ಹೊಸ ಶಿಕ್ಷಣ ನೀತಿ: ಭಾರತದ ಮಹಾ ಹಿನ್ನೆಗೆತ

ಸ್ವತಂತ್ರ ಭಾರತವು ಬಂಡವಾಳಶಾಹಿಯ ಕಾರ್ಯಾಚರಣೆಯ ಅಗತ್ಯಕ್ಕೆ ಬೇಕಾಗಿರುವ ಶಿಕ್ಷಣಕ್ಕಿಂತಲೂ ಹೆಚ್ಚು ವಿಸ್ತಾರವಾದ “ಸಾರ್ವತ್ರಿಕ ಶಿಕ್ಷಣ” ಕಾರ್ಯಕ್ರಮದ ಭರವಸೆಯನ್ನು ಕೊಟ್ಟಿತು.

ನವ ಉದಾರ ಬಂಡವಾಳಶಾಹಿ ಆಳ್ವಿಕೆಯ ಶಿಕ್ಷಣ ನೀತಿಯ ಉದ್ದೇಶವೆಂದರೆ, ಬಂಡವಾಳಶಾಹಿ ವ್ಯವಸ್ಥೆಯ ಅವಶ್ಯಕತೆಗೆ ತಕ್ಕಷ್ಟೇ ಪ್ರಮಾಣದಲ್ಲಿ ಶಿಕ್ಷಣ ನೀಡುವುದು ಮತ್ತು ವಿವಿಧ ಕುತಂತ್ರಗಳ ಮೂಲಕ ‘ಸಾರ್ವತ್ರಿಕ ಶಿಕ್ಷಣ’ವಚನದಿಂದ ಹಿಂದಕ್ಕೆ ಸರಿಯುವುದು. ಹೊಸ ಶಿಕ್ಷಣ ನೀತಿಯು ಏನು ಹೇಳುತ್ತದೆ ಎನ್ನುವುದಕ್ಕಿಂತ ಎಂತಹ ಕುತಂತ್ರಗಳ ಮೂಲಕ ಜನರಿಗೆ ಕೊಟ್ಟ ವಚನವನ್ನು ಮುರಿಯುತ್ತದೆ ಎಂಬುದನ್ನು ಪರಿಶೀಲಿಸಿದರೆ ಹೊಸ ಶಿಕ್ಷಣ ನೀತಿಯು ಸರಿಯಾಗಿಯೇ ಅರ್ಥವಾಗುತ್ತದೆ.

ಹೊಸ ಶಿಕ್ಷಣ ನೀತಿಯಂತಹ ದಸ್ತಾವೇಜಿನಲ್ಲಿ ಹೊಸ ಅಂಶಗಳು ಮತ್ತು ಸವಕಲು ಮಾತುಗಳನ್ನು ಪ್ರತ್ಯೇಕಿಸಬೇಕಾಗುತ್ತದೆ, ಮಾತ್ರವಲ್ಲ, ಕೈಬಿಟ್ಟಿರುವ ಹಳೆಯ ಸವಕಲುಗಳನ್ನು ಗುರುತಿಸಬೇಕಾಗುತ್ತದೆ. ಹೀಗೆ “ಶಿಕ್ಷಣ ಒಂದು ಸಾರ್ವಜನಿಕ ಸೇವೆ”  “ಜಿಡಿಪಿಯ  ೬% ಹಣವನ್ನು ಶಿಕ್ಷಣಕ್ಕೆ ಮೀಸಲಿಡಬೇಕು” ಮುಂತಾದವು ಅವುಗಳನ್ನು ನಿಶ್ಚಿತವಾಗಿ ಈಡೇರಿಸಿಕೊಳ್ಳುವ ಸಲಹೆ ಸೂಚನೆಗಳು ಇಲ್ಲದ ಕಾರಣದಿಂದಾಗಿ ಸವಕಲು ಮಾತುಗಳೇ ಆಗುತ್ತವೆ.

ಸಂಕ್ಷಿಪ್ತವಾಗಿ, ಈಗಾಗಲೇ ಹೇಳಿರುವ ಸವಕಲು ಮಾತುಗಳನ್ನೇ ಪುನಃ ಹೇಳುವುದು ಕ್ಷುಲ್ಲಕತನವಾಗುತ್ತದೆ. ಅಂತಹ ಮಾತುಗಳನ್ನು ಪುನರಾವರ್ತಿಸದಿದ್ದರೆ ಮಾತ್ರ ಅದು ಮಹತ್ವ ಪಡೆಯುತ್ತದೆ.  ಆದರೆ, ಹೊಸ ಶಿಕ್ಷಣ ನೀತಿಯಲ್ಲಿ ಪುನರಾವರ್ತನೆಗೊಂಡಿರುವ ಹಳೆಯ ಸವಕಲು ಮಾತುಗಳು ಅನೇಕ ಪ್ರಜ್ಞಾವಂತರನ್ನು ಕೂಡ ಪ್ರಭಾವಿಸಿವೆ. ಚುಟುಕಾಗಿ ಹೇಳುವುದಾದರೆ, ಒಂದು ಸಮ-ಸಮಾಜದ ಅಡಿಪಾಯವನ್ನು ನಿರ್ಮಿಸುವ ಗುರಿಯಿಂದ ಹಿಂದೆ ಸರಿಯುವುದರ ಪ್ರತೀಕವಾಗಿರುವ ಈ ಪಕ್ಕಾ ಪ್ರತಿಗಾಮಿ ಶಿಕ್ಷಣ ನೀತಿಗೆ ಒಂದು ತೆರನ ಅಂಗೀಕಾರವನ್ನು ಪ್ರಜ್ಞಾವಂತರು ಸೂಚಿಸಿರುವುದು ಒಂದು ವಿಚಿತ್ರ ವಿದ್ಯಮಾನವೇ ಸರಿ.

ಎಲ್ಲಕ್ಕಿಂತ ಹೆಚ್ಚಾಗಿ, ಈ ಹಿಮ್ಮುಖ ಚಲನೆಯು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ವಂಚಿತ ಸಮುದಾಯಗಳನ್ನು ಶಿಕ್ಷಣದ ವ್ಯಾಪ್ತಿಯಿಂದ ಹೊರಗಿಡುವ ರೂಪವನ್ನು ಪಡೆಯುತ್ತದೆ. ಸಾಮಾಜಿಕ ತುಳಿತಕ್ಕೆ ಒಳಗಾದವರಿಗೆ ಮೀಸಲಾತಿ ನೀಡುವ ಅಥವಾ ನ್ಯಾಯ ಒದಗಿಸಿಕೊಡುವ ಸಕಾರಾತ್ಮಕ ಕ್ರಮಗಳ ಯಾವ ಪ್ರಸ್ತಾಪವೂ ಹೊಸ ಶಿಕ್ಷಣ ನೀತಿಯಲ್ಲಿಲ್ಲ. ಕೇಂದ್ರ ಸರ್ಕಾರದ ಮೂಗಿನ ಕೆಳಗೆ ನೇರವಾಗಿ ಕಾರ್ಯನಿರ್ವಹಿಸುತ್ತಿರುವ ಜೆಎನ್‌ಯು ನಂತಹ ವಿಶ್ವವಿದ್ಯಾಲಯಗಳಲ್ಲಿ ಕೇಂದ್ರ ಸರ್ಕಾರದ ಸ್ಪಷ್ಟ ಬೆಂಬಲದಿಂದ ಮೀಸಲಾತಿಯನ್ನು ಸ್ವಲ್ಪವೂ ಸದ್ದಿಲ್ಲದೆ ಸಮಾಧಿ ಮಾಡಿರುವುದನ್ನು ಗಮನಿಸಿದರೆ, ದಲಿತ ಮತ್ತು ಒಬಿಸಿ ಗುಂಪುಗಳಿಗೆ ಸೇರಿದ ವಿದ್ಯಾರ್ಥಿಗಳನ್ನು ಶಿಕ್ಷಣದ ವ್ಯಾಪ್ತಿಯಿಂದ ಹೊರಗಿಡುವ ಪ್ರವೃತ್ತಿಯು ಗಮನ ಸೆಳೆಯುತ್ತದೆ.

ಇಲ್ಲಿ ಹೊರಗಿಡುವ ಇನ್ನೊಂದು ಅಂಶವನ್ನು ಸೇರಿಸಲಾಗಿದೆ. ಹೊಸ ಶಿಕ್ಷಣ ನೀತಿಯು ಶಿಕ್ಷಣದ ಖಾಸಗೀಕರಣವನ್ನು ಉತ್ತೇಜಿಸುವ ಮೂಲಕ ಬಡ ವಿದ್ಯಾರ್ಥಿಗಳನ್ನು ಹೊರಗಿಡುತ್ತದೆ. ಆರ್ಥಿಕ ಸ್ವಾಯತ್ತತೆಯೂ ಸೇರಿದಂತೆ ಕಾಲೇಜುಗಳಿಗೆ ನೀಡುವ “ಸ್ವಾಯತ್ತತೆ”ಯ ಮೂಲಕ ವಿದ್ಯಾರ್ಥಿಗಳಿಗೆ ಹೆಚ್ಚಿನ ಶುಲ್ಕ ವಿಧಿಸಿ ಈ ಕಾಲೇಜುಗಳನ್ನು ನಡೆಸುವ ಖಾಸಗಿ ವಿದ್ಯಾ ಸಂಸ್ಥೆಗಳು ಹಣ ಗಳಿಕೆಯ ಕೇಂದ್ರಗಳಾಗಿ ಮಾರ್ಪಡುತ್ತವೆ. ಇಂತಹ ಕ್ರಮದಿಂದ ಶೋಷಿತ ಜಾತಿಗಳಿಗೆ ಸೇರಿದ ಮತ್ತು ಬಡ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಶಿಕ್ಷಣವು ಗಗನ ಕುಸುಮವಾಗುವುದು ಖಚಿತ.

ಶ್ರೀಮಂತ ಕುಟುಂಬದ ವಿದ್ಯಾರ್ಥಿಗಳು ಕೊಡುವ ದೊಡ್ಡ ಮೊತ್ತದ ಶುಲ್ಕದಲ್ಲಿ ಒಂದು ಭಾಗವನ್ನು ಬಳಸಿಕೊಂಡು ಬಡ ವಿದ್ಯಾರ್ಥಿಗಳಿಗೆ ಸಹಾಯವಾಗುವಂತೆ ವಿದ್ಯಾರ್ಥಿ ವೇತನಗಳನ್ನು ಕಲ್ಪಿಸಲಾಗುವುದು ಎಂಬುದಾಗಿ ಈ ಶಿಕ್ಷಣ ನೀತಿಯ ಪ್ರತಿಪಾದಕರು ವಾದಿಸಬಹುದು. ಆದರೆ, ಇಂತಹ ಒಂದು ಯೋಜನೆಯನ್ನು ಜಾರಿಗೊಳಿಸಬಹುದು ಎಂದಾದರೆ, ಅದಕ್ಕೆ ಬೇಕಾಗುವ ಹಣವನ್ನು ಹೊಂದಿಸಿಕೊಳ್ಳಲು ವಿದ್ಯಾ ಸಂಸ್ಥೆಗಳು ಬಡವರಲ್ಲದವರ ಕುಟುಂಬಗಳ ವಿದ್ಯಾರ್ಥಿಗಳ ಮೇಲೆ ಒಂದು ಬಲು ದುಬಾರಿ ಶುಲ್ಕವನ್ನು ವಿಧಿಸಲೇಬೇಕಾಗುತ್ತದೆ. ಇದು ವಿದ್ಯಾರ್ಥಿಗಳಲ್ಲಿ ಒಂದು ಸಾಮಾಜಿಕ ಬಿರುಕನ್ನು ಸೃಷ್ಟಿಸುತ್ತದೆ (“ನಾನು ತೆರುವ ಶುಲ್ಕದಿಂದ ನಿನಗೆ ಶಿಕ್ಷಣ ಲಭಿಸುತ್ತಿದೆ”) ಮತ್ತು ಸಹಪಾಠಿಗಳ ನಡುವಣ ಸಂಬಂಧವನ್ನು ಹಾಳುಗೆಡವುತ್ತದೆ. ನವ ಉದಾರವಾದದ ಪರಿಧಿಯೊಳಗೆ ಕಾರ್ಯನಿರ್ವಹಿಸುತ್ತಿರುವ ಹೊಸ ಶಿಕ್ಷಣ ನೀತಿಯು, ಶಿಕ್ಷಣಕ್ಕೆ ತಗಲುವ ಇಡೀ ವೆಚ್ಚವನ್ನು ಮತ್ತು ವಿದ್ಯಾರ್ಥಿವೇತನಗಳನ್ನು ಸರ್ಕಾರವೇ ಭರಿಸಬೇಕು ಎಂಬ ನೀತಿ-ನಿಲುವಿನಿಂದ ದೂರ ಸರಿಯುತ್ತಿದೆ. ಆದ್ದರಿಂದ, ಅಸಂಖ್ಯ ಧನಹೀನ ವಿದ್ಯಾರ್ಥಿಗಳು ಕಲಿಕೆಂದ ಸಂಪೂರ್ಣವಾಗಿ ಹೊರಗುಳಿಯುತ್ತಾರೆ ಅಥವಾ ಎರಡನೆಯ ದರ್ಜೆಯ ವಿದ್ಯಾರ್ಥಿಗಳಾಗಿಯೇ ಉಳಿಯುತ್ತಾರೆ. ಬಡ ವಿದ್ಯಾರ್ಥಿಗಳು ಶಾಲೆ ತೊರೆಯುವವರೆಗೂ ಅವರನ್ನು ಶ್ರೀಮಂತ ವಿದ್ಯಾರ್ಥಿಗಳು ಲೇವಡಿ ಮಾಡುತ್ತಾರೆ.

ಒಂದು ಸಮ-ಸಮಾಜದ ಅಡಿಪಾಯವನ್ನು ನಿರ್ಮಿಸುವ ಗುರಿಯಿಂದ ಹಿಂದೆ ಸರಿಯುವುದರ ಪ್ರತೀಕವಾಗಿರುವ ಪಕ್ಕಾ ಪ್ರತಿಗಾಮಿ ಶಿಕ್ಷಣ ನೀತಿಗೆ ಒಂದು ತೆರನ ಅಂಗೀಕಾರವನ್ನು ಪ್ರಜ್ಞಾವಂತರು ಸೂಚಿಸಿರುವುದು ಒಂದು ವಿಚಿತ್ರ ವಿದ್ಯಮಾನವೇ ಸರಿ.

ಕೂತೂಹಲಕರವಾಗಿ ಕಾಣುವ ಒಂದು ಅಂಶವೆಂದರೆ, ಪ್ರಸ್ತುತ ಹೊಸ ಶಿಕ್ಷಣ ನೀತಿಯ ಬಗ್ಗೆ ೨೦೧೯ರಲ್ಲಿ ಪ್ರಕಟಿಸಿದ್ದ ಶಿಕ್ಷಣ ನೀತಿಯ ಕರಡು ದಸ್ತಾವೇಜಿನಲ್ಲಿ, ಖಾಸಗಿ ದಾನ-ದತ್ತಿಗಳಿಂದ ಕೂಡಿಲ್ಲದ ಖಾಸಗಿ ಶಿಕ್ಷಣ ಸಂಸ್ಥೆಗಳ ಬಗ್ಗೆ ಅಸಮ್ಮತಿ ವ್ಯಕ್ತಪಡಿಸಿದ್ದ ವಾಕ್ಯಗಳಿದ್ದವು. ಆದರೆ, ಹೊಸ ಶಿಕ್ಷಣ ನೀತಿಯ ದಸ್ತಾವೇಜಿನ ಈ ಆಖೈರು ಆವೃತ್ತಿಯಲ್ಲಿ ಆ ವಾಕ್ಯಗಳನ್ನು ತೆಗೆದುಹಾಕಲಾಗಿದೆ. ಅದೇ ರೀತಿಯಲ್ಲಿ ಹೊಸ ಶಿಕ್ಷಣ ನೀತಿಯ ಆಖೈರು ಎಂದು ಸರ್ಕಾರ ಪ್ರಕಟಣೆ ಮಾಡಿದ್ದ ದಸ್ತಾವೇಜಿನಲ್ಲಿ ಶಿಕ್ಷಣದ ಹಕ್ಕಿನ ಬಗ್ಗೆ ಉಲ್ಲೇಖಗಳಿದ್ದವು. ಆದರೆ,ಸರ್ಕಾರದ ವೆಬ್ ಸೈಟ್‌ನಲ್ಲಿ ಹಾಕಿರುವ ಆವೃತ್ತಿಯಲ್ಲಿ ಶಿಕ್ಷಣದ ಹಕ್ಕಿನ ಬಗ್ಗೆ ಇದ್ದ ಅಂಶಗಳನ್ನು ತೆಗೆದುಹಾಕಲಾಗಿದೆ.

ವಾಸ್ತವವಾಗಿ, ಹೊಸ ಶಿಕ್ಷಣ ನೀತಿಯು ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯುವಿಕೆಗೆ ಸಂಬಂಧಿಸಿ ಒಂದು ಯೋಜನೆಯನ್ನು ರೂಪಿಸಿದೆ. ಕೆಲವು ಅನಿವಾರ್ಯ ಕಾರಣಗಳಿಂದ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯುವುದು ನಮ್ಮ ಕಣ್ಣೆದುರಿನ ವಾಸ್ತವವೇ. ಅದೊಂದು ಪ್ರತ್ಯೇಕ ವಿಷಯ. ಆದರೆ, ಶಾಲೆಯಿಂದ ಹೊರಗುಳಿಯುವ ದುರದೃಷ್ಟಕರ ಸಂಗತಿಯನ್ನು ಒಂದು ಸುಂದರವಾದ ರೀತಿಯಲ್ಲಿ ಬಣ್ಣಿಸಿ (flexibility “ನಮ್ಯತೆ” ಎಂದು ಕರೆಯಲಾಗಿದೆ) ಅಂತಹ ವಿದ್ಯಾರ್ಥಿಗಳಿಗೆ ಒಂದು ಯೋಗ್ಯತಾ ಪತ್ರ ಹಂಚುವ ಯೋಜನೆಯನ್ನು ರೂಪಿಸಲಾಗಿದೆ. ಅದರ ಪ್ರಕಾರವಾಗಿ, ನಾಲ್ಕು ವರ್ಷಗಳ ಪದವಿ ಪೂರ್ವ ಕೋರ್ಸ್ ಆರಂಭವಾಗಲಿದೆ. ಇಂತಹ ಯೋಜನೆಗೆ ಕಾರಣಗಳೇನು ಎಂಬುದನ್ನು ಸ್ಪಷ್ಟಪಡಿಸಿಲ್ಲ. ಯುಪಿಎ-೨ ರ ಕಾಲದಲ್ಲಿ, ಕಪಿಲ್ ಸಿಬಲ್ (ಅಂದಿನ ಶಿಕ್ಷಣ ಸಚಿವರು) ದೆಹಲಿ ವಿಶ್ವವಿದ್ಯಾಲಯದಲ್ಲಿ ಇಂತಹ ಒಂದು ಕೋರ್ಸ್‌ನ್ನು ಜಾರಿಗೆ ತಂದಾಗ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಮೋದಿ ಸರಕಾರದ ಮೊದಲ ಅವಧಿಯಲ್ಲಿ ಶಿಕ್ಷಣ ಸಚಿವರಾಗಿದ್ದ ಸ್ಮೃತಿ ಇರಾನಿ ಅದನ್ನು ಬದಲಾಸಿದರು. ಆದರೆ, ಈಗ ಅದನ್ನೇ ಇಡೀ ದೇಶದಲ್ಲಿ ಜಾರಿ ಮಾಡಲಾಗಿದೆ! ಈ ಕಾರ್ಯಕ್ರಮದ ಪ್ರಕಾರ, ವಿದ್ಯಾರ್ಥಿಗಳು ಮೊದಲ ವರ್ಷದ ನಂತರ ಒಂದು ಸರ್ಟಿಫಿಕೇಟ್ ಮತ್ತು ಎರಡನೇ ವರ್ಷದ ನಂತರ ಒಂದು ಡಿಪ್ಲೊಮಾ ಮತ್ತು ಅದರ ನಂತರ ಬೇಕಾದರೆ  ಬಿಡಬಹುದು. ಆದರೆ, ಪ್ರತ್ಯೇಕವಾಗಿ ಒಂದು ವರ್ಷದ ಅಥವಾ ಎರಡು ವರ್ಷಗಳ ಅವಧಿಯ ಯಾವುದೇ ಕೋರ್ಸ್‌ಗಳ ವ್ಯವಸ್ಥೆ ಇಲ್ಲ. ಆದ್ದರಿಂದ, ಒಂದು ಅಥವಾ ಎರಡು ವರ್ಷಗಳ ಅವಧಿಯ ಕೋರ್ಸ್ ಮುಗಿದ ನಂತರ ಈ ನಾಲ್ಕು ವರ್ಷಗಳ ಕೋರ್ಸ್‌ನ ಮಧ್ಯದಲ್ಲಿ  ಬಿಡುತ್ತಾರೆ ಎಂದಾಗುತ್ತದೆ.

ಈ ರೀತಿಯಲ್ಲಿ ಹೊಸ ಶಿಕ್ಷಣ ನೀತಿಯು ವಿದ್ಯಾರ್ಥಿಗಳು ಶಾಲೆ ಬಿಡುವುದನ್ನು  (dropping out) ಮಾನ್ಯಗೊಳಿಸುತ್ತದೆ. ಒಂದೇ ವ್ಯತ್ಯಾಸವೆಂದರೆ  ಅವರನ್ನು ಸಮಾಧಾನ ಪಡಿಸುವ ರೀತಿಯಲ್ಲಿ ಎಂಥದ್ದೊ ಒಂದು ಸರ್ಟಿಫಿಕೇಟ್ ಅಥವಾ ಡಿಪ್ಲೊಮಾ ಎನ್ನುವ ಕಾಗದದ ಒಂದು ಚೂರನ್ನು ಕೊಡುತ್ತದೆ, ಬೇರೆ ಏನೂ ಇಲ್ಲ. ಈ ಕಾಗದದ ತುಂಡುಗಳು ಅವುಗಳನ್ನು ಹೊಂದಿರುವವರಿಗೆ ಯಾವುದೇ ಯೋಗ್ಯ ಉದ್ಯೋಗವನ್ನು ಕೇಳುವ ಅರ್ಹತೆ ನೀಡುವುದಿಲ್ಲ; ಅವರಿಗೆ ಅದರಿಂದ ಯಾವ ಪ್ರಯೋಜನವೂ ಇರುವುದಿಲ್ಲ. ಇಂತಹ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಒಂದೆರಡು ವರ್ಷ ಕಳೆದುದನ್ನು ಬಿಟ್ಟರೆ ಬೇರೆ ಯಾವ ಭಾಗ್ಯವೂ ಇಲ್ಲ. ಅತ್ತ ಸಾರ್ಥಕ ಶಿಕ್ಷಣವೂ ಇಲ್ಲ, ಇತ್ತ ಉದ್ಯೋಗವೂ ಇಲ್ಲ. ಕೊನೆಗೆ “ಕಾಲೇಜು ಜೀವನ”ದ ಮಧುರ ಅನುಭವವೂ ಇಲ್ಲದಂತಾಗುತ್ತದೆ. ಆದ್ದರಿಂದ, ಹೊಸ ಶಿಕ್ಷಣ ನೀತಿಯ ಪರಿಕಲ್ಪನೆಯು ಕೇವಲ ಒಂದು ಕನಿಷ್ಠ ಶಿಕ್ಷಣ ಮಟ್ಟದ ವಿದ್ಯಾವಂತ ಸೈನ್ಯವನ್ನು ಕಟ್ಟುವಲ್ಲಿ ಪರಿಣಮಿಸಿ, ಅವರಿಗೆ ತಾವು “ಸುಶಿಕ್ಷಿತ” ಎಂಬ ಭ್ರಮೆಯನ್ನು ಉಂಟುಮಾಡುತ್ತದೆ. ಈ ಸೇನೆಯಲ್ಲಿರುವವರು, ಸಾಮಾನ್ಯವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದವರೇ ಆಗಿರುತ್ತಾರೆ.

ಈ ರೀತಿಯ ಶಿಕ್ಷಣವು ಸ್ವತಂತ್ರ ಭಾರತವು ಕಾಣಬಯಸಿದ್ದ ಸಮಾಜದ ಏಳ್ಗೆಯ ಕನಸಿನ ಅವಹೇಳನವಾಗುತ್ತದೆ ಮತ್ತು ದೇಶದ ಹೊಸ ಜಾಗೃತಿಯ ಭಾಗವಾಗಿ ಎಲ್ಲರಿಗೂ ಶಿಕ್ಷಣ ಲಭ್ಯವಾಗುವಂತೆ ಮಾಡುವ ಸಾಮಾಜಿಕ ದೃಷ್ಟಿಕೋನದ ಒಂದು ವಿಡಂಬನೆಯಾಗುತ್ತದೆ. ಅದೇ ರೀತಿಯಲ್ಲಿ ವಿದ್ಯಾರ್ಥಿಗಳು ಒಂದು ಕನಿಷ್ಠ ವರ್ಷಗಳ ಮಟ್ಟದ ಸಾಮಾನ್ಯ ಶಿಕ್ಷಣವನ್ನು ಪಡೆಯುವ ಮೊದಲೇ ಅವರನ್ನು ಜೀವನ ನಿರ್ವಹಣೆಯ-ಉದ್ಯೋಗ ಆಧಾರಿತ ಕೋರ್ಸ್‌ಗಳಿಗೆ ಅಥವಾ ಅವರಿಗೆ ಒಗ್ಗುವ ವೃತ್ತಿಯ ತರಬೇತಿಗೆ ತಳ್ಳುವ ನೀತಿಯು, ಯುವ ಜನರ ಮೇಲೆ ತನಗಿರುವ ಜವಾಬ್ದಾರಿಯಿಂದ ಕೈ ತೊಳೆದುಕೊಳ್ಳಲು ಬಯಸುವ ಸರ್ಕಾರದ ತೀರ್ಮಾನವನ್ನು ಬಹಿರಂಗಪಡಿಸುತ್ತದೆ. ಈ ನೀತಿಯು, ಗಣರಾಜ್ಯದ ಪ್ರಜೆಗಳಾಗಿ ರೂಪುಗೊಳ್ಳುವಂತಹ ಶಿಕ್ಷಣವನ್ನೂ ಒದಗಿಸುವುದಿಲ್ಲ ಅಥವಾ ಒಂದು ಸರಿಯಾದ ಉದ್ಯೋಗವನ್ನೂ ಒದಗಿಸುವುದಿಲ್ಲ. ವಿದ್ಯಾರ್ಥಿಗಳಿಗೆ ಅತ್ಯಲ್ಪ ಪ್ರಮಾಣದ ತರಬೇತಿ ಕೊಟ್ಟು ಅವರನ್ನು ಏಕಾಏಕಿಯಾಗಿ ಮಾರುಕಟ್ಟೆಗೆ ಎಸೆಯುತ್ತದೆ. ನಂತರ ಅವರನ್ನು ಅವರವರ ಪಾಡಿಗೇ ಬಿಡುತ್ತದೆ.

ವಿದ್ಯಾರ್ಥಿಗಳು ಕಲಿಕೆಯಿಂದಲೇ ಹೊರಗುಳಿಯುವ ಸಂದರ್ಭದಲ್ಲಿ ಕಲಿಕೆಯ ಮೊದಲ ಕೆಲವು ವರ್ಷಗಳಲ್ಲಿ ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂದು ಹೇಳುವ ಹೊಸ ಶಿಕ್ಷಣ ನೀತಿಯ ನಿಬಂಧನೆಯು ಒಂದು ವಿಡಂಬನೆಯಾಗಿ ಕಾಣುತ್ತದೆ. ಮಾತೃಭಾಷೆಯಲ್ಲಿ ಶಿಕ್ಷಣ ಎಂದರೆ ಅವರು ಸೇರಿದ ರಾಜ್ಯದ ಸ್ಥಳೀಯ ಭಾಷೆಯಾಗಿರಬಹುದು ಅಥವಾ ಬೇರೆಯ ಭಾಷೆಯೇ ಇರಬಹುದು ಎಂಬ ವಿಚಾರವು ಸ್ವಾಗತಾರ್ಹವೇ. ಆದರೆ, ಮಾತೃಭಾಷೆಯ ಶಿಕ್ಷಣಕ್ಕೆ ಪೂರಕ ಕ್ರಮವಾಗಿ ಒಂದು ಭರವಸೆಯನ್ನು ಕೊಡಬೇಕಾಗುತ್ತದೆ. ಮಾತೃಭಾಷೆಯಲ್ಲಿ ಶಿಕ್ಷಣ ಪಡೆದ ಕಾರಣದಿಂದಾಗಿ ಮುಂದೆ ಶೈಕ್ಷಣಿಕ ವೃತ್ತಿಜೀವನದಲ್ಲಿ ಕಲಿಕೆಗೆ ತೊಂದರೆಯಾಗದಂತೆ ಅವರಿಗೆ ಸೂಕ್ತ ಮೀಸಲಾತಿ ಒದಗಿಸುವ ಭರವಸೆಯನ್ನು ಕೊಡಬೇಕಾಗುತ್ತದೆ. ಅಂತಹ ಮೀಸಲಾತಿ ಇಲ್ಲದ ಸಂದರ್ಭದಲ್ಲಿ ಮಾತೃಭಾಷಾ ಮಾಧ್ಯಮದಲ್ಲಿ ಮಾಡುವ ಕಲಿಕೆಯು, ಅವರಿಗೆ ಮುಂದೆ ಹೋಗಲು ಅವಕಾಶ ದೊರಕದೆ ಅವರು ಕೊಳಗೇರಿಯಲ್ಲಿಯೇ ಕೊಳೆಯುವಂತಾಗುತ್ತದೆ.

ಹೊಸ ಶಿಕ್ಷಣ ನೀತಿಯು ವಸ್ತುತಃ ವಿದ್ಯಾರ್ಥಿಗಳನ್ನು ಗಣ್ಯರು ಮತ್ತು ಗಣ್ಯರಲ್ಲದವರು ಎನ್ನುವ ರೀತಿಯಲ್ಲಿ ಇಬ್ಭಾಗ ಮಾಡುವುದು ಮಾತ್ರವೇ ಖಂಡನೀಯವಲ್ಲ. ಈ ನೀತಿಯ ತಾತ್ವಿಕತೆಯೇ ಇಂತಹ ದ್ವಿಭಜನೆಯನ್ನು ಜನರು ಒಪ್ಪಿಕೊಳ್ಳುವಂತೆ ಮಾಡುತ್ತದೆ. ಈ ನೀತಿಯ ಸ್ಪಷ್ಟ ಉದ್ದೇಶಗಳಲ್ಲಿ ಒಂದು ಏನೆಂದರೆ, ವಿದ್ಯಾರ್ಥಿಗಳು ತಾವು ಭಾರತೀಯರು ಎಂಬುದರ ಬಗ್ಗೆ ಹೆಮ್ಮೆ ಪಡುವಂತೆ ಮಾಡುವುದು. “ಅಸ್ಪೃಶ್ಯತೆ” ಯಂತಹ ಅಮಾನವೀಯ ಆಚರಣೆಗಳಿಂದ ಗುರುತಿಸಲ್ಪಡುವ ನಾಗರಿಕತೆಯ ಭಾಗವಾಗಿರುವುದರ ಬಗ್ಗೆ ಯಾರೂ ಹೆಮ್ಮೆಪಡಲಾರದ ಕಾರಣದಿಂದ, ಪಠ್ಯಕ್ರಮವು ಸಹಜವಾಗಿಯೇ ಅಂತಹ ಆಚರಣೆಗಳನ್ನು ಕಡೆಗಣಿಸಿ ಭಾರತೀಯ ನಾಗರಿಕತೆಯ “ಅಂದಗೊಳಿಸಿದ” ಚಿತ್ರಣವನ್ನು ಪ್ರಸ್ತುತಪಡಿಸುತ್ತದೆ.

ಅದೇ ರೀತಿಯಲ್ಲಿ ನಿಷ್ಕಾಮ ಕರ್ಮವು ಒಬ್ಬ ವ್ಯಕ್ತಿಯು ವೈಯಕ್ತಿಕವಾಗಿ ಅನುಸರಿಸುವ ಜೀವನ ಕ್ರಮವು ಎಂಥದ್ದು ಎಂಬುದನ್ನು ತಿಳಿಸುತ್ತದೆ. ಆದರೆ ಅದನ್ನೇ ಪ್ರತಿ ವಿದ್ಯಾರ್ಥಿಗೂ ಪಠ್ಯಕ್ರಮದ ಒಂದು ಭಾಗವಾಗಿ ಕಲಿಸಲಾಗುತ್ತದೆ ಎಂದಾದರೆ, ಅದು ಅನಿವಾರ್ಯವಾಗಿ ಶೋಷಣೆಯನ್ನು ಕಡೆಗಣಿಸುತ್ತದೆ. ಕಾರ್ಖಾನೆಯಲ್ಲಿ ಕೆಲಸಮಾಡುವ ಕಾರ್ಮಿಕನ ಮಗುವಿಗೆ ನಿಷ್ಕಾಮ ಕರ್ಮವನ್ನು ಒಂದು ಆದರ್ಶವೆಂದು ಬೋಧಿಸಿದರೆ, ಆ ಮಗುವಿಗೆ ತನ್ನ ತಂದೆಯು ಹೆಚ್ಚಿನ ವೇತನಕ್ಕಾಗಿ ಮುಷ್ಕರದಲ್ಲಿ ಭಾಗಿಯಾಗುವುದರ ಬಗ್ಗೆ ಸಹಾನುಭೂತಿ ಇರುವುದಿಲ್ಲ.

ಉತ್ತಮ ಜಗತ್ತನ್ನು ನಿರ್ಮಿಸುವುದೇ ಶಿಕ್ಷಣದ ಉದ್ದೇಶವಾಗಬೇಕು. ಅಸ್ತಿತ್ವದಲ್ಲಿರುವ ಪ್ರಪಂಚದ ಬಗ್ಗೆ ಅತೃಪ್ತಿ ಇದ್ದಾಗ ಮಾತ್ರ ಉತ್ತಮ ಜಗತ್ತನ್ನು ನಿರ್ಮಿಸುವ ಪ್ರೇರೇಪಣೆ ಉಂಟಾಗುತ್ತದೆ. ಇರುವ ಜಗತ್ತಿಗೇ ಹೊಂದಿಕೊಳ್ಳುವುದಾಗಲಿ ಅಥವಾ ತೀರಾ ಸರಳವಾಗಿ ಹೇಳಬಹುದಾದ ಹಾಗೆ ಹಿಂದಿನ ಕಾಲದಲ್ಲಿದ್ದ ಯಾವ ಪ್ರಪಂಚಕ್ಕೆ ಹೊಂದಿಕೊಳ್ಳಲಾಗದೆ ಜನರು ತಮ್ಮ ಆಚರಣೆಯ ಮೂಲಕ ಅದನ್ನು ದಾಟಿ ಹೋಗುವ ಪ್ರಯತ್ನದಲ್ಲಿ ನಿರತರಾಗಿದ್ದಾರೋ ಅಂತಹ ಪ್ರಪಂಚಕ್ಕೆ ಹೊಂದಿಕೊಳ್ಳುವಂತೆ ಹೇಳುವುದು ಶಿಕ್ಷಣ ಕ್ಷೇತ್ರದಲ್ಲಿ ಒಂದು ಪ್ರತಿಗಾಮಿ ಯೋಜನೆಯಾಗುತ್ತದೆ. ಹೊಸ ಶಿಕ್ಷಣ ನೀತಿಯು ಇಂತಹ ಪ್ರತಿಗಾಮಿ ಯೋಜನೆಯನ್ನು ಉತ್ತೇಜಿಸುತ್ತದೆ.

ಇದೇ ತೆರನಾದ ಪ್ರತಿಗಾಮಿ ಧೋರಣೆಯನ್ನು ಇನ್ನೊಂದು ಮುಖ್ಯವಾದ ಅಂಶದಲ್ಲೂ ಕಾಣಬಹುದು. ವಿದ್ಯಾರ್ಥಿಗಳಿಗೆ ತಮ್ಮ ಮೂಲಭೂತ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಬೋಧನೆಯ ಪ್ರಸ್ತಾಪವೇ ಇಲ್ಲದ ಹೊಸ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳ ಮೂಲಭೂತ ಕರ್ತವ್ಯಗಳ ಬಗ್ಗೆ ಮಾತ್ರ ಬೋಧನೆಯಾಗುತ್ತದೆ. ಹೊಸ ಶಿಕ್ಷಣ ನೀತಿಯ ದಸ್ತಾವೇಜಿನಲ್ಲಿ ಎಲ್ಲೆಡೆಯೂ ಸಂಪ್ರದಾಯಶರಣತೆಯೇ ವಿಜೃಂಭಿಸುತ್ತದೆ. ಉನ್ನತ ವರ್ಗದವರ ಮಕ್ಕಳು ತಾವು ಅಲಂಕರಿಸುವ ಕಾರ್ಯನಿರ್ವಾಹಕ ಹುದ್ದೆಗಳಲ್ಲಿ ಅಂತರ್‌ ರಾಷ್ಟ್ರೀಯ ಹಣಕಾಸು ಬಂಡವಾಳದ ಗುಲಾಮಗಿರಿಗೆ ಒಗ್ಗಿಕೊಳ್ಳುತ್ತಾರೆ. ಬಹಿಷ್ಕೃತರು ಮತ್ತು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರ ಮಕ್ಕಳು ಗುಲಾಮಗಿರಿಗೆ ಒಳಪಟ್ಟ ಕಾರ್ಮಿಕ ವರ್ಗದ ಸದಸ್ಯರಾಗುತ್ತಾರೆ. ಅವರಿಗೆ ಕುಸಿಯುತ್ತಿರುವ ಉದ್ಯೋಗಗಳ ಪರಿಸ್ಥಿತಿಯಲ್ಲಿ ಲಭ್ಯವಿರುವ ಕಡಿಮೆ ಹುದ್ದೆಗಳನ್ನು ಬೇಕಾದವರಿಗೆ ಹಂಚುವ ಪರಿಸ್ಥಿತಿಯ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಬೇಕಾಗುವ ಬೌದ್ಧಿಕತೆಯ ಕೊರತೆಯೂ ಇರುತ್ತದೆ. ಶಿಕ್ಷಣದ ಇಂತಹ ತಾತ್ವಿಕತೆಯು ಯಾವುದೇ ದೇಶಕ್ಕೆ, ಅದರಲ್ಲೂ ವಿಶೇಷವಾಗಿ ನಮ್ಮ ದೇಶಕ್ಕೆ ಅಸಮಂಜಸವಾಗುತ್ತದೆ.

ನಮ್ಯತೆ, ಒಳಗೊಳ್ಳುವಿಕೆ, ವಿದ್ಯಾರ್ಥಿಗಳ ಮೇಲಿನ ಹೊರೆಯನ್ನು ಕಡಿಮೆ ಮಾಡುವ ಹೆಸರಿನಲ್ಲಿ  ಮಾಡುವ ಅವುಗಳಿಗೆ ತದ್ವಿರುದ್ಧವಾದುದನ್ನೇ, ಅಂದರೆ  ಹೊರಗಿಡುವಿಕೆಯನ್ನೇ ಮಾಡಲಾಗುತ್ತಿದೆ ಮತ್ತು ಅಂತಹ ಹೊರಗಿಡುವಿಕೆಯನ್ನೇ ಒಪ್ಪಿಕೊಳ್ಳುವಂತೆ ಮಾಡಲಾಗುತ್ತಿದೆ. ವಾಸ್ತವವಾಗಿ, ಹೊಸ ಶಿಕ್ಷಣ ನೀತಿಯನ್ನು ವಿಭಿನ್ನವಾಗಿ ನೋಡಿದ್ದಾದಲ್ಲಿ, ಅದನ್ನು ಚೆನ್ನಾಗಿಯೇ ಅರ್ಥಮಾಡಿಕೊಳ್ಳಬಹುದು. ಒಂದು ಏಕರೂಪದ ಸಮೂಹ ಶಿಕ್ಷಣವನ್ನು ಜಾರಿಗೊಳಿಸುವುದು ಬಂಡವಾಳಶಾಹಿ ವ್ಯವಸ್ಥೆಗೆ ಅಗತ್ಯವಾಗುತ್ತದೆ. ಏಕೆಂದರೆ, ಪಾಳೇಗಾರಿ ವ್ಯವಸ್ಥೆಯ ಕಾಲದಲ್ಲಿ ಜನರು ತಮ್ಮ ತಮ್ಮ ಹಳ್ಳಿಗಳಿಂದ ಅಥವಾ ಸ್ಥಳೀಯ ಪ್ರದೇಶಗಳಿಂದ ಹೊರಹೋಗದ ಸನ್ನಿವೇಶ ಇದ್ದರೆ,  ಅದಕ್ಕೆ ವಿರುದ್ಧವಾಗಿ, ಜನರನ್ನು ಗಣನೀಯ ಪ್ರಮಾಣದಲ್ಲಿ ಸ್ಥಳಾಂತರಿಸಬೇಕಾದ ಅವಶ್ಯಕತೆಯು ಬಂಡವಾಳಶಾಹಿ ವ್ಯವಸ್ಥೆಯಲ್ಲಿದೆ. ಹಾಗಾಗಿ, ಬೇರೆ ಬೇರೆ ಪ್ರದೇಶಗಳಲ್ಲಿ ವಾಸಿಸುವ ವ್ಯಕ್ತಿಗಳಿಗೆ ಒಂದು ಏಕರೂಪದ ಶಿಕ್ಷಣ ನೀಡುವಂತಹ ಶಿಕ್ಷಣ ನೀತಿಯ ಅವಶ್ಯಕತೆ ಬಂಡವಾಳಶಾಹಿಗೆ ಈಗಲೂ ಇದೆ. ಆದರೆ ಸ್ವತಂತ್ರ ಭಾರತವು ಬಂಡವಾಳಶಾಹಿಯ ಕಾರ್ಯಾಚರಣೆಯ ಅಗತ್ಯಕ್ಕೆ ಬೇಕಾಗಿರುವ ಶಿಕ್ಷಣಕ್ಕಿಂತಲೂ ಹೆಚ್ಚು ವಿಸ್ತಾರವಾದ “ಸಾರ್ವತ್ರಿಕ ಶಿಕ್ಷಣ” ಕಾರ್ಯಕ್ರಮದ ಭರವಸೆಯನ್ನು ಕೊಟ್ಟಿತು.

ನವ ಉದಾರ ಬಂಡವಾಳಶಾಹಿ ಆಳ್ವಿಕೆಯ ಶಿಕ್ಷಣ ನೀತಿಯ ಉದ್ದೇಶವೆಂದರೆ, ಬಂಡವಾಳಶಾಹಿ ವ್ಯವಸ್ಥೆಯ ಅವಶ್ಯಕತೆಗೆ ತಕ್ಕಷ್ಟೇ ಪ್ರಮಾಣದಲ್ಲಿ ಶಿಕ್ಷಣ ನೀಡುವುದು ಮತ್ತು ವಿವಿಧ ಕುತಂತ್ರಗಳ ಮೂಲಕ ‘ಸಾರ್ವತ್ರಿಕ ಶಿಕ್ಷಣ’ದ ವಚನದಿಂದ ಹಿಂದಕ್ಕೆ ಸರಿಯುವುದು. ಹೊಸ ಶಿಕ್ಷಣ ನೀತಿಯು ಏನು ಹೇಳುತ್ತದೆ ಎನ್ನುವುದಕ್ಕಿಂತ ಎಂತಹ ಕುತಂತ್ರಗಳ ಮೂಲಕ ಜನರಿಗೆ ಕೊಟ್ಟ ವಚನವನ್ನು ಮುರಿಯುತ್ತದೆ ಎಂಬುದನ್ನು ಪರಿಶೀಲಿಸಿದರೆ ಹೊಸ ಶಿಕ್ಷಣ ನೀತಿಯು ಸರಿಯಾಗಿಯೇ ಅರ್ಥವಾಗುತ್ತದೆ.

 

ಅನು: ಕೆ.ಎಂ.ನಾಗರಾಜ್

 

 

Donate Janashakthi Media

Leave a Reply

Your email address will not be published. Required fields are marked *