ಬೆಂಗಳೂರು: ರಾಜ್ಯದ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ 11,170 ಸಿಬ್ಬಂದಿಗೆ ಸೇವಾ ಭದ್ರತೆ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ.
2017ಕ್ಕೆ ಮುಂಚಿತವಾಗಿ ನೇಮಕಗೊಂಡು ಗ್ರಾಮ ಪಂಚಾಯಿತಿಗಳಲ್ಲಿ ಜವಾನ, ನೀರಗಂಟಿ, ಸ್ವಚ್ಛತಾಗಾರರಾಗಿ ಕೆಲಸ ಮಾಡುತ್ತಿದ್ದವರಿಗೆ ಕನಿಷ್ಠ ವಿದ್ಯಾರ್ಹತೆಯ ತೊಡಕು ನಿವಾಹಿರಿಸಿ ಸಭಾನಡಾವಳಿ, ವೇತನ ಪಾವತಿ, ಹಾಜರಾತಿ ಆಧಾರದ ಮೇಲೆ ಜಿಲ್ಲಾ ಪಂಚಾಯಿತಿಯಿಂದ ಘಟನೋತ್ತರವಾಗಿ ಅನುಮೋದನೆ ನೀಡಲು ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದ ನಿರ್ದೇಶಕರು ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಆದೇಶಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಕಸ-ಕಡ್ಡಿ ಎತ್ತಿ ನೈರ್ಮಲ್ಯ ಕಾಪಾಡುವುದು, ಕಚೇರಿಯಲ್ಲಿ ಜವಾನರಾಗಿ ದುಡಿಯುವುದು, ಕಾಲಕಾಲಕ್ಕೆ ನೀರು ಬಿಟ್ಟು ಜನರ ಬಾಯಾರಿಕೆ ತಣಿಸುವ ವೃತ್ತಿ ಕೈಗೊಂಡಿದ್ದ ಈ ಸಿಬ್ಬಂದಿಗೆ ಇನ್ನು ಮುಂದೆ ಸರ್ಕಾರದಿಂದಲೇ ನೇರವಾಗಿ ವೇತನ ಮತ್ತಿತರ ಸೌಲಭ್ಯಗಳು ದೊರೆಯಲಿವೆ. ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ 2017ಕ್ಕೂ ಮೊದಲು ಕರವಸೂಲಿ ಗಾರರು, ಕ್ಲರ್ಕ್ ಕಂ ಡೇಟಾ ಎಂಟ್ರಿ ಅಪರೇಟರ್, ವಾಟರ್ ಅಪರೇಟರ್, ಸ್ವಚ್ಛತಾಗಾರರು, ಅಟೆಂಡರ್ ಸೇರಿದಂತೆ ಒಟ್ಟು 18,672 ಸಿಬ್ಬಂದಿ ನೇಮಕ ಗೊಂಡು ನಾನಾ ಕಾರಣಗಳಿಗಾಗಿ ಅನುಮೋದನೆ ಸಿಕ್ಕಿರಲಿಲ್ಲ. ಈ ಪೈಕಿ ಒಟ್ಟು 11,543 ಸಿಬ್ಬಂದಿ ಕನಿಷ್ಠ ವಿದ್ಯಾರ್ಹತೆ ಹೊಂದಿಲ್ಲ ಎಂಬ ಕಾರಣ ನೀಡಲಾಗಿತ್ತು.
ಇದನ್ನೂ ಓದಿ: ಬೆಂಗಳೂರು ಮೆಟ್ರೋ ನಿಲ್ದಾಣದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ
ಜಿಲ್ಲಾ ಪಂಚಾಯಿತಿ ಅನುಮೋದನೆ ನೀಡುವುದರಿಂದ ಕನಿಷ್ಠ ವೇತನ, ಸೇವಾ ಭದ್ರತೆ, ಅನುಕಂಪದ ಮೇಲೆ ಕುಟುಂಬಸ್ಥರನ್ನು ಕೆಲಸಕ್ಕೆ ನೇಮಕ, ಪಿಂಚಣಿ ಸೌಲಭ್ಯ ಸಕಾಲದಲ್ಲಿ ವೇತನ, ರಜೆ ಸೌಲಭ್ಯ, ವೈದ್ಯಕೀಯ ಸೌಲಭ್ಯ ಹಾಗೂ ವಿದ್ಯಾರ್ಹತೆ ಗಳಿಸಿದರೆ ಕೆಲಸದಲ್ಲಿ ಬಡ್ತಿ ಸೇರಿ ಹಲವು ಸೌಲಭ್ಯಗಳು ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಸಿಗಲಿವೆ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಬಿ.ನಾಡಗೌಡ ತಿಳಿಸಿದರು. ಇನ್ನೂ ಹಲವು ಬೇಡಿಕೆಗಳು ಇವೆ ಸರ್ಕಾರ ಆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದ್ದಾರೆ.
ವಿಡಿಯೊ ನೋಡಿ:ವಿಶ್ವಕಪ್ ಮೇಲೆ ಕಾಲಿಟ್ಟಾಗ ಚುರ್ ಎಂದ ಹೃದಯ ದಲಿತರಿಗೆ ಮೂತ್ರ ಕುಡಿಸಿದಾಗ ಯಾಕೆ ಮಿಡಿಯಲಿಲ್ಲ? #worldcup2023