ಗುರುರಾಜ ದೇಸಾಯಿ
ಸುರಕ್ಷತಾ ಮಾನದಂಡ ಹಾಗೂ ಸೂಕ್ತ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲನೆ ಮಾಡದಂತ ರಾಜ್ಯದ 10 ಸಾವಿರಕ್ಕೂ ಹೆಚ್ಚು ಖಾಸಗಿ ಶಾಲೆಗಳು ಬಾಗಿಲು ಮುಚ್ಚುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.ಸುರಕ್ಷತಾ ಮಾನದಂಡಗಳನ್ನು ಖಾಸಗಿ ಶಾಲೆಗಳು ಅನುಸರಿಸದೆ ಇರುವುದಕ್ಕೆ ಕಾರಣ ಯಾರು? ಇದರ ಹೊಣೆಯನ್ನು ಹೊರುವವರು ಯಾರು ಎಂಬ ಪ್ರಶ್ನೆ ಎದ್ದಿದೆ. ಶಾಲೆಗಳು ಮುಚ್ಚಿದರೆ ಮಕ್ಕಳ ಭವಿಷ್ಯವೇನು ಎಂಬ ಪ್ರಶ್ನೆ ಪೋಷಕರನ್ನು ಕಾಡುತ್ತಿದೆ.
ಲೋಕೋಪಯೋಗಿ ಇಲಾಖೆ ಮಾರ್ಗಸೂಚಿಗಳನ್ನು ನೀಡಿದ್ದು, ಅಗ್ನಿಶಾಮಕ ದಳ ಮತ್ತು ಸುರಕ್ಷತಾ ಪ್ರಮಾಣಗಳನ್ನು 10 ದಿನಗಳ ಗಡುವಿನೊಳಗೆ ಪಡೆಯುವಂತೆ ಸೂಚಿಸಿದೆ. ಕೇವಲ 10 ದಿನದೊಳಗೆ ಪ್ರಮಾಣ ಪತ್ರಗಳನ್ನು ಹೇಗೆ ಪಡೆಯುವುದು? ಸರಕಾರ ಯಾಕೆ ಈ ರೀತಿ ಒತ್ತಡ ಹೇರುತ್ತಿದೆ? ಸರಿಯಾದ ಮಾರ್ಗಸೂಚಿಗಳನ್ನು ನೀಡುತ್ತಿಲ್ಲ, ನಾವು ದಾಖಲೆಗಳನ್ನು ನೀಡಲು ಸಿದ್ದರಿದ್ದೇವೆ, ಆದರೆ ಅದಕ್ಕೆ ಕಾಲಾವಕಾಶ ನೀಡಬೇಕಿದೆ. ಇಲ್ಲದೆ ಹೋದರೆ. ಭ್ರಷ್ಟ ಅಧಿಕಾರಿಗಳು ಹಣ ಮಾಡಿ ಪ್ರಮಾಣ ಪತ್ರ ನೀಡಲು ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಖಾಸಗಿ ಶಾಲೆಗಳು ಆರೋಪಿಸುತ್ತಿವೆ.
ಈ ನಿರ್ಲಕ್ಷ್ಯಕ್ಕೆ ಯಾರು ಹೊಣೆ : ಖಾಸಗಿ ಶಾಲೆಗಳ ಕಟ್ಟಡ ಸುರಕ್ಷತೆಯ ಕುರಿತು ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಈ ನಿರ್ಲಕ್ಷ್ಯ ಯಾರದ್ದು ಎಂಬ ಪ್ರಶ್ನೆ ಇದೆ. ಖಾಸಗಿ ಶಿಕ್ಷಣ ಸಂಸ್ಥೆಗಳದ್ದಾ? ಅಥವಾ ಸರಕಾರ ಮತ್ತು ಶಿಕ್ಷಣ ಇಲಾಖೆಯದ್ದ? ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಇಲಾಖೆಯತ್ತ ಬೊಟ್ಟು ಮಾಡಿ ತೋರಿಸುತ್ತಿವೆ. ಹೌದ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯ ಈಗ ಎದ್ದು ಕಾಣುತ್ತಿದೆ. ಈ ಸ್ಥಿತಿಯ ಹೊಣೆಗಾರಿಗೆಯನ್ನು ಶಿಕ್ಷಣ ಇಲಾಖೆ ಹೊರಬೇಕಿದೆ. ಯಾಕೆ ಅಂದರೆ 2009 ರಲ್ಲಿ ಕಟ್ಟಡ ಸುರಕ್ಷತೆಯ ಕುರಿತು ಸುಪ್ರಿಂ ಕೋರ್ಟ್ ಆದೇಶವನ್ನು ನೀಡಿತ್ತು. ಆದರೆ ಆ ಆದೇಶ ಜಾರಿಯಾಗಿದ್ದು 2020 ರಲ್ಲಿ. ಅಲ್ಲಿಯವರೆಗೆ ಶಿಕ್ಷಣ ಇಲಾಖೆ ಮೌನವಹಿಸಿದ್ದು ಯಾಕೆ ಎಂಬ ಪ್ರಶ್ನೆ ಈಗ ಎದ್ದಿದೆ. 12 ವರ್ಷಗಳ ಕಾಲ ಬಾಯಿಗೆ ಬೀಗ ಹಾಕಿಕೊಂಡಿದ್ದ ಶಿಕ್ಷಣ ಇಲಾಖೆ ಈಗ ಧೀಡರನೇ ಲಾಕ್ ಓಪನ್ ಮಾಡಿದ್ದುನ್ನು ಗಮನಿಸಿದರೆ ಶಿಕ್ಷಣ ಇಲಾಖೆ ಲಾಭಿಗೆ ಮುಂದಾಗಿದೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ.
ಸುಪ್ರೀಂ ಕೋರ್ಟ್ ನಿರ್ದೇಶನದಲ್ಲಿ ಏನಿದೆ? 2009 ರಲ್ಲಿ ಸುಪ್ರಿಂ ಕೋರ್ಟ್ ನೀಡಿದ ತೀರ್ಪಿನಂತೆ ಎಲ್ಲಾ ಶಾಲೆಗಳು ಸುರಕ್ಷಿತವಾದ ಕಟ್ಟಡವನ್ನು ಹೊಂದಬೇಕು ಎಂದು ಹೇಳಿದೆ. 2012 ರೊಳಗಾಗಿ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳು ಕಟ್ಟಡ ಸುರಕ್ಷತಾ ಪ್ರಮಾಣ ಪತ್ರವನ್ನು ಹೊಂದರಿಬೇಕು. ಯಾವ ಶಾಲೆ ʻಕಟ್ಟಡ ಸುರಕ್ಷʼ ಪ್ರಮಾಣ ಪತ್ರವನ್ನು ಹೊಂದಿರುವುದಿಲ್ಲ ಅಂತಹ ಶಾಲೆಯ ಮಾನ್ಯತೆಯನ್ನು ರದ್ದು ಮಾಡಬೇಕು ಎಂದು ಹೇಳಿದೆ. ಆದರೆ ರಾಜ್ಯ ಸರಕಾರ 2020 ರವರೆಗೆ ಮೌನವಾಗಿದ್ದು. ತರಾತುರಿಯಲ್ಲಿ ಈಗ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಒತ್ತಡ ಹೇರುತ್ತಿದೆ. ಬರೋಬ್ಬರಿ 11 ವರ್ಷಗಳ ಕಾಲ ಸುಪ್ರಿಂ ಆದೇಶವನ್ನು ಟಿಜೋರಿಯಲ್ಲಿ ಭದ್ರವಾಗಿಸಿ ಇಟ್ಟದ್ದ ಶಿಕ್ಷಣ ಇಲಾಖೆ 2020-21 ರಲ್ಲಿ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸುತ್ತೋಲೆಯನ್ನು ಹೊರಡಿಸುತ್ತದೆ. ಆ ಸುತ್ತೋಲೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಬಿಲ್ಡಿಂಗ್ ಕೋಡ್ ಪ್ರಮಾಣಪತ್ರವನ್ನು ಹಾಗೂ ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣ ಪತ್ರವನ್ನು ಕಡ್ಡಾಯವಾಗಿ ಪಡೆಯಬೇಕು ಇಲ್ಲದೆ ಇದ್ದರೆ ಮಾನ್ಯತೆಯನ್ನು ರದ್ದು ಮಾಡುವುದಾಗಿ ಹೇಳಿದೆ. ಹಲವಾರಿ ಬಾರಿ ಖಾಸಗಿ ಶಿಕ್ಷಣ ಸಂಸ್ಥೆಗಳು ಕಾಲಾವಕಾಶಕ್ಕೆ ಮನವಿ ಮಾಡಿದರೂ ಕೇವಲ 10 ದಿನಗಳಲ್ಲಿ ಈ ಎಲ್ಲಾ ದಾಖಲೆಗಳನ್ನು ನೀಡುವಂತೆ ಸೂಚಿಸಿದೆ.
ಜವಾಬ್ದಾರಿ ಮರೆತವೇ ಖಾಸಗಿ ಶಿಕ್ಷಣ ಸಂಸ್ಥೆಗಳು : 2009 ರಲ್ಲಿ ಕಟ್ಟಡ ಸುರಕ್ಷತೆಯ ಕುರಿತು ಸುಪ್ರಿಂ ಮಾಡಿರುವ ಆದೇಶ ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಗೊತ್ತಿದೆ. ಆದರೆ ಇವರು ಸುಪ್ರಿಂ ತೀರ್ಮಾನವನ್ನು ಜಾರಿ ಮಾಡುವ ಬದಲು, ಸರಕಾರ/ ಶಿಕ್ಷಣ ಇಲಾಖೆಯ ಆದೇಶಕ್ಕೆ ಕಾದು ಕುಳಿತು ಜಾಣ ನಡೆ ಅನುಸರಿಸಿವೆ. ಇಲ್ಲದ ಸಮಸ್ಯೆಯನ್ನು ನಾವ್ಯಾಕೆ ಮೈಮೇಲೆ ಹಾಕಿ ಕೊಳ್ಳಬೇಕು ಎಂಬುದು ಖಾಸಗಿ ಶಿಕ್ಷಣ ಸಂಸ್ಥೆಗಳ ವಾದ ಇದ್ದಂತೆ ಕಾಣುತ್ತದೆ. 2009 ರಲ್ಲಿ ಸುಪ್ರೀಂ ತೀರ್ಪು ಬಂದಿದೆ. 2012 ರೊಳಗಾಗಿ ಕಟ್ಟಡದ ಸುರಕ್ಷತಾ ಪ್ರಮಾಣ ಪತ್ರವನ್ನು ಯಾಕೆ ಹೊಂದಲು ಸಾಧ್ಯವಾಗಲಿಲ್ಲ ಎಂದು ರುಪ್ಸ ಅಧ್ಯಕ್ಷ ಲೋಕೇಶ್ ತಾಳಿಕಟ್ಟಿಯವರನ್ನು ಕೇಳಿದಾಗ ” ನಾವು 2012 ರಿಂದಲೂ ಶಿಕ್ಷಣ ಇಲಾಖೆಯನ್ನು ಕೇಳುತ್ತಲೇ ಇದ್ದೇವೆ. ಕಟ್ಟಡದ ಸುರಕ್ಷತೆಯ ಪ್ರಮಾಣ ಪತ್ರ ಪಡೆಯಲು ಶಿಕ್ಷಣ ಇಲಾಖೆ ಏನಾದರೂ ಮಾರ್ಗಸೂಚಿ ಇದೆಯಾ? ಅದಕ್ಕೇನಾದರೂ ಅರ್ಜಿ ಇದೆಯಾ? ಅದನ್ನು ಯಾವರೀತಿ ಇಲಾಖೆಗೆ ಸಲ್ಲಿಸಬೇಕು ಎಂದು ಶಿಕ್ಷಣ ಇಲಾಖೆಯನ್ನು ಕೇಳುತ್ತಲೆ ಬಂದಿದ್ದೇವೆ. ಆದರೆ ಸರಕಾರ ಇಲ್ಲಿಯವರೆಗೆ ಸರಿಯಾದ ಮಾರ್ಗಸೂಚಿಯನ್ನು ನೀಡಿಲ್ಲ. ಈಗ ಒತ್ತಡ ಹಾಕುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಾರೆ.
ಸಿಬ್ಬಂದಿಯ ಕೊರತೆ : ನೃಪತುಂಗ ರಸ್ತೆಯಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ತಂತ್ರಜ್ಞರು ಹಾಗೂ ಸಿಬ್ಬಂದಿಯ ಕೊರತೆ ಎದ್ದು ಕಾಣುತ್ತಿದೆ. ನೀವು ಇಲಾಖೆ ಭೇಟಿ ನೀಡಿದರೆ ಒಂದು ಸಣ್ಣ ಕೆಲಸ ಮುಗಿಸಿಕೊಂಡ ಹೊರ ಬರುವಷ್ಟರಲ್ಲಿ ಸಂಜೆಯಾಗುತ್ತದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ದಾಖಲೆಯನ್ನು ಪರಿಶೀಲನೆ ನಡೆಸಲು ಪ್ರತ್ಯೇಕ ವಿಭಾಗವಿದ್ದರೂ ಅಲ್ಲಿ ತರಬೇತಿ ಗೊಳ್ಳದ ಸಿಬ್ಬಂದಿ ಇರುವ ಕಾರಣ ಇಂತಹ ಎಡವಟ್ಟು ಆದಂತೆ ಕಾಣುತ್ತದೆ. ಸುಪ್ರಿಂ ಕೋರ್ಟ್ ಆದೇಶ ಜಾರಿ ಯಾಗುವುದಕ್ಕೆ 11 ವರ್ಷ ಸಮಯ ತೆಗೆದುಕೊಂಡಿದೆ ಎಂದರೆ ಅಲ್ಲಿರುವ ಸಿಬ್ಬಂದಿಗಳ ಕೊರತೆ ಎಷ್ಟಿದೆ ಎಂಬುದನ್ನು ಇದು ತೋರಿಸುತ್ತದೆ.
ಒಟ್ಟಿನಲ್ಲಿ ಶಿಕ್ಷಣ ಇಲಾಖೆ, ಸರಕಾರದ ನಿರ್ಲಕ್ಷ್ಯಕ್ಕೆ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಜಾಣ ನಡೆಯಿಂದಾಗಿ ಪೋಷಕರು ಮತ್ತು ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಇದರ ಸಾಧಕ ಬಾದಕ ತಿಳದಿರುವ ಶಿಕ್ಷಣ ಇಲಾಖೆ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಬೇಕಿದೆ. ಇನ್ನೂ ಖಾಸಗಿ ಶಿಕ್ಷಣ ಸಂಸ್ಥೆಗಳು ತಾಂತ್ರಿಕವಾಗಿ ವರ್ತಿಸದೆ ಮಕ್ಕಳ ಭವಿಷ್ಯದ ದೃಷ್ಟಿಯಲ್ಲಿ ಕರ್ತವ್ಯವನ್ನು ಮರೆಯಬೇಕಿದೆ, ಮಕ್ಕಳಿಂದ ಶಾಲಾ ಕಟ್ಟಡ ಶುಲ್ಕ ಪಡೆಯುವ ಖಾಸಗಿ ಶಿಕ್ಷಣ ಸಂಸ್ಥೆಗಳು ಕಟ್ಟಡ ಸುರಕ್ಷತೆಯ ಪ್ರಮಾಣಪತ್ರವನ್ನು ಪಡೆಯಬೇಕು ಎಂಬುದನ್ನು ಅರಿಯದೇ ಶಾಲೆ ನಡೆಸುತ್ತಿವೆಯಾ ಎಂಬ ಪ್ರಶ್ನೆಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.