14 ಬಾರಿ ಇಂಧನ ತೆರಿಗೆಗಳನ್ನು ಏರಿಸಿದವರಿಂದ ಒಂದು ಬಾರಿಯೂ ಏರಿಸದ ರಾಜ್ಯ ಸರಕಾರದ ವಿರುದ್ಧ ಟೀಕೆ ದುರದೃಷ್ಟಕರ – ಪಿಣರಾಯಿ ವಿಜಯನ್

ಪ್ರಧಾನ ಮಂತ್ರಿಗಳು ಏರುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆಗಳ ಬಗ್ಗೆ ಮೊದಲ ಬಾರಿಗೆ ಮಾತಾಡಿದ್ದಾರೆ. ಕೇಂದ್ರ ಸರಕಾರ ಕಳೆದ ನವಂಬರಿನಲ್ಲಿ ಜನಗಳ ಮೇಲೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಹೊರೆಯನ್ನು ಕಡಿಮೆ ಮಾಡಲು ಅಬಕಾರಿ ಸುಂಕವನ್ನು ಇಳಿಸಿತು. ಕೆಲವು ರಾಜ್ಯಗಳೂ ಇಳಿಸಿದವು, ಆದರೆ ಕೆಲವು ರಾಜ್ಯಗಳು ಅಬಕಾರಿ ಸುಂಕದ ಇಳಿಕೆಯ ಪ್ರಯೋಜನವನ್ನು ನಾಗರಿಕರಿಗೆ ವರ್ಗಾಯಿಸಲಿಲ್ಲ. ಈಗಲಾದರೂ ಅದನ್ನು ಮಾಡಬೇಕು ಎಂದು ಆ ರಾಜ್ಯಗಳನ್ನು ವಿನಂತಿಸಿಕೊಳ್ಳುತ್ತೇನೆ ಎಂದರು. ಅವರು ನಿರ್ದಿಷ್ಟವಾಗಿ ಕೆಲವು ರಾಜ್ಯಗಳನ್ನೂ ಹೆಸರಿಸಿದರು-ಮಹಾರಾಷ್ಟ್ರ, ಪಶ್ಚಿಮ ಬಂಗಾಲ, ತೆಲಂಗಾಣ, ಆಂಧ್ರಪ್ರದೇಶ, ಕೇರಳ, ಝಾರ್ಖಂಡ್ ಮತ್ತು ತಮಿಳುನಾಡು.

ಮರುದಿನ, ಪೆಟ್ರೋಲಿಯಂ ಮಂತ್ರಿಗಳು ಈ ರಾಜ್ಯಗಳು ಇಂಧನ ತೆರಿಗೆ ‘ಗೋಸುಂಬೆತನ’ದಲ್ಲಿ ತೊಡಗಿವೆ ಎಂದರು. ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಗಳು ಇಳಿಯುತ್ತಿದ್ದಾಗಲೂ ಅದರ ಪ್ರಯೋಜನವನ್ನು ಸಾಮಾನ್ಯ ನಾಗರಿಕರಿಗೆ ವರ್ಗಾಯಿಸಲು ನಿರಾಕರಿಸಿದ, ಎಪ್ರಿಲ್ 2014ರಿಂದ ನವಂಬರ್ 2021ರ ನಡುವೆ 14 ಬಾರಿ ಅಬಕಾರಿ ಸುಂಕಗಳನ್ನು ಏರಿಸಿ ಕೇವಲ ನಾಲ್ಕು ಬಾರಿ ಇಳಿಸಿದ ಕೇಂದ್ರ ಸರಕಾರದ ಮುಖ್ಯಸ್ಥರ ವಿನಂತಿ ಶುದ್ಧ ಗೋಸುಂಬೆತನ ಎಂಬ ಪ್ರತಿಕ್ರಿಯೆ ಬರಬಹುದು ಎಂದು ತಾನೇ ಆ ಪದವನ್ನು ಮೊದಲು ಬಳಸಿ ಬಿಡಬೇಕು ಎಂದು ಅವರು ಹೀಗೆ ಹೇಳಿರಬಹುದೇನೋ ಎಂಬುದು ಕೆಲವು ವೀಕ್ಷಕರ – ಅನುಮಾನ.

ಪ್ರಧಾನ ಮತ್ರಿಗಳು ಹೆಸರಿಸಿದ ರಾಜ್ಯಗಳೆಲ್ಲವೂ ಬಿಜೆಪಿಯೇತರ ಪಕ್ಷಗಳ ಆಳ್ವಿಕೆಯಲ್ಲಿರುವ ಸರಕಾರಗಳು ಎಂಬುದು ಆಕಸ್ಮಿಕವಲ್ಲ. ನಿರೀಕ್ಷಿಸಿದಂತೆ, ಪ್ರಧಾನಿಗಳ ‘ವಿನಂತಿ’ ಗೋಸುಂಬೆತನ ಎಂದು ಅವರು ಎತ್ತಿ ತೋರಿಸುತ್ತಿದ್ದಾರೆ.

ನೋಡಿ, ಎಷ್ಟೊಂದು ಬುಲ್‍ಡೋಜರ್ ಗಳನ್ನು
ನಡೆಸಬೇಕಾಗಿ ಬಂದರೂ ಬಿಜೆಪಿ ರಾಜ್ಯಗಳು
ಎಷ್ಟು ಚೆನ್ನಾಗಿ ನಿಭಾಯಿಸುತ್ತಿವೆ”

ವ್ಯಂಗ್ಯಚಿತ್ರ: ಇ.ಪಿ.ಉನ್ನಿ, ಇಂಡಿಯನ್‍ ಎಕ್ಸ್‌ಪ್ರೆಸ್

ಸಹಕಾರಿ ಒಕ್ಕೂಟ ತತ್ವ’ಕ್ಕೆ ಅನುಗುಣವಾಗಿಲ್ಲ

ಕೇರಳ 2016ರಿಂದ ಒಂದು ಬಾರಿಯೂ ಇಂಧನಗಳ ಮೇಲೆ ತೆರಿಗೆಗಳನ್ನು ಏರಿಸದಿದ್ದರೂ, 14 ಬಾರಿ ಏರಿಸಿದ ಕೇಂದ್ರ ಸರಕಾರ ಅದನ್ನು ಟೀಕಿಸಿರುವುದು ದುರದೃಷ್ಟಕರ, ಪ್ರಧಾನಿಗಳ ಇಂತಹ ಟೀಕೆಗೆ ಅದು ಸೂಕ್ತ ಸಂದರ್ಭವೂ ಆಗಿರಲಿಲ್ಲ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಖೇದ ವ್ಯಕ್ತಪಡಿಸಿದ್ದಾರೆ. ಸುರುಳಿ-ಸುರುಳಿಯಾಗಿ ಏರುತ್ತಿರುವ ಇಂಧನ ಬೆೆಲೆಗಳು ಉಂಟುಮಾಡಿರುವ ಜನಗಳ ಸಂಕಟಗಳನ್ನು ನಿಷ್ಕಾರಣವಾಗಿ ರಾಜ್ಯಗಳನ್ನು ದೂಷಿಸುವ ಮೂಲಕ ಶಮನಗೊಳಿಸಲು ಸಾಧ್ಯವಿಲ್ಲ, ಇದು (ಪ್ರಧಾನಿಗಳು ಹೇಳುವ) ‘ಸಹಕಾರಿ ಒಕ್ಕೂಟ ತತ್ವ’ಕ್ಕೆ ಅನುಗುಣವಾಗಿಲ್ಲ ಎಂದು ವಿಜಯನ್ ಟಿಪ್ಪಣಿ ಮಾಡಿದ್ದಾರೆ.

ಎಪ್ರಿಲ್ 2024ರಲ್ಲಿ ಪೆಟ್ರೋಲ್ ಮೇಲೆ ಅಬಕಾರಿ ಸುಂಕ ಲೀಟರಿಗೆ ರೂ.9.48 ಇತ್ತು. ಅದು ನವಂಬರ್ 2021ರ ವೇಳೆಗೆ ರೂ.32.96 ತಲುಪಿತು. ಅದೇ ರೀತಿ ಡೀಸೆಲ್ ಮೇಲಿನ ಅಬಕಾರಿ ಸುಂಕ ಈ ಅವಧಿಯಲ್ಲಿ ಲೀಟರಿಗೆ ರೂ. 3.56ರಿಂದ ರೂ.31.83ಕ್ಕೇರಿತು. ನವಂಬರ್ 2021ರಲ್ಲಿ ಇವನ್ನು ತುಸು ಇಳಿಸಲಾಯಿತು. ಆದರೂ ಈ ಇಳಿಕೆಯ ನಂತರವೂ ಪೆಟ್ರೋಲಿನ ಮೇಲಿನ ಅಬಕಾರಿ ಸುಂಕ ಮೂರು ಪಟ್ಟು ಏರಿದ್ದರೆ, ಡೀಸೆಲ್ ಮೇಲೆ ಆರು ಪಟ್ಟು ಏರಿದೆ.

ಮಕ್ಕಳೇ, ಬಡವರೊಂದಿಗೆ ನಿಮ್ಮ ಆಹಾರವನ್ನು ಹಂಚಿಕೊಳ್ಳಿ…”
ವ್ಯಂಗ್ಯಚಿತ್ರ: ಮಿಕ ಅಜೀಜ್

ಟೊಳ್ಳು ನೀತಿ ಬೋಧೆ”

ಅಲ್ಲದೆ, ಈಗೀಗ ಕೇಂದ್ರ ಸರಕಾರ ಸರ್ಚಾರ್ಜ್ ಮತ್ತು ಸೆಸ್‌ಗಳನ್ನು ಏರಿಸುವ ಮೂಲಕವೇ ತೆರಿಗೆ ಸಂಗ್ರಹಕ್ಕೆ ಹೆಚ್ಚಿನ ಒತ್ತು ಕೊಡುತ್ತಿದೆ. ಏಕೆಂದರೆ ಇವನ್ನು ಅದು ರಾಜ್ಯ ಸರಕಾರಗಳೊಂದಿಗೆ ಹಂಚಿಕೊಳ್ಳಬೇಕಾಗಿಲ್ಲ. 14 ಏರಿಕೆಗಳು ಮತ್ತು ನಡುವೆ 4 ಇಳಿಕೆಗಳ ನಂತರ ಈಗ ಕೇಂದ್ರ ಸರಕಾರ ಪೆಟ್ರೋಲ್‍ ಮೇಲೆ  ಹಾಕಿರುವ ತೆರಿಗೆ ಲೀಟರಿಗೆ ರೂ.27.90. ಅದರಲ್ಲಿ ರೂ.26.50 ಸೆಸ್‍ಗಳು ಅಥವ ಸರ್ಚಾರ್ಜ್‌ಗಳು. ಇದರಲ್ಲಿ ರಾಜ್ಯಗಳಿಗೆ ಯಾವ ಪಾಲೂ ಇಲ್ಲ. ಇದು ಒಂದು ಉದ್ದೇಶಪೂರ್ವಕವಾದ ಕಾರ್ಯತಂತ್ರ, ರಾಜ್ಯಗಳಿಗೆ ಕೇಂದ್ರೀಯ ತೆರಿಗೆಗಳಲ್ಲಿ  ರಾಜ್ಯಗಳ 41% ಶಾಸನಬದ್ಧ ಪಾಲನ್ನು ವಂಚಿಸುವುದಕ್ಕಾಗಿ ಅನುಸರಿಸಿರುವಂತದ್ದು. ಆದರೂ ಪ್ರಧಾನಿಗಳು  ಕೇಂದ್ರದ  ಅತ್ಯಲ್ಪ ಇಳಿಕೆಯ ಪ್ರಯೋಜನವನ್ನು ನಾಗರಿಕರಿಗೆ ವರ್ಗಾಯಿಸಿಲ್ಲ ಎಂದು ನೀತಿ ಬೋಧೆ ಮಾಡುತ್ತಾರೆ ಎಂದು ಕೇರಳದ ಮಾಜಿ ಹಣಕಾಸು ಮಂತ್ರಿ ಡಾ.ಥಾಮಸ್‍ ಐಸಾಕ್‍ ಟಿಪ್ಪಣಿ ಮಾಡಿದ್ದಾರೆ.

ದೂಷಣೆಯಿಂದ ಸಂಕಟ ಶಮನ ಸಾಧ್ಯವಿಲ್ಲ”

ʻʻಇದೂ ಸಾಲದೆಂಬಂತೆ ಜಿಎಸ್‌ಟಿ ಸೇರಿದಂತೆ ರಾಜ್ಯಗಳಿಗೆ ಸಲ್ಲಬೇಕಾದ ರೆವಿನ್ಯೂ ಪಾಲನ್ನು ವರ್ಗಾಯಿಸುವಲ್ಲಿಯೂ ವಿಳಂಬ ಮಾಡಲಾಗುತ್ತಿದೆ. ಅದರಿಂದಾಗಿ ರಾಜ್ಯಗಳು ಗಂಭಿರ ಹಣಕಾಸು ಮಿತಿಗಳನ್ನು ಅನುಭವಿಸುತ್ತಿವೆ. ಅದರ ಮೇಲೆ ಕೊವಿಡ್ ಹೊರೆಯೂ ಸೇರಿದೆ. ರಾಜ್ಯಗಳ ಇಂತಹ ಹಣಕಾಸು ಸ್ಥಿತಿಯನ್ನು ಅರಿತಿರುವ ಪ್ರಧಾನ ಮಂತ್ರಿಗಳಿಂದ ಇಂತಹ ಮಾತು ಬಾರದಿತ್ತುʼʼ ಎಂದು ಕೇರಳದ ಮುಖ್ಯಮಂತ್ರಿಗಳು ಹೇಳಿದ್ದಾರೆ.

ದೇಶದ ಹಣಕಾಸು ನಿರ್ವಹಣೆಯನ್ನು ನಡೆಸುವ ಕೇಂದ್ರ ಸರಕಾರದ ಮೇಲೆ ಬೆಲೆಯೇರಿಕೆಯ ಹೊಣೆ ಬೀಳುವುದಿಲ್ಲ, ರಾಜ್ಯಗಳು ಅದಕ್ಕೆ ಹೊಣೆ ಎಂದು ಬಿಂಬಿಸುವ ಪ್ರಯತ್ನ ಒಂದು ಒಕ್ಕೂಟ ವ್ಯವಸ್ಥೆಯಲ್ಲಿ ನಡೆಯಬಾರದಿತ್ತು ಎಂದು ಮುಂದುವರೆದು ಹೇಳಿರುವ ಪಿಣರಾಯಿ ವಿಜಯನ್ “ಸಾಮಾನ್ಯ ಜನರ ಬದುಕನ್ನು ಅಸಹನೀಯಗೊಳಿಸಬಾರದು. ಅದಕ್ಕಾಗಿ ವಿಪರೀತ ತೆರಿಗೆ ಏರಿಕೆಗಳನ್ನು ತಪ್ಪಿಸಬೇಕು. ರಾಷ್ಟ್ರೀಯ ಹಿತದೃಷ್ಟಿಯಿಂದ ಕೇಂದ್ರ ಸರಕಾರ ಸೂಕ್ತ ಧೋರಣೆಗಳ ಮೂಲಕ ಇಂಧನ ಬೆಲೆಗಳಲ್ಲಿ ಮತ್ತೆ-ಮತ್ತೆ ಏರಿಕೆಗಳಾಗುವುದನ್ನು ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿನಂತಿ. ಸುರುಳಿ-ಸುರುಳಿಯಾಗಿ ಏರುತ್ತಿರುವ ಇಂಧನ ಬೆಲೆಗಳು ಉಂಟುಮಾಡಿರುವ ಜನಗಳ ಸಂಕಟಗಳನ್ನು ನಿಷ್ಕಾರಣವಾಗಿ ರಾಜ್ಯಗಳನ್ನು ದೂಷಿಸುವ ಮೂಲಕ ಶಮನಗೊಳಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಮೋದಿ ಸರಕಾರದ ಗೋಸುಂಬೆತನಕ್ಕೆ ಪಾರವೇ ಇಲ್ಲ”

ಈ ಗ್ರಾಫ್‌ನಲ್ಲಿ ಕಾಣುವಂತೆ, 2014-15 ರಲ್ಲಿ ಒಟ್ಟು ಜಿಡಿಪಿಯಲ್ಲಿ ಪೆಟ್ರೋಲಿಯಂ ತೆರಿಗೆಗಳ ಪಾಲು 0.8% ಇದ್ದದ್ದು, 2020-21ರಲ್ಲಿ 1.9%ಕ್ಕೆ ಏರಿತು. ಆದರೆ ಇದೇ ಅವಧಿಯಲ್ಲಿ ಜಿಡಿಪಿಯಲ್ಲಿ ರಾಜ್ಯಗಳು ಹಾಕುವ ಮಾರಾಟ ತೆರಿಗೆ/ವ್ಯಾಟ್‌ನ ಪಾಲು 1.1% ದ ಸುತ್ತಮುತ್ತಲೇ ಇತ್ತು, ವಾಸ್ತವವಾಗಿ 2020-21ರಲ್ಲಿ 2014-15ಕ್ಕೆ ಹೋಲಿಸಿದರೆ ತುಸು ಕಡಿಮೆಯೇ ಆಗಿತ್ತು.

2018-21ರಲ್ಲಿ ಪೆಟ್ರೋಲಿಯಂ ಸುಂಕಗಳ ಮೂಲಕ 8.02 ಲಕ್ಷ ಕೋಟಿ ರೂ.ಗಳ ಅಗಾಧ ಮೊತ್ತವನ್ನು ಗಳಿಸಿತು ಎಂದು ಸ್ವತಃ ಹಣಕಾಸು ಮಂತ್ರಿಗಳೇ ಸಂಸತ್ತಿಗೆ ತಿಳಿಸಿದ್ದರು. ಜನರ ಸಂಕಟಗಳ ಬಗ್ಗೆ ಕಾಳಜಿಯಿಂದ ಈ ಸುಂಕ ಏರಿಕೆಯನ್ನು ರದ್ದು ಮಾಡುವ ಬದಲು, ಆದಾಯದ ಪಾಲಿನಲ್ಲಿ ಏನೇನೂ ಏರಿಕೆ ಕಾಣದ ರಾಜ್ಯಗಳು ತೆರಿಗೆಯನ್ನು ಇಳಿಸಬೇಕು ಎಂದು ಹೇಳುವ ಮೋದಿ ಸರಕಾರದ ಗೋಸುಂಬೆತನಕ್ಕೆ ಪಾರವೇ ಇಲ್ಲ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಟಿಪ್ಪಣಿ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *