ನವದೆಹಲಿ: ದೇಶದ ಆರ್ಥಿಕತೆಯನ್ನು ಸುಸ್ಥಿರಗೊಳಿಸಬೇಕೆಂಬ ನೆಪವಾಗಿಟ್ಟುಕೊಂಡು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರ ವಿಮಾನ ನಿಲ್ದಾಣಗಳ ಖಾಸಗೀಕರಣಕ್ಕೆ ಮುಂದಾಗಿದೆ. ಮುಂದಿನ ಮಾರ್ಚ್ ಅಂತ್ಯದೊತ್ತಿಗೆ 13 ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸಲು ಪೂರ್ವ ಸಿದ್ಧತೆಗಳು ನಡೆದಿವೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
ಕೊರೊನಾ ಸಂಕಷ್ಟದಿಂದಾಗಿ ದೇಶದ ಜನತೆಗೆ ಸಾಕಷ್ಟು ಪ್ರಮಾಣದ ಆರ್ಥಿಕ ನಷ್ಟ ಉಂಟಾಗಿದ್ದು, ಜನತೆ ಕಲ್ಯಾಣ ಕಾರ್ಯಕ್ರಮಗಳಿಗೆ ಸ್ಪಂದಿಸದೆ, ದೇಶದ ಆಸ್ತಿಗಳನ್ನು ಮಾರಾಟ ಮಾಡುವ ಬಗ್ಗೆ ಕೆಲವು ದಿನಗಳ ಹಿಂದೆ ಪ್ರಕಟಿಸಿತು. ಈ ನಡುವೆ ಈಗಾಗಲೇ ಹಲವು ವಿಮಾನ ನಿಲ್ದಾಣಗಳನ್ನು ಖಾಸಗೀಕರಿಸಲಾಗಿದ್ದು, ಈಗ ಮತ್ತೆ ದೇಶದ ಹಲವು ಪ್ರತಿಷ್ಠಿತ ನಗರಗಳಲ್ಲಿರುವ ವಿಮಾನ ನಿಲ್ದಾಣಗಳನ್ನು ಖಾಸಗೀಕರಿಸುವ ನಿರ್ಧಾರಕ್ಕೆ ಬಂದಿದೆ ಎನ್ನಾಗಿದೆ.
ಇದನ್ನು ಓದಿ: ನಾಲ್ಕು ಮಹಾನಗರದ ವಿಮಾನ ನಿಲ್ದಾಣಗಳು ಖಾಸಗಿಯವರ ಪಾಲು
ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಅಧ್ಯಕ್ಷ ಸಂಜೀವ್ ಕುಮಾರ್ ಹೇಳಿಕೆ ಪ್ರಕಾರ 7 ಸಣ್ಣ ಮತ್ತು 6 ದೊಡ್ಡ ವಿಮಾನ ನಿಲ್ದಾಣಗಳ ಖಾಸಗೀಕರಣಕ್ಕೆ ಚಿಂತಿಸಿದೆ ಎನ್ನಲಾಗಿದೆ.
ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಮೇಲೆ ಬಿಡ್‍ಗೆ ಚಿಂತನೆ ನಡೆದಿದ್ದು, ಮುಂದಿನ ನಾಲ್ಕು ವರ್ಷಗಳಲ್ಲಿ ಒಟ್ಟು 25 ವಿಮಾನ ನಿಲ್ದಾಣಗಳನ್ನು ಖಾಸಗೀಕರಣಕ್ಕೆ ಕೇಂದ್ರವು ಯೋಜನೆ ಮಾಡಿಕೊಂಡಿದೆ ಎಂದು ಸಂಜೀವ್ ಕುಮಾರ್ ಹೇಳಿದ್ದಾರೆ.
ಖಾಸಗೀಕರಣಗೊಳಿಸುವ ವಿಮಾನ ನಿಲ್ದಾಣಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದ್ದು ಈ ಪಟ್ಟಿಯನ್ನು ಏರ್ ಪೋರ್ಟ್ ಅಥಾರಟಿ ಆಫ್ ಇಂಡಿಯಾ ನಾಗರಿಕರ ವಾಯುಯಾನ ಸಚಿವಾಲಯಕ್ಕೆ ರವಾನಿಸಿದೆ. ಈ ಪಟ್ಟಿಯಲ್ಲಿ ಕುಶಿನಗರ ಗಯಾ, ಕಾಂಗ್ರಾ, ಅಮೃತಸರ, ತಿರುಪತಿ, ಭುವನೇಶ್ವರ, ಔರಂಗಾಬಾದ್, ರಾಯ್‌ಪುರ, ಜಬಲ್‍ಪುರ, ಇಂದೋರ್, ಹುಬ್ಬಳ್ಳಿ, ತಿರುಚಿ ಪ್ರದೇಶದಲ್ಲಿರುವ ವಿಮಾನ ನಿಲ್ದಾಣಗಳು ಒಳಗೊಂಡಿದೆ.
ಇದನ್ನು ಓದಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಥಳೀಯ ಕಾರ್ಮಿಕರಿಗೆ ಅವಕಾಶವಿಲ್ಲ
2019ರಲ್ಲಿ ಮೋದಿ ಸರ್ಕಾರವು ಅಹಮದಾಬಾದ್, ಜೈಪುರ, ಲಕ್ನೋ, ತಿರುವನಂತಪುರಂ, ಮಂಗಳೂರು ಮತ್ತು ಗುವಾಹಟಿಯನ್ನು ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಲ್ಲಿ ಖಾಸಗೀಕರಣಗೊಳಿಸಿತ್ತು. ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಈ ಬಿಡ್ ಗೆದ್ದುಕೊಂಡಿತ್ತು.
ಕೊರೊನಾ ಸಾಂಕ್ರಾಮಿಕತೆಯಿಂದಾಗಿ ಏರ್ ಪೋರ್ಟ್ ಅಥಾರಟಿ ಆಫ್ ಇಂಡಿಯಾದ ಆದಾಯ ಭಾರೀ ಕುಸಿತ ಕಂಡಿತ್ತು. 2021ರ ಆರ್ಥಿಕ ವರ್ಷದಲ್ಲಿ 1962 ಕೋಟಿ ನಷ್ಟ ಅನುಭವಿಸಿತು. ಎಎಐ ನಿರ್ವಹಣೆ ಮತ್ತು ಸಿಬ್ಬಂದಿ ಸಂಬಳಕ್ಕಾಗಿ ಎಸ್‍ಬಿಐ ಬ್ಯಾಂಕಿನಿಂದ 1500 ಕೋಟಿ ಸಾಲ ಪಡೆದಿತ್ತು. 2024ರ ವೇಳೆಗೆ ವಿಮಾನ ನಿಲ್ದಾಣಗಳಿಂದ 3,660 ಕೋಟಿ ರೂಪಾಯಿಗಳ ಖಾಸಗಿ ಹೂಡಿಕೆಯನ್ನು ತರುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.