ಎರಡು ದಿನ ಸಂಪೂರ್ಣ ಲಾಕ್​ಡೌನ್​ ಮಾಡಿ: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ಸಲಹೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಅದರ ಸುತ್ತಲಿನ ಪ್ರದೇಶಗಳಲ್ಲಿ ತೀವ್ರ ವಾಯುಮಾಲಿನ್ಯ ಉಂಟಾಗಿ ಜನತೆಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಜನರು ಉಸಿರಾಡುವುದಕ್ಕೂ ಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ.

ವಾಯುಮಾಲಿನ್ಯ ಬಗ್ಗೆ ಕಳವಳ ವ್ಯಕ್ತಪಡಿಸಿ, ಸಾರ್ವಜನಿಕ ಹಿಸಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ವಾಯ ಗುಣಮಟ್ಟ ತೀವ್ರ ಕುಸಿದಿರುವ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಸಂಪೂರ್ಣ ಲಾಕ್​ಡೌನ್​ ಮಾಡುವಂತೆ ಸಲಹೆ ನೀಡಿದೆ.

ಇದನ್ನು ಓದಿ: ದೆಹಲಿಯಲ್ಲಿ 5 ವರ್ಷದಲ್ಲೇ ಅತಿಹೆಚ್ಚು ದಟ್ಟ ವಾಯುಮಾಲಿನ್ಯ: ತಜ್ಞರು ಕಳವಳ

ನಗರದಲ್ಲಿ ವಾಯುಮಾಲಿನ್ಯ ಮಟ್ಟ ಏರಿಕೆಯಾಗುತ್ತಿರುವ ಬಗ್ಗೆ ದೆಹಲಿಯ 17 ವರ್ಷದ ವಿದ್ಯಾರ್ಥಿ ಆದಿತ್ಯ ದುಬೆ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ರಜಾ ದಿನವಾದ ಇಂದು (ಶನಿವಾರ) ತುರ್ತು ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್​.ವಿ. ರಮಣ ಹಾಗೂ ನ್ಯಾಯಮೂರ್ತಿಗಳಾ ಡಿ.ವೈ. ಚಂದ್ರಚೂಡ್​ ಮತ್ತು ಸೂರ್ಯಕಾಂತ್​ ನೇತೃತ್ವದ ವಿಶೇಷ ನ್ಯಾಯಪೀಠವೂ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿದೆ.

ನಗರದಲ್ಲಿ ಎಂತಹ ಗಂಭೀರ ಪರಿಸ್ಥಿತಿ ಇದೆ ಎಂದು ನಾವು ನೋಡುತ್ತಿದ್ದೇವೆ. ಮನೆಯ ಒಳಗಡೆ ಇದ್ದಾಗಲೂ ಮಾಸ್ಕ್​ ಧರಿಸುವ ಸ್ಥಿತಿ ಇದೆ ಎಂದು ನ್ಯಾಯಮೂರ್ತಿ ಎನ್​.ವಿ. ರಮಣ ಬೇಸರ ವ್ಯಕ್ತಪಡಿಸಿದರು.

ಅಗತ್ಯ ಇದ್ದರೆ ಎರಡು ದಿನಗಳ ಲಾಕ್‌ಡೌನ್ ಮಾಡಿ ಎಂದು ತಿಳಿಸಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿಯುತ್ತಿರುವುದರಿಂದ ಜನ ಉಸಿರಾಡುವುದೇ ಕಷ್ಟವಾಗಿದೆ. ಆದುದರಿಂದ ಜನರು ಹೇಗೆ ಬದುಕಿಸಬೇಕೆಂದು ಯೋಚನೆ ಮಾಡಿ. ಲಾಕ್‌ಡೌನ್ ಹೊರತುಪಡಿಸಿ ಬೇರೆ ಪರಿಹಾರೋಪಾಯಗಳ ಬಗ್ಗೆಯೂ ಚಿಂತನೆ ನಡೆಸಿ ಎಂದು ಹೇಳಿದೆ. ಈ ಬಗ್ಗೆ ನಿರ್ಧಾರ ಮಾಡುವ ಉದ್ದೇಶದಿಂದ ದೆಹಲಿ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಸರ್ಕಾರಗಳ ಜೊತೆ ತುರ್ತು ಸಭೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

ದೆಹಲಿ ಸುತ್ತ ಇರುವ ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ಮತ್ತು ರಾಜಸ್ಥಾನದಲ್ಲಿ ಗೋಧಿ ಬೆಳೆಯ ಕೂಳೆ (ಕಟಾವು ಮಾಡುವಾಗ ಅರ್ಧ ಬಿಡಲಾಗುವ ಹುಲ್ಲು) ಮತ್ತು ಹುಲ್ಲಿಗೆ ಬೆಂಕಿ ಹಾಕುವುದರಿಂದ ಆ ಹೊಗೆ ದೆಹಲಿಗೆ ವ್ಯಾಪಿಸಲಿದೆ. ಇದರೊಂದಿಗೆ, ಇತ್ತೀಚಿಗೆ ನಡೆದ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸಿದ್ದರಿಂದ ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗುತ್ತದೆ.

ಇದನ್ನು ಓದಿ: ಬೆಳಗ್ಗೆ ಪಟಾಕಿ ನಿಷೇಧದ ಭರವಸೆ; ಸಂಜೆ ಹಸಿರು ಪಟಾಕಿಗೆ ಅವಕಾಶ: ಲಾಬಿಗೆ ಮಣಿದರೆ ಸಿಎಂ

ಆದರೆ ಇಂದಿನ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯುಮಾಲಿನ್ಯ ಹೆಚ್ಚಾಗಲು ಗೋಧಿ ಹುಲ್ಲು ಸುಡುವುದು ಪ್ರಮುಖ ಕಾರಣವಲ್ಲ. ಪಟಾಕಿ ಸಿಡಿಸುವುದು ಮತ್ತು ಕೈಗಾರಿಕೆಗಳು ಹಾಗೂ ವಾಹನಗಳು ವಿಷಪೂರಿತ ಹೊಗೆಯನ್ನು ಹೊರಹಾಕುವುದು. ದೆಹಲಿಯ‌ಲ್ಲಿ ವಾಯು ಮಾಲಿನ್ಯ ಆಗಲು ಕಾರಣ ಎಂದಿದ್ದಾರೆ.

ಸರ್ಕಾರದ ಪರ ಮಾತನಾಡಿದ ತುಷಾರ್​ ಮೆಹ್ತಾ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮದೇ ರೀತಿಯಲ್ಲಿ ವಾಯುಮಾಲಿನ್ಯ ವಿರುದ್ಧ ಹೋರಾಡುತ್ತಿವೆ.

ಬೆಳೆ ಕಡ್ಡಿಯನ್ನು ಕೊಳೆಯುವಂತೆ ಮಾಡಲು ಸಿತು ಕ್ರಾಪ್​ ಸ್ಟಬ್ಬಲ್​ ಮ್ಯಾನೇಜ್​ಮೆಂಟ್​ನಲ್ಲಿ ಎರಡು ಲಕ್ಷ ಯಂತ್ರಗಳಿವೆ. ಶಾಸನಬದ್ಧ ಆಯೋಗವು ಬಯೋಮಾಸ್ ಪ್ಲಾಂಟ್‌ಗಳಲ್ಲಿ ಸ್ಟಬಲ್ ಅನ್ನು ಬಳಸಲು ಅನುಮತಿ ನೀಡಿದೆ. ಆದರೆ, ಸುಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಮೆಹ್ತಾ ಹೇಳಿದರು.

ಇದೇ ಸಂದರ್ಭದಲ್ಲಿ ಪಂಜಾಬ್​ ಸರ್ಕಾರ ಗುರಿಯಾಗಿಸಿದ ತುಷಾರ್‌ ಮೆಹ್ತಾ, ಪಂಜಾಬ್​ನಲ್ಲಿ ಕಳೆದ ಕೆಲ ದಿನಗಳಿಂದ ವಿಪರೀತ ಹೊಗೆ ಬರುತ್ತಿದೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಂಜಾಬ್​ ಸರ್ಕಾರ ಕೆಲಸ ಮಾಡಬೇಕೆಂದು ತಾಕೀತು ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ‘ರೈತರೊಬ್ಬರೇ ಹೊಣೆ ಎಂಬಂತೆ ಬಿಂಬಿಸುತ್ತಿದ್ದೀರಿ. ಆದರೆ, ಶೇ.40 ದೆಹಲಿ ಜನರನ್ನು ನಿಯಂತ್ರಿಸಲು ಕ್ರಮಗಳು ಎಲ್ಲಿವೆ? ಪಟಾಕಿಗಳ ಬಗ್ಗೆ ಕ್ರಮ ಏನು? ವಾಹನ ಮಾಲಿನ್ಯಕ್ಕೆ ಕ್ರಮ ಏನು? ಎಂದು ಪ್ರಶ್ನಿಸಿದರು. ಅಲ್ಲದೆ, ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ತಾಕೀತು ಮಾಡಿದ ನ್ಯಾಯಪೀಠ ಸೋಮವಾರಕ್ಕೆ ಮತ್ತೆ ವಿಚಾರಣೆ ಮುಂದೂಡಿದೆ‌.

Donate Janashakthi Media

Leave a Reply

Your email address will not be published. Required fields are marked *