ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ 18,581 ಹುದ್ದೆಗಳು ಖಾಲಿ ಇವೆ. ಪೊಲೀಸ್ ಇಲಾಖೆಯಲ್ಲಿ 1,11,330 ಅನುಮೋದಿತ ಹುದ್ದೆ ಇದ್ದು, ಅವುಗಳ ಪೈಕಿ ಶೇಕಡಾ 16.69ರಷ್ಟು ಸಿಬ್ಬಂದಿ ಕೊರತೆ ಇದೆ ಎಂಬ ಮಾಹಿತಿ ಹೊರಬಿದ್ದಿದೆ. ಬೆಂಗಳೂರು
ಕರ್ನಾಟಕದಲ್ಲಿ ಪೊಲೀಸ್-ಸಾರ್ವಜನಿಕ ಅನುಪಾತವು 1 ಲಕ್ಷ ಜನಸಂಖ್ಯೆಗೆ 165.04 ರಷ್ಟಿದೆ. ಇದು ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ (BPR and D) ಪ್ರಕಾರ ರಾಷ್ಟ್ರೀಯ ಸರಾಸರಿ 196.88 ಕ್ಕೆ ಹೋಲಿಸಿದರೆ ತುಂಬಾ ಕಡಿಮೆಯಾಗಿದೆ.
ಪ್ರಸ್ತುತ, ಪೊಲೀಸ್ ಪಡೆಯಲ್ಲಿ ಅನುಮೋದಿತ ಹುದ್ದೆ 1,11,330 ರಷ್ಟಿದ್ದು, ವಾಸ್ತವಿಕ ಬಲ 92,749 ರಷ್ಟಿದೆ. ಅಧಿಕೃತ ಮಾಹಿತಿಯ ಪ್ರಕಾರ, 6,591 ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳು ಮತ್ತು 819 ಹೆಡ್ ಕಾನ್‌ಸ್ಟೆಬಲ್ ಹುದ್ದೆಗಳು ಖಾಲಿ ಉಳಿದಿವೆ. ಹೆಚ್ಚುವರಿಯಾಗಿ, 2,107 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ನಗರ ಸಶಸ್ತ್ರ ಮೀಸಲು/ಜಿಲ್ಲಾ ಸಶಸ್ತ್ರ ಮೀಸಲು) ಮತ್ತು 3,830 ರಿಸರ್ವ್ ಪೊಲೀಸ್ ಕಾನ್ಸ್‌ಟೇಬಲ್ (ಕರ್ನಾಟಕ ರಾಜ್ಯ ಮೀಸಲು ಪೊಲೀಸ್) ಹುದ್ದೆಗಳು ಭರ್ತಿಯಾಗಿಲ್ಲ.
ಇದನ್ನೂ ಓದಿ: ಹಕ್ಕಿಜ್ವರದ ಭೀತಿ ಎಫೆಕ್ಟ್ : ರಾಯಚೂರಿನಲ್ಲಿ ಮೀನುಗಳ ಭರ್ಜರಿ ಮಾರಾಟ
ಮಂಗಳವಾರ ನಡೆದ ವಿಧಾನಸಭೆ ಅಧಿವೇಶನದಲ್ಲಿ ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ ಸಿಎನ್ ಕೇಳಿದ ಪ್ರಶ್ನೆಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಈ ವಿವರಗಳನ್ನು ನೀಡಿದರು. ಈ ಖಾಲಿ ಹುದ್ದೆಗಳ ಭರ್ತಿ ಕುರಿತು ಮಾತನಾಡಿದ ಅವರು, 600 ಸಬ್-ಇನ್ಸ್‌ಪೆಕ್ಟರ್‌ಗಳು ಸೇರಿದಂತೆ 4,115 ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. ಅದಕ್ಕೆ ನೇಮಕಾತಿ ಅಧಿಸೂಚನೆಯನ್ನು ಇನ್ನೂ ಹೊರಡಿಸಲಾಗಿಲ್ಲ ಎಂದು ಹೇಳಿದರು.
ಸಿಬ್ಬಂದಿ ಕೊರತೆಯು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ, ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ವಿವಿಧ ಸವಾಲುಗಳಿಗೆ ಕಾರಣವಾಗುತ್ತದೆ. ಇದು ಈಗಿರುವ ಸಿಬ್ಬಂದಿ ಮೇಲೆ ಹೆಚ್ಚಿನ ಕೆಲಸದ ಒತ್ತಡವನ್ನುಂಟು ಮಾಡುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.
ಇದನ್ನೂ ನೋಡಿ: Karnataka Legislative Assembly Live Day 07 | ವಿಧಾನಸಭೆ ಬಜೆಟ್ ಅಧಿವೇಶನದ ನೇರ ಪ್ರಸಾರ