ದಿಲ್ಲಿ ಪೋಲಿಸ್ ನ್ಯೂಸ್‍ಕ್ಲಿಕ್ ವಿರುದ್ಧ ಅಕ್ಟೋಬರ್ 3ರಂದು ನಡೆಸಿದ ಕಾರ್ಯಾಚರಣೆ ಮತ್ತು ಅದರ ಸಂಸ್ಥಾಪಕ ಸಂಪಾದಕರು ಮತ್ತು ಇನ್ನೊಬ್ಬ ಪತ್ರಕರ್ತರ ಬಂಧನದ ವಿರುದ್ಧ ಬಲವಾದ ಆಕ್ರೋಶ ವ್ಯಾಪಕವಾಗಿ ವ್ಯಕ್ತಗೊಂಡಿದೆ. ಈ ಹಿನ್ನೆಲೆಯಲ್ಲಿ ನಡೆದಿರುವ ಒಂದು ಮಹತ್ವದ ಬೆಳವಣಿಗೆಯಲ್ಲಿ 18 ಮಾಧ್ಯಮ ಸಂಘಟನೆಗಳು ಸ್ವತಂತ್ರ ಮಾಧ್ಯಮಗಳ ವಿರುದ್ಧ ತನಿಖಾ ಸಂಸ್ಥೆಗಳ ಹೆಚ್ಚುತ್ತಿರುವ ದಮನಕಾರಿ ಬಳಕೆಯನ್ನು ಕೊನೆಗೊಳಿಸಲು ಉನ್ನತ ನ್ಯಾಯಾಂಗವು ಈಗ ಮಧ್ಯಪ್ರವೇಶಿಸಬೇಕು ಎಂದು ನೇರವಾಗಿ ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಡಿ ವೈಚಂದ್ರಚೂಡ್ ಅವರಿಗೆ ಪತ್ರ ಬರೆದು ಮನವಿ ಮಾಡಿವೆ.
ಮಾಧ್ಯಮಗಳ ವಿರುದ್ಧ ಪ್ರಭುತ್ವದ ಕ್ರಮಗಳನ್ನು ಅಳತೆ ಮೀರಿದ ಮಟ್ಟಕ್ಕೆ ಒಯ್ಯಲಾಗಿದೆ, ಮತ್ತು ಅದು ಸಾಗುತ್ತಿರುವ ದಿಕ್ಕಿನಲ್ಲಿ ಮುಂದುವರಿಯಲು ಬಿಟ್ಟರೆ, ಸರಿಪಡಿಸುವ ಅಥವಾ ಪರಿಹಾರದ ಕ್ರಮಗಳಿಗೆ ಬಹಳ ತಡಮಾಡಿದಂತಾಗುತ್ತದೆ. ಆದ್ದರಿಂದ, ದೇಶದ ಸರ್ವೋಚ್ಚ ನ್ಯಾಯಾಲಯ ಮಧ್ಯಪ್ರವೇಶಿಸಲೇ
ಬೇಕಾದ ಸನ್ನಿವೇಶ ಉಂಟಾಗಿದೆ, ಅಂತಹ ಮಧ್ಯಪ್ರವೇಶ ನಡೆಸದಿದ್ದರೆ ಬಹಳ ತಡವಾಗಿ ಬಿಟ್ಟು ನಿರಂಕುಶಾಧಿಕಾರದ ಪೋಲೀಸ್ ಪ್ರಭುತ್ವ ಸಾಮಾನ್ಯ ಸಂಗತಿಯಾಗಿ ಬಿಡಬಹುದಾದ್ದರಿಂದ, ಮುಖ್ಯ ನ್ಯಾಯಮೂರ್ತಿಗಳ ಆತ್ಮಸಾಕ್ಷಿಗೆ ಮನವಿ ಮಾಡುವುದನ್ನು ಬಿಟ್ಟು ತಮ್ಮ ಮುಂದೆ ಅನ್ಯಮಾರ್ಗವಿಲ್ಲದಂತಾಗಿದೆ ಎಂದು ಡಿಜಿಪಬ್ ನ್ಯೂಸ್ ಇಂಡಿಯಾ ಫೌಂಡೇಶನ್, ಇಂಡಿಯನ್ ವಿಮೆನ್ಸ್ ಪ್ರೆಸ್ ಕೋರ್, ಪ್ರೆಸ್ ಕ್ಲಬ್ ಆಫ್ ಇಂಡಿಯಾ, ನವದೆಹಲಿ, ಫೌಂಡೇಶನ್ ಫಾರ್ ಮೀಡಿಯಾ ಪ್ರೊಫೆಷನಲ್ಸ್,ನೆಟ್‌ವರ್ಕ್ ಆಫ್ ವುಮೆನ್ ಇನ್ ಮೀಡಿಯಾ, ಇಂಡಿಯಾ, ಚಂಡೀಗಢ ಪ್ರೆಸ್ ಕ್ಲಬ್, ನ್ಯಾಷನ್ ಅಲಿಯನ್ಸ್ ಆಫ್ ಜರ್ನಲಿಸ್ಟ್ಸ್,ದಿಲ್ಲಿ ಪತ್ರಕರ್ತರ ಒಕ್ಕೂಟ, ಕೇರಳ ಕಾರ್ಯನಿರತ ಪತ್ರಕರ್ತರ ಸಂಘ, ಬೃಹನ್ಮುಂಬೈ ಪತ್ರಕರ್ತರ ಒಕ್ಕೂಟ, ಫ್ರೀ ಸ್ಪೀಚ್ ಕಲೆಕ್ಟಿವ್, ಮುಂಬೈ, ಮುಂಬೈ
ಪ್ರೆಸ್ ಕ್ಲಬ್, ಅರುಣಾಚಲ ಪ್ರದೇಶ ಕಾರ್ಯನಿರತ ಪತ್ರಕರ್ತರ ಒಕ್ಕೂಟ, ಪ್ರೆಸ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತು ಗುವಾಹಟಿ ಪ್ರೆಸ್ ಕ್ಲಬ್, ಇಂಡಿಯನ್ ಜರ್ನಲಿಸ್ಟ್ ಯೂನಿಯನ್, ಕೋಲ್ಕತ್ತಾ ಪ್ರೆಸ್ ಕ್ಲಬ್ ಮತ್ತು ವರ್ಕಿಂಗ್ ನ್ಯೂಸ್ ಕ್ಯಾಮೆರಾಮೆನ್ ಅಸೋಸಿಯೇಷನ್. ಜಂಟಿಯಾಗಿ ಬರೆದಿರುವ ಪತ್ರ ಆತಂಕ ವ್ಯಕ್ತಪಡಿಸಿದೆ.
“ಪತ್ರಿಕಾರಂಗಕ್ಕೆ ಅಧಿಕಾರಸ್ಥರ ಮುಖದೆದುರು ಸತ್ಯವನ್ನು ಎತ್ತಿ ತೋರುವ ಮತ್ತು ನಾಗರಿಕರ ಮುಂದೆ ಕಟುಸಂಗತಿಗಳನ್ನು ಪ್ರಸ್ತುತಪಡಿಸಿ ಪ್ರಜಾಪ್ರಭುತ್ವವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವ ಆಯ್ಕೆಗಳನ್ನು ಮಾಡಲು ಅವರಿಗೆ ಅನುವು ಮಾಡಿಕೊಡುವ ಕರ್ತವ್ಯ ಇದೆ” ಮತ್ತು ಪತ್ರಕರ್ತರು ಈ ಪಾತ್ರವನ್ನು “ಪ್ರತಿಕಾರದ ಬೆದರಿಕೆಯಿಂದ ನಡುಗದೆ” ನಿರ್ವಹಿಸುವ ವರೆಗೆ ಭಾರತದ ಸ್ವಾತಂತ್ರ್ಯಗಳು ಸುರಕ್ಷಿತವಾಗಿರುತ್ತವೆ ಎಂದು ನ್ಯಾಯಾಲಯದ ಒಳಗೆ ಮತ್ತು ಹೊರಗೆ ಹೇಳಿರುವರಿಗೆ ಬರೆಯುತ್ತಿದ್ದೇವೆ ಎಂಬ ಪರಿಜ್ಞಾನದಿಂದ, ಬಹಳಷ್ಟ ಯೋಚನೆ ಮತ್ತು ಚಿಂತನೆಯ ನಂತರವೇ ಈ ಪತ್ರವನ್ನು
ಬರೆದಿರುವುದಾಗಿ ಹೇಳಿರುವ ಈ ಸಂಘಟನೆಗಳು, ನ್ಯಾಯಾಲಯ ಮುಖ್ಯವಾಗಿ ಪತ್ರಕರ್ತರ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ಜಫ್ತಿಮಾಡುವ ಚಾಳಿಯನ್ನು ನಿರುತ್ಸಾಹಗೊಳಿಸಲು ನಿಯಮಾವಳಿಗಳನ್ನು ರೂಪಿಸಬೇಕು, ಪತ್ರಕರ್ತರ ವಿಚಾರಣೆಗೆ ಮತ್ತು ಜಫ್ತಿಗೆ, ಇವುಗಳು ನಿಜವಾದ ಅಪರಾಧಕ್ಕೆ ಯಾವುದೇ ಸಂಬಂಧವಿಲ್ಲದಂತೆ ಗಾಳಹಾಕುವ ಅಭಿಯಾನಗಳಾಗದಂತೆ ಖಚಿತಪಡಿಸಲು ಮಾರ್ಗಸೂಚಿಗಳನ್ನು ವಿಕಾಸಗೊಳಿಸಬೇಕು ಮತ್ತು ತನಿಖೆಗಳಲ್ಲಿ ಪ್ರಭುತ್ವದ ಏಜೆನ್ಸಿಗಳು ಮತ್ತು ವೈಯಕ್ತಿಕವಾಗಿ ಅಧಿಕಾರಿಗಳು ಕಾನೂನನ್ನು ಮೀರಿ ಹೋಗುತ್ತಿರುವುದನ್ನು ಅಥವ ಉದ್ದೇಶಪೂರ್ವಕವಾಗಿ ನ್ಯಾಯಾಲಯಗಳನ್ನು ದಾರಿ ತಪ್ಪಿಸುತ್ತಿರುವುದನ್ನು ತಪ್ಪಿಸಲು ಅವರನ್ನು ಉತ್ತರದಾಯಿಯಾಗಿ ಮಾಡಲು ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂಬ ಮೂರು ಅಂಶಗಳತ್ತ ನಿರ್ದಿಷ್ಟವಾಗಿ ಗಮನ ಸೆಳೆದಿವೆ.
ಇದನ್ನೂ ಓದಿ : ಸ್ವತಂತ್ರ ಹಾಗೂ ನಿರ್ಭೀತ ಧ್ವನಿಗಳನ್ನು ಅಡಗಿಸುವ ಪ್ರಯತ್ನ – ನ್ಯೂಸ್‌ಕ್ಲಿಕ್ ಆರೋಪ
“ತಾತ್ಪೂರ್ತಿಕ, ಬೇಕಾಬಿಟ್ಟಿ ಜಫ್ತಿಗಳನ್ನು ಮತ್ತು ವಿಚಾರಣೆಗಳನ್ನು ಖಂಡಿತವಾಗಿಯೂ ತಾನು ʼಪ್ರಜಾಪ್ರಭುತ್ವದ ತಾಯಿʼ ಎಂಬ ಪ್ರಚಾರವನ್ನು ಆರಂಭಿಸಿರುವ ದೇಶದಲ್ಲೇನು, ಯಾವುದೇ ಪ್ರಜಾಸತ್ತಾತ್ಮಕ ದೇಶದಲ್ಲಿಯೂ ಸ್ವೀಕಾರಾರ್ಹವೆಂದು ಪರಿಗಣಿಸಲು ಸಾಧ್ಯವಿಲ್ಲ” ಎಂದು ತಮ್ಮ ಪತ್ರ ಕೊನೆಯಲ್ಲಿ ಈ ಸಂಘಟನೆಗಳು ಹೇಳಿವೆ. ಈ ಪತ್ರದ ಪೂರ್ಣ ಪಾಟವನ್ನು ಈ ಮುಂದೆ ಕೊಡಲಾಗಿದೆ:
“ನಾವು ಈ ಪತ್ರವನ್ನು ಸ್ವತಂತ್ರ ಪತ್ರಿಕಾರಂಗವನ್ನು ಪ್ರತಿನಿಧಿಸುವ ಮತ್ತು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೌಲ್ಯಗಳನ್ನು ಎತ್ತಿಹಿಡಿಯಲು ಬದ್ಧವಾಗಿರುವ ಸಂಘಟನೆಗಳ ಸ್ವಯಂಪ್ರೇರಿತ ಮತ್ತು ಮುಕ್ತ ಒಕ್ಕೂಟವಾಗಿ ಬರೆಯುತ್ತಿದ್ದೇವೆ.
ಈ ಪತ್ರವು ನಾಗರಿಕರ ಮೂಲಭೂತ ಹಕ್ಕುಗಳ ಜಾಗರೂಕ ರಕ್ಷಕರಿಗೆ-ಈ ಪದವು ಎಷ್ಟೇ ಚರ್ವಿತಚರ್ವಣವಾಗಿರ ಬಹುದಾದರೂ- ಒಂದು ಶ್ರದ್ಧಾಪೂರ್ವಕ ಮನವಿಯಾಗಿದೆ; ಭಾರತದಲ್ಲಿ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಚಲಾವಣೆಗೆ ಅತ್ಯಗತ್ಯವಾಗಿರುವ ಒಂದು ಸಂಸ್ಥೆಯು, ಸರ್ವೋಚ್ಚವಾಗಿರುವ ಮತ್ತು ಆ ಸ್ವಾತಂತ್ರ್ಯಗಳನ್ನು ಪ್ರತಿಷ್ಠಾಪಿಸಿರುವ ಸಂವಿಧಾನವನ್ನು ರಕ್ಷಿಸಲು ಪ್ರತಿಜ್ಞಾಬದ್ಧವಾಗಿರುವ ಸಂಸ್ಥೆಗೆ ಮಾಡಿರುವ ಒಂದು ಮನವಿ.
ನಾವು ಈ ಪತ್ರವನ್ನು, ಇದು ಕೇವಲ ಭಾರತದ ಮುಖ್ಯ ನ್ಯಾಯಾಧೀಶರಿಗೆ ಮಾತ್ರವಲ್ಲ, ನ್ಯಾಯಾಲಯದ ಒಳಗೆ ಮತ್ತು ಹೊರಗೆ “ಪತ್ರಿಕಾರಂಗಕ್ಕೆ ಅಧಿಕಾರಸ್ಥರ ಮುಖದೆದುರು ಸತ್ಯವನ್ನು ಎತ್ತಿ ತೋರುವ ಮತ್ತು ನಾಗರಿಕರ ಮುಂದೆ ಕಟುಸಂಗತಿಗಳನ್ನು ಪ್ರಸ್ತುತಪಡಿಸಿ ಪ್ರಜಾಪ್ರಭುತ್ವವನ್ನು ಸರಿಯಾದ ದಿಕ್ಕಿನಲ್ಲಿ ಹಾಗೂ ಮುನ್ನಡೆಸುವ ಆಯ್ಕೆಗಳನ್ನು ಮಾಡಲು ಅವರಿಗೆ ಅನುವು ಮಾಡಿಕೊಡುವ ಕರ್ತವ್ಯ ಇದೆ” ಮತ್ತು ಪತ್ರಕರ್ತರು ಈ ಪಾತ್ರವನ್ನು “ಪ್ರತಿಕಾರದ ಬೆದರಿಕೆಯಿಂದ ನಡುಗದೆ” ನಿರ್ವಹಿಸುವ ವರೆಗೆ ಭಾರತದ ಸ್ವಾತಂತ್ರ್ಯಗಳು ಸುರಕ್ಷಿತವಾಗಿರುತ್ತವೆ ಎಂದು ಹೇಳಿರುವರಿಗೆ ಬರೆಯುತ್ತಿದ್ದೇವೆ ಎಂಬ ಪರಿಜ್ಞಾನ ನಮಗಿದೆ.
ನಿಜ ಸಂಗತಿಯೆಂದರೆ, ಇಂದು, ಭಾರತದ ಪತ್ರಕರ್ತರ ದೊಡ್ಡ ವಿಭಾಗವು ಪ್ರತೀಕಾರದ ಬೆದರಿಕೆಯ ಅಡಿಯಲ್ಲಿ ಕೆಲಸ ಮಾಡುತ್ತಿದೆ. ಮತ್ತು ನ್ಯಾಯಾಂಗವು, ನಾವೆಲ್ಲರೂ ಉತ್ತರದಾಯಿಯಾಗಿರುವ ಒಂದು ಸಂವಿಧಾನವಿದೆ ಎಂಬ ಮೂಲಭೂತ ಸತ್ಯದೊಂದಿಗೆ ಅಧಿಕಾರಸ್ಥರನ್ನು ಎದುರಿಸಬೇಕಾಗಿದೆ.
ಅಕ್ಟೋಬರ್ 3, 2023 ರಂದು, ದಿಲ್ಲಿ ಪೊಲೀಸ್ ನ ವಿಶೇಷ ಕೋಷ್ಠ ಆನ್‌ಲೈನ್ ಸುದ್ದಿತಾಣ ನ್ಯೂಸ್‌ಕ್ಲಿಕ್’ನೊಂದಿಗೆ ಒಂದಿಲ್ಲೊಂದು ರೀತಿಯಲ್ಲಿ ಸಂಪರ್ಕವಿರುವ 46 ಪತ್ರಕರ್ತರು, ಸಂಪಾದಕರು, ಬರಹಗಾರರು ಮತ್ತು ವೃತ್ತಿಪರರ ಮನೆಗಳ ಮೇಲೆ ದಾಳಿ ನಡೆಸಿತು,. ಈ ದಾಳಿಗಳಿಂದಾಗಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ( ಯು.ಎ.ಪಿ.ಎ.)ಯ ವಿವಿಧ ವಿಭಾಗಗಳ ಅಡಿಯಲ್ಲಿ ಇಬ್ಬರನ್ನು ಬಂಧಿಸಲಾಯಿತು ಮತ್ತು ಮೊಬೈಲ್ ಫೋನ್‌ಗಳು ಮತ್ತು ಕಂಪ್ಯೂಟರ್‌ಗಳನ್ನು ಜಫ್ತಿಮಾಡಿಕೊಳ್ಳಲಾಯಿತು- ಅವುಗಳಲ್ಲಿರುವ ದತ್ತಾಂಶಗಳ ರಕ್ಷಣೆಯನ್ನು ಖಾತ್ರಿಪಡಿಸಲು ಅಗತ್ಯವಾದ ವಿಧಿ-ವಿಧಾನಗಳನ್ನು ಅನುಸರಿಸದೆಯೇ ಅವನ್ನು ವಶಪಡಿಸಿಕೊಳ್ಳಲಾಗಿದೆ. ಯು.ಎ.ಪಿ.ಎ.ಯ ಆವಾಹನೆಯು ವಿಶೇಷವಾಗಿ ಮೈನಡುಗಿಸುವಂತದ್ದು. ಪತ್ರಕಾರಿತೆಯನ್ನು ‘ಭಯೋತ್ಪಾದನೆ’ ಎಂಬಂತೆ ವಿಚಾರಣೆಗೆ ಒಳಪಡಿಸಲಾಗದು. ಅದು ಅಂತಿಮವಾಗಿ ಎಲ್ಲಿಗೆ ಹೋಗುತ್ತದೆ ಎಂದು ಹೇಳಲು ಇತಿಹಾಸದಲ್ಲಿ ವಿಪುಲ ನಿದರ್ಶನಗಳಿವೆ.
ಇದನ್ನೂ ಓದಿ: ಸ್ವತಂತ್ರ ಹಾಗೂ ನಿರ್ಭೀತ ಧ್ವನಿಗಳನ್ನು ಅಡಗಿಸುವ ಪ್ರಯತ್ನ – ನ್ಯೂಸ್‌ಕ್ಲಿಕ್ ಆರೋಪ
ನೀವು ಸುಪ್ರೀಂ ಕೋರ್ಟ್‌ನಲ್ಲಿರುವ ಅವಧಿಯಲ್ಲಿ, ಹೇಗೆ ಹಲವಾರು ಸಂದರ್ಭಗಳಲ್ಲಿ, ದೇಶದ ತನಿಖಾ ಸಂಸ್ಥೆಗಳನ್ನು ಹೇಗೆ ದುರುಪಯೋಗಪಡಿಸಿಕೊಳ್ಳಲಾಗಿದೆ ಮತ್ತು ಪತ್ರಿಕಾರಂಗದ ವಿರುದ್ಧ ಅಸ್ತ್ರವಾಗಿ ಬಳಸಲಾಗಿದೆ ಎಂಬುದನ್ನು ನೋಡಿದ್ದೀರಿ. ಸಂಪಾದಕರು ಮತ್ತು ವರದಿಗಾರರ ವಿರುದ್ಧ ರಾಜದ್ರೋಹ ಮತ್ತು ಭಯೋತ್ಪಾದನೆ ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು ಒಂದಾದ ಮೇಲೆ ಇನ್ನೊಂದರಂತೆ ಹಲವಾರು, ಬಾಲಿಶವಾದ ಎಫ್‌ಐಆರ್‌ಗಳನ್ನು ಪತ್ರಕರ್ತರ ವಿರುದ್ಧ ಕಿರುಕುಳದ ಸಾಧನವಾಗಿ ಬಳಸಲಾಗಿದೆ.
ಈ ಪತ್ರವನ್ನು ನಿಮಗೆ ಬರೆಯುವ ಉದ್ದೇಶವು ಕಾನೂನಿನಿಂದ ಸ್ಥಾಪಿಸಲಾದ ಪ್ರಕ್ರಿಯೆ ಮತ್ತು ಕಾರ್ಯವಿಧಾನವನ್ನು ಬದಿಗೊತ್ತುವುದು ಅಥವಾ ತಪ್ಪಿಸಿಕೊಳ್ಳುವುದಲ್ಲ. ಆದರೆ ತನಿಖೆಯ ಹೆಸರಿನಲ್ಲಿ ಪತ್ರಕರ್ತರನ್ನು ಆದೇಶ ನೀಡಿ ಕರೆಸುವಾಗ ಮತ್ತು ಅವರ ಸಾಧನಗಳನ್ನು ಜಫ್ತಿಮಾಡಿಕೊಂಡಾಗ,
ಅಂತಹ ಪ್ರಕ್ರಿಯೆಯಲ್ಲಿ ಒಂದು ದುರುದ್ದೇಶ ಹುದುಗಿರುತ್ತದೆ, ಅದಕ್ಕೆ ತಡೆಹಾಕಬೇಕಾಗಿದೆ.
ಸಂವಿಧಾನದ ಪ್ರಕಾರ ಬಂಧನದ ಆಧಾರವನ್ನು ಹೇಳಲು ಪೊಲೀಸರು ಬಾಧ್ಯರಾಗಿರುವಂತೆಯೇ, ಅದು ಪ್ರಶ್ನೆಗಳಿಗೆ ಒಳಪಡಿಸಲು ಒಂದು ಪೂರ್ವ ಷರತ್ತೂ ಆಗಿರಬೇಕು. ಅದಿಲ್ಲದೆ, ನ್ಯೂಸ್‌ಕ್ಲಿಕ್ ಪ್ರಕರಣದಲ್ಲಿ ನಾವು ನೋಡಿದಂತೆ, ಕೆಲವು ನಿರ್ದಿಷ್ಟವಾಗಿ ಹೇಳದ ಅಪರಾಧದ ತನಿಖೆಯ ಬಗ್ಗೆ ಅಸ್ಪಷ್ಟವಾದ ಸಮರ್ಥನೆಗಳು ಪತ್ರಕರ್ತರನ್ನು ರೈತರ ಚಳವಳಿ, ಸರ್ಕಾರವು ಕೋವಿಡ್ ಸಾಂಕ್ರಾಮಿಕವನ್ನು ನಿಭಾಯಿಸಿರುವ ರೀತಿ ಮತ್ತು ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ಪ್ರತಿಭಟನೆ ಮುಂತಾದವುಗಳನ್ನು ವರದಿ ಮಾಡಿರುವ ಬಗ್ಗೆ ಪ್ರಶ್ನಿಸಲು ಆಧಾರವಾಗಿ ಮಾರ್ಪಟ್ಟಿವೆ.
ಪತ್ರಕರ್ತರು ಕಾನೂನನ್ನು ಮೀರಿದವರು ಎಂದು ನಾವು ಹೇಳುವುದಿಲ್ಲ. ನಾವು ಕಾನೂನನ್ನು ಮೀರಿ ಇಲ್ಲ ಮತ್ತು ಇರಲು ಬಯಸುವುದಿಲ್ಲ. ಆದಾಗ್ಯೂ, ಮಾಧ್ಯಮಗಳನ್ನು ಬೆದರಿಸುವುದು ಸಮಾಜದ ಪ್ರಜಾಸತ್ತಾತ್ಮಕ ಸಂರಚನೆಯನ್ನು ಬಾಧಿಸುತ್ತದೆ. ಮತ್ತು ಪತ್ರಕರ್ತರನ್ನು, ಅವರ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವ್ಯವಹಾರಗಳನ್ನು ಕುರಿತ ವರದಿಗಳನ್ನು ಸರಕಾರವು ಒಪ್ಪುವುದಿಲ್ಲ ಎಂಬ ಕಾರಣಕ್ಕೆ ಕ್ರಿಮಿನಲ್ ಪ್ರಕ್ರಿಯೆಗೆ ಗುರಿಪಡಿಸುವುದು, ಪತ್ರಿಕಾರಂಗವನ್ನು ಪ್ರತೀಕಾರದ ಬೆದರಿಕೆಯ ನಡುಗಿಸುವ ಪ್ರಯತ್ನವಾಗುತ್ತದೆ – ಇದು ನೀವು ಸ್ವಾತಂತ್ರ್ಯಕ್ಕೆ ಬೆದರಿಕೆ ಎಂದು ಗುರುತಿಸಿರುವ ಅಂಶವೇ ಆಗಿದೆ.
ಪ್ರಭುತ್ವದ ಏಜೆನ್ಸಿಗಳು ಸದ್ಭಾವನೆಯಿಂದ ಕೂಡಿರುತ್ತವೆ ಎಂದು ಭಾವಿಸಿಕೊಂಡು ಅವಕ್ಕೆ ತನಿಖೆಯ ವ್ಯಾಪಕ ಅಧಿಕಾರಗಳನ್ನು ನೀಡಲಾಗಿದೆ. ಅದೇ ರೀತಿಯಲ್ಲಿ, ಬಲವಂತದ ವಿರುದ್ಧ ವ್ಯಾಪಕವಾದ ನಿರೋಧಕಗಳನ್ನೂ ವಾಕ್ ಸ್ವಾತಂತ್ರ್ಯದ ಸಾಂವಿಧಾನಿಕ ನಿಬಂಧನೆಗಳು ಒಳಗೊಂಡಿರಬೇಕು ಮತ್ತು
ವಿಶೇಷವಾಗಿ ಈ ಅಧಿಕಾರಗಳ ದುರುಪಯೋಗ ಮತ್ತೆ-ಮತ್ತೆ ನಡೆಯುತ್ತಿರುವಾಗ ಪೋಲೀಸ್ ಪಡೆ ಮಿತಿಗಳನ್ನು ಮೀರುವ ವಿರುದ್ಧ ವಿಧಾನಗಳನ್ನು ರೂಪಿಸಬೇಕು. ವರ್ಷಾನುಗಟ್ಟಲೆ ನಡೆಯುವ ಒಂದು ವಿಚಾರಣೆಯ ಕೊನೆಯಲ್ಲಿ ಪ್ರತಿ ಪ್ರಕರಣದಲ್ಲೂ ಬಹಳಷ್ಟು ಪಣಕ್ಕೊಡ್ಡಲ್ಪಟ್ಟಿರುತ್ತದೆ.
ಯುಎಪಿಎ ಅಡಿಯಲ್ಲಿ ಬಂಧಿತರಾದ ಪತ್ರಕರ್ತರಿಗೆ ಜಾಮೀನು ಕೊಡುವ ಮುನ್ನವೂ ಕೂಡ ವರ್ಷಾನುಗಟ್ಟಲೆಯಲ್ಲದಿದ್ದರೂ, ತಿಂಗಳುಗಟ್ಟಲೆ, ಅವರು ಕಂಬಿಗಳ ಹಿಂದೆಯೇ ಕಳೆಯಬೇಕಾಗುತ್ತದೆ. ಈಗಾಗಲೇ ಸಿದ್ದಿಕ್ ಕಪ್ಪನ್ ಪ್ರಕರಣ ನಮ್ಮ ಮುಂದಿದೆ; ಅಂತಿಮವಾಗಿ ಜಾಮೀನು ಪಡೆಯುವ ಮೊದಲು ಅವರನ್ನು ಎರಡು ವರ್ಷ ಮತ್ತು ನಾಲ್ಕು ತಿಂಗಳ ಕಾಲ ಸೆರೆವಾಸದಲ್ಲಿಡಲಾಯಿತು. ಕಸ್ಟಡಿಯಲ್ಲಿದ್ದ ಫಾದರ್ ಸ್ಟಾನ್ ಸ್ವಾಮಿಯ ದುರಂತ ಸಾವು ‘ಭಯೋತ್ಪಾದನೆ’ಯನ್ನು ಎದುರಿಸುವ ನೆಪದಲ್ಲಿ ಅಧಿಕಾರಿಗಳು ಮಾನವ ಜೀವನದ ಬಗ್ಗೆ ಎಷ್ಟು ಅಸಡ್ಡೆ ತೋರುತ್ತಿದ್ದಾರೆ ಎಂಬುದನ್ನು ನೆನಪಿಸುತ್ತದೆ.
ನಮ್ಮ ಭಯವೆಂದರೆ, ಮಾಧ್ಯಮಗಳ ವಿರುದ್ಧ ಪ್ರಭುತ್ವದ ಕ್ರಮಗಳನ್ನು ಅಳತೆ ಮೀರಿದ ಮಟ್ಟಕ್ಕೆ ಒಯ್ಯಲಾಗಿದೆ ಎಂಬುದು, ಮತ್ತು ಅವರು ಸಾಗುತ್ತಿರುವ ದಿಕ್ಕಿನಲ್ಲಿ ಮುಂದುವರಿಯಲು ಬಿಟ್ಟರೆ, ಸರಿಪಡಿಸುವ ಅಥವಾ ಪರಿಹಾರದ ಕ್ರಮಗಳಿಗೆ ಬಹಳ ತಡಮಾಡಿದಂತಾಗುತ್ತದೆ. ಆದ್ದರಿಂದ, ಮಾಧ್ಯಮಗಳ ವಿರುದ್ಧ ತನಿಖಾ ಸಂಸ್ಥೆಗಳ ಹೆಚ್ಚುತ್ತಿರುವ ದಮನಕಾರಿ ಬಳಕೆಯನ್ನು ಕೊನೆಗೊಳಿಸಲು ಉನ್ನತ ನ್ಯಾಯಾಂಗವು ಈಗ ಮಧ್ಯಪ್ರವೇಶಿಸಬೇಕು ಎಂಬುದು ನಮ್ಮ ಸಾಮೂಹಿಕ ಅಭಿಪ್ರಾಯವಾಗಿದೆ.
ನಿರ್ದಿಷ್ಟವಾಗಿ, ನ್ಯಾಯಾಲಯಗಳು ಈ ಕೆಳಗಿನ ಅಂಶಗಳನ್ನು ಪರಿಗಣಿಸಬೇಕೆಂದು ಕೋರುತ್ತೇವೆ:
1. ಪತ್ರಕರ್ತರ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ಜಫ್ತಿಮಾಡುವ ಚಾಳಿಯನ್ನು ನಿರುತ್ಸಾಹಗೊಳಿಸಲು ನಿಯಮಾವಳಿಗಳನ್ನು ರೂಪಿಸಬೇಕು. ಖ್ಯಾತ ಶಿಕ್ಷಣತಜ್ಞರು ಸಲ್ಲಿಸಿದ ರಿಟ್ ಅರ್ಜಿ – ರಾಮ್ ರಾಮಸ್ವಾಮಿ ಮತ್ತು ಇತರರು ವರ್ಸಸ್ ಭಾರತ ಒಕ್ಕೂಟ W.P. (Crl) ಸಂ. 138/2021- ಸುಪ್ರಿಂಕೋರ್ಟಿನ ಪರಿಶೀಲನೆಯಲ್ಲಿದೆ, ಇದರಲ್ಲಿ ಭಾರತ ಸರಕಾರ ಸಲ್ಲಿಸಿದ ಅಫಿಡವಿಟ್‌ಗಳಿಂದ ಅದು ತೃಪ್ತವಾಗಿಲ್ಲ. ನ್ಯಾಯದ ಚಕ್ರತಿರುಗುತ್ತಿರುವಾಗಲೇ, ಪ್ರಭುತ್ವವು
ನಿರ್ಭಿಡೆಯಿಂದ ವರ್ತಿಸುತ್ತಲೇ ಇದೆ. ಸಾಧನಗಳನ್ನು ಜಫ್ತಿ ಮಾಡಿಕೊಳ್ಳುವುದು ನಮ್ಮ ವೃತ್ತಿಪರ ಕೆಲಸಕ್ಕೆ ಅಡ್ಡಿಯುಂಟು ಮಾಡುತ್ತದೆ. ಸುಪ್ರೀಂ ಕೋರ್ಟ್ ಸ್ವತಃ ಗಮನಿಸಿದಂತೆ (ಪೆಗಾಸಸ್ ವಿಷಯದಲ್ಲಿ), ಮೂಲಗಳ ರಕ್ಷಣೆಯು ಮಾಧ್ಯಮದ ಸ್ವಾತಂತ್ರ್ಯದ “ಪ್ರಮುಖ ಮತ್ತು ಅಗತ್ಯ ಅನುವರ್ತಿ” ಆಗಿದೆ. ಆದರೆ ಲ್ಯಾಪ್‌ಟಾಪ್‌ಗಳು ಮತ್ತು ಫೋನ್‌ಗಳು ಈಗ ಅಧಿಕೃತ ವ್ಯವಹಾರ ನಡೆಸಲು ಬಳಸುವ ಅಧಿಕೃತ ಸಾಧನಗಳಷ್ಟೇ ಆಗಿ ಉಳಿದಿಲ್ಲ. ಅವು ಮೂಲಭೂತವಾಗಿ ವ್ಯಕ್ತಿಯ ವಿಸ್ತರಣೆಯೇ ಆಗಿಬಿಟ್ಟಿವೆ. ಈ ಸಾಧನಗಳು ನಮ್ಮ ಜೀವನದಲ್ಲಿ ಸಂಪೂರ್ಣವಾಗಿ ಸಮಗ್ರೀಕರಣಗೊಂಡಿವೆ ಮತ್ತು ಅವು ಸಂವಹನದಿಂದ ಹಿಡಿದು ಛಾಯಾಚಿತ್ರಗಳವರೆಗೆ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಭಾಷಣೆಗಳ ವರೆಗೆ ಮುಖ್ಯ ವೈಯಕ್ತಿಕ ಮಾಹಿತಿಯನ್ನು ಹೊಂದಿರುತ್ತವೆ. ಇಂತಹ ಸಂಗತಿಗಳೆಲ್ಲ ತನಿಖಾ ಸಂಸ್ಥೆಗಳಿಗೆ ಲಭ್ಯವಾಗಬೇಕು ಎಂಬುದಕ್ಕೆ ಯಾವುದೇ ಕಾರಣ ಅಥವಾ ಸಮರ್ಥನೆ ಇಲ್ಲ.
ಇದನ್ನೂ ಓದಿ: ‘ನ್ಯೂಸ್‌ಕ್ಲಿಕ್’ ಪತ್ರಕರ್ತರ ನಿವಾಸಗಳ ಮೇಲೆ ದಿಲ್ಲಿ ಪೊಲಿಸ್ ದಾಳಿ:ಸಿಪಿಐ(ಎಂ) ಪೊಲಿಟ್ ಬ್ಯುರೊ ಖಂಡನೆ
2. ಪತ್ರಕರ್ತರ ವಿಚಾರಣೆಗೆ ಮತ್ತು ಜಫ್ತಿಗೆ, ಇವುಗಳು ನಿಜವಾದ ಅಪರಾಧಕ್ಕೆ ಯಾವುದೇ ಸಂಬಂಧವಿಲ್ಲದಂತೆ ಗಾಳಹಾಕುವ ಅಭಿಯಾನಗಳಾಗದಂತೆ ಖಚಿತಪಡಿಸಲು ಮಾರ್ಗಸೂಚಿಗಳನ್ನು ವಿಕಾಸಗೊಳಿಸಬೇಕು.
3. ಪತ್ರಕರ್ತರ ಪತ್ರಕಾರಿತೆಯ ಕೆಲಸಗಳ ವಿರುದ್ಧ ತನಿಖೆಗಳಲ್ಲಿ ಪ್ರಭುತ್ವದ ಏಜೆನ್ಸಿಗಳು ಮತ್ತು ವೈಯಕ್ತಿಕವಾಗಿ ಅಧಿಕಾರಿಗಳು ಕಾನೂನನ್ನು ಮೀರಿ ಹೋಗುತ್ತಿದ್ದಾರೆ ಅಥವಾ ಅಸ್ಪಷ್ಟ ಮತ್ತು ಹೇಗೆ ಬೇಕಾದರೂ ವ್ಯಾಖ್ಯಾನ ಮಾಡಬಹುದಾದ ತನಿಖೆಗಳ ಮೂಲಕ ಉದ್ದೇಶಪೂರ್ವಕವಾಗಿ ನ್ಯಾಯಾಲಯಗಳನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಕಂಡು ಬಂದಾಗ ಅವರನ್ನು ಉತ್ತರದಾಯಿಯಾಗಿ ಮಾಡಲು ಮಾರ್ಗಗಳನ್ನು ಕಂಡುಕೊಳ್ಳಬೇಕು.
ನಾವು, ಕೆಳಗೆ ಸಹಿ ಮಾಡಿದವರು, ಸಾಕಷ್ಟು ಚಿಂತನೆ ಮತ್ತು ಯೋಚನೆಯ ನಂತರವೇ ತಮ್ಮ ಸನ್ನಿಧಾನಕ್ಕೆ ಈ ಪತ್ರವನ್ನು ಬರೆಯುತ್ತಿದ್ದೇವೆ.
ಕಳೆದ ಕೆಲವು ವರ್ಷಗಳಲ್ಲಿ ಪ್ರಭುತ್ವದಿಂದ ಮುಕ್ತ ಪತ್ರಿಕಾ ಮಾಧ್ಯಮದ ಮೇಲೆ ದಾಳಿಗಳು ನಡೆದಾಗ ನ್ಯಾಯಾಂಗ ಮಧ್ಯಪ್ರವೇಶ ಅಗತ್ಯವಾದ ಹಲವು ಪ್ರಕರಣಗಳು ಸಂಭವಿಸಿವೆ, ಮತ್ತು ನಾವು ಅಂತಹ ಪ್ರಕರಣಗಳ ಬಗ್ಗೆ ಕೇಳುವುದನ್ನು ಮುಂದುವರೆಸುತ್ತೇವೆ. ಆದರೆ ಕಳೆದ 24 ಗಂಟೆಗಳಲ್ಲಿನ ಬೆಳವಣಿಗೆಗಳಿಂದಾಗಿ, ಇವನ್ನು ಪರಿಗಣೆನೆಗೆ ತಗೊಂಡು ಮಧ್ಯಪ್ರವೇಶಿಸಬೇಕೆಂದು, ಇಲ್ಲವಾದರೆ ಬಹಳ ತಡವಾಗಿ ಬಿಟ್ಟು ನಿರಂಕುಶಾಧಿಕಾರದ ಪೋಲೀಸ್ ಪ್ರಭುತ್ವ ಸಾಮಾನ್ಯ ಸಂಗತಿಯಾಗಿ ಬಿಡಬಹುದಾದ್ದರಿಂದ, ತಮ್ಮ ಆತ್ಮಸಾಕ್ಷಿಗೆ ಮನವಿ ಮಾಡುವುದನ್ನು ಬಿಟ್ಟು ನಮ್ಮ ಮುಂದೆ ಅನ್ಯಮಾರ್ಗವಿಲ್ಲದಂತಾಗಿದೆ.
ಪತ್ರಕರ್ತರು ಮತ್ತು ಸುದ್ದಿ ತಲುಪಿಸುವ ವೃತ್ತಿಯವರಾಗಿ, ನಾವು ಯಾವುದೇ ಪ್ರಾಮಾಣಿಕ ತನಿಖೆಗೆ ಮತ್ತು ಅದರೊಂದಿಗೆ ಸಹಕರಿಸಲು ಸದಾ ಸಿದ್ಧರಿದ್ದೇವೆ. ಆದರೆ ತಾತ್ಪೂರ್ತಿಕ, ಬೇಕಾಬಿಟ್ಟಿ ಜಫ್ತಿಗಳನ್ನು ಮತ್ತು ವಿಚಾರಣೆಗಳನ್ನು ಖಂಡಿತವಾಗಿಯೂ ತಾನು ʼಪ್ರಜಾಪ್ರಭುತ್ವದ ತಾಯಿʼಎಂಬ ಪ್ರಚಾರವನ್ನು ಆರಂಭಿಸಿರುವ ದೇಶದಲ್ಲೇನು, ಯಾವುದೇ ಪ್ರಜಾಸತ್ತಾತ್ಮಕ ದೇಶದಲ್ಲಿಯೂ ಸ್ವೀಕಾರಾರ್ಹವೆಂದು ಪರಿಗಣಿಸಲು ಸಾಧ್ಯವಿಲ್ಲ.”
ವಿಡಿಯೋ ನೋಡಿ: “ಬಿಜೆಪಿ ತೊಲಗಿಸಿ, ಮಹಿಳೆಯರನ್ನು ರಕ್ಷಿಸಿ, ದೇಶ ಉಳಿಸಿ”ಅಕ್ಟೋಬರ್ 5ರಂದು ಮಹಿಳೆಯರ ‘ಮಹಾ ಧರಣಿ’ Janashakthi Media