-ಡಾ. ಅರುಣ್ ಜೋಳದಕೂಡ್ಲಗಿ
ಇದೀಗ ನಾಡಿಗೆ `ಕರ್ನಾಟಕ’ ಎಂಬ ನಾಮಕರಣ ಆಗಿ 50 ವರ್ಷ ತುಂಬಿತು. ಹಾಗಾಗಿ ಈ ಸಲದ ಕರ್ನಾಟಕ ರಾಜ್ಯೋತ್ಸವ ವಿಶೇಷವಾಗಿದೆ. ಕರ್ನಾಟಕ ಸರಕಾರ ನವಂಬರ್ 1, 2023 ರಿಂದ 2024 ರ ನವಂಬರ್ 1 ರ ತನಕ ಕರ್ನಾಟಕ ಸುವರ್ಣ ಆಚರಿಸಿತು. ಕರ್ನಾಟಕ ಕಟ್ಟಿದ 50 ಪುರುಷರು 50 ಮಹಿಳೆಯರಿಗೆ ‘ಕರ್ನಾಟಕ ಸುವರ್ಣ ಮಹೋತ್ಸವ ಪ್ರಶಸ್ತಿ’ ಗಳನ್ನು ನೀಡಿ ಗೌರವಿಸುತ್ತಿದೆ. ಎಂದಿನಂತೆ ನವಂಬರ್ ತಿಂಗಳಲ್ಲಿ ಕನ್ನಡ ಮತ್ತು ಕರ್ನಾಟಕದ ಬಗೆಗಿನ ಅಭಿಮಾನದ ಬಲೂನಿನಂತಹ ಉಬ್ಬುಮಾತುಗಳು ಈಗಲೂ ಬರುತ್ತವೆ. ಹಾಗಾಗಿ ಈ ಬಲೂನಿನಂತಹ ಉಬ್ಬು ಮಾತುಗಳಿಗೆ ಸೂಜಿ ಚುಚ್ಚುವ ಸಣ್ಣ ಪ್ರಯತ್ನ ಮಾಡೋಣ. ಸುವರ್ಣ
ಎಲ್ಲರಿಗೂ ತಿಳಿದಂತೆ ಕನ್ನಡ ಮತ್ತು ಕರ್ನಾಟಕ ಎರಡೂ ಭಿನ್ನವಾದವು. ಕನ್ನಡ ರಾಜ್ಯೋತ್ಸವ ಅಂದಾಗ ಕನ್ನಡ ಭಾಷೆ ಮಾತನಾಡುವ ಸಮುದಾಯಕ್ಕೆ ಆಧ್ಯತೆ ಹೆಚ್ಚಾಗುತ್ತದೆ. ಅದೇ ಹೊತ್ತಿಗೆ ಇತರೆ ಭಾಷೆಗಳ ಜತೆ ಎದುರಾಳಿ ಕಲ್ಪನೆ ಮೂಡುತ್ತದೆ. ಆದರೆ ಕರ್ನಾಟಕ ರಾಜ್ಯೋತ್ಸವ ಎಂದಾಗ ಕರ್ನಾಟಕದ ಗಡಿಭಾಗದೊಳಗೆ ಕನ್ನಡ ಮಾತನಾಡುವ ಬಹುಸಂಖ್ಯಾತ ಭಾಷಿಕರನ್ನು ಒಳಗೊಳ್ಳುತ್ತದೆ. ತೆಲುಗು, ಮರಾಠಿ, ಉರ್ದು, ತುಳು, ತಮಿಳು, ಇಂಗ್ಲೀಷ್, ಹಿಂದಿ, ಕೊಡವ, ಮಲೆಯಾಳ, ಕೊಂಕಣಿ ಮುಂತಾದ ಇತರೆ ಭಾಷಿಕರನ್ನೂ, ಜೇನುಕುರುಬರ ಜೇನುನುಡಿ, ಗಂಟಿಚೋರರ ತುಡುಗು ಭಾಷೆಗಳನ್ನು ಒಳಗೊಂಡಂತೆ ಎಪ್ಪತ್ತಕ್ಕಿಂತ ಹೆಚ್ಚಿರುವ ಬುಡಕಟ್ಟು ಸಮುದಾಯಗಳ ಆಡು ಭಾಷಿಕರನ್ನೂ, ಕುಂದಾಪ್ರ ಕನ್ನಡ, ಕಲಬುರ್ಗಿ ಕನ್ನಡ, ಧಾರವಾಡ ಕನ್ನಡ, ಬೆಳಗಾವಿ ಕನ್ನಡ ಒಳಗೊಂಡಂತೆ ಕನ್ನಡದ ಎಲ್ಲಾ ಪ್ರಾದೇಶಿಕ ಉಪಭಾಷಿಗರನ್ನೂ ಒಳಗೊಳ್ಳುತ್ತದೆ. ಸುವರ್ಣ
ಕನ್ನಡ ರಾಜ್ಯೋತ್ಸವ ಎಂದಾಗ ಒಳಗೊಳ್ಳುವಿಕೆಯ ಸಹಬಾಳ್ವೆಗಿಂದ ಹೊರಗುಳಿಯುವ ಭಾಷಿಕರ ಸಂಖೆಯೇ ಹೆಚ್ಚಾಗುತ್ತದೆ. ಇದು ಅಭಿಮಾನದ ಸಂಗತಿಯೇ ಹೊರತು ವಾಸ್ತವದಲ್ಲಿ ಬಹುಬಾಷೆಗಳ ಸಂಕರ ಸಂಸ್ಕೃತಿಯೆ ನಿಜ ಮತ್ತು ಈ ಹೊತ್ತಿನ ಅನಿವಾರ್ಯ. ಹಾಗಾಗಿ ಕನ್ನಡ ರಾಜ್ಯೋತ್ಸವ ಎನ್ನುವ ಅಭಿಮಾನದ ಜತೆ ಕನ್ನಡದ ಬಳಕೆಯ ವಲಯಗಳನ್ನು ವಿಸ್ತರಿಸಲು ನಮ್ಮ ನೆಲೆಗಳಲ್ಲಿ ಬದ್ಧತೆಯಿಂದ ದುಡಿಯಬೇಕು. ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತ ಎಲ್ಲಾ ಭಾಷಿಕರ ಜತೆ ಸಹಬಾಳ್ವೆಯನ್ನು ಮಾಡುತ್ತಲೇ ಕನ್ನಡದ ಗುರುತುಗಳನ್ನು ದುರ್ಬಲಗೊಳ್ಳದಂತೆ ಕಾಪಿಡುವುದು ಹೇಗೆ ಎಂದು ಚರ್ಚಿಸಬೇಕಾಗುತ್ತದೆ. ಸುವರ್ಣ
ಇದನ್ನೂ ಓದಿ: ಮರಕುಂಬಿ ಪ್ರಕರಣ : ಪವರ್ ಸಿನಿಮಾ ನೆಪವಷ್ಟೆ, ಹಕ್ಕಿಗಾಗಿ ಹೋರಾಡಿದ್ದಕ್ಕೆ ಬೆಂಕಿ ಹಚ್ಚಿದರು
ಕನ್ನಡವೆಂಬ ಭಾಷಿಕ ನೆಲೆಯ ಕನ್ನಡಿಗರು ಜಗತ್ತಿನಾದ್ಯಾಂತ ಹರಡಿಕೊಂಡಿದ್ದಾರೆ. ಆದರೆ ಕರ್ನಾಟಕವೆಂಬ ಬೌಗೋಳಿಕ ನೆಲೆಯ ಕನ್ನಡಿಗರ ವ್ಯಾಪ್ತಿ ರಾಜ್ಯಮಟ್ಟದ್ದು. ಈ ಎರಡೂ ನೆಲೆಯ ಕನ್ನಡಿಗರನ್ನು ಬೆರೆಸಿದಾಗ ಅಮೂರ್ತವಾದ ಕನ್ನಡತ್ವ ಮತ್ತು ಕನ್ನಡಿಗ/ಕನ್ನಡತಿ ಎನ್ನುವ ಒಂದು ಸಮುದಾಯ ಎದುರು ಕಾಣುತ್ತದೆ. ಈ ಅಂಶಗಳನ್ನು ಆಧರಿಸಿ ಕೆಲವು ಮುಖ್ಯ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗುತ್ತದೆ. ಕನಿಷ್ಠ ಪ್ರತಿ ವರ್ಷ ನವಂಬರ್ ಹೊತ್ತಿಗೆ ಈ ಪ್ರಶ್ನೆಗಳನ್ನು ಕೇಳಿಕೊಂಡು ಉತ್ತರ ಕಂಡುಕೊಳ್ಳುವ ವಾರ್ಷಿಕ ಆಚರಣೆಯಾದರೂ ಆಗಬೇಕಿದೆ. ಈ ಪ್ರಶ್ನೆಗಳನ್ನು ಸಧ್ಯಕ್ಕೆ ಕನ್ನಡ ಕರ್ನಾಟಕದ ರಾಜ್ಯೋತ್ಸವದ ಪ್ರಶ್ನೆಗಳು ಎಂದಿಟ್ಟುಕೊಳ್ಳೊಣ. ಈ ಬಗೆಯ ಪ್ರಶ್ನೆಗಳು ಯಾವುವು? ಸುವರ್ಣ
1. ಸಂಪತ್ತಿನ ಅಸಮಾನ ಹಂಚಿಕೆಯಲ್ಲಿ ಅಗತ್ಯಕ್ಕಿಂತ ನೂರಾರು ಪಟ್ಟು ಸಂಪತ್ತನ್ನು ಗುಡ್ಡೆಹಾಕಿಕೊಂಡ ಕನ್ನಡಿಗರಲ್ಲಿ ರಾಜಕಾರಣಿಗಳು/ಕಾರ್ಪೋರೇಟ್ ಉದ್ಯಮಿಗಳು/ಆಯಾ ಗ್ರಾಮಗಳ ಜಮೀನ್ದಾರರು ನಾಡಿನ ಅಸಮಾನತೆ ಹೆಚ್ಚಾಗಲು ಮತ್ತು ಬಹುಸಂಖ್ಯಾತರು ನಿರ್ಗತಿಕರಾಗಲು ಪರೋಕ್ಷವಾಗಿ ಕಾರಣರಾಗಿದ್ದಾರೆ. ಹೀಗೆ ನಿರಂತರವಾಗಿ ಈ ನಾಡನ್ನು ದುರ್ಬಲಗೊಳಿಸುತ್ತ ರಾಜ್ಯದ ಅಸಮಾನತೆಯ ಅಂತರವನ್ನು ಹೆಚ್ಚಿಸುತ್ತಲೇ ಇರುವವರು ಹೇಗೆ ನಿಜ ಕನ್ನಡಿಗರಾಗಲು ಸಾಧ್ಯ?
2. ಈಗಲೂ ಕರ್ನಾಟಕದಲ್ಲಿ ಅಸ್ಪೃಶ್ಯತೆಯ ಆಚರಣೆ ನಿಂತಿಲ್ಲ. ಕನ್ನಡಿಗರೆಲ್ಲ ಒಂದು ಎನ್ನುವಾಗ ಎಲ್ಲಾ ಜಾತಿ ಮತ ಧರ್ಮದವರು ಒಂದೆಂದು ಒಪ್ಪಿಕೊಂಡಂತಲ್ಲವೆ? ಹೀಗಿರುವಾಗ ಅಷ್ಪೃಶ್ಯತೆ ಆಚರಿಸುತ್ತ ದಲಿತರನ್ನು ಹೊರಗಿಟ್ಟ ಕರ್ನಾಟಕವಿರಲು ಸಾಧ್ಯವೇ? ಹರ್ಮೋನ್ಸ್ ವೈಪರಿತ್ಯದಿಂದಾದ ಲಿಂಗಾಂತರಿ (ಟ್ರಾನ್ಸ್ ಜೆಂಡರ್) ಸಮುದಾಯವನ್ನೂ ನವ ಅಸ್ಪೃಶ್ಯರಂತೆ ಕಾಣುತ್ತೇವೆ. ಈ ಬಗೆಯ ಅಸ್ಪೃಶ್ಯತೆಯನ್ನು ಬಹಿರಂಗ ಮತ್ತು ಅಂತರಂಗದಿಂದ ಕಿತ್ತೊಗೆಯದವರು ಹೇಗೆ ನಿಜ ಕನ್ನಡಿಗರಾಗಲು ಸಾಧ್ಯ? ಸುವರ್ಣ
3. ನಿಜವಾದ ಕರ್ನಾಟಕ ಮತ್ತು ಕನ್ನಡ ನೆಲೆಸಿರುವುದು ಧಾರ್ಮಿಕ ಮತ್ತು ಭಾಷಿಕ ಸಾಮರಸ್ಯ ಮತ್ತು ಸೌಹಾರ್ಧದಲ್ಲಿ ಹೀಗಿರುವಾಗ ಧಾರ್ಮಿಕ ಮತ್ತು ಭಾಷಿಕ ಸಾಮರಸ್ಯವನ್ನು ಕದಡುವ ಯಾರೇ ಆಗಲಿ ಅವರು ಕನ್ನಡ ವಿರೋಧಿಗಳು. ಸಂವಿಧಾನಿಕವಾಗಿ ನಾವು ಭಾರತೀಯರು ಎಂಬ ಭಾವನೆಗೆ ಪಕ್ಕಾಗದೆ ನಾವು ಹಿಂದುಗಳು, ನಾವು ಮುಸ್ಲೀಮರು, ನಾವು ಕ್ರಿಶ್ಚಿಯನ್ನರು ಎಂದೂ, ಜಾತಿ ನೆಲೆಯಲ್ಲಿ ನಾವು ವಕ್ಕಲಿಗರು, ನಾವು ಲಿಂಗಾಯತರು, ನಾವು ರೆಡ್ಡಿಗಳು ಎಂದೂ ಅನ್ಯ ಧರ್ಮ ಮತ್ತು ಜಾತಿಯನ್ನು ಕಡೆಗಣಿಸಿ ನೋಡುವವರನ್ನು ಕನ್ನಡಿಗರೆಂದು ಒಪ್ಪಿಕೊಳ್ಳುವುದು ಕಷ್ಟ. ಹೀಗಾಗಿ ಧರ್ಮಗಳ ನಡುವೆ, ಜಾತಿಗಳ ನಡುವೆ ಕೋಮು ದ್ವೇಶವನ್ನು ಹುಟ್ಟಿಸುವವರು ನಿಜ ಕನ್ನಡಿಗರಾಗಲು ಹೇಗೆ ಸಾಧ್ಯ? ಸುವರ್ಣ
4. ಕನ್ನಡ ಭುವನೇಶ್ವರಿ, ಭಾರತ ಜನನಿಯ ತನುಜಾತೆ, ಕನ್ನಡಾಂಬೆ ಎಂದು ಕನ್ನಡ ಮತ್ತು ಕರ್ನಾಟಕವನ್ನು ಹೆಣ್ಣಾಗಿ ಪರಿಭಾವಿಸಿಕೊಂಡಿದ್ದೇವೆ. ಅದೇ ಹೊತ್ತಿಗೆ ಹೆಣ್ಣನ್ನು ಎರಡನೆ ದರ್ಜೆಯವಳು ಎಂದು ಭಾವಿಸಿದ ಹೆಣ್ಣಿನ ದಮನದ ನೂರಾರು ಪ್ರಕರಣಗಳು ನಿರಂತರ ಇದೇ ರಾಜ್ಯದಲ್ಲಿ ದಾಖಲಾಗುತ್ತವೆ. ಪಿತೃಪ್ರಧಾನ ಸಮಾಜದ ಪ್ರತಿನಿಧಿಗಳಾಗಿ ಪುರುಷ ಅಹಂಕಾರದಿಂದ ಹೆಣ್ಣನ್ನು ನಡೆಸಿಕೊಳ್ಳುವ ಈ ನಾಡಿನ ಗಂಡುಗಳು ನಿಜಕ್ಕೂ ಕನ್ನಡಾಂಬೆಯ ಪುತ್ತರೇ? ಹಾಗಾಗಿ ಹೆಣ್ಣನ್ನು ಕನ್ನಡಾಂಬೆ ಎಂದು ಅಭಿಮಾನಿಸುವ ಕನ್ನಡಿಗರು ತನ್ನ ಒಡನಾಟದ ಹೆಣ್ಣನ್ನು ಗಂಡಾಳ್ವಿಕೆಯಿಂದ ನಿಯಂತ್ರಿಸುವುದು ತಪ್ಪಿದೆಯೇ? ಹೆಣ್ಣನ್ನು ಕೀಳಾಗಿ ಕಾಣುವ ಶೋಷಿಸುವ ಗಂಡಸರು ಅದೇಗೆ ಕನ್ನಡಿಗರಾಗಲು ಸಾಧ್ಯ? ಸುವರ್ಣ
ಇದನ್ನೂ ಓದಿ: ವಕ್ಸ್ ಬೋರ್ಡ್ ಒಟ್ಟು ಎಷ್ಟು ಆಸ್ತಿ ಹೊಂದಿದೆ ಎಂಬ ವಿಚಾರ ಬಹಿರಂಗ
5. ಈ ನಾಡಿನಲ್ಲಿ ಅರಣ್ಯವಾಸಿ ಆಧಿಮ ಬುಡಕಟ್ಟುಗಳನ್ನು ಒಳಗೊಂಡಂತೆ, 70 ಕ್ಕೂ ಹೆಚ್ಚು ಆದಿವಾಸಿ ಅಲೆಮಾರಿ/ಅರೆ ಅಲೆಮಾರಿ ಸಮುದಾಯಗಳಿವೆ. ಈ ಪುಟ್ಟಪುಟ್ಟ ಸಮುದಾಯಗಳು ಘನತೆಯ ಬದುಕನ್ನು ಕಟ್ಟಿಕೊಳ್ಳಲು ಈಗಲೂ ಸೆಣಸಾಡುತ್ತಿವೆ. ಇಂತಹ ದಮನಿತ, ಅಲ್ಪಸಂಖ್ಯಾತ ಸಮುದಾಯಗಳ ಬದುಕನ್ನು ಹಸನು ಮಾಡುವ ಕನಸುಳ್ಳ, ಜನ ಸಮುದಾಯಗಳ ಒಳಿತಿನ ಬದುಕಿಗಾಗಿ ಬದ್ಧತೆ ಇಲ್ಲದ ಹೋರಾಟಗಳು ಅದೇಗೆ ಕನ್ನಡದ ಹೋರಾಟವಾಗಲು ಸಾಧ್ಯ?
6. ಕರ್ನಾಟಕದ ಜನ ಸಾಮಾನ್ಯರ ಒಳಿತಿಗಾಗಿ ಹಂಚಿಕೆಯಾಗಬೇಕಾದ ಸರಕಾರಿ ಯೋಜನೆಗಳ ಹಣವನ್ನು ವಂಚಿಸಿ ದೋಚುವ ಈ ರಾಜ್ಯದ ಗಾಳಿ ನೀರು ಅನ್ನ ಉಂಡು ಬದುಕುವ ಬ್ರಷ್ಟ ಅಧಿಕಾರಿ ಮತ್ತು ರಾಜಕಾರಿಣಿ ವರ್ಗ ಈ ನಾಡನ್ನು ಶೋಷಣೆಗೆ ಮಾಡುತ್ತಲೇ ಇದೆ. ಹೀಗೆ ಬೆರಳೆಣಿಕೆಯ ಪ್ರಾಮಾಣಿಕ ರಾಜಕಾರಣಿಗಳು ಮತ್ತು ಅಧಿಕಾರಿ ವರ್ಗದ ಕೆಲವರನ್ನು ಹೊರತುಪಡಿಸಿದರೆ ಈ ನಾಡಿನ ಜನರ ಶೋಷಕರಾದ ಬಹುಪಾಲು ರಾಜಕಾರಣಿಗಳು ಮತ್ತು ಅಧಿಕಾರ ವರ್ಗದವರು ಅದೇಗೆ ಕನ್ನಡಿಗರಾಗಲು ಸಾಧ್ಯ? ಸುವರ್ಣ
7. ಮುಂದಿನ ಹತ್ತಾರು ತಲೆಮಾರಿಗೆ ಉಳಿಸಿ ಕಾಪಿಡಬೇಕಾದ ನೈಸರ್ಗಿಕ ಸಂಪತ್ತನ್ನು ಎಗ್ಗಿಲ್ಲದೆ ದೋಚಲಾಗುತ್ತಿದೆ. ಒಂದರ್ಥದಲ್ಲಿ ಕನ್ನಡಾಂಬೆಯ ಹೊಟ್ಟೆ ಬಗೆಯುತ್ತಿದ್ದಾರೆ. ಕನ್ನಡ ನಾಡಿನ ನಿಸರ್ಗ ಸಂಪತ್ತನ್ನು ದೋಚುತ್ತಿರುವ ಪ್ರಭಾವಿ ಶ್ರೀಮಂತ ವರ್ಗ/ರಾಜಕಾರಣಿಗಳು/ಜಿಂದಾಲ್ ನಂತಹ ದೈತ್ಯ ಕಂಪನಿಗಳು ಕೊಳ್ಳೆ ಹೊಡೆಯುತ್ತಿದ್ದಾರೆ. ಇವರೆಲ್ಲಾ ಹೇಗೆ ಕನ್ನಡ ನಾಡಿನ ಕಣ್ಮಣಿಗಳಾಗುತ್ತಾರೆ. ಕನ್ನಡ ನಾಡಿನ ನೈಸರ್ಗಿಕ ಸಂಪತ್ತನ್ನು ಅವೈಜ್ಞಾನಿಕವಾಗಿ ಕಬಳಿಸದಂತೆ `ಗಣಿಗಾರಿಕೆ’ ಯ ವಿರುದ್ಧ ಕಠಿಣ ಕಾನೂನುಗಳನ್ನು ಜಾರಿಗೊಳಿಸಬೇಕು. ಮುಂದಿನ ತಲೆಮಾರಿಗೆ ನೈಸರ್ಗಿಕ ಸಂಪತ್ತು ಉಳಿಯುವಂತೆ ಮಾಡಿದರೆ ಕನ್ನಡ ನಾಡು ಉಳಿಯುತ್ತದೆ.
8. ಕನ್ನಡದ ಅರಿವು ಬೇರೆ ಬೇರೆ ಭಾಷೆಗಳ ಅನುವಾದಗಳ ಮೂಲಕ ವಿಶ್ವ ಸಾಹಿತ್ಯಕ್ಕೆ, ವಿಶ್ವ ಸಾಹಿತ್ಯದ ಅರಿವು ಅನುವಾದಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಹರಿಯಬೇಕಾಗಿದೆ. ಒಂದೆರಡು ದಶಕಗಳಿಂದ ವಿಶ್ವ ಸಾಹಿತ್ಯವೇನೋ ಕನ್ನಡಕ್ಕೆ ವ್ಯಾಪಕವಾಗಿ ಹರಿದು ಬರುತ್ತಿದೆ. ಆದರೆ ಕನ್ನಡ ಸಾಹಿತ್ಯ ವಿಶ್ವ ಸಾಹಿತ್ಯಕ್ಕೆ ಹರಿಯುವುದು ಶೂನ್ಯವೆನ್ನುವಷ್ಟು ಕಡಿಮೆ ಇದೆ. ಭಾಷಾ ತಜ್ಞರಾದ ಕೆ.ವಿ.ನಾರಾಯಣ ಅವರು ಕುವೆಂಪು ಭಾಷಾ ಭಾರತಿಯ ಅಧ್ಯಕ್ಷರಾಗಿದ್ದಾಗ ಜಗತ್ತಿನ ಶ್ರೇಷ್ಠ ಕೃತಿಗಳು ಕನ್ನಡಕ್ಕೆ ಅನುವಾದ ಆದವು. ಇಂದಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಅವರು ಜೆ.ಎನ್.ಯು ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾಗಿದ್ದಾಗ ಒಂದಷ್ಟು ಕೆಲಸಗಳು ನಡೆದವು. ಈ ಕೆಲಸವನ್ನು ಕುವೆಂಪು ಭಾಷಾಭಾರತಿ ಮತ್ತಷ್ಟು ಚುಕುಕಾಗಿ ಮಾಡಬೇಕಿದೆ. ಕರ್ನಾಟಕ ಸರಕಾರ ಕನ್ನಡದ ಅತ್ಯುತಮ ಪುಸ್ತಕಗಳನ್ನು ಆಯ್ಕೆ ಮಾಡಿ ಇಂಗ್ಲೀಷ್ ಮತ್ತು ಪ್ರಮುಖ ಭಾರತೀಯ ಭಾಷೆಗಳಿಗೆ ಅನುವಾದ ಮಾಡಿಸಬೇಕಿದೆ. ಹೀಗಲ್ಲದಿದ್ದರೆ ಕನ್ನಡ ವಿಶ್ವಮಟ್ಟದಲ್ಲಿ ಚಲಿಸಲು ಹೇಗೆ ಸಾದ್ಯ?
9. ಕನ್ನಡ ಡಿಜಿಟಲ್ ತಂತ್ರಜ್ಞಾನದಲ್ಲಿ ಮುಂದಿದೆಯಾದರೂ, ಮಲೆಯಾಳಂ ಮತ್ತು ತಮಿಳಿಗೆ ಹೋಲಿಸಿಕೊಂಡರೆ ಬಹಳ ಹಿಂದಿದೆ. ಹಳಗನ್ನಡ ಮತ್ತು ಪುಸ್ತಕದ ರೂಪದಲ್ಲಿರುವ ಕನ್ನಡ ಕಂಟೆಂಟ್ ಗಳನ್ನು ಡಿಜಿಟಲೀಕರಣ ಮಾಡಬೇಕಿದೆ. ಇಮೇಜ್ ಅಥವಾ ಪಿಡಿಎಫ್ ಸ್ವರೂಪದಲ್ಲಿರುವ ಇವುಗಳನ್ನು ಪಠ್ಯವಾಗಿ ಪರಿವರ್ತಿಸಲು ಒಸಿಆರ್ (Optical Character Recognition )ತಂತ್ರಜ್ಞಾನ ಬೇಕು. ಕನ್ನಡಕ್ಕಾಗಿ ಒಸಿಆರ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕಿದೆ. ಕಾಗುಣಿತ ಹಾಗೂ ವ್ಯಾಕರಣ ಸರಿಪಡಿಸುವ ವಿಷಯದ ತಾಂತ್ರಿಕ ಅನುಕೂಲದಲ್ಲಿ ಇಂಗ್ಲಿಷ್ಗೆ ಹೋಲಿಸಿದರೆ ಕನ್ನಡ ಹಿಂದಿದೆ. ಕನ್ನಡ ಭಾಷೆಯ ವೈವಿದ್ಯತೆಯಿಂದ ಇದು ಕಷ್ಟವಾಗಿದೆ. Meta AI ನಲ್ಲಿ ಕನ್ನಡ ಟೈಪ್ ಮಾಡಿದರೆ, I Don’t Understand ಅಂತ ಬರುತ್ತಿದೆ. ಕನ್ನಡದಲ್ಲಿ ಈ ನಿಟ್ಟಿನಲ್ಲಿ ಕೆಲಸಗಳು ನಡೆಯಲು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಕನ್ನಡಿಗರನ್ನು ಒಟ್ಟಾಗಿಸಿ ಸರಕಾರ ಯೋಜನೆಗಳನ್ನು ರೂಪಿಸಬೇಕಾಗಿದೆ. ಆಧುನಿಕ ಜಗತ್ತಿನ ಪರಿಭಾಷೆಯಾದ ಡಿಜಿಟಲ್ ತಂತ್ರಜ್ಞಾನದಲ್ಲಿ ಕನ್ನಡ ಹಿಂದುಳಿದರೆ ಜಾಗತಿಕ ತಂತ್ರಜ್ಞಾನದ ಸ್ಪರ್ಧೆಯಲ್ಲಿ ಒಂದು ಭಾಷೆಯಾಗಿ ಉಳಿಯಲು ಸಾಧ್ಯವೇ?
ಇಂತಹ ಮೂಲಭೂತ ಪ್ರಶ್ನೆಗಳನ್ನು ಎದುರುಗೊಳ್ಳದೆ ಆಡುವ ಕನ್ನಡಪರ ಮಾತುಗಳು, ಅಭಿಮಾನದ ಜೈಕಾರಗಳು ನವೆಂಬರ್ ತಿಂಗಳನ್ನು ಶೃಂಗಾರ ಮಾಡಲು ಬಳಸುವ ತೋರಣದ ಎಲೆಗಳಿದ್ದಂತೆ. ನಿಜಕ್ಕೂ ಈ ಮೇಲಿನ ಪ್ರಶ್ನೆಗಳನ್ನು `ಕರ್ನಾಟಕ’ ಸಂಭ್ರಮದ ರಾಜ್ಯೋತ್ಸವದ ಪ್ರಶ್ನೆಗಳು’ ಎಂದಿಟ್ಟುಕೊಂಡು ಚರ್ಚಿಸಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರೆ ಸಾಸಿವೆ ಕಾಳಷ್ಟಾದರೂ ಈ ನಾಡಿಗೆ ಒಳಿತಾಗುತ್ತದೆ.
ಇದನ್ನೂ ನೋಡಿ: ಕರ್ನಾಟಕ ರಾಜ್ಯೋತ್ಸವ| ಕನ್ನಡ ಭಾಷೆಗೆ ಒದಗಿರುವ ಸಮಸ್ಯೆ ಸವಾಲುಗಳು- ಚಿಂತಕ ಪಾರ್ವತೀಶ ಬಿಳಿದಾಳೆ ಮಾತುಗಳು