ತಳಮಟ್ಟದ ಸಮಾಜದ ಅತಂಕ ಮತ್ತು ಆಶಯಗಳನ್ನು ಬಿಂಬಿಸುವ ಮನ್ಸೋರೆ ಅವರ ಚಿತ್ರ
ನಾ ದಿವಾಕರ
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಭಾರತ ಹೆಮ್ಮೆಯಿಂದ ಘೋಷಿಸಲು ಮೂಲ ಕಾರಣ ಎಂದರೆ ಈ ದೇಶದಲ್ಲಿ ಪ್ರಜಾಪ್ರಭುತ್ವದ ಬೇರುಗಳು ಸಾಮಾಜಿಕ-ಸಾಂಸ್ಕೃತಿಕ ನೆಲೆಯಲ್ಲಿ ಬೇರೂರದಿದ್ದರೂ, ಸಾರ್ವಜನಿಕ ಬದುಕಿನಲ್ಲಿ, ರಾಜಕೀಯ ವಲಯದಲ್ಲಿ ಮತ್ತು ಸಾಂವಿಧಾನಿಕ ಆಡಳಿತ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವದ ಆಶಯಗಳು ಇನ್ನೂ ಗಟ್ಟಿಯಾಗಿವೆ. ವಿಭಿನ್ನ ಕಾಲಘಟ್ಟಗಳಲ್ಲಿ ರಾಜಕೀಯ ಪ್ರಾಬಲ್ಯ ಮತ್ತು ಬಹುಸಂಖ್ಯಾವಾದದ ಪ್ರಭಾವದಿಂದ, ಆಡಳಿತಾರೂಢ ಪಕ್ಷಗಳು, ಈ ಆಶಯಗಳಿಗೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದರೂ, ಈ ತಪ್ಪು ನಡಿಗೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಭಾರತದ ನ್ಯಾಯಾಂಗ ವ್ಯವಸ್ಥೆ ಸದಾ ಜಾಗರೂಕವಾಗಿರುದನ್ನು ಗಮನಿಸಬಹುದು. ಇತ್ತೀಚೆಗೆ ಮುಖ್ಯ ಚುನಾವಣಾ ಆಯುಕ್ತರನ್ನು ನೇಮಿಸಲು ತಟಸ್ಥ ಸಾಂವಿಧಾನಿಕ ಸಮಿತಿಯನ್ನು ರಚಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶ ಈ ನಿಟ್ಟಿನಲ್ಲಿ ಪ್ರಜಾಸತ್ತೆಯ ಪ್ರತಿಪಾದಕರಲ್ಲಿ ಆಶಾಭಾವನೆ ಮೂಡಿಸುತ್ತದೆ.
ಆದರೂ ಕಳೆದ ಐದಾರು ದಶಕಗಳ ರಾಜಕೀಯ ಬೆಳವಣಿಗೆಗಳನ್ನು ಮತ್ತು ವಿವಿಧ ಆಳುವ ಪಕ್ಷಗಳ ಆಡಳಿತ ನೀತಿಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರಬಹುದಾದ ಲೋಪಗಳನ್ನು ಅಥವಾ ತೂತುಗಳನ್ನು ಆಡಳಿತಾರೂಢ ಪಕ್ಷಗಳು ಹೇಗೆ ದುರ್ಬಳಕೆ ಮಾಡಿಕೊಂಡಿವೆ ಎನ್ನುವುದನ್ನೂ ಗಮನಿಸಬಹುದು. ದೇಶದ ಸುರಕ್ಷತೆ, ಭದ್ರತೆ, ಅಖಂಡತೆ ಮತ್ತು ಸಾರ್ವಜನಿಕ ಜೀವನದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಗುರುತರ ಜವಾಬ್ದಾರಿ ಇರುವ ಸರ್ಕಾರಗಳು ಈ ಹೊಣೆಗಾರಿಕೆಯನ್ನು ನಿಭಾಯಿಸುವ ಹಾದಿಯಲ್ಲಿ ಅನೇಕ ಸಂದರ್ಭಗಳಲ್ಲಿ ಸಂವಿಧಾನದ ಮೂಲ ಆಶಯಗಳನ್ನೇ ಉಲ್ಲಂಘಿಸುವಂತಹ ಕಾಯ್ದೆ ಕಾನೂನುಗಳನ್ನು ಅನುಸರಿಸಿರುವುದನ್ನೂ ಗುರುತಿಸಬಹುದು. ರಾಜದ್ರೋಹ ಕಾಯ್ದೆ ಮತ್ತು ಈಗ ಚಾಲ್ತಿಯಲ್ಲಿರುವ ಯುಎಪಿಎ ಕಾಯ್ದೆ ಮುಂತಾದ ಕರಾಳ ಶಾಸನಗಳು ದೇಶದ ಅಖಂಡತೆಯ ರಕ್ಷಣೆಗಾಗಿ ಇರುವ ಕಾನೂನಾತ್ಮಕ ಅಸ್ತ್ರಗಳೇ ಆದರೂ , ಈ ಕಾಯ್ದೆಗಳೇ ಸಾವಿರಾರು ಕಾರ್ಯಕರ್ತರ, ಬುದ್ಧಿಜೀವಿಗಳ ಮತ್ತು ಅಮಾಯಕ ಪ್ರಜೆಗಳ ಪಾಲಿಗೆ ಕಂಟಕಪ್ರಾಯವಾಗಿರುವ ನಿದರ್ಶನಗಳೂ ನಮ್ಮ ಮುಂದಿವೆ.
