ಸಂವಿಧಾನ ಮತ್ತು ನಾಗರಿಕರ ಹಕ್ಕುಗಳ ಮೇಲೆ ಆಕ್ರಮಣಗಳನ್ನು ನಡೆಸಿ ಹಿಂದುತ್ವ ಆಳ್ವಿಕೆಯನ್ನು ಸ್ಥಾಪಿಸಲು ಮೋದಿ ಸರಕಾರ ಪ್ರಮುಖ ಹೆಜ್ಜೆಗಳನ್ನಿಟ್ಟಿರುವುದನ್ನು ಕಂಡ ೨೦೧೯ರ ವರ್ಷ ಒಂದು ಮಹತ್ವದ ಕ್ಷಣದಲ್ಲಿ ಅಂತ್ಯಗೊಂಡಿದೆ-ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಯಲ್ಲಿ ಜನಗಳ ಎದುರೇಟು ಆರಂಭವಾಗಿದೆ. ಹೊಸ ವರ್ಷ ಜನವರಿ ೮ರಂದು ಇನ್ನೊಂದು ಬಲಿಷ್ಟ ಪ್ರತಿಭಟನಾ ಕಾಯಾಚರಣೆಯನ್ನು ಕಾಣಲಿದೆ.
ಹೊಸ ವರ್ಷ 2020 ಒಂದು ಹೋರಾಟದ ಮತ್ತು ನಿರೀಕ್ಷೆಯ ಭಾವದೊಂದಿಗೆ ಆರಂಭವಾಗುತ್ತಿದೆ. ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ದುಡಿಯುವ ಜನಗಳ ಹಕ್ಕುಗಳ ರಕ್ಷಣೆಯ ಹೋರಾಟ ಸಾಗಿದೆ. ಇದನ್ನು ಮುಂದೊಯ್ಯುವ ಪ್ರತಿಜ್ಞೆ ಮಾಡೋಣ.
ಈಗ ಕೊನೆಗೊಂಡಿರುವ ವರ್ಷ ೨೦೧೯ ದೇಶದಲ್ಲಿ ಒಂದು ಪೂರ್ಣ ಪ್ರಮಾಣದ ಹಿಂದುತ್ವ ಸರ್ವಾಧಿಕಾರಶಾಹಿ ಆಳ್ವಿಕೆಯ ಹೇರಿಕೆಯನ್ನು, ಒಂದು ತ್ವರುತವಾಗಿ ಹದಗೆಡುತ್ತಿರುವ ಆರ್ಥಿಕ ಸನ್ನಿವೇಶವನ್ನು ಮತ್ತು ಸಂವಿಧಾನದ ಮೇಲೆ ಹಾಗೂ ನಾಗರಿಕರ ಪ್ರಜಾಪ್ರಭುತ್ವ ಹಕ್ಕುಗಳ ಮೇಲೆ ಸತತ ಆಘಾತಗಳನ್ನು ಕಂಡಿತು. ವರ್ಷದ ಕೊನೆಯ ವೇಳೆಗೆ ಸಂವಿಧಾನದ ರಕ್ಷಣೆಗೆ ಮತ್ತು ಜಾತ್ಯತೀತ-ಪ್ರಜಾಪ್ರಭುತ್ವದ ಮೇಲೆ ಆಕ್ರಮಣಗಳನ್ನು ವಿರೋಧಿಸಿ ಒಂದು ಸ್ವಯಂಸ್ಫೂರ್ತಿಯ ಮತ್ತು ಬಲಿಷ್ಟ ಪ್ರತಿಭಟನಾ ಆಂದೋಲನವನ್ನೂ ಕಂಡಿತು.
ಮೇ ೨೦೧೯ರ ಲೋಕಸಭಾ ಚುನಾವಣೆಯನ್ನು ಬಿಜೆಪಿ ಫುಲ್ವಾಮ ಭಯೋತ್ಪಾದಕ ದಾಳಿ ಮತ್ತು ಅದಕ್ಕೆ ಪ್ರತೀಕಾರವಾಗಿ ಬಾಲಕೋಟ್ ಪ್ರಹಾರದ ಹಿನ್ನೆಲೆಯಲ್ಲಿ ಸೃಷ್ಟಿಸಿದ ಒಂದು ರಾಷ್ಟ್ರವಾದಿ ಪ್ರಚಾರದ ಬೆನ್ನೇರಿ ಗೆದ್ದುಕೊಂಡಿತು. ಹೆಚ್ಚಿನ ಬಹುಮತದಿಂದ ಅಧಿಕಾರಕ್ಕೆ ಮರಳಿದ ಮೋದಿ ಸರಕಾರ ತನ್ನ ಹಿಂದುತ್ವ ಅಜೆಂಡಾವನ್ನು ಹೇರಲು ತ್ವರಿತ ಕ್ರಮಗಳನ್ನು ಕೈಗೊಂಡದ್ದನ್ನು ನೋಡಿದೆವು.
೨೦೧೯ರ ಉಳಿದ ಏಳು ತಿಂಗಳಲ್ಲಿ ಕಲಮು ೩೭೦ನ್ನು ನಿಷ್ಕ್ರಿಯಗೊಳಿಸಲಾಯಿತು ಹಾಗೂ ಜಮ್ಮು ಮತ್ತು ಕಾಶ್ಮೀರವನ್ನು ಒಂದು ರಾಜ್ಯವಾಗಿ ಕಳಚಿ ಹಾಕಿದ್ದು ಕಾಣ ಬಂತು; ಬಾಬ್ರಿ ಮಸೀದಿ ಇದ್ದ ಸ್ಥಳದಲ್ಲಿ ಒಂದು ರಾಮಮಂದಿರ ಕಟ್ಟುವ ಪರವಾದ ಸುಪ್ರಿಂ ಕೋರ್ಟ್ ತೀರ್ಪು ಬಂತು; ಸಂಸತ್ತು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸಿತು. ಇವು ಮೂರೂ ಹಿಂದುತ್ವ ಅಜೆಂಡಾದ ಪ್ರಮುಖ ಹೆಜ್ಜೆಗಳು.
ಸಂವಿಧಾನಕ್ಕೆ ಮೋಸ ಮಾಡಿ ಮತ್ತು ಒಕ್ಕೂಟ ನೀತಿಯನ್ನು ಉಲ್ಲಂಘಿಸಿ ಕಲಮು ೩೭೦ನ್ನು ನಿಷ್ಪ್ರಯೋಜಕಗೊಳಿಸಲಾಯಿತು ಹಾಗೂ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಮಾಡಲಾಯಿತು. ಸಂಪೂರ್ಣ ರಾಜ್ಯದ ಬಾಯಿ ಮುಚ್ಚಿಸಲಾಯಿತು, ಕಣಿವೆಯ ನಾಗರಿಕರಿಗೆ ಅವರ ಮೂಲ ಹಕ್ಕುಗಳನ್ನೇ ವಂಚಿಸಲಾಯಿತು-ಚಲನೆಯ, ಮುಕ್ತವಾಗಿ ಮಾತಾಡುವ, ಸಭೆ ಸೇರುವ, ಅಷ್ಟೇ ಏಕೆ ಬದುಕು ಮತ್ತು ಸ್ವಾತಂತ್ರ್ಯದ ಹಕ್ಕುಗಳೂ ಇಲ್ಲದಂತೆ ಮಾಡಲಾಗಿದೆ. ನೂರಾರು ರಾಜಕೀಯ ಮುಖಂಡರನ್ನು, ಕಾರ್ಯಕರ್ತರನ್ನು ಸ್ಥಾನಬದ್ಧತೆಯಲ್ಲಿ ಇಡಲಾಗಿದೆ, ಜಗತ್ತಿನಲ್ಲೇ ಅತಿ ದೀರ್ಘ ಅವಧಿಯ ಇಂಟರ್ನೆಟ್ ಸ್ಥಬ್ಧತೆಯನ್ನು ಹೇರಲಾಗಿದೆ. ಈ ಎಲ್ಲ ಕರಾಳ ಕ್ರಮಗಳ ಹಿಂದೆ ಇರುವುದು ಭಾರತೀಯ ಒಕ್ಕೂಟದ ಏಕೈಕ ಮುಸ್ಲಿಂ ಬಹುಸಂಖ್ಯಾತ ರಾಜ್ಯದ ಅಸ್ತಿತ್ವವೇ ಇಲ್ಲದಂತೆ ಮಾಡುವ ದೃಢನಿರ್ಧಾರ.
ಅಯೋಧ್ಯಾ ವಿವಾದದ ಮೇಲೆ ಸುಪ್ರಿಂ ಕೋರ್ಟಿನ ತೀರ್ಪು ಸಂವಿಧಾನದ ಜಾತ್ಯತೀತ ನೀತಿಗೆ ಕೊಟ್ಟಿರುವ ಮತ್ತೊಂದು ಆಘಾತ. ಆ ತೀರ್ಪು, ಜಾತ್ಯತೀತತೆಯ ನಾಮ ಜಪ ಮಾಡುತ್ತಲೇ ಒಂದು ಮಾಲಕತ್ವದ ಅಹವಾಲಿನಲ್ಲಿ ನಿಜಸಂಗತಿಗಳು ಮತ್ತು ಸಾಕ್ಷ್ಯಗಳ ಆಧಾರದಲ್ಲಿ ನಿರ್ಧರಿಸುವ ಬದಲು, ಅಂತಿಮವಾಗಿ, ವಿವಾದದ ಒಂದು ಪಕ್ಷದ ನಂಬಿಕೆಗೆ ಇನ್ನೊಂದು ಪಕ್ಷದ ನಂಬಿಕೆಗಿಂತ ಆದ್ಯತೆ ಕೊಟ್ಟಿತು. ಬಹುಸಂಖ್ಯಾತವಾದದೊಂದಿಗೆ ಈ ರಾಜಿ ಸಂವಿಧಾನದ ಅಡಿಯಲ್ಲಿರುವ ಸಂಸ್ಥೆಗಳನ್ನು ಎಷ್ಟರ ವರೆಗೆ ಶಿಥಿಲಗೊಳಿಸಲಾಗಿದೆ ಎಂಬುದನ್ನು ಸೂಚಿಸುತ್ತದೆ.
ಮೋದಿ ಸರಕಾರ ಕೈಗೊಂಡ ಮುಂದಿನ ಕ್ರಮ ಎಂದರೆ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿದ್ದು. ಈ ತಿದ್ದುಪಡಿ ಮೊತ್ತಮೊದಲ ಬಾರಿಗೆ ಮತೀಯ ಸಂಯೋಜನೆಯ ಆಧಾರದಲ್ಲಿ ಪೌರತ್ವದ ಮಾನದಂಡವನ್ನು ಸೇರಿಸಿದೆ. ಮುಸ್ಲಿಮರನ್ನು ಮಾತ್ರ ಪ್ರತ್ಯೇಕಿಸಿ ಕಾನೂನುಬಾಹಿರ ವಲಸಿಗರ ನಡುವೆ ಅವರನ್ನು ಪೌರತ್ವದ ಪರಿಗಣನೆಯಿಂದಲೇ ಹೊರಗಿಡುತ್ತದೆ. ಸಿಎಎ ಜೊತೆಗೆ ರಾಷ್ಟ್ರೀಯ ಪೌರತ್ವ ರಿಜಿಸ್ಟರನ್ನು ಜಾರಿಗೊಳಿಸುವುದು ಬಿಜೆಪಿಯ ಅಜೆಂಡಾ. ಸಿಎಎ ಮತ್ತು ಎನ್‌ಆರ್‌ಸಿಯನ್ನು ಒಟ್ಟಿಗಿಟ್ಟೇ ನೋಡಬೇಕು. ಸಿಎಎ ಹಿಂದುಗಳು ಮತ್ತು ಇತರ ಮುಸ್ಲಿಮೇತರರು ಪೌರತ್ವ ಪಡೆಯಲು ಅನುಕೂಲ ಮಾಡಿಕೊಟ್ಟರೆ, ಎನ್‌ಆರ್‌ಸಿ ಮುಸ್ಲಿಮರನ್ನು ಪೌರತ್ವ ಪಟ್ಟಿಯಿಂದ ಹೊರಗಿಡಲು ಅವರನ್ನು ನುಸುಳುಕೋರರು ಎಂದು ಗುರಿ ಮಾಡುತ್ತದೆ.
ಹೀಗೆ ೨೦೧೯ ಹಿಂದುತ್ವ ಆಳ್ವಿಕೆಯನ್ನು ಸ್ಥಾಪಿಸಲು ಮೋದಿ ಸರಕಾರ ಪ್ರಮುಖ ಹೆಜ್ಜೆಗಳನ್ನಿಟ್ಟಿರುವುದನ್ನು ಕಂಡಿದೆ.
ಇನ್ನೊಂದು ಆಯಾಮದಲ್ಲೂ ೨೦೧೯ ಗಮನಾರ್ಹವಾಗಿದೆ. ವಿಭಜನಕಾರೀ ಹಿಂದುತ್ವ ಧೋರಣೆಗಳನ್ನು, ದೇಶದ ಅರ್ಥವ್ಯವಸ್ಥೆ ತ್ವರಿತವಾಗಿ ಹದಗೆಡುತ್ತಿರುವ ಸಮಯದಲ್ಲಿ ಮುಂದೊತ್ತಲಾಗುತ್ತಿದೆ. ಜಿಡಿಪಿಯನ್ನು ಲೆಕ್ಕ ಹಾಕುವ ವಿಧಾನವನ್ನು ಮೋಸದಿಂದ ಪರಿಷ್ಕರಿಸಿದರೂ ಜಿಡಿಪಿ ವೃದ್ಧಿ ದರ ಇತ್ಯಾದಿ ಇಳಿಕೆಯನ್ನೇ ತೋರಿಸುತ್ತಿವೆ, ಸತತವಾಗಿ ಏಳು ತ್ರೈಮಾಸಿಕಗಳಲ್ಲಿ ಜಿಡಿಪಿ ವೃದ್ಧಿ ದರ ನಿರಂತರವಾಗಿ ಇಳಿಯುತ್ತಲೇ ಬರುತ್ತಿದೆ. ಕಳೆದ ತ್ರೈಮಾಸಿಕ (ಜುಲೈನಿಂದ ಸಪ್ಟಂಬರ್) ಜಿಡಿಪಿ ವೃದ್ಧಿ ೪.೫% ಮಾತ್ರ ತೋರಿಸಿದೆ.ಇದು ಕಳೆದ ಆರು ವರ್ಷಗಳಲ್ಲೇ ಅತಿ ಕಡಿಮೆ. ೨೦೧೭-೧೮ರ ರಾಷ್ಟ್ರೀಯ ಅಂಕಿ-ಅಂಶ ಕಚೇರಿ(ಎನ್‌ಎಸ್‌ಒ) ಯ ಬಳಕೆದಾರರ ವೆಚ್ಚ ಕುರಿತ ದತ್ತಾಂಶಗಳ ಪ್ರಕಾರ ಬಳಕೆದಾರರು ವೆಚ್ಚ ಮಾಡುವ ಪ್ರಮಾಣ ಕಳೆದ ೪೦ವರ್ಷಗಳಲ್ಲೇ ಅತೀ ಕೆಳಗಿನ ಮಟ್ಟಕ್ಕೆ ಇಳಿದಿದೆ.
ಸರಕಾರ ಬಚ್ಚಿಡಲು ಪ್ರಯತ್ನಿಸಿದ ಉದ್ಯೋಗದ ಅಂಕಿ-ಅಂಶಗಳು ನಿರುದ್ಯೋಗ ದರ ಕಳೆದ ೪೫ ವರ್ಷಗಳಲ್ಲೆ ಅತೀ ಹೆಚ್ಚಿನ ಮಟ್ಟಕ್ಕೆ ಏರಿದ್ದನ್ನು ತೋರಿಸಿದೆ. ಬೇಡಿಕೆಯ ಸಂಕುಚನದೊಂದಿಗೆ ಈಗ ಹಣದುಬ್ಬರದ ಬೆದರಿಕೆಯೂ ಇದೆ. ನವಂಬರ್ ತಿಂಗಳ ಬಳಕೆದಾರ ಬೆಲೆ ಸೂಚ್ಯಂಕ ಹಣದುಬ್ಬರ ೫.೫%ಕ್ಕೆ ಏರಿದೆ ಎಂಬುದನ್ನು ತೋರಿಸಿದೆ. ಡಿಸೆಂಬರ್‌ನಲ್ಲಿ ಇದು ೬% ದಾಟುವ ಸಂಭವವಿದೆ.
ಮೋದಿ ಸರಕಾರ ಆರ್ಥಿಕ ಮಂದಗತಿಯನ್ನು ನಿರ್ವಹಿಸಲು ಕೈಗೊಂಡ ಕ್ರಮಗಳು ಅದು ಆರ್ಥಿಕ ಬಿಕ್ಕಟ್ಟನ್ನು ಎದುರಿಸುವಲ್ಲಿ ವಿಫಲವಾಗಿರುವುದನ್ನು ಎತ್ತಿ ತೋರಿದೆ. ಗ್ರಾಮೀಣ ಬಡವರು ಮತ್ತು ಜನಸಾಮಾನ್ಯರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಲು ಅವರ ಜೇಬುಗಳಿಗೆ ಹೆಚ್ಚಿನ ಹಣ ಸಿಗುವಂತೆ ಮಾಡಲು ಸರಕಾರದ ವೆಚ್ಚಗಳನ್ನು ಹೆಚ್ಚಿಸುವ ಬದಲು ಕಾರ್ಪೊರೇಟ್‌ಗಳಿಗೆ ಮತ್ತು ವಿದೇಶಿ ಬಂಡವಾಳಕ್ಕೆ ಹಲವಾರು ರಿಯಾಯ್ತಿಗಳನ್ನು ಈ ಸರಕಾರ ಪ್ರಕಟಿಸಿತು. ವಿದೇಶಿ ಬಂಡವಾಳ ಹರಿವಿನ ಮೇಲೆ ಹಾಕಿದ್ದ ಸರ್ಚಾರ್ಜ್‌ನ್ನು ಹಿಂತೆಗೆದುಕೊಂಡಿತು, ಮತ್ತು ಕಾರ್ಪೊರೇಟ್ ತೆರಿಗೆಯನ್ನು ೮% ದಷ್ಟು ತೀವ್ರವಾಗಿ ಇಳಿಸಿತು. ಈ ಯಾವ ಕ್ರಮವೂ ಹೂಡಿಕೆಯನ್ನು ಹೆಚ್ಚಿಸಲು ನೆರವಾಗಿಲ್ಲ. ಏಕೆಂದರೆ ಈಗಿರುವ ಮುಖ್ಯ ಪ್ರಶ್ನೆಯೆಂದರೆ ಅರ್ಥವ್ಯವಸ್ಥೆಯಲ್ಲಿ ಬೇಡಿಕೆಯನ್ನು ಉತ್ತೇಜಿಸುವುದು ಹೇಗೆ ಎಂಬುದೇ ಆಗಿದೆ.
ಇನ್ನೊಂದು ಹಾನಿಕಾರಕ ನಿಲುವು ಎಂದರೆ ಎರಡನೇ ಮೋದಿ ಸರಕಾರ ಕೈಗೊಂಡಿರುವ ಭರದ ಖಾಸಗೀಕರಣ. ಬಿಪಿಸಿಎಲ್ ಸೇರಿದಂತೆ ಹಲವಾರು ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಮಾರಾಟ ಮಾಡಲು ಪಟ್ಟಿ ಮಾಡಲಾಗಿದೆ. ಈ ಮಾರಾಟಗಳಿಂದ ಬಂದ ಹಣವನ್ನು ಸರಕಾರದ ರೆವಿನ್ಯೂ ಕೊರತೆಯನ್ನು ತುಂಬಲು ಬಳಸಲಾಗುತ್ತದೆ. ರೈಲ್ವೆ, ರಕ್ಷಣಾ ಉತ್ಪಾದನೆ, ಗಣಿಗಾರಿಕೆ ಮತ್ತು ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಖಾಸಗೀ ವಲಯದ ಪ್ರವೇಶಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ.
ಹಿಂದುತ್ವ ಆಳ್ವಿಕೆ ಪಸರಿಸಿರುವ ಪ್ರತಿಗಾಮಿ ಸಾಮಾಜಿಕ ಮೌಲ್ಯಗಳು ಮಹಿಳೆಯರು ಮತ್ತು ಯುವತಿಯರ ಮೇಲೆ ದುಷ್ಟ ಪರಿಣಾಮ ಬೀರುತ್ತಿವೆ. ಮಹಿಳೆಯರ ಮೇಲೆ ಲೈಂಗಿಕ ದಾಳಿಗಳು ಆತಂಕಕಾರೀ ರೀತಿಯಲ್ಲಿ ಹೆಚ್ಚುತ್ತಿವೆ. ಹೈದರಾಬಾದಿನಲ್ಲಿ ಒಬ್ಬ ಪಶುವೈದ್ಯೆಯ ಅಮಾನುಷ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವ್‌ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದವಳ ಕೊಲೆ ಕಣ್ಣಿಗೆ ರಾಚುವಂತಹ ಉದಾಹರಣೆಗಳು. ಹಿಂದುತ್ವ ಆಳ್ವಿಕೆಯ ಅಡಿಯಲ್ಲಿ ಪಿತೃಪ್ರಧಾನತೆ ಮತ್ತು ಸ್ತ್ರೀದ್ವೇಷದ ವಿಚಾರಗಳು ದಂಡಿಯಾಗಿ ಬೆಳೆದಿವೆ.
ಮೋದಿ ಸರಕಾರದ ಎರಡನೇ ಅಧಿಕಾರಾವಧಿಯಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳೊಂದಿಗೆ ಮಿಲಿಟರಿ ಮತ್ತು ಸಾಮರಿಕ ಸಂಬಂಧಗಳು ಕ್ರೋಡೀಕರಣಗೊಳ್ಳುತ್ತಿವೆ. ಅದು ಭಾರತ-ಶಾಂತಸಾಗರ ರಣತಂತ್ರವಾಗಿರಬಹುದು, ನಾಲ್ಕುದೇಶಗಳ ಮೈತ್ರಿಯನ್ನು ಮೇಲ್ಮಟ್ಟಕ್ಕೆ ಏರಿಸುವದಾಗಿರಬಹುದು ಅಥವ ೨+೨ ಮಾತುಕತೆಗಳಾಗಿರಬಹುದು. ಮಿಲಿಟರಿ ಒಪ್ಪಂದಗಳ ಜಾರಿಯ ಮೂಲಕ ರಾಷ್ಟ್ರೀಯ ಸಾರ್ವಭೌಮತೆಯ ಸವಕಳಿ ವೇಗವಾಗಿ ಮುಂದುವರೆದಿದೆ.
೭೦ ಲಕ್ಷ ಕಾಶ್ಮೀರಿಗಳ ಹಕ್ಕುಗಳ ಮೇಲೆ ಪ್ರಹಾರ ದೇಶದ ಇತರೆಡೆಗಳಲ್ಲಿ ರ್ವಾಧಿಕಾರಶಾಹಿಯ ಬೆಳವಣಿಗೆಯ ಮುನ್ಸೂಚನೆಯಾಗಿತ್ತು. ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಶಾಂತಿಯುತ ಪ್ರತಿಭಟನೆಗಳನ್ನು ದಮನ ಮಾಡಲು ದಂಡ ಸಂಹಿತೆಯ ಸೆಕ್ಷನ್ ೧೪೪ರ ಬಳಕೆ, ಉತ್ತರಪ್ರದೇಶದಲ್ಲಿ ಮುಸ್ಲಿಮರ ಮೇಲೆ ಅಮಾನುಷ ದಬಾವಣೆ, ವಿರೋಧಿಗಳು ಮತ್ತು ಭಿನ್ನಾಭಿಪ್ರಾಯ ಹೊಂದಿರುವವರ ಮೇಲೆ ರಾಜದ್ರೋಹದ ಕಾನೂನು ಅಂಶಗಳ ವ್ಯಾಪಕ ಬಳಕೆ, ಇಂಟರ್ನೆಟ್ ಸ್ಥಬ್ಧಗೊಳಿಸುವುದು, ದೊಂಬಿ ಹತ್ಯೆಗಳ ಪ್ರಕರಣಗಳು ಮತ್ತು ವಿಶ್ವವಿದ್ಯಾಲಯಗಳ ಮೇಲೆ ಪೋಲೀಸ್ ದಾಳಿಗಳೂ ಸೇರಿದಂತೆ ಹಲ್ಲೆಗಳು ಇವೆಲ್ಲವು ಸರ್ವಾಧಿಕಾರಶಾಹಿಯ ಒಟ್ಟು ವಿನ್ಯಾಸದ ಪರಸ್ಪರ ಸಂಬಂಧಿತ ಭಾಗಗಳೇ ಆಗಿವೆ.
ವರ್ಷದ ಅಂತ್ಯದ ವೇಳೆಯಲ್ಲಿ ಝಾರ್ಖಂಡ್ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಸೋಲು ಉಂಟಾಗಿದೆ. ಈ ಮೊದಲು ಹರ್ಯಾಣದಲ್ಲಿ ಬಹುಮತ ಪಡೆಯುವಲ್ಲಿ ಅದು ವಿಫಲವಾಗಿತ್ತು, ಮತ್ತು ಮಹಾರಾಷ್ಟ್ರದಲ್ಲಿ ಮಿತ್ರಪಕ್ಷ ಶಿವಸೇನೆಯನ್ನು ಮತ್ತು ಸರಕಾರವನ್ನು ಕಳಕೊಂಡಿತು. ರಾಜ್ಯ ಚುನಾವಣೆಗಳಲ್ಲಿ ಬಿಜೆಪಿಗೆ ಆಗಿರುವ ಹಿನ್ನಡೆಯು ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯ ಕೋಮುವಾದಿ-ರಾಷ್ಟ್ರವಾದಿ ವೇದಿಕೆಗೆ ಎದುರಾಗಿ ಜಾತ್ಯತೀತ, ಸಾಮ್ರಾಜ್ಯಶಾಹಿ-ವಿರೋಧಿ ರಾಷ್ಟ್ರವಾದ ಮತ್ತು ಜನಪರ ಆರ್ಥಿಕ ಧೋರಣೆಗಳ ಆಧಾರದಲ್ಲಿ ಒಂದು ರಾಷ್ಟ್ರೀಯ ಪರ್ಯಾಯವನ್ನು ಮುಂದಿಡುವುದರ ಮಹತ್ವವನ್ನು ಎತ್ತಿ ತೋರಿದೆ.
ಡಿಸೆಂಬರ್ ೧೧ರಂದು ಸಂಸತ್ತಿನಲ್ಲಿ ಸಿಎಎ ಯನ್ನು ಅಂಗೀಕರಿಸಿದ ಕೂಡಲೇ ಆರಂಭವಾದ ಸಿಎಎ ಮತ್ತು ಎನ್‌ಆರ್‌ಸಿಗೆ ವಿರುದ್ಧವಾಗಿ ದೇಶವ್ಯಾಪಿ ಪ್ರತಿಭಟನೆಗಳು ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆಯ ಮೇಲೆ ಪ್ರಹಾರಗಳ ವಿರುದ್ಧ ಮೊದಲ ಮಹತ್ವದ ಪ್ರತಿಭಟನಾ ಚಳುವಳಿಯಾಗಿದೆ. ಈ ಪ್ರತಿಭಟನೆಗಳಲ್ಲಿ ವಿದ್ಯಾರ್ಥಿಗಳು ಮತ್ತು ಯುವಜನರು ನೇತೃತ್ವದ ಪಾತ್ರ ವಹಿಸುತ್ತಿದ್ದಾರೆ. ಸರಕಾರ ದಮನಕ್ಕಿಳಿದರೂ, ಈ ಪ್ರತಿಭಟನೆಗಳು ಬೆಳೆದಿವೆ, ಮೂರು ವಾರಗಳ ಕಾಲ ನಿರಂತರವಾಗಿ ನಡೆದಿವೆ.
ಆದ್ದರಿಂದ ೨೦೧೯ರ ವರ್ಷ ಒಂದು ಮಹತ್ವದ ಕ್ಷಣದಲ್ಲಿ ಅಂತ್ಯಗೊಂಡಿದೆ-ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಯಲ್ಲಿ ಜನಗಳ ಎದುರೇಟು ಆರಂಭವಾಗಿದೆ. ಹೊಸ ವರ್ಷ ಜನವರಿ ೮ರಂದು ಇನ್ನೊಂದು ಬಲಿಷ್ಟ ಪ್ರತಿಭಟನಾ ಕಾಯಾಚರಣೆಯನ್ನು ಕಾಣಲಿದೆ- ಕೋಟಿಗಟ್ಟಲೆ ಕಾರ್ಮಿಕರು ಮತ್ತು ನೌಕರರು ಸಾರ್ವತ್ರಿಕ ಮುಷ್ಕರ ನಡೆಸಲಿದ್ದಾರೆ, ರೈತರು, ಕೃಷಿ ಕಾರ್ಮಿಕರು ಮತ್ತು ದುಡಿಯುವ ಜನಗಳ ಇತರ ವಿಭಾಗಗಳು ಅದರಲ್ಲಿ ಸೇರಿಕೊಳ್ಳುತ್ತಾರೆ.
ಆದ್ದರಿಂದ, ಹೊಸ ವರ್ಷ ಒಂದು ಹೋರಾಟದ ಮತ್ತು ನಿರೀಕ್ಷೆಯ ಭಾವದೊಂದಿಗೆ ಆರಂಭವಾಗುತ್ತಿದೆ. ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ದುಡಿಯುವ ಜನಗಳ ಹಕ್ಕುಗಳ ರಕ್ಷಣೆಯ ಹೋರಾಟ ಸಾಗಿದೆ. ಇದನ್ನು ಮುಂದೊಯ್ಯುವ ಪ್ರತಿಜ್ಞೆ ಮಾಡೋಣ.