2017ರ ಗುಜರಾತ್ ರೈಲು ತಡೆ ಪ್ರಕರಣ | ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಖುಲಾಸೆ

ಗಾಂಧಿನಗರ: 2017 ರಲ್ಲಿ ನಡೆದ ಪ್ರತಿಭಟನೆಯ ನಡುವೆ ರೈಲಿಗೆ ಅಡ್ಡಿಪಡಿಸಿದ ಆರೋಪದ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಮತ್ತು ಇತರ 30 ಮಂದಿಯನ್ನು ಅಹಮದಾಬಾದ್ ನ್ಯಾಯಾಲಯ ಮಂಗಳವಾರ ದೋಷಮುಕ್ತಗೊಳಿಸಿದೆ. ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪಿ.ಎನ್. ಗೋಸ್ವಾಮಿ ಅವರು 13 ಮಹಿಳೆಯರನ್ನು ಒಳಗೊಂಡಂತೆ ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿದ್ದಾರೆ.

ಪ್ರಸ್ತುತ ವಡಾಗಾಮ್‌ನ ಶಾಸಕರಾಗಿರುವ ಮೇವಾನಿ ಮತ್ತು ಇತರರು ರಾಜ್ಯ ಸರ್ಕಾರದ ನೀತಿಗಳ ವಿರುದ್ಧ ಪ್ರತಿಭಟನೆಯ ನಡುವೆಯೇ ಕಲುಪುರ್ ರೈಲು ನಿಲ್ದಾಣದಲ್ಲಿ ಸುಮಾರು 20 ನಿಮಿಷಗಳ ಕಾಲ ‘ರೈಲ್ ರೋಕೋ’ ಪ್ರತಿಭಟನೆಯನ್ನು ಆಯೋಜಿಸಿದ್ದರು ಮತ್ತು ಅದರಲ್ಲಿ ಭಾಗವಹಿಸಿದ್ದರು ಎಂದು ಆರೋಪಿಸಲಾಗಿತ್ತು.

ಇದನ್ನೂ ಓದಿ: ಮಂತ್ರಾಕ್ಷತೆಯಿಂದ ಹಸಿದ ಹೊಟ್ಟೆ ತುಂಬುವುದಿಲ್ಲ : ಸಚಿವ ಶಿವರಾಜ ತಂಗಡಗಿ

2017 ರಲ್ಲಿ ನಡೆದ ಈ ಘಟನೆಯ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಪ್ರಕರಣದಲ್ಲಿ ಕಾನೂನುಬಾಹಿರ ಸಭೆ, ಗಲಭೆ, ಸಾರ್ವಜನಿಕ ಸೇವಕರ ಕರ್ತವ್ಯ ನಿರ್ವಹಿಸದಂತೆ ತಡೆಯುವುದು ಮತ್ತು ಕ್ರಿಮಿನಲ್ ಪಿತೂರಿ ಸೇರಿದಂತೆ ಹಲವು ಆರೋಪಗಳನ್ನು ಮಾಡಲಾಗಿತ್ತು. ಅಲ್ಲದೆ, ಹೆಚ್ಚುವರಿಯಾಗಿ ರೈಲ್ವೇ ಕಾಯಿದೆಯ ಸೆಕ್ಷನ್ 153 ರ ಅಡಿಯಲ್ಲಿ ಕೂಡಾ ಅವರ ವಿರುದ್ಧ ದೋಷಾರೋಪಣೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಮೇವಾನಿ ಅವರನ್ನು ಬಿಡುಗಡೆ ಮಾಡಲು ಸೆಷನ್ ಕೋರ್ಟ್ 2021 ರಲ್ಲಿ ನಿರಾಕರಿಸಿತ್ತು.

ಅಷ್ಟೆ ಅಲ್ಲದೆ, ಅಹಮದಾಬಾದ್‌ನ ಆದಾಯ ತೆರಿಗೆ ಕ್ರಾಸ್‌ರೋಡ್ಸ್‌ನಲ್ಲಿ ಕಾನೂನುಬಾಹಿರ ಸಭೆ, ಗಲಭೆ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಆರೋಪದ ಮೇಲೆ 2016 ರಲ್ಲಿ ದಾಖಲಿಸಲಾದ ಪ್ರಕರಣದಲ್ಲಿ ಕಳೆದ ನವೆಂಬರ್‌ನಲ್ಲಿ ಮೇವಾನಿ ಮತ್ತು ಇತರ ಆರು ಮಂದಿಗೆ ಖಲಾಸೆಯಾಗಿತ್ತು. ಇದೀಗ ಮತ್ತೊಂದು ಕಾನೂನು ಹೋರಾಟವನ್ನು ಮೇವಾನಿ ಅವರು ಗೆದ್ದಿದ್ದಾರೆ.

2016 ರಲ್ಲಿ, ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನ ನೈರ್ಮಲ್ಯ ಕಾರ್ಮಿಕರನ್ನು ಬೆಂಬಲಿಸಿ ನಡೆಸಿದ ಹೋರಾಟದಲ್ಲಿ ಅವರ ವಿರುದ್ದ ಪ್ರಕರಣ ದಾಖಲಿಸಲಾಗಿತ್ತು. ಪೊಲೀಸ್ ಅನುಮತಿಯಿಲ್ಲದೆ ಈ ಪ್ರತಿಭಟನೆ ಆಯೋಜಿಸಲಾಗಿತ್ತು ಎಂದು ಆರೋಪಿಸಲಾಗಿದ್ದು, ಈ ಸಂದರ್ಭದಲ್ಲಿ ಪೊಲೀಸ್ ವಾಹನವನ್ನು ಧ್ವಂಸಗೊಳಿಸಲಾಗಿತ್ತು ಎಂದು ವರದಿಯಾಗಿದೆ.

ವಿಡಿಯೊ ನೋಡಿ: ಸಂಕ್ರಾಂತಿ, ಸಂಕ್ರಮಣ ಎಂದರೇನು? ಉತ್ತರಾಯಣ ಪುಣ್ಯಕಾಲ ನಿಜವೇ? – ಚಿಂತಕ ಜಿ.ಎನ್. ನಾಗರಾಜ ರವರ ವಿಶ್ಲೇಷಣೆ

Donate Janashakthi Media

Leave a Reply

Your email address will not be published. Required fields are marked *