19 ವರ್ಷ ಸೇವೆ ಸಲ್ಲಿಸಿದ ಬಡ ಮಹಿಳೆಯರಿಗೆ ನಿವೃತ್ತಿ ಹೆಸರಿನಲ್ಲಿ ಅಮಾನವೀಯತೆ: ಅಕ್ಷರ ದಾಸೋಹ ನೌಕರರ ಮುಷ್ಕರ

ಬೆಂಗಳೂರು: ಮಧ್ಯಾಹ್ನದ ಬಿಸಿಯೂಟ ಯೋಜನೆ ಅಡಿಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡು ಬಂದಿರುವ ಅಡುಗೆಯವರನ್ನು 60 ವರ್ಷ ವಯೋಮಾನ ನೆಪವೊಡ್ಡಿ 19 ವರ್ಷ ಸೇವೆ ಸಲ್ಲಿಸಿದ ಬಡ ಮಹಿಳೆಯರನ್ನು ನಿವೃತ್ತಿ ಹೆಸರಿನಲ್ಲಿ ಅಮಾನವೀಯವಾಗಿ ಬಿಡುಗಡೆ ಮಾಡಿರುವ ಕ್ರಮವನ್ನು ಖಂಡಿಸಿ ಇಂದಿನಿಂದ ಬಿಸಿಯೂಟ ಬಂದ್‌ ಮಾಡಿ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು ಸಂಯೋಜಿತ) ಇಂದು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳುವ ಮೂಲಕ ಅನಿರ್ದಿಷ್ಟಾವಧಿ ಹೋರಾಟಕ್ಕೆ ಮುಂದಾಗಿದ್ದಾರೆ.

ಬಿಸಿಯೂಟ ಯೋಜನೆ ಪ್ರಾರಂಭವಾದಾಗಿನಿಂದಲೂ ಮಕ್ಕಳ ಶೈಕ್ಷಣಿಕ ಉನ್ನತಿಗೆ, ಮಕ್ಕಳ ಗೈರುಹಾಜರಿ ತಡೆಗಟ್ಟಲು ಶಿಕ್ಷಣ ಇಲಾಖೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸುವುದರ ಜೊತೆಗೆ ಮಕ್ಕಳಲ್ಲಿ ಏಕಾಗ್ರತೆ ಮತ್ತು ಉತ್ತಮ ಫಲಿತಾಂಶ ಹೊರಹೊಮ್ಮಲು ಈ ತಾಯಂದಿರು ತಮ್ಮ ಜೀವ ಸೆವೆಸಿದ್ದಾರೆ. ರಾಜ್ಯದಲ್ಲಿ ಸುಮಾರು 50 ಲಕ್ಷ ಬಡ, ರೈತ, ಕೃಷಿಕೂಲಿಕಾರರ, ದೀನದಲಿತ ಮಕ್ಕಳಿಗೆ ದಿನನಿತ್ಯ ಬಿಸಿಯಾದ ಆಹಾರ ಬೇಯಿಸಿ ಬಡಿಸುವುದರೊಟ್ಟಿಗೆ ಮಕ್ಕಳಲ್ಲಿ ಶೈಕ್ಷಣಿಕ ಆಸಕ್ತಿ ಮೂಡಿಸುವಲ್ಲಿ ಈ ಮಹಿಳೆಯರ ತಾಯ್ತನದ ಪರಿಶ್ರಮ ಅಪಾರವಾದದು.

2001-02ರಲ್ಲಿ ಅಡುಗೆ ಕೆಲಸಕ್ಕೆ ಸೇರ್ಪಡೆ ಮಾಡಿಕೊಳ್ಳುವಾಗ ವಿಧ್ಯಾಭ್ಯಾಸ ಮತ್ತು ವಯಸ್ಸಿನ ಅರ್ಹತೆ ಮಾತ್ರ ನಿಗದಿಮಾಡಲಾಗಿತ್ತು. ಅದರಲ್ಲಿ ನಿವೃತ್ತಿ ವಯಸ್ಸನ್ನು ಸೇರ್ಪಡೆ ಮಾಡಿರಲಿಲ್ಲ. ಅಕ್ಷರದಾಸೋಹ ನೌಕರರ ಸಂಘ (ಸಿಐಟಿಯು) 2016 ರಿಂದಲೂ ವಯಸ್ಸಿನ ಆಧಾರದಲ್ಲಿ ನಿವೃತ್ತಿ ಸೌಲಭ್ಯ ಕೊಡಬೇಕೆಂದು ಹಲವಾರು ಬಾರಿ ಸರ್ಕಾರಕ್ಕೆ ಮತ್ತು ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡರು ಸಹ ಸರ್ಕಾರವಾಗಲಿ, ಶಿಕ್ಷಣ ಇಲಾಖೆಯಾಗಲಿ ಮುತುವರ್ಜಿ ವಹಿಸಲಿಲ್ಲ.

ಬಿಸಿಯೂಟ ನೌಕರರ ನಿವೃತ್ತಿ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಬಾರಿ ಸಭೆಗಳು ನಡೆದಿದೆ. ಸಭೆಗಳಲ್ಲಿ ಬಿಸಿಯೂಟ ನೌಕರರ ವೇತನದಲ್ಲಿ ರೂ.100 ಹಾಗೂ ಸರ್ಕಾರ ರೂ 100 ರೂ ನೀಡಿ ಈ ಹಣವನ್ನು ಎಲ್.ಐ.ಸಿ ಮುಖಾಂತರ ವಿಶೇಷ ಪಿಂಚಣಿ ಯೋಜನೆಯನ್ನು ರೂಪಿಸಲು ಒಪ್ಪಿಗೆ ಸೂಚಿಸಲಾಗಿತ್ತು ಹಾಗೂ ಇಲಾಖಾ ಅಧಿಕಾರಿಗಳು ಮತ್ತು ಸಂಘಟನೆಯ ಮುಖಂಡರನ್ನು ಒಳಗೊಂಡ ಸಮಿತಿಯೊಂದನ್ನು ರಚನೆ ಮಾಡಿತು. ಆದರೆ, ಈ ಎಲ್ಲ ಕ್ರಮಗಳು ಜಾರಿಯಾಗುವ ಮೊದಲೇ ಸರ್ಕಾರ ಏಕಾಏಕಿ ಬಿಸಿಯೂಟ ನೌಕರರನ್ನು ಕೆಲಸದಿಂದ ನಿವೃತ್ತಿ ಮಾಡುತ್ತಿರುವುದು ಅಮಾನವೀಯ ಮತ್ತು ಮಹಿಳಾ ವಿರೋಧಿ ಧೋರಣೆಯಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಸುಮಾರು 6000 ರಿಂದ 7000 ನೌಕರರನ್ನು ಯಾವುದೇ ನಿವೃತ್ತಿ, ಸೌಲಭ್ಯವಿಲ್ಲದೆ ಕೆಲಸದಿಂದ ಸರ್ಕಾರ ತೆಗೆದು ಹಾಕಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸರಕಾರಿ ಆದೇಶ ಹೊರಬಿದ್ದ ಕೂಡಲೇ ಬೆಂಗಳೂರಿನ ಜಂಟಿ ನಿರ್ದೇಶಕರ ಕಛೇರಿ ಮಧ್ಯಾಹ್ನದ ಉಪಹಾರ ಯೋಜನೆ ಇಲಾಖೆ ಎದುರು ಹೋರಾಟ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಜಂಟಿ ನಿರ್ದೇಶಕರು ಶಿಕ್ಷಣ ಇಲಾಖೆಯ ಸಚಿವರು ಹಾಗೂ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಜೊತೆ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದರು. ಮೇ 11 ರಂದು ಈ ವಿಷಯದ ಕುರಿತು ಶಿಕ್ಷಣ ಸಚಿವರೊಂದಿಗೆ ಸಭೆ ನಡೆದಿದೆ. ಆದರೆ ಸಭೆಯಲ್ಲಿ ಶಿಕ್ಷಣ ಸಚಿವರು ಈ ನೌಕರರಿಗೆ ಯಾವುದೇ ಪರಿಹಾರ ನೀಡುವುದರ ಬಗ್ಗೆಯಾಗಲಿ, ಕನಿಷ್ಠ ಪರಿಹಾರದ ಬಗ್ಗೆಯಾಗಲಿ ಮಾತನಾಡಲಿಲ್ಲ.

ಬಿಸಿಯೂಟ ನೌಕರರು ತಮ್ಮ ಕೆಲಸ ಕಳೆದುಕೊಂಡು ಆರ್ಥಿಕವಾಗಿ, ಮಾನಸಿಕವಾಗಿ ತೀವ್ರ ಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರದ ಈ ಕ್ರಮ ಖಂಡಿಸಿ ಮತ್ತು ಪರಿಹಾರಕ್ಕೆ ಒತ್ತಾಯಿಸಿ ಸರ್ಕಾರ ಕೂಡಲೇ ಕ್ರಮ ಕೈಗೊಂಡು  ಸರ್ಕಾರ ನಿವೃತ್ತಿ ವೇತನ ನಿಗದಿ ಮಾಡುವವರೆಗೆ ಈ ತಕ್ಷಣದಲ್ಲಿ ಬಿಡುಗಡೆ ಮಾಡುವ ಬಿಸಿಯೂಟ ನೌಕರರಿಗೆ ಇಡಿಗಂಟು ರೂ. 1,00,000/-(ಒಂದು ಲಕ್ಷ ರೂಪಾಯಿಗಳು) ಪರಿಹಾರ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಮಾರ್ಚ್‌ 31, 2022ರಂದು ಬಿಸಿಯೂಟ ನೌಕರರನ್ನು ಬಿಡುಗಡೆಗೊಳಿಸಲು ಹೊರಡಿಸಿರುವ ಸುತ್ತೋಲೆಯನ್ನು ಬದಲಾಯಿಸಿ ಏಪ್ರಿಲ್ 10, 2022 ಕ್ಕೆ ಮರುಆದೇಶ  ನಿಡಬೇಕು. ಬಜೆಟ್‌ನಲ್ಲಿ ಬಿಸಿಯೂಟ ನೌಕರರಿಗೆ ಹೆಚ್ಚಳ ಮಾಡಿದ ರೂ.1000 ವೇತನವನ್ನು ಜನವರಿ 2022 ರಿಂದ ಅನ್ವಯಿಸಿ ಜಾರಿಗೊಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಬಿಸಿಯೂಟ ಯೋಜನೆಯನ್ನು ಖಾಯಂಗೊಳಿಸಬೇಕು ಅಲ್ಲದೆ ಅಲ್ಲಿಯವರೆಗೆ 45 ಮತ್ತು 46ನೇ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸ್ಸಿನಂತೆ ಬಿಸಿಯೂಟ ನೌಕರರನ್ನು ಕಾರ್ಮಿಕರೆಂದು ಗುರುತಿಸಬೇಕು. ಕೇಂದ್ರೀಕೃತ ಅಡುಗೆ ಕೇಂದ್ರ ಮಾದರಿ ಬೇಡ. ಯಾವುದೇ ಖಾಸಗಿ ಸಂಸ್ಥೆಗಳಿಗೆ ಯಾವುದೇ ಸ್ವರೂಪದ ಜವಾಬ್ದಾರಿ ಕೊಡಬಾರದು ಎಂದು ಬಿಸಿಯೂಟ ನೌಕರರ ಬೇಡಿಕೆಯಾಗಿದೆ.

ರಾಜ್ಯದಲ್ಲಿ ಶಿಕ್ಷಣ ಇಲಾಖೆಯ ಶಿಫಾರಸ್ಸಿನಂತೆ ಗೌರವ ವೇತನವನ್ನು 6000 ರೂ. ಮತ್ತು 5000 ರೂ ಹೆಚ್ಚಳ ಮಾಡಬೇಕು. ಬೇಸಿಗೆ ಮತ್ತು ದಸರಾ ರಜೆಯನ್ನು ವೇತನ ಸಹಿತ ನೀಡಬೇಕು. ಪ್ರತಿ ತಿಂಗಳು 5 ನೇ ತಾರೀಖಿನ ಒಳಗೆ ವೇತನ ಪಾವತಿಯಾಗಬೇಕು. ಬಿಸಿಯೂಟ ನೌಕರರನ್ನು ಖಾಯಂ ಮಾಡಿ ಶಾಸನಾತ್ಮಕ ಸವಲತ್ತುಗಳನ್ನು ಜಾರಿ ಮಾಡಬೇಕು ಎಂಬುದು ಪ್ರತಿಭಟನಾಕಾರರ ಆಗ್ರಹವಾಗಿದೆ.

ಬಿಸಿಯೂಟ ನೌಕರರನ್ನು ನೇರವಾಗಿ ಶಿಕ್ಷಣ ಇಲಾಖೆಯಡಿಯಲ್ಲಿಯೇ ಮೇಲ್ವಿಚಾರಣೆ ನಡೆಸಬೇಕು. ಎಲ್ಲರಿಗೂ ಅನ್ವಯವಾಗದೇ ಇರುವ ಮಾನ್-ಧನ್ ಯೋಜನೆ ಮಾಡಿಸಲು ಇಲಾಖೆಯಿಂದ ಒತ್ತಾಯಿಸಬಾರದು. ಪ್ರತಿಶಾಲೆಯಲ್ಲಿ ಕನಿಷ್ಠ 2 ಜನ ಅಡುಗೆಯವರು ಇರಲೇಬೇಕು. ಶಾಲಾ ಅವಧಿಯ ನಂತರ ನರೇಗಾ ಯೋಜನೆಯಡಿ ಶಾಲಾ ಕೈತೋಟದ ಕೆಲಸವನ್ನು ನೀಡುವ ಮೂಲಕ ಯೋಜನೆಯಿಂದ ವೇತನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ಗೌರವಾಧ್ಯಕ್ಷರಾದ ಎಸ್.‌ ವರಲಕ್ಷ್ಮಿ, ಅಧ್ಯಕ್ಷರಾದ ಲಕ್ಷ್ಮಿದೇವಿ, ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತಾ, ಖಜಾಂಚಿ ಮಹಾದೇವಮ್ಮ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *