ಬಾಂಗ್ಲಾ ಕರಾವಳಿಗೆ ಅಪ್ಪಳಿಸಿದ ಸಿತ್ರಾಂಗ್ ಚಂಡಮಾರುತ: 16 ಮಂದಿ ಸಾವು, ಲಕ್ಷಗಟ್ಟಲೆ ಜನರ ಸ್ಥಳಾಂತರ

ಕೋಲ್ಕತ್ತಾ: ಬಾಂಗ್ಲಾದೇಶದ ಕರಾವಳಿಗೆ ‘ಸಿತ್ರಾಂಗ್‌’ ಚಂಡಮಾರುತ ಅಪ್ಪಳಿಸಿದ್ದು, ಗಂಟೆಗೆ 110 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ. ನೆನ್ನೆಯಿಂದ ಕೋಲ್ಕತಾ ಸೇರಿ ಹಲವು ಜಿಲ್ಲೆಗಳಲ್ಲಿ ಮಳೆ ಶುರುವಾಗಿದ್ದು, ದಕ್ಷಿಣ ಬಂಗಾಳದ ಹಲವು ಕಡೆ ಭಾರೀ ಮಳೆ ಮುನ್ಸೂಚನೆ ಎದುರಾಗಿದೆ. ಈ ಹಿನ್ನೆಲೆ ಅಪಾಯ ವಲಯದಲ್ಲಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.

ಬಾಂಗ್ಲಾದೇಶಕ್ಕೆ ಅಪ್ಪಳಿಸಿದ ಚಂಡಮಾರುತದ ಹೊಡೆತದಿಂದಾಗಿ  ಕನಿಷ್ಠ 16 ಮಂದಿ ಸಾವಿಗೀಡಾಗಿದ್ದು, ಸುಮಾರು ಒಂದು ಮಿಲಿಯನ್ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ವರದಿ ಮಾಡಿದ್ದಾರೆ. ಕರಾವಳಿ ಭಾಗದ 15 ಜಿಲ್ಲೆಗಳಲ್ಲಿ ಸುಮಾರು 10 ಮಿಲಿಯನ್ ಜನರು ವಿದ್ಯುತ್ ಇಲ್ಲದೆ ಪರದಾಡುತ್ತಿದ್ದು, ದಕ್ಷಿಣ ಮತ್ತು ನೈಋತ್ಯ ಪ್ರದೇಶಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ.

ಚಂಡಮಾರುತವು ಈಗ ಸಾಗರ ದ್ವೀಪದ ದಕ್ಷಿಣದಿಂದ 430 ಕಿ.ಮೀ. ದೂರದಲ್ಲಿದೆ. ಚಂಡಮಾರುತ ಪ್ರಭಾವ ಭಾರೀ ಪ್ರಮಾಣದಲ್ಲಿ ವ್ಯಾಪಿಸಿದ್ದು, ಗಂಟೆಗೆ 90 ರಿಂದ 110 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಲಿದೆ. ಪಶ್ಚಿಮ ಬಂಗಾಳ ರಾಜ್ಯದ ದಕ್ಷಿಣ 24 ಪರಗಣ, ಉತ್ತರ 24 ಪರಗಣ ಹಾಗೂ ಪೂರ್ವ ಮಿಡ್ನಾಪುರದ ಮೇಲೆ ಪ್ರಭಾವ ಬೀರಲಿದೆ ಹಾಗೂ ಭಾರೀ ಮಳೆ ಬೀಳಲಿದೆ. ಸುಂದರಬನದ ಮೇಲೂ ಪರಿಣಾಮ ಬೀರಲಿದೆ. ಸಮುದ್ರ ತೀರದ ಭಾರಿ ಅಲೆಗಳು ತೀರದ ಮನೆಗಳಿಗೆ ಹಾನಿ ಉಂಟು ಮಾಡಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ದಕ್ಷಿಣ ಬಾಂಗ್ಲಾದೇಶದಲ್ಲಿ ತಡರಾತ್ರಿ ಭೂಕುಸಿತ ಉಂಟಾಗಿದೆ. ಮುಂಜಾಗ್ರತಾ ಕ್ರಮವಾಗಿ ಆ ಪ್ರದೇಶದಲ್ಲಿನ ಸುಮಾರು 1 ಮಿಲಿಯನ್ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಬಾಂಗ್ಲಾದೇಶದ ಸರ್ಕಾರಿ ಅಧಿಕಾರಿ ಜೆಬುನ್ ನಹರ್ ಮಾತನಾಡಿ, 14 ಜನರು ಮೃತಪಟ್ಟಿದ್ದಾರೆ. ಈ ಪೈಕಿ ಹೆಚ್ಚಿನ ಜನರು ಮರಗಳು ಬಿದ್ದು ಮತ್ತು ಉತ್ತರದಲ್ಲಿ ಜಮುನಾ ನದಿಯಲ್ಲಿ ದೋಣಿ ಮುಳುಗಿ ಇಬ್ಬರು ಸಾವಿಗೀಡಾಗಿದ್ದಾರೆ. ಸದ್ಯ ಹಾನಿಯ ವರದಿ ಲಭ್ಯವಾಗಿಲ್ಲ ಎಂದು ವರದಿಯಾಗಿದೆ.

ದ್ವೀಪಗಳು ಮತ್ತು ನದಿ ತಟದಂತಹ ತಗ್ಗು ಪ್ರದೇಶಗಳಿಂದ ಸಾವಿರಾರು ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಜನರು ರಾತ್ರಿಯಿಡೀ ಪರಿಹಾರ ಕೇಂದ್ರಗಳಲ್ಲಿದ್ದರು ಮತ್ತು ಇಂದು ಬೆಳಗ್ಗೆ ಅನೇಕರು ತಮ್ಮ ಮನೆಗಳಿಗೆ ಹಿಂತಿರುಗುತ್ತಿದ್ದಾರೆ ಎಂದು ವಿಪತ್ತು ನಿರ್ವಹಣಾ ಸಚಿವಾಲಯದ ಕಾರ್ಯದರ್ಶಿ ಕಮರುಲ್ ಅಹ್ಸಾನ್ ತಿಳಿಸಿದ್ದಾರೆ.

ಕೆಲವು ಸಂದರ್ಭಗಳಲ್ಲಿ ತಮ್ಮ ಮನೆಗಳನ್ನು ತ್ಯಜಿಸಲು ಒಪ್ಪದ ಗ್ರಾಮಸ್ಥರನ್ನು ಬಲವಂತದಿಂದ ಸ್ಥಳಾಂತರಿಸಬೇಕಾಯಿತು. ಚಂಡಮಾರುತದ ಕೇಂದ್ರಬಿಂದುವಿನಿಂದ ನೂರಾರು ಕಿಮೀ ದೂರದಲ್ಲಿರುವ ರಾಜಧಾನಿ ಢಾಕಾದವರೆಗೆ ಮರಗಳು ಉರುಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಂಗ್ಲಾದೇಶದ ಪ್ರವಾಹ ಪೀಡಿತ ಪ್ರದೇಶಗಳಾದ ಢಾಕಾ, ಖುಲ್ನಾ ಮತ್ತು ಬಾರಿಸಾಲ್‌ನಂತಹ ನಗರಗಳಲ್ಲಿ 324 ಮಿಲಿಮೀಟರ್‌ಗಳಷ್ಟು ಮಳೆ ಸುರಿದಿದೆ. ಮ್ಯಾನ್ಮಾರ್‌ ನ ಸುಮಾರು 33,000 ರೋಹಿಂಗ್ಯಾ ನಿರಾಶ್ರಿತರು, ಬಂಗಾಳ ಕೊಲ್ಲಿಯ ಚಂಡಮಾರುತ ಪೀಡಿತ ದ್ವೀಪಕ್ಕೆ ಸ್ಥಳಾಂತರಗೊಂಡಿದ್ದಾರೆ. ಅವರು ಮನೆಯೊಳಗೆ ಇರುವಂತೆ ಆದೇಶಿಸಲಾಗಿದೆ. ಸದ್ಯ ಯಾವುದೇ ಸಾವುನೋವು ಅಥವಾ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಟ್ಲಾಂಟಿಕ್‌ನಲ್ಲಿನ ಚಂಡಮಾರುತಗಳು ಅಥವಾ ಪೆಸಿಫಿಕ್‌ನಲ್ಲಿ ಟೈಫೂನ್‌ಗಳಿಂದಾಗುವ ಚಂಡಮಾರುತ ಸಾಮಾನ್ಯ. ಆದರೆ, ಹವಾಮಾನ ಬದಲಾವಣೆಯು ಅವುಗಳನ್ನು ಹೆಚ್ಚು ತೀವ್ರವಾಗಿ ಮತ್ತು ಆಗಾಗ್ಗೆ ಉಂಟುಮಾಡುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

Donate Janashakthi Media

Leave a Reply

Your email address will not be published. Required fields are marked *