ಭಾರತ ಉಪಖಂಡದಲ್ಲಿ ಭಾರತ ಮಾತ್ರವೇ ಏಕೆ ಈ ಬಾರಿ ಕೋವಿಡ್ ನಿಂದ ತೀವ್ರ ಹಾನಿಗೊಳಗಾಗಿದೆ?

ಭಾರತ ಸರಕಾರ ಏನು ಮಾಡಿತು? ತಟ್ಟೆ ಬಡಿಯಿತು, ಜಾಗಟೆ ಬಾರಿಸಿತು !! ಒಬ್ಬ ನಟ ಹಾಗೂ ಅವನ ಮ್ಯಾನೇಜರಳ ಸಾವಿನ ಬಗ್ಗೆ ವ್ಯಾಪಕ ಚರ್ಚೆ ಮಾಡಿತು !!ಭಂಗಿ ಸೊಪ್ಪು ಹೊಂದಿದವರನ್ನು ಬಂಧಿಸಿತು !!!

 

– ಕಾಂತಸ್ವಾಮಿ ಬಾಲಸುಬ್ರಹ್ಮಣ್ಯಂ

(ಅನುವಾದ : ಟಿ.ಸುರೇಂದ್ರ ರಾವ್)

ಮಾರ್ಚ್ 2020 – ಚೈನಾದ ಫೋಸನ್ ಫಾರ್ಮಾವು ಬಯೋಂಟೆಕ್ ನೊಂದಿಗೆ 135 ಮಿಲಿಯನ್ ಡಾಲರ್ ಹೂಡಿಕೆ ಮಾಡಿ 300 ಮಿಲಿಯನ್ ಡೋಸ್ ಎಂ.ಆರ್.ಎನ್.ಎ. ಲಸಿಕೆ ಉತ್ಪಾದಿಸಲು ವ್ಯಾಪಾರ ಒಪ್ಪಂದವನ್ನು ಮಾಡಿಕೊಂಡಿತು;

ಮೇ 2020 -ಅಮೆರಿಕದ ಫೆಡರಲ್ ಸರ್ಕಾರವು 12 ಬಿಲಿಯನ್ ಡಾಲರನ್ನು 6 ಫಾರ್ಮಾ ಕಂಪನಿಗಳಲ್ಲಿ ಹೂಡಿಕೆ ಮಾಡಿ ಅಮೆರಿಕದ ಜನಸಮುದಾಯಕ್ಕೆ ಲಸಿಕೆ ಶೀಘ್ರಗತಿಯಲ್ಲಿ ಉತ್ಪಾದಿಸಲು  ಒಪ್ಪಂದ ಮಾಡಿಕೊಂಡಿದೆ

ಯೂರೋಪಿಯನ್ ಯೂನಿಯನ್ 210 ಮಿಲಿಯನ್ ಡಾಲರನ್ನು ಆಸ್ಟ್ರಾ ಜನೆಕಾ ಹಾಗೂ ಆಕ್ಸ್ ಫರ್ಡ್ ನಲ್ಲಿ ಹೂಡಿಕೆ ಮಾಡಿ ಲಸಿಕೆ ತಯಾರಿಸಲು ಹೇಳಿದೆ;

ರಷ್ಯಾವು 125 ಮಿಲಿಯನ್ ಡಾಲರನ್ನು ಗಮಾಲಯ ಸಂಸ್ಥೆಯಲ್ಲಿ ಹೂಡಿಕೆ ಮಾಡಿ ಲಸಿಕೆ ತಯಾರಿಯ ಸಿದ್ಧತೆ ನಡೆಸಿದೆ;

ಚೈನಾವು 562 ಮಿಲಿಯನ್ ಡಾಲರನ್ನು 4 ಫಾರ್ಮಾ ಕಂಪನಿಗಳಲ್ಲಿ ಹೂಡಿಕೆ ಮಾಡಿ ಲಸಿಕೆ ಕಂಡು ಹಿಡಿದು ತಯಾರಿಸಲು ಹೇಳಿದೆ;

ಭಾರತ ಸರ್ಕಾರ ಏನು ಮಾಡಿತು???

ತಟ್ಟೆ ಬಡಿಯಿತು, ಜಾಗಟೆ ಬಾರಿಸಿತು !!!

ಒಬ್ಬ ನಟ ಹಾಗೂ ಅವನ ಮ್ಯಾನೇಜರಳ ಸಾವಿನ ಬಗ್ಗೆ ವ್ಯಾಪಕ ಚರ್ಚೆ ಮಾಡಿತು !!

ಭಂಗಿ ಸೊಪ್ಪು ಹೊಂದಿದವರನ್ನು ಬಂಧಿಸಿತು !!!

ಯಾರ ಪುಣ್ಯವೋ ಗೊತ್ತಿಲ್ಲ, ಆಸ್ಟ್ರಾ ಜನೆಕಾವು ಒಂದು ಬಿಲಿಯನ್ ಡೋಸ್ ಗಳ ಲಸಿಕೆ ತಯಾರಿಸಲು ಭಾರತದ ಸೀರಮ್ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡಿತು ಮತ್ತು ಆದಾರ್ ಪೂನಾವಾಲಾ ಒಂದು ಅಡ್ಡ ವ್ಯವಹಾರ ಮಾಡಿಕೊಂಡು ಈ ಬಿಲಿಯನ್ ಡೋಸ್ ಗಳ ಶೇಕಡಾ ಹತ್ತರಷ್ಟನ್ನು ಭಾರತ ಸರ್ಕಾರಕ್ಕೆ ಪೂರೈಕೆ ಮಾಡುವುದಾಗಿ ಒಪ್ಪಂದ  ಮಾಡಿಕೊಂಡರು.

ಆಗಲೂ ನಾವು ನಮ್ಮ ಲಸಿಕೆ ಪೂರೈಕೆಗೆ ಯಾವುದೇ ಬೇಡಿಕೆ ಇಡಲಿಲ್ಲ. ಮೋದಿ ಸರ್ಕಾರ ಒಂದು ಬಿಲಿಯನ್ ಡೋಸ್‌ಗಳಿಗೆ ಬೇಡಿಕೆ ಸಲ್ಲಿಸಿ, 2.18 ಬಿಲಿಯನ್ ಡಾಲರ್ ಸಂದಾಯ ಮಾಡಬಹುದಿತ್ತು. ಆದರೆ ಮಾಡಲಿಲ್ಲ !!

ಚೇತನ್ ಭಗತ್ ಅವರ ಮಾತಿನಲ್ಲಿ ಹೇಳಬೇಕೆಂದರೆ, ‘ಏನಾದರೂ ಮಾಡೋಣ ಬಿಡಿ’ ಅಂತ ನಾವು ಯಾವಾಗಲೂ ಆಲೋಚನೆ ಮಾಡುತ್ತೇವೆ.

ಇದನ್ನೂ ಓದಿ : ಸಮಯಕ್ಕೆ ಸರಿಯಾಗಿ ಬೆಡ್‌, ಚಿಕಿತ್ಸೆ ಸಿಗದೆ ಮನೆಯಲ್ಲೆ 600 ಕೋವಿಡ್‌ ರೋಗಿಗಳ ಸಾವು

ಸೆಪ್ಟೆಂಬರ್ 2020 – ತಾನು ಲಸಿಕೆ ಕಂಡುಹಿಡಿಯಬಹುದು ಎಂದು ಕೊವಾಕ್ಸಿನ್ ಆಲೋಚನೆ ಮಾಡುತ್ತದೆ. ಆದರೂ ಭಾರತ ಸರ್ಕಾರ ಬೇಗ ಕೆಲಸ ಆಗಲಿ ಎಂದು, ಭಾರತ್ ಬಯೋಟೆಕ್ ನಲ್ಲಿ ಐವತ್ತು ಪೈಸೆಯನ್ನೂ ಹೂಡಲಿಲ್ಲ.

ನವೆಂಬರ್ 2020 – ಸಿನೊವಾಕ್, ಸಿನೋಫಾರ್ಮ್, ಸ್ಪುಟ್ನಿಕ್, ಆಸ್ಟ್ರಾಜನೆಕ್ ಮತ್ತು ಫಿಜರ್ ಹಾಗೂ ಮಾಡೆರ್ನಾ ಎಲ್ಲರೂ ಲೆಕ್ಕ ಚುಕ್ತಾ ಮಾಡಿದ್ದರು, ಅವರ ಲಸಿಕೆಗಳು ಸಿದ್ಧವಾಗಿದ್ದವು !!

 

ಭಾರತ ಏನು ಮಾಡಿತು?

ಈಗಲೂ ಭಾರತವು ಸೀರಂ ಸಂಸ್ಥೆಗೆ ಲಸಿಕೆಗಾಗಿ ಬೇಡಿಕೆ ಸಲ್ಲಿಸಲು ನಿರಾಕರಿಸಿತು.

ಭಾರತ್ ಬಯೋಟೆಕ್ ನಿಂದ ಕೂಡ ಕೊವಾಕ್ಸಿನ್ ಗೆ ಬೇಡಿಕೆ ಇಡಲಿಲ್ಲ.

ದೀಪಾವಳಿ ಬಂತು.

ಹುಚ್ಚುತನದ ಕೃಷಿ ಕಾನೂನನ್ನು ಜಾರಿಗೆ ತಂದಿತು, ಅದರ ವಿರುದ್ಧ ತಿಂಗಳಿಂದ ತಿಂಗಳಿಗೆ ರೈತರ ಪ್ರತಿಭಟನೆ ಹೆಚ್ಚಾಗುತ್ತಾ ಹೋಯಿತು.

ಜನವರಿ – ಮಾರ್ಚ್ 2021 – ಚೈನಾ, ರಷ್ಯಾ, ಅಮೆರಿಕ, ಯೂರೋಪಿಯನ್ ಯೂನಿಯನ್ ಅದಾಗಲೇ ಉತ್ಪಾದನೆಯಾಗಿ ಪೂರೈಕೆಯಾಗಿದ್ದ ಲಸಿಕೆಯನ್ನು ಸಾಮೂಹಿಕವಾಗಿ ನೀಡಲು ಮುಂದಾದವು.

 

ಭಾರತ ಸರ್ಕಾರ ಏನು ಮಾಡುತ್ತಿತ್ತು?

ಆಸ್ಟ್ರಾಜನಿಕ ಜತೆಗಿನ ಒಪ್ಪಂದದ ಭಾಗವಾಗಿ ಭಾರತವು ಡೋಸ್ ಗಳನ್ನು ಪಡೆಯಿತು (ಭಾರತ ಸರ್ಕಾರದಿಂದ ಒಂದು ಬೇಡಿಕೆಯೂ ಇರಲಿಲ್ಲ)

ಭಾರತವು ಮಾನವೀಯತೆಯನ್ನು ರಕ್ಷಿಸುವುದಾಗಿ ಭಾರತ ಸರ್ಕಾರ ಭಾಷಣ ಮಾಡಿತು.

ತನ್ನ ವ್ಯಾಕ್ಸಿನ್ ರಾಜತಾಂತ್ರಿಕತೆಯ ಭಾಗವಾಗಿ 100 ಮಿಲಿಯನ್‌ ಡೋಸ್ ಲಸಿಕೆಯಲ್ಲಿ 25 ಮಿಲಿಯನ್ ಡೋಸ್ ಗಳನ್ನು  ಭಾರತವು ತನ್ನ ನೆರೆಹೊರೆಯ ದೇಶಗಳಿಗೆ ರಫ್ತು ಮಾಡಿತು !

ಭಾರತ ಸೀರಮ್ ಸಂಸ್ಥೆಯು ಒಂದು ಖಾಸಗಿ ಕಂಪನಿಯಾಗಿ 34 ಮಿಲಿಯನ್ ಡೋಸ್ ಗಳನ್ನು ಯೂರೋಪಿಯನ್ ಯೂನಿಯನ್ ಗೆ ಮತ್ತು 18 ಮಿಲಿಯನ್ ಡೋಸ್ ಗಳನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಕಳಿಸಿತು (ಭಾರತ ಸರ್ಕಾರಕ್ಕೆ ಸಂಬಂಧವಿಲ್ಲದ್ದು)

 

ಚುನಾವಣಾ ಬಹಿರಂಗ ಸಭೆಗಳು !!

ಶಕ್ತಿಹೀನ ಚುನಾವಣಾ ಆಯೋಗದ ಅಡಿಯಲ್ಲಿ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ರಾಜ್ಯಗಳಲ್ಲಿ ದೊಡ್ಡ ದೊಡ್ಡ ಚುನಾವಣಾ ಬಹಿರಂಗ ಸಭೆಗಳು. ಸುರಕ್ಷತೆಗಾಗಿ ಮಾಸ್ಕ್ ಧರಿಸುವ, ದೈಹಿಕ ಅಂತರ ಕಾಯ್ದುಕೊಳ್ಳುವ ಕುರಿತು  ಚಕಾರವೆತ್ತಲಿಲ್ಲ.

ಅಲ್ಲಿಯವರೆಗೂ ಆಸ್ಟ್ರಾಜನಿಕ ಅಥವಾ ಸೀರಮ್ ಸಂಸ್ಥೆಗೆ ಲಸಿಕೆಗಾಗಿ ಬೇಡಿಕೆ ಭಾರತ ಸರ್ಕಾರದಿಂದ ಹೋಗಲಿಲ್ಲ !

ಏಪ್ರಿಲ್ 2021 – ಅಮೆರಿಕ, ಯೂರೋಪಿಯನ್ ಯೂನಿಯನ್, ಚೈನಾ, ರಷ್ಯಾಗಳಲ್ಲಿ ಸಾಮೂಹಿಕ ಲಸಿಕೆ ನೀಡುವ ಕಾರ್ಯಕ್ರಮಗಳು ತೀವ್ರಗತಿಯಲ್ಲಿ ನಡೆದವು, ಅಲ್ಲಿ, ಕಂಡುಹಿಡಿಯಲ್ಪಟ್ಟ ಮತ್ತು ತಯಾರಾದ 4 ರಿಂದ 5 ಲಸಿಕೆಗಳನ್ನು ಅದಾಗಲೇ ಅವರು ಹೊಂದಿದ್ದರು.

ಭಾರತ ಏನು ಮಾಡಿತು?

ಅದಾಗಲೇ ಹಣ ಸಂದಾಯ ಮಾಡುವ ಮೂಲಕ ಇತರ ದೇಶಗಳಿಗೆ ಮೀಸಲಾಗಿದ್ದ ಲಸಿಕೆಯ ರಫ್ತನ್ನು ತಡೆಹಿಡಿಯುವ ಮೂಲಕ ಭಾರತ ಸರ್ಕಾರ ಅಪಹರಿಸಿತು. ಯೂರೋಪಿಯನ್ ಯೂನಿಯನ್ನಿಗೆ ಮೀಸಲಾಗಿದ್ದ (78 ಮಿಲಿಯನ್) ಮತ್ತು ವಿಶ್ವ ಆರೋಗ್ಯ ಸಂಸ್ಥೆಗೆ ಮೀಸಲಾಗಿದ್ದ ( 22 ಮಿಲಿಯನ್) ಹೀಗೆ ಒಟ್ಟು 100 ಮಿಲಿಯನ್ ಲಸಿಕೆಯನ್ನು ಭಾರತ ಸರ್ಕಾರ ಅಪಹರಿಸಿತು. ಇದು ಪೂನಾವಾಲಾ ಯೂರೋಪಿಯನ್ ಯೂನಿಯನ್ನಿನೊಂದಿಗೆ ಮಾಡಿಕೊಂಡಿದ್ದ ಒಪ್ಪಂದ ಜಾರಿಗೆ ವಿಳಂಬ ಉಂಟುಮಾಡಿತು.

ಏತನ್ಮಧ್ಯೆ ಸರ್ಕಾರವೇ ಪ್ರಾಯೋಜನೆ ಮಾಡಿದ ಕುಂಭಮೇಳ ಭರ್ಜರಿ ಸಂಭ್ರಮ ಸಡಗರದೊಂದಿಗೆ ನಡೆಯಿತು.

ಆಗ, ಅಂತಿಮವಾಗಿ ಅಪಹರಣ ಮಾಡಿದ್ದ 100 ಮಿಲಿಯನ್ ಲಸಿಕೆಗಳಿಗೆ ಭಾರತ ಸರ್ಕಾರ ಹಣ ಸಂದಾಯ ಮಾಡಿತು ಮತ್ತು ಇನ್ನೂ 110 ಮಿಲಿಯನ್ ಲಸಿಕೆಗಳಿಗೆ ಬೇಡಿಕೆ ಇಟ್ಟಿತು. ಈಗಲೂ ನಮ್ಮ ದೇಶದ ಎಲ್ಲರಿಗೂ ಲಸಿಕೆ ನೀಡಲು ಅಗತ್ಯವಾದ 400/500/600 ಮಿಲಿಯನ್ ಲಸಿಕೆಗೆ ಬೇಡಿಕೆ ಇಡದೆ 110 ಮಿಲಿಯನ್ ಗೆ ಮಾತ್ರ ಬೇಡಿಕೆ ಸಲ್ಲಿಸಿದೆ.

ಒತ್ತಡಕ್ಕೆ ಒಳಗಾದ ಭಾರತ ಸರ್ಕಾರ ಸೀರಮ್ ಸಂಸ್ಥೆಗೆ ರೂ.3000 ಕೋಟಿ ರೂಪಾಯಿ ಮಂಜೂರು ಮಾಡುತ್ತದೆ.

 

ಇವತ್ತಿನ ಸನ್ನಿವೇಶ.

ಅಮೆರಿಕದಲ್ಲಿ ಜುಲೈ 2021 ರ ಹೊತ್ತಿಗೆ 60% ವಯಸ್ಕರಿಗೆ ಲಸಿಕೆ ಹಾಕಲಿದೆ.

ಸೆಪ್ಟೆಂಬರ್ 2021 ರ ಹೊತ್ತಿಗೆ 70% ವಯಸ್ಕರಿಗೆ ಲಸಿಕೆ ಹಾಕಲು ಯೂರೋಪಿಯನ್ ಯೂನಿಯನ್ ಯೋಜಿಸಿದೆ.

ಚೈನಾವು ತನ್ನ ದೇಶದ 40% ಜನರಿಗೆ ಮತ್ತು ಜಗತ್ತಿನ ಜನಸಂಖ್ಯೆಯ 200 ಮಿಲಿಯನ್ ಜನರಿಗೆ ಸೆಪ್ಟೆಂಬರ್ 2021 ರ ಹೊತ್ತಿಗೆ ಲಸಿಕೆ ನೀಡುವ ಹಾದಿಯಲ್ಲಿದೆ.

ರಷ್ಯಾವು ತನ್ನ ಜನಸಂಖ್ಯೆಯ 50% ಜನರಿಗೆ ಸೆಪ್ಟೆಂಬರ್ 2021 ರ ಹೊತ್ತಿಗೆ ಮತ್ತು ಜಗತ್ತಿನ 700 ಮಿಲಿಯನ್ ಜನರಿಗೆ ಡಿಸೆಂಬರ್ 2021 ರ ಹೊತ್ತಿಗೆ ಲಸಿಕೆ ನೀಡುವ ದಾರಿಯಲ್ಲಿದೆ.

ಪೂನಾವಾಲ ಭಾರತದಿಂದ ಹೊರಹೋಗಿದ್ದಾರೆ.

ನಮ್ಮಲ್ಲಿ ಈಗ ಲಸಿಕೆ ಪೂರೈಕೆ ಇಲ್ಲ. ಇತರೆ ದೇಶಗಳನ್ನು ಬೇಡುವುದಲ್ಲದೆ ನಮಗೆ ಬೇರೆ ಗತಿಯಿಲ್ಲ.

ನಾವು ಈಗ ಸೀರಮ್ ನಿಂದ ಕೇವಲ 11 ಕೋಟಿ  ಲಸಿಕೆಗೆ ಹಣ ಕೊಟ್ಟಿದ್ದೇವೆ, ಆದರೆ ಅದರಿಂದ 20 ರಿಂದ 40 ಕೋಟಿ ಲಸಿಕೆಯ ಬದ್ಧತೆಯನ್ನು ಬೇಡುತ್ತಿದ್ದೇವೆ. ಪೂನಾವಾಲ ಬ್ರಿಟನ್ನಿನಲ್ಲೇ ಅಲ್ಲಿಯ ಪೌರತ್ವ ಪಡೆದು ಉಳಿದುಕೊಳ್ಳುವ ಸಾಧ್ಯತೆಯಿದ್ದು, ಹೆಚ್ಚೆಂದರೆ ಯೂರೋಪಿಯನ್ ಯೂನಿಯನ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಗೆ ತನ್ನ ಬದ್ಧತೆಯನ್ನು ಪೂರೈಸಬಹುದು.

ನಾವು ಪ್ರತಿನಿತ್ಯ ನಾಲ್ಕು ಲಕ್ಷ ಕೋವಿಡ್ ಪ್ರಕರಣಗಳನ್ನು ಮತ್ತು ನಾಲ್ಕು ಸಾವಿರ ಸಾವಿನ ಪ್ರಕರಣಗಳನ್ನು ಹೊಂದಿದ್ದೇವೆ.

ಹಾಗಾದರೆ, ಭಾರತ ಏನು ಮಾಡಲಿಲ್ಲ?

ಬೇರೆ ದೇಶಗಳಂತೆ ದೊಡ್ಡ ಔಷಧಿ ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡು ಹಣ ಹೂಡಿಕೆ ಮಾಡಲಿಲ್ಲ.

ಎಚ್ಚರಿಕೆಗಳನ್ನು ಕಡೆಗಣಿಸಿತು. ಕೆಲವು ಮೂರ್ಖ ಪುಢಾರಿಗಳು ಹಾಗೂ ಎಲುಬಿಲ್ಲದ ಬಾಲಬಡುಕ ಚುನಾವಣಾ ಆಯೋಗಗಳು ದೊಡ್ಡ ಬಹಿರಂಗ ಸಭೆಗಳನ್ನು ನಡೆಸಲು ಅನುವು ಮಾಡಿಕೊಡುವುದರ ಮೂಲಕ ಪರಿಸ್ಥಿತಿಯನ್ನು ಹದಗೆಡಿಸಿದೆ. ಘನ ಸರ್ಕಾರದ ಗೃಹ ಸಚಿವಾಲಯ ಪ್ರಾಯೋಜಿತ ಕುಂಭಮೇಳವು ಕೋವಿಡ್ ವ್ಯಾಪಕವಾಗಿ ಹರಡಲು ಅವಕಾಶ ಮಾಡಿಕೊಟ್ಟಿದೆ.

ಇವತ್ತಿನವರೆಗೂ ಭಾರತವು ಜಗತ್ತಿನ ಯಾವ ದೇಶದೊಂದಿಗೂ ಲಸಿಕೆಯ ನಿರಂತರ ಪೂರೈಕೆಗೆ ಬೇಡಿಕೆ ಸಲ್ಲಿಸಿಲ್ಲ.

ಈಗಲೂ ಭಾರತ ಸರ್ಕಾರವು ಯಾವುದೇ ದೊಡ್ಡ ಖಾಸಗಿ ಅಥವಾ ಸಾರ್ವಜನಿಕ ಔಷಧಿ ಕಂಪನಿಯೊಂದಿಗೆ ಲಸಿಕೆಗಾಗಿ ಒಪ್ಪಂದ ಅಥವಾ ಸಹಯೋಗ ಮಾಡಿಕೊಂಡಿಲ್ಲ.

ಆದ್ದರಿಂದಲೇ ಭಾರತವು ಈಗ ಮನುಷ್ಯ ಜೀವಗಳ ರೂಪದಲ್ಲಿ ದುಬಾರಿ ಬೆಲೆ ತೆರಬೇಕಾಗಿದೆ.

Donate Janashakthi Media

Leave a Reply

Your email address will not be published. Required fields are marked *