2021-22 ರ ಬಜೆಟ್ ಎನ್ನುವ ಒಂದು ಕಣ್ಕಟ್ಟು

ನಾವು ಹೆಚ್ಚು ಸಾಲ ತೆಗೆದುಕೊಳ್ಳುತ್ತೇವೆ ಮತ್ತು ಹೆಚ್ಚು ವೆಚ್ಚ ಮಾಡುತ್ತೇವೆ ಎನ್ನುವ ಸರಳ ಸೂತ್ರದ ಆಧಾರದಲ್ಲಿ ಜಿಡಿಪಿ ಬೆಳವಣಿಗೆ 11% ಕ್ಕೆ ನೆಗೆಯುತ್ತದೆ ಎಂದು ಅವರು ನಮ್ಮನ್ನು ನಂಬಿಸಲು ಪ್ರಯತ್ನಿಸುತ್ತಿದ್ದಾರೆ. ಎಲ್ಲಾ ಯೋಜನೆಗಳು ನಿಗದಿತ ಅವಧಿಯೊಳಗೆ ಮುಗಿದರೂ ಸಹ, ನಿರೀಕ್ಷಿತ ಅಭಿವೃದ್ಧಿಯನ್ನು ಸಾಧಿಸಿದರೂ ಸಹ 2021-22ರ ಜಿಡಿಪಿ ಗರಿಷ್ಠ 2.5% ಮಟ್ಟಕ್ಕೆ ತಲುಪಬಹುದು. ಆದರೆ ಇದನ್ನು ಹೇಳುವವರನ್ನು ಮೂರ್ಖರೆಂದು ಕರೆಯುವುದರಿಂದ ಯಾರೂ ಬಾಯಿ ಬಿಡುತ್ತಿಲ್ಲ.ಈ ಬಾರಿ ಕೃಷಿ ಸೆಸ್ ಎಂದು ಕೇಂದ್ರ ಸರಕಾರ ಪ್ರಸ್ತಾಪಿಸಿರುವ 15 ಬಗೆಯ ಪರೋಕ್ಷ ತೆರಿಗೆಗಳು (ಪೆಟ್ರೋಲ್, ಡೀಸೆಲ್, ಬಂಗಾರ, ಬೆಳ್ಳಿ, ಆಲ್ಕೋಹಾಲ್, ಪಾಮ್ ಎಣ್ಣೆ, ಸೇಬು, ಕಲ್ಲಿದ್ದಲು ಇತ್ಯಾದಿ) ನೇರವಾಗಿ ಬಡಜನರನ್ನು, ಕೆಳಮಧ್ಯಮ ವರ್ಗಗಳನ್ನು ದೋಚಲಿವೆ. ಯಾವುದೇ ದೇಶದಲ್ಲಿ ಪರೋಕ್ಷ ತೆರಿಗೆಯು ನೇರ ತೆರಿಗೆಗಿಂತ ಹೆಚ್ಚಿದ್ದರೆ ಆ ದೇಶವು ಎಂದಿಗೂ ಉದ್ದಾರವಾಗುವುದಿಲ್ಲ.

  ಬಿ. ಶ್ರೀಪಾದ ಭಟ್

ಫೆಬ್ರವರಿ 1, 2021ರಂದು ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡುವ ಸಂದರ್ಭದಲ್ಲಿ ಭಾರತದ ಜಿಡಿಪಿ ಬೆಳವಣಿಗೆ -7.7% ರಷ್ಟಿತ್ತು. ಕೋವಿಡ್ ಪೂರ್ವದಲ್ಲಿ ಜಿಡಿಪಿ ಬೆಳವಣಿಗೆ 4.4% ರಷ್ಟಿತ್ತು. ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆಯು 2021-22ರ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯು 11% ಕ್ಕೆ ಮುಟ್ಟುತ್ತದೆ ಎಂದು ಹೇಳಿತ್ತು. ಇಂತಹ ನಂಬಲೂ ಅಸಾದ್ಯವಾದಂತಹ, ವಾಸ್ತವದಲ್ಲಿ ಕಾರ್ಯರೂಪಗೊಳಿಸಲೂ ಸಾದ್ಯವಿಲ್ಲದಂತಹ ಭವಿಷ್ಯವನ್ನು ಯಾವ ಧೈರ್ಯದಲ್ಲಿ ಹೇಳಿದರು ಎಂದು ಕೇಳಬೇಕಿಲ್ಲ. ಏಕೆಂದರೆ ಮೋದಿ ಮತ್ತವರ ಪಟಾಲಂಗೆ ಏನು ಬೇಕಾದರೂ ಹೇಳಿ ದಕ್ಕಿಸಿಕೊಳ್ಳಬಹುದು ಎನ್ನುವ ಭಂಡತನ ಬಂದಿರುವುದರಿಂದ ಮತ್ತು ಇದನ್ನು ಶೇ.38% ಪ್ರಮಾಣದ ಭಾರತೀಯರು ನಂಬುವುದರಿಂದ ಈ ರೀತಿಯ ಜುಮ್ಲಾಗಳನ್ನು ಬಿಡುತ್ತಲೇ ಇರುತ್ತಾರೆ. ಇರಲಿ. ಆದರೆ ಈ ಬಾರಿಯ ವಿಶೇಷವೆಂದರೆ ಮೊಟ್ಟ ಮೊದಲ ಬಾರಿಗೆ ಹಣಕಾಸು ಮಂತ್ರಿಗಳು ಸತ್ಯವನ್ನು ನುಡಿದಿದ್ದಾರೆ. ಅದೇನೆಂದರೆ 2020-21ರ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯು ಜಿಡಿಪಿಯ ಶೇ.9.5%ರಷ್ಟಿತ್ತು. ಹಣಕಾಸು ವರ್ಷ 2021-22ರ ವೇಳೆಗೆ ಅದು ಜಿಡಿಪಿಯ  ಶೇ. 6.8% ರಷ್ಟಿರುತ್ತದೆ ಎಂದು ಹೇಳಿದ್ದಾರೆ.

ಈ 2021-22ರ ಹಣಕಾಸು ವರ್ಷದ ಒಟ್ಟು ವೆಚ್ಚ 34.83 ಲಕ್ಷ ಕೋಟಿ ಎಂದು ಹೇಳಿದ್ದಾರೆ. ಹಿಂದಿನ ವರ್ಷದ 2020-21ರಲ್ಲಿ ಬಜೆಟ್ ವೆಚ್ಚವು 34.5 ಲಕ್ಷ ಕೋಟಿಯಷ್ಟಿತ್ತು. ಅದರಲ್ಲಿ 4.39 ಲಕ್ಷ ಕೋಟಿ ಕ್ಯಾಪಿಟಲ್ ವೆಚ್ಚವಾಗಿದೆ ಎಂದು ಹೇಳಿದ್ದಾರೆ. ಅಂದರೆ ಹಿಂದಿನ ವರ್ಷಕ್ಕಿಂತ ಈ ವರ್ಷದ ವೆಚ್ಚದಲ್ಲಿ 32,931 ಕೋಟಿ ಮಾತ್ರ (ಶೇ.0.92) ಹೆಚ್ಚಾಗಿದೆ. ಹಾಗಿದ್ದಲ್ಲಿ ಜಿಡಿಪಿ -7.7 ದಿಂದ 11 % ಹೇಗೆ ಹೆಚ್ಚುತ್ತದೆ? ದಿನಗಳು ಕಳೆದಂತೆ ರೂಪಾಯಿಯ ಅಪಮೌಲ್ಯವು ಏರುತ್ತಿದೆ. ಈ 0.92% ವ್ಯತ್ಯಾಸವು ಶೀಘ್ರದಲ್ಲಿ ಸೊನ್ನೆಗೆ ಇಳಿಯಲಿದೆ ಮತ್ತು ಕ್ರಮೇಣ ಇದು ಖುಣಾಂಕ ತಲುಪಲಿದೆ. ಆಗ ವೆಚ್ಚದ ಲೆಕ್ಕಾಚಾರವೇ ಬದಲಾಗುತ್ತದೆ. ಆದರೆ ಹಣಕಾಸು ಮಂತ್ರಿಗಳು ಈ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ. ಬದಲಿಗೆ ‘ಸಾದ್ಯವಾದಷ್ಟು ಖರ್ಚು ಮಾಡಿ’ ಎನ್ನುವ ನವ ಉದಾರೀಕರಣದ ಮಂತ್ರವನ್ನು ಜಪಿಸುತ್ತಿದ್ದಾರೆ. ಇದಕ್ಕಾಗಿ 12 ಲಕ್ಷ ಕೋಟಿ ಸಾಲ ಎತ್ತಲು ಸಿದ್ದರಿದ್ದೇವೆ ಎಂದು ಹೇಳಿದ್ದಾರೆ. ಸಹಜವಾಗಿಯೇ ಮುಕ್ತ ಮಾರುಕಟ್ಟೆಯನ್ನು ಬೆಂಬಲಿಗರು ಇದನ್ನು ಸ್ವಾಗತಿಸಿದ್ದಾರೆ. ನಾವು ಹೆಚ್ಚು ಸಾಲ ತೆಗೆದುಕೊಳ್ಳುತ್ತೇವೆ ಮತ್ತು ಹೆಚ್ಚು ವೆಚ್ಚ ಮಾಡುತ್ತೇವೆ ಎನ್ನುವ ಸರಳ ಸೂತ್ರದ ಆಧಾರದಲ್ಲಿ ಜಿಡಿಪಿ ಬೆಳವಣಿಗೆ 11% ಕ್ಕೆ ನೆಗೆಯುತ್ತದೆ ಎಂದು ಅವರು ನಮ್ಮನ್ನು ನಂಬಿಸಲು ಪ್ರಯತ್ನಿಸುತ್ತಿದ್ದಾರೆ. ಉದಾಹರಣೆಗೆ 2021-22ರ ಮೂಲಭೂತ ಸೌಕರ್ಯದ ವೆಚ್ಚ 5.54 ಲಕ್ಷ ಕೋಟಿ ಮುಟ್ಟುತ್ತದೆ ಮತ್ತು ಇದು ಉದ್ಯೋಗ ಸೃಷ್ಟ್ಟಿಸುತ್ತದೆ ಮತ್ತು ಇದು ವೆಚ್ಚವನ್ನು ಹೆಚ್ಚಿಸುತ್ತದೆ ಮತ್ತು ಇದು ಜಿಡಿಪಿಯನ್ನು ಹೆಚ್ಚಿಸುತ್ತದೆ ಎಂದು ಮಂತ್ರಿಗಳ ವಾದ. ಮೇಲ್ನೋಟಕ್ಕೆ ಎಲ್ಲವೂ ಸುಂದರ. ಆದರೆ ಯಾವುದೇ ಕಾಮಗಾರಿ, ರಸ್ತೆ ನಿರ್ಮಾಣ ಯೋಜನೆಗಳು ನಿಗದಿತ ಅವದಿಯೊಳಗೆ ಮುಗಿಯುವುದಿಲ್ಲ. ಮತ್ತು ಅವಧಿ ಹೆಚ್ಚಿದಷ್ಟು ಅದರ ಕಾರ್ಯನಿರ್ವಹಣೆಯ ವೆಚ್ಚವೂ ಹೆಚ್ಚತ್ತದೆ. ಈ ದೀರ್ಘಾವಧಿ ಯೋಜನೆಗಳಿಗೆ ನಿಗದಿತವಾಗಿ ಬಂಡವಾಳ ಪೂರೈಕೆ ಮಾಡಬೇಕಾಗುತ್ತದೆ. ಆದರೆ ಪ್ರಾಯೋಗಿಕವಾಗಿ ಇದು ಕಾರ್ಯಸಾಧುವಲ್ಲ. ಎಲ್ಲಾ ಯೋಜನೆಗಳು ನಿಗದಿತ ಅವಧಿಯೊಳಗೆ ಮುಗಿದರೂ ಸಹ, ನಿರೀಕ್ಷಿತ ಅಬಿವೃದ್ಧಿಯನ್ನು ಸಾಧಿಸಿದರೂ ಸಹ 2021-22ರ ಜಿಡಿಪಿ ಗರಿಷ್ಠ 2.5% ಮಟ್ಟಕ್ಕೆ ತಲುಪಬಹುದು. ಆದರೆ ಇದನ್ನು ಹೇಳುವವರನ್ನು ಮೂರ್ಖರೆಂದು ಕರೆಯುವುದರಿಂದ ಯಾರೂ ಬಾಯಿ ಬಿಡುತ್ತಿಲ್ಲ.

ಇತ್ತ 12 ಕೋಟಿ ಉದ್ಯೋಗ ಸೃಷ್ಟ್ಟಿ ಮಾಡುವ ಎಂ.ಎಸ್.ಎಂ.ಇ (ಮದ್ಯಮ, ಸಣ್ಣ, ಅತಿ ಸಣ್ಣ ಉದ್ಯಮ) ವಲಯಕ್ಕೆ ಕೇವಲ 15,೦೦೦ ಕೋಟಿ ಕೊಟ್ಟಿದ್ದಾರೆ. ಈಗಾಗಲೇ ನೆಲಕಚ್ಚಿರುವ ಈ ವಲಯಕ್ಕೆ ಈ ಅನುದಾನದಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಮತ್ತು ಎಂ.ಎಸ್.ಎಂ.ಇ ವಲಯವು ಚೇತರಿಸಿಕೊಳ್ಳದಿದ್ದರೆ ಜಿಡಿಪಿಯೂ ಹೆಚ್ಚುವುದಿಲ್ಲ. ಆದರೆ ಸರಕಾರ ಈ ವಲಯವನ್ನು ನಿರ್ಲಕ್ಷಿಸಿದೆ, ಉದ್ಯೋಗ ಸೃಷ್ಟ್ಟಿಯ ಕುರಿತೂ ಯಾವುದೇ ಪ್ರಸ್ತಾಪವಿಲ್ಲ. ಉತ್ಪಾದನಾ ವಲಯದಲ್ಲಿ ಅಭಿವೃದ್ದಿಯಾಗದೇ ಹೋದರೆ ದೇಶದ ಅಭಿವೃದ್ದಿ ಸೂಚ್ಯಂಕವೂ ಹೆಚ್ಚುವುದಿಲ್ಲ. ಆದರೆ ಈ ಬಾರಿಯ ಬಜೆಟ್‌ನಲ್ಲಿ ಉತ್ಪಾದನಾ ವಲಯಕ್ಕೆ ಯಾವುದೇ ವಿಶೇಷ ಉತ್ತೇಜನವಿಲ್ಲ. ಭಾರತದಲ್ಲಿ ಅಂದಾಜು 50 ಕೋಟಿ ದುಡಿಯುವ ವರ್ಗವಿದೆ. ಸಿ.ಎಂ.ಐ.ಇನ ಅನುಸಾರ ಇವರಲ್ಲಿ 40 ಕೋಟಿ ಜನಸಂಖ್ಯೆ ಅನೌಪಚಾರಿಕ, ಔಪಚಾರಿಕ, ಅಸಂಘಟಿತ ವಲಯದಲ್ಲಿ ದುಡಿಯುತ್ತಾರೆ. ಉಳಿದ 10 ಕೋಟಿ ಜನಸಂಖ್ಯೆ ನಿರುದ್ಯೋಗಿಗಳು. ಕೆಲಸದ ಹುಡುಕಾಟದಲ್ಲಿದ್ದಾರೆ. ಇಂದು ನಿರುದ್ಯೋಗದ ಪ್ರಮಾಣ ಶೇ.14% ರಷ್ಟಿದೆ. ನಗರ ಪ್ರದೇಶದಲ್ಲಿ8% ಮತ್ತು ಗ್ರಾಮೀಣ ಪ್ರದೇಶದಲ್ಲಿ 6%ರಷ್ಟಿದೆ. ಇಂತಹ ಸಂದರ್ಭದಲ್ಲಿ ಹಣಕಾಸು ಮಂತ್ರಿಗಳು ಈ ನಿರುದ್ಯೋಗ ಪ್ರಮಾಣವನ್ನು ತಗ್ಗಿಸಲು ಮತ್ತು ಬೇಡಿಕೆ ಹೆಚ್ಚಿಸಲು ವಿಶೇಷ ಯೋಜನೆಗಳನ್ನು ಪ್ರಕಟಿಸಲಿಲ್ಲ. ಬದಲಿಗೆ ಬಂಡವಾಳಶಾಹಿಗಳಿಗೆ ಹೂಡಿಕೆ ಮಾಡಲು ಅನುಕೂಲವಾಗುವಂತೆ ಪ್ಯಾಕೇಜ್‌ಗಳನ್ನು ಘೋಷಿಸಿದ್ದಾರೆ. ಉದಾಹರಣೆಗೆ ಬಂಡವಾಳ ಹಿಂತೆಗೆತಕ್ಕೆ 1.75 ಲಕ್ಷ ಕೋಟಿಯನ್ನು ನಿಗದಿಪಡಿಸಿದ್ದಾರೆ. ಎಲ್.ಐ.ಸಿಯಲ್ಲಿ ವಿದೇಶಿ ಬಂಡವಾಳ ಹೂಡಿಕೆಯನ್ನು ಶೇ.49%ರಿಂದ ಶೇ.74% ಪ್ರಮಾಣಕ್ಕೆ ಹೆಚ್ಚಿಸಿದ್ದಾರೆ. ಎರಡು ಸಾರ್ವಜನಿಕ ಬ್ಯಾಂಕ್‌ಗಳು ಮತ್ತು ಒಂದು ಸಾಮಾನ್ಯ ವಿಮಾ ಕಂಫನಿಯನ್ನು ಖಾಸಗಿಕರಣಗೊಳಿಸಲಾಗುವುದೆಂದು ಹೇಳಿದ್ದಾರೆ. ಅಂದರೆ ಖಾಸಗೀಕರಣವನ್ನು ಉತ್ತೇಜಿಸುವ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್‌ನ ಪ್ರಸ್ತಾಪದ ಅನುಸಾರ ರೈಲ್ವೆ, ಅರಣ್ಯ, ಕೃಷಿ ಇತ್ಯಾದಿ ಸರಕಾರಿ ಜಮೀನು ಖಾಸಗಿಯವರ ಪಾಲಾಗಲಿದೆ. ಬಡಜನರ ಬದುಕು ಮತ್ತಷ್ಟು ಹದಗೆಡಲಿದೆ. ದೇಶದ ಬಡಜನರ ಬದುಕು ಹಸನಾಗುವಂತಹ ಯಾವುದೇ ಕಾರ್ಯಕ್ರಮಗಳನ್ನು ರೂಪಿಸಿಲ್ಲ.

