ಹಾರೋಹಳ್ಳಿ: ಸರ್ಕಾರ ಸೂಕ್ತ ಸಮಯದಲ್ಲಿ ಹಣ ಬಿಡುಗಡೆ ಮಾಡದ ಪರಿಣಾಮ ಸಮುದಾಯ ಭವನ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿದೆ. ಅರ್ಧಕ್ಕೆ ನಿಂತಿರುವ ಭವನಗಳು ದನದ ಕೊಟ್ಟಿಗೆಯಂತೆ ಬಳಕೆಯಾಗುತ್ತಿವೆ. ಹಾರೋಹಳ್ಳಿ
ಬಹಳಷ್ಟು ಭವನಗಳು ಅಡಿಪಾಯ ಹಂತದಲ್ಲೇ ನಿಂತಿದ್ದು ಮೇಲೆದ್ದಿಲ್ಲ. ಕೆಲ ಭವನಗಳ ಕಾಮಗಾರಿ ಶೇ50ರಷ್ಟು ಪೂರ್ಣಗೊಂಡಿದ್ದರೂ ಅಂತಿಮ ಹಂತದ ಕೆಲಸ ಮಾಡಿ ಅವುಗಳನ್ನು ಉದ್ಘಾಟನೆ ಮಾಡಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ಆರಂಭಗೊಂಡಿದ್ದ ಬಹುತೇಕ ಸಮುದಾಯ ಭವನಗಳ ಕಾಮಗಾರಿ ಅರ್ಧಕ್ಕೆ ನಿಂತಿವೆ. ಇದಕ್ಕಾಗಿ ನೂರಾರು ಕೋಟಿ ಹಣ ಪೋಲಾಗಿದೆ. ತಾಲೂಕಿನಲ್ಲಿ ಕೆಲವು ವರ್ಷಗಳ ಹಿಂದೆ ಆರಂಭಗೊಂಡಿದ್ದ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಹಾರೋಹಳ್ಳಿ
ಇದನ್ನೂ ಓದಿ: ಒತ್ತುವರಿಯಾಗಿದ್ದ 11.14 ಕೋಟಿ ರೂ. ಸರ್ಕಾರಿ ಜಮೀನು ತೆರವು
ಸಮುದಾಯ ಸುತ್ತಮುತ್ತ ಆಳೆತ್ತರ ಗಿಡಗಂಟಿ ಬೆಳೆದು ನಿಂತಿವೆ. ಲಕ್ಷಾಂತರ ರೂಪಾಯಿ ಸರ್ಕಾರದ ಹಣ ಖರ್ಚು ಮಾಡಿ ನಿರ್ಮಿಸಿರುವ ಭವನ ಹಾವು, ಹಲ್ಲಿಗಳ ಆವಾಸ ಸ್ಥಾನವಾಗಿದೆ. ಸಮುದಾಯ ಭವನ ಆವರಣ ಅಕ್ರಮ ಚಟುವಟಿಕೆಗಳ ತಾಣವಾಗಿದೆ. ರಾತ್ರಿ ವೇಳೆ ಮದ್ಯ ಸೇವನೆ ಮಾಡುವವರು ಆವರಣದಲ್ಲಿ ಮೋಜು, ಮಸ್ತಿ ಮಾಡುತ್ತಿದ್ದಾರೆ.
ಬಹುತೇಕ ಸಮುದಾಯ ಭವನಗಳ ಕಾಮಗಾರಿ ಅನುದಾನ ಕೊರತೆಯಿಂದ ಸ್ಥಗಿತಗೊಂಡಿದೆ. ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭವನಕ್ಕೆ ಶಂಕು ಸ್ಥಾಪನೆ ಮಾಡಿದ್ದು ಹಣವನ್ನು ಸಕಾಲದಲ್ಲಿ ಬಿಡುಗಡೆ ಮಾಡದ ಕಾರಣ ಕಟ್ಟಡ ಕಾಮಗಾರಿ ನಡೆದಿಲ್ಲ.
ರಾಜಕೀಯ ಮೇಲಾಟ, ಅನುದಾನ ಮತ್ತು ಇಚ್ಛಾಶಕ್ತಿ ಕೊರತೆಯಿಂದ ತಾಲ್ಲೂಕಿನ ಹಲವೆಡೆ 10ಕ್ಕೂ ಹೆಚ್ಚು ಸಮುದಾಯ ಭವನಗಳು ಅರ್ಧಕ್ಕೆ ನಿಂತಿದ್ದರೆ ಮತ್ತೊಂದಷ್ಟು ಭವನಗಳಿಗೆ ಪೂಜೆ ಸಲ್ಲಿಸಿ ಅಡಿಗಲ್ಲು ಹಾಕದಿರುವುದು ಇಲ್ಲಿನ ಅಭಿವೃದ್ಧಿ ಕೆಲಸಗಳಿಗೆ ಹಿಡಿದ ಕೈಗನ್ನಡಿ ಆಗಿದೆ.
ಎಲ್ಲೆಲ್ಲಿ ಅರ್ಧ ಕಾಮಗಾರಿ: ಹಾರೋಹಳ್ಳಿ ಕೆಲವಡೆ ಕಾಮಗಾರಿ ಆರಂಭವಾಗಿದೆ. ಕೆಬ್ಬೆದೊಡ್ಡಿ, ದೊಡ್ಡ ಮುದವಾಡಿ, ಹಾರೋಹಳ್ಳಿ–ಆನೇಕಲ್ ರಸ್ತೆ ಓಂ ಶಕ್ತಿ ದೇವಾಲಯದ ಬಳಿ ಸಮುದಾಯ ಭವನ ಕಾಮಗಾರಿ ಆರಂಭವಾಗಿ ಅರ್ಧಕ್ಕೆ ನಿಂತು ದಶಕ ಕಳೆದರೂ ಕಟ್ಟಡದ ಕಾಮಗಾರಿ ಪೂರ್ಣಗೊಳಿಸದೆ ಬಿಟ್ಟಿರುವುದರಿಂದ ಈವರೆಗೆ ಮಾಡಿದ ಸರ್ಕಾರದ ವೆಚ್ಚ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮುದಾಯ ಭವನ ನಿರ್ಮಾಣದ ಹಿಂದೆ ರಾಜಕೀಯ ಇರುವುದರಿಂದ ಬಹುತೇಕ ಸಮುದಾಯ ಭವನಗಳು ಅರ್ಧಕ್ಕೆ ನಿಂತಿವೆ. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಸಾರ್ವಜನಿಕರ ಹಣ ಪೋಲು ಮಾಡಿ ಅರ್ಧಕ್ಕೆ ಬಿಟ್ಟಿರುವುದರಿಂದ ಅಲ್ಲಿನ ಸಾಮಗ್ರಿಗಳನ್ನು ಹೊತ್ತು ಹೋಗುತ್ತಿದ್ದಾರೆ. ಮತ್ತೆ ಹೊಸ ಪ್ರಸ್ತಾವ ಸಲ್ಲಿಸಿ ಕಾಮಗಾರಿ ಆರಂಭಿಸಬೇಕು. ಇದ್ದ ಸಮುದಾಯ ಭವನಗಳು ಸೂಕ್ತ ನಿರ್ವಹಣೆ ಇಲ್ಲದೆ ಹಾಳಾಗಿ ಹೋಗುತ್ತಿವೆ.
ಜಕ್ಕಸಂದ್ರ, ಚೀಲೂರು, ಟಿ.ಹೊಸಹಳ್ಳಿ, ಮಲ್ಲಿಗೆಮೆಟ್ಟಿಲು,ತೋಕಸಂದ್ರ, ಗೂಗರೇದೊಡ್ಡಿ, ಕೊಟ್ಟಗಾಳು, ಗ್ರಾಮಗಳು ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಈ ಹಿಂದಿನ ಶಾಸಕರು ಭೂಮಿ ಪೂಜೆ ನೆರವೇರಿಸಿದ್ದಾರೆ ಅಷ್ಟೇ. ಆದರೆ, ಅನುದಾನದ ಕೊರತೆಯಿಂದ ಇದುವರೆಗೂ ಭವನ ನಿರ್ಮಿಸುವ ಕಾಮಗಾರಿಗೆ ಚಾಲನೆಯೇ ಸಿಕ್ಕಿಲ್ಲ. ಇದರಿಂದಾಗಿ ಭವನದ ಉದ್ದೇಶ ಈಡೇರದಂತಾಗಿದೆ ಎಂದು ಜನಸಾಮಾನ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ನೋಡಿ: ಗೌರಿ ನೆನಪು : ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲ Janashakthi Media
