NEP- 2020 ಹೇಳಿದ್ದೇನು? ಬಚ್ಚಿಟ್ಟಿದ್ದೇನು? ಮಾತೃಭಾಷಾ ಶಿಕ್ಷಣದ ತೊಡಕುಗಳನ್ನು NEP ನಿವಾರಿಸುತ್ತದಾ? ಭಾಗ – 1
ತಾಯ್ನುಡಿಯ ಮೂಲಕ ಕಲಿಯುವ ಅವಕಾಶ ಕಲ್ಪಿಸಿದರೆ ಮಕ್ಕಳು ಬೇಗ ಕಲಿಯುತ್ತಾರೆ; ಮತ್ತುಕಲಿಕೆಯ-ಕಲಿಸುವ ಗುಣಮಟ್ಟ ಚೆನ್ನಾಗಿರುತ್ತದೆ ಎಂಬುದು ಒಂದು ಆದರ್ಶದ ವಿಚಾರವಾಗಿ ಬಹಳ ದಿನಗಳಿಂದ ಚಾಲ್ತಿಯಲ್ಲಿದೆ. ತಾಯ್ನುಡಿಯನ್ನೇ ಕಲಿಕೆಯ ಮಾಧ್ಯಮವನ್ನಾಗಿ ಜಾರಿಗೆ ತರಬೇಕೆಂಬ ಬೇಡಿಕೆಯೂ ಹಲವು ದಶಕಗಳಿಂದ ಜೀವಂತವಾಗಿದೆ. ಅಲ್ಲದೆ ಶಿಕ್ಶಣ ಕ್ಶೇತ್ರದಲ್ಲಿ ಕೆಲಸ ಮಾಡಿರುವ ತಜ್ಞರು ಕೂಡ ತಾಯ್ನುಡಿಯ ಮೂಲಕ ಕಲಿಸುವುದರ ಪರವಾಗಿ ಮಾತನಾಡಿದ್ದಾರೆ. ಅನೇಕ ಭಾಷಾ ವಿಜ್ಞಾನಿಗಳೂ ಕೂಡ ತಾಯ್ನುಡಿಯ ಮೂಲಕ ಶಿಕ್ಷಣ ನೀಡಿದರೆ ಕಲಿಕೆ ಹೆಚ್ಚು ಕ್ರಿಯಾಶೀಲವಾಗಿರುತ್ತದೆ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ತಾಯ್ನುಡಿಯು ಒಂದು ಪ್ರಜಾತಾಂತ್ರಿಕ ಮತ್ತು ಮಾನವರ ಮೂಲಭೂತ ಹಕ್ಕಾಗಿದ್ದುಅದರ ಮೂಲಕವೇ ಕಲಿಸುವ ಅವಕಾಶವನ್ನು ಕಲ್ಪಿಸ ಬೇಕು ಎಂದೂ ಕೂಡ ಕೆಲವರುಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯುನೆಸ್ಕೋ ಕೂಡ ಇದನ್ನು ಸಮರ್ಥಿಸಿದೆ. ಅಷ್ಟೆಲ್ಲದೆ ತಾಯ್ನುಡಿಯ ಮೂಲಕ ಮಾತ್ರ ಕಲಿಸುವುದಲ್ಲದೆ ಅಂತಹ ನುಡಿಗಳ ಒಳಗಿರುವ ಅರಿವನ್ನು ಕಲಿಸಬೇಕು. ಆಗ ಮಾತ್ರವೇ ಜನರ ನುಡಿಗಳು ಮತ್ತು ಜ್ಞಾನವನ್ನು ಸಂಗೋಪನೆಗೊಳಿಸಲು ಸಾಧ್ಯ ಎಂಬಷ್ಟರ ಮಟ್ಟಿಗೆ ಈ ಚರ್ಚೆಗಳು ನಡೆಯುತ್ತಿವೆ. ಅಂದರೆ ತಾಯ್ನುಡಿಯ ಮೂಲಕ ಶಿಕ್ಶಣವನ್ನು ನೀಡಬೇಕೆಂಬುದರ ಸುತ್ತ ವ್ಯಾಪಕವಾದ ಚರ್ಚೆಯಾಗಿ ಅದಕ್ಕೆ ಸೈದ್ಧಾಂತಿಕ ತಳಹದಿ ರೂಪುಗೊಂಡಿರುವುದು ಇದರಿಂದ ತಿಳಿಯುತ್ತದೆ.
ಈ ಹಿನ್ನೆಲೆಯಲ್ಲಿಯೇ ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಶಿಕ್ಶಣ ನೀತಿ (ಎನ್‍ಇಪಿ-2020)ಯಲ್ಲಿ ತಾಯ್ನುಡಿಗಳ ಮೂಲಕ ಕಲಿಸುವುದರ ಪರವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಈ ಹಿಂದಿನ ಹಲವು ನೀತಿಗಳಿಗಿಂತ ಹೆಚ್ಚು ಆದ್ಯತೆಕೊಟ್ಟು ತಾಯ್ನುಡಿಗಳ ಮೂಲಕ ಕಲಿಕೆಗೆ ಅವಕಾಶ ನೀಡುವುದರ ಬಗೆಗೆ ಪ್ರಸ್ತಾಪಿಸಿದೆ.ಇದು ಸ್ವಾಗತಾರ್ಹ ವಿಚಾರ. ಒಂದರಿಂದ ಐದನೆಯ ತರಗತಿಯವರೆಗೆ, ಸಾಧ್ಯವಾದರೆ ಎಂಟನೆಯ ತರಗತಿವರೆಗೆ, ಇನ್ನೂ ಮುಂದುವರೆದು ಉನ್ನತ ಶಿಕ್ಶಣದಲ್ಲಿಯೂ ತಾಯ್ನುಡಿಗಳನ್ನು ಬಳಸಬೇಕೆಂಬುದರ ಬಗೆಗೆ ಸೂಚನೆಗಳಿವೆ. ಅಂದರೆ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಶಣದವರೆಗೆ ಸರ್ಕಾರಿ ಮತ್ತು ಖಾಸಗಿ ಶಿಕ್ಶಣ ಸಂಸ್ಥೆಗಳಲ್ಲಿ ‘ಎಲ್ಲೆಲ್ಲಿ ಸಾಧ್ಯವೋ’ ಅಲ್ಲೆಲ್ಲಾ ತಾಯ್ನುಡಿಗಳ ಮೂಲಕ ಕಲಿಕೆಗೆ ಅವಕಾಶ ನೀಡಬೇಕೆಂದು ಹೇಳಲಾಗಿದೆ.ಇಲ್ಲಿ‘ಎಲ್ಲೆಲ್ಲಿ ಸಾಧ್ಯವೋ’ಅಲ್ಲಿ ತಾಯ್ನುಡಿಗಳ ಮೂಲಕ ಕಲಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಹೇಳಲಾಗಿದೆಯೇ ಹೊರತು‘ಕಡ್ಡಾಯ’ವಾಗಿ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ತಾಯ್ನುಡಿಗಳಲ್ಲಿ ಕಲಿಸಬೇಕು ಇಲ್ಲವೇ ಕಲಿಸಲಾಗುವುದು ಎಂದು ಹೇಳಿಲ್ಲ.
ಅಂದರೆ ಈ ನೀತಿಯಲ್ಲಿ ತಾಯ್ನುಡಿಗಳ ಪರವಾದ ಸದಾಶಯವನ್ನು ವ್ಯಕ್ತಪಡಿಸಲಾಗಿದೆಯೇ ಹೊರತು ಕಡ್ಡಾಯವಾಗಿ ಕಲಿಸುವ ಬಗೆಗೆ ಏನನ್ನೂ ಹೇಳಿಲ್ಲ. ‘ಎಲ್ಲೆಲ್ಲಿ ಸಾಧ್ಯವೋ’ಎಂದಾಗ ಅದನ್ನು ಜಾರಿಗೆ ತರಲೇಬೇಕೆಂಬ ಒತ್ತಾಸೆಯಿರುವುದಿಲ್ಲ. ತಾಯ್ನುಡಿಗಳ ಮೂಲಕ ಕಲಿಸುವ ಅವಕಾಶವನ್ನು ತೆರೆದರೆ ತೆರೆಯ ಬಹುದು ಇಲ್ಲವಾದರೇ ಬಿಡಬಹುದು ಎಂದೂ ಆಗಬಹುದು. ಸದ್ಯದಲ್ಲಿಇರುವುದು ಅದೇ ವಿಧಾನವೇ ಆಗಿದೆ. ಇಂದು ಖಾಸಗಿ ಶಿಕ್ಶಣ ಸಂಸ್ಥೆಗಳು ತಾಯ್ನುಡಿಗಳ ಮೂಲಕ ಕಲಿಸಲು ಯಾವುದೇ ತಕರಾರಿಲ್ಲ. ಆದರೆ ಅವು ಇಂಗ್ಲಿಷ್ ಮೂಲಕ ಕಲಿಸುತ್ತ ತಾಯ್ನುಡಿಗಳಲ್ಲಿ ಕಲಿಸಲು ಆಸಕ್ತಿ ತೋರುತ್ತಿಲ್ಲವೆಂಬುದೇ ಪ್ರಮುಖ ಸಮಸ್ಯೆ. ಇದೇ ಶಿಕ್ಶಣ ಸಂಸ್ಥೆಗಳೇ ತಾಯ್ನುಡಿಗಳ ವಿರುದ್ಧವಾಗಿ ಸಮರ ಸಾರಿರುವುದು. ಇಂತಹ ಶಿಕ್ಶಣ ಸಂಸ್ಥೆಗಳ ಧೋರಣೆಯನ್ನು ಬದಲಿಸಲು ಯಾವ ಯಾವ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂಬುದರ ಬಗೆಗೆ ಹೊಸ ಶಿಕ್ಶಣ ನೀತಿಗಳಲ್ಲಿ ಯಾವುದೇ ಪ್ರಸ್ತಾಪವಿಲ್ಲ, ಅಂದರೆ ಕಡ್ಡಾಯವಾಗಿ ತಾಯ್ನುಡಿಗಳಲ್ಲಿ ಕಲಿಸುವ ಬಗೆಗೆ ನಿರ್ದಿಷ್ಟ ಕಾರ್ಯಕ್ರಮಗಳನ್ನು ರೂಪಿಸದಿದ್ದರೆ ನೀತಿಯಲ್ಲಿ ತಾಯ್ನುಡಿಗಳ ಬಗೆಗೆ ವ್ಯಕ್ತವಾಗಿರುವ ಒಲವು ಕೇವಲ ತೋರಿಕೆಯ ವಿಚಾರಗಳಾಗುತ್ತವೆ.
