ಹಿಂದೂ ರಾಷ್ಟ್ರವು ಹಿಂದೂಗಳ ಹಿತ ಕಾಯುತ್ತದೆ ಎಂಬುದು ತಪ್ಪು ಕಲ್ಪನೆ

ಹಿಂದೂರಾಷ್ಟ್ರವು, ವಾಸ್ತವವಾಗಿ ಹಿಂದೂಗಳನ್ನು ಮತ್ತು ಮುಸ್ಲಿಮರನ್ನು ಸಮಾನವಾಗಿ ದಮನ ಮಾಡುವ ಒಂದು ನಿರಂಕುಶ ಪ್ರಭುತ್ವವಾಗುತ್ತದೆ. ಈಗಾಗಲೇ ಅಂತರರಾಷ್ಟ್ರೀಯ ಹಣಕಾಸು ಬಂಡವಾಳ ಮತ್ತು ದೇಶೀಯ ಕಾರ್ಪೊರೇಟ್-ಹಣಕಾಸು ಬಂಡವಾಳ, ಈ ಗುಂಪುಗಳು ಹಿಂದೂಗಳನ್ನು ಮತ್ತು ಮುಸ್ಲಿಮರನ್ನು ಅಭೂತಪೂರ್ವ ಮಟ್ಟದಲ್ಲಿ ಶೋಷಣೆಗೆ ಒಳಪಡಿಸಿವೆ ಎಂಬುದನ್ನು ನೋಡುತ್ತಿದ್ದೇವೆ. ಹಿಂದೂ ರಾಷ್ಟ್ರವು ಇಂತಹ ಶೋಷಣೆಗೆ ಅನುವು ಮಾಡಿಕೊಡುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಹಿಂದೂ ರಾಷ್ಟ್ರವು ಹಿಂದೂಗಳ ಪ್ರಭುತ್ವವಾಗುವುದಿಲ್ಲ. ಅದು ಏಕಸ್ವಾಮ್ಯ ಬಂಡವಾಳದ ಪ್ರಭುತ್ವವಾಗುತ್ತದೆ. ಹಿಂದುಗಳ ಪರಿಸ್ಥಿತಿಯು ಹಿಂದೆ ಇದ್ದುದಕ್ಕಿಂತ ಯಾವ ರೀತಿಯಲ್ಲಿಯೂ ಉತ್ತಮವಾಗುವುದಿಲ್ಲ.

ಹಿಂದೂ ಪಾರಮ್ಯದ ಭಾವನೆಯನ್ನು ಮೈ ಮನಗಳಲ್ಲಿ ತುಂಬಿಕೊಂಡಿರುವ ಒಂದು ರಾಜಕೀಯ ಪಕ್ಷವೆಂದರೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಬಿಜೆಪಿಯು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ರಾಜಕೀಯ ವೇದಿಕೆ. ಹಿಂದೂ ರಾಷ್ಟ್ರದ ಸ್ಥಾಪನೆಯೇ ತನ್ನ ಪರಮ ಗುರಿ ಎಂದು ಹೇಳಿಕೊಳ್ಳುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಒಂದು ಫ್ಯಾಸಿಸ್ಟ್ ತೆರನ ಸಂಘಟನೆ. ಸಂವಿಧಾನದ ಚೌಕಟ್ಟಿನೊಳಗೇ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆಯಿಂದಾಗಿ ಬಿಜೆಪಿಯ ತನ್ನ ಮಾತೃ ಸಂಸ್ಥೆ ಆರ್ ಎಸ್ ಎಸ್ ಹೊಂದಿರುವ ಹಿಂದೂ ರಾಷ್ಟ್ರ ಸ್ಥಾಪನೆಯ ಆಶಯವನ್ನು ಬಹಿರಂಗವಾಗಿ ಘೋಷಿಸಲು ಸಾಧ್ಯವಿಲ್ಲವಾದರೂ, ಆ ಆಶಯವನ್ನು ಕಾರ್ಯತಃ ಅನುಷ್ಠಾನಗೊಳಿಸುವಲ್ಲಿ ವಿಶ್ವ ಪ್ರಯತ್ನ ಮಾಡುತ್ತಿದೆ. ಆದ್ದರಿಂದ, ಈ ಹಿಂದೂರಾಷ್ಟ್ರ ಎಂಬುದರ ಅರ್ಥ-ವ್ಯಾಪ್ತಿ ಏನು ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ನಿಖರವಾಗಿ ಹೇಳುವುದಾದರೆ, ಭಾರತ ಸಂವಿಧಾನದ ಮೂಲ ಆಶಯಗಳಲ್ಲೊಂದಾದ ಮತ-ಧರ್ಮ ನಿರಪೇಕ್ಷತೆಯನ್ನು (ಜಾತ್ಯತೀತತೆಯನ್ನು) ಬುಡಮೇಲು ಮಾಡುವ, ಅಥವಾ ಇನ್ನೂ ಹೆಚ್ಚು ಸ್ಪಷ್ಟವಾಗಿ ಹೇಳುವುದಾದರೆ, ಮುಸ್ಲಿಂ ಅಲ್ಪಸಂಖ್ಯಾತರ ಸ್ಥಾನಮಾನಗಳನ್ನು ಎರಡನೇ ದರ್ಜೆಯ ನಾಗರಿಕರ ಮಟ್ಟಕ್ಕೆ ಇಳಿಸುವುದೇ ಹಿಂದೂ ರಾಷ್ಟ್ರದ ಪ್ರತಿಪಾದನೆಯ ತಿರುಳು ಎನ್ನಬಹುದು. ಜನಸಂಖ್ಯೆಯ ಶೇ. ೮೦ಕ್ಕಿಂತಲೂ ಅಧಿಕ ಮಂದಿ ಹಿಂದೂಗಳೇ ಇರುವ ದೇಶದಲ್ಲಿ ಒಂದು ಹಿಂದೂರಾಷ್ಟ್ರವು ಸ್ಥಾಪನೆಯಾದರೆ ಇಡೀ ಹಿಂದೂ ಸಮುದಾಯದ ಅಭ್ಯುದಯವಾಗಲಿದೆ ಎಂಬುದಾಗಿ ಹಲವರು ಅಕ್ಷರಶಃ ಅರ್ಥೈಸಿಕೊಂಡು ಅದನ್ನು ನಂಬುತ್ತಾರೆ.

ಆಧುನಿಕ ಶ್ರವಣ ಕುಮಾರ – ಕಾರ್ಟೂನ್ ಕೃಪೆ:  ಇಂಡಿಯನ್ ಕಾರ್ಟೂನ್ ಗ್ಯಾಲರಿ

ಆದರೆ ಮೂಲಭೂತವಾಗಿ ಇದೊಂದು ತಪ್ಪು ಕಲ್ಪನೆ. ಈ ಕಲ್ಪನೆಯ ಹಿಂದೂರಾಷ್ಟ್ರವು, ವಾಸ್ತವವಾಗಿ ಮತ್ತು ಅಗತ್ಯವಾಗಿ, ಹಿಂದೂಗಳನ್ನು ಮತ್ತು ಮುಸ್ಲಿಮರನ್ನು ಸಮಾನವಾಗಿ ದಮನ ಮಾಡುವ ಒಂದು ನಿರಂಕುಶ ಪ್ರಭುತ್ವವಾಗುತ್ತದೆ. ಈ ನಿರಂಕುಶ ಪ್ರಭುತ್ವವು, ಹಿಂದೂಗಳ ಮತ್ತು ಮುಸ್ಲಿಮರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಿತ್ತುಕೊಳ್ಳುತ್ತದೆ. ಭಾರತದ ಒಕ್ಕೂಟ ವ್ಯವಸ್ಥೆಯನ್ನು ನಾಶಪಡಿಸುತ್ತದೆ. ಬಹುತೇಕ ಹಿಂದೂಗಳನ್ನು ಯಾವ ರೀತಿಯಲ್ಲಿಯೂ ಮುಸ್ಲಿಮರಿಗಿಂತ ಕಡಿಮೆ ಇಲ್ಲ ಎನ್ನುವ ಮಟ್ಟದಲ್ಲಿ ತುಳಿಯುತ್ತದೆ. ಅಂತರಾಷ್ಟ್ರೀಯ ಹಣಕಾಸು ಬಂಡವಾಳ ಮತ್ತು ದೇಶೀಯ ಕಾರ್ಪೊರೇಟ್-ಹಣಕಾಸು ಬಂಡವಾಳ, ಈ ಗುಂಪುಗಳು ಹಿಂದೂಗಳನ್ನು ಮತ್ತು ಮುಸ್ಲಿಮರನ್ನು ಅಭೂತಪೂರ್ವ ಮಟ್ಟದಲ್ಲಿ ಶೋಷಣೆಗೆ ಒಳಪಡಿಸಿವೆ. ಹಿಂದೂ ರಾಷ್ಟ್ರವು ಇಂತಹ ಶೋಷಣೆಗೆ ಅನುವು ಮಾಡಿಕೊಡುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಹಿಂದೂ ರಾಷ್ಟ್ರವು ಹಿಂದೂಗಳ ಪ್ರಭುತ್ವವಾಗುವುದಿಲ್ಲ. ಅದು ಏಕಸ್ವಾಮ್ಯ ಬಂಡವಾಳದ ಪ್ರಭುತ್ವವಾಗುತ್ತದೆ. ಹಿಂದುಗಳ ಪರಿಸ್ಥಿತಿಯು ಹಿಂದೆ ಇದ್ದುದಕ್ಕಿಂತ ಯಾವ ರೀತಿಯಲ್ಲಿಯೂ ಉತ್ತಮವಾಗುವುದಿಲ್ಲ. ಬದಲಾಗಿ, ಅಪರಿಮಿತವಾಗಿ ಕೆಟ್ಟದಾಗುತ್ತದೆ. ಮುಸ್ಲಿಮರ ಪರಿಸ್ಥಿತಿಯೂ ಸಹ ಅಷ್ಟೇ ಹೀನಾಯವಾಗುತ್ತದೆ. ಏಕೆಂದರೆ, ಏಕಸ್ವಾಮ್ಯ ಬಂಡವಾಳದ ಶೋಷಣೆಗೆ ಮುಕ್ತ ಅವಕಾಶ ದೊರೆಯುತ್ತದೆ.

ಬಹಳ ಕಾಲದಿಂದಲೂ ಏಕಸ್ವಾಮ್ಯ ಬಂಡವಾಳವು ಏರು ಗತಿಯಲ್ಲೇ ಇದೆ. ಹಾಗಾಗಿ, ಹಿಂದೂಗಳ ಪಾರಮ್ಯವನ್ನು ಹೊಗಳಿ ಚುನಾವಣಾ ಬೆಂಬಲ ಪಡೆಯುವ ಮತ್ತು ಸಮಾಜದ ಮೇಲೆ ಹಾಗೂ ರಾಜಕೀಯ ವ್ಯವಸ್ಥೆಯ ಮೇಲೆ ಏಕಸ್ವಾಮ್ಯ ಬಂಡವಾಳವು ತನ್ನ ಹಿಡಿತವನ್ನು ಇನ್ನಷ್ಟು ಬಿಗಿಗೊಳಿಸುವ ಅಗತ್ಯವೇನಿದೆ ಎಂದು ವಾದಿಸಬಹುದು. ಇಂತಹ ಅಗತ್ಯ ಮತ್ತು ಕಾರಣ ಯಾವುದು ಎಂಬುದನ್ನು ಜಾಗತಿಕ ಬಂಡವಾಳಶಾಹಿಯ ಬಿಕ್ಕಟ್ಟು ಇತ್ತೀಚೆಗೆ ಭಾರತದ ಅರ್ಥ ವ್ಯವಸ್ಥೆಯನ್ನು ತಟ್ಟುತ್ತಿರುವ ತೀವ್ರತೆಯಲ್ಲಿ ಕಾಣಬಹುದು. ಹಿಂದೆ ಏಕಸ್ವಾಮ್ಯ ಬಂಡವಾಳವು ಅವಲಂಬಿಸುತ್ತಿದ್ದ ಕೆಲವು ಹಳೆಯ ಆಧಾರಗಳು ಈಗ ಕೆಲಸಕ್ಕೆ ಬಾರದಂತಾಗಿವೆ. ಬಹಳ ಹಿಂದೆಯೇ ಜನರಿಗೆ ನೀಡಲಾಗಿದ್ದ ಹನಿ ಹನಿಯಾಗಿ ಮೇಲಿಂದ ತೊಟ್ಟಿಕ್ಕುವ ಆರ್ಥಿಕ ಅಭಿವೃದ್ಧಿಯ ಭರವಸೆ ಹುಸಿಯಾಗಿದೆ. ೧೧ನೇ ಪಂಚರ್ವಾಕ ಯೋಜನಾ ದಾಖಲೆಯಲ್ಲಿ, ಬೃಹತ್ತಾಗಿ ಬೆಳೆಯುತ್ತಿರುವ ಜಿಡಿಪಿಯಿಂದ ಸರ್ಕಾರವು ಹೆಚ್ಚಿನ ತೆರಿಗೆಯನ್ನು ಸಂಗ್ರಹಿಸಿಕೊಳ್ಳುತ್ತದೆ ಮತ್ತು ಅದನ್ನು ಬಡವರಿಗಾಗಿ ಖರ್ಚು ಮಾಡುತ್ತದೆ ಎನ್ನುವ ರೀತಿಯಲ್ಲಿ ತೋರಿಸಲಾಗಿದ್ದ ಆಸೆಯು ಅರ್ಥಹೀನವಾಗಿ ಪರಿಣಮಿಸಿದೆ. ತದನಂತರ, ಆದಾಯ ಮತ್ತು ಸಂಪತ್ತಿನ ಅಸಮಾನತೆಯು ಅಗಾಧವಾಗಿ ಬೆಳೆದಿದೆ. ಕೊರೊನಾ ಹರಡುವ ಮೊದಲೇ, ಬಿಕ್ಕಟ್ಟಿನ ಪರಿಣಾಮವಾಗಿ ನಿರುದ್ಯೋಗವು ಕಳೆದ ಐದು ದಶಕಗಳಲ್ಲಿ ಎಂದೂ ಕಾಣದ ಮಟ್ಟಕ್ಕೆ ಏರಿತ್ತು. ಗ್ರಾಮೀಣ ಭಾರತದಲ್ಲಿ ಜನರ ಸಂಕಷ್ಟಗಳು ಅದೆಷ್ಟು ತೀವ್ರವಾಗಿದ್ದವು ಎಂದರೆ, ಕೇಂದ್ರ ಸರ್ಕಾರವು ಎನ್ ಎಸ್ ಎಸ್ (ರಾಷ್ಟ್ರೀಯ ಮಾದರಿ ಸಮೀಕ್ಷೆ) ದತ್ತಾಂಶಗಳನ್ನು ಕುಟಿಲ ತಂತ್ರೋಪಾಯಗಳ ಮೂಲಕ ಪ್ರಕಟಪಡಿಸದಂತೆ ತಡೆಹಿಡಿದಿತ್ತು. ಈ ದತ್ತಾಂಶಗಳ ಪ್ರಕಾರ, ೨೦೧೧-೧೨ ಮತ್ತು ೨೦೧೭-೧೮ರ ನಡುವೆ ಗ್ರಾಮೀಣ ಭಾರತದಲ್ಲಿ ಬಳಕೆದಾರರ ತಲಾವಾರು ವೆಚ್ಚವು ಶೇ.೯ರಷ್ಟು ಕುಸಿತವಾಗಿತ್ತು! ದೇಶದ ಜನರನ್ನು ಆರ್ಥಿಕವಾಗಿ ಇತ್ತೀಚೆಗೆ ಹಿಂಡಿದಷ್ಟು ತೀಕ್ಷ್ಣ ಪ್ರಮಾಣದಲ್ಲಿ, ಕೊರೊನಾ ಉಂಟುಮಾಡಿದ ಆರ್ಥಿಕ ಹಾವಳಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದಿದ್ದರೂ ಸಹ, ಯಾವತ್ತೂ ಹಿಂಡಿರಲಿಲ್ಲ. ಕೊರೊನಾ ಹಾವಳಿ ಆರಂಭವಾದ ನಂತರವಂತೂ ಸಂಕಷ್ಟಗಳು ದಿನೇ ದಿನೇ ಹೆಚ್ಚುತ್ತಿರುವುದನ್ಬು ಹೇಳತೀರದು.

ಅಷ್ಟು ಮಾತ್ರವೇ ಅಲ್ಲ. ನವ ಉದಾರ ಅರ್ಥವ್ಯವಸ್ಥೆಯನ್ನು ಆವರಿಸಿರುವ ಬಿಕ್ಕಟ್ಟಿಗೆ ಯಾವುದೇ ಪರಿಹಾರವಿಲ್ಲ. ಈ ಸತ್ಯವನ್ನು ಹಣಕಾಸು ಬಂಡವಾಳವು ಒಪ್ಪಿಕೊಳ್ಳುವುದೇ ಇಲ್ಲ ಎಂಬುದು ಬೇರೆ ಮಾತು. ನವ ಉದಾರವಾದ ಆಳ್ವಿಕೆಯು ಸೃಷ್ಟಿಸಿದ ಈ ಬಿಕ್ಕಟ್ಟಿಗೆ ಅದು ಸೂಚಿಸುವ ಪರಿಹಾರವೆಂದರೆ, ನವ ಉದಾರೀಕರಣವನ್ನು ಇನ್ನೂ ಹೆಚ್ಚು ತೀವ್ರಗೊಳಿಸುವುದು. ಈ ಕಾರ್ಯಸಾಧನೆಗಾಗಿ, ಕಾರ್ಮಿಕ ಸಂಘಟನೆಗಳ ಸೊಲ್ಲಡಗಿಸಬೇಕು, ಬುಡಕಟ್ಟು ಜನರ ಭೂಮಿಯನ್ನು ಇನ್ನಷ್ಟು ಸಲೀಸಾಗಿ ಕಸಿದುಕೊಳ್ಳಬೇಕು, ಸಾರ್ವಜನಿಕ ವಲಯದ ಆಸ್ತಿಗಳನ್ನು ಇನ್ನೂ ದೊಡ್ಡ ಮಟ್ಟದಲ್ಲಿ ಖಾಸಗೀಕರಣಗೊಳಿಸಬೇಕು ಮತ್ತು ಸರ್ಕಾರದಿಂದ ಬಂಡವಾಳಶಾಹಿಗಳಿಗೆ ಒದಗಿಸುವ ಹಣಕಾಸಿನ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಬೇಕು ಎಂಬುದಾಗಿ ಎಂದು ನವ ಉದಾರವಾದವು ವಕೀಲಿ ಮಾಡುತ್ತದೆ. ಈ ಎಲ್ಲಾ ಕ್ರಮಗಳನ್ನು ನರೇಂದ್ರ ಮೋದಿ ಸರಕಾರವು ಚಾಚೂ ತಪ್ಪದೆ ಮತ್ತು ಶ್ರದ್ಧಾಪೂರ್ವಕವಾಗಿ ಅನುಷ್ಠಾನಗೊಳಿಸುತ್ತಿದೆ.

ಹಿಂದೂ ರಾಷ್ಟ್ರದತ್ತ ವಾಲುವಿಕೆಯು ದುಡಿಯುವ ಮುಸ್ಲಿಮರು ಮತ್ತು ದುಡಿಯುವ ಹಿಂದೂಗಳು ಇಬ್ಬರನ್ನೂ ದಾಳಿಗೆ ಗುರಿಪಡಿಸುತ್ತದೆ. ಕಾರ್ಮಿಕ ಕಾನೂಗಳ ಮೇಲೆ ಹಲ್ಲೆಯಾಗಲೀ, ಭೂಸ್ವಾಧೀನ – ಭೂಸುಧಾರಣಾ ಕಾನೂಗಳ ತಿದ್ದುಪಡಿಗಳಾಗಲೀ. ಪರಿಸರ ರಕ್ಷಣೆ ಕಾಯ್ದೆಯ ವಿರೂಪವಾಗಲೀ, ಒಂದೇ ಮಾತಿನಲ್ಲಿ ಹೇಳುವುದಾದರೆ, ಕಳೆದ ಆರು ವರ್ಷಗಳಲ್ಲಿ ಈ ಸರಕಾರ ತಂದಿರುವ ಧರ್ಮಕ್ಕೆ ಸಂಬಂಧಪಡದ  ಎಲ್ಲ ಕ್ರಮಗಳೂ ಹಿಂದೂ ದುಡಿಯುವ ಜನಗಳನ್ನೂ, ಮುಸ್ಲಿಂ ದುಡಿಯುವ ಜನಗಳನ್ನೂ ಸಮಾನವಾಗಿ ಕಾಡುತ್ತಿವೆ.  ಹಾಗಾಗಿ, ಹಿಂದೂ ರಾಷ್ಟ್ರವು ಹಿಂದೂಗಳ ಹಿತಕ್ಕೆ ಪೂರಕವಾಗುತ್ತದೆ ಎಂಬ ವಿಚಾರವೇ ಒಂದು ತಪ್ಪು ಕಲ್ಪನೆ. ಈ ತಪ್ಪು ಕಲ್ಪನೆಯನ್ನು ಎಷ್ಟು ಬೇಗ ತೊಡೆದು ಹಾಕಿದರೂ ಅಷ್ಟೂ ಉತ್ತಮವೇ.

ನವ ಉದಾರವಾದವು ಆಜ್ಞಾಪಿಸುವ ಇಂತಹ ಕ್ರಮಗಳನ್ನು ಜಾರಿಗೊಳಿಸಲು ಅವಶ್ಯವಾಗಿ ಬೇಕಾಗುವುದು ಏನೆಂದರೆ, ಅರ್ಥಶಾಸ್ತ್ರದ ಬಗ್ಗೆ ಅಜ್ಞಾನ ಮತ್ತು ನವ ಉದಾರವಾದದ ಬಗ್ಗೆ ವಿನೀತ ಭಾವನೆ ಇರುವ ಒಂದು ಸರಕಾರ. ಅಂತಹ ಸರ್ಕಾರವು, ಹಣಕಾಸು ಬಂಡವಾಳವು ಏನೆಲ್ಲವನ್ನು ಬಯಸುತ್ತದೆಯೊ ಅದೆಲ್ಲವನ್ನೂ ಯಾವ ಪ್ರಶ್ನೆಯನ್ನೂ ಎತ್ತದೆ ಪೂರ್ಣ ನಿಷ್ಠೆಯಿಂದ ಜಾರಿಗೊಳಿಸಬೇಕಾಗುತ್ತದೆ. ಅಷ್ಟೇ ಅಲ್ಲ, ನವ ಉದಾರವಾದದ ಆಜ್ಞಾನುವರ್ತಿಯಾಗಿ ಜನ-ವಿರೋಧಿ ಕ್ರಮಗಳನ್ನು ಜಾರಿಗೊಳಿಸಿದ ಕಾರ್ಯವನ್ನು ಸಮರ್ಥಿಸಲು ಬೇಕಾಗುವ ಜನ ಬೆಂಬಲವನ್ನು ಅಣಿನೆರೆಸುವ ಸಾಮರ್ಥ್ಯವನ್ನೂ ಹೊಂದಿರಬೇಕಾಗುತ್ತದೆ. ನವ ಉದಾರವಾದದ ಇಂತಹ ಎಲ್ಲಾ ಬಯಕೆಗಳನ್ನು ಈಡೇರಿಸಲು ಬೇಕಾಗುವ ಎಲ್ಲಾ ಅರ್ಹತೆಗಳೂ ಬಿಜೆಪಿಯಲ್ಲಿವೆ. ಈ ಕೆಲಸಕ್ಕೆ ಅದು ಹೇಳಿ ಮಾಡಿಸಿದಷ್ಟು ಚೆನ್ನಾಗಿ ಹೊಂದಿಕೆಯಾಗುತ್ತದೆ. ಬಿಜೆಪಿಯು ಅರ್ಥಶಾಸ್ತ್ರದ ಬಗ್ಗೆ ಹೊಂದಿರುವ ಜ್ಞಾನವು ಶೂನ್ಯವೇ. ಆದ್ದರಿಂದಲೇ ಅದು, ಯಾವುದಕ್ಕೂ ಹೇಸದವರ ರೀತಿಯಲ್ಲಿ ಹಣಕಾಸು ಬಂಡವಾಳವನ್ನು “ಸಂಪತ್ತಿನ ಸೃಷ್ಟಿಕರ್ತರು” ಎಂದು ಕರೆದು ಅದರ ತಾಳಕ್ಕೆ ತಕ್ಕಂತೆ ಕುಣಿಯುತ್ತದೆ. ಅದೇ ಸಮಯದಲ್ಲಿ, ಅದು ತನ್ನ ಹಿಂದುತ್ವ ಅಜೆಂಡಾದ ಮುಸುಕಿನಲ್ಲಿ (ಅಂದರೆ ಒಂದು ಹೊಗೆ ಪರದೆಯನ್ನು ಎಬ್ಬಿಸುವ ಮೂಲಕ) ಹಣಕಾಸು ಬಂಡವಾಳದ ಆಜ್ಞೆಗಳನ್ನು ಕಾರ್ಯಗತಗೊಳಿಸುತ್ತದೆ. ಹಿಂದುತ್ವವು ಎಂದೂ ಯಾರ ಹೊಟ್ಟೆಯನ್ನೂ ತುಂಬಿಸಿಲ್ಲ. ಇಂದಿನ ಸಂಕಷ್ಟಗಳ ಪರಿಸ್ಥಿತಿಯಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ‘ಭೂಮಿ ಪೂಜೆ’ ಕೈಗೊಂಡ ಒಂದು ಉದ್ದೇಶವೆಂದರೆ, ಹಣಕಾಸು ಬಂಡವಾಳಕ್ಕೆ ನೀಡಲಾಗಿದ್ದ ಭಾರಿ ರಿಯಾಯ್ತಿಗಳತ್ತ ಜನರು ಗಮನಹರಿಸದಂತೆ ಅದನ್ನು ಬೇರೆಡೆಗೆ ಸೆಳೆಯುವದೇ ಆಗಿತ್ತು.

ಈ ಕೆಲವು ಸಂಗತಿಗಳನ್ನು ಗಮನಿಸಿ: ಈ ಹಿಂದಿನ ಕೆಲವು ವಾರಗಳಲ್ಲಿ, ಬಿಜೆಪಿಯ ಆಡಳಿತವಿರುವ ರಾಜ್ಯಗಳಲ್ಲಿ ಕಾರ್ಮಿಕರ ದಿನದ ಕೆಲಸದ ಅವಧಿಯನ್ನು ೮ ರಿಂದ ೧೨ ಗಂಟೆಗಳಿಗೆ ವಿಸ್ತರಿಸಲಾಗಿದೆ. ಈ ಕ್ರಮವು, ಅಂತರಾಷ್ಟ್ರೀಯ ಕಾರ್ಮಿಕ ವರ್ಗವು ನೂರಾರು ವರ್ಷಗಳ ಹೋರಾಟಗಳ ಮೂಲಕ ಪಡೆದ ೮ ಗಂಟೆಗಳ ಕೆಲಸದ ಹಕ್ಕಿನ ನಿರಾಕರಣೆಯಾಗುತ್ತದೆ. ಹೊಸ ಯೋಜನೆಗಳಿಗೆ ಅನುಮತಿ ನೀಡುವ ಸಂದರ್ಭದಲ್ಲಿ ಪರಿಸರದ ಮೇಲೆ ಉಂಟಾಗುವ ಹಾನಿಯ ಮೌಲ್ಯಮಾಪನದ ಬಗ್ಗೆ ಮಹತ್ವಪೂರ್ಣ ಮಾನದಂಡಗಳನ್ನು ಸಡಿಲಗೊಳಿಸಲಾಗಿದೆ. ಉದ್ಯಮಪತಿಗಳಿಗೆ ೧.೪೫ ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಹಣ ವರ್ಗಾವಣೆ ಮಾಡಲಾಗಿದೆ. ಖಾಸಗೀಕರಣವನ್ನು ಕಲ್ಲಿದ್ದಲಿನಂತಹ ನೈಸರ್ಗಿಕ ಸಂಪನ್ಮೂಲಗಳಿಗೂ ವಿಸ್ತರಿಸುವ ಮೂಲಕ ವಸಾಹತು-ವಿರೋಧಿ ಹೋರಾಟದ ಭರವಸೆಯನ್ನು ಉಲ್ಲಂಘಿಸಲಾಗಿದೆ. ಈಗ ರೈಲ್ವೆ ಇಲಾಖೆಗೂ ಸಹ ಖಾಸಗೀಕರಣ ಕಾಲಿಟ್ಟಿದೆ. ಬಂಡವಾಳಶಾಹಿಗಳು ಮತ್ತು ಲೇವಾದೇವಿದಾರರಿಗೆ ಇಂತಹ ಸುಭಿಕ್ಷೆಯ ಕಾಲ ಹಿಂದೆಂದೂ ಇರಲಿಲ್ಲ. ಆದರೆ, ಬುಡಕಟ್ಟು ಜನರೂ ಸೇರಿದಂತೆ ದುಡಿಯುವ ಜನರನ್ನು ಹಿಂದೆಂದೂ ಕಾಣದ ಮಟ್ಟಿನ ನಿರ್ಗತಿಕತನಕ್ಕೆ ತಳ್ಳಲಾಗಿದೆ.

ಮೋದಿ ಸರಕಾರವು ಬಂಡವಾಳಗಾರರ ಪರವಾಗಿ ಕೈಗೊಂಡಿರುವ ಯಾವ ಕ್ರಮವೂ ಈ ಬಿಕ್ಕಟ್ಟನ್ನು ಎಳ್ಳಷ್ಟೂ ಶಮನಗೊಳಿಸುವುದಿಲ್ಲ. ಅದಕ್ಕೆ ಬದಲಾಗಿ, ಇಂತಹ ಕ್ರಮಗಳು ಬಿಕ್ಕಟ್ಟನ್ನು ತೀವ್ರವಾಗಿ ಉಲ್ಬಣಗೊಳಿಸಲಿವೆ. ದೇಶದಲ್ಲಿ ತಯಾರಿಸಿದ ಸರಕು-ಸಾಮಗ್ರಿಗಳಿಗೆ ಬೇಡಿಕೆಯ ಕೊರತೆ ಇರುವು ಕಾರಣಕ್ಕೆ ಈ ಬಿಕ್ಕಟ್ಟು ಸಂಬಂಧಿಸುತ್ತದೆ. ಒಂದು ವಾಸ್ತವಾಂಶವನ್ನು ಹೇಳುವುದಾದರೆ, ಸರ್ಕಾರವು ಈವರೆಗೆ ಕೈಗೊಂಡಿರುವ ನಿವಾರಣಾ ಕ್ರಮಗಳು ಬೇಡಿಕೆಯನ್ನು ಇನ್ನಷ್ಟು ಕುಗ್ಗಿಸುತ್ತವೆ. ಬಂಡವಾಳದಾರರಿಗೆ ಹಣ ವರ್ಗಾಸಿದ ಸಂದರ್ಭದಲ್ಲಿ ವಿತ್ತೀಯ ಕೊರತೆಯು ಮಿತಿಯೊಳಗೆ ಉಳಿಯಬೇಕು ಎಂದಾದರೆ, ಶ್ರೀಮಂತರ ಮೇಲೆ ವಿಧಿಸುವ ತೆರಿಗೆಯ ದರವನ್ನು ಹೆಚ್ಚಿಸಬೇಕಾಗುತ್ತದೆ. ಇಲ್ಲದೆ ಹೋದಲ್ಲಿ, ಸಾರಭೂತವಾಗಿ, ಈ ಕ್ರಮವು ದುಡಿಯುವ ಜನರಿಗೆ ಸಲ್ಲಬೇಕಾದ ವರಮಾನಗಳ ಪಾಲನ್ನು ಶ್ರೀಮಂತರಿಗೆ ವರ್ಗಾಯಿಸುತ್ತದೆ. ಇದು, ಒಟ್ಟಾರೆ ಬೇಡಿಕೆಯನ್ನು ಇನ್ನಷ್ಟು ಕಡಿಮೆ ಮಾಡುತ್ತದೆ (ಏಕೆಂದರೆ, ವರ್ಗಾವಣೆಯಾದ ಒಂದು ರೂ. ಹಣದಲ್ಲಿ ಕಾರ್ಮಿಕರು ಬಂಡವಾಳಗಾರರಿಗಿಂತ ಹೆಚ್ಚಿನ ಭಾಗವನ್ನು ಬಳಕೆಗಾಗಿ ವಿನಿಯೋಗಿಸುತ್ತಾರೆ). ಹಾಗಾಗಿ, ಸರ್ಕಾರವು ಮಾಡಿರುವ ವರ್ಗಾವಣೆಯು ಖಾಸಗಿ ಹೂಡಿಕೆಯನ್ನು ಹೆಚ್ಚಿಸುವುದಕ್ಕೆ ಬದಲಾಗಿ ತದ್ವಿರುದ್ಧ ಪರಿಣಾಮವನ್ನು ಬೀರುತ್ತದೆ. ಅಂದರೆ ಖಾಸಗಿ ಹೂಡಿಕೆ ತಗ್ಗುತ್ತದೆ. ಬಿಕ್ಕಟ್ಟಿನ ನಿವಾರಣೆಯ ಸಂಬಂಧವಾಗಿ ಸರ್ಕಾರ ಕೈಗೊಂಡಿರುವ ಇನ್ನುಳಿದ ಕ್ರಮಗಳ ಬಗ್ಗೆಯೂ ನಿಖರವಾಗಿ ಇದೇ ಮಾತನ್ನೇ ಹೇಳಬಹುದು. ಸಾರಂಶ ರೂಪದಲ್ಲಿ ಹೇಳುವುದಾದರೆ, ಈ ಕ್ರಮಗಳು ಆದಾಯಗಳ ಹಂಚಿಕೆಯ ನೀತಿ-ವಿಧಾನದಲ್ಲಿ ಆದಾಯಗಳನ್ನು ದುಡಿಯುವ ಜನರಿಂದ ಬಂಡವಾಳಗಾರರಿಗೆ ವರ್ಗಾಯಿಸುವ ಕ್ರಮಗಳೇ. ಆದ್ದರಿಂದ, ಈ ಕ್ರಮಗಳು ಬಿಕ್ಕಟ್ಟನ್ನು ಅನಿವಾರ್ಯವಾಗಿ ಉಲ್ಬಣಗೊಳಿಸಲಿವೆ. ಅಂದರೆ, ಈ ಹಿಂದೆ ಹೇಳಿದ ವಿಷಯಕ್ಕೇ ಬಂದಂತಾಯ್ತು. ಅಂದರೆ, ನವ ಉದಾರವಾದದ ಚೌಕಟ್ಟಿನೊಳಗೆ ಪ್ರಸ್ತುತ ಬಿಕ್ಕಟ್ಟಿಗೆ ಪರಿಹಾರವಿಲ್ಲ.

ಬಿಕ್ಕಟ್ಟು ಉಲ್ಬಣ ಗೊಳ್ಳುತ್ತಿರುವ ಕಾರಣದಿಂದಾಗಿ ಕ್ರಮೇಣ ಜನರ ನಡುವೆ ಅಸಮಾಧಾನ ಹೆಚ್ಚುತ್ತದೆ. ಇಂತಹ ಅಸಮಾಧಾನವನ್ನು ಹಿಡಿತದಲ್ಲಿಟ್ಟುಕೊಳ್ಳಲು ಹೆಚ್ಚು ಹೆಚ್ಚು ದಬ್ಬಾಳಿಕೆಯ ಕ್ರಮಗಳನ್ನು ಜರುಗಿಸಬೇಕಾಗುತ್ತದೆ. ಜೊತೆಯಲ್ಲಿ, ಜನರ ಗಮನವನ್ನು ಬೇರೆಡೆಗೆ ಸೆಳೆಯುವಂತಹ ರಾಮ ಮಂದಿರ ನಿರ್ಮಾಣ, ರಾಮಮಂದಿರದ ಆರಂಭೋತ್ಸವ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗುತ್ತದೆ. ಹಿಂದುತ್ವದ ಮೇಲೆ ಒತ್ತು ಕೊಡುವ ಉದ್ದೇಶವೇ ಇಂತಹ ಗೊಂದಲಗಳನ್ನು ಸೃಷ್ಟಿಸುವುದಕ್ಕಾಗಿ. ಇಂತಹ ಗೊಂದಲಗಳು ಶೋಷಿತ ದುಡಿಯುವ ಜನರನ್ನು ವಿಭಜಿಸುವುದಷ್ಟೇ ಅಲ್ಲದೆ, ಧಾರ್ಮಿಕ ಬಹುಸಂಖ್ಯಾತ ದುಡಿಮೆಗಾರರ ನಡುವೆಯೂ ಇರುವ ಅಸಮಾಧಾನದ ಹೊರತಾಗಿಯೂ, ಬಿಜೆಪಿ ಅಧಿಕಾರದಲ್ಲಿ ಉಳಿಯಲು ಸಾಕಾಗುವಷ್ಟು ಮತಗಳನ್ನು ಪಡೆಯಲು ಖಾತ್ರಿಪಡಿಸುತ್ತವೆ.

ಹಿಂದೂ ಪಾರಮ್ಯದ ಸಿದ್ಧಾಂತವು ಹಣಕಾಸು ಬಂಡವಾಳದಿಂದ ಪೋಷಣೆ ಪಡೆಯುವ ಮತ್ತು ಪ್ರತಿಯಾಗಿ ಅನುಕೂಲಕರವಾದ ಸೇವೆಸಲ್ಲಿಸುವ ಅರ್ಹತೆ ಹೊಂದಿದೆ. ತನ್ನ ಪ್ರಾಬಲ್ಯ ಮತ್ತು ಅಂತಸ್ತಿಗೆ ಬೆದರಿಕೆ ಒಡ್ಡುವಂತಹ ಒಂದು ಆರ್ಥಿಕ ಬಿಕ್ಕಟ್ಟಿನ ಕಾಲದಲ್ಲಿ, ಹಣಕಾಸು ಬಂಡವಾಳವು ಹಿಂದುತ್ವ ಶಕ್ತಿಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ. ಹಿಂದೂ ಪಾರಮ್ಯ, ಹಿಂದೂರಾಷ್ಟ್ರ, ಇವುಗಳು ಹಿಂದೂಗಳ ಅನುಕೂಲಕ್ಕಾಗಿ ಅಲ್ಲ. ಅದೇನಿದ್ದರೂ ಹಣಕಾಸು ಬಂಡವಾಳದ ಪ್ರಯೋಜನಕ್ಕಾಗಿಯೇ. ಈ ಕಾರಣದಿಂದಾಗಿಯೇ ಹಣಕಾಸು ಬಂಡವಾಳವು ಸಾಧ್ಯವಿರುವ ಎಲ್ಲ ರೀತಿಯಲ್ಲೂ ಹಿಂದುತ್ವ ಶಕ್ತಿಗಳನ್ನು ಬೆಂಬಲಿಸುತ್ತದೆ.

ಉದ್ಯೋಗಾವಕಾಶಗಳಿಂದ ಮತ್ತು ಇತರೆ ಸೌಕರ್ಯ-ಲಾಭಗಳಿಂದ ಮುಸ್ಲಿಮರನ್ನು ಹೊರಗಿಡುವುದರಿಂದ ಹಿಂದೂಗಳಿಗೆ ಖಂಡಿತವಾಗಿಯೂ ಹೆಚ್ಚಿನ ಲಾಭವಾಗುತ್ತದೆ; ಆದ್ದರಿಂದ, ಹಿಂದೂ ಪಾರಮ್ಯದಿಂದ ಹಿಂದೂಗಳಿಗೆ ಪ್ರಯೋಜನವಿಲ್ಲ ಎಂದು ಹೇಳುವುದು ಸರಿಯೇ? ಎಂದು ಕೇಳಬಹುದು. ಉತ್ತರವಾಗಿ ಹೀಗೆ ಹೇಳಬಹುದು: ಒಟ್ಟು ಜನಸಂಖ್ಯೆಯಲ್ಲಿ ಅಲ್ಪಸಂಖ್ಯಾತರು, ಹೋಲಿಕೆಯ ದೃಷ್ಟಿಯಲ್ಲಿ, ತಮ್ಮ ಪಾಲಿಗಿಂತ ಹೆಚ್ಚಿನ ಪ್ರಮಾಣದ ಉದ್ಯೋಗಗಳನ್ನು ಪಡೆದಿದ್ದ ಸಂದರ್ಭದಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಹೊಂದಿದ್ದಂತಹ ಸನ್ನಿವೇಶಗಳಲ್ಲಿ ಈ ಪ್ರಶ್ನೆಯು ಸುಸಂಬದ್ಧವಾಗುತ್ತಿತ್ತು ಮತ್ತು ನಮ್ಮ ವಾದಕ್ಕೆ ಎದುರುತ್ತರವೂ ಆಗುತ್ತಿತ್ತು. ಉದಾಹರಣೆಗೆ, ಅನೇಕ ಪೂರ್ವ ಆಫ್ರಿಕಾದ ದೇಶಗಳಲ್ಲಿ, ಒಂದು ಕಾಲದಲ್ಲಿ, ಭಾರತೀಯ ಮೂಲದ ಜನರಿಗೆ ಸಂಬಂಧಿಸಿ ನೋಡಿದಾಗ ಈ ಪ್ರಶ್ನೆಯಲ್ಲಿ ನಿಜವಿದೆ ಎಂದು ಹೇಳಬಹುದಿತ್ತು. ಆದರೆ, ಭಾರತದಲ್ಲಿ, ಅಲ್ಪಸಂಖ್ಯಾತರ ಮೇಲೆ ಗುರಿ ಇಟ್ಟು ದಾಳಿ ಮಾಡಿ ಅವರನ್ನು ಮೂಲೆ ಗುಂಪು ಮಾಡಿರುವ ಪರಿಸ್ಥಿತಿಯಲ್ಲಿ, ಉದ್ಯೋಗ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ, ಸರಾಸರಿ ಲೆಕ್ಕದಲ್ಲಿ, ಮುಸ್ಲಿಮರು ಹಿಂದೂಗಳಿಗಿಂತಲೂ ನಿಕೃಷ್ಟ ಪರಿಸ್ಥಿತಿಯಲ್ಲಿರುವ ಸನ್ನಿವೇಶದಲ್ಲಿ ಅವರ ಮೇಲೆ (ಮುಸ್ಲಿಮರ ಮೇಲೆ) ಗುರಿ ಇಟ್ಟು ದಾಳಿ ನೆಡೆಸುವುದು ಹಿಂದೂಗಳ ವಿಘ್ನ-ಸಂತೋಷಕ್ಕೂ ಹೊಂದುವುದಿಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ, ಹಿಂದೂ ರಾಷ್ಟ್ರದತ್ತ ವಾಲುವಿಕೆಯು ದುಡಿಯುವ ಮುಸ್ಲಿಮರು ಮತ್ತು ದುಡಿಯುವ ಹಿಂದೂಗಳು ಇಬ್ಬರನ್ನೂ ದಾಳಿಗೆ ಗುರಿಪಡಿಸುತ್ತದೆ. ಹಾಗಾಗಿ, ಹಿಂದೂ ರಾಷ್ಟ್ರವು ಹಿಂದೂಗಳ ಹಿತಕ್ಕೆ ಪೂರಕವಾಗುತ್ತದೆ ಎಂಬ ವಿಚಾರವೇ ಒಂದು ತಪ್ಪು ಕಲ್ಪನೆ. ಈ ತಪ್ಪು ಕಲ್ಪನೆಯನ್ನು ಎಷ್ಟು ಬೇಗ ತೊಡೆದು ಹಾಕಿದರೂ ಅಷ್ಟೂ ಉತ್ತಮವೇ.

 

ಅನು: ಕೆ.ಎಂ.ನಾಗರಾಜ್

Donate Janashakthi Media

Leave a Reply

Your email address will not be published. Required fields are marked *