ಚನ್ನರಾಯಪಟ್ಟಣ: ತಾಲ್ಲೂಕಿನ ಸಾರ್ವಜನಿಕರು/ರೈತರು ತಾಲ್ಲೂಕಿನ ಎಲ್ಲಾ ಸರಕಾರಿ ಕಚೇರಿಗಳಲ್ಲಿನ ಭ್ರಷ್ಠಾಚಾರ ವ್ಯವಸ್ಥೆಯಿಂದಾಗಿ ನಲುಗಿ ಹೋಗಿದ್ದಾರೆ. ಲಂಚ ಪಡೆದು ಕೆಲಸ ಮಾಡುವ ಆಡಳಿತ ವ್ಯವಸ್ಥೆ ಇರುವುದರಿಂದ ಸರ್ಕಾರಿ ಕಚೇರಿಗಳಿಗೆ ಹೋಗಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೇಲ್ಮಟ್ಟದಿಂದ ಕೆಳ ಹಂತದವರೆಗೂ ಲಂಚ ಪಡೆಯುವುದು ಕ್ಯಾನ್ಸರ್ ನಂತೆ ಹರಡಿದೆ ಲಂಚ ಪಡೆದು ಕೆಲಸ ಮಾಡುವ ಅಧಿಕಾರಿಗಳು ಇದ್ದಲ್ಲಿ ಪಾರದರ್ಶಕ ಆಡಳಿತ ವ್ಯವಸ್ಥೆ ಇರುವುದಿಲ್ಲ ಎಂದು ಕರ್ನಾಟಕ ಪ್ರಾಂತರೈತ ಸಂಘದ ರಾಜ್ಯ ಹಣಕಾಸು ಕಾರ್ಯದರ್ಶಿ ಎಚ್. ಆರ್. ನವೀನ್‌ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೈತರಿಗೆ 60 – 65 ವರ್ಷಗಳಿಂದ ಭೂಮಿ ಮಂಜೂರು ಮಾಡಿ ಕೊಟ್ಟಿರುವ ಜಮೀನಿನ ಸರ್ವೆ ಕಾರ್ಯ, ಪೌತಿ ಖಾತೆ, ದುರಸ್ತು ಮಾಡಿ ಕೊಟ್ಟಿಲ್ಲ ರೈತರಿಗೆ ಭೂ ದಾಖಲೆಗಳು ಸರಿಯಾದ ರೀತಿಯಲ್ಲಿ ದೊರೆಯುವುದಿಲ್ಲ ಬಹುತೇಕ ಈ ಎಲ್ಲಾ ಕಾರ್ಯಗಳನ್ನು ಮಾಡಲು ವಿಳಂಬ ಮಾಡುತ್ತಿರುತ್ತಾರೆ. ಇದರಿಂದ ರೈತರಿಗೆ ತುಂಬಾ ಅನಾನುಕೂಲವಾಗಿದೆ ಸ್ವತಹ ರೈತರ ದುರಸ್ತು (ಸರ್ವೆ) ಮಾಡಿಸಿಕೊಳ್ಳಲು ಅರ್ಜಿ ನೀಡಿದರೆ ವರ್ಷಗಟ್ಟಲೆ ತಾಲೂಕು ಕಚೇರಿಗೆ ಅಲೆದಾಡಬೇಕು ಹಾಗೂ ಹತ್ತಾರು ಸಾವಿರ ಲಂಚ ನೀಡಬೇಕಾದ ಪರಿಸ್ಥಿತಿ ಇದೆ ಮತ್ತು ಇತರ ಕೆಲಸಗಳಿಗೂ ಹರ ಸಾಹಸ ಪಡಬೇಕು ಎಂದರು.
“ಲಂಚ ಕೊಡದೆ ಯಾವ ಕೆಲಸಗಳು ಆಗೋದಿಲ್ಲ” ಅಂತ ರೈತರು, ಶ್ರೀಸಾಮಾನ್ಯರು ಹಾದಿ ಬೀದಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ ತಾಲ್ಲೂಕು ಕಚೇರಿ ಯಾರದೋ ಪಹಣಿ ಖಾತೆ ಬೇರೊಬ್ಬರ ಹೆಸರಿನಲ್ಲಿ ಇರುತ್ತದೆ ಮಂಜೂರಿ ಚೀಟಿ ಇಲ್ಲದಿದ್ದರೂ ಅಂಥವರ ಹೆಸರಿಗೆ ಪಹಣಿ ದಾಖಲೆ ಮಾಡಿ ಕೊಟ್ಟಿರುವ ಉದಾಹರಣೆಗಳು ಇವೆ ಇದರಿಂದ ನ್ಯಾಯಾಲಯ ಗಳಿಗೆ ಹೋಗುವ ಪ್ರಕರಣಗಳು ಹೆಚ್ಚಾಗಿವೆ ಎಂದು ಆರೋಪಿಸಿದರು.
ಇದನ್ನೂ ಓದಿ: ಕಾವೇರಿ ಆಸ್ತ್ರೆಯಿಂದ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಅಂಬ್ಯುಲೆನ್ಸ್ ಕೊಡುಗೆ
ಬದುಕಿರುವವರ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡುವುದು. ಹಾಗೂ ಬಲಾಡ್ಯರು ಮತ್ತು ಸರ್ಕಾರಿ ಅಧಿಕಾರಿಗಳು ಸರ್ಕಾರಿ ಬೆಲೆಬಾಳುವ ಜಮೀನನ್ನು ಮಂಜೂರಿ ಮಾಡಿಸಿಕೊಳ್ಳುತ್ತಾರೆ ನ್ಯಾಯಾಲಯದ ಡಿಕ್ಕಿ ಮೂಲಕ ಪಾಲು ಹಂಚಿಕೆ ಮಾಡಿಕೊಂಡಿದ್ದರು ಸಹ ಅಂತಹ ಜಮೀನನ್ನು ಅವರ ಹೆಸರಿಗೆ ಖಾತೆ ಮಾಡಿಕೊಡದೇ, ನ್ಯಾಯಾಲಯದ ಆದೇಶವನ್ನು ಸಹ ಉಲ್ಲಂಘಿಸಿ, ಲಂಚ ನೀಡಿದರೆ ಮಾತ್ರ ಖಾತೆ ಮಾಡಿಕೊಟ್ಟು, ಇಲ್ಲವಾದಲ್ಲಿ ವೃಥಾ ಕಾಲಹರಣ ಮಾಡಿಕೊಂಡು ಜನಸಾಮಾನ್ಯರನ್ನು ಅಲೆದಾಡಿಸುತ್ತಿರುತ್ತಾರೆ ಎಂದರು.
ಮತ್ತು ನ್ಯಾಯಾಲಯದ ಪ್ರಕರಣವಿದ್ದು, ಸದರಿ ಘನ ನ್ಯಾಯಲಯವು ತಾತ್ಕಾಲೀಕ ತಡೆಯಾಜ್ಞೆ ಆದೇಶವಿದ್ದರೂ ಸಹ ఆ ಆದೇಶದ ಪ್ರತಿಯನ್ನು ಬೇರೆಯವರಿಗೆ ನೊಂದಣಿಯಾಗದಂತೆ ಅರ್ಜಿಯನ್ನು ಕೊಟ್ಟಿದ್ದರೂ ಸಹ ನೋಂದಣಿ ಮಾಡಿಕೊಡುತ್ತಾರೆ ಇಂತಹ ಹತ್ತಾರು ಅಕ್ರಮಗಳಿಗೆ ಭೂ ವ್ಯಾಜ್ಯ ಖಾತೆ ತಹಸೀಲ್ದಾರ್ ಕಚೇರಿಯೇ ಕೇಂದ್ರ ಸ್ಥಾನವಾಗಿರುತ್ತದೆ. ರೈತರಿಗೆ ದುರಸ್ತನ್ನು ಕಾಲಕಾಲಕ್ಕೆ ಮಾಡದೆ ಇರುವುದರಿಂದ ಹತ್ತಾರು ಸಂಕಷ್ಟಗಳನ್ನು ಅನುಭವಿಸುತ್ತಿದ್ದು, ಉಳ್ಳವರಿಗೆ ತನ್ನ ಉಳುಮೆ ಭೂಮಿಯನ್ನು ಕಡಿಮೆ ಬೆಲೆಗೆ ಕೊಟ್ಟು, ಅವರುಗಳಿಗೆ ದುರಸ್ತು ಮಾಡಿಸಿಕೊಳ್ಳಲು ತಿಳಿಸಿ ಅವರು ತಮ್ಮ ಹಣಬಲದಿಂದ ದುರಸ್ತು ಮಾಡಿಸಿ, ಅದನ್ನು ನಿವೇಶನಗಳನ್ನಾಗಿ ಪರಿವರ್ತಿಸಿ, ರೈತರಿಗೆ ಅನಾನೂಕೂಲ – ಉಂಟು ಮಾಡುತ್ತಿರುತ್ತಾರೆ ಎಂದರು.
ಕೆಲವು ಅಧಿಕಾರಿ ಸಿಬ್ಬಂದಿಗಳು ಹತ್ತಾರು ವರ್ಷಗಳು ಒಂದೇ ಸ್ಥಾನದಲ್ಲಿ ಕಚೇರಿಯಲ್ಲಿ ಕೆಲಸ ಮಾಡಲು ತಮಗೆ ಬೇಕಾದವರನ್ನು ಇಟ್ಟುಕೊಳ್ಳುವ ವ್ಯವಸ್ಥೆ ಇದೆ. ಇಂಥವರಿಗೆ ಸರ್ಕಾರದ ಯಾವುದೇ ನೀತಿ ನಿಯಮಗಳು ಅನ್ವಯಿಸುವುದಿಲ್ಲ. ಇತ್ತೀಚಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಹೆಸರಿಗಷ್ಟೆ ಸೀಮಿತವಾಗಿದ್ದು, ಅಲ್ಲಿ ರೈತರಿಗೆ ಯಾವುದೇ ರೀತಿಯ ಬೆಳೆಗಳ ಬಗ್ಗೆ ತರಬೇತಿಯನ್ನಾಗಲೀ, ಮಾಹಿತಿಯನ್ನಾಗಲೀ, ರೈತಸಭೆಗಳನ್ನಾಗಲೀ, ರೈತರ ಉಳುಮೆ ಭೂಮಿಗೆ ಮಾಡಿ ಪರಿಶೀಲಿಸುವುದಾಗಲೀ, ಮಾಡಿರುವುದಿಲ್ಲ.
ತಾಲೂಕಿನ ರೈತರ ಪುಮುಖ ಬೆಳೆ ತೆಂಗು, ತೆಂಗಿಗೆ ನುಸಿ ರೋಗ, ಕಾಂಡ ಕೊರೆಯುವ ರೋಗ ತೆಂಗಿನ ಗರಿಗಳಿಗೆ ಚುಕ್ಕೇ (ಬಿಳಿ ನೊಣ) ಮುಂತಾದ ಹಲವು ರೀತಿಯ ರೋಗಗಳು ರೈತರನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಆದರೆ ತೋಟಗಾರಿಕಾ ಇಲಾಖೆಗೆ ರೈತರ ಬಗ್ಗೆ ಕಾಳಜಿ ಇಲ್ಲ. ಹರಡಿರುವ ರೋಗಕ್ಕೆ ಔಷಧಿಗಳನ್ನು ನೀಡುವುದು ಮತ್ತು ಹರಡದಂತೆ ತಡೆಗಟ್ಟುವ ಯಾವುದೇ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ.
ರೈತರು ಇತ್ತೀಚೆಗೆ ಹೈನುಗಾರಿಕೆ ನಡೆಸಿ ಬದುಕು ನಡೆಸುತ್ತಿದ್ದಾರೆ. ಪಶು ಆಸ್ಪತ್ರೆಯವರು ಪಶುಗಳಿಗೆ ಚಿಕಿತ್ಸೆ ನೀಡಿದರೆ ಖಾಸಗಿಯವರ ರೀತಿಯಲ್ಲಿ ಸಾವಿರಾರು ರೂಗಳನ್ನು ತೆಗೆದುಕೊಳ್ಳುತ್ತಿದ್ದಾರೆ ತಾಲೂಕಿನಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಆಸ್ಪತ್ರೆಗಳಿಲ್ಲ ಇರುವ ಆಸ್ಪತ್ರೆಗಳ ಅಗತ್ಯವಿರುವಷ್ಟು ಉತ್ತಮ ವೈದ್ಯರು, ಸಿಬ್ಬಂದಿ, ಔಷಧಿ, ಗುಣಮಟ್ಟದ ಯಂತ್ರೋಪಕರಣ, ಬೆಡ್ ವ್ಯವಸ್ಥೆಗಳಿರುವುದಿಲ್ಲ.
ಚನ್ನರಾಯಪಟ್ಟಣ ತಾಲೂಕು ಕೇಂದ್ರವಾಗಿದ್ದು ಚಿಕಿತ್ಸೆ ಪಡೆಯಲು ಬರುವ ರೋಗಿಗಳು ಅನುಭವಿಸುವ ಸಮಸ್ಯೆಗಳು ಹೇಳತೀರದು. ತಾಲೂಕು ಕೇಂದ್ರದ ಆಸ್ಪತ್ರೆಗೆ ಇರಬೇಕಾದ ಅಗತ್ಯವಾದ ವೈದ್ಯರು ಸಿಬ್ಬಂದಿಗಳಿಲ್ಲ ಉತ್ತಮ ಗುಣಮಟ್ಟದ ಚಿಕಿತ್ಸೆ ಇಲ್ಲ ಯಂತ್ರೋಪಕರಣಗಳಿಲ್ಲ ಒಳ ರೋಗಿಯಾಗಿ ಚಿಕಿತ್ಸೆ ಪಡೆಯುವವರಿಗೆ ಉತ್ತಮ ಹಾಸಿಗೆ ಬೆಡ್ ಶೀಟ್ ಮಂಚಗಳಿರುವುದಿಲ್ಲ ಸ್ವಚ್ಛತೆಯಂತೂ ಅಯೋಮಯ ಒಟ್ಟಾರೆ ರೋಗಿಗಳು ನಿರ್ಲಕ್ಷತೆಗೆ ಒಳಗಾಗಿದ್ದಾರೆ. ಸರ್ಕಾರಿ ವೈದ್ಯಾಧಿಕಾರಿಗಳೇ ಖಾಸಗಿ ನರ್ಸಿಂಗ್ ಹೋಂ ಮಾಲೀಕರಾಗಿದ್ದಾರೆ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳನ್ನು ಖಾಸಗಿ ನರ್ಸಿಂಗ್ ಹೋಂ ಗೆ ಬರುವಂತೆ ಪ್ರೇರೇಪಿಸುತ್ತಾರೆ ಒಟ್ಟಾರೆ ತಾಲೂಕಿನ ಜನತೆಗೆ ಉಚಿತವಾಗಿ ಉತ್ತಮ ಚಿಕಿತ್ಸಾ ಸೌಲಭ್ಯ ನೀಡುವುದು ಸರ್ಕಾರದ ಆದ್ಯ ಜವಾಬ್ದಾರಿಯಾಗಿದ್ದು ಇದು ಗಗನ ಕುಸುಮವಾಗಿದೆ.
ಕಳಪೆ ಕಾಮಗಾರಿಯಿಂದ ಸರ್ಕಾರಿ ಶಾಲಾ ಕಟ್ಟಡ, ವಸತಿ ಶಾಲೆ, ಬಸ್ಸು ತಂಗುದಾಣಗಳು, ಸಮುದಾಯ ಭವನಗಳು, ಶಿಥಿಲಾವಸ್ಥೆಯಲ್ಲಿವೆ. ರಸ್ತೆಗಳು ಹದಗೆಟ್ಟಿವೆ ನಗರದಲ್ಲಿ ಬಹುಪಾಲು ವಾರ್ಡ್‌ಗಳ ರಸ್ತೆಗಳು ಗುಂಡಿ ಬಿದ್ದಿವೆ ಜನರು ತಿರುಗಾಡಲು ಯೋಗ್ಯವಾಗಿಲ್ಲ ಅವುಗಳ ದುರಸ್ತಿ ಕೆಲಸ ನಡೆಯುತ್ತಿಲ್ಲ. ನಗರದ ಜನತೆ ಉತ್ತಮ ರಸ್ತೆಗಳಿಲ್ಲದೆ ಪರದಾಡುವಂತೆ ಆಗಿದೆ ತಾಲೂಕು ಪಂಚಾಯಿತಿ ನಾಡಕಚೇರಿ ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ಭ್ರಷ್ಟಾಚಾರ ಲಂಚಗುಳಿತನ ತುಂಬಿ ತುಳುಕುತ್ತಿದೆ ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದರೂ ಸಹ ಜನಸಾಮಾನ್ಯರು ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಿಸಿಕೊಳ್ಳಲು ಅಲೆದಾಡುವ ಪರಿಸ್ಥಿತಿ ಇದೆ..
ರೈತರು ಸ್ವತಹ ಕೊಳವೆ ಬಾವಿಗಳನ್ನು ಕೊರೆಸಿಕೊಂಡು, ವ್ಯವಸಾಯ ಮಾಡಲು ಮುಂದಾದರೆ ಉಚಿತ ವಿದ್ಯುತ್ ಸಂಪರ್ಕ ಒದಗಿಸುವ ಸೌಲಭ್ಯಗಳನ್ನು ನೀಡುತ್ತಿಲ್ಲ ಸರ್ಕಾರ 7 ಗಂಟೆ ಕಾಲ ವಿದ್ಯುತ್ ಒದಗಿಸುತ್ತೇವೆಂದು ಸರ್ಕಾರ ಹೇಳಿದ್ದು, ಅದು ಸಹ ರೈತರಿಗೆ ದೊರಕುತ್ತಿಲ್ಲ ಕನಿಷ್ಠ 12 ಗಂಟೆ ಕಾಲ ನಿರಂತರ ವ್ಯವಸಾಯಕ್ಕೆ ವಿದ್ಯುತ್ ನೀಡುವ ವ್ಯವಸ್ಥೆಯಾಗಬೇಕಾಗಿದೆ.
ಸರ್ಕಾರ ಪೋಡಿ ಮುಕ್ತ ಗ್ರಾಮಗಳನ್ನು ಮಾಡುತ್ತೇವೆಂದು ಘೋಷಣೆ ಮಾಡಿದೆ. ಆದರೆ ಈವರೆಗೆ ಯಾವುದೇ ಗ್ರಾಮ ಪೋಡಿ ಮುಕ್ತವಾಗಿಲ್ಲ ಈ ಪ್ರಕ್ರಿಯೆ ಆಮೆ ಗತಿಯಲ್ಲಿ ನಡೆದರೆ ಇನ್ನೂ ಹತ್ತಾರು ವರ್ಷಗಳೇ ಬೇಕಾಗಬಹುದು.
ಒಟ್ಟಾರೆ ಹಲವು ಉದಾಹರಣೆ ಲೋಕೋಪಯೋಗಿ, ಅರಣ್ಯ ಇಲಾಖೆ, ತೋಟಗಾರಿಕೆ, ಕೃಷಿ ಇಲಾಖೆ, ಶಿಕ್ಷಣ ಇಲಾಖೆ, ನೀರಾವರಿ, ಎಪಿಎಂಸಿ ಮಾರುಕಟ್ಟೆ, ಸಾರಿಗೆ ಇಲಾಖೆ, ಸಿಡಿಪಿಓ ಕಚೇರಿಗಳು, ಹಲವು ಸರ್ಕಾರಿ ಕಚೇರಿಗಳಲ್ಲಿ ಹತ್ತಾರು ಗಂಭೀರ ಸಮಸ್ಯೆಗಳಿದ್ದು ಜನಸಾಮಾನ್ಯರ ಪರಿಸ್ಥಿತಿ ಹೆಸರಾಂತ ಸಾಹಿತಿ ನಿರ್ದೇಶಕರು ನಟರು ಆಗಿದ್ದ ಶ್ರೀ ಗಿರೀಶ್ ಕಾರ್ನಾಡ್ ಅವರ ಚಲನಚಿತ್ರ ತಬರನ ಕಥೆ ಯಂತಾಗಿದೆ. ಈ ಮೇಲ್ಮಾಣಿಸಿರುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೆ ಭ್ರಷ್ಟಾಚಾರ ರಹಿತ ಆಡಳಿತ ವ್ಯವಸ್ಥೆ ಇರಬೇಕು.
ತಾಲೂಕಿನಲ್ಲಿರುವ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಪಾರದರ್ಶಕ ಆಡಳಿತ ನಡೆಸುವಂತೆ ಆಗ್ರಹಿಸಿದರು.
ಇದನ್ನೂ ನೋಡಿ: ಸಾಮಾಜಿಕ ನ್ಯಾಯವನ್ನು ಜಾರಿ ಮಾಡಬೇಕಿರುವ ಸಂಸತ್ತು ಮಾಡುತ್ತಿರುವುದೇನು? ದಿನೇಶ್ ಅಮಿನ್ ಮಟ್ಟು Janashakthi Media