ಯಾಕೆಂದರೆ ತಾಯ್ನುಡಿಗಳ ಮೂಲಕ ಶಿಕ್ಶಣ ನೀಡುವುದರ ಬಗೆಗೆ ಕರ್ನಾಟಕ ಸರ್ಕಾರ ರಾಜ್ಯದ ಹೈಕೋರ್ಟಿನಲ್ಲಿ ಸಲ್ಲಿಸಿದ್ದ ದಾವೆಯನ್ನು 2008 ರಲ್ಲಿಯೇ ಕೋರ್ಟು ಅನೂರ್ಜಿತಗೊಳಿಸಿದೆ. ಆ ನಂತರ ರಾಜ್ಯ ಸರ್ಕಾರ ಸುಪ್ರಿಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಅಲ್ಲಿಯೂ ಕೂಡ ಕರ್ನಾಟಕ ಸರ್ಕಾರದ ದಾವೆ ವಜಾ ಆಯಿತು. ಅಂದರೆ ತಾಯ್ನುಡಿಗಳ ಮೂಲಕ ಕಲಿಸುವುದರ ಸುತ್ತ ಈಗಾಗಲೇ ಕಾನೂನಾತ್ಮಕ ಬಿಕ್ಕಟ್ಟುಗಳು ಸೃಶ್ಟಿಯಾಗಿವೆ. ಆ ಬಿಕ್ಕಟ್ಟುಗಳನ್ನು ಬಗೆಹರಿಸದೆ ಪ್ರಾಥಮಿಕ ಹಂತದಿಂದ ಕಡ್ಡಾಯವಾಗಿ ತಾಯ್ನುಡಿಗಳಲ್ಲಿ ಶಿಕ್ಶಣವನ್ನು ನೀಡಲು ಸಾಧ್ಯವಿಲ್ಲ. ಯಾಕೆಂದರೆ ಸುಪ್ರಿಂ ಕೋರ್ಟುತನ್ನ ತೀರ್ಪಿನಲ್ಲಿ ಮಕ್ಕಳ ಕಲಿಕೆಯ ಮಾಧ್ಯಮದ ಆಯ್ಕೆಯ ವಿಚಾರವನ್ನು ಪೋಷಕರಿಗೆ ಬಿಟ್ಟುಕೊಟ್ಟಿದೆ. ಅದನ್ನು ಅವರ ಮೂಲಭೂತ ಹಕ್ಕಿನ ಭಾಗವಾಗಿ ಪರಿಗಣಿಸಿ ಶಿಕ್ಶಣ ಮಾಧ್ಯಮದ ಆಯ್ಕೆಯ ಸ್ವಾತಂತ್ರ್ಯವನ್ನು ಪೋಷಕರಿಗೆ ನೀಡಿದೆ. ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸುವ ಪೋಷಕರು ಹಣ ಪಾವತಿಸಿ ಶಿಕ್ಷಣ ಕೊಡಿಸುವುದರಿಂದ ಅದು ಅವರ ವೈಯಕ್ತಿಕ ಆಯ್ಕೆಯಾಗಿರುತ್ತದೆ ಎಂದು ಹೇಳಲಾಗಿದೆ. ಈ ತೀರ್ಪನ್ನೇ ಆಧಾರವಾಗಿಸಿಕೊಂಡು ಖಾಸಗಿ ಶಿಕ್ಶಣ ಸಂಸ್ಥೆಗಳು ಇಂಗ್ಲಿಷ ಮೂಲಕ ಕಲಿಸುವ ವ್ಯವಸ್ಥೆಯನ್ನು ಮತ್ತಷ್ಟು ದೃಢಗೊಳಿಸಿವೆ. ಇದು ತಾಯ್ನುಡಿಗಳ ಮೂಲಕ ಕಲಿಸುವ ಆಶಯದ ವಿರುದ್ಧಇರುವತೊಡಕು.
ಈ ತೊಡಕನ್ನು ಬಗೆಹರಿಸದ ಹೊರತು ತಾಯ್ನುಡಿಗಳ ಮೂಲಕ ಕಲಿಸುವ ವ್ಯವಸ್ಥೆಆರಂಭಿಸಲು ಸಾಧ್ಯವಿಲ್ಲ. ಇದು ಸಾಧ್ಯವಾಗ ಬೇಕಾದರೆ ಸಂವಿಧಾನಕ್ಕೆ ತಿದ್ದುಪಡಿತಂದು ಕಡ್ಡಾಯವಾಗಿ ತಾಯ್ನಡಿಯಲ್ಲಿ ಶಿಕ್ಶಣ ನೀಡುವ ಅಧಿಕೃತ ಕಾಯ್ದೆಯನ್ನು ಜಾರಿಗೆತರಬೇಕು. ಅಂತಹ ಯಾವುದೇ ಕಾಯ್ದೆ ನಮ್ಮ ದೇಶದಲ್ಲಿ ಸದ್ಯಕ್ಕೆ ಇಲ್ಲ. ಅಂತಹ ಕಾಯ್ದೆಯನ್ನು ಜಾರಿಗೆತಂದು ಕಲಿಕೆಗೆ ಬೇಕಾದ ಪೂರಕವಾದ ವಾತಾವರಣವನ್ನುರೂಪಿಸಬೇಕು. ಅಲ್ಲದೆ ನಮ್ಮದೇಶಕ್ಕೆಒಂದು ನಿರ್ದಿಶ್ಟ ಭಾಶಾನೀತಿ ಮತ್ತು ಭಾಷಾ ಯೋಜನೆಗಳೇ ಇಲ್ಲ. ಸದ್ಯದಲ್ಲಿರುವ ಕೆಲವು ಸಾಂವಿಧಾನಿಕ ಅವಕಾಶಗಳು ಗೊಂದಲ ಮತ್ತು ವೈರುಧ್ಯದಿಂದ ಕೂಡಿದ್ದು ಅವು ತಾಯ್ನುಡಿಗಳ ಮೂಲಕ ಕಲಿಯುವ ಆಶಯಕ್ಕೆ ನೆರವಾಗುವುದಿಲ್ಲ. ಹಾಗಾಗಿ ಸಂವಿಧಾನಕ್ಕೆ ಸೂಕ್ತ ತಿದ್ದುಪಡಿತರುವ ಮೂಲಕವೇ ತಾಯ್ನುಡಿಗಳ ಮೂಲಕ ಕಲಿಯುವ ಅವಕಾಶಗಳನ್ನು ಹೆಚ್ಚಿಸಬೇಕು. ತಾಯ್ನುಡಿಗಳ ಮೂಲಕ ಕಲಿಸುವುದಕ್ಕೆ ಬೇಕಾದ ಕಾನೂನಿನ ಬೆಂಬಲವನ್ನುರೂಪಿಸದಿದ್ದರೆ ಈ ಆಶಯವನ್ನುಈಡೇರಿಸಲು ಸಾಧ್ಯವಿಲ್ಲ. ಇದನ್ನು ಮಾಡಬೇಕಾದರೆ ದೇಶದಲ್ಲಿ ವ್ಯಾಪಕವಾದ ಚರ್ಚೆ ನಡೆಯಬೇಕು. ಇದರಲ್ಲಿ ಜನಪ್ರತಿನಿಧಿಗಳು, ಶಿಕ್ಶಣ ತಜ್ಞರು, ಭಾಷಾವಿಜ್ಞಾನಿಗಳು, ಸಾಮಾಜಿಕ ಕಾರ್ಯಕರ್ತರು, ಪೋಷಕರು, ವಿದ್ಯಾರ್ಥಿಗಳು ಕೂಡಿ ಚರ್ಚಿಸಬೇಕು. ಆ ಮೂಲಕ ತಾಯ್ನುಡಿಗಳ ಮೂಲಕ ಕಲಿಸುವುದರ ಬಗೆಗೆ ಪೂರಕ ವಾತಾವರಣ ಬೆಳೆಯಬೇಕು. ಸದ್ಯದಲ್ಲಿಅಂತಹ ವಾತಾವರಣ ಇಲ್ಲ. ಇಲ್ಲಿನ ಅನುಕೂಲಸ್ಥ ವರ್ಗದ ಜನರು ಇಂಗ್ಲಿಷ ಪರವಾಗಿದ್ದಾರೆ. ಉಳಿದ ಜನರೂ ಈ ವರ್ಗದ ಜನರನ್ನೇ ಹಿಂಬಾಲಿಸುತ್ತಿದ್ದಾರೆ. ಇದೇ ಹೊತ್ತಿನಲ್ಲಿ ಶಿಕ್ಷಣ ಮಾರಾಟದ ಸರಕಾಗಿದ್ದುಇಂಗ್ಲಿಷ ಅನ್ನು ಮಾರುಕಟ್ಟೆಯ ಭಾಶೆಯನ್ನಾಗಿ ಒಪ್ಪಿಕೊಳ್ಳಲಾಗಿದೆ. ಇದೆಲ್ಲವನ್ನು ಮೀರಿ ಇಲ್ಲವೇ ಬದಲಿಸಿ ತಾಯ್ನಡಿಗಳ ಪರವಾದ ವಾತಾವರಣ ರೂಪಿಸಬೇಕಿದೆ. ಇದನ್ನು ಮಾಡದಿದ್ದರೆ ನೀತಿಯಲ್ಲಿ ತಾಯ್ನುಡಿಗಳ ಪರವಾಗಿ ವ್ಯಕ್ತವಾಗಿರುವ ವಿಚಾರಗಳು ಕೇವಲ ‘ಮಾತಿನ ಮರೆ’ಯಾಗಿಬಿಡುತ್ತವೆ. ಅಂದರೆ ಬಣ್ಣ ಬಣ್ಣದ ಮಾತಗಳನ್ನು ಆಡುತ್ತಲೇ ಯಥಾಸ್ಥಿತಿಯನ್ನು ಕಾಪಾಡಿಕೊಂಡು ಹೋಗಲಾಗುತ್ತದೆ. ಆದ್ದರಿಂದ ಈ ನೀತಿಯಲ್ಲಿನ ವಿಚಾರಗಳು ಕೇವಲ ಗಾಳಿ ಮಾತಾಗದೆ ಅದು ಕ್ರಾಂತಿಕಾರಿ ಬದಲಾವಣೆಯನ್ನು ದೇಶದಲ್ಲಿತರಲಿ ಎಂಬ ಅಪೇಕ್ಷೆ ಇಲ್ಲಿನದು.
ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ, ಮೇಲೆ ಹೇಳಿದಂತೆ ಈ ನೀತಿಯಲ್ಲಿ ತಾಯ್ನುಡಿಗಳಲ್ಲಿ ಕಲಿಯುವುದರ ಪರವಾದ ಸದಾಶಯವನ್ನು ವ್ಯಕ್ತಪಡಿಸಲಾಗಿದೆಯೇ ಹೊರತು ಅದನ್ನು ಜಾರಿಗೆ ತರುವ ಕಾರ್ಯವಿಧಾನಗಳ ಕುರಿತಾದ ಕ್ರಿಯಾಯೋಜನೆಯನ್ನು ಮುಂದಿಟ್ಟಿಲ್ಲ. ಅಂದರೆ ತಾಯ್ನುಡಿಗಳ ಮೂಲಕ ಕಲಿಸುವುದರ ಸಂಬಂಧವಾಗಿ ಒಂದು ವಿಸ್ತತವಾದ ಕ್ರಿಯಾಯೋಜನೆಯನ್ನು ರೂಪಿಸಬೇಕು. ಅಲ್ಲದೆ ಈ ಯೋಜನೆಯ ಹೊಣೆಯನ್ನು ಹೊರ ಬೇಕಾಗಿರುವುದು ರಾಜ್ಯ ಸರ್ಕಾರಗಳು. ಕೇಂದ್ರ ಮತ್ತು ರಾಜ್ಯಸರ್ಕಾರಗಳು ಕೂಡಿ ಈ ಕ್ರಿಯಾಯೋಜನೆ ರೂಪಿಸಬೇಕು. ಯಾಕೆಂದರೆ ಶಿಕ್ಶಣ ಕೇವಲ ಕೇಂದ್ರ ಸರ್ಕಾರದ ಅಧಿಕಾರ ವ್ಯಾಪ್ತಿಗೆ ಸೇರುವುದಿಲ್ಲ. ಅದು ಕೇಂದ್ರ ಮತ್ತುರಾಜ್ಯ ಸರ್ಕಾರಗಳ ‘ಸಮವರ್ತಿ’ ಪಟ್ಟಿಯಲ್ಲಿ ಬರುತ್ತದೆ. ತಾಯ್ನುಡಿಗಳ ಸವಾಲನ್ನು ಹೆಚ್ಚು ಎದುರಿಸುವುದು ರಾಜ್ಯ ಸರ್ಕಾರಗಳೇ. ಅವುಗಳ ಪಾಲ್ಗೊಳ್ಳುವಿಕೆ ಇಲ್ಲಿ ಪ್ರಧಾನವಾದುದು. ರಾಜ್ಯಗಳ ಪಾತ್ರದಬಗೆಗೆ ಈ ನೀತಿಯಲ್ಲಿ ಯಾವುದೇ ವಿವರಗಳಿಲ್ಲ. ಆದ್ದರಿಂದ ಈ ನೀತಿಯಲ್ಲಿ ಪ್ರಸ್ತಾಪಿಸಲಾಗಿರುವ ತಾಯ್ನುಡಿಗಳ ಪರವಾದ ನಿಲುವಿನ ಬಗೆಗೆಸದ್ಯಕ್ಕೆಏನನ್ನೂ ಹೇಳಲು ಸಾಧ್ಯವಿಲ್ಲಇಲ್ಲವೇ ಹೆಚ್ಚು ಭರವಸೆಯಿಡಲು ಸಾಧ್ಯವಿಲ್ಲ. ಆದರೆ ನಮ್ಮಲ್ಲಿಅನೇಕರು ನೀತಿಯಲ್ಲಿರುವ ವಿಚಾರಗಳ ಕಾರ್ಯಸಾಧ್ಯತೆಯ ಬಗೆಗೆ ಮತ್ತು ಅವುಗಳ ಜಾರಿಗೆ ಇರುವ ತೊಡಕುಗಳನ್ನು ಅರಿಯದೆ ಮಾಧ್ಯಮಗಳಲ್ಲಿ ಪ್ರಚಾರವಾದ ಕೆಲವು ತುಂಡು ವಾಕ್ಯಗಳನ್ನು ಮಾತ್ರವೇ ಗಮನಿಸಿ ಸಂಭ್ರಮಿಸುತ್ತಿದ್ದಾರೆ. ಇದು ಸರಿಯಲ್ಲ. ಯಾಕೆಂದರೆ ಅದನ್ನು ಜಾರಿಗೊಳಿಸಲು ಕಾನೂನಾತ್ಮಕವಾಗಿ ಮತ್ತು ಸಾಮಾಜಿಕವಾಗಿ ಅನೇಕ ತೊಡಕುಗಳಿವೆ ಎಂಬುದನ್ನು ಮೇಲೆ ಹೇಳಲಾಗಿದೆ.ಅಲ್ಲದೆ ತಾಯ್ನುಡಿಗಳ ಮೂಲಕ ಕಲಿಸುವ ಬಗೆಗೆ ಖಚಿತವಾದ ಕ್ರಿಯಾ ಯೋಜನೆಗಳನ್ನು ರೂಪಿಸಿ ಅವನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಕಟ್ಟುನಿಟ್ಟಾಗಿ ಜಾರಿಗೆ ತರದಿದ್ದರೆ ಈ ವಿಚಾರಗಳು ಕಾರ್ಯಗತವಾಗುವುದಿಲ್ಲ.ಈ ಎಲ್ಲಾ ತೊಡಕುಗಳನ್ನು ನಿವಾರಿಸುವ ಬಗೆಗೆ ಏನನ್ನೂ ಹೇಳದೆ ಬರೀ ಆಶಯದ ಮಾತುಗಳನ್ನು ನಂಬಲಾಗದು. ಹಾಗಾಗಿ ಈ ಶಿಕ್ಷಣ ನೀತಿಯಲ್ಲಿ ವ್ಯಕ್ತವಾಗಿರುವ ತಾಯ್ನುಡಿಗಳ ಪರವಾದ ಒಲವು ಜನರನ್ನು ದಿಕ್ಕುತಪ್ಪಿಸುವ ಸಾಧ್ಯತೆಗಳೂ ಆಗಬಹುದಾಗಿದೆ. ಆದ್ದರಿಂದ ನೀತಿಯಲ್ಲಿ ಪ್ರಸ್ತಾಪಿಸಿರುವ ವಿಚಾರಗಳನ್ನುಆಧಾರವಾಗಿಟ್ಟುಕೊಂಡು ತಾಯ್ನುಡಿಗಳಲ್ಲಿ ಕಲಿಸುವ ಬಗೆಗೆ ಸೂಕ್ತ ಕ್ರಿಯಾಯೋಜನೆಗಳನ್ನು ರೂಪಿಸಿ ಜಾರಿಗೆ ತರುವಂತೆ ಒತ್ತಾಯಿಸುವ ಕೆಲಸವನ್ನುಇಂದು ಮಾಡಬೇಕಿದೆ.
ದ್ವಿಭಾಶಾ ಬೋಧನೆ
ಈ ನೀತಿಯಲ್ಲಿ ಪ್ರಸ್ತಾಪವಾಗಿರುವ ಮತ್ತೊಂದು ಮುಖ್ಯ ಸಂಗತಿಯೆಂದರೆ ದ್ವಿಭಾಷಾ ಬೋಧನೆಯ ಪದ್ದತಿ. ಅಂದರೆ ನಮ್ಮ ರಾಜ್ಯದ ಶಾಲೆಗಳಲ್ಲಿ ಕನ್ನಡ ಮಾಧ್ಯಮವಿದ್ದರೆ ಅಲ್ಲಿಇಂಗ್ಲಿಷನ್ನು ಪೂರಕವಾಗಿ ಬಳಸಿ ಬೋಧಿಸುವುದು. ಹಾಗೆಯೇ ಇಂಗ್ಲಿಷ ಮಾಧ್ಯಮ ವಿದ್ದರೆ ಅಲ್ಲಿ ಕನ್ನಡವನ್ನು ಪೂರಕವಾಗಿ ಬಳಸಿ ಬೋಧಿಸುವುದು. ಹಾಗೆಯೇ ಇನ್ನು ಕೆಲವು ಕಡೆ ಕನ್ನಡಕ್ಕೆ ಪೂರಕವಾಗಿ ತುಳು, ಕೊಡವ, ತಮಿಳು,ತೆಲುಗು ಮರಾಠಿ,ಉರ್ದು ಮುಂತಾದ ನುಡಿಗಳನ್ನು ಬಳಸಿ ಪಾಠ ಹೇಳುವುದು ಇಲ್ಲಿನ ಕ್ರಮ. ದ್ವಿಭಾಶಿಕ ಇಲ್ಲವೇ ಬಹುಭಾಶಿಕ ಪ್ರದೇಶಗಳಲ್ಲಿ ಮಕ್ಕಳಿಗೆ ಯಾವುದೋಒಂದು ಮುಖ್ಯ ಭಾಷೆಯಲ್ಲಿ ಕಲಿಸುತ್ತಿದ್ದರೆ ಆ ವಿದ್ಯಾರ್ಥಿಗಳ ಮನೆಮಾತು ಬೇರೆಯಾಗಿದ್ದಾಗ ಕಲಿಕೆ ಕೊಂಚ ಕಶ್ಟವಾಗುತ್ತಿದೆ. ಆಗ ಆ ಮಕ್ಕಳ ಮನೆಮಾತನ್ನುಕಲಿಕೆಯ ನುಡಿಗೆ ಪೂರಕವಾಗಿ ಬಳಸಿದರೆ ಕಲಿಕೆ ಹೆಚ್ಚು ಕ್ರಿಯಾಶೀಲವಾಗುತ್ತದೆ. ಮಕ್ಕಳ ವಿಷಯಗ್ರಹಿಕೆ ಸಲೀಸಾಗಿ ಅದು ಹೆಚ್ಚುತ್ತದೆ. ಅಲ್ಲದೆ ಇದರಿಂದ ಇನ್ನೂ ಕೆಲವು ಪ್ರಯೋಜನಗಳಿವೆ. ಅದೇನೆಂದರೆ ಇಂದು ಇಂಗ್ಲಿಷ ಪರವಾದ ಒಲವು ಹೆಚ್ಚಾಗಿ ಉಳಿದ ಜನನುಡಿಗಳನ್ನು ಕೀಳುಗಳೆಯಲಾಗುತ್ತಿದೆ. ಇದನ್ನು ಹೋಗಲಾಡಿಸಲು ಇಂಗ್ಲಿಷ್ ಗೆ ಪೂರಕವಾಗಿ ಎಲ್ಲ ಶಾಲೆ ಕಾಲೇಜುಗಳಲ್ಲಿ ಯಾವುದೇ ಅಡೆತಡೆಯಲ್ಲಿದೆ ಕನ್ನಡವನ್ನು ಬಳಸಿದರೆ ಕನ್ನಡದ ಬಗೆಗೆ ಇರುವ ಕೀಳರಿಮೆ, ಪೂರ್ವಾಗ್ರಹಗಳನ್ನು ನಿವಾರಿಸಲು ಸಾಧ್ಯವಿದೆ. ಅಲ್ಲದೆ ಇಂಗ್ಲಿಷ ಮಾಧ್ಯಮದ ಶಾಲೆಗಳಲ್ಲಿಯೂ ಕನ್ನಡದ ಬಳಕೆಗೆ ಅವಕಾಶ ಸೃಷ್ಟಿಯಾಗುತ್ತದೆ. ಇದರಿಂದ ನಿಧಾನವಾಗಿ ವಿಜ್ಞಾನ ಮತ್ತುಇತರೆ ವಿಷಯಗಳು ಕನ್ನಡದಲ್ಲಿಯೂ ಚರ್ಚೆ ನಡೆದು ಕನ್ನಡದಲ್ಲಿ ವಿಜ್ಞಾನ ಮತ್ತುಇತರೆ ಜ್ಞಾನಶಿಸ್ತುಗಳ ಸಾಹಿತ್ಯ ಸೃಷ್ಟಿಗೆ ಪೂರಕವಾತಾವರಣ ಸೃಶ್ಟಿಯಾಗುತ್ತದೆ ಮತ್ತು ಆ ಜ್ಞಾನ ಶಿಸ್ತುಗಳ ಜ್ಞಾನದ ವಿಕಾಸಕ್ಕೆ ಅನುಕೂಲವಾಗುತ್ತದೆ. ಇದನ್ನುಇಡೀ ದೇಶಕ್ಕೂ ಅನ್ವಯಿಸಿ, ಎಲ್ಲ ಭಾರತೀಯ ಭಾಷೆಗಳಲ್ಲಿ ಜಾರಿಗೆ ತಂದರೆ ನಿಜಕ್ಕೂ ಭಾರತೀಯ ಭಾಷೆಗಳಲ್ಲಿ ಒಂದಿಷ್ಟು ಹೊಸ ರಕ್ತ ಸಂಚಾರವಾಗಿ ಅವುಗಳಿಗೆ ಜೀವಬರುತ್ತದೆ. ಇದನ್ನು ಜಾರಿಗೆ ತರಬೇಕಾದರೆ ಬೋಧಕರು ಮತ್ತು ಶಿಕ್ಶಣ ಸಂಸ್ಥೆಗಳ ಮನಸ್ಥಿತಿಯನ್ನು ಬದಲಿಸಬೇಕಾಗುತ್ತದೆ. ಯಾಕೆಂದರೆ ಎಷ್ಟೊ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಇಂಗ್ಲಿಷ ಅನ್ನು ಹೊರತುಪಡಿಸಿ ಅನ್ಯ ಭಾಷೆಗಳನ್ನು ತರಗತಿಗಳಲ್ಲಿ ಮತ್ತುಇತರೆ ಸಂದರ್ಭಗಳಲ್ಲಿ ಬಳಸುವುದನ್ನು ನಿಷೇಧಿಸಲಾಗಿದೆ. ಇಂಗ್ಲೀಷ ಪೂರಕವಾಗಿ ಭಾರತೀಯ ಭಾಶೆಗಳನ್ನು ಬಳಸಿ ಬೋಧಿಸಿದ ಅಧ್ಯಾಪಕರಿಗೆ‘ಎಚ್ಚರಿಕೆ’ ನೀಡಿರುವ ಉದಾಹರಣೆಗಳಿವೆ. ಅಶ್ಚರ ಮಟ್ಟಿಗೆ ಇಂಗ್ಲಿಷ್ ಅನ್ನು ಒಂದು ವರ್ಗದ ಸಂಕೇತವಾಗಿ ಪ್ರತಿಷ್ಟೆಯಾಗಿ ಪರಿಗಣಿಸಿದ್ದಾರೆ. ಅದನ್ನು ನಿಯಂತ್ರಣದ ಸಾಧನವಾಗಿ ಬಳಸಲಾಗುತ್ತಿದೆ. ಈ ಪರಿಸ್ಥಿತಿಯನ್ನು ಬದಲಿಸಿ ಅಲ್ಲೆಲ್ಲಾ ಕನ್ನಡ ಇಲ್ಲವೇ ಇತರೆ ಭಾರತೀಯ ಭಾಷೆಗಳ ಬಳಕೆಗೆ ಅವಕಾಶ ಕಲ್ಪಿಸಬೇಕು. ಅಂತಹ ಬದಲಾವಣೆಗೆ ದ್ವಿಭಾಶಾ ಬೋಧನೆಯ ವಿಧಾನವನ್ನು ಅಳವಡಿಸಿಕೊಳ್ಳುವುದು ಒಳ್ಳೆಯದೇ ಆಗುತ್ತದೆ. ಆದರೆ ಈ ಸಲಹೆಯನ್ನೂ ಕೂಡ ಜಾರಿಗೆ ತರಲು ಸೂಕ್ತ ಕಾರ್ಯ ಯೋಜನೆಗಳನ್ನು ರೂಪಿಸ ಬೇಕಾಗುತ್ತದೆ. ಆಗ ಮಾತ್ರವೇ ದ್ವಿಭಾಶಾ ಬೋಧನೆಯ ಪದ್ದತಿ ಯಶಸ್ಸು ಗಳಿಸಲು ಸಾಧ್ಯ. ಇಲ್ಲವಾದರೆ ಈ ಶಿಫಾರಸ್ಸು ಕೂಡ ನಮ್ಮ ವ್ಯವಸ್ಥೆಯಲ್ಲಿ ಮಕಾಡೆ ಮಲಗಬಹುದು.
ಅಂತಿಮವಾಗಿ ಯಾವುದೇ ಅತ್ಯುತ್ತಮ ಶಿಫಾರಸ್ಸು ಮಾಡಿದರೂ ಅದನ್ನು ಕಾರ್ಯಗತ ಗೊಳಿಸುವ ಸೂಕ್ತವಾದ ಕ್ರಿಯಾಯೋಜನೆ ಮತ್ತು ಆಡಳಿತ ವ್ಯವಸ್ಥೆಇಲ್ಲದಿದ್ದರೆ ಅದರ ಉದ್ದೇಶ ಸೋಲುತ್ತದೆ. ಇದುವರೆಗಿನ ಅನುಭವನ್ನೇ ಆಧರಿಸಿ ಹೇಳುವುದಾದರೆ ವ್ಯವಸ್ಥಿತವಾಗಿಯೇ ತಾಯ್ನುಡಿಗಳ ಪರವಾದ ಶಿಫಾರಸ್ಸುಗಳನ್ನು ಸೋಲಿಸಲಾಗಿದೆ. ಅಧಿಕಾರಸ್ಥ ವರ್ಗಗಳ ವಾದವನ್ನು ಎಲ್ಲ ಹಂತಗಳಲ್ಲಿಯೂ ಗೆಲ್ಲಿಸಲಾಗಿದೆ. ಅಂದರೆ ಹೊಸ ಶಿಕ್ಷಣ ನೀತಿಯಲ್ಲಿರುವ ಹಲವು ಉತ್ತಮ ಶಿಫಾರಸ್ಸುಗಳನ್ನು ಸೋಲಿಸುವ ವೇದಿಕೆ ನಮ್ಮಲ್ಲಿ ಈಗಾಗಲೇ ಸಜ್ಜಾಗಿದೆ ಎಂಬುದು ಇಲ್ಲಿನ ಅರ್ಥ.ಅಂತಹ ವೇದಿಕೆಯನ್ನು ಸ್ಪೋಟಿಸದೆ ತಾಯ್ನುಡಿಗಳ ಮೂಲಕ ಕಲಿಸುವ ಕಲಿಯುವ ಅವಕಾಶಕ್ಕೆ ಮರುಜೀವ ತುಂಬಲು ಸಾಧ್ಯವಿಲ್ಲ. ಹಾಗಾಗಿ ಈ ನೀತಿಯಲ್ಲಿನ ಉತ್ತಮ ಸಲಹೆ ಶಿಫಾರಸ್ಸುಗಳನ್ನು ಆಧರಿಸಿ ಸೂಕ್ತ ಕ್ರಿಯಾಯೋಜನೆಗಳನ್ನು ರೂಪಿಸಲು ಮತ್ತು ಸಂವಿಧಾನಕ್ಕೆ ತಿದ್ದುಪಡಿತಂದು ಭಾರತೀಯ ಭಾಷೆಗಳಿಗೆ ಹೊಸರೂಪ ನೀಡಲು ಆಗ್ರಹಿಸಬೇಕಿದೆ. ಇಲ್ಲವಾದರೆ ಈ ನೀತಿಯೂ ನೀತಿಯಾಗಿಯೇ ಉಳಿಯಲಿದೆ.
-ರಂಗನಾಥ ಕಂಟನಕುಂಟೆ
ಈ ವಿಡಿಯೋ ನೋಡಿ ಮಾತೃಭಾಷಾ ಶಿಕ್ಷಣಕ್ಕಿರುವ ತೊಡಕುಗಳನ್ನು ಎನ್.ಇ.ಪಿ ನಿವಾರಿಸುತ್ತದಾ?