ಕೋವಿಡ್ ಸಂದರ್ಭದ ಆ ಒಂಬತ್ತು ತಿಂಗಳಲ್ಲಿ ದೇಶದ ಜಿ.ಡಿ.ಪಿ ಕುಸಿದು, ಬಡತನ ರೇಖೆಗಿಂತ ಕೆಳಗಿರುವ 80 ಕೋಟಿ ಜನಸಂಖ್ಯೆಯ ಬದುಕು ಬೀದಿಗೆ ಬಂದು ನಿರುದ್ಯೋಗದ ಪ್ರಮಾಣವು ಶೇ.22% ಏರಿಕೆಯಾಗಿದೆ. ಇಡೀ ದೇಶವೇ ಸಾಮಾಜಿಕ-ಆರ್ಥಿಕವಾಗಿ ತತ್ತರಿಸುತ್ತಿದ್ದಂತಹ ಸಂದರ್ಭದಲ್ಲಿ ಈ ದೇಶದ ಶೇ.1% ಪ್ರಮಾಣದಷ್ಟ್ಟಿರುವ ಅತಿ ಶ್ರೀಮಂತರ ಸಂಪತ್ತು ಶೇ.೩೫% ರಷ್ಟು ಹೆಚ್ಚಾಗಿತ್ತು. ಇಂತಹ ಬಿಕ್ಕಟ್ಟಿನಲ್ಲಿ ಈ ಅತಿ ಶ್ರೀಮಂತರಿಗೆ ಶೇ.2% ಪ್ರಮಾಣದ ನೇರ ತೆರಿಗೆ ವಿಧಿಸಿ ಆದಾಯ ಕ್ರೋಢೀಕರಣ ಮಾಡಬಹುದಿತ್ತು. ಆದರೆ ನಿರ್ಮಲಾ ಸೀತಾರಾಮನ್ ಅವರು ಅತಿ ಶ್ರೀಮಂತರ ಜೇಬಿನ ತಂಟೆಗೂ ಹೋಗದೆ ದೇಶದ ಬಡಜನರ, ಕೆಳವರ್ಗಗಳ ಮೇಲೆ ತೀವ್ರತರ ದುಶ್ಪರಿಣಾಮ ಬೀರುವ ಪರೋಕ್ಷ ತೆರಿಗೆಯನ್ನು ಹೆಚ್ಚಿಸಿದ್ದಾರೆ. ಈ ಬಾರಿ ಕೃಷಿ ಸೆಸ್ ಎಂದು ಕೇಂದ್ರ ಸರಕಾರ ಪ್ರಸ್ತಾಪಿಸಿರುವ 15 ಬಗೆಯ ಪರೋಕ್ಷ ತೆರಿಗೆಗಳು (ಪೆಟ್ರೋಲ್, ಡೀಸೆಲ್, ಬಂಗಾರ, ಬೆಳ್ಳಿ, ಆಲ್ಕೋಹಾಲ್, ಪಾಮ್ ಎಣ್ಣೆ, ಸೇಬು, ಕಲ್ಲಿದ್ದಲು ಇತ್ಯಾದಿ) ನೇರವಾಗಿ ಬಡಜನರನ್ನು, ಕೆಳಮಧ್ಯಮವರ್ಗಗಳನ್ನು ದೋಚಲಿವೆ. ಈ ಸೆಸ್ ತೆರಿಗೆ ಮೂಲಕ ಸಂಗ್ರಹವಾದ ಮೊತ್ತವು ನೇರವಾಗಿ ಕೇಂದ್ರದ ಬೊಕ್ಕಸಕ್ಕೆ ಹೋಗಲಿದೆ ಮತ್ತು ರಾಜ್ಯಗಳಿಗೆ ಯಾವುದೇ ಹಂಚಿಕೆಯಾಗುವುದಿಲ್ಲ. ಯಾವುದೇ ದೇಶದಲ್ಲಿ ಪರೋಕ್ಷ ತೆರಿಗೆಯು ನೇರ ತೆರಿಗೆಗಿಂತ ಹೆಚ್ಚಿದ್ದರೆ ಆ ದೇಶವು ಎಂದಿಗೂ ಉದ್ದಾರವಾಗುವುದಿಲ್ಲ.

ಕೃಷಿ ಹೆಸರಿನಲ್ಲಿ ಹೇರಲಾಗಿರುವ ಸೆಸ್ ತೆರಿಗೆ ಮೂಲಕ ಸಂಚಯವಾಗುವ ಹಣವನ್ನು ಅದರ ಮೂಲ ಉದ್ದೇಶವಾದ ಕೃಷಿ ಅಬಿವೃದ್ದಿಗೆ ಬಳಸಿಕೊಳ್ಳುತ್ತದೆ ಎನ್ನುವುದಕ್ಕೆ ಯಾವುದೇ ಖಾತರಿಯಿಲ್ಲ. ಯಾಕೆಂದರೆ 2018ರ ಹಣಕಾಸು ವರ್ಷದಲ್ಲಿ ಕೃಷಿ, ಶಿಕ್ಷಣ, ಆರೋಗ್ಯ ಇತ್ಯಾದಿ ಒಳಗೊಂಡಂತೆ 42 ಸೆಸ್ ಗಳನ್ನು ಜಡಿದ ಮೋದಿ ಸರಕಾರ ಆ ಮೂಲಕ 2.5 ಲಕ್ಷ ಕೋಟಿಯನ್ನು ಸಂಗ್ರಹ ಮಾಡಿತ್ತು. ಆದರೆ ಆ ಮೊತ್ತವನ್ನು ಮರಳಿ ಸಂಬಂದಪಟ್ಟ ಇಲಾಖೆಗಳ ಅಭಿವೃದ್ದಿಗೆ ವೆಚ್ಚ ಮಾಡಲೇ ಇಲ್ಲ. ಉದಾಹರಣೆಗೆ ಸ್ವಚ್ಚ ಭಾರತ್ ಸೆಸ್ ಎಂದು ಪಡೆದ ಹಣದ 4891 ಕೋಟಿ ಹಣವನ್ನು ಆ ಉದ್ದೇಶಕ್ಕೆ ಬಳಸಲಿಲ್ಲ. 2011ರಿಂದ ರಸ್ತೆ ಸೆಸ್ ಎಂದು ಪಡೆದು 72,726 ಕೋಟಿ ಮೊತ್ತವನ್ನು ಮರಳಿ ಆ ಉದ್ದೇಶಕ್ಕೆ ಬಳಸಲಿಲ್ಲ. 2007 ರಿಂದ 2018ರವರೆಗೆ ಸೆಕೆಂಡರಿ ಮತ್ತು ಉನ್ನತ ಶಿಕ್ಷಣದ ಸೆಸ್ ಎಂದು ಬಾಚಿಕೊಂಡ 1 ಲಕ್ಷ ಕೋಟಿ ರೊಕ್ಕವನ್ನು ಮರಳಿ ಶಿಕ್ಷಣಕ್ಕೆ ವೆಚ್ಚ ಮಾಡಲೇ ಇಲ್ಲ. ಆ ಹಣ ಎಲ್ಲಿ ಹೋಯಿತು ಎಂದು ಕೇಳುವವರೂ ಇಲ್ಲ. ಈ ಬಾರಿಯೂ ಸಹ ಕೃಷಿ ಹೆಸರಿನಲ್ಲಿ ಪಡೆದ ಸೆಸ್‌ನ ಹಣವನ್ನು ಮರಳಿ ಕೃಷಿಗೆ ಬಳಸುತ್ತದೆ ಎನ್ನುವ ನಂಬಿಕೆಯಿಲ್ಲ. ಮೋದಿ ಸರಕಾರ ವಿಶ್ವಾಸಾರ್ಹತೆಯನ್ನು ಕಲೆದುಕೊಂಡಿದೆ.

ಈ ಬಾರಿಯ ಬಜೆಟ್‌ನಲ್ಲಿ ಕೃಷಿಗೆ ಯಾವುದೇ ಹೊಸ ಬಗೆಯ ಉತ್ತೇಜನವಿಲ್ಲ. ಕಳೆದ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ 1,34,349 ಕೋಟಿ ಇತ್ತು. 2021-22ರ ಬಜೆಟ್‌ನಲ್ಲಿ ಅದು 1,22961 ಕೋಟಿಗೆ ಇಳಿದಿದೆ. 11,388 ಕೋಟಿ ಕಡಿತಗೊಳಿಸಿದ್ದಾರೆ.ಕೃಷಿ, ಸಹಕಾರಿ ಮತ್ತು ರೈತ ಕಲ್ಯಾಣ ಯೋಜನೆಗಳಿಗೆ ಶೇ.8.5 ರಷ್ಟು ಕಡಿತಗೊಳಿಸಿದ್ದಾರೆ. ಪಿಎಮ್-ಕಿಸಾನ್ ಯೋಜನೆಯಲ್ಲಿ ಶೇ.೧೩ರಷ್ಟು ಕಡಿತಗೊಳಿಸಿದ್ದಾರೆ. 2020-21ರಲ್ಲಿ ಮನರೇಗಾಗೆ ಪರಿಷ್ಕರಿಸಿ 1.1 ಲಕ್ಷ ಕೋಟಿ ನಿಗದಿಪಡಿಸಲಾಗಿತ್ತು. ಆದರೆ 2021-22ರ ಬಜೆಟ್‌ನಲ್ಲಿ ಅದಕ್ಕೆ  ಕೇವಲ 73,000 ಕೋಟಿ ಕೊಟ್ಟಿದ್ದಾರೆ. ಅಂದರೆ 31,111 ಕೋಟಿ ಕಡಿತಗೊಳಿಸಿದ್ದಾರೆ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ವಲಯಕ್ಕೆ 6 ಸಾವಿರ ಕೋಟಿ ಕಡಿತಗೊಳಿಸಿದ್ದಾರೆ. ಅಂಗನವಾಡಿಗೆ 600 ಕೋಟಿ, ಐಸಿಡಿಎಸ್‌ಗೆ ಶೇ.30%, ಬಿಸಿಯೂಟಕ್ಕೆ 1400 ಕೋಟಿ  ಕಡಿತಗೊಳಿಸಿದ್ದಾರೆ. ದೇಶದಲ್ಲಿ ಅಪೌಷ್ಟ್ಟಿಕತೆ ಹೆಚ್ಚಿರುವ ಸಂದರ್ಭದಲ್ಲಿ ಅದಕ್ಕೆ ಅನುದಾನವನ್ನು ಕಡಿತಗೊಳಿಸಿರುವುದನ್ನು ಅಬಿವೃದ್ದಿ ಎಂದು ಕರೆಯಬೇಕೆ?

ಸಮಾಜ ಕಲ್ಯಾಣ ಮತ್ತು ಸಬಲೀಕರಣ ಇಲಾಖೆಗೆ ಈ ಬಾರಿ 10,517 ಕೋಟಿ ಕೊಟ್ಟಿದ್ದಾರೆ ಮತ್ತು ವಿಕಲಚೇತನ ಸಬಲೀಕರಣಕ್ಕೆ 1,171 ಕೋಟಿ ನೀಡಿದ್ದಾರೆ. ಆದರೆ ಹಣದುಬ್ಬರದ ಸೂಚ್ಯಂಕ ಏರಿಕೆಯಾಗುತ್ತಿರುವ ಈ ದಿನಗಳಲ್ಲಿ  ಈ ಮೊತ್ತವು ತುಂಬಾ ಕಡಿಮೆ. ಅಂಚಿನಲ್ಲಿರುವ ಸಮುದಾಯಗಳ ಸಬಲೀಕರಣ ಮತ್ತು ವಿಮೋಚನೆಗೆ ಸರಕಾರದಿಂದ ಯಾವುದೇ ಪ್ರೋತ್ಸಾಹಕರ ಬೆಂಬಲ ದೊರಕಿಲ್ಲ. ಮತ್ತು ಈಗ ಹೇಳಿರುವ ಮೊತ್ತವೂ ಮುಂದಿನ ದಿನಗಳಲ್ಲಿ ಪರಿಷ್ಕರಿಸಲ್ಪಡುತ್ತದೆ.

ಮುಂದಿನ 6 ವರ್ಷಗಳಲ್ಲಿ ದಲಿತ ಸಮುದಾಯದ ವಿದ್ಯಾಥಿಗಳಿಗಾಗಿ 35,219 ಕೋಟಿ ಹಣ ವೆಚ್ಚ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಇದು ಎಂತಹ ವಂಚನೆ ಮತ್ತು ಮರೆ ಮೋಸವೆಂದರೆ, ಮೊದಲಿಗೆ ಇದು 1944ರಿಂದ ಜಾರಿಯಲ್ಲಿರುವ ಪ.ಜಾತಿ ವಿದ್ಯಾರ್ಥಿಗಳ ಮೆಟ್ರಿಕ್ ನಂತರದ ಸ್ಕಾಲರ್ ಶಿಪ್ ಯೋಜನೆ. ಇದರಲ್ಲಿ ಹೊಸದೇನಿಲ್ಲ. ಒಂದು ತಿಂಗಳ ಹಿಂದೆ ಮೋದಿ ಸರಕಾರದ ಕ್ಯಾಬಿನೆಟ್ ಮುಂದಿನ ಐದು ವರ್ಷಗಳಿಗೆ 59,048 ಕೋಟಿ ಮೆಟ್ರಿಕ್‌ಪೂರ್ವ ಸ್ಕಾಲರ್ ಶಿಪ್ ಹಣವನ್ನು ಮೀಸಲಿಡಲಾಗುವುದು ಎಂದು ಪ್ರಕಟಿಸಿತ್ತು. ಆದರೆ ಬಜೆಟ್ ಮಂಡನೆಯ ಸಂದರ್ಭದಲ್ಲಿ ಆ ಮೊತ್ತದಲ್ಲಿ 23,829 ಕೋಟಿ ಕಡಿತಗೊಳಿಸಿದ್ದಾರೆ ಮತ್ತು ಐದು ವರ್ಷದಿಂದ ಆರು ವರ್ಷಕ್ಕೇರಿಸಿದ್ದಾರೆ.  ದೇಶದ್ಯಾಂತ ಸುಮಾರು 57 ಲಕ್ಷ ಪ.ಜಾತಿ ವಿದ್ಯಾರ್ಥಿಗಳಿದ್ದಾರೆ ಎಂದು ಅಂದಾಜಿಸಿದರೆ ಒಬ್ಬ ವಿದ್ಯಾರ್ಥಿಗೆ ಪ್ರತಿ ವರ್ಷ 10,000 ರೂ, ಪ್ರತಿ ತಿಂಗಳು 858 ರೂ. ದೊರಕುತ್ತದೆ. ಈ ಕೇವಲ ಹಣದಿಂದ ಆ ವಿದ್ಯಾರ್ಥಿಗೆ ಯಾವುದೇ ಆರ್ಥಿಕ ಅನುಕೂಲತೆ ದೊರಕುವುದಿಲ್ಲ. ಆತನ ಹಾಸ್ಟೆಲ್ ವಾಸದ ಫೀಸ್ ಮತ್ತು ಮೆಸ್ ಫೀಸ್‌ನ ವೆಚ್ಚ ಸುಮಾರು 2000 ರೂ. ಗಳಾಗುತ್ತದೆ. ಇದು ದಲಿತ ವಿದ್ಯಾರ್ಥಿಗಳಿಗೆ ಶಿಕ್ಷಣದಿಂದ ವಂಚಿತರನ್ನಾಗಿಸುತ್ತದೆ.  ಮತ್ತು ಈ ಹಣವನ್ನು ಕೇಂದ್ರ ಮತ್ತು ರಾಜ್ಯಗಳು 60:40 ಅನುಪಾತದಲ್ಲಿ ಕೊಡಬೇಕು. ರಾಜ್ಯಗಳು ತಮ್ಮಲ್ಲಿ ಹಣವಿಲ್ಲ ಎಂದು ಕೈ ಎತ್ತುತ್ತವೆ ಮತ್ತು ಕೇಂದ್ರವೂ ಸಹ ಹಣ ಬಿಡುಗಡೆ ಮಾಡುವುದಿಲ್ಲ. ಇದು ವಾಸ್ತವ. ಇದು ದಲಿತರಿಗೆ ಮಾಡಿದ ವಂಚನೆಯಲ್ಲವೇ?

ಶಿಕ್ಷಣ ಇಲಾಖೆಗೆ 2020ರಲ್ಲಿ 99,312 ಕೋಟಿ ಕೊಟ್ಟಿದ್ದರೆ ಈ ಬಾರಿ 2021ರಲ್ಲಿ 93,224 ಕೋಟಿ ಹಂಚಿಕೆ ಮಾಡಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ 6000 ಕೋಟಿ ಕಡಿತಗೊಳಿಸಿದ್ದಾರೆ. ಕೋವಿಡ್ ಕಾಲದಲ್ಲಿ ತೀವ್ರವಾಗಿ ಸಂಕಷ್ಟಕ್ಕೀಡಾಗಿದ್ದ ಶಿಕ್ಷಣ ಕ್ಷೇತ್ರಕ್ಕೆ ಈ ಬಾರಿ ಬಜೆಟ್‌ನಲ್ಲಿ ತುಂಬಾ ನಿರೀಕ್ಷೆಗಳಿದ್ದವು. ಆದರೆ ಮೋದಿ ಸರಕಾರವು ಶಿಕ್ಷಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ವರ್ತಿಸಿದ್ದಾರೆ. ಇದೇ ಸರಕಾರ 2014ರಲ್ಲಿ 1.1 ಲಕ್ಷ ಕೋಟಿ ಮೀಸಲಿಟ್ಟಿತ್ತು. ವರ್ಷಗಳು ಕಳೆದಂತೆ ಹಣದುಬ್ಬರ ಜಾಸ್ತಿಯಾಗಿದೆ, ಬದುಕು ನಿರ್ವಹಣೆಯೂ ದುಬಾರಿಯಾಗಿದೆ. ಆದರೆ ಶಿಕ್ಷಣಕ್ಕೆ ಮಾತ್ರ ಅನುದಾನ ಕಡಿತಗೊಳ್ಳುತ್ತಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವಲಯದಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಶೇ.137% ರಷ್ಟು ಏರಿಕೆಯಾಗಿದೆ ಎಂದು ತಮಗೆ ತಾವೇ ಬೆನ್ನು ತಟ್ಟಿಕೊಂಡಿದ್ದಾರೆ. ಹಣಕಾಸು ಮಂತ್ರಿಗಳು ಮತ್ತು ಮಾಧ್ಯಮಗಳೂ ಸಹ ಪ್ರಶಂಸಿಸುತ್ತಿವೆ. ಆದರೆ ವಾಸ್ತವದಲ್ಲಿ ಶೇ.27% ಪ್ರಮಾಣದಷ್ಟು ಕಡಿಮೆಯಾಗಿದೆ. ಅದು ಹೇಗೆಂದು ದಿಸ್ತಾ ಭಟ್ಟಾಚಾರ್ಯ ಅವರು ನ್ಯೂಸ್ ಕ್ಲಿಕ್ ಪತ್ರಿಕೆಯಲ್ಲಿ ವಿವರಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಕಳೆದ ವರ್ಷದ 94,452 ಕೋಟಿಗೆ ಹೋಲಿಸಿದರೆ ಈ ಬಾರಿ ಆರೋಗ್ಯ ವಲಯಕ್ಕೆ 2,23,846 ಕೋಟಿ ವೆಚ್ಚ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದು 137%ರಷ್ಟು ಏರಿಕೆ ಎಂದು ಬಣ್ಣಿಸಿದ್ದಾರೆ. ಆದರೆ ವಾಸ್ತವವಾಗಿ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ವಲಯಕ್ಕೆ 73,931.77 ಕೋಟಿ ನೀಡಿದ್ದಾರೆ. ಈ ಮೊತ್ತವನ್ನು ಅರೋಗ್ಯ ಮತ್ತು ಕುಟುಂಬ ಮತ್ತು ಕಲ್ಯಾಣ ವಲಯ ಮತ್ತು ಆರೋಗ್ಯ ಸಂಶೋದನೆಯ ನಡುವೆ ಹಂಚಲಾಗಿದೆ. ಅದರ ವಿವರ ಈ ರೀತಿ ಇದೆ (ಅಂಕಿ ಅಂಶಗಳ ಕೃಪೆ : ನ್ಯೂಸ್ ಕ್ಲಿಕ್)

ಆರೋಗ್ಯ ಮತ್ತು ಕುಟುಂಬ ಮತ್ತು ಕಲ್ಯಾಣ ಇಲಾಖೆ 71,269 ಕೋಟಿ
ಆರೋಗ್ಯ ಸಂಶೋದನೆ ಇಲಾಖೆ 2663 ಕೋಟಿ
ಆಯುಶ್ ಮಂತ್ರಾಲಯ 2970 ಕೋಟಿ   
ಕೋವಿಡ್ ಲಸಿಕೆ 35,000 ಕೋಟಿ
ಕುಡಿಯುವ ನೀರು ಮತ್ತು ಒಳಚರಂಡಿ ಇಲಾಖೆ    60,030 ಕೋಟಿ 
ಪೌಷ್ಟಿಕಾಂಶ 2700 ಕೋಟಿ
ಕುಡಿಯುವ ನೀರು ಮತ್ತು ಒಳಚರಂಡಿ ಇಲಾಖೆಗೆ ಹಣಕಾಸು ಆಯೋಗದ ಅನುದಾನ 36,022 ಕೋಟಿ 
ಹಣಕಾಸು ಆಯೋಗದ ಆರೋಗ್ಯ ಅನುದಾನ 13,192 ಕೋಟಿ 
ಒಟ್ಟು 2,23,846 ಕೋಟಿ

ಇದನ್ನೂ ಓದಿ : ಕೇಂದ್ರ ಬಜೆಟ್ 2021-22: ಜನತೆಗೆ ಬಹುದೊಡ್ಡ ವಿಶ್ವಾಸದ್ರೋಹ-ಸಿಪಿಐ(ಎಂ) ಪೊಲಿಟ್‍ ಬ್ಯುರೊ

ಮೇಲಿನ ವಿವರಗಳ ಅನುಸಾರ ವಾಸ್ತವದಲ್ಲಿ ಅರೋಗ್ಯ ಮತ್ತು ಕುಟುಂಬ ಮತ್ತು ಕಲ್ಯಾಣ ಇಲಾಖೆಗೆ ಮಾತ್ರ ಕೊಟ್ಟಿರುವ ಮೊತ್ತವು ಅಂತಹ ಹೆಚ್ಚೇನಲ್ಲ. ಮತ್ತು ಪೌಷ್ಟ್ಟಿಕಾಂಶಕ್ಕೆ ಶೇ. 27% ಕಡಿತಗೊಳಿಸಿದ್ದಾರೆ.

ಉಪಸಂಹಾರ

ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳ ಸ್ವರೂಪವನ್ನು ಅಧ್ಯಯನ ಮಾಡಿದಾಗ ಅವರು “liberal thinker with orientation sociologist” ಆಗಿದ್ದರು ಎಂದು ತಿಳಿದುಬರುತ್ತದೆ. ಅಂಬೇಡ್ಕರ್ ಅವರು ಸಾಮಾಜಿಕ-ಮಾನವಿಕ-ಆರ್ಥಿಕ ತಜ್ಞರಾಗಿದ್ದರು. ಅಸಮಾನತೆ, ಪ್ರತ್ಯೇಕತೆ ಮತ್ತು ತಾರತಮ್ಯವನ್ನು ವಿರೋಧಿಸಿದ ಅಂಬೇಡ್ಕರ್ ಸಹಜವಾಗಿಯೇ ಈ ಮುಕ್ತ ಮಾರುಕಟ್ಟೆ ಮತ್ತು ಜಾಗತೀಕರಣದ ವಿರೋಧಿಯೂ ಆಗಿದ್ದರು. ಅಂಬೇಡ್ಕರ್ ಈ ಸಂಪತ್ತಿನ ಕ್ರೋಢೀಕರಣವನ್ನು ಟೀಕಿಸುತ್ತಿದ್ದರು ಮತ್ತು ‘ಪ್ರಭುತ್ವ ಸಮಾಜವಾದ’ವನ್ನು ಪ್ರತಿಪಾದಿಸುತ್ತಿದ್ದರು. ಸರ್ಕಾರದ ನೀತಿಗಳು ಈ ಮುಕ್ತ ಮಾರುಕಟ್ಟೆ ಮಾದರಿಯ ಬೂರ್ಜ್ವ ವ್ಯವಸ್ಥೆಯ ಬೆಳವಣಿಗೆಯನ್ನು ಕಡಿವಾಣ ಹಾಕುವಂತಹ ನೀತಿಗಳನ್ನು ರೂಪಿಸಬೇಕು ಎಂದು ಒತ್ತಾಯಿಸುತ್ತಿದ್ದರು. ಹೆಚ್ಚುವರಿ ಭೂಮಿಯನ್ನು (surplus land)ಯನ್ನು ಬಳಸಿಕೊಂಡು ಉತ್ಪಾದನ ಸಾಮರ್ಥ್ಯವನ್ನು ಹೆಚ್ಚಿಸುವ ಜಮೀನ್ದಾರಿ ಮಾದರಿಯ ಕೃಷಿ ಪದ್ಧತಿಯನ್ನು ತಿರಸ್ಕರಿಸಬೇಕೆಂದು ಹೇಳುತ್ತಿದ್ದ ಅಂಬೇಡ್ಕರ್ ‘ಇದಕ್ಕೆ ಪರ್ಯಾಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಕೃಷಿ ಕಾರ್ಮಿಕರನ್ನು ಬಳಸಿಕೊಂಡು ಉತ್ಪಾದನೆ ಮತ್ತು ಉತ್ಪಾದನಾ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು, ಭೂಮಿಯು ಸಮಾನವಾಗಿ ಹಂಚಿಕೆಯಾಗಬೇಕು ಮತ್ತು ಭೂಮಿಯನ್ನು ರಾಷ್ಟ್ರೀಕರಣಗೊಳಿಸಬೇಕು, ಕೃಷಿ ಸಾಗುವಳಿ ಮತ್ತು ವ್ಯವಸಾಯವನ್ನು ಸಹಕಾರ ಸಂಘಗಳ ತತ್ವದ  ಅಡಿಯಲ್ಲಿ ನಡೆಸಬೇಕು. ಇದಕ್ಕಾಗಿ ಭೂಮಿಯು ರಾಷ್ಟ್ರೀಕರಣಗೊಳ್ಳಬೇಕು,ಕೃಷಿ, ಕೈಗಾರಿಕೆ, ಆರ್ಥಿಕ ವಲಯಗಳಲ್ಲಿ ‘ಪ್ರಭುತ್ವ ಸಮಾಜವಾದ’ ಸಿದ್ಧಾಂತವು ಜಾರಿಗೊಳ್ಳಬೇಕು’ ಎಂದು ಪ್ರತಿಪಾದಿಸುತ್ತಿದ್ದರು. ಆದರೆ ಭಾರತವು ಅಂಬೇಡ್ಕರ್ ಅವರ ಚಿಂತನೆಗಳಿಂದ ಬಹುದೂರ ಸಾಗಿ ಬಂದಿದೆ.

ಇದನ್ನೂ ಓದಿ : ಆಡಳಿತ ಪಕ್ಷದ ಶಾಸಕರ ವಿರೋಧದ ನಡುವೆಯೂ ಖಾಸಗಿ ವಿ.ವಿ ವಿಧೇಯಕ ಅಂಗೀಕಾರ

ಜನಪರವಾದ ಸಮಾಜವಾದ ಸಿದ್ಧಾಂತದ ಅನುಸಾರ ಸರ್ಕಾರವು ಸಂಪೂರ್ಣವಾಗಿ ತನ್ನನ್ನು ಆರ್ಥಿಕ ವಹಿವಾಟಿನಲ್ಲಿ ತೊಡಗಿಸಿಕೊಂಡು ಜನಸಾಮಾನ್ಯರ ಬಳಕೆ/ವೆಚ್ಚವನ್ನು ಸಮತೋಲನಗೊಳಿಸಬೇಕು. ಅಂದರೆ ಸಾಮಾನ್ಯ ಜನರ ಬೇಡಿಕೆಗಳನ್ನು ಪೂರೈಸಬೇಕು. ಅಂದರೆ ಸರ್ಕಾರದ ಖರ್ಚು ಮತ್ತು ಸಾಮಾನ್ಯ ಜನರ ಬೇಡಿಕೆಗಳು ಪರಸ್ಪರ ಪೂರಕವಾಗುವಂತೆ ನೋಡಿಕೊಳ್ಳುವುದೇ ಆಡಳಿತದಲ್ಲಿರುವ ಸರಕಾರದ ಜವಾಬ್ದಾರಿ. ಅಂದರೆ ವ್ಯಕ್ತಿ/ಕುಟುಂಬಕ್ಕೆ ಅವಶ್ಯಕ ವಸ್ತುಗಳ ಖರೀದಿ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ಅವಶ್ಯ ವಸ್ತುಗಳ ಬೆಲೆಯೂ ನಿಯಂತ್ರಣದಲ್ಲಿರುವಂತೆ ನೋಡಿಕೊಳ್ಳುವುದು ಸರ್ಕಾರದ ಜವಬ್ದಾರಿ. ಅವಶ್ಯಕತೆ ಇದ್ದಲ್ಲಿ ಮಾತ್ರ ಬಂಡವಾಳ ಹೂಡಿಕೆಯ ಸಹಾಯ ಪಡೆದುಕೊಳ್ಳಬೇಕು ಎನ್ನುವುದು ಸಮಾಜವಾದದ ಆಶಯ. ಆದರೆ ಜಾಗತೀಕರಣದ ನಂತರ ಮುಕ್ತ ಮಾರುಕಟ್ಟೆಯ ಆರ್ಥಿಕ ನೀತಿಯ ಫಲವಾಗಿ ಸರ್ಕಾರದ ಪಾಲುದಾರಿಕೆ ಕುಂಠಿತಗೊಳ್ಳುತ್ತಾ ಖಾಸಗಿ ಬಂಡವಾಳ ಹೂಡಿಕೆ ಹೆಚ್ಚುತ್ತಾ ಹೋಗಿದೆ.

ಇದನ್ನೂ ಓದಿ : ಹಾರಿಹೋಗುತ್ತಿರುವ ಹಣಕಾಸು ಬಂಡವಾಳ

ಕಡೆ ಕಡೆಗೆ ಈ ಖಾಸಗೀರಣದ ಪ್ರಭಾವದಿಂದಾಗಿ ಲಾಭದಲ್ಲಿರುವ ಸರ್ಕಾರದ ಉದ್ದಿಮೆಗಳಲ್ಲಿಯೂ ಸರ್ಕಾರ ತನ್ನ ಬಂಡವಾಳವನ್ನು ಹಿಂತೆಗೆದುಕೊಂಡು ಖಾಸಗಿ ಬಂಡವಾಳಶಾಹಿಗಳಿಗೆ ಬಂಡವಾಳ ಹೂಡಿಕೆಗೆ ಅನುವು ಮಾಡಿಕೊಟ್ಟಿತು. ಈ ಬಂಡವಾಳಶಾಹಿ ಉದಾರೀಕರಣದ ಆರ್ಥಿಕ ನೀತಿಯ ಫಲವಾಗಿ ಖಾಸಗೀಕರಣದ ಪಾಲುದಾರಿಕೆ ಹೆಚ್ಚುತ್ತಾ ಗ್ರಾಹಕರ ಬಳಕೆ/ವ್ಯಯದ ಪ್ರಮಾಣವೂ ಹೆಚ್ಚುತ್ತಾ ಹೋಯಿತು. ಬಡಜನರ ಬಳಕೆ/ವೆಚ್ಚದ ಕುರಿತಾದ ಕಾಳಜಿ ಮತ್ತು ಪೂರೈಕೆ ಕುರಿತಾದ ಅಗತ್ಯ ಯೋಜನೆಗಳು ಸಂಪೂರ್ಣ ಮೂಲೆಗುಂಪಾಗಿ ಕೇವಲ ಅನುಕೂಲಕರವಾದ ಹಿನ್ನೆಲೆಯುಳ್ಳ,ಸದೃಢ ಆರ್ಥಿಕ ಹಿನ್ನಲೆಯುಳ್ಳ ವ್ಯಕ್ತಿ/ಕುಟುಂಬದ ಕೊಳ್ಳುವ ಸಾಮರ್ಥ್ಯ ಹೆಚ್ಚುತ್ತಾ ಹೋಯಿತು ಮತ್ತು ಈ ಬಕಾಸುರ ಬಂಡವಾಳಶಾಹಿಗಳು ಮತ್ತು ಮಧ್ಯಮವರ್ಗಗಳಿಗಾಗಿಯೇ ಆರ್ಥಿಕನೀತಿಗಳನ್ನು ರೂಪಿಸಲಾಯಿತು. ಅದರ ಅನುಗುಣವಾಗಿ ಅವಶ್ಯ ವಸ್ತುಗಳ ಬೆಲೆ ಏರಿಕೆ ಜನಸಾಮಾನ್ಯರ ಪಾಲಿಗೆ ನಿಲುಕಲಾರದಷ್ಟಾಗಿ ಶ್ರೀಮಂತ ಮತ್ತು ಬಡವರ ನಡುವಿನ ಅಂತರ ಅಗಾಧ ಪ್ರಮಾಣದಲ್ಲಿ ಬೆಳೆಯತೊಡಗಿತು. ಜನಸಾಮಾನ್ಯರಿಗೆ ಅವಶ್ಯ ವಸ್ತುಗಳು ಕ್ರಮೇಣ ಲಕ್ಸುರಿ ವಸ್ತುಗಳಾಗಿ ಮಾರ್ಪಟ್ಟು ಕೈಗೆಟುಕದಂತೆ ಗಗನಕುಸುಮವಾಗುವುದೇ ನವಉದಾರೀಕರಣದ ಆರ್ಥಿಕ ನೀತಿಯ ಕೊಡುಗೆ.

ಇದರಿಂದ ಬಿಡುಗೆಡೆಯ ದಾರಿ ಕಂಡುಕೊಳ್ಳದೇ ಹೋದರೆ ಭಾರತಕ್ಕೆ ಭವಿಷ್ಯವಿಲ್ಲ ಎನ್ನುವುದು ಸರ್ವಕಾಲಿಕ ಸತ್ಯ

ಕೇಂದ್ರ ಬಜೆಟ್ 2021 – 22 ರಲ್ಲಿ ಏನಿದೆ?! ಏನಿಲ್ಲ?!! ಆರ್ಥಿಕ ತಜ್ಷರು ಏನು ಹೇಳುತ್ತಾರೆ? 

Donate Janashakthi Media

Leave a Reply

Your email address will not be published. Required fields are marked *