ದೇಶದ 169 ನಗರಗಳಲ್ಲಿ 10 ಸಾವಿರ ಬಸ್‌: ಇ-ಬಸ್‌ ಸೇವಾ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ

ನವದೆಹಲಿ: ಪರಿಸರ ಸ್ನೇಹಿ ಪ್ರಯಾಣಿಕ ಸಾರಿಗೆ ವಾಹನಗಳ ಬಳಕೆ ಮತ್ತು ಸಂಚಾರದ ಮೂಲಸೌಕರ್ಯ ಅಭಿವೃದ್ಧಿಗೆ ಉತ್ತೇಜನ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ, 57613 ಕೋಟಿ ರು. ವೆಚ್ಚದ ‘ಪಿಎಂ ಇ ಬಸ್‌ ಸೇವಾ’ ಯೋಜನೆಗೆ ಅನುಮೋದನೆ ನೀಡಿದೆ. ಈ ಪ್ರಕಾರ 3 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ 169 ನಗರಗಳಲ್ಲಿ 10 ಸಾವಿರ ಎಲೆಕ್ಟ್ರಿಕ್‌ ಬಸ್‌ಗಳು ರಸ್ತೆಗಿಳಿಯಲಿವೆ.  ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ನೀಡಲಾಗಿದೆ.

ಇದನ್ನೂ ಓದಿ:2030ರ ಒಳಗಾಗಿ ರಾಜ್ಯದ 35 ಸಾವಿರ ಬಸ್‌ಗಳು ಎಲೆಕ್ಟ್ರಿಕ್‌ ಬಸ್ಸುಗಳಾಗಿ ಪರಿವರ್ತನೆ: ಸಚಿವ ಶ್ರೀರಾಮುಲು

ಮುಂದಿನ 10 ವರ್ಷಗಳ ಅವಧಿಗೆ ಬಸ್‌ ಕಾರ್ಯಾಚರಣೆಗೆ ಕೇಂದ್ರ ಸರ್ಕಾರ 20 ಸಾವಿರ ಕೋಟಿ ರು. ನೆರವು ನೀಡಲಿದ್ದರೆ, ಉಳಿದ ಹಣವನ್ನು ರಾಜ್ಯ ಸರ್ಕಾರಗಳು ಭರಿಸಬೇಕಾಗುತ್ತದೆ. ಈ  ಯೋಜನೆ 2011ರ ಜನಗಣತಿ ಅನ್ವಯ 3 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಜಾರಿ ಮಾಡಲಾಗುವುದು. ಈ ಪೈಕಿ ಸಂಘಟಿತ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದ ನಗರಗಳಿಗೆ ಆದ್ಯತೆ ನೀಡಲಾಗುತ್ತದೆ.

ಎರಡು ಹಂತದಲ್ಲಿ ಯೋಜನೆ ಜಾರಿಯಾಗಲಿದ್ದು, ಮೊದಲ ಹಂತದಲ್ಲಿ 169 ನಗರಗಳಲ್ಲಿ ನಗರ ಬಸ್‌ ಸೇವೆಯನ್ನು ಅಭಿವೃದ್ಧಿಪಡಿಸಲಾಗುವುದು. ಸರ್ಕಾರಿ ಮತ್ತು ಖಾಸಗಿ ಪಾಲುದಾರಿಕೆಯ ಈ ಯೋಜನೆಯಡಿ 10 ಸಾವಿರ ಎಲೆಕ್ಟ್ರಿಕ್‌ ಬಸ್‌ಗಳನ್ನು ಸೇವೆಗೆ ಬಳಸಿಕೊಳ್ಳಲಾಗುತ್ತದೆ. ಇದರ ಜೊತೆಗೆ ಬಸ್‌ ಡಿಪೋ ಅಭಿವೃದ್ಧಿ/ನವೀಕರಣ, ಇ-ಬಸ್‌ಗಳಿಗೆ ಅಗತ್ಯವಾದ ವಿದ್ಯುತ್‌ ಉತ್ಪಾದನಾ ಘಟಕ ಆರಂಭಕ್ಕೆ ನೆರವು ನೀಡಲಾಗುತ್ತದೆ ಎಂದು ಹೇಳಿದೆ.

ಎರಡನೇ ಹಂತದಲ್ಲಿ 181 ನಗರಗಳಲ್ಲಿ ಯೋಜನೆ ಜಾರಿಯಾಗಲಿದೆ. ಇದರಲ್ಲಿ ಬಸ್‌, ಮೂಲಸೌಕರ್ಯ, ಮಲ್ಟಿ ಮಾಡೆಲ್‌ ಇಂಟರ್‌ಚೇಂಜ್‌ ಫೆಸಿಲಿಟಿ, ಎನ್‌ಸಿಎಂಸಿ ಆಧರಿತ ಸ್ವಯಂ ಶುಲ್ಕ ಸಂಗ್ರಹ ವ್ಯವಸ್ಥೆ,ಚಾರ್ಜಿಂಗ್‌ ಮೂಲಕಸೌಕರ್ಯ ಮೊದಲಾದವುಗಳನ್ನು ಕಲ್ಪಿಸಲಾಗುತ್ತದೆ.ಈ ಯೋಜನೆಯಿಂದ 45000- 55000 ನೇರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *