ವಿಜಯನಗರ : ಬಾಬಾಸಾಹೇಬ್ ಡಾ ಬಿ ಆರ್ ಅಂಬೇಡ್ಕರ್ ಅವರು ಈ ಮಣ್ಣಿನ ಮೂಲನಿವಾಸಿಗಳ ಒಡಲಾಳದ ಧ್ವನಿಯಾಗಿ ಆರಂಭಿಸಿದ ಮೂಕನಾಯಕ ಪತ್ರಿಕೆಯನ್ನು ಓದಲು ಅಂದು ನನ್ನ ಜನ ಮೂಕರಾಗಿದ್ದರು, ಪೂನಾ ಒಪ್ಪಂದವನ್ನು ಮಾಡಿಕೊಳ್ಳುವಾಗ ಪ್ರಜ್ಞಾವಂತ ಜನ ಅಪ್ರಜ್ಞಾವಂತ ರಾಗಿದ್ದರು ಎಂದು ಪ್ರೊ. ಎನ್ ಚಿನ್ನಸ್ವಾಮಿ ಸೋಸಲೆ ವಿಷಾದ ವ್ಯಕ್ತಪಡಿಸಿದ್ದಾರೆ.
ದಿನಾಂಕ 30 9 2021 ಗುರುವಾರದಂದು ಹಂಪಿ ವಿಜಯನಗರ ಬುದ್ಧವಿಹಾರ ನಿರ್ಮಾಣ ಟ್ರಸ್ಟ್( ರಿ )ವತಿಯಿಂದ ಹೊಸಪೇಟೆಯ ತಿರುಮಲ ನಗರದಲ್ಲಿರುವ “ಸೋಸಲೆ ಪಟ್ಟಿ”ಯಲ್ಲಿ ಹಮ್ಮಿ ಕೊಂಡಿದ್ದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಮುಂದುವರೆದು ಮಾತನಾಡಿದ ಅವರು, ಅಂಬೇಡ್ಕರ್ ಅವರು 1920- ಜನವರಿ 31ರಂದು ಪ್ರಕಟಿಸಿದ “ಮೂಕನಾಯಕ” ಪತ್ರಿಕೆ ಭಾರತದ ಮಣ್ಣಿನಲ್ಲಿ ಒಡಲಾಳದ ಧ್ವನಿಯಾಗಿ ಪ್ರಕಟಗೊಂಡ ಪ್ರಪ್ರಥಮ ಪತ್ರಿಕೆ, ಇದು ಮರಾಠಿ ಭಾಷೆಯಲ್ಲಿ ಪ್ರಕಟಗೊಳ್ಳುತ್ತಿತು, 2000ಕ್ಕೂ ಹೆಚ್ಚು ವರ್ಷಗಳಿಂದ ಏಕಮುಖವಾಗಿ ಪ್ರಶ್ನೆ ಮಾಡಿದ ಹಾಗೆ ಹರಿದು ಬರುತ್ತಿದ್ದ ಅಸಮಾನತೆ, ಅಸಂಸ್ಕೃತಿಯ ವಿರುದ್ಧ ಪ್ರಪ್ರಥಮವಾಗಿ ಈ ಮಣ್ಣಿನ ಮೂಲನಿವಾಸಿಗಳ ಚಿಂತನೆಯ ಸಮ ಸಂಸ್ಕೃತಿಯ ಅಂಬಲಕಾಗಿ ಧ್ವನಿಯೆತ್ತಿದ ಏಕೈಕ ಧೀಮಂತ ಪತ್ರಿಕೆ “ಮೂಕನಾಯಕ” ಎಂದು ತಿಳಿಸಿದರು.
ಆದರೆ ಮೂಕನಾಯಕ ಪತ್ರಿಕೆ ಇಷ್ಟೆಲ್ಲ ಒಡಲಾಳದ ಧ್ವನಿಯನ್ನು ತನ್ನ ಕರುಳಿನಲ್ಲಿ ಇಟ್ಟುಕೊಂಡು ಹೊರಬರುತ್ತಿದ್ದರು ಅದನ್ನು ಓದುವವರಿಗೆ ಅಕ್ಷರ ಜ್ಞಾನವೇ ಇರಲಿಲ್ಲ ಎಂಬುದು ವಿಷಾದಕರ ಎಂದರು. ಇದಕ್ಕೆ ಪ್ರಮುಖ ಕಾರಣ ಶಿಕ್ಷಣವನು ಶತಶತಮಾನಗಳಿಂದಲೂ ತಮ್ಮ ಸುತ್ತಾಗಿ ಸಿಕೊಂಡಿದ್ದ ಸ್ವಾರ್ಥಿಗಳು ಹೆಮ್ಮರವಾಗಿ ಬಳಸಿಕೊಂಡಿದ್ದ ಸಾಮಾಜಿಕ ಕಟ್ಟುಪಾಡುಗಳು ಇದಕ್ಕೆ ಮೂಲ ಕಾರಣ ಎಂದು ವಸ್ತುನಿಷ್ಟವಾಗಿ ವಿಶ್ಲೇಷಣೆ ಮಾಡಿದರು.
ಮೂಕನಾಯಕ ಪತ್ರಿಕೆ ಯಾರ ಪರವಾಗಿ – ಯಾರ ಧ್ವನಿಯಾಗಿ ಹೊರಬಂದಿತ್ತು ಅವರಿಗೆ ಓದಲು – ಬರೆಯಲು ಬರುತ್ತಿರಲಿಲ್ಲ, ಆದರೆ ಯಾರ ವಿರುದ್ಧ ಬರುತ್ತಿತ್ತು ಅವರಿಗೆ ಓದಲು – ಬರೆಯಲು ಬರುತ್ತಿದ್ದರೂ ಪತ್ರಿಕೆಯನ್ನು ಓದುವುದಿರಲಿ – ಅಸ್ಪೃಶ್ಯತೆಯ ದೃಷ್ಟಿಯಿಂದ ಹಾಗೂ ತಮ್ಮ ಪಾರಂಪರಿಕ ಸಂಸ್ಕೃತಿಯ ಕಟ್ಟುಪಾಡುಗಳನ್ನು ಪ್ರಶ್ನೆ ಮಾಡಿದ್ದಕ್ಕಾಗಿ ಅದನ್ನು ಮುಟ್ಟಲು ಸಹ ಹೋಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಾತ್ಮಗಾಂಧೀಜಿಯವರು ಹರಿಜನ ಪತ್ರಿಕೆಯನ್ನು ಸಾವಿರ 1933 ರಲ್ಲಿ ಆರಂಭಿಸಿದ ಮೇಲೆ ಗಾಂಧಿಯವರ “ಸ್ಪೃಶ್ಯ” ಅನುಯಾಯಿಗಳು ಅಸ್ಪಶತೆಯ ವಿರುದ್ಧವಾಗಿ ಪುಂಖಾನುಪುಂಕವಾಗಿ ಬರೆದರು. ಆದರೆ ಅವರಿಗೂ 11 ವರ್ಷಗಳ ಹಿಂದೆ ಮೂಕನಾಯಕ ಪತ್ರಿಕೆಯಲ್ಲಿ ಬಾಬಾಸಾಹೇಬ ಅಂಬೇಡ್ಕರ್ ಅವರು ಇದರ ವಿರುದ್ಧ ಬರೆದಾಗ ಯಾರೂ ಸಹ ಕಿಂಚಿತ್ತೂ ಪ್ರತಿಕ್ರಿಯಿಸುತ್ತಿರುವುದು ರಾಷ್ಟ್ರದ ಧಾರ್ಮಿಕ ಹಾಗೂ ಸಾಮಾಜಿಕ ಅಂತ ಪತನವೇ ಆಗಿದೆ ಎಂದು ವಿಷಾದಿಸಿದರು. ಮುಂದುವರೆದು ಭಾರತದಲ್ಲಿ ” ಸ್ಪೃಶ್ಯ “ವರ್ಗದವರು “ಅಸ್ಪೃಶ್ಯತೆ” ಯ ವಿರುದ್ಧ ಒಂದಷ್ಟು ಹೋರಾಡಿದ್ದು – ಮಾತನಾಡಿದ್ದು – ಬರೆದಿದ್ದೆಲ್ಲವೂ ಸಹ “ಅಸ್ಪಶ್ಯತೆ ” ಎಂಬ ಎಂದೂ ಅಳಿಸಲಾಗದಂತೆ ನಾವು ಸವರ್ಣಿಯರು ಎಂದು ಸ್ವ-ಘೋಷಿಸಿಕೊಂಡವರ ಮಿದುಳಿಗೆ ಅಂಟಿರುವ ಆಚರಣೆಯ ಹಿನ್ನೆಲೆಯಲ್ಲಿ, ಬೂಟಾಟಿಕೆ ಹಿನ್ನಲೆಯಲ್ಲಿ ರಾಷ್ಟ್ರ ಭಕ್ತಿಯನ್ನು ವ್ಯಕ್ತಪಡಿಸಲು ಮುಂದಾದರು ಎಂದು ಸ್ಪಷ್ಟಪಡಿಸಿದರು. ಮುಂದುವರೆದು ಮೂಕನಾಯಕ ಪತ್ರಿಕೆ ಪ್ರಚಾರಕ್ಕೆ ಸಂಬಂಧಿಸಿದಂತೆ ಅಂದಿನ ಪ್ರಸಿದ್ಧ ಧಾರ್ಮಿಕ ಹಿನ್ನೆಲೆಯ, ರಾಷ್ಟ್ರೀಯವಾದಿ ತತ್ವ-ಸಿದ್ಧಾಂತ ಪತ್ರಿಕೆ ಯಾಗಿದ್ದ ಬಾಲಗಂಗಾಧರ ತಿಲಕ್ ಅವರ ಸಂಪಾದಕತ್ವದ ” ಕೇಸರಿ ” ಪತ್ರಿಕೆಯಲ್ಲಿ ಮೂಕನಾಯಕ ಪತ್ರಿಕೆ ಕುರಿತು ಒಂದು ಹ್ಯಾಡ್ ಪ್ರಕಟಿಸಬೇಕೆಂದು ಬಾಬಾಸಾಹೇಬ್ ಅಂಬೇಡ್ಕರ್ ಅವರ ಕಳಕಳಿಯ ಕೋರಿಕೆಯನ್ನು ಸಹ ಕೇಸರಿ ಬಣ್ಣದ ಪತ್ರಿಕೆ ಒಪ್ಪಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಇಂದಿಗೂ ಸಹ ಈ ಭಾರತದ ಮಣ್ಣಿನಲ್ಲಿ ದಲಿತ ಸಮುದಾಯವು ರಾಷ್ಟ್ರವನ್ನು ಪ್ರತಿನಿಧಿಸುವಂತಹ ರಾಷ್ಟ್ರೀಯ ಪತ್ರಿಕೆಯನ್ನಾಗಲಿ ಅಥವಾ ರಾಜ್ಯವನ್ನೇ ಪ್ರತಿನಿಧಿಸುವಂತಹ ಒಂದು ಪ್ರಬಲ ಧ್ವನಿಯ ಪತ್ರಿಕೆ ಪ್ರಕಟಿಸಲು ಸಾಧ್ಯವೇ ಆಗಿಲ್ಲದಿರುವುದು ಮೂಕನಾಯಕರ ಸ್ಥಿತಿಯನ್ನೇ ಇದು ನೆನಪಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೇಳಿದ “ಸಂಘಟನೆ” ಎಂಬ ಅಸ್ತ್ರ ರಾಜಕೀಯದ ದಾಳಗಳಾಗಿ ಪರಿವರ್ತನ ಅದದೇ ಮೂಲ ಕಾರಣವಾಗಿರಬಹುದು ಎಂದು ಸಹ ವಿಷಾದ ವ್ಯಕ್ತಪಡಿಸಿದರು.
ಇದನ್ನೂ ಓದಿ : ಡಿಸೆಂಬರ್ 25, 1927 ಮನುಸ್ಮೃತಿ ದಹನ ದಿನ
ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿ ಅವರೊಂದಿಗೆ 1932 ರಲ್ಲಿ ಪೂನಾದಲ್ಲಿ ನಡೆದ ಒಪ್ಪಂದ ಶತಶತಮಾನದ ಅಸಮಾನತೆಗೆ ಹಿಡಿದ ಕೈಗನ್ನಡಿಯಾಗಿದೆ. ಬಾಬಾಸಾಹೇಬ್ ಡಾ ಬಿಆರ್ ಅಂಬೇಡ್ಕರ್ ಅವರು ಮಹಾತ್ಮ ಗಾಂಧೀಜಿ ಅವರೊಂದಿಗೆ ತಮ್ಮ ಮೂಲಭೂತವಾದ ಬೇಡಿಕೆ ಈಡೇರಿಸಿಕೊಳ್ಳಲು ಸಾಧ್ಯವಾಗದಿದ್ದರೂ ಮಹಾತ್ಮ ಗಾಂಧೀಜಿಯವರ ಆರೋಗ್ಯ ಮತ್ತು ದೇಶದಲ್ಲಿ ಶಾಂತಿ ಸುಭಿಕ್ಷೆಯನ್ನು ಕಾಪಾಡುವ ದೃಷ್ಟಿಯಿಂದ ಬಲವಂತವಾಗಿ ಮಾಡಿಕೊಂಡ ಐತಿಹಾಸಿಕ “ಪೂನಾ ಒಪ್ಪಂದ” ಕ್ಕೆ ತೊಂಬತ್ತು ವರ್ಷಗಳಾಗಿವೆ.
ಪುರಾಣದ ಕಟ್ಟುಪಾಡುಗಳನ್ನು ಎತ್ತಾವತ್ತಾಗಿ ಮುಂದುವರಿಸಲು ಮೂಲಭೂತವಾದಿಗಳು ಹಾಗೂ ಸಾಂಪ್ರದಾಯಿಕ ವಾದಿಗಳು ಬಾಬಾಸಾಹೇಬ್ ಅಂಬೇಡ್ಕರ್ ಅವರೊಂದಿಗೆ ಮಾಡಿಕೊಂಡ ಒಪ್ಪಂದ ಎಂದು ತಿಳಿಸಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಹಾತ್ಮ ಗಾಂಧೀಜಿಯವರಲ್ಲಿ ಸಮಾನತೆಯ ಓಟಿಗಾಗಿ ತಮ್ಮ ಮೂಲಭೂತ ಹಕ್ಕನ್ನು ಪ್ರತಿಪಾದನೆ ಮಾಡಿದಾಗ “ದೇವರ ” ಆಚರಣೆ ಹಾಗೂ “ಸಂಪ್ರದಾಯ” ದ ಮೂಲಕ ಭಾವನಾತ್ಮಕವಾದ ವಿಷಯವನ್ನು ಮುಂದಿಟ್ಟು ನಾವೆಲ್ಲರೂ ಒಂದೇ ಎಂದು ಪ್ರತಿಪಾದನೆ ಮಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಾದವನ್ನು ಅಲ್ಲಗಳೆದರು. ಇವರ ಮಾತಿಗೆ ಪೂರಕವಾಗಿ ಬಾಬಾಸಾಹೇಬರ ನೆಲ ಸಂಸ್ಕೃತಿಯ ಚಿಂತನೆಯನ್ನು ಅಲ್ಲಗಳೆಯಲು ಟೊಂಕಕಟ್ಟಿ ಸಾವಿರಾರು ಜನ ಮುಂದಾಗಿದ್ದರು. ಆದರೆ ಬಾಬಾಸಾಹೇಬರ ಈ ಒಡಲಾಳದ ಮೂಲಭೂತ ಹಕ್ಕನ್ನು ದೊರಕಿಸಲು ಯಾರೂ ಸಹ ಸಪೋರ್ಟ್ ಮಾಡಲಿಲ್ಲ ಎಂದು ವಿಷಾದಿಸಿದರು. ಅಂದರೆ , ದೇವರ ಮೂಲಕ
ಅಸಮಾನತೆಯನ್ನು ಪ್ರತಿಪಾದನೆ ಮಾಡಿ ಸಾಮಾಜಿಕ ಹಿನ್ನೆಲೆಯಲ್ಲಿ ಅಸಮಾನತೆಯನ್ನು ಅಂತರಾಳದಲ್ಲಿ ಒಪ್ಪಿಕೊಳ್ಳುವ ಅಜ್ಞಾನಿ ಬಾಬಾಸಾಹೇಬರು ಆಗಿರಲಿಲ್ಲ ಎಂದು ಹೇಳಿದರು.
ಇದನ್ನೂ ಓದಿ : ಐಐಎಸ್‌ಸಿ : ದಲಿತ, ಹಿಂದುಳಿದವರಿಗೆ ಮೀಸಲಿಟ್ಟ ಸ್ಥಾನಗಳು ‘ಇನ್ನೊಬ್ಬರ’ ಪಾಲು?!
1931 ರಲ್ಲಿ ಲಂಡನ್ ನಲ್ಲಿ ನಡೆದ ಮೊದಲ ದುಂಡುಮೇಜಿನ ಸಮ್ಮೇಳನದಲ್ಲಿ ಭಾರತದಲ್ಲಿ “ಪ್ರೌಡ ಮತದಾನ ಸಮಿತಿ” ಯನ್ನು ರಚನೆ ಮಾಡಲು ಒಪ್ಪಿಗೆ ನೀಡಲಾಯಿತು. ಈ ಸಮಿತಿಯ ಅಧ್ಯಕ್ಷರಾಗಿ ಲಾರ್ಡ್ ಲೂತಿಯಾ ಅವರನ್ನು ನೇಮಿಸಲಾಗಿತ್ತು. ಸಮಿತಿಯ ಮುಂದೆ ಬಾಬಾಸಾಹೇಬ್ ಅಂಬೇಡ್ಕರ್ ಮಂಡಿಸಿದ ಭಾರತದ ನೆಲ ಸಂಸ್ಕೃತಿಯ ವಸ್ತುನಿಷ್ಠವಾದ ವಿಷಯವನ್ನು ಎರಡನೇ ದುಂಡುಮೇಜಿನ ಸಮ್ಮೇಳನದಲ್ಲಿ ಚರ್ಚೆಗೆ ಹಮ್ಮಿಕೊಳ್ಳಲಾಗಿತ್ತು. ಹಾಗೂ ಭಾರತದಲ್ಲಿ ಸ್ಪೃಶ್ಯ-ಅಸ್ಪೃಶ್ಯ ಅಂತರವನ್ನು ಮನಗಂಡಿದ್ದ ಬ್ರಿಟಿಷ್ ಸರ್ಕಾರವು ಬಾಬಾಸಾಹೇಬರ ವಾದಕ್ಕೆ ಪೂರಕವಾಗಿ ಪ್ರತ್ಯೇಕ ಮತದಾನದ ಹಕ್ಕನ್ನು ನೀಡಲು ಮುಂದಾಗಿರುವುದನ್ನು ಮನಗಂಡ ಗಾಂಧೀಜಿಯವರು ಬ್ರಿಟಿಷ್ ಸರ್ಕಾರದ ವಿರುದ್ಧ ಹಾಗೂ ಈ ಹಕ್ಕನ್ನು ಮಂಡಿಸಿದ ಬಾಬಾಸಾಹೇಬರ ವಿರುದ್ಧ ಪೂನಾದಲ್ಲಿರುವ ಯರವಾಡ ಜೈಲಿನ ಅಮರಣಥ್ಮಕ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡರು. ಮಾರ್ಚ್- 11 -1932 ಈ ಸಂಬಂಧ ತೀವ್ರತರದ ವಿರೋಧವನ್ನು ವ್ಯಕ್ತಪಡಿಸುವ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ಸರ್ ಸ್ಯಾಮುಯೆಲ್ ಹೊರೆ ಅವರಿಗೆ ಗಾಂಧೀಜಿಯವರು ಸುದೀರ್ಘವಾದ ಪತ್ರವನ್ನು ಸಹ ಬರೆದಿದ್ದರು. ಇದ್ಯಾವುದಕ್ಕೂ ಬಗ್ಗದ ಬ್ರಿಟಿಷರು ಅಂಬೇಡ್ಕರ್ ಅವರ ವಾದವನ್ನು ಪುರಸ್ಕರಿಸಿ ಜಾರಿಗೊಳಿಸಲು ಮುಂದಾದದ್ದು ಮಹಾತ್ಮ ಗಾಂಧೀಜಿಯವರ ಉಪವಾಸ ಸತ್ಯಾಗ್ರಹಕ್ಕೆ ಮೂಲಕಾರಣವಾಯಿತು ಎಂದು ವಿಷಾದಿಸಿದರು.
ಮುಂದುವರೆದು ಮಹಾತ್ಮ ಗಾಂಧೀಜಿ ಅವರು ಅಂದು ತಾತ್ಕಾಲಿಕವಾಗಿದ್ದು ಗೆದ್ದು ಇಂದು ಸಂಪೂರ್ಣವಾಗಿ ಸೋತರು ಬಾಬಾಸಾಹೇಬ್ ಅಂಬೇಡ್ಕರ್ ಅವರು ಮಹಾತ್ಮ ಗಾಂಧೀಜಿ ಅವರನ್ನು ಉಳಿಸಲು ಅಂದು ಗೌತಮ ಬುದ್ಧನ ಅನುಯಾಯಿಯಾಗಿ ಸೋತು, ಇಂದು ಭಾರತದ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಆಗಿ ಗೆದ್ದರು ಎಂದು ಸಂತೋಷ ವ್ಯಕ್ತಪಡಿಸಿದರು. ಪುನಃ ಒಪ್ಪಂದದಂತೆ ಅಸಮಾನತೆಯ ಉಪನದಿಗಳು ಇಂದಿಗೂ ಎಗ್ಗಿಲ್ಲದೆ ನಡೆಯುತ್ತಿರುವುದು ಕುರಿತು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿಶ್ರಾಂತ ಶಿಕ್ಷಕರಾದ ಸಣ್ಣ ಈರಣ್ಣ, ಶಂಕರ್ ಸಿಂಗ್ ಆನಂದ್ ಸಿಂಗ್ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಪಲ್ಲವ ವೆಂಕಟೇಶ್, ಪ್ರಗತಿಪರ ಸಂಘಟನೆಯ ಮುಖಂಡರಾದ ಶ್ರೀ ದುರ್ಗಪ್ಪ ಪೂಜಾರಿ, ಸದಸ್ಯರಾದ ಮಾರುತಿ ಕಾಂಬ್ಳೆ ಮಾತನಾಡಿದರು.
ಹಂಪಿ ವಿಜಯನಗರ ಬುದ್ಧವಿಹಾರ ನಿರ್ಮಾಣ ಟ್ರಸ್ಟ್ನ ಕಾರ್ಯದರ್ಶಿಗಳು ಹಾಗೂ ವಿಜಯನಗರ ಜಿಲ್ಲಾ ಅಂಬೇಡ್ಕರ್ ಸಂಘದ ಅಧ್ಯಕ್ಷರು ಆದ ಬಣ್ಣದ ಮನೆ ಸೋಮಶೇಖರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಗಣ್ಯರನ್ನು ಹಾಗೂ ಸಭಿಕರನ್ನು ಸ್ವಾಗತಿಸಿದರು.
ಹೊಸಪೇಟೆ ತಾಲೂಕು ಅಂಬೇಡ್ಕರ್ ಸಂಘದ ಪದಾಧಿಕಾರಿಗಳು, ವಿಜಯನಗರ ಜಿಲ್ಲಾ ಅಂಬೇಡ್ಕರ್ ಸಂಘದ ಪದಾಧಿಕಾರಿಗಳು, ಹೊಸಪೇಟೆ ಪ್ರಗತಿಪರ ಸಂಘಟನೆಯ ಪದಾಧಿಕಾರಿಗಳು, ಕಿತ್ತು ಬಾಡಗಿ ಯುವಕರ ಸಂಘದ ಪದಾಧಿಕಾರಿಗಳು, ಟಿಪ್ಪುಸುಲ್ತಾನ್ ಯುವಕ ಸಂಘದ ಪದಾಧಿಕಾರಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.