ಹೊಲಸು ವೋಟ್ ಬ್ಯಾಂಕ್ ರಾಜಕಾರಣ, ಉಗ್ರ ನವ-ಉದಾರವಾದಿ ಧೋರಣೆ, ಜೊತೆಗೆ ಈಗ ಸರ್ವಾಧಿಕಾರಶಾಹಿ ಪ್ರವೃತ್ತಿ

( ಸಂಪುಟ 9, ಸಂಚಿಕೆ 1, 4 ಜನವರಿ 2015 )

 

ಪಿಡಿ ಸಂಪಾದಕೀಯ – ಸೀತಾರಾಮ್ ಯೆಚೂರಿ

   mission 44

ಝಾರ್ಖಂಡ್ ಮತ್ತು ಜಮ್ಮು-ಕಾಶ್ಮೀರ ಚುನಾವಣೆಗಳೆರಡೂ ಬಿಜೆಪಿ ಏನೇ ಪ್ರಯತ್ನಗಳನ್ನು ನಡೆಸಿದರೂ ತನ್ನ ಗುರಿಯನ್ನು ಸಾಧಿಸಲಾಗಿಲ್ಲ ಎಂಬುದನ್ನು ತೋರಿಸಿ ಕೊಟ್ಟಿವೆ. ಎರಡೂ ಕಡೆ ಬಿಜೆಪಿಯ ಚುನಾವಣಾ ವಿಜಯದ ಆಧಾರ ಕೋಮುವಾದಿ ಧ್ರುವೀಕರಣವೇ., ಅಂದರೆ ಅತ್ಯಂತ ಹೊಲಸು ಸ್ವರೂಪದ ‘ವೋಟ್ ಬ್ಯಾಂಕ್ ರಾಜಕೀಯ’. ಅಷ್ಟಾದರೂ ಏಕಪಕ್ಷ ಬಹುಮತದ ಸರಕಾರ ರಚಿಸುವುದು ಅದಕ್ಕೆ ಸಾಧ್ಯವಾಗಿಲ್ಲ. ನಮ್ಮ ದೇಶದ ಮತ್ತು ಜನತೆಯ ದುರದೃಷ್ಟವೆಂದರೆ, ಇದೇ, ಮತ್ತು ರಾಜ್ಯಸಭೆಯಲ್ಲಿನ ಕೋಲಾಹಲ ಮತ್ತು ಮೋದಿ ಸರಕಾರಕ್ಕೆ ದೇಶದ ಆರ್ಥಿಕಕ್ಕೆ ಒಂದು ಬಲವಾದ ಚಾಲನೆ ನೀಡಲು ಸಾಧ್ಯವಾಗದೇ ಇರುವುದು ಬಹುಶಃ ಇಂತಹ ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸಬಹುದು.

Amit-Shah-forcible-conversionI

   ರಾಜ್ಯ ವಿಧಾನಸಭೆಗಳ ಚುನಾವಣೆಗಳ ಫಲಿತಾಂಶಗಳು ಘೋಷಿಸಲ್ಪಟ್ಟಿವೆ. ಬಿಜೆಪಿ ಘೋಷಿಸಿಕೊಂಡಿದ್ದ ಗುರಿಯನ್ನು ತಲುಪುವಲ್ಲಿ ವಿಫಲವಾಗಿದೆ. ಅತ್ಯಂತ ರೋಷಾವೇಶದಿಂದ ಈ ಗುರಿಗಳನ್ನು ಅದು ಚುನಾವಣಾ ಪ್ರಚಾರದ ವೇಳೆಗೆ ಸಾರುತ್ತಿತ್ತು. ಅದರ ಬಹು ಅಬ್ಬರದ ‘ಆಪರೇಶನ್ 44+’ ಸಂಬಂಧಪಟ್ಟ ಮತದಾರರ ನಡುವೆ ಹುರುಪು ತರಲಿಲ್ಲ. ಕಾಶ್ಮೀರ ಕಣಿವೆಯಲ್ಲಿ ಒಂದೂ ಸ್ಥಾನ ಅದಕ್ಕೆ ದಕ್ಕಿಲ್ಲ. ಜಮ್ಮು ಪ್ರದೇಶದಲ್ಲಿ ಅದರ ಸ್ಥಾನಗಳಲ್ಲಿ ಆಗಿರುವ ಹೆಚ್ಚಳ ಪ್ರಥಮತಃ ಅದು ದನಿಯೆತ್ತಿ ಹರಿಯ ಬಿಟ್ಟ ಕೋಮುವಾದಿ ಧ್ರುವೀಕರಣದಿಂದಾಗಿ ಎಂದು ಈಗಾಗಲೇ ಹೊರಬರುತ್ತಿರುವ ವಿಶ್ಲೇಷಣೆಗಳು ಹೇಳುತ್ತಿವೆ. ಬಹುಶಃ ಇಷ್ಟು ಬೇಗನೇ ತೀರ್ಮಾನಕ್ಕೆ ಬರಲಾಗದು ಎಂಬುದೇನೋ ನಿಜ.

   ಆದರೂ, ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಪಡೆದ ಫಲಿತಾಂಶಗಳಿಗೆ ಹೋಲಿಸಿದರೆ ಅದರ ಮತಗಳಿಕೆಯಲ್ಲಿ ಸುಮಾರು 10 ಶೇಕಡಾ ಇಳಿಕೆ ಕಾಣುತ್ತಿದೆ. ಬಿಜೆಪಿಯೇತರ ಪಕ್ಷಗಳು, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ(ಪಿಡಿಪಿ), ನ್ಯಾಶನಲ್ ಕಾನ್ಫರೆನ್ಸ್(ಎನ್ಸಿ) ಮತ್ತು ಕಾಂಗ್ರೆಸ್ ಒಟ್ಟುಗೂಡಿ ಸರಕಾರ ರಚಿಸುವ ಸಾಧ್ಯತೆಗಳು ಇವೆ. ಅವುಗಳಿಗೆ ಒಟ್ಟಾಗಿ ಸಾಕಷ್ಟು ಬಹುಮತ ಇದೆ. ರಾಜ್ಯದಲ್ಲಿ ಇನ್ನಷ್ಟು ಕೋಮುವಾದಿ ಧ್ರುವೀಕರಣವನ್ನು ತಡೆಯಲು ಇದು ಅಗತ್ಯ ಕೂಡ. ಇಲ್ಲವಾದರೆ ವಿನಾಶಕಾರಿ ಪರಿಣಾಮಗಳನ್ನು ಕಾಣಬೇಕಾಗಬಹುದು. ಆದರೆ ಈ ನಡುವೆ ಎಂತೆಂತಹ ವ್ಯವಹಾರಗಳು ಕುದುರಬಹುದು ಎಂಬುದು ಬಹುಶಃ ಈ ಸಂಚಿಕೆ ಓದುಗರ ಕೈಗಳಿಗೆ ಸೇರುವ ವೇಳೆಗೆ ಗೊತ್ತಾಗಿರುತ್ತದೆ.

   ಝಾರ್ಖಂಡದಲ್ಲಿ ಬಿಜೆಪಿ ಲೋಕಸಭಾ ಚುನಾವಣೆಗಳಿಗೆ ಹೋಲಿಸಿದರೆ ಸುಮಾರು 9 ಶೇಕಡಾ ಮತಗಳನ್ನು ಕಳಕೊಂಡಿದೆ. ತನ್ನ ಮಿತ್ರಪಕ್ಷ ಆಲ್ ಝಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ (ಎಜೆಎಸ್ಯು) ಜತೆಗೂಡಿ ಅರ್ಧದಷ್ಟು, ಸರಕಾರ ರಚಿಸಲು ಮಾತ್ರ ಸಾಲುವಷ್ಟು ಸ್ಥಾನಗಳನ್ನಷ್ಟೇ ಪಡೆಯಲು ಅದಕ್ಕೆ ಸಾಧ್ಯವಾಗಿದೆ. ಇದು ಕೂಡ ಸಾಧ್ಯವಾಗಿರುವುದು ದೇಶಾದ್ಯಂತ ಅದರ ಭಾರೀ ಧೂಳೆಬ್ಬಿಸಿದ ಕ್ರೈಸ್ತ-ವಿರೋಧಿ ಪ್ರಚಾರದಿಂದಾಗಿ. ಡಿಸೆಂಬರ್ 25ನ್ನು ಕ್ರಿಸ್ಮಸ್ ದಿನವಾಗಿ ಆಚರಿಸದೆ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನದ ನಿಮಿತ್ತ ‘ಒಳ್ಳೆಯ ಆಳ್ವಿಕೆ’ಯ ದಿನವಾಗಿ ರಜೆಯಿಲ್ಲದೆ ಆಚರಿಸುವುದು ಇಂತಹ ಧ್ರುವೀಕರಣ ತರುವ ಗುರಿಯಿಂದಲೇ.

   ಹೀಗೆ ಜಮ್ಮುವಿನಲ್ಲಾಗಲೀ ಝಾರ್ಖಂಡ್ ನಲ್ಲಾಗಲೀ ಬಿಜೆಪಿಯ ಚುನಾವಣಾ ವಿಜಯದ ಆಧಾರ ಕೋಮುವಾದಿ ಧ್ರುವೀಕರಣವೇ., ಅಂದರೆ ಅತ್ಯಂತ ಹೊಲಸು ಸ್ವರೂಪದ ‘ವೋಟ್ ಬ್ಯಾಂಕ್ ರಾಜಕೀಯ’. ಅಷ್ಟಾದರೂ ಏಕಪಕ್ಷ ಬಹುಮತದ ಸರಕಾರ ರಚಿಸುವುದು ಅದಕ್ಕೆ ಸಾಧ್ಯವಾಗಿಲ್ಲ.

ರಾಜಸಭೆಯಲ್ಲಿ ಕೋಲಾಹಲ – ಯಾರು ಕಾರಣ?

   ಈ ನಡುವೆ ಸಂಸತ್ತಿನ ಚಳಿಗಾಲದ ಅಧಿವೇಶನ ಕೊನೆಗೊಂಡಿದೆ. ಲೋಕಸಭೆ ಈ ಅಧಿವೇಶನದಲ್ಲಿ 16 ಮಸೂದೆಗಳನ್ನು ಪರಿಶೀಲಿಸಿತು. ಇವುಗಳಲ್ಲಿ 13ನ್ನು ಸಂಸದೀಯ ಸ್ಥಾಯೀ ಸಮಿತಿಗಳ ಯಾವುದೇ ಪರೀಕ್ಷಣೆಯಿಲ್ಲದೆ ಪಾಸು ಮಾಡಿಕೊಳ್ಳಲಾಯಿತು. ಈ ಸ್ಥಾಯೀ ಸಮಿತಿಗಳನ್ನು ‘ಮಿನಿ ಸಂಸತ್ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದರಲ್ಲಿ ಎರಡೂ ಸದನಗಳ ಎಲ್ಲ ಪ್ರಮುಖ ಪಕ್ಷಗಳ ಪ್ರಾತಿನಿಧ್ಯವಿರುತ್ತದೆ. ಅವು ತಮ್ಮ ಮುಂದಿರುವ ಮಸೂದೆಯನ್ನು ಕೂಲಂಕುಷವಾಗಿ ಪರಿಶೀಲಿಸುತ್ತವೆ, ಆ ಮಸೂದೆಯಲ್ಲಿನ ವಿಷಯ ತಟ್ಟುವ ಎಲ್ಲರನ್ನು ವಿಚಾರಿಸುತ್ತವೆ. ಮಸೂದೆಗಳನ್ನು ಈ ಸಮಿತಿಗಳ ಪರಿಶೀಲನೆಗೆ ಕೊಡಲು ನಿರಾಕರಿಸುವುದು ಸಂಸದೀಯ ವಿಧಿ-ವಿಧಾನಗಳ ಉಲ್ಲಂಘನೆಯಾಗುತ್ತದೆ. ಇದನ್ನು ಬಿಜೆಪಿ ಮಾಡಿರುವುದು ಲೋಕಸಭೆಯಲ್ಲಿ ತನ್ನ ‘ಬಹುಮತದ ದಬ್ಬಾಳಿಕೆ’ಯನ್ನು ಪ್ರಯೋಗಿಸಿ. ಆದರೆ ಬಿಜೆಪಿಗೆ ಬಹುಮತವಿಲ್ಲದ ರಾಜ್ಯಸಭೆಯಲ್ಲಿ ಒಂದು ವಾರಕ್ಕೂ ಹೆಚ್ಚು ಕಾಲ ಕ್ಷೊಭೆ ಆವರಿಸಿತ್ತು.

   ಇದಕ್ಕೆ ಪ್ರತಿಪಕ್ಷಗಳು ಕಾರಣ ಎಂದು ಬಿಜೆಪಿ ಆಪಾದಿಸುತ್ತದೆ. ಆದರೆ ರಾಜ್ಯಸಭೆ ಈ ಅಧಿವೇಶನದಲ್ಲಿ 12 ಮಸೂದೆಗಳನ್ನು ಪಾಸು ಮಾಡಿತು ಎಂಬುದನ್ನು ಅದು ಮರೆಯುತ್ತದೆ. ಅಧಿವೇಶನದ ಕೊನೆಯ ದಿನ ಅದು ದೇಶದ ರಾಜಧಾನಿಯಲ್ಲಿ ಅನಧಿಕೃತ ಕೊಳೆಗೇರಿಗಳಲ್ಲಿ ವಾಸಿಸುತ್ತಿರುವ ಲಕ್ಷಾಂತರ ಮಂದಿಯನ್ನು ಈ ಕಡುಚಳಿಯಲ್ಲಿ ಎಬ್ಬಿಸದಂತೆ ತಡೆದಿದೆ. ಈ ಕ್ಷೊಭೆಯ ನಡುವೆಯೇ ‘ವಿನಿಯೋಗ ಮಸೂದೆ’ಯನ್ನು ಪರಿಶೀಲಿಸುವ ತನ್ನ ಸಾಂವಿಧಾನಿಕ ಕರ್ತವ್ಯವನ್ನು ಪೂರೈಸಿದೆ. ಈ ಮೂಲಕ ಸಂಸದೀಯ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವ ಕೆಲಸವನ್ನೂ ಈಡೇರಿಸಿದೆ. ಬಚ್ಚಿಟ್ಟ ನಿಜವಾದ ಅಜೆಂಡಾದ ಈಡೇರಿಕೆಗಾಗಿ ಈ ಕ್ಷೊಭೆಯನ್ನು ಉಂಟುಮಾಡಿರುವ ಅದರ ಮಂತ್ರಿಗಳು, ಸಂಸದರು ಮತ್ತು ವಕ್ತಾರರ ವಿರುದ್ಧ ಕ್ರಮ ಕೈಗೊಳ್ಳುವ ವಚನ ನೀಡದಿರುವ ಸರಕಾರದ ಹಟಮಾರಿತನವೇ ಇದಕ್ಕೆ ಕಾರಣವಾದರೂ, ಪ್ರತಿಪಕ್ಷಗಳನ್ನು ದೂಷಿಸುವುದು ಅಪರಾಧಿಯೇ ಅಪರಾಧವನ್ನು ತಡೆದ ಪೋಲೀಸನನ್ನು ಬೈಯ್ದಂತಾಗಿದೆ.

   ಇದಕ್ಕೆ ಮೊದಲು ಪ್ರಧಾನ ಮಂತ್ರಿಗಳು ಬಂದು ಬಿಜೆಪಿಯನ್ನು ವಿರೋಧಿಸುವವರಿಗೆ ಹೊಲಸು ಭಾಷೆಯನ್ನು ಪ್ರಯೋಗಿಸಿದ ರಾಜ್ಯಮಂತ್ರಿಯ ಟಿಪ್ಪಣಿಗಳಿಗೆ ವಿಷಾಧ ವ್ಯಕ್ತಪಡಿಸಬೇಕಾಗಿ ಬಂದಿತ್ತು. ಇದಕ್ಕೆ ಕ್ಷಮೆ ಕೋರಲು ನಿರಾಕರಿಸಿದರೂ, ನಂತರ ರಾಜ್ಯಸಭೆಯ ಅಧ್ಯಕ್ಷರು ಮಂಡಿಸಿದ ಇಂತಹ ಟಿಪ್ಪಣಿಗಳ ಬಗ್ಗೆ ಅಸಮ್ಮತಿಯ ಸದನದ ಭಾವನೆಯನ್ನು ಬಿಂಬಿಸುವ ನಿರ್ಣಯವನ್ನು ಅವರು ಒಪ್ಪಿಕೊಳ್ಳಬೇಕಾಗಿ ಬಂತು.

   ತನ್ನ ಸಂಪುಟದ ರಾಜ್ಯಮಂತ್ರಿಯ ಹೊಲಸು ಟಿಪ್ಪಣಿಗಳಿಗೆ ಸಂಬಂಧಪಟ್ಟಂತೆ ಪ್ರಧಾನ ಮಂತ್ರಿಗಳೇನೋ ಬಹಳ ನಾಜೂಕಿನಿಂದಾದರೂ ಮಧ್ಯಪ್ರವೇಶಿಸಿದರು, ಆದರೆ ಆರೆಸ್ಸೆಸ್/ಬಿಜೆಪಿಯ ಉನ್ನತ ಸ್ಥಾನಗಳಲ್ಲಿರುವ ವಕ್ತಾರರ ಉದ್ರೇಕಕಾರಿ ಹೇಳಿಕೆಗಳು ಕೋಮುವಾದಿ ಧ್ರುವೀಕರಣವನ್ನು ತೀಕ್ಷ್ಣಗೊಳಿಸುವುದನ್ನು ದೇಶಾದ್ಯಂತ ಮುಂದುವರೆಸುತ್ತಲೇ ಇವೆ. ಕೊಲ್ಕತಾದಲ್ಲಿ ಆರೆಸ್ಸೆಸ್ ಮುಖ್ಯಸ್ಥರು ಮತ್ತು ಕೇರಳದಲ್ಲಿ ಬಿಜೆಪಿ ಅಧ್ಯಕ್ಷರು ‘ಮರುಮತಾಂತರ’ದ ಪ್ರಚಾರವನ್ನು ಮುಂದುವರೆಸುವುದಾಗಿ ಹೇಳಿಕೆಗಳನ್ನಿತ್ತರು. ಆಮೂಲಕ ರಾಜ್ಯಸಭೆ ಕೊನೆಯ ಎರಡು ದಿನಗಳು ಅಸ್ಯವ್ಯಸ್ತಗೊಳ್ಳುವಂತೆ ಮಾಡಿದರು.

ಆರೆಸ್ಸೆಸ್ನ ರಾಜಕೀಯ ಅಂಗ, ಬಿಜೆಪಿ- ಮತ್ತೊಮ್ಮೆ ಸಾಬೀತು

   ಆರೆಸ್ಸೆಸ್ ಮುಖ್ಯಸ್ಥರು ಬಿಜೆಪಿ ಸೇರಿದಂತೆ ತನ್ನೆಲ್ಲ ಕಬಂಧ ಬಾಹುಗಳ ಮರುಮತಾಂತರ ಪ್ರಚಾರಗಳಿಗೆ ಆಶೀರ್ವಾದ ನೀಡುತ್ತ ಶತಮಾನಗಳಿಂದ ‘ಹಿಂದೂ ಆವರಣ’ದಿಂದ ಹೊರಹೋದವರನ್ನೆಲ್ಲ ವಾಪಾಸು ತರಲಾಗುವುದು ಎಂದರು. ನಿಜ, ಅವರು ಸತ್ತವರನ್ನು ಮತ್ತೆ ಬದುಕಿಸುವ ಮಾತಾಡಿರಲಿಲ್ಲ! ಅವರ ಗುರಿ ಇಂದಿನ ಧಾರ್ಮಿಕ ಅಲ್ಪಸಂಖ್ಯಾತರು, ಅವರನ್ನು ‘ನಮ್ಮಿಂದ ಕದಿಯಲಾಗಿದೆ’ ಎಂದು ಅವರು ಹೇಳುತ್ತಾರೆ. ದೇಶದ ಇನ್ನೊಂದು ಮೂಲೆಯಿಂದ ಬಿಜೆಪಿಯ ಅಧ್ಯಕ್ಷರು ಅದೇ ಭಾವನೆಯನ್ನು ಅನುಮೋದಿಸಿದರು. ಈ ಮೂಲಕ ಆರೆಸ್ಸೆಸ್ ಮತ್ತು ಬಿಜೆಪಿ ನಡುವೆ ಇದೆಯೆನ್ನಲಾಗುತ್ತಿದ್ದ ವ್ಯತ್ಯಾಸವನ್ನೂ ಅಳಿಸಿ ಹಾಕಿದರು. ಹೀಗೆ, ಬಿಜೆಪಿ ಕೆಲಸ ಮಾಡುವುದು ಆರೆಸ್ಸೆಸ್ನ ರಾಜಕೀಯ ಅಂಗವಾಗಿ ಮಾತ್ರ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದರು.

   ಈ ಆರೆಸ್ಸೆಸ್ ಮುಖಂಡರು ಮತ್ತೊಮ್ಮೆ ಸಂಸತ್ತಿನಲ್ಲಿ ಒಂದು ಮತಾಂತರ-ವಿರೋಧಿ ಮಸೂದೆಯನ್ನು ಬೆಂಬಲಿಸುವಂತೆ ದೇಶದ ಎಲ್ಲ ಜಾತ್ಯಾತೀತ ಶಕ್ತಿಗಳಿಗೆ ಸವಾಲು ಹಾಕಿದ್ದಾರೆ. ಈ ಅಂಕಣದಲ್ಲಿ ಕಳೆದ ವಾರ ಹೇಳಿರುವಂತೆ ಈ ವಿಷಯದಲ್ಲಿ ಯಾವುದೇ ಹೊಸ ಕಾನೂನಿನ ಅಗತ್ಯವೇ ಇಲ್ಲ. ಸಂವಿಧಾನದಲ್ಲಾಗಲೀ, ಭಾರತೀಯ ದಂಡ ಸಂಹಿತೆಯಲ್ಲಾಗಲೀ ಬಲವಂತದ ಮತಾಂತರವನ್ನು ಅಪರಾಧ, ಕಾನೂನಿನ ಉಲ್ಲಂಘನೆ ಎಂದು, ಆಮೂಲಕ ಶಿಕ್ಷಾರ್ಹ ಎಂದು ನಿರೂಪಿಸುವ ಅಂಶಗಳು ಬೇಕಾದಷ್ಟು ಇವೆ.

   ಸಂವಿಧಾನ ನೀಡಿರುವ ಭರವಸೆಗಳು ಮತ್ತು ಭಾರತೀಯ ದಂಡ ಸಂಹಿತೆ ಎರಡನ್ನೂ ಉಲ್ಲಂಘಿಸಿರುವವರಿಗೆ, ನಿರ್ಧಿಷ್ಟವಾಗಿ ಚುನಾಯಿತ ಬಿಜೆಪಿ ಮಂತ್ರಿಗಳು ಮತ್ತು ಸಂಸದರಿಗೆ ಅವರ ಅಪರಾಧಕ್ಕೆ ಶಿಕ್ಷೆಯಾಗಬೇಕು. ಪ್ರಧಾನ ಮಂತ್ರಿಗಳು ಈ ಬಗ್ಗೆ ಸದನದಲ್ಲಿ ಇಂತಹ ಯಾವುದೇ ಆಶ್ವಾಸನೆಯನ್ನು ಕೊಡಲು ನಿರಾಕರಿಸಿದರು. ಇದೇ ರಾಜ್ಯಸಭೆಯಲ್ಲಿನ ಕೋಲಾಹಲಕ್ಕೆ ಕಾರಣ.

ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳಬಹುದು

   ಝಾರ್ಖಂಡ್ ಮತ್ತು ಜಮ್ಮು-ಕಾಶ್ಮೀರ ಚುನಾವಣೆಗಳೆರಡೂ ಬಿಜೆಪಿ ಏನೇ ಪ್ರಯತ್ನಗಳನ್ನು ನಡೆಸಿದರೂ ತನ್ನ ಗುರಿಯನ್ನು ಸಾಧಿಸಲಾಗಿಲ್ಲ ಎಂಬುದನ್ನು ತೋರಿಸಿ ಕೊಟ್ಟಿವೆ. ನಮ್ಮ ದೇಶದ ಮತ್ತು ಜನತೆಯ ದುರದೃಷ್ಟವೆಂದರೆ, ಇದೇ, ಮತ್ತು ರಾಜ್ಯಸಭೆಯಲ್ಲಿನ ಕೋಲಾಹಲವೇ ಆರೆಸ್ಸೆಸ್ ಮತ್ತು ಅದರ ಎಲ್ಲ ಕಬಂಧ ಬಾಹುಗಳಿಗೆ ಕೋಮುವಾದಿ ಧ್ರುವೀಕರಣವನ್ನು ಮತ್ತಷ್ಟು ತೀಕ್ಷ್ಣಗೊಳಿಸಲು, ಅದರ ಮೂಲಕ ಕೋಮುವಾದಿ ಹಿಂದೂ ವೋಟ್ ಬ್ಯಾಂಕನ್ನು ಕ್ರೋಡೀಕರಿಸಲು ಮುಂದಾಗುವ ಒತ್ತಾಸೆ ನೀಡುತ್ತವೆ.

   ಮೋದಿ ಸರಕಾರಕ್ಕೆ ದೇಶದ ಆರ್ಥಿಕಕ್ಕೆ ಒಂದು ಬಲವಾದ ಚಾಲನೆ ನೀಡಲು ಸಾಧ್ಯವಾಗದೇ ಇರುವುದರಿಂದ ಬಹುಶಃ ಇಂತಹ ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಳ್ಳಬಹುದು. ಚುನಾವಣಾ ಪ್ರಚಾರದಲ್ಲಿ ಈ ವಿಷಯದಲ್ಲಿ ಅದು ಭವ್ಯ ಕನಸುಗಳ ಮಾರಾಟ ನಡೆಸಿತ್ತು ತಾನೇ? ಆದರೆ ಮೋದಿ ಸರಕಾರ ಅಧಿಕಾರ ವಹಿಸಿಕೊಂಡ ನಂತರ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಮೋದಿ ಸರಕಾರದ ಅತೀ ಹೆಚ್ಚು ಗದ್ದಲ ಎಬ್ಬಿಸುವ ಭಟ್ಟಂಗಿಗಳಾದ ಭಾರತದ ಕಾರ್ಪೊರೇಟ್ ಮಂದಿ ತಮ್ಮ ನಿರಾಶೆಯನ್ನು, ಅಸಂತೃಪ್ತಿಯನ್ನು ವ್ಯಕ್ತಪಡಿಸಲಾರಂಭಿಸಿದ್ದಾರೆ. ಫಿಕಿ, ಸಿಐಐ ಮುಂತಾದ ಕಾರ್ಪೊರೇಟ್ ವಲಯದ ಪ್ರಮುಖ ಸಂಸ್ಥೆಗಳ ಮುಖಂಡರು ನಮ್ಮ ಆರ್ಥಿಕದ ಮೂಲಭೂತ ಅಂಶಗಳ ವಾಸ್ತವಿಕ ಪರಿಸ್ಥಿತಿಗಳ ಬಗ್ಗೆ ಯೋಚನೆ ಮಾಡಲಾರಂಭಿಸಿದ್ದಾರೆ.

ಸರ್ವಾಧಿಕಾರಶಾಹೀ ಪ್ರವೃತ್ತಿ

   ಈ ದೇಶೀ ಕಾರ್ಪೊರೇಟ್ಗಳನ್ನು ಮತ್ತು ವಿದೇಶಿ ಹಣಕಾಸು ಬಂಡವಾಳವನ್ನು ತುಷ್ಟೀಕರಿಸಲು ಮೋದಿ ಸರಕಾರ ಇನ್ನಷ್ಟು ನವ-ಉದಾರವಾದಿ ಹಣಕಾಸು ಮತ್ತು ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರಲು ಹವಣಿಸುತ್ತಿದೆ. ಆಮೂಲಕ ಅವರು ಭಾರತೀಯ ಜನತೆಯನ್ನು ಮತ್ತಷ್ಟು ಶೋಷಿಸಿ, ನಮ್ಮ ಸಂಪನ್ಮೂಲಗಳನ್ನು ಸೂರೆ ಮಾಡಿ ತಮ್ಮ ಲಾಭಗಳನ್ನು ಗರಿಷ್ಟಮಟ್ಟಕ್ಕೇರಿಸಿಕೊಳ್ಳುವ ಅವಕಾಶ ಕಲ್ಪಿಸಬಯಸುತ್ತಿದೆ. ಇದನ್ನು ಮಾಡಲು ಮೋದಿ ಸರಕಾರ ಸಂಸದೀಯ ವಿಧಿ-ವಿಧಾನಗಳನ್ನು ಬದಿಗೊತ್ತುತ್ತಿದೆ. ಅದೀಗ ದೇಶವನ್ನು ಮತ್ತು ಆರ್ಥಿಕವನ್ನು ‘ಸುಗ್ರೀವಾಜ್ಞೆಗಳ ರಾಜ್ಯಭಾರ’ದ ಮೂಲಕ ನಡೆಸುವ ಹುನ್ನಾರವನ್ನು ತೋರುತ್ತಿದೆ. ಇದೇ ಬಿಜೆಪಿ ಯುಪಿಎ ಸರಕಾರದ ಕಳೆದ ಹತ್ತು ವರ್ಷಗಳಲ್ಲಿ ‘ಸುಗ್ರೀವಾಜ್ಞೆ ರಾಜ್ಯಭಾರ’ದ ವಿರುದ್ಧ ಅರಚಿಕೊಳ್ಳುತ್ತಿತ್ತು. ಇದೊಂದು ನಾಚಿಕೆಗೇಡಿ ತಿಪ್ಪರಲಾಗ.

   ಇದರೊಂದಿಗೆ ನಮ್ಮ ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣತಂತ್ರದ ಮುಂದಿರುವ ಅಪಾಯಗಳು ದ್ವಿಗುಣಗೊಳ್ಳುತ್ತಿವೆ. ಈಗ ನಾವು ಉನ್ಮತ್ತ ಕೋಮುವಾದಿ ಧ್ರುವೀಕರಣ ಮತ್ತು ನವ-ಉದಾರವಾದಿ ಆರ್ಥಿಕ ಸುಧಾರಣೆಗಳ ಉಗ್ರ ಅನುಸರಣೆಯ ಸಮ್ಮಿಳನವನ್ನಷ್ಟೇ ಕಾಣುತ್ತಿಲ್ಲ, ಇವೆರಡರ ಜತೆಗೆ ‘ಸುಗ್ರೀವಾಜ್ಞೆಯ ರಾಜ್ಯಭಾರ’ದಂತಹ ಹೆಚ್ಚುತ್ತಿರುವ ಸರ್ವಾಧಿಕಾರಶಾಹೀ ಪ್ರವೃತ್ತಿಗಳೂ ಸೇರಿಕೊಳ್ಳು ತ್ತಿರುವುದನ್ನು ಕಾಣುತ್ತಿದ್ದೇವೆ. ಹೀಗೆ ನಮ್ಮ ಗಣತಂತ್ರದ ಬುನಾದಿಗಳಾದ ಜಾತ್ಯಾತೀತತೆ ಮತ್ತು ಪ್ರಜಾಪ್ರಭುತ್ವ, ಇವೆರಡೂ ಹೆಚ್ಚೆಚ್ಚು ಬೆದರಿಕೆಗಳಿಗೆ ಒಳಗಾಗುತ್ತಿವೆ.

   ಇದನ್ನು ವಿಫಲಗೊಳಿಸಬೇಕಾಗಿದೆ. ಒಂದು ಉತ್ತಮ ಭಾರತಕ್ಕಾಗಿ ಜನತೆಯ ಹೋರಾಟಗಳನ್ನು ಬಲಿಷ್ಟಗೊಳಸಬೇಕಾದರೆ ಈ ಶರತ್ತನ್ನು ಈಗ ನಾವು ಈಡೇರಿಸಬೇಕಾಗಿದೆ.

Donate Janashakthi Media

Leave a Reply

Your email address will not be published. Required fields are marked *