ಗಾಜಾದ ಮೇಲೆ ಇಸ್ರೇಲಿನ ಆಕ್ರಮಣ ಮುಂದುವರೆಯುತ್ತಲೇ ಇರುವುದು ಅತ್ಯಂತ ಆತಂಕದ ಸಂಗತಿ, ಇಸ್ರೇಲಿ ದಾಳಿಗಳು ತಕ್ಷಣವೇ ಕೊನೆಗೊಳ್ಳಬೇಕು ಮತ್ತು ಕದನ ವಿರಾಮವನ್ನು ಜಾರಿಗೊಳಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಮೇ 20ರಂದು ನೀಡಿರುವ ಹೇಳಿಕೆಯಲ್ಲಿ ಆಗ್ರಹಿಸಿದೆ.
ಕೇವಲ ಏಪ್ರಿಲ್ 2025 ರಲ್ಲಿಯೇ ಇಸ್ರೇಲ್ ವಾಯು ಮತ್ತು ನೆಲದಿಂದ ನಡೆದಿದ ದಾಳಿಗಳಲ್ಲಿ 2,037 ಪ್ಯಾಲೆಸ್ಟೀನಿಯನ್ನರು ಕೊಲ್ಲಲ್ಪಟ್ಟಿದ್ದಾರೆ. ಕಳೆದ ಎರಡು ದಿನಗಳಲ್ಲಿ, 200 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಪ್ರಾಣ ಕಳೆದುಕೊಂಡಿದ್ದಾರೆ. ಅಕ್ಟೋಬರ್ 7, 2023 ರಿಂದ, ಒಟ್ಟು 53,384 ಪ್ಯಾಲೆಸ್ಟೀನಿಯನ್ನರು ಕೊಲ್ಲಲ್ಪಟ್ಟಿದ್ದಾರೆ, ಅವರಲ್ಲಿ ಶೇ.94 ನಾಗರಿಕರು – ಶೇ. 51 ಮಕ್ಕಳು, ಶೇ.16 ಮಹಿಳೆಯರು ಮತ್ತು ಶೇ. 8 ವೃದ್ಧರು.
ಎರಡು ತಿಂಗಳಿಗಿಂತ ಹೆಚ್ಚು ಕಾಲ ನೆರವು ಟ್ರಕ್‌ಗಳ ಪ್ರವೇಶವನ್ನು ನಿರಾಕರಿಸಿದ ನಂತರ, ಇಸ್ರೇಲ್ ಗಾಜಾಗೆ ನಾಮಮಾತ್ರದ ಸಹಾಯ ತಲುಪಲು ಮಾತ್ರ ಅನುಮತಿ ಕೊಟ್ಟಿದೆ. ಪರಿಣಾಮವಾಗಿ, ಜನಗಳು ತೀವ್ರ ಮಟ್ಟದಲ್ಲಿ ಹಸಿದುಕೊಂಡಿರುವುದನ್ನು ಕಾಣುತ್ತಿದ್ದೇವೆ. ಅಮೆರಿಕದ ಬೆಂಬಲದಿಂದ ಉತ್ತೇಜನೆ ಪಡೆದಿರುವ ಇಸ್ರೇಲ್ ಈಗ ಇಡೀ ಗಾಜಾ ಪಟ್ಟಿಯನ್ನು ಆಕ್ರಮಿಸಿಕೊಳ್ಳುವ ಬಗ್ಗೆ ಮಾತಾಡುತ್ತಿದೆ.
ಬಿಜೆಪಿ ನೇತೃತ್ವದ ಭಾರತ ಸರ್ಕಾರವು ಇಸ್ರೇಲ್ ತನ್ನ ನರಮೇಧದ ದಾಳಿಗಳನ್ನು ನಿಲ್ಲಿಸಲು ಅದರ ಮೇಲೆ ಒತ್ತಡ ಹೇರಬೇಕು, ಯುದ್ಧ-ಅಪರಾಧಗಳು ಮತ್ತು ನರಮೇಧಕ್ಕಾಗಿ ಅದರ ನಾಯಕರನ್ನು ವಿಚಾರಣೆಗೆ ಗುರಿಪಡಿಸಬೇಕು ಎಂಬ ಆಗ್ರಹಕ್ಕೆ ದನಿಗೂಡಿಸಬೇಕು ಎಂದು ಆಗ್ರಹಿಸಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ, ಪ್ಯಾಲೆಸ್ಟೈನ್ ಜನರೊಂದಿಗೆ ಮತ್ತು 1967 ರ ಪೂರ್ವದ ಗಡಿಗಳು ಹಾಗೂ ಪೂರ್ವ ಜೆರುಸಲೆಮ್ ಅನ್ನು ರಾಜಧಾನಿಯಾಗಿ ಹೊಂದಿರುವ ಪ್ಯಾಲೆಸ್ಟೈನ್ ರಾಷ್ಟ್ರಕ್ಕಾಗಿ ಅವರ ನ್ಯಾಯಯುತ ಬೇಡಿಕೆಯೊಂದಿಗೆ ತನ್ನ ಸೌಹಾರ್ದವನ್ನು ಪುನರುಚ್ಚರಿಸಿದೆ.