19.20.21. ಬರೀ ಸಂಖ್ಯೆಯಲ್ಲ… ಅದು ಸಂವಿಧಾನದ ವಿಧಿ

ವಿನೋದ ಶ್ರೀರಾಮಪುರ

ಸಂವಿಧಾನದ ವಿಧಿಗಳು ಸಂಪೂರ್ಣವಾಗಿ ಜಾರಿಗೆ ಬಂದಿದೆ ಎಂದರೆ, ಕಾನೂನು ದುರ್ಬಳಕೆ ಮಾಡಿಕೊಳ್ಳದೆ, ದೇಶದ ಕಟ್ಟಕಡೆಯ ನಿರಪರಾಧಿ ಪ್ರಜೆಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಕೌರ್ಯ ನಿಂತಾಗ ಮಾತ್ರ ಸಾಧ್ಯವೆಂಬ ಸತ್ಯ ಪ್ರಸ್ತುತಪಡಿಸಿದ ಚಿತ್ರ 19.20.21.

ಕಾನೂನು ಪ್ರಕರಣವೊಂದರ ಸತ್ಯ ಘಟನೆ ಆಧಾರಿತ ವಸ್ತುವುಳ್ಳ ಕನ್ನಡ ಚಲನಚಿತ್ರ ನಿರ್ದೇಶನ ಮಾಡಿರುವ ಮಂಸೋರೆ ಅವರು, ಚಿತ್ರಕ್ಕೆ 19.20.21. ಎಂದು ಹೆಸರಿಟ್ಟಿದ್ದಾರೆ. ಚಿತ್ರದ ಹೆಸರು ಸೂಚಿಸುವಂತೆ ಇದು ಕೇವಲ ಸಂಖ್ಯೆಯಲ್ಲ. ಬದಲಾಗಿ, ಭಾರತ ಸಂವಿಧಾನದಲ್ಲಿ ಅಡಕವಾಗಿರುವ ವಿಧಿ. ಸಂವಿಧಾನದ 19ನೇ ವಿಧಿಯು – ಭಾರತೀಯರಿಗೆ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ; ವಿಧಿ 20 – ಒಂದೇ ಅಪರಾಧಕ್ಕೆ ಒಂದಕ್ಕಿಂತ ಹೆಚ್ಚು ಭಾರಿ ಶಿಕ್ಷೆ ವಿಧಿಸುವಂತಿಲ್ಲ, ಒಬ್ಬ ವ್ಯಕ್ತಿಯನ್ನು ತನ್ನ ವಿರುದ್ಧ ತಾನೇ ಸಾಕ್ಷಿ ಹೇಳುವಂತೆ ಒತ್ತಾಯಿಸುವಂತಿಲ್ಲ. ವಿಧಿ 20 – ಬದುಕುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆ ನೀಡುತ್ತದೆ.

ಇದನ್ನು ಓದಿ: ಮಂಸೋರೆ ನಿರ್ದೇಶನದ ಸತ್ಯ ಘಟನೆ ಆಧಾರಿತ 19.20.21 ಸಿನಿಮಾ ತೆರೆಗೆ

ಈ ಚಿತ್ರವು 2012 ಮಾರ್ಚ್ 3ರಂದು ನಕ್ಸಲ್ ನಿಗ್ರಹ ಪಡೆಯಿಂದ ಬಂಧಿತರಾದ ವಿಠಲ್ ಮಲೆಕುಡಿಯ ಹಾಗೂ ಆತನ ತಂದೆ ಲಿಂಗಣ್ಣ ಮಲೆಕುಡಿಯ ಅವರ ಕಾನೂನು ಹೋರಾಟದ ಕಥೆ. ವಿಠಲ್ ಮಲೆಕುಡಿಯ ಪಾತ್ರವೇ ಈ ಸಿನಿಮಾದಲ್ಲಿ ಮಂಜು ಕೂಡುಮಲೆ ಆಗಿ ಬದಲಾಯಿಸಲಾಗಿದೆ. ಇವರಿಬ್ಬರೂ ನಕ್ಸಲರು ಎಂದು 2012ರಲ್ಲಿ ದಾಖಲಾಗಿ 2021ರ ಅಕ್ಟೋಬರ್‌ನಲ್ಲಿ ಅಂತ್ಯವಾಗಿ ಆರೋಪದಿಂದ ಮುಕ್ತರಾಗಿ ನಿರ್ದೋಷಿಗಳೆಂದು ಬಿಡುಗಡೆಯಾಗುತ್ತಾರೆ. ಈ ಪ್ರಕರಣವೊಂದರ ವಸ್ತುವಾಗಿಟ್ಟುಕೊಂಡು 19.20.21. ಎಂಬ ಚಿತ್ರ ರಚಿಸಲಾಗಿದೆ. ವಿಠಲ ಮಲೆಕುಡಿಯ ಬಂಧನವಾದಾಗಿನಿಂದ ಹಿಡಿದೂ ಬಿಡುಗಡೆಯಾಗುವವರೆಗೂ ಜೊತೆ ನಿಂತದ್ದು ಡಿವೈಎಫ್‌ಐ ಸಂಘಟನೆ. ಡಿವೈಎಫ್‌ಐನ ಮುನೀರ್‌ ಕಾಟಿಪಳ್ಳ ಹಾಗೂ ಪತ್ರಕರ್ತ ನವೀನ್‌ ಸೂರಿಂಜೆ ನಡೆಸಿದ ಹೋರಾಟವನ್ನು ಈ ಚಿತ್ರ ಮೆಲುಕು ಹಾಕುತ್ತದೆ.

ಕರ್ನಾಟಕದ ಕುದುರೆಮುಖ ಪ್ರದೇಶವನ್ನು ರಾಷ್ಟ್ರೀಯ ಉದ್ಯಾನವನ ಎಂದು ಘೋಷಿಸಿದ ನಂತರದಲ್ಲಿ ಆರಣ್ಯ ಪ್ರದೇಶದೊಳಗೆ ಆರಂಭವಾಗುವ ಚಟುವಟಿಕೆಗಳು, ಅದೇ ಸಂದರ್ಭದಲ್ಲಿ ನಕ್ಸಲ್‌ ಗುಂಪುಗಳು ಅಟ್ಟಹಾಸ ಮತ್ತು ಅದನ್ನು ನಿಗ್ರಹಿಸಲು ಯೋಜಿಸಲಾದ ಸರಕಾರ ಅಡಿಯಲ್ಲಿನ ವ್ಯವಸ್ಥೆಗೆ ಬಲಿಪಶುವಾಗುವುದು ದೇಶದ ಕಟ್ಟಕಡೆಯ ಪ್ರಜೆ, ಅದರಲ್ಲೂ ಕಾಡೊಳಗಿನ ಆದಿವಾಸಿಗಳು.

ಅರಣ್ಯ ಇಲಾಖೆ, ನಕ್ಸಲ್‌ ನಿಗ್ರಹ ಪಡೆ ಹಾಗೂ ಭೈರಾಗಿ ಪೊಲೀಸ್‌ ಠಾಣೆಯ ಪೊಲೀಸರು ಕೆಲವೇ ಕೆಲವು ಕುಟುಂಬಗಳು ವಾಸವಾಗಿರುವ ಆದಿವಾಸಿಗಳ ಮೇಲೆ ನಕ್ಸಲ್ ನಿಗ್ರಹದ ಹೆಸರಿನಲ್ಲಿ ನಡೆಸುವ ಹಿಂಸಾತ್ಮಕ ದೌರ್ಜನ್ಯಕ್ಕೆ ಸಾಕ್ಷಿಯಾಗುತ್ತದೆ. ಯುಎಪಿಎ ಕಾಯ್ದೆಯಡಿ 24/2012ರ ಪ್ರಕರಣವೊಂದು 2012ರಲ್ಲಿ ದಾಖಲಾಗಿ, 2021ರ ಅಕ್ಟೋಬರ್‌ 21ರಲ್ಲಿ ಅಂತ್ಯವಾಗುತ್ತದೆ. ಕೂಡುಮಲೆ ಅರಣ್ಯ ಪ್ರದೇಶದಲ್ಲಿನ ಆದಿವಾಸಿ ಕುಟುಂಬವೊಂದರ ಮಂಜು(ಶೃಂಗ ಬಿ.ವಿ.) ಮತ್ತು ರಾಮಣ್ಣ(ಮಹದೇವ ಹಡಪದ್‌) ಎಂಬ ಮೇಲೆ ಕಾನೂನುಬಾಹಿರ ಚಟುವಟಿಕೆ, ದೇಶದ್ರೋಹಿ, ಭಯೋತ್ಪಾದನೆ, ನಕ್ಸಲ್‌ ಎಂದು ಗುರುತಿಸುವ ಯುಎಪಿಎ ಕಾಯ್ದೆ ಹೇರುವ ಮೂಲಕ ದುರ್ಬಳಕೆಯಾಗಿದೆ ಎಂದು ನ್ಯಾಯಾಲಯಗಳಲ್ಲಿ ಒಂಭತ್ತುವರೇ ವರ್ಷಗಳ ಸತತ ವಿಚಾರಣೆ ನಡೆದು ಅಂತಿಮವಾಗಿ ಮಂಜು ಮತ್ತು ರಾಮಣ್ಣ ಮೇಲೆ ಹೇರಲಾದ ಯುಎಪಿಎ ಪ್ರಕರಣದ ಸ್ಪಷ್ಟ ಉಲ್ಲಂಘನೆಯಾಗಿದೆ ಮತ್ತು ಆರೋಪಿಗಳು ನಿರ್ದೋಶಿಗಳು ಎಂದು ಜಾಹೀರಾಗುತ್ತದೆ.

ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುವುದೇ ಮಹಾ ಅಪರಾಧವಾಗಿದ್ದು, ನಕ್ಸಲ್‌ ನಿಗ್ರಹ ಪಡೆ ಮತ್ತು ಪೊಲೀಸರು ಕಾನೂನು ಬಳಸಿ  ಆದಿವಾಸಿ ಕುಟುಂಬದವರ ಮೇಲೆ ನಡೆಯುವ ದೈಹಿಕ ಹಿಂಸೆ, ಕ್ರೌರ್ಯ ಮತ್ತು ಮಾರಣಾಂತಿಕ ಹಲ್ಲೆಯ ದೃಶ್ಯಗಳು ಕಟ್ಟಿರುವ ನಿರ್ದೇಶಕರು ಪ್ರೇಕ್ಷಕರ ಮನ ಕಲಕುತ್ತದೆ.

ಕೂಡುಮಲೆ ಆದಿವಾಸಿಗಳಲ್ಲಿ ಪದವಿ ಶಿಕ್ಷಣ ಪಡೆದ ಏಕೈಕ ವಿದ್ಯಾರ್ಥಿ ಮಂಜು ತನ್ನ ವಿದ್ಯಾಭ್ಯಾಸವನ್ನು ಮಂಗಳೂರಿನ ಹಾಸ್ಟೆಲ್‌ ನಲ್ಲಿ ಮುಂದುವರೆಸುತ್ತಾನೆ. ತಮ್ಮದೇ ವಾಸಸ್ಥಳದ ಬಳಿಯೇ ಊರ ಹಬ್ಬದ ಸಂದರ್ಭದಲ್ಲಿ ಸೇರುವ ಆದಿವಾಸಿಗಳು ಹಬ್ಬದ ಆಚರಣೆ ವೇಳೆ ನಕ್ಸಲ್‌ ನಿಗ್ರಹ ಪಡೆಗಳ ದೌರ್ಜನ್ಯ ಆರಂಭವಾಗುತ್ತದೆ.

ಇದನ್ನು ಓದಿ: ‘ಆಕ್ಟ್ 1978’ ಸೇರಿದಂತೆ ಪನೋರಮಾ ವಿಭಾಗಕ್ಕೆ ನಾಲ್ಕು ಕನ್ನಡ ಸಿನಿಮಾಗಳು ಆಯ್ಕೆ

ಆದಿವಾಸಿಗಳ ಮೇಲಿನ ದೌರ್ಜನ್ಯದ ವಿರುದ್ಧ ಪತ್ರಕರ್ತ ವಿಜಯ್‌(ವೆಂಕಟೇಶ್‌ ಪ್ರಸಾದ್‌), ಎಡಪಂಥೀಯ ಹೋರಾಟಗಾರ, ವೈಡಿಎಫ್‌ಐ ಸಂಘಟನೆ ಮುಖಂಡ ರಫಿ(ರಾಜೇಶ್‌ ನಟರಂಗ), ಹಿರಿಯ ವಕೀಲ ಸುರೇಶ್ ಹೆಗ್ಡೆ(ಬಾಲಾಜಿ ಮನೋಹರ್‌) ಮಂಜು ಮತ್ತು ರಾಮಣ್ಣನನ್ನು ನಿರ್ದೋಷಿಗಳೆಂದು ಸಾಬೀತಾಗಿ ತೀರ್ಪು ಬರುವವರೆಗೂ ಜೊತೆಯಾಗಿ ನಿಲ್ಲುತ್ತಾರೆ. ಅಷ್ಟೇ ಅಲ್ಲ, ಕಾನೂನು ಉಲ್ಲಂಘನೆ ಮಾಡದೆ ಕಾನೂನಾತ್ಮಕವಾಗಿಯೇ ತಮ್ಮ ಮಾರ್ಗವನ್ನು ಅನುಸರಿಸುತ್ತಾರೆ.

ಪ್ರಮುಖವಾಗಿ ಆದಿವಾಸಿಗಳು ಶಿಕ್ಷಣದಿಂದ ವಂಚಿತರು. ಅಂತಹದರಲ್ಲೂ ಪದವಿ ಶಿಕ್ಷಣದ ವಿದ್ಯಾಭ್ಯಾಸ ಮಾಡುತ್ತಿರುವ ಮಂಜು ತನ್ನ ಶೈಕ್ಷಣಿಕ ಅವಧಿಯಲ್ಲೇ ಜೈಲು ಸೇರಬೇಕಾಗಿ ಬರುತ್ತದೆ. ಮಂಜುವಿನ ವಿದ್ಯಾಭ್ಯಾಸ ಮುಂದುವರೆಸಲು ಮತ್ತು ಪರೀಕ್ಷೆ ಬರೆಯಲು ಏನೆಲ್ಲಾ ಕ್ರಮಗಳನ್ನು ಅನುಸರಿಸಬೇಕು, ನ್ಯಾಯಾಲಯದಿಂದ ಅನುಮತಿ ಪಡೆಯುವಲ್ಲಿ ರಫಿ, ವಿಜಯ್‌ ಮತ್ತು ಸುರೇಶ್‌ ಹೆಗ್ಡೆ ಶ್ರಮವಹಿಸಿದ್ದು ಮತ್ತು ಪರೀಕ್ಷೆ ಬರೆಯಲು ಪೊಲೀಸ್‌ ಸರ್ಪಗಾವಲು ಹಾಗೂ ಕೈಗೆ ಬೇಡಿ ಹಾಕಿ ಪರೀಕ್ಷೆ ಬರೆಸುವುದು ನಂತರ ಬೇಡಿ ಕಳಚಿ ಪರೀಕ್ಷೆ ಬರೆಯಲು ಹೋಗುವ ದೃಶ್ಯ ಪ್ರೇಕ್ಷಕರಿಗೆ ನಾಟುವಂತೆ ಮಾಡಿದೆ.

ಪ್ರಕರಣ ಜೆಎಂಎಫ್‌ಸಿ ನ್ಯಾಯಾಲಯ ಮತ್ತು ನಂತರದಲ್ಲಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತದೆ. ಮಂಜು ಮತ್ತು ರಾಮಣ್ಣ ಪರವಾಗಿ ಸುರೇಶ್‌ ಹೆಗ್ಡೆ ನ್ಯಾಯಾಲಯದಲ್ಲಿ ಮಂಜು ಮತ್ತು ರಾಮಣ್ಣ ಮೇಲೆ ಹೊರಿಸಲಾದ ಸುಳ್ಳು ಪ್ರಕರಣದಿಂದ ಆರೋಪಮುಕ್ತಗೊಳಿಸಲು ಸಮರ್ಥವಾಗಿ ವಾದಮಂಡಿಸಿ, ಪ್ರಕರಣದಲ್ಲಿ ಹೂಡಲಾದ ಸುಳ್ಳು ವರದಿಗಳನ್ನು ಎಳೆಎಳೆಯಾಗಿ ಬಯಲಿಗೊಳಿಸುತ್ತಾರೆ.

ಚಿತ್ರದ ಕೊನೆಯ ಭಾಗದ ನ್ಯಾಯಾಲಯದ ದೃಶ್ಯದಲ್ಲಿ ಸುರೇಶ್‌ ಹೆಗ್ಡೆಯವರು, ಯುಎಪಿಎ ಕಾಯ್ದೆ ದುರ್ಬಳಕೆ ಹಾಗೂ ಸಂವಿಧಾನದ ಮತ್ತು ದೇಶದ ಪ್ರಜೆಯೊಬ್ಬನ ನ್ಯಾಯಪರವಾದ ನಿರೀಕ್ಷೆಗಳು ಅತ್ಯಂಥ ಸಮರ್ಥವಾಗಿ ಮಂಡಿಸುವ ಮೂಲಕ 19.20.21. ಚಿತ್ರದ ದೃಶ್ಯ ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಎಲ್ಲರೂ ನೋಡಲೇ ಬೇಕಾದ ಚಿತ್ರ ಇದಾಗಿದೆ.

ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಅರ್ಪಿಸಿರುವ ಸಂವಿಧಾನದ ಮಹತ್ವ ಮತ್ತು ಅದರ ಕಾನೂನು ಬಳಕೆ ಮತ್ತು ವ್ಯವಸ್ಥೆಯೊಳಗಿನ ಲೋಪಗಳ ಹೇಗೆ ಬಳಕೆಯಾಗುತ್ತದೆ ಎಂಬುದು 19.20.21. ಚಿತ್ರವು ಅತ್ಯಂತ ಸೂಚ್ಯವಾಗಿ ತಿಳಿಸದೆ. ಅಂತಿಮವಾಗಿ ಮಂಸೋರೆ ಅವರ ನಿರ್ದೇಶನದ ಪರಿಶ್ರಮ ಎದ್ದುಕಾಣುತ್ತದೆ ಮತ್ತು ಪ್ರೇಕ್ಷಕರಿಗೆ ನಿರಾಶೆಗೊಳಿಸಿಲ್ಲ.

ಶೃಂಗ ಬಿ ವಿ ಹಾಗೂ ಮಹದೇವ ಹಡಪದ್‌ ಅವರು ಚಿತ್ರಕ್ಕೆ ತಕ್ಕಂತೆ ತಮ್ಮ ಅಭಿನಯದ ಮೂಲಕ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಪೊಲೀಸ್‌ ಪಾತ್ರಧಾರಿ ಕೃಷ್ಣ ಹೆಬ್ಬಾಳೆ, ಮಂಜು ತಾಯಿಯಾಗಿ ಎಂ.ಡಿ. ಪಲ್ಲವಿ, ನಕ್ಸಲ್‌ ನಿಗ್ರಹ ಪಡೆ ಅಧಿಕಾರಿ ವಿಶ್ವ ಕರ್ಣ, ನಟ ಅವಿನಾಶ್‌, ಉಗ್ರಂ ಸಂದೀಪ್, ಬಿ.ಎಂ.ಗಿರಿರಾಜ್‌, ವೈ.ಜಿ.ಉಮಾ, ಮಾಲತೇಶ್‌ ಹೆಚ್‌.ವಿ., ಪಿ ಡಿ ಸತೀಶ್‌ಚಂದ್ರ, ಸಂಪತ್‌ ಕುಮಾರ್‌, ರವಿ ಭಟ್‌, ಅತಿಥಿ ಪಾತ್ರಧಾರಿಯಾಗಿ ಸಿ.ಎಸ್‌.ದ್ವಾರಕನಾಥ್‌, ಶಶಿಧರ ಭಾರಿಘಾಟ್‌, ಟಿ ಸುರೇಂದ್ರರಾವ್‌, ವಿಮಲಾ ಕೆ ಎಸ್‌ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ವೀರೇಂದ್ರ ಮಲ್ಲಣ್ಣ ಮತ್ತು ಅವಿನಾಶ್ ಜಿ. ಸಂಭಾಷಣೆ, ಮಂಸೋರೆ ಮತ್ತು ವೀರೇಂದ್ರ ಮಲ್ಲಣ್ಣ ಚಿತ್ರಕಥೆ, ಕಿರಣ್ ಕಾವೇರಪ್ಪ ಅವರ ಸಾಹಿತ್ಯ ಚಿತ್ರಕ್ಕಿದೆ. ಶಿವು ಬಿ.ಕೆ. ಕುಮಾರ್ ಅವರ ಛಾಯಾಗ್ರಹಣ, ಬಿಂದುಮಾಲಿನಿ ಅವರ ಸಂಗೀತ,  ರೋಣದ ಬಕ್ಕೇಶ್ ಅವರ ಹಿನ್ನೆಲೆ ಸಂಗೀತವು 19.20.21. ಚಿತ್ರ ಕಟ್ಟುವಲ್ಲಿ ಯಶಸ್ವಿಯಾಗಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

 

 

Donate Janashakthi Media

Leave a Reply

Your email address will not be published. Required fields are marked *