂಗ್ರೆಸ್ ಪದಾಧಿಕಾರಿಗಳಾಗಿ ನೇಮಕವಾಗಿರುವ ಪಟ್ಟಿಯನ್ನು ಎಐಸಿಸಿ ಘೋಷಿಸಿದೆ. ಕಳೆದ ಮೂರು ವರ್ಷಗಳಿಂದ ಪೂರ್ಣ ಮಟ್ಟದ ಪದಾಧಿಕಾರಿಗಳ ನೇಮಕವಾಗಿರಲಿಲ್ಲ. ಕಡೆಗೂ ಹೈಕಮಾಂಡ್ ಅಂತಿಮಗೊಳಿಸಿದೆ.
ಮೊದಲ ಹಂತದಲ್ಲಿ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳ ನೇಮಕ ಮಾಡಿದೆ. 40 ಮಂದಿಗೆ ಕೆಪಿಸಿಸಿ ಉಪಾಧ್ಯಕ್ಷ ಸ್ಥಾನ ಹಾಗೂ 109 ಮಂದಿಗೆ ಪ್ರಧಾನ ಕಾರ್ಯದರ್ಶಿ ಸ್ಥಾನಗಳ ಪಟ್ಟಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಶನಿವಾರ ಸಂಜೆ ಆದೇಶ ನೀಡಿದ್ದಾರೆ.
ರಾಜ್ಯಸಭಾ ಸದಸ್ಯ ಎಲ್ ಹನುಮಂತಯ್ಯ, ಮಾಜಿ ಸಭಾಪತಿ ಬಿ.ಎಲ್.ಶಂಕರ್, ಮಾಜಿ ಸಚಿವ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಮಾನಾಥ ರೈ, ಮಾಜಿ ಸಚಿವ ಅಭಯಚಂದ್ರ ಜೈನ್, ಬಸವರಾಜ ರಾಯರೆಡ್ಡಿ, ಎಚ್. ಆಂಜನೇಯ, ಎಚ್.ಎಂ. ರೇವಣ್ಣ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ವಿಧಾನ ಪರಿಷತ್ ಮಾಜಿ ಸದಸ್ಯ, ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಮತ್ತು ಎಐಸಿಸಿ ಕಾರ್ಯದರ್ಶಿ ಪಿ.ವಿ.ಮೋಹನ್ ಅವರಂತ ಪ್ರಮುಖರನ್ನು ಕೆಪಿಸಿಸಿ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಖ್ಯಾತ ಉದ್ಯಮಿ ಇನಾಯತ್ ಅಲಿ ಮುಲ್ಕಿ, ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಮಿಥುನ್ ರೈ, ಮಾಜಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಎ. ಬಾವಾ, ದಕ್ಷಿಣ ಕ್ಕಡ ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ, ಕಾಂಗ್ರೆಸ್ ಮುಖಂಡರಾದ ಧನಂಜಯ ಅಡ್ಪಂಗಾಯ, ರಕ್ಷಿತ್ ಶಿವರಾಂ, ಕೃಪಾ ಆಳ್ವ, ಎ.ಸಿ. ಶ್ರೀನಿವಾಸ, ಬ್ರಿಜೇಶ್ ಕಾಳಪ್ಪ, ಅಕೈ ಪದ್ಮಶಾಲಿ, ಬಿ. ಗುರಪ್ಪ ನಾಯ್ಡು, ಡಾ.ಎಚ್.ಎನ್. ರವೀಂದ್ರ ಸೇರಿ 109 ಜನರು ಒಳಗೊಂಡ ಪ್ರಮುಖರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.
ಉಪಾಧ್ಯಕ್ಷರು:
ಉಪಾಧ್ಯಕ್ಷರಾಗಿ ಅಶೋಕ್ ಪಟ್ಟಣ, ಬಿ.ಎನ್. ಚಂದ್ರಪ್ಪ, ಬಸವರಾಜ ರಾಯರಡ್ಡಿ, ಡಿ.ಆರ್. ಪಾಟೀಲ್, ಡೇವಿಡ್ ಸಿಮೋನ್, ಶರಣ ಪ್ರಕಾಶ ಪಾಟೀಲ್, ಜಿ. ಪದ್ಮಾವತಿ, ಜಿ.ಸಿ. ಚಂದ್ರಶೇಖರ್, ಹಸನ್ ಸಾಬ್ ದೋಟಿಹಾಳ್, ಐವನ್ ಡಿಸೋಜಾ, ಕೆ.ಎನ್. ರಾಜಣ್ಣ, ಎಂ.ಸಿ. ವೇಣುಗೋಪಾಲ್, ಎಂ.ಆರ್. ಸೀತಾರಾಂ, ಮಧು ಬಂಗಾರಪ್ಪ, ಮಲ್ಲಿಕಾರ್ಜುನ ನಾಗಪ್ಪ.
ಮಂಜುನಾಥ ಭಂಡಾರಿ, ಎನ್. ಚಲುವರಾಯಸ್ವಾಮಿ, ನಾರಾಯಣಸ್ವಾಮಿ, ನರೇಂದ್ರಸ್ವಾಮಿ, ನಾಸಿರ್ ಹುಸೇನ್, ಪಿ.ಆರ್. ರಮೇಶ್, ಪ್ರಕಾಶ್ ಹುಕ್ಕೇರಿ, ಪ್ರಮೋದ್ ಮಧ್ವರಾಜ್, ಆರ್.ಬಿ. ತಿಮ್ಮಾಪುರ, ಎಸ್.ಇ. ಸುಧೀಂದ್ರ, ಸಂತೋಷ್ ಲಾಡ್, ಶರಣಪ್ಪ ಮಟ್ಟೂರು, ಶಿವರಾಮೇಗೌಡ, ಸುಜಾತಾ ಹೆಗಡೆ, ತಿಪ್ಪಣ್ಣಪ್ಪ, ವಿ.ಎಸ್. ಉಗ್ರಪ್ಪ, ವಿನಯ್ ಕುಲಕರ್ಣಿ, ವಿನಯ್‌ಕುಮಾರ್ ಸೊರಕೆ ಅವರನ್ನು ನೇಮಿಸಲಾಗಿದೆ.
ಆರು ತಿಂಗಳಿಂದ ನಡೆದಿತ್ತು ಕಸರತ್ತು
ರಾಜ್ಯ ಕಾಂಗ್ರೆಸ್ 2019ರಿಂದ ಪದಾಧಿಕಾರಿಗಳಲ್ಲದೆ ಕಾರ್ಯ ನಿರ್ವಹಿಸುತ್ತಿದೆ. ಪದಾಧಿಕಾರಿಗಳ ನೇಮಕಕ್ಕೆ ಹಲವು ಬಾರಿ ಪ್ರಯತ್ನ ನಡೆದರೂ ಆಕಾಂಕ್ಷಿಗಳ ಸಂಖ್ಯೆಯ ಕಾರಣಕ್ಕೆ ನೇಮಕ ಮುಂದಕ್ಕೆ ಹಾಕಲಾಗುತ್ತಿತ್ತು. ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ನೇಮಕಗೊಂಡ ಬಳಿಕ ಸಂಪೂರ್ಣ ಹೊಸ ತಂಡವನ್ನು ರಚಿಸಲು ಮುಂದಾಗಿದ್ದರು. ಹೀಗಾಗಿ ಕಳೆದ ಕೆಲವು ತಿಂಗಳಿನಿಂದ ಪದಾಧಿಕಾರಿಗಳ ಆಯ್ಕೆ ಕಸರತ್ತು ನಡೆದಿತ್ತು.
ಹೈಕಮಾಂಡ್‌ಗೆ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಪಟ್ಟಿಯೊಂದನ್ನು ಕಳುಹಿಸಿದ್ದರು. ಇದರ ಬೆನ್ನಲ್ಲೇ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸಹ ತಮ್ಮದೇ ಆದ ಪ್ರತ್ಯೇಕ ಪಟ್ಟಿಯನ್ನು ಹೈಕಮಾಂಡ್ ಗಮನಕ್ಕೆ ಕಳುಹಿಸಿದ್ದರು. ಈ ಬೆಳವಣಿಗೆ ನಡೆದ ನಂತರ ಪಕ್ಷದ ಇತರ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಡಾ. ಜಿ. ಪರಮೇಶ್ವರ್, ಬಿ.ಕೆ. ಹರಿಪ್ರಸಾದ್ ಸೇರಿದಂತೆ ಹಲವು ನಾಯಕರು ತಮ್ಮ ಶಿಫಾರಸುಗಳ ಪಟ್ಟಿಯನ್ನು ಹೈಕಮಾಂಡ್‌ಗೆ ರವಾನಿಸಿದ್ದರು. ಹೀಗಾಗಿ ಪದಾಧಿಕಾರಿಗಳ ನೇಮಕ ಪಟ್ಟಿಯ ಬಗ್ಗೆ ಹೈಕಮಾಂಡ್ ಮತ್ತು ಕೆಪಿಸಿಸಿ ಮಧ್ಯೆ ಗೊಂದಲ ಉಂಟಾಗಿತ್ತು ಎನ್ನಲಾಗುತ್ತಿದೆ.
ಜಾತಿವಾರು ಪರಿಗಣಿಸಿದಾಗ ಹಿಂದುಳಿದ ವರ್ಗ 53, ಪರಿಶಿಷ್ಟ ಜಾತಿ 25, ಪರಿಶಿಷ್ಟ ಪಂಗಡ 4, ಮಹಿಳೆ 23, ಅಲ್ಪಸಂಖ್ಯಾತ 22, ಲಿಂಗಾಯತ 19, ರೆಡ್ಡಿ ಲಿಂಗಾಯತ 5, ಒಕ್ಕಲಿಗ 16, ಲೈಂಗಿಕ ಅಲ್ಪಸಂಖ್ಯಾತ 1 ಮತ್ತು ಇತರೆ 4 ಜನರಿಗೆ ಅವಕಾಶ ನೀಡಲಾಗಿದೆ.