ನವದೆಹಲಿ :ವೆನೆಜುವೆಲಾ ವಿರುದ್ಧ ಯುಎಸ್ ಆಕ್ರಮಣ ಮತ್ತು ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರ ಅಪಹರಣವನ್ನು ಎಡಪಕ್ಷಗಳು ದೇಶದ ದು ಎಡಪಕ್ಷಗಳು ಬಲವಾಗಿ ಖಂಡಿಸಿವೆ. ಇದು ವಿಶ್ವಸಂಸ್ಥೆಯ ಚಾರ್ಟರನ್ನು ಸ್ಪಷ್ಟವಾಗಿ ಉಲ್ಲಂಘಿಸುವ, ಸಾರ್ವಭೌಮ ರಾಷ್ಟ್ರದ ಮೇಲೆ ನಡೆಸಿರುವ ದಾಳಿ ಎಂದುಈ ಎಡಪಕ್ಷಗಳ ಪ್ರಧಾನ ಕಾರ್ಯದರ್ಶಿಗಳ ಜಂಟಿ ಹೇಳಿಕೆ ವರ್ಣಿಸಿದೆ.
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಭಾಷಣದಲ್ಲಿ, ವೆನೆಜುವೆಲಾದ ತೈಲ ನಿಕ್ಷೇಪಗಳನ್ನು ವಶಪಡಿಸಿಕೊಳ್ಳುವುದಾಗಿ ಹೇಳಿರುವುದು ಈ ಆಕ್ರಮಣದ ಹಿಂದಿನ ನಿಜವಾದ ಆಶಯಗಳನ್ನು ಬಯಲಿಗೆ ತಂದಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಒಂದು ಹೆಜ್ಜೆ ಮುಂದೆ ಹೋಗಿ ಕ್ಯೂಬಾ ಮತ್ತು ಮೆಕ್ಸಿಕೊ ಅವರ ಮುಂದಿನ ಗುರಿಯಾಗಿರುತ್ತಾರೆ ಎಂದು ಎಚ್ಚರಿಸಿದರು. ಅಮೆರಿಕದ ‘ರಾಷ್ಟ್ರೀಯ ಭದ್ರತಾ ರಣನೀತಿ 2025’ ಬಿಡುಗಡೆಯಾದ ಕೆಲವು ದಿನಗಳ ನಂತರ ಬರುತ್ತಿರುವ ಈ ಹೇಳಿಕೆಗಳು, ಯುಎಸ್ ಸಾಮ್ರಾಜ್ಯಶಾಹಿ ಇಡೀ ಪ್ರಪಂಚದ ಮೇಲೆ ತನ್ನ ಪ್ರಾಬಲ್ಯವನ್ನು ಹೇರುವ ಪ್ರಯತ್ನದಲ್ಲಿ ಮಿಲಿಟರಿ ದಾಳಿಗಳನ್ನು ನಡೆಸಲೂ ಹೇಸುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತವೆ. ಇಡೀ ಪಶ್ಚಿಮ ಗೋಳಾರ್ಧವನ್ನು ತನ್ನ ಹಿತ್ತಲಿನಂತೆ ಪರಿಗಣಿಸುವ ಮತ್ತು ತನ್ನದೇ ಮಾತು ನಡೆಯಬೇಕು ಎನ್ನುವ ಕುಖ್ಯಾತ ಮನ್ರೋ ಸಿದ್ಧಾಂತದ ಟ್ರಂಪ್ ಉಪಬಂಧವನ್ನು ಹೇರಲು ಯುಎಸ್ ಬಯಸುತ್ತಿದೆ ಎಂದು ಎಡಪಕ್ಷಗಳ ಹೇಳಿಕೆ ವಿಶ್ಲೇಷಿಸಿದೆ.
ವೆನೆಜುವೆಲಾದಿಂದ ಬರುತ್ತಿರುವ ವರದಿಗಳು ಜನರು ಅಮೆರಿಕದ ಆಕ್ರಮಣದ ವಿರುದ್ಧ ಮತ್ತು ತಮ್ಮ ದೇಶದ ಸಾರ್ವಭೌಮತ್ವದ ರಕ್ಷಣೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಜ್ಜುಗೊಳ್ಳುತ್ತಿದ್ದಾರೆ ಎಂದು ಸೂಚಿಸುತ್ತವೆ. ವೆನೆಜುವೆಲಾದ ಹೋರಾಟ ನಿರತ ಜನರಿಗೆ ಭಾರತದ ಈ ಐದು ಎಡಪಕ್ಷಗಳು ಹಾರ್ದಿಕ ಬೆಂಬಲ ಮತ್ತು ಸೌಹಾರ್ದವನ್ನು ವ್ಯಕ್ತಪಡಿಸಿವೆ.
“ಎಡ ಪಕ್ಷಗಳಾದ ನಾವು, ಅಮೆರಿಕದ ಆಕ್ರಮಣದ ವಿರುದ್ಧ ಮತ್ತು ಲ್ಯಾಟಿನ್ ಅಮೆರಿಕದ ಜನರೊಂದಿಗೆ ಸೌಹಾರ್ದ ವ್ಯಕ್ತಪಡಿಸಿ ದೇಶಾದ್ಯಂತ ಪ್ರತಿಭಟನೆಗಳಿಗೆ ಕರೆ ನೀಡುತ್ತೇವೆ. ನಮ್ಮ ದೇಶದ ಎಲ್ಲಾ ಶಾಂತಿಪ್ರಿಯ, ಸಾಮ್ರಾಜ್ಯಶಾಹಿ ವಿರೋಧಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಜ್ಜುಗೊಳ್ಳಬೇಕು ಮತ್ತು ಈ ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ನಾವು ಮನವಿ ಮಾಡುತ್ತೇವೆ. ಭಾರತ ಸರ್ಕಾರ ಅಮೆರಿಕದ ಆಕ್ರಮಣವನ್ನು ಖಂಡಿಸುವ ಪ್ರಪಂಚದಾದ್ಯಂತದ ದೇಶಗಳೊಂದಿಗೆ ದನಿಗೂಡಿಸಬೇಕು ಮತ್ತು ವೆನೆಜುವೆಲಾದೊಂದಿಗೆ ದೃಢವಾಗಿ ನಿಲ್ಲಬೇಕು” ಎಂದು ಸಿಪಿಐ (ಎಂ), ಸಿಪಿಐ, ಸಿಪಿಐ (ಎಂ-ಎಲ್)ಲಿಬರೇಶನ್, ಎಐಎಫ್‌ಬಿ ಮತ್ತು ಆರ್‌ಎಸ್‌ಪಿ ಪ್ರಧಾನ ಕಾರ್ಯದರ್ಶಿಗಳಾದ ಎಂ ಎ ಬೇಬಿ, ಡಿ ರಾಜಾ, ದೀಪಂಕರ್ ಭಟ್ಟಾಚಾರ್ಯ, ಜಿ ದೇವರಾಜನ್ ಮತ್ತು ಮನೋಜ್ ಭಟ್ಟಾಚಾರ್ಯ ತಮ್ಮ ಜಂಟಿ ಹೇಳಿಕೆಯಲ್ಲಿ ಹೇಳಿದ್ದಾರೆ.