ಇದನ್ನು ಓದಿ: ಮಂಸೋರೆ ನಿರ್ದೇಶನದ ಸತ್ಯ ಘಟನೆ ಆಧಾರಿತ 19.20.21 ಸಿನಿಮಾ ತೆರೆಗೆ
ಭಯೋತ್ಪಾದನೆ ಮತ್ತು ಯಾವುದೇ ರೀತಿಯ ಉಗ್ರವಾದಿ ಚಟುವಟಿಕೆಗಳು ದೇಶದ ಭದ್ರತೆಗೆ ಮಾರಕವಾಗುವುದೇ ಅಲ್ಲದೆ ಜನಸಾಮಾನ್ಯರ ನೆಮ್ಮದಿಯ ಬದುಕಿಗೂ ಕಂಟಕಪ್ರಾಯವಾಗುತ್ತದೆ. ಹಿಂಸಾತ್ಮಕ ಚಳುವಳಿಗಳು, ಹೋರಾಟಗಳು ತಳಮಟ್ಟದ ಸಮಾಜ ಎದುರಿಸುತ್ತಿರುವ ಜಟಿಲ ಸಮಸ್ಯೆಗಳನ್ನು ಪರಿಹರಿಸುವುದಕ್ಕಿಂತಲೂ ಹೆಚ್ಚಾಗಿ, ಮತ್ತಷ್ಟು ಜಟಿಲಗೊಳಿಸಿರುವುದನ್ನೂ ನಾವು ಕಂಡಿದ್ದೇವೆ. ಮತ್ತೊಂದು ನೆಲೆಯಲ್ಲಿ ನಿಂತು ನೋಡಿದಾಗ, ತಳಮಟ್ಟದ ಜನಸಮುದಾಯಗಳ ನಿತ್ಯ ಜೀವನದ ಜ್ವಲಂತ ಸಮಸ್ಯೆಗಳು ದಿನದಿಂದ ದಿನಕ್ಕೆ ಮತ್ತಷ್ಟು ಸಂಕೀರ್ಣವಾಗುತ್ತಲೇ ಹೋಗುತ್ತಿದ್ದು, ಆದಿವಾಸಿಗಳು, ಬುಡಕಟ್ಟು ಸಮುದಾಯಗಳು, ಮಹಿಳೆಯರು, ಶೋಷಿತ-ಅವಕಾಶವಂಚಿತ ಸಮುದಾಯಗಳು ಮತ್ತು ಅಂಚಿಗೆ ತಳ್ಳಲ್ಪಟ್ಟ ಜನಸಮೂಹಗಳು ತಮ್ಮ ಜೀವನ ಹಾಗೂ ಜೀವನೋಪಾಯದ ಮಾರ್ಗಗಳನ್ನು ಸುಗಮಗೊಳಿಸಲು ಹಕ್ಕೊತ್ತಾಯಗಳ ಹೋರಾಟಗಳನ್ನು ರೂಪಿಸುತ್ತಲೇ ಬಂದಿದ್ದಾರೆ. ಅನೇಕ ಸನ್ನಿವೇಶಗಳಲ್ಲಿ ಇಂತಹ ಪ್ರಜಾಸತ್ತಾತ್ಮಕ ಹೋರಾಟಗಳೇ ಅಧಿಕಾರದಲ್ಲಿರುವ ಪಕ್ಷಗಳಿಗೆ ಸವಾಲಾಗಿ ಪರಿಣಮಿಸುತ್ತವೆ. ಕರಾಳ ಶಾಸನಗಳ ಬಳಕೆ ಮತ್ತು ದುರ್ಬಳಕೆ ಎರಡನ್ನೂ ಸಹ ಇದೇ ಸ್ತರದಲ್ಲಿ ನಿಂತು ನೋಡಬೇಕಾಗುತ್ತದೆ.
ಇಂತಹುದೇ ಸನ್ನಿವೇಶಗಳನ್ನು ಸಮಕಾಲೀನ ಭಾರತದ ಕಳೆದ ಐದಾರು ದಶಕಗಳಿಂದಲೂ ಎದುರಿಸುತ್ತಲೇ ಇದೆ. ತುರ್ತುಪರಿಸ್ಥಿತಿ ಸಂದರ್ಭದ ಸ್ನೇಹಲತಾ ರೆಡ್ಡಿ ಪ್ರಕರಣದಿಂದ ಇತ್ತೀಚಿನ ಸಿದ್ದಿಕ್ ಕಪ್ಪನ್ ಪ್ರಸಂಗದವರೆಗೂ ಕಂಡಿದ್ದೇವೆ. ಹೋರಾಟಗಾರರನ್ನು ನಿಯಂತ್ರಿಸಲು, ನಿರ್ಬಂಧಿಸಲು ಮತ್ತು ಅನೇಕ ಸಂದರ್ಭಗಳಲ್ಲಿ ಪ್ರಬಲ ಹೋರಾಟಗಳನ್ನು ಹತ್ತಿಕ್ಕಲು ಆಳುವ ಪಕ್ಷಗಳಿಗೆ ನೆರವಾಗಲೆಂದೇ ಕೆಲವು ಕರಾಳ ಕಾಯ್ದೆಗಳನ್ನೂ ಸಹ ಅನುಸರಿಸಲಾಗುತ್ತಿದೆ. ಈ ಕಾಯ್ದೆಯ ದುರ್ಬಳಕೆಯಿಂದ ಅಮಾಯಕ ಪ್ರಜೆಗಳ ಮೇಲೆ ಉಂಟಾಗಬಹುದಾದ ಭೀಕರ ಪರಿಣಾಮವನ್ನು ಮತ್ತು ವ್ಯಕ್ತಿಗತವಾಗಿ ಇಂತಹ ಕಾಯ್ದೆಗಳಡಿ ದೀರ್ಘಾವಧಿ ಶಿಕ್ಷೆಗೊಳಗಾಗಿ ನಿರಪರಾಧಿಗಾಗಿ ಹೊರಬರುವ ವ್ಯಕ್ತಿಗಳು ಅನುಭವಿಸುವ ಮಾನಸಿಕ ಯಾತನೆಯನ್ನು ದಾಖಲಿಸಬೇಕಾದ್ದು ವರ್ತಮಾನ ಸಮಾಜದ ಕರ್ತವ್ಯ.
ಯುವ ನಿರ್ದೇಶಕ ಮನ್ಸೋರೆ ತಮ್ಮ 19.20.21 ಎಂಬ ವಿನೂತನ ಶೀರ್ಷಿಕೆಯ ಒಂದು ಚಲನಚಿತ್ರವನ್ನು ಕನ್ನಡಿಗರ ಮುಂದಿರಿಸಿರುವುದು ಈ ಜವಾಬ್ದಾರಿಯನ್ನು ನಿಭಾಯಿಸುವ ಒಂದು ಮಾದರಿಯಾಗಿ ಕಾಣುತ್ತದೆ. ಜೈ ಭೀಮ್ ಚಿತ್ರದಲ್ಲಿ ಇರುಳರ್ ಆದಿವಾಸಿ ಸಮುದಾಯಗಳ ತಲ್ಲಣಗಳನ್ನು ಮತ್ತು ತುಮುಲಗಳನ್ನು ಪರಿಣಾಮಕಾರಿಯಾಗಿ ಬಿಂಬಿಸಿರುವಂತೆಯೇ, ಮನ್ಸೋರೆ ತಮ್ಮ ಈ ಚಿತ್ರದಲ್ಲಿ ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿರುವ ಮಲೆಕುಡಿಯ ಆದಿವಾಸಿ ಸಮುದಾಯಗಳ ತಲ್ಲಣಗಳನ್ನು, ಆತಂಕಗಳನ್ನು ಮತ್ತು ಅವರ ಜೀವನ-ಜೀವನೋಪಾಯದ ಸಂಕೀರ್ಣತೆಗಳನ್ನು ಪರಿಣಾಮಕಾರಿಯಾಗಿ ಬಿಂಬಿಸಿದ್ದಾರೆ. ಒಂಬತ್ತು ವರ್ಷಗಳ ಸುದೀರ್ಘ ನ್ಯಾಯಾಂಗ ಹೋರಾಟದ ನಂತರ 2021ರಲ್ಲಿ ಆರೋಪಮುಕ್ತರಾಗಿ ನಿರಾಳ ಬದುಕಿಗೆ ತೆರೆದುಕೊಂಡ ವಿಠಲ್ ಮಲೆಕುಡಿಯ ಮತ್ತು ಅತನ ತಂದೆಯ ಜೀವನದಲ್ಲಿ ನಡೆದ ನೈಜ ಘಟನೆಗಳನ್ನೇ ಮನ್ಸೋರೆ ತಮ್ಮ ಚಿತ್ರದಲ್ಲಿ ಬಿಂಬಿಸಿದ್ದು, ಭಾರತದ ಕಟ್ಟಕಡೆಯ ವ್ಯಕ್ತಿಗೂ ಈ ದೇಶದ ಸಂವಿಧಾನ ನೀಡುವ ಭರವಸೆಯನ್ನು ದೃಢೀಕರಿಸುವಂತೆ ಇಡೀ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಸುರಕ್ಷಿತ-ಸುಶಿಕ್ಷಿತ-ಹಿತವಲಯದ ಬಾಹ್ಯ ಜಗತ್ತಿನ ಕಣ್ಣೋಟದಿಂದ ಸದಾ ದೂರವೇ ಇರುವ ಆದಿವಾಸಿಗಳ ಬದುಕನ್ನು ಚಲನಚಿತ್ರಗಳ ಮೂಲಕ ಬಿಂಬಿಸುವಾಗ ಸಾಮಾನ್ಯವಾಗಿ ರಂಜನೀಯತೆ ಮತ್ತು ಕುತೂಹಲಗಳನ್ನು ಹುಟ್ಟಿಸುವಂತೆಯೇ ಚಿತ್ರೀಕರಿಸಲಾಗುತ್ತದೆ. ಕಮರ್ಷಿಯಲ್ ಎನ್ನಬಹುದಾದ ಚಿತ್ರಗಳಲ್ಲಿ ಅದಿವಾಸಿಗಳ ಬದುಕು ಮತ್ತು ಸಾಮಾಜಿಕ ತಲ್ಲಣಗಳನ್ನು ದಾಖಲಿಸಿರುವ ನಿದರ್ಶನಗಳು ನಮ್ಮ ಮುಂದೆ ಇಲ್ಲ ಎನ್ನುವುದೂ ವಾಸ್ತವ. ಈ ಸಮುದಾಯಗಳು ತಮ್ಮ ಅರಣ್ಯ ಕೇಂದ್ರಿತ ಬದುಕಿನಿಂದ ಉಚ್ಚಾಟಿಸಲ್ಪಟ್ಟಾಗ, ಅಭಿವೃದ್ಧಿಯ ಹೆಸರಿನಲ್ಲಿ ಈ ಜನಗಳ ಮೂಲ ನೆಲೆಗಳನ್ನೇ ಪಲ್ಲಟಗೊಳಿಸುವ ಆಡಳಿತ ವ್ಯವಸ್ಥೆಯ ನಿರ್ಧಾರಗಳು ಎದುರಾದಾಗ, ತಮ್ಮ ನಿತ್ಯ ಬದುಕಿನ ಭಾಗವಾದ ಅರಣ್ಯ ಉತ್ಪನ್ನಗಳೇ ಇವರಿಗೆ ನಿಲುಕದಂತಹ ವಾತಾವರಣ ಸೃಷ್ಟಿಯಾದಾಗ, ಆದಿವಾಸಿಗಳ ಕೌಟುಂಬಿಕ ಬದುಕಿನಲ್ಲಿ ಉಂಟಾಗುವ ತುಮುಲ-ತಲ್ಲಣ-ಆತಂಕಗಳು ಬಾಹ್ಯ ಜಗತ್ತಿಗೆ ಇಂದಿಗೂ ಸ್ಪಷ್ಟವಾಗಿ ಅರ್ಥವಾಗಿಲ್ಲ. ಮನ್ಸೋರೆ ಅವರ 19.20.21 ಚಿತ್ರವು ಇದನ್ನು ಅರ್ಥಮಾಡಿಸುವಲ್ಲಿ ಯಶಸ್ವಿಯಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.
ವಿಠಲ್ ಮಲೆಕುಡಿಯ ಪ್ರಕರಣವೇ ಈ ಚಿತ್ರದ ಜೀವಾಳವಾಗಿದ್ದರೂ, ನಿರ್ದೇಶಕ ಮನ್ಸೋರೆ ತಮ್ಮ ಇಡೀ ಕಥಾವಸ್ತುವನ್ನು ಕೇಂದ್ರೀಕರಿಸಿರುವುದು ಭಾರತದ ಸಂವಿಧಾನ ಪ್ರಜೆಗಳಿಗೆ ನೀಡಿರುವ ವಾಕ್ ಸ್ವಾತಂತ್ರ್ಯ , ಅಭಿವ್ಯಕ್ತಿ ಸ್ವಾತಂತ್ರ್ಯ , ಬದುಕುವ ಹಕ್ಕು ಮತ್ತು ಸಾಂವಿಧಾನಿಕ ರಕ್ಷಣೆಯ ಮೇಲೆ. ಭಾರತದ ಪ್ರತಿಯೊಬ್ಬ ಪ್ರಜೆಗೂ ತನ್ನ ವಿರುದ್ಧ ಅಥವಾ ತನ್ನ ಸಮುದಾಯದ ವಿರುದ್ಧ ನಡೆಯುತ್ತಿರುವ ಶೋಷಣೆಯನ್ನು ಪ್ರತಿಭಟಿಸುವ ಹಕ್ಕು ಇರುವಂತೆಯೇ, ತನ್ನ ಬದುಕು ರೂಪಿಸಿಕೊಳ್ಳಲು ಅಗತ್ಯವಾದ ವಾತಾವರಣವನ್ನು ಅಪೇಕ್ಷಿಸುವ ಹಕ್ಕು ಸಹ ಇದ್ದೇ ಇರುತ್ತದೆ. ಹೋರಾಟ, ಆಂದೋಲನ, ಚಳುವಳಿ , ಪ್ರತಿಭಟನೆ ಮುಂತಾದ ಪ್ರತಿರೋಧದ ಅಸ್ತ್ರಗಳನ್ನು ಈ ದೇಶದ ಸಂವಿಧಾನವು ಸಮಸ್ತ ಪ್ರಜೆಗಳಿಗೂ ಪರಿಚ್ಚೇದ 19.20.21ರ ಮೂಲಕ ನೀಡಿದೆ. ಹಾಗೆಯೇ ಈ ಪರಿಚ್ಚೇದಗಳನ್ನು ಗೌರವಿಸುತ್ತಲೇ ಆಡಳಿತ ವ್ಯವಸ್ಥೆ ಮತ್ತು ಆಳುವ ಚುನಾಯಿತ ಸರ್ಕಾರಗಳು ಸಮಸ್ತ ಪ್ರಜೆಗಳ ಸಾಂವಿಧಾನಿಕ ಹಕ್ಕುಗಳನ್ನು ಕಾಪಾಡಬೇಕಾದ ಜವಾಬ್ದಾರಿಯನ್ನೂ ಹೊತ್ತಿರುತ್ತವೆ.
ಮನ್ಸೋರೆ ಅವರ 19.20.21 ಇದನ್ನೇ ಪ್ರತಿಪಾದಿಸುವ ಒಂದು ಉತ್ತಮ ಚಿತ್ರ ಎನ್ನಬಹುದು. ಕೆಲವು ನುರಿತ ಕಲಾವಿದರೊಂದಿಗೆ ಯುವ ಪೀಳಿಗೆಯ ಕಲಾವಿದರನ್ನೂ ಬಳಸಿಕೊಂಡು, ಬಿಗಿಯಾದ ನಿರೂಪಣೆ, ಮನಮುಟ್ಟುವ ಸಂಭಾಷಣೆ, ಹೃದಯಸ್ಪರ್ಶಿ ದೃಶ್ಯಗಳು ಮತ್ತು ವಿಹಂಗಮ ಛಾಯಾಗ್ರಹಣದ ಮೂಲಕ ಮನ್ಸೋರೆ ತಮ್ಮ ಚಿತ್ರದಲ್ಲಿ ಒಂದು ಗಂಭೀರ ವಿಚಾರವನ್ನು ಪ್ರೇಕ್ಷಕರ ಮುಂದಿರಿಸುತ್ತಾರೆ. ಮನರಂಜನೆಗೆ ಹೆಚ್ಚಿನ ಒತ್ತು ನೀಡದೆ, ಇವತ್ತಿನ ಕಮರ್ಷಿಯಲ್ ಚಿತ್ರಜಗತ್ತಿನಲ್ಲಿ ಅನಿವಾರ್ಯವೇನೋ ಎನ್ನಿಸುವ ಅನಗತ್ಯ ಹಾಸ್ಯ, ಹಾಡು, ಕುಣಿತ, ಹೊಡೆದಾಟ ಮುಂತಾದ ರಂಜನೀಯ ಅಂಶಗಳಿಗೆ ಒಲಿಯದೆ, ಮನ್ಸೋರೆ ಕರ್ನಾಟಕ ಕಂಡ ಒಂದು ನೈಜ ಘಟನೆಯನ್ನು ಯಥಾವತ್ತಾಗಿ ಪ್ರೇಕ್ಷಕರ ಮುಂದಿರಿಸುತ್ತಾರೆ. ಚಿತ್ರದಲ್ಲಿನ ಸಂಭಾಷಣೆಗಳು ಕಥಾವಸ್ತುವಿಗೆ ವಿಮುಖವಾಗದೆ, ಮೂಲ ಕಥೆಯ ಕೇಂದ್ರಬಿಂದುವಾಗಿರುವ ಸಾಂವಿಧಾನಿಕ ಆಶಯಗಳು ಮತ್ತು ಮೌಲ್ಯಗಳನ್ನು ಮನದಟ್ಟು ಮಾಡುವಂತಿರುವುದು ಮೆಚ್ಚತಕ್ಕ ಅಂಶ.
19.20.21 ಚಿತ್ರದ ಶೀರ್ಷಿಕೆಯೇ ಹೇಳುವಂತೆ, ಭಾರತದ ಸಮಸ್ತ ಜನತೆಯ ಹಸನಾದ ಬದುಕಿಗೆ ಸಂವಿಧಾನವೇ ಮೂಲ. ಎಲ್ಲ ನಟರ ಅತ್ಯುತ್ತಮ ನಟನೆ, ನಿಸರ್ಗ ತಾಣಗಳ ವಿಹಂಗಮ ಚಿತ್ರೀಕರಣ, ಬಿಗಿಯಾದ ಗಂಭೀರ ಸಂಭಾಷಣೆ, ಎಲ್ಲಿಯೂ ಸಡಿಲವಾಗದ ನಿರ್ದೇಶನ ಮತ್ತು ಚಿತ್ರದ ಮೂಲ ಕಥಾವಸ್ತುವಿನ ಉದ್ದೇಶವನ್ನು ಪರಿಣಾಮಕಾರಿಯಾಗಿ ಪರದೆಯ ಮೇಲೆ ಸಾದರಪಡಿಸುವ ರೀತಿ ಇವೆಲ್ಲವೂ ಮನ್ಸೋರೆ ಅವರಲ್ಲಿನ ಸೃಜನಾತ್ಮಕ ಕಲೆ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ. ಸಂವಿಧಾನದ ರಕ್ಷಣೆಯಲ್ಲಿ ಮತ್ತು ಜನಸಾಮಾನ್ಯರ ಸಾಂವಿಧಾನಿಕ ಹಕ್ಕುಗಳ ರಕ್ಷಣೆಯಲ್ಲಿ ನ್ಯಾಯಾಂಗದ ಪಾತ್ರ ಎಷ್ಟು ಮಹತ್ವದ್ದು ಎನ್ನುವುದನ್ನು ನಿರೂಪಿಸುವ ನಿಟ್ಟಿನಲ್ಲಿ ಮನ್ಸೋರೆ ಯಶಸ್ವಿಯಾಗಿದ್ದಾರೆ. ಹಾಗೆಯೇ ಮಲೆಕುಡಿಯ ಆದಿವಾಸಿ ಸಮುದಾಯದ ಬದುಕಿನ ತಲ್ಲಣಗಳನ್ನು ಮನಮುಟ್ಟುವಂತೆ ಬಿಂಬಿಸುವುದರಲ್ಲೂ ಯಶಸ್ವಿಯಾಗಿದ್ದಾರೆ. ಆಡಳಿತ ವ್ಯವಸ್ಥೆಯಲ್ಲಿ ಉಲ್ಲಂಘಿಸಲಾಗುವ ಸಾಂವಿಧಾನಿಕ ಆಶಯಗಳನ್ನು ಮತ್ತು ಮೌಲ್ಯಗಳನ್ನು ರಕ್ಷಿಸಲು ನ್ಯಾಯಾಂಗವೊಂದೇ ಅಂತಿಮ ಮಾರ್ಗ ಎಂಬ ಸಂದೇಶವನ್ನೂ ಈ ಚಿತ್ರ ಪರಿಣಾಮಕಾರಿಯಾಗಿ ಹೊತ್ತುತರುತ್ತದೆ.
ಇಡೀ ನಾಗರಿಕ ಜಗತ್ತನ್ನು ಬಾಧಿಸುವ ಮಾನವ ಹಕ್ಕುಗಳ ಸಮಸ್ಯೆ ಮತ್ತು ಈ ಹಕ್ಕುಗಳ ರಕ್ಷಣೆಗಾಗಿ ವ್ಯವಸ್ಥೆಯ ಆಂತರ್ಯದಲ್ಲೇ ಇರುವ ಪರಿಹಾರೋಪಾಯ ಮಾರ್ಗಗಳನ್ನು ಮನ್ಸೋರೆ ಮಲೆಕುಡಿಯ ಆದಿವಾಸಿ ಸಮುದಾಯದ ಒಂದು ಸುದೀರ್ಘ ಕಾನೂನು ಸಂಘರ್ಷದ ಕಥಾ ಹಂತರದ ಮೂಲಕ ಬಿಂಬಿಸುತ್ತಾರೆ. ಮುಖ್ಯ ಪಾತ್ರಧಾರಿಯ ಸುದೀರ್ಘ ಬವಣೆಗೆ ಕಾರಣೀಭೂತರಾದ ನಿವೃತ್ತ ಪೊಲೀಸ್ ಅಧಿಕಾರಿಯ ಪಶ್ಚಾತ್ತಾಪದ ಭಾವ ಮತ್ತು ಆತನ ಮೊಮ್ಮಗಳಿಗೆ ವಕೀಲರು ಸಂವಿಧಾನದ ಗ್ರಂಥವನ್ನು ಉಡುಗೊರೆಯಾಗಿ ನೀಡುವ ಚಿತ್ರದ ಕೊನೆಯ ದೃಶ್ಯ ಸಹಜವಾಗಿಯೇ ಹೃದಯಸ್ಪರ್ಶಿ ಎನಿಸುತ್ತದೆ.
19.20.21 ಕನ್ನಡ ಚಿತ್ರರಂಗಕ್ಕೆ ಮನ್ಸೋರೆ ಅವರಿಂದ ನೀಡಲ್ಪಟ್ಟಿರುವ ಅಮೂಲ್ಯ ಕೊಡುಗೆ. ಜನಸಾಮಾನ್ಯರ, ತಳಮಟ್ಟದ ಜನಸಮುದಾಯಗಳ ಸಾಮಾಜಿಕ-ಸಾಂಸ್ಕೃತಿಕ ತಲ್ಲಣಗಳನ್ನು ಬಾಹ್ಯ ಜಗತ್ತಿಗೆ ಪರಿಚಯಿಸುವ ಇಂತಹ ಪ್ರಯತ್ನಗಳನ್ನು ಸ್ವಾಗತಿಸುತ್ತಲೇ ಮನ್ಸೋರೆ ಅವರಿಂದ ಇಂತಹ ಪ್ರಯತ್ನಗಳು ನಿರಂತರವಾಗಿ ಸಾಗುತ್ತಿರಲಿ ಎಂದು ಆಶಿಸಬಹುದು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