ಬೆಂಗಳೂರಿನಾದ್ಯಂತ ನಡೆಯುತ್ತಿವೆ ಗೇಟ್ ಸಭೆಗಳು ಮತ್ತು ಬೀದಿ ಪ್ರಚಾರಗಳು
ಮಾಹಿತಿ ತಂತ್ರಜ್ಞಾನ (ಐಟಿ) ಉದ್ಯಮಗಳಲ್ಲಿ ದಿನದ ಕೆಲಸದ ಅವಧಿಯನ್ನು 14 ಗಂಟೆಗೆ ಹೆಚ್ಚಿಸುವ ಮಸೂದೆ ತರಲು ಕರ್ನಾಟಕ ರಾಜ್ಯ ಸರ್ಕಾರ ಮುಂದಾಗಿದೆ. ಸರ್ಕಾರದ ಈ ನಡೆ ಐಟಿ ಉದ್ಯೋಗಿಗಳನ್ನು ಕೆರಳಿಸಿದೆ. ಇದು ಈ ಯುಗದಲ್ಲಿ ಕಾರ್ಮಿಕ ವರ್ಗದ ಮೇಲೆ ಇದುವರೆಗಿನ ಅತಿದೊಡ್ಡ ದಾಳಿ ಎಂದಿರುವ ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘ (ಕೆಐಟಿಯು) ಇಂತಹ ಕ್ರಮವನ್ನು ತೀವ್ರವಾಗಿ ಖಂಡಿಸಿದೆ. ದಿನದಲ್ಲಿ 14 ಗಂಟೆಗಳ ಕೆಲಸ ಉದ್ಯೋಗಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಮಾತ್ರವಲ್ಲ, ಈ ವಲಯದಲ್ಲಿನ ಈಗಿನ ಬಹಳಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂದು ನೌಕರರ ಸಂಘ ಆರೋಪಿಸಿದೆ. ಸರ್ಕಾರದ ಈ ಕ್ರಮದ ವಿರುದ್ಧ ಐಟಿ ವಲಯದ ಉದ್ಯೋಗಿಗಳು ಐಕ್ಯ ಹೋರಾಟಕ್ಕೆ ಸಿದ್ಧರಾಗಿದ್ದಾರೆ. ಕೆಐಟಿಯು ಬ್ಯಾನರ್ ಅಡಿಯಲ್ಲಿ ಬೆಂಗಳೂರಿನಾದ್ಯಂತ ಗೇಟ್ ಸಭೆಗಳು ಮತ್ತು ಬೀದಿ ಪ್ರಚಾರಗಳು ನಡೆಯುತ್ತಿವೆ.
ಮಾಹಿತಿ ತಂತ್ರಜ್ಞಾನ (ಐಟಿ) ಉದ್ಯಮಗಳಲ್ಲಿ ದಿನದ ಕೆಲಸದ ಅವಧಿಯನ್ನು 14 ಗಂಟೆಗೆ ಹೆಚ್ಚಿಸಲು ಕರ್ನಾಟಕ ರಾಜ್ಯ ಸರ್ಕಾರ ಮುಂದಾಗಿದೆ. ಇದುವರೆಗೂ ಅಸ್ತಿತ್ವದಲ್ಲಿರುವ ಕಾಯಿದೆಯು ಓವರ್ ಟೈಮ್ ಸೇರಿದಂತೆ ದಿನಕ್ಕೆ ಗರಿಷ್ಠ 10 ಗಂಟೆಗಳ ಕೆಲಸವನ್ನು ಮಾತ್ರ ಅನುಮತಿಸುತ್ತದೆ. ಆದರೆ, ಈ ಅವಧಿಯನ್ನು 14 ಗಂಟೆಗಳಿಗೆ ಹೆಚ್ಚಿಸಲು ರಾಜ್ಯ ಸರ್ಕಾರ ಕಾಯಿದೆಗೆ ತಿದ್ದುಪಡಿ ತರುವ ಪ್ರಯತ್ನ ಮಾಡುತ್ತಿದೆ. ಪ್ರಸ್ತಾವಿತ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ, 2024 ರ ಮೂಲಕ, 14 ಗಂಟೆಗಳ ಕೆಲಸದ ದಿನವನ್ನು ತರಲು ಕರ್ನಾಟಕ ರಾಜ್ಯ ಸರ್ಕಾರ ಪ್ರಯತ್ನಿಸುತ್ತದೆ. ಇದು ಈ ಯುಗದಲ್ಲಿ ಕಾರ್ಮಿಕ ವರ್ಗದ ಮೇಲೆ ಇದುವರೆಗಿನ ಅತಿದೊಡ್ಡ ದಾಳಿ ಎಂದಿರುವ ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘ (ಕೆಐಟಿಯು) ಇಂತಹ ಕ್ರಮವನ್ನು ತೀವ್ರವಾಗಿ ಖಂಡಿಸಿದೆ.
