1 ಕೋಟಿ ಉದ್ಯೋಗ ನಷ್ಟ–ಶೇ.97ರಷ್ಟು ಕುಟುಂಬಕ್ಕೆ ಕಡಿಮೆಯಾದ ಆದಾಯ: ಸಿಎಂಐಇ

ಮುಂಬೈ: ಕೋವಿಡ್ ಮಹಾಸೋಂಕಿನ ಎರಡನೇ ಅಲೆಯ ಪರಿಣಾಮವಾಗಿ ದೇಶದಲ್ಲಿ ಒಂದು ಕೋಟಿಗೂ ಹೆಚ್ಚು ಮಂದಿಯು ಉದ್ಯೋಗ ಕಳೆದುಕೊಂಡಿದ್ದಾರೆ. ಶೇಕಡಾ 97ರಷ್ಟು ಕುಟುಂಬಗಳ ಆದಾಯ ಕಡಿಮೆಯಾಗಿದೆ ಎಂದು ‘ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಮುಖ್ಯ ಕಾರ್ಯನಿರ್ವಾಹಕ ಮಹೇಶ್ ವ್ಯಾಸ್ ಹೇಳಿದ್ದಾರೆ.

ಉದ್ಯೋಗ ನಷ್ಟಗೊಳ್ಳಲು ಪ್ರಮುಖವಾದ ಕಾರಣವೆಂದರೆ ಕೋವಿಡ್ ಎರಡನೇ ಅಲೆ. ಆರ್ಥಿಕತೆಯ ಚಲನೆ ವೇಗ ಪಡೆದುಕೊಂಡಾಗ ಮಾತ್ರ ಈ ಸಮಸ್ಯೆಯ ಒಂದು ಭಾಗವನ್ನು ಮಾತ್ರ ಪರಿಹಾರವಾಗಲಿದೆ. ಆದರೆ ಸಂಪೂರ್ಣವಾಗಿ ಬಗೆಹರಿಯುವ ಯಾವ ನಿರೀಕ್ಷೆಗಳು ಗೋಚರವಾಗುತ್ತಿಲ್ಲ. ಎಂದು ಹೇಳಿದರು.

ಇದನ್ನು ಓದಿ: ರೈತ-ಕೂಲಿಕಾರರ ಕೋವಿಡ್‌ ಪರಿಹಾರ ಹೆಚ್ಚಳಕ್ಕೆ ಕೆಪಿಆರ್‌ಎಸ್‌ ಆಗ್ರಹ

ಸಿಎಂಐಇ ಲೆಕ್ಕಾಚಾರದ ಪ್ರಕಾರ ಏಪ್ರಿಲ್‌ನಲ್ಲಿ ಶೇಕಡಾ 8ರಷ್ಟು ಇದ್ದ ನಿರುದ್ಯೋಗದ ಪ್ರಮಾಣ ಮೇ ತಿಂಗಳ ಅಂತ್ಯದಲ್ಲಿ ಶೇಕಡಾ 12ಕ್ಕೆ ಏರಿಕೆಯಾಗಿರುವ ಅಂದಾಜು ಇದೆ ಎಂದು ಮಹೇಶ್‌ ವ್ಯಾಸ್ ಅವರು ಹೇಳಿದ್ದಾರೆ.

ಉದ್ಯೋಗ ಕಳೆದುಕೊಂಡವರು ಮತ್ತೆ ಉದ್ಯೋಗವನ್ನು ಪಡೆದುಕೊಳ್ಳುವುದು ಅತ್ಯಂತ ಕಷ್ಟಕರವಾಗುತ್ತದೆ. ಅನೌಪಚಾರಿಕ ವಲಯದಲ್ಲಿ ಉದ್ಯೋಗ ಕಳೆದುಕೊಂಡವರಿಗೆ ಬೇಗನೆ ಮರಳಿ ಪಡೆಯಲು ಸಾಧ್ಯವಾಗುತ್ತದೆ. ಆದರೆ, ಔಪಚಾರಿಕ ವಲಯ ಮತ್ತು ಉತ್ತಮ ಗುಣಮಟ್ಟದ ಕೆಲಸ ಕಳೆದುಕೊಂಡವರಿಗೆ ಮರಳಿ ಉದ್ಯೋಗ ಲಭಿಸುವುದು ವರ್ಷವಾದರೂ ಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

2020ರ ಮೇ ವೇಳೆಗೆ ದೇಶದ ನಿರುದ್ಯೋಗ ಪ್ರಮಾಣ ದಾಖಲೆ ಮಟ್ಟ ತಲುಪಿತ್ತು. ಕೋವಿಡ್ ಎರಡನೇ ಅಲೆಯು ಇದನ್ನು ಮತ್ತಷ್ಟು ಹೆಚ್ಚಿಸಿತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನು ಓದಿ: ಜೂನ್‌ 7: ಜೀವ ಮತ್ತು ಜೀವನ ಉಳಿಸಲು ಆದಿವಾಸಿಗಳ ಪ್ರತಿಭಟನೆ

ಸಿಎಂಐಇ ಸಂಸ್ಥೆಯು ಏಪ್ರಿಲ್‌ನಲ್ಲಿ ರಾಷ್ಟ್ರವ್ಯಾಪಿ 1.75 ಲಕ್ಷ ಕುಟುಂಬಗಳ ಸಮೀಕ್ಷೆಯನ್ನು ನಡೆಸಿದೆ ಎಂದು ಮಹೇಶ್ ವ್ಯಾಸ್‌ ಹೇಳಿದ್ದು, ಊದ್ಯೋಗ ನಷ್ಟದ ಪ್ರಮಾಣ ಕಳೆದ ಒಂದು ವರ್ಷದಲ್ಲಿ ಹೆಚ್ಚುತ್ತಿದ್ದು, ಅದರೊಂದಿಗೆ ಆದಾಯದ ಏರಿಕೆಯಲ್ಲಿನ ಕಡಿತವೂ ಅಧಿಕಗೊಂಡಿರುವುದನ್ನು ತೋರಿಸುತ್ತಿದೆ. ಕೋವಿಡ್‌ ಎರಡನೇ ಅಲೆಯ ಪರಿಣಾಮವಾಗಿ ಕೇವಲ ಶೇಕಡಾ 3ರಷ್ಟು ಜನರು ಆದಾಯ ಹೆಚ್ಚಳಕ್ಕೆ ಸಾಕ್ಷಿಯಾಗಿದ್ದರೆ, ಶೇಕಡಾ 55ರಷ್ಟು ಜನರು ತಮ್ಮ ಆದಾಯವು ಒಂದು ವರ್ಷದಲ್ಲಿ ಕುಸಿದಿದೆ ಎಂದು ಹೇಳಿಕೊಂಡಿದ್ದಾರೆ. ಉಳಿದ ಶೇಕಡಾ 42ರಷ್ಟು ಜನರು ತಮ್ಮ ಆದಾಯವು ಹಿಂದಿನ ವರ್ಷದ ಅವಧಿಯಲ್ಲಿ ಇದ್ದಂತೆ ಇದೆ ಯಾವುದೇ ಬದಲಾವಣೆಯಾಗಿಲ್ಲ ಎಂದು ಹೇಳಿದ್ದಾರೆ.

“ಹಣದುಬ್ಬರಕ್ಕೆ ಸಮನಾಗಿ ನಾವು ಗಮನಿಸುವುದಾದರೆ, ದೇಶದ ಶೇಕಡಾ 97ರಷ್ಟು ಕುಟುಂಬಗಳು ಕೋವಿಡ್‌ ಸಾಂಕ್ರಾಮಿಕದ ಪರಿಣಾಮವಾಗಿ ಆದಾಯದಲ್ಲಿ ಅತಿ ಹೆಚ್ಚಿನ ಕುಸಿತ ಕಂಡಿದೆ” ಎಂದು ಅವರು ಸುದ್ದಿಸಂಸ್ಥೆಯೊಂದಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.

ಕೋವಿಡ್‌ ಸಾಂಕ್ರಾಮಿಕದಿಂದಾಗಿ ಉದ್ಯೋಗದಲ್ಲಿ ಕಾರ್ಮಿಕರ ಭಾಗವಹಿಸುವಿಕೆ ಪ್ರಮಾಣ ಈಗ ಶೇಕಡಾ 40ಕ್ಕೆ ಇಳಿದಿದೆ. ದುಡಿಯುವ ಕೈಗಳ ಉದ್ಯೋಗದಲ್ಲಿನ ಕುಸಿತಕ್ಕೆ ಇದು ಕಾರಣವಾಗಿದೆ.

ಕಳೆದ ವರ್ಷ ದೇಶದಲ್ಲಿ ಜಾರಿಗೆ ತಂದ ಲಾಕ್‌ಡೌನ್ ಕಾರಣದಿಂದ 2020 ರ ಮೇ ತಿಂಗಳಲ್ಲಿ ಉದ್ಯೋಗ ನಷ್ಟದ ಪ್ರಮಾಣ ದಾಖಲೆಯ ಗರಿಷ್ಠ 23.5  ಮಟ್ಟಕ್ಕೆ ತಲುಪಿತ್ತು. ಸೋಂಕಿನ ಎರಡನೇ ಅಲೆಯ ತೀವ್ರತರ ಪರಿಣಾಮದಿಂದಾಗಿ ನಿರುದ್ಯೋಗ ಏರಿಕೆಯಾಗುತ್ತಿದೆ. ಈಗಾಗಲೇ ಹಲವೆಡೆ ಲಾಕ್‌ಡೌನ್‌ ಜಾರಿಯಲ್ಲಿದ್ದು ನಿರ್ಬಂಧಗಳು ಸಡಿಕೆಯ ನಂತರವೇ ಆರ್ಥಿಕ ಚಟುವಟಿಕೆಗಳು ಕಾರ್ಯರಾಂಭ ಪಡೆದುಕೊಳ್ಳಲಿದೆ.

Donate Janashakthi Media

Leave a Reply

Your email address will not be published. Required fields are marked *