ಬೆಂಗಳೂರು: ನಾಲ್ಕೂವರೆ ತಿಂಗಳ ಬಳಿಕ ಇದೀಗ ಮತ್ತೆ ಪೆಟ್ರೋಲ್, ಡೀಸೆಲ್ ಮತ್ತು ಸಿಲಿಂಡರ್ ದರಗಳು ಏರಿಕೆ ಕಂಡಿವೆ. ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್ ಗೆ 80 ಪೈಸೆ ಹೆಚ್ಚಳ ಮಾಡಲಾಗಿದೆ. ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 50 ರೂಪಾಯಿ ಏರಿಕೆ ಮಾಡಲಾಗಿದೆ. ಅದರಂತೆ 14.2 ಕೆಜಿಯ ಸಿಲಿಂಡರ್ ದರ ದೆಹಲಿಯಲ್ಲಿ 949.50 ರೂ. ಆಗಿದೆ. ಇಂದಿನಿಂದಲೇ ಅನ್ವಯವಾಗುವಂತೆ (ಮಾರ್ಚ್ 22, 2022) ಈ ದರ ಏರಿಕೆ ಮಾಡಲಾಗಿದೆ.
ಕೇಂದ್ರ ಸರ್ಕಾರ ಇತ್ತೀಚಿಗೆ ಐದು ರಾಜ್ಯ ವಿಧಾನಸಭಾ ಚುನಾವಣೆ ಪೂರ್ಣಗೊಳ್ಳುವವರೆಗೂ ಬೆಲೆ ಏರಿಕೆ ಮಾಡದೆ ತಡೆ ಹಿಡಿದಿತ್ತು. ಮಾರ್ಚ್ 10 ರಿಂದಲೇ ಬೆಲೆ ಏರಿಕೆ ಆಗುವ ನಿರೀಕ್ಷೆ ಇತ್ತು. ಅದರಂತೆ, ಇಂದು ಬೆಲೆ ಏರಿಕೆ ಪರಿಷ್ಕರಣೆಯಾಗಿದೆ.
ಭಾರತದ ಮೂರು ಸರ್ಕಾರಿ ತೈಲ ಕಂಪನಿಗಳು ಇಂದು ಪೆಟ್ರೋಲ್ ಮತ್ತು ಡೀಸೆಲ್ ಹೊಸ ದರಗಳನ್ನು ಬಿಡುಗಡೆ ಮಾಡಿದ್ದು, ದರದಲ್ಲಿ ಬದಲಾವಣೆಗಳು ಕಂಡು ಬಂದಿದೆ. ದೇಶದ ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಸಹ ಕಳೆದ ನವೆಂಬರ್ 4ರಿಂದ ಇಂಧನ ದರ ಪರಿಷ್ಕರಿಸಿರಲಿಲ್ಲ.
ಇದನ್ನು ಓದಿ: ಜನರ ಆಕ್ರೋಶಕ್ಕೆ ಮಣಿದ ಕೇಂದ್ರ: ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಕೆ
ಕಚ್ಚಾತೈಲ ಬೆಲೆ ದಶಕದ ಬಳಿಕ ಮೊದಲ ಬಾರಿಗೆ ಪ್ರತಿ ಬ್ಯಾರೆಲ್‌ಗೆ 140 ಯುಎಸ್ ಡಾಲರ್ ಗಡಿ ಸಮೀಪಿಸಿತ್ತು. ಆದರೆ, ಕಚ್ಚಾತೈಲ ಬೆಲೆ ತಗ್ಗುತ್ತಿದೆ. ಈ ನಡುವೆ ಭಾರತದ ಸರ್ಕಾರಿ ತೈಲ ಕಂಪನಿಗಳು ಇಂದು(ಮಾರ್ಚ್, 22) ಪೆಟ್ರೋಲ್ ಮತ್ತು ಡೀಸೆಲ್ ಹೊಸ ದರಗಳನ್ನು ಬಿಡುಗಡೆ ಮಾಡಿದೆ.
ಜಾಗತಿಕವಾಗಿ ಕಚ್ಚಾತೈಲ ಬೆಲೆ ಏರಿಳಿತ ಕಾಣುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಸುಮಾರು 40% ಏರಿಕೆಯಾಗಿದ್ದು, ಕೈಗಾರಿಕಾ ಡೀಸೆಲ್ ಬೆಲೆ 25 ರೂಪಾಯಿ ಏರಿಕೆ ಮಾಡಲಾಗಿತ್ತು. ಇದಾದ ಬೆನ್ನಲ್ಲೇ ರೀಟೈಲ್ ದರ ಪೆಟ್ರೋಲ್, ಡೀಸೆಲ್ ದರ ಕೂಡಾ ಪರಿಷ್ಕರಿಸಲಾಗಿದೆ. ಸರಿ ಸುಮಾರು 137 ದಿನಗಳ ಬಳಿಕ ಭಾರತದ ಪ್ರಮುಖ ನಗರಗಳಲ್ಲಿ ಇಂಧನ ದರದಲ್ಲಿ ಏರಿಕೆ ಕಂಡು ಬಂದಿದೆ.
ದರ ಏರಿಕೆಯಂತೆ, ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 96.21 ರೂಪಾಯಿ, ಡೀಸೆಲ್ 87.47 ರೂಪಾಯಿ ಆಗಿದೆ. ಚೆನ್ನೈನಲ್ಲಿ ಪೆಟ್ರೋಲ್ 102.16 ಹಾಗೂ ಡೀಸೆಲ್ 92.19 ರೂಪಾಯಿ ಆಗಿದೆ. ಮುಂಬೈನಲ್ಲಿ ಪೆಟ್ರೋಲ್ 110.82 ಹಾಗೂ ಡೀಸೆಲ್ ಬೆಲೆ 95.00 ರೂಪಾಯಿ ಆಗಿದೆ. ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ಬೆಲೆ 105.51 ರೂಪಾಯಿ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 90.62 ರೂಪಾಯಿ ಆಗಿದೆ.
ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 101.42 ರೂಪಾಯಿ ಹಾಗೂ ಡೀಸೆಲ್ 85.80 ರೂಪಾಯಿ ದಾಖಲಾಗಿದೆ. ಹೈದರಾಬಾದ್ನಲ್ಲಿ ಪೆಟ್ರೋಲ್ 109.10 ರೂಪಾಯಿ ಹಾಗೂ ಡೀಸೆಲ್ 95.50 ರೂಪಾಯಿ ನಿಗದಿಯಾಗಿದೆ. ಗುಜರಾತ್ನ ಗಾಂಧಿನಗರದಲ್ಲಿ ಪೆಟ್ರೋಲ್ 96.06 ಹಾಗೂ ಡೀಸೆಲ್ 90.09 ರೂಪಾಯಿ ನಿಗದಿಯಾಗಿದೆ. ಕೇರಳದ ತಿರುವನಂತಪುರಂನಲ್ಲಿ ಪೆಟ್ರೋಲ್‌ಗೆ 107.12 ರೂಪಾಯಿ ಇದ್ದು, ಡೀಸೆಲ್ ಬೆಲೆ 94.22 ರೂಪಾಯಿ ನಿಗದಿಯಾಗಿದೆ. ಲಕ್ನೋದಲ್ಲಿ ಪೆಟ್ರೋಲ್ 96.08 ಹಾಗೂ ಡೀಸೆಲ್ 87.61 ರೂಪಾಯಿ ನಿಗದಿಯಾಗಿದೆ.
ಇದನ್ನು ಓದಿ: ಗ್ರಾಹಕರಿಗೆ ಮತ್ತಷ್ಟು ಹೊರೆ: ₹900ರ ಸಮೀಪ ಸಿಲಿಂಡರ್ ದರ-ಪೆಟ್ರೋಲ್ ಸಹ ದುಬಾರಿ
ನೆನ್ನೆ(ಮಾರ್ಚ್ 21ರಂದು) ದೊಡ್ಡ ಪ್ರಮಾಣದಲ್ಲಿ ಡೀಸೆಲ್ ಖರೀದಿ ಮಾಡುವವರಿಗೆ ಜಾಗತಿಕ ತೈಲ ದರ ಏರಿಕೆ ಆಗಿತ್ತು. ಭಾರತದಲ್ಲಿ ಡೀಸೆಲ್ ಸಗಟು ಖರೀದಿ ದರ ಲೀಟರ್‌ಗೆ 25 ರೂಪಾಯಿ ಹೆಚ್ಚಿಸಲಾಗಿತ್ತು. ಅಂತಾರಾಷ್ಟ್ರೀಯ ತೈಲ ದರವು ಶೇಕಡಾ 40 ರಷ್ಟು ಹೆಚ್ಚಳವಾಗಿತ್ತು. ದೊಡ್ಡ ಪ್ರಮಾಣದಲ್ಲಿ ಡೀಸೆಲ್ ಖರೀದಿ ಮಾಡುವವರಿಗೆ ಇದು ಅನ್ವಯವಾಗಿತ್ತು.
ಪ್ರತಿನಿತ್ಯ ಬೆಳಿಗ್ಗೆ 6 ಗಂಟೆಗೆ ಬೆಲೆ ಪರಿಷ್ಕರಣೆ
ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.
ಜಾಗತಿಕ ಮಟ್ಟದಲ್ಲಿ ಇಂಧನ ಬೆಲೆ ಹೆಚ್ಚಳಕ್ಕೆ ಕಾರಣ
ರಷ್ಯಾ ಹಾಗೂ ಉಕ್ರೇನ್ ಯುದ್ಧದ ನಡುವೆ ಜಾಗತಿಕವಾಗಿ ಕಚ್ಚಾ ತೈಲ ಬೆಲೆಯು ತೀವ್ರ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ದೇಶದ ತೈಲ ಮಾರುಕಟ್ಟೆ ಕಂಪನಿಗಳು ನಾಲ್ಕು ತಿಂಗಳ ಅಂತರದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಳ ಮಾಡಿದೆ.
ಬ್ರೆಂಟ್ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 119.2 ಡಾಲರ್‌ನಂತೆ ಶೇಕಡಾ 45ರಷ್ಟು ಹೆಚ್ಚಾಗಿದೆ. ಭಾರತದ ಮೂರು ಸರ್ಕಾರಿ ತೈಲ ಕಂಪನಿಗಳು ಕೊನೆಯ ಬಾರಿಗೆ ಇಂಧನ ದರವನ್ನು ಏರಿಕೆ ಮಾಡಿದ ಸಂದರ್ಭದಲ್ಲಿ ಜಾಗತಿಕವಾಗಿ ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್‌ಗೆ 81.6 ಡಾಲರ್ ಆಗಿತ್ತು.
ಭಾರತವು ಶೇಕಡಾ 85 ರಷ್ಟು ಇಂಧನವನ್ನು ಆಮದು ಮಾಡಿಕೊಳ್ಳುತ್ತದೆ. ಸಾಮಾನ್ಯವಾಗಿ, ಪೆಟ್ರೋಲಿಯಂ ಉತ್ಪನ್ನಗಳ ಬೆಂಚ್‌ಮಾರ್ಕ್ ಬೆಲೆಗಳ 15 ದಿನಗಳ ಬದಲಾವಣೆಯನ್ನು ನೋಡಿಕೊಂಡು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಆದರೂ ನವೆಂಬರ್ 4 ರಿಂದ ಎರಡೂ ಇಂಧನಗಳ ಬೆಲೆಗಳು ಏರಿಕೆ ಕಾಣಿರಲಿಲ್ಲ.
ಈ ಹಿಂದೆ ಬೆಲೆ ಏರಿಕೆಯ ಜನಸಾಮಾನ್ಯರ ಆಕ್ರೋಶಕ್ಕೆ ಮಣಿದ ಕೇಂದ್ರದ ಬಿಜೆಪಿ ಸರ್ಕಾರವು ಈ ಹಿಂದೆ ಪೆಟ್ರೋಲ್ ಮೇಲಿನ ಅಬಕಾರಿ ಸುಂಕದಲ್ಲಿ ಪ್ರತಿ ಲೀಟರ್‌ಗೆ ರೂ 5 ಕಡಿತ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕದಲ್ಲಿ ಲೀಟರ್‌ಗೆ ರೂ 10 ಕಡಿತವನ್ನು ಘೋಷಿಸಿತು. ಇನ್ನು ಪ್ರಮುಖವಾಗಿ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರ ರಾಜ್ಯಗಳ ಚುನಾವಣೆ ಮುಗಿಯುವವರೆಗೂ ಬೆಲೆಗಳ ಏರಿಕೆಯನ್ನು ತಡೆಯಲಾಗಿತ್ತು.