ಜುಲೈ 20 ರಂದು ಕಾರ್ಮಿಕ ಇಲಾಖೆಯು ಉದ್ಯಮದ ವಿವಿಧ ಪಾಲುದಾರರೊಂದಿಗೆ ಕರೆದ ಸಭೆಯಲ್ಲಿ 14 ಗಂಟೆಗಳ ಕೆಲಸದ ದಿನಕ್ಕೆ ಅನುಕೂಲವಾಗುವಂತೆ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆ ಕಾಯ್ದೆಗೆ ತಿದ್ದುಪಡಿ ಮಾಡುವ ಪ್ರಸ್ತಾಪವನ್ನು ಮಂಡಿಸಲಾಗಿದೆ. ಕಾರ್ಮಿಕ ಸಚಿವ ಶ್ರೀ ಸಂತೋಷ್ ಎಸ್ ಲಾಡ್, ಕಾರ್ಮಿಕ ಇಲಾಖೆ ಮತ್ತು ಐಟಿ-ಬಿಟಿ ಸಚಿವಾಲಯದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಐಟಿ/ಐಟಿಇಎಸ್ ವಲಯದ ಉದ್ಯೋಗಿಗಳನ್ನು ಪ್ರತಿನಿಧಿಸಿ, ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಸುಹಾಸ್ ಅಡಿಗ, ಅಧ್ಯಕ್ಷ ವಿಜೆಕೆ ಮತ್ತು ಕಾರ್ಯದರ್ಶಿ ಸೂರಜ್ ನಿಡಿಯಂಗ ಸಭೆಯಲ್ಲಿ ಭಾಗವಹಿಸಿದ್ದರು. KITU ಪ್ರತಿನಿಧಿಗಳು ಪ್ರಸ್ತಾವಿತ ತಿದ್ದುಪಡಿಗೆ ಬಲವಾದ ವಿರೋಧ ವ್ಯಕ್ತಪಡಿಸುತ್ತ ‘ಇದು ಯಾವುದೇ ಕಾರ್ಮಿಕರ ವೈಯಕ್ತಿಕ ಜೀವನವನ್ನು ಹೊಂದುವ ಮೂಲಭೂತ ಹಕ್ಕಿನ ಮೇಲೆ ಆಕ್ರಮಣವನ್ನು ಉಂಟುಮಾಡುತ್ತದೆ’ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಮಿಕ ಸಚಿವರು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಇನ್ನೊಂದು ಸುತ್ತಿನ ಚರ್ಚೆ ನಡೆಸುವುದಾಗಿ ಒಪ್ಪಿಕೊಂಡರು.
ಉದ್ಯಮಿಗಳ ಒತ್ತಡಕ್ಕೆ ಮಣಿದ ಸರ್ಕಾರ :
ಐಟಿ/ಐಟಿಇಎಸ್/ಬಿಪಿಒ ವಲಯದಲ್ಲಿ ಕೆಲಸದ ಸಮಯವನ್ನು ದಿನದ 14 ಗಂಟೆಗಳಿಗೆ ಹೆಚ್ಚಿಸುವ ಕರ್ನಾಟಕ ಸರ್ಕಾರದ ಕ್ರಮದ ವಿರುದ್ಧ ಇಡೀ ಕಾರ್ಮಿಕ ವರ್ಗ ಪ್ರತಿರೋಧಕ್ಕೆ ಬರಬೇಕೆಂದು ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘ (ಕೆಐಟಿಯು) ಕರೆ ನೀಡಿದೆ.
ಮಸೂದೆ ಕುರಿತು ಮಾತನಾಡಿದ ಕರ್ನಾಟಕ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು, “ಮಾಹಿತಿ ತಂತ್ರಜ್ಞಾನ ವಲಯದ ಉದ್ಯೋಗಿಗಳ ಕೆಲಸದ ಸಮಯವನ್ನು ವಿಸ್ತರಿಸುವ ಪ್ರಸ್ತಾವನೆಯು ಐಟಿ ಕಂಪನಿಗಳ ಮುಖ್ಯಸ್ಥರಿಂದ ಬಂದಿದೆಯೇ ಹೊರತು ಸರ್ಕಾರದಿಂದಲ್ಲ. ಉದ್ಯಮವು ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ ಮತ್ತು ಅದರ ಬಗ್ಗೆ ಚರ್ಚೆ ನಡೆಸಲು ವೇದಿಕೆಯನ್ನು ಸುಗಮಗೊಳಿಸಿದೆ” ಎಂದು ಹೇಳುತ್ತಾರೆ. ಐಟಿ ಕಂಪನಿಗಳ ಒತ್ತಡಕ್ಕೆ ಸರ್ಕಾರ ಮಣಿಯುತ್ತಿದೆ ಎಂಬುದನ್ನು ಸಚಿವರ ಈ ಹೇಳಿಕೆ ಸ್ಪಷ್ಟಪಡಿಸುತ್ತದೆ. ಉದ್ಯೋಗಿಗಳ ಆರೋಗ್ಯದ ಬಗ್ಗೆಯಾಗಲೀ ಅಥವಾ ಈ ನಿಯಮ ಜಾರಿಯಾದರೆ ಬಹಳಷ್ಟು ಉದ್ಯೋಗಿಗಳು ತಮ್ಮ ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗುತ್ತಾರೆ ಎಂಬ ಕಾಳಜಿಯಾಗಲೀ ಕಾಂಗ್ರೆಸ್ ಸರ್ಕಾರಕ್ಕಿಲ್ಲ, ಬದಲಿಗೆ ಉದ್ಯಮಿಗಳ ಲಾಭದ ದುರಾಸೆಯ ಪರವಾಗಿ ಸರ್ಕಾರವೂ ನಿಂತಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ವಾರದಲ್ಲಿ 70 ಗಂಟೆ ಕೆಲಸ ? ;
ವಾರದ 70 ಗಂಟೆಗಳ ಅಗತ್ಯತೆಯ ಕುರಿತು ಇನ್ಫೋಸಿಸ್ ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ ಅವರು ಕಳೆದ ವರ್ಷ ಹೇಳಿಕೆ ನೀಡಿದ್ದರು. ಇತ್ತೀಚೆಗಷ್ಟೇ ಒಲಾ ಸಿಇಒ ಭವಿಶ್ ಅಗರ್ವಾಲ್ ಅವರು ‘ಮುಂದುವರಿದ ಆರ್ಥಿಕತೆಗಳೊಂದಿಗೆ ಸ್ಪರ್ಧಿಸಲು ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ಓಲಾ ಭವಿಶ್ ಅಗರ್ವಾಲ್ ಅವರನ್ನು ಹೊರತುಪಡಿಸಿ, ಪ್ರಪಂಚದಾದ್ಯಂತದ ವ್ಯಾಪಾರ ಮತ್ತು ಕೈಗಾರಿಕೋದ್ಯಮಿಗಳು ಹೆಚ್ಚಿನ ಕೆಲಸದ ಸಮಯಕ್ಕಾಗಿ ಬೆಂಬಲಿಸುತ್ತಿದ್ದಾರೆ. ಚೆನ್ನಾಗಿ ತಿನ್ನಿ, ಬಲಿಷ್ಟವಾಗಿರಿ. ಅಲ್ಲದೆ, ದಿನಕ್ಕೆ 18 ಗಂಟೆ ಕೆಲಸ ಮಾಡಿ’ ಎಂದು ಬಾಂಬೆ ಶೇವಿಂಗ್ ಕಂಪನಿಯ ಸಿಇಒ ಶಾಂತನು ದೇಶಪಾಂಡೆ ಈ ಹಿಂದೆ ಲಿಂಕ್ ಡಿನ್ ನಲ್ಲಿ ಪೋಸ್ಟ್ ಮಾಡಿದ್ದು ಚರ್ಚೆಯ ವಿಷಯವಾಗಿತ್ತು. ಅಲಿಬಾಬಾ ಸಂಸ್ಥಾಪಕ ಮತ್ತು ಚೀನಾದ ಪ್ರಸಿದ್ಧ ಉದ್ಯಮಿ ಜಾಕ್ ಮಾ ಅವರು 996 ಎಂಬ ನಿಯಮವನ್ನು ಪ್ರಸ್ತಾಪಿಸಿದರು. ಅದರ ಪ್ರಕಾರ… ನೌಕರರು ವಾರದ ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ 6 ದಿನ ಕೆಲಸ ಮಾಡಬೇಕು. ಟ್ವಿಟರ್ ಅನ್ನು ಖರೀದಿಸುವ ಸಮಯದಲ್ಲಿ, ಎಲೋನ್ ಮಸ್ಕ್ ಅವರು ಕಂಪನಿ ಉಳಿಯಲು ವಾರಕ್ಕೆ 100 ಗಂಟೆಗಳ ಕಾಲ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ಇಮೇಲ್ ಮಾಡಿದ್ದರು ಎಂಬುದರ ಕುರಿತು ಚರ್ಚೆ ನಡೆದಿತ್ತು.
ಉದ್ಯಮಿಗಳ ಈ ಬಯಕೆಯನ್ನು ಈಡೇರಿಸಲು, ದಿನದಲ್ಲಿ 14 ಗಂಟೆ ಕೆಲಸದ ಅವಧಿ ತರುವ ಮೂಲಕ, ಐಟಿ ಉದ್ಯಮದಲ್ಲಿನ ವಾರದ ಐದು ದಿನಗಳ ಕೆಲಸದ ಅವಧಿಯನ್ನು 70 ಗಂಟೆಗಳಿಗೆ ಹೆಚ್ಚಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂಬ ಟೀಕೆ ಉದ್ಯೋಗಿಗಳಿಂದ ವ್ಯಕ್ತವಾಗಿದೆ.
ಇದನ್ನು ಓದಿ : ಕೇಂದ್ರ ಬಜೆಟ್ ಬಗ್ಗೆ ಅಸಮಾಧಾನ: ನೀತಿ ಆಯೋಗದ ಸಭೆಗೆ ಸಿದ್ದು ಸೇರಿದಂತೆ 4 ರಾಜ್ಯಗಳ ಸಿಎಂಗಳು ಗೈರು
ಉದ್ಯೋಗ ಕಳೆದುಕೊಳ್ಳುತ್ತಾರೆ ;
“ದಿನದಲ್ಲಿ 14 ಗಂಟೆ ಅವಧಿಯ ಕೆಲಸದ ನಿಯಮ ಜಾರಿಗೆ ಬಂದರೆ, ಪ್ರಸ್ತುತ ಮೂರು-ಶಿಫ್ಟ್ ವ್ಯವಸ್ಥೆಗೆ ಬದಲಾಗಿ ಕಂಪನಿಗಳು ಎರಡು-ಶಿಫ್ಟ್ ವ್ಯವಸ್ಥೆಗೆ ಹೋಗಲು ಇದು ಅವಕಾಶ ನೀಡುತ್ತದೆ. ಇದರಿಂದ ಮೂರನೇ ಒಂದು ಭಾಗದಷ್ಟು ಉದ್ಯೋಗಿಗಳು ತಮ್ಮ ಉದ್ಯೋಗದಿಂದ ಹೊರಹಾಕಲ್ಪಡುತ್ತಾರೆ” ಎಂದು ಕೆಐಟಿಯು ಹೇಳಿದೆ.
ಸುದೀರ್ಘ ಕೆಲಸದ ಸಮಯದಿಂದ ಆರೋಗ್ಯ ಸಮಸ್ಯೆಗಳು
ದಿನದಲ್ಲಿ 14 ಗಂಟೆ ಕೆಲಸ ಎಂಬ ವಾದದಲ್ಲಿ ಅಭಿವೃದ್ಧಿ ಮತ್ತು ವ್ಯಾಪಾರದ ಲಾಭ ಮಾತ್ರ ಕಂಡುಬರುತ್ತಿದ್ದು, ಕಾರ್ಮಿಕರು ಮತ್ತು ನೌಕರರ ಆರೋಗ್ಯದ ಮೇಲೆ ಬೀರುವ ಪರಿಣಾಮವನ್ನು ಗಣನೆಗೆ ತೆಗೆದುಕೊಂಡಿಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು. 70 ಗಂಟೆಗಳ ಕೆಲಸವು ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು ಮತ್ತು ಅಕಾಲಿಕ ಮರಣದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ನರವಿಜ್ಞಾನಿಗಳು ಎಚ್ಚರಿಸಿದ್ದಾರೆ. ಹೈದರಾಬಾದಿನ ಅಪೋಲೋ ಆಸ್ಪತ್ರೆಗಳ ಹಿರಿಯ ನರವಿಜ್ಞಾನಿ ಡಾ. ಸುಧೀರ್ ಕುಮಾರ್ ಅವರು ದೀರ್ಘಾವಧಿಯ ಕೆಲಸದ ಅವಧಿಗಳ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. ಡಾ. ಕುಮಾರ್ ಅವರು, ದೀರ್ಘ ಕೆಲಸದ ಅವಧಿ ವಾರದಲ್ಲಿ 55 ಗಂಟೆಗಳನ್ನು ಮೀರಿದರೆ, ಪಾರ್ಶ್ವವಾಯು, ರಕ್ತಕೊರತೆಯ ಹೃದ್ರೋಗ ಮತ್ತು ಅಕಾಲಿಕ ಮರಣದ ಅಪಾಯಗಳನ್ನು ಹೆಚ್ಚಿಸುವ ಅಧ್ಯಯನಗಳನ್ನು ಹೈಲೈಟ್ ಮಾಡಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ (WHO)ಯ ಅಂಕಿಅಂಶಗಳ ಪ್ರಕಾರ, ವಾರಕ್ಕೆ 55 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುವುದರಿಂದ ಪ್ರತಿ ವರ್ಷ ಜಗತ್ತಿನಲ್ಲಿ 8,00,000 ಜನರು ಸಾವನ್ನಪ್ಪುತ್ತಾರೆ. ಅವರಲ್ಲಿ ಮುಕ್ಕಾಲು ಪಾಲು ಮಂದಿ ಮಧ್ಯವಯಸ್ಕ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು.
ಗಂಭೀರ ಆರೋಗ್ಯ ಸಮಸ್ಯೆಗಳು
ವಾರದಲ್ಲಿ 55 ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುವುದರಿಂದ ಹೃದಯಾಘಾತದ ಅಪಾಯವು ಶೇಕಡಾ 35 ರಷ್ಟು ಹೆಚ್ಚಾಗುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. 35-40 ಗಂಟೆಗಳ ಕಾಲ ಕೆಲಸ ಮಾಡುವವರಿಗೆ ಹೋಲಿಸಿದರೆ, ಹೃದ್ರೋಗದಿಂದ ಸಾವಿನ ಅಪಾಯವು ಶೇಕಡಾ 17 ರಷ್ಟು ಹೆಚ್ಚಾಗಿದೆ. ದೀರ್ಘಾವಧಿಯ ಕೆಲಸದ ಸಮಯವು ಸ್ಥೂಲಕಾಯತೆ, ಪ್ರಿಡಯಾಬಿಟಿಸ್ ಮತ್ತು ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ ಎಂದೂ ಹೇಳಲಾಗುತ್ತದೆ. ವಾರಕ್ಕೆ 69 ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುವವರು ವಾರಕ್ಕೆ 40 ಗಂಟೆಗಳ ಕಾಲ ಕೆಲಸ ಮಾಡುವವರಿಗಿಂತ ಹೆಚ್ಚು ತೀವ್ರವಾದ ಖಿನ್ನತೆಯ ಲಕ್ಷಣಗಳನ್ನು ಹೊಂದಿರುವುದು ಕಂಡುಬಂದಿದೆ. ಅದೂ ಅಲ್ಲದೆ ಐಟಿ, ಟೇಬಲ್ ವರ್ಕ್ ನಂತಹ ಕೆಲಸ ಮಾಡುವವರು ಹತ್ತು ಗಂಟೆಗೂ ಹೆಚ್ಚು ಕಾಲ ಕುಳಿತುಕೊಂಡರೆ ಮೆದುಳಿಗೆ ರಕ್ತಸಂಚಾರ ಕಡಿಮೆಯಾಗುವುದು, ಏಕಾಗ್ರತೆ ಕಡಿಮೆಯಾಗುವುದು, ಕೆಲಸಗಳತ್ತ ಗಮನ ಹರಿಸಲಾಗದಿರುವುದು, ಆತಂಕ ಮತ್ತು ಹೆಚ್ಚಿದ ಒತ್ತಡದ ಮಟ್ಟಗಳು, ಖಿನ್ನತೆಗೆ ಒಳಗಾಗುವುದು ಕಂಡು ಬಂದಿದೆ. ಇದೆಲ್ಲದರ ನಡುವೆಯೂ ವ್ಯಾಪಾರ, ಕೈಗಾರಿಕೋದ್ಯಮಿಗಳು ಕೆಲಸದ ಸಮಯವನ್ನು ಹೆಚ್ಚಿಸಬೇಕು ಎಂದು ಹೇಳುತ್ತಿದ್ದಾರೆ. ಇದು ತೀವ್ರ ಖಂಡನೀಯವಾಗಿದೆ.
ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಕೆಸಿಸಿಐ) ವರದಿಯ ಪ್ರಕಾರ, ಐಟಿ ವಲಯದ ಶೇಕಡಾ 45 ರಷ್ಟು ಉದ್ಯೋಗಿಗಳು ಖಿನ್ನತೆಯಂತಹ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಶೇಕಡಾ 55 ರಷ್ಟು ದೈಹಿಕ ಆರೋಗ್ಯದ ಪರಿಣಾಮಗಳೊಂದಿಗೆ ಹೋರಾಡುತ್ತಿದ್ದಾರೆ. ವರ್ಲ್ಡ್ ಹೆಲ್ತ್ ಆರ್ಗನೈಸೇಶನ್ (WHO) ಮತ್ತು ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ (ILO) ಯ ಅಧ್ಯಯನದ ಪ್ರಕಾರ, ಹೆಚ್ಚಿದ ಕೆಲಸದ ಸಮಯವು ಪಾರ್ಶ್ವವಾಯು ಮತ್ತು ರಕ್ತಕೊರತೆಯ ಹೃದಯಾಘಾತದಿಂದ ಸಾಯುವ ಅಪಾಯದ ಶೇಕಡಾ 35 ರಷ್ಟು ಹೆಚ್ಚಿನ ಅಪಾಯಕ್ಕೆ ಕಾರಣವಾಗಬಹುದು.
ಬೃಹತ್ ಇಮೇಲ್ ಅಭಿಯಾನ ;
ಕರ್ನಾಟಕದ ಕಾರ್ಮಿಕ ಸಚಿವರಾದ ಶ್ರೀ ಸಂತೋಷ್ ಎಸ್. ಲಾಡ್ ಅವರು ಮಾಧ್ಯಮವನ್ನು ಉದ್ದೇಶಿಸಿ ಮಾತನಾಡುತ್ತಾ, ಐಟಿ ವಲಯದ ಉದ್ಯೋಗಿಗಳ ದಿನದ ಕೆಲಸದ ಸಮಯವನ್ನು 14 ಗಂಟೆಗಳಿಗೆ ವಿಸ್ತರಿಸುವ ಪ್ರಸ್ತಾಪದ ಕುರಿತು ಮಧ್ಯಸ್ಥಗಾರರು ಮತ್ತು ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘ (ಕೆಐಟಿಯು) ಈ ಪ್ರಸ್ತಾವನೆಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಲು ಇಮೇಲ್ ಅಭಿಯಾನವನ್ನು ಪ್ರಾರಂಭಿಸಿದೆ. ಎಲ್ಲಾ IT/ITES/BPO ನೌಕರರು, ಹಾಗೆಯೇ ಅವರ ಕುಟುಂಬದ ಸದಸ್ಯರು, ಸಂಬಂಧಿಕರು ಮತ್ತು ವಿಸ್ತೃತ ಕೆಲಸದ ಸಮಯದಿಂದ ಬಾಧಿತರಾಗಿರುವ ಸ್ನೇಹಿತರನ್ನು ಈ ಅಭಿಯಾನದಲ್ಲಿ ಭಾಗವಹಿಸುವಂತೆ ಅದು ಮನವಿ ಮಾಡಿದೆ. ಅದರ ಮನವಿ ಹೀಗಿದೆ.
ನಾವು ನಮ್ಮ ಧ್ವನಿಯನ್ನು ಕೇಳಬೇಕು:
ಈ ಕೆಳಗಿನ ಸ್ವೀಕೃತದಾರರಿಗೆ ಇಮೇಲ್ ಕಳುಹಿಸಿ: ಮುಖ್ಯಮಂತ್ರಿ ([email protected]), ಕಾರ್ಮಿಕ ಸಚಿವರು ([email protected]), ಮತ್ತು KITU ([email protected]).
ಪ್ರಸ್ತಾವಿತ ತಿದ್ದುಪಡಿಯ ವಿರುದ್ಧ ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ‘ಕೆಲಸದ ಸಮಯದ ಹೆಚ್ಚಳವನ್ನು ನಾನು ವಿರೋಧಿಸುತ್ತೇನೆ’ ಎಂಬ ವಿಷಯದ ಸಾಲನ್ನು ಬಳಸಿ.
ಮೇಲ್ ಅನ್ನು ಸುಲಭವಾಗಿ ಕಳುಹಿಸಲು ಕೆಳಗಿನ ಲಿಂಕ್ ಬಳಸಿ
https://tinyurl.com/14hrWorkDay ]
ಇದನ್ನು ನೋಡಿ : ಕೇಂದ್ರ ಬಜೆಟ್ 2024-25 | ಬಂಡವಾಳಕ್ಕೆ ಒತ್ತು ! ಜನರ ಅನುಭೋಗಕ್ಕೆ ಕುತ್ತು!! Janashakthi